ಆರ್‌ಎಸ್‌ಎಸ್ ಮ್ಯೂಸಿಯಂ ಕುರಿತು ಗೂಳಿಹಟ್ಟಿ ಶೇಖರ್ ಮಾಡಿರುವ ಆರೋಪವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೌದು, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರಿಗೆ ವಾಟ್ಸಪ್ ಮೂಲಕ ಆಡಿಯೊ ಸಂದೇಶ ಕಳುಹಿಸಿರುವ ಗೂಳಿಹಟ್ಟಿ ಶೇಖರ್ ಮಹಾರಾಷ್ಟ್ರದಲ್ಲಿನ ನಾಗಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತಾನು ಪರಿಶಿಷ್ಟ ಜಾತಿಗೆ ಸೇರಿದವ ಎಂಬ ಕಾರಣಕ್ಕೆ ಒಳಗೆ ಸೇರಿಸಿರಲಿಲ್ಲ, ಇದಕ್ಕೆ ಕಾರಣ ಏನು ಸ್ಪಷ್ಟಪಡಿಸಬಲ್ಲಿರಾ ಎಂದು ಪ್ರಶ್ನೆ ಹಾಕಿದ್ದರು.
ಈ ಆಡಿಯೊ ವೈರಲ್ ಆಗುತ್ತಿದ್ದಂತೆಯೇ ಆರ್‌ಎಸ್‌ಎಸ್ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಗೂಳಿಹಟ್ಟಿ ಶೇಖರ್ ಅವರ ಆರೋಪದಲ್ಲಿ ಹುರುಳಿಲ್ಲ ಎಂದು ಸ್ವತಃ ಆರ್‌ಎಸ್‌ಎಸ್ ತಳ್ಳಿಹಾಕಿದೆ. ಇನ್ನು ಈ ಆಡಿಯೊ ಕುರಿತು ಸಿಎಂ ಸಿದ್ದರಾಮಯ್ಯ ಸಹ ಪ್ರತಿಕ್ರಿಯೆ ನೀಡಿದ್ದು, ಟ್ವಿಟರ್‌ನಲ್ಲಿ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಶೂದ್ರರು, ದಲಿತರೆಂದರೆ ಆರ್‌ಎಸ್‌ಎಸ್ ಗರ್ಭಗುಡಿಗೆ ಪ್ರವೇಶವಿಲ್ಲ, ಅವರೇನಿದ್ದರೂ ಹೊರಗೆ ನಿಂತು ಜೀ ಹುಜೂರ್ ಎನ್ನಬೇಕಷ್ಟೇ ಎಂದು ಸಿದ್ದು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಹಂಚಿಕೊಂಡಿರುವ ಪೋಸ್ಟ್ ಈ ರೀತಿ ಇದೆ:
“ಶೂದ್ರರು ಮತ್ತು ದಲಿತರಿಗೆ ಆರ್.ಎಸ್.ಎಸ್ ಗರ್ಭಗುಡಿಗೆ ಪ್ರವೇಶ ಇಲ್ಲ, ಅವರೇನಿದ್ದರೂ ಹೊರಬಾಗಿಲಲ್ಲಿ ನಿಂತು ‘ಜೀ..ಜೀ..ಹುಜೂರ್’ ಎಂದಷ್ಟೇ ಹೇಳಬೇಕು. ಇದಕ್ಕೆ ಬಿಜೆಪಿಯ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಬಿ.ಎಲ್ ಸಂತೋಷ್ ಅವರಿಗೆ ಕಳುಹಿಸಿರುವ ವಾಟ್ಸಾಪ್ ವಾಯ್ಸ್ ರೆಕಾರ್ಡ್ ಸಾಕ್ಷಿ.
ಬಿಜೆಪಿ ಮತ್ತು ಆರ್.ಎಸ್.ಎಸ್ ಪರಿವಾರ ಬಹಿರಂಗವಾಗಿ ಮುಸ್ಲಿಂಮರ ವಿರುದ್ಧ ಮಾತ್ರ ಹರಿಹಾಯ್ದರೂ ಅಂತರಂಗದಲ್ಲಿ ಅದು ಶೂದ್ರರು ಮತ್ತು ದಲಿತರ ವಿರುದ್ಧವಾಗಿದೆ. ಬಾಯಿಯಲ್ಲಿ ಹಿಂದೂ ನಾವೆಲ್ಲರೂ ಒಂದು ಎನ್ನುವ ಮಂತ್ರವನ್ನು ಸದಾ ಪಠಿಸುವ ಸಂಘ ಪರಿವಾರದ ನಾಯಕರು ಶೂದ್ರರು ಮತ್ತು ದಲಿತರನ್ನು ಬಡಿಯಲು ಕಂಕುಳಲ್ಲಿ ಬಡಿಗೆ ಇಟ್ಟುಕೊಂಡಿರುತ್ತಾರೆ.
ಗೂಳಿಹಟ್ಟಿ ಶೇಖರ್ ಅವರಂತಹ ದಲಿತ ಸಮುದಾಯದ ನಾಯಕರಿಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆ ಮತ್ತು ಸಂವಿಧಾನ ಮಾತ್ರ ರಕ್ಷಣೆ ನೀಡಬಹುದೇ ಹೊರತು ಸಂಘ ಪರಿವಾರದ ಸಾವರ್ಕರ್, ಗೋಲ್ವಾಲ್ಕರ್ ಚಿಂತನೆಗಳಲ್ಲ. ಶೇಖರ್ ಅವರು ತನ್ನ ಅನುಭವದಿಂದ ಪಾಠ ಕಲಿಯಲಿ ಎಂದು ಹಾರೈಸುತ್ತೇನೆ.
ಸಂವಿಧಾನ ಜಾರಿಯಾಗಿ 7 ದಶಕಗಳು ಕಳೆದಿದೆ. ಸಾಮಾಜಿಕ, ಆರ್ಥಿಕ ವ್ಯವಸ್ಥೆ ಬದಲಾಗಿದೆ ಹಾಗಾಗಿ ಇನ್ನೆಷ್ಟು ವರ್ಷ ಮೀಸಲಾತಿ ಕೊಡಬೇಕು ಎಂದು ಪ್ರಶ್ನಿಸುತ್ತಿದ್ದವರು ಇಂದು ಗೂಳಿಹಟ್ಟಿ ಶೇಖರ್ ಅವರಿಗಾದ ಅವಮಾನದ ಹೊಣೆ ಹೊರುವರೇ? ಇದೇ ಕಾರಣಕ್ಕೆ ನಾನು ಹಿಂದೆ ನೂರು ಬಾರಿ ಹೇಳಿದ್ದೇನೆ, ಈಗ ಮತ್ತೆ ಹೇಳುತ್ತೇನೆ ‘ಎಲ್ಲಿಯವರೆಗೆ ಜಾತೀಯತೆ, ಅಸ್ಪೃಶ್ಯತೆ ಜೀವಂತವಾಗಿರುತ್ತದೆ ಅಲ್ಲಿಯವರೆಗೆ ಮೀಸಲಾತಿ ವ್ಯವಸ್ಥೆ ಇರಬೇಕು’. ಜಾತೀಯತೆಯನ್ನು ತೊಡೆದು ಹಾಕಲು ಮೀಸಲಾತಿಯೂ ಒಂದು ಪ್ರಬಲ ಅಸ್ತ್ರ.
ಆರ್.ಎಸ್.ಎಸ್ ಸ್ಥಾಪನೆಯಾಗಿ ಇನ್ನೆರಡು ವರ್ಷಕ್ಕೆ ನೂರು ವರ್ಷಗಳಾಗುತ್ತದೆ. ಈ ವರೆಗೆ ಒಬ್ಬನೇ ಒಬ್ಬ ತಳ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಆರ್.ಎಸ್.ಎಸ್ ತನ್ನ ಸರಸಂಘಚಾಲಕ ಇಲ್ಲವೇ ಇತರ ಉನ್ನತ ಪದಾಧಿಕಾರಿಯಾಗಿ ಯಾಕೆ ನೇಮಿಸಿಲ್ಲ ಎಂದು ನಾನು ಪ್ರಶ್ನೆ ಮಾಡಿದ್ದಕ್ಕೆ ಬಿಜೆಪಿ ಮತ್ತು ಸಂಘ ಪರಿವಾರದವರು, ಎದೆ ಬಡಿದುಕೊಂಡು ನನ್ನ ಮೈಮೇಲೆ ಎರಗಿದರು, ಅಪಪ್ರಚಾರದ ಮೂಲಕ ನನ್ನ ನಿಂದನೆ ಮಾಡಿದರು.
ಈಗ ಗೂಳಿಹಟ್ಟಿ ಶೇಖರ್ ಅವರಿಗೆ ಆಗಿರುವ ಅವಮಾನ ಮತ್ತು ಅನ್ಯಾಯಕ್ಕೆ ಉತ್ತರಿಸುವ ಧೈರ್ಯ ತೋರುವರೇ?
‘ಹಿಂದುಗಳೆಲ್ಲ ಒಂದು’ ಎನ್ನುವ ಘೋಷಣೆ ಪ್ರಾಮಾಣಿಕತೆಯಿಂದ ಕೂಡಿದ್ದರೆ, ಮೊದಲು ಆರ್.ಎಸ್.ಎಸ್ ಸರಸಂಘಚಾಲಕ ಹುದ್ದೆಗೆ ಒಬ್ಬ ದಲಿತನನ್ನು ನೇಮಕ ಮಾಡಬೇಕು. ಇಲ್ಲದೆ ಇದ್ದರೆ ಈ ರೀತಿ “ಹಿಂದೂ..ಒಂದು” ಎಂದು ಸುಳ್ಳುಹೇಳಿ ಜನರನ್ನು ನಂಬಿಸಿ ಮೋಸಮಾಡುವುದನ್ನು ನಿಲ್ಲಿಸಬೇಕು.
ತನ್ನ ‘ಹೊಡಿ ಬಡಿ’ ರಾಜಕಾರಣ ಮತ್ತು ತನ್ನ ಸೈದ್ಧಾಂತಿಕ ವಿರೋಧಿಗಳನ್ನು ಹಣಿಯಲು ಶೂದ್ರ ಮತ್ತು ದಲಿತ ಸಮುದಾಯದ ಅಮಾಯಕರನ್ನು ಯಥೇಚ್ಚವಾಗಿ ಬಳಸುವ ಸಂಘ ಪರಿವಾರ, ಅವಕಾಶಗಳನ್ನು ನೀಡುವ ಸಮಯ ಬಂದಾಗ ಮನೆ ಗೇಟ್‌ನಿಂದ ಹೊರಗೆ ಇಡುತ್ತಾ ಬಂದಿದೆ. ಶೂದ್ರ ಮತ್ತು ದಲಿತ ಸಮುದಾಯ ಈಗಲಾದರೂ ಕಣ್ತೆರೆದು ಈ ನಗ್ನ ಸತ್ಯವನ್ನು ಅರಿತುಕೊಳ್ಳಲಿ.”
ಹೊಸ ವರ್ಷದಂದು ಹಲವರು ಬಂಧು,ಬಳಗ, ಸ್ನೇಹಿತರ ಜತೆ ಸೇರಿ ಸಂಭ್ರಮಿಸಿದರು. ಆದರೆ ಸಾಂಸ್ಕ ತಿಕ ನಗರ ಮೈಸೂರಿನಲ್ಲಿ ದಾಖಲೆ ಮದ್ಯ…
ಸ್ವಾಗತಾರ್ಹ ನಡೆ! ಜಾತಿ ಮೀರಿ ಪ್ರೀತಿಸಿದರೆ ಕುಂದಲ್ಲವದು ಮರ್ಯಾದೆಗೆ ಬದಲಿಗೆ ಹೆಚ್ಚುವುದು ಮರ್ಯಾದೆ ಗೌರವ! ಜಾತಿ ಕಟ್ಟಳೆ ಮುರಿವ ಸಮತೆಯ…
ಸಾಂಸ್ಕ ತಿಕ ನಗರಿ ಮೈಸೂರಿನಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಬ್ಯಾರಿಕೇಡ್‌ಗಳು ಬಳಕೆಯಾದ ನಂತರ ನಿರ್ಲಕ್ಷ್ಯಕ್ಕೆ ಒಳಪಡುತ್ತಿವೆ. ಅವುಗಳನ್ನು ಸುರಕ್ಷಿತವಾಗಿ ಒಂದೆಡೆ…
ಲೊಕ್ಕನಹಳ್ಳಿ ಬಳಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ; ಅಧಿಕಾರಿಗಳ ವಿರುದ್ಧ ಆಕ್ರೋಶ ಹನೂರು: ಒಂದೆಡೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಶಾಲಾ-ಕಾಲೇಜು…
ನವೀನ್ ಡಿಸೋಜ ೧೮,೫೦೦ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆದಿರುವ ರೈತರು; ಹವಾಮಾನ ವೈಪರೀತ್ಯದ ನಡುವೆಯೂ ಕಟಾವು ಕಾರ್ಯ ಚುರುಕು ಮಡಿಕೇರಿ:…
ಚಾಮರಾಜನಗರ: ತೀವ್ರ ಚಳಿಯಿಂದ ತತ್ತರಿಸಿದ್ದ ಜಿಲ್ಲೆಯ ಜನತೆ ಕಳೆದ ೨-೩ ದಿನಗಳಿಂದ ಎದುರಾಗಿರುವ ಮೋಡ ಕವಿದ ವಾತಾವರಣ ಮತ್ತು ಅಲ್ಲಲ್ಲಿ…