ಎಡಿಟೋರಿಯಲ್

ವೈಡ್ ಆಂಗಲ್ : ವಾರ್ತಾ ಮತ್ತು ಸಂಪರ್ಕ ಇಲಾಖೆಗೆ ಹರ್ಷತಂದ ಪ್ರಶಸ್ತಿ

14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ  ಸಿದ್ಧತೆ ಸೇರಿದಂತೆ ರಾಜ್ಯ ಸರ್ಕಾರ ಚಲನಚಿತ್ರರಂಗದತ್ತ ಗಮನ ಹರಿಸಬೇಕಿದೆ 

ಕಳೆದ ಶನಿವಾರ, ಸೆಪ್ಟೆಂಬರ್ ೩೦ರಂದು ೬೮ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಇತ್ತು. ೨೦೨೦ರ ಸಾಲಿನ ಈ ಪ್ರಶಸ್ತಿಗಳನ್ನು ರಾಷ್ಟ್ರಪತಿಯವರು ಪ್ರದಾನ ಮಾಡಿದರು. ಈ ಬಾರಿ ಪರಿಸರ ಕಾಳಜಿಯ ಅತ್ಯುತ್ತಮ ಚಿತ್ರವಾಗಿ ಪ್ರವೀಣ್ ಕೃಪಾಕರ್ ನಿರ್ದೇಶನದ ‘ತಲೆದಂಡ’ ಮತ್ತು ಅತ್ಯುತ್ತಮ ಕನ್ನಡ ಚಿತ್ರವಾಗಿ ಸಾಗರ್ ಪುರಾಣಿಕ್ ನಿರ್ದೇಶನದ ‘ಡೊಳ್ಳು’ ಆಯ್ಕೆಯಾಗಿದ್ದವು. ಈ ಚಿತ್ರಗಳ ನಿರ್ಮಾಪಕ, ನಿರ್ದೇಶಕರು ಪ್ರಶಸ್ತಿ ಸ್ವೀಕರಿಸಿದರು. ಕೊನೆಯ ಕ್ಷಣದಲ್ಲಿ ‘ಡೊಳ್ಳು’ ಚಿತ್ರಕ್ಕೆ ನೀಡಿದ ಧ್ವನಿಗ್ರಾಹಕ (ಲೊಕೇಶನ್ ಸೌಂಡ್ ) ಪ್ರಶಸ್ತಿಯನ್ನು ರದ್ದು ಮಾಡಲಾಯಿತು.
ಇದೇ ಮೊದಲ ಬಾರಿಗೆ ಕಥೇತರ ಚಿತ್ರಗಳ ವಿಭಾಗದಲ್ಲಿ, ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿದ್ದ ಸಾಕ್ಷ್ಯಚಿತ್ರಕ್ಕೆ ಪ್ರಶಸ್ತಿ ಸಂದಿತ್ತು. ಗಿರೀಶ್ ಕಾಸರವಳ್ಳಿಯವರು ಇಲಾಖೆಗಾಗಿ ನಿರ್ದೇಶಿಸಿದ ಪಂಡಿತ್ ಡಾ. ವೆಂಕಟೇಶ್ ಕುಮಾರ್ ಕುರಿತ ಸಾಕ್ಷ್ಯಚಿತ್ರ ‘ನಾದದ ನವನೀತ ಪಂಡಿತ್ ಡಾ. ವೆಂಕಟೇಶ್ ಕುಮಾರ್’ ಚಿತ್ರವು, ಈ ವಿಭಾಗದ ಅತ್ಯುತ್ತಮ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಕ್ಕಿರುವ ಪ್ರಶಸ್ತಿಗೆ ಭಾಜನವಾಗಿತ್ತು. ಇಲಾಖೆಯ ಪರವಾಗಿ ಚಲನಚಿತ್ರವೂ ಸೇರಿದಂತೆ ಹಲವು ವಿಭಾಗಗಳ ಜಂಟಿ ನಿರ್ದೇಶಕರಾದ ಡಿ.ಪಿ.ಮುರಳೀಧರ್ ರಾಷ್ಟ್ರಪತಿಯವರಿಂದ ಪ್ರಶಸ್ತಿ ಸ್ವೀಕರಿಸಿದರು. ಗಿರೀಶ್ ಕಾಸರವಳ್ಳಿಯವರು ಪ್ರಶಸ್ತಿ ಸ್ವೀಕರಿಸುವ ವೇಳೆ ನಿರೂಪಕರು, ಇದು ಅವರ ಹದಿನೈದನೇ ರಾಷ್ಟ್ರಪ್ರಶಸ್ತಿ ಎಂದು ನೆನಪಿಸಿದರು.
ವಾರ್ತಾ ಇಲಾಖೆಯ ಸಾಕ್ಷ್ಯಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಸಂದದ್ದನ್ನು ಇಲಾಖೆಯ ಆಯುಕ್ತರಾದ ಹರ್ಷ ಅವರು, ವಾರ್ತಾ ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತಂದರು. ಅವರು ಇಲಾಖೆಯನ್ನು, ನಿರ್ದೇಶಕರನ್ನು ಅಭಿನಂದಿಸಿದ್ಧೇ ಅಲ್ಲದೆ, ಪ್ರಶಸ್ತಿ ಪಡೆದ ಕನ್ನಡದ ಇತರ ಚಿತ್ರಗಳ ನಿರ್ಮಾಪಕ, ನಿರ್ದೇಶಕರನ್ನೂ ಅಭಿನಂದಿಸಿದರು. ಅವರು ಮಾತ್ರವಲ್ಲದೆ, ವಾರ್ತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಪ್ರಸಾದ್ ಅವರೂ ಇಲಾಖೆಗೆ ಬಂದ ಗೌರವಕ್ಕೆ ಅಭಿನಂದನೆ ಸಲ್ಲಿಸಿದರು.
ಈ ವಿವರಗಳನ್ನು ನೀಡಲು ಆಯುಕ್ತರು ಕೂಡಲೇ ಮಾಧ್ಯಮಗೋಷ್ಠಿ ಕರೆದರು. ಪ್ರಶಸ್ತಿಯ ಪ್ರಮಾಣಪತ್ರ ಮತ್ತು ರಜತಕಮಲ ಪದಕವೂ ಅಲ್ಲಿತ್ತು. ಸುದ್ದಿವಾಹಿನಿಗಳು ಮತ್ತು ಛಾಯಾಗ್ರಾಹಕರಿಗೆ ಸುದ್ದಿಯ ಜೊತೆ ಚಿತ್ರಗಳೂ ಅನಿವಾರ್ಯ. ಅವರ ಕೋರಿಕೆಯಂತೆ, ಆಯುಕ್ತರು ಪದಕವನ್ನು  ಕೊರಳಿಗೆ ಹಾಕಿ ಪ್ರಶಸ್ತಿ ಪ್ರಮಾಣಪತ್ರವನ್ನು ಹಿಡಿದುಕೊಂಡರು. ವಾಹಿನಿಗಳಿಗೆ ಮತ್ತು ವೃತ್ತಪತ್ರಿಕೆಗಳಿಗೆ ಅವೇ ಸುದ್ದಿಚಿತ್ರಗಳಾದವು. ಗೋಷ್ಠಿಯಲ್ಲಿ ನಿರ್ದೇಶಕ ಕಾಸರವಳ್ಳಿಯವರು ಇರಲಿಲ್ಲ.
ರಾಜ್ಯದ ಎಲ್ಲ ಇಲಾಖೆಗಳಲ್ಲಿ ಅವುಗಳ ಕೆಲಸಗಳು ನಡೆಯುತ್ತಿರುತ್ತವೆ. ಇಲಾಖೆಗಳ ಮುಖ್ಯಸ್ಥರು ಬದಲಾಗುತ್ತಿರುತ್ತಾರೆ. ಹಿಂದಿನವರ ಕೆಲಸದ ಒಳಿತು ಕೆಡುಕುಗಳಿಗೆ ಆಯಾ ಕಾಲಕ್ಕೆ ಅಧಿಕಾರದಲ್ಲಿರುವ ಮಂದಿ ಜವಾಬ್ದಾರರಾಗುತ್ತಾರೆ. ಈ ಘಟನೆ ಹಾಗೂ ಇನ್ನೊಂದು ಪ್ರಸಂಗ ನೆನಪಾಗುತ್ತಿದೆ. ಪಂಡಿತ್ ವೆಂಕಟೇಶ್ ಕುಮಾರ್ ಅವರ ಸಾಕ್ಷ್ಯಚಿತ್ರವನ್ನು ನಿರ್ಮಿಸಲು ಯೋಜಿಸಿದ್ದು ಆಗ ಇಲಾಖೆಯ ನಿರ್ದೇಶಕರಾಗಿದ್ದು ಈಗ ನಿವೃತ್ತರಾಗಿರುವ ವಿಶುಕುಮಾರ್ ಅವರ ಅವಧಿಯಲ್ಲಿ. ಪ್ರಶಸ್ತಿ ಪ್ರಕಟವಾಗುವ ವೇಳೆ ಹರ್ಷ ಅವರು ಆಯುಕ್ತರಾಗಿದ್ದಾರೆ.
ಕೆಲವೊಮ್ಮೆ ಇದಕ್ಕೆ ವಿಪರೀತವಾಗಿ ನಡೆಯುವುದೂ ಇದೆ.
ವರ್ಷಗಳ ಹಿಂದೆ ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದ ವೇಳೆ ಐಎಎಸ್ ಅಧಿಕಾರಿಯೊಬ್ಬರು ಇಲಾಖೆಯ ನಿರ್ದೇಶಕರಾಗಿದ್ದರು. ನಿಗದಿಯಾದ ಕೊನೆಯ ದಿನದ ನಂತರವೂ ಕೆಲವು ಚಿತ್ರಗಳ ಅರ್ಜಿಗಳನ್ನು ಇಲಾಖೆ ಸ್ವೀಕರಿಸಿತು. ಇದನ್ನು ಅವರ ಗಮನಕ್ಕೆ ತಂದಾಗ, ‘ಸ್ವಾಮಿ, ಚಿತ್ರರಂಗಕ್ಕೆ ಒಳ್ಳೆಯದಾಗಲಿ ಅಂತ ಸಹಾಯಮಾಡಿದರೆ, ನೀವು ಅದಕ್ಕೂ ತಕರಾರು ಎತ್ತುತ್ತೀರಲ್ಲ?’ ಎಂದು ಕೇಳಿದವರನ್ನೇ ಪ್ರಶ್ನಿಸಿದ್ದರು!  ಆ ಚಿತ್ರಗಳಲ್ಲಿ ಒಂದೆರಡಕ್ಕೆ ವೈಯಕ್ತಿಕ ಪ್ರಶಸ್ತಿಗಳು ಸಂದವು. ಅಲ್ಲಿಗೇ ಅದು ಮುಗಿಯಲಿಲ್ಲ. ನಿರ್ಮಾಪಕರಲ್ಲಿ  ಕೆಲವರು ನ್ಯಾಯಾಲಯದ ಮೆಟ್ಟಲೇರಿದರು. ಆ ವೇಳೆಗೆ ಇಲಾಖೆಯಲ್ಲಿ ಐಎಎಸ್ ಅಧಿಕಾರಿಯ ಬದಲು ಬೇರೊಬ್ಬರು ಆ ಜಾಗಕ್ಕೆ ಬಂದಿದ್ದರು. ನ್ಯಾಯಾಲಯ ಇಲಾಖೆಗೆ ಛೀಮಾರಿ ಹಾಕಿತಲ್ಲದೆ, ನೀಡಿದ್ದ ಪ್ರಶಸ್ತಿಯನ್ನು ಹಿಂತೆಗೆದುಕೊಳ್ಳುವಂತೆಯೂ ಆದೇಶಿಸಿತು. ಹಿಂದಿನವರ ಲೋಪಕ್ಕೆ ನಂತರ ಬಂದವರು ತಲೆತಗ್ಗಿಸಬೇಕಾಗಿ ಬಂದ ಪ್ರಸಂಗ ಇದು.
ಚಲನಚಿತ್ರಅಕಾಡೆಮಿ ಮತ್ತು ಮಾಧ್ಯಮ ಅಕಾಡೆಮಿಗಳು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಡಿಯಲ್ಲಿವೆ. ಚಲನಚಿತ್ರಗಳಿಗೆ ಸಂಬಂಧಪಟ್ಟಂತೆ ಎಲ್ಲ ಕೆಲಸಗಳೂ ಈ ಇಲಾಖೆಯ ಮೂಲಕವೇ ಆಗಬೇಕು. ಕಳೆದೆರಡು ವರ್ಷಗಳಲ್ಲಿ ಕೊರೊನಾ ಕಾರಣದಿಂದ ಚಿತ್ರರಂಗಕ್ಕೆ ಸಂಬಂಧಪಟ್ಟ ಯಾವ ಕೆಲಸಗಳೂ ನಿಗದಿಯಂತೆ ನಡೆದಿಲ್ಲ. ಕಲೆ ಮತ್ತು ಸಂಸ್ಕೃತಿಯನ್ನು ಹೇಳುವ ಚಿತ್ರಕ್ಕಿರುವ ಪ್ರಶಸ್ತಿ ಪಡೆದ ಸಾಕ್ಷ್ಯಚಿತ್ರ ನಿರ್ಮಿಸಿದ ಇಲಾಖೆ,  ಚಲನಚಿತ್ರ ಕಲೆ ಮತ್ತು ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಬೇಕಿದೆ.
14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ(ಬಿಫೆಸ- BIFFes)ದ ಸಿದ್ಧತೆ ಆರಂಭವಾಗಬೇಕು. ಕರ್ನಾಟಕ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಚಲನಚಿತ್ರ ಅಕಾಡೆಮಿ ಮೂಲಕ ನಡೆಸುವ ಈ ಚಿತ್ರೋತ್ಸವ ಇದೀಗ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಉತ್ಸವ. ಅದರ ವೇಳಾಪಟ್ಟಿ, ಸಾಮಾನ್ಯ ಸಂದರ್ಭಗಳಲ್ಲಿ ಬದಲಾಗುವಂತಿಲ್ಲ. ಈಗ ಅಕಾಡೆಮಿಗೆ ಅಧ್ಯಕ್ಷರನ್ನು ಸರ್ಕಾರ ನೇಮಿಸಿಲ್ಲ. ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೇ ಪದನಿಮಿತ್ತ ಅಧ್ಯಕ್ಷರು. ಅವರ ಅಧ್ಯಕ್ಷತೆಯಲ್ಲಿ ಚಿತ್ರೋತ್ಸವ ಸಂಘಟನಾ ಸಮಿತಿ ರಚಿಸಿ, ಸಿದ್ಧತೆಗಳಿಗೆ ಚಾಲನೆ ನೀಡಬಹುದು.
ಈ ಹಿಂದೆ ಕೂಡಾ ಒಮ್ಮೆ, ಅಕಾಡೆಮಿಗೆ ಅಧ್ಯಕ್ಷರು ಇಲ್ಲದೆ ಇದ್ದಾಗ ಚಿತ್ರೋತ್ಸವದ ಸಿದ್ಧತೆ ನಡೆದಿತ್ತು.
ಚಿತ್ರೋತ್ಸವ ನಿರ್ದೇಶಕರಾಗಿ ಅಕಾಡೆಮಿಯ ಅಧ್ಯಕ್ಷರನ್ನು ನೇಮಿಸಬೇಕು ಎನ್ನುವ ನಿಯಮವೇನಿಲ್ಲ. ಇದು ಅಚಾನಕವಾಗಿ ಆದ ಬೆಳವಣಿಗೆ. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವವನ್ನು ಆರಂಭಿಸಿದ್ದು ಸುಚಿತ್ರಾ ಚಿತ್ರಸಮಾಜ. ಮೊದಲ ಮೂರು ಚಿತ್ರೋತ್ಸವಗಳು ನಡೆದಾಗ ಗಿರೀಶ್ ಕಾಸರವಳ್ಳಿಯವರು ಚಿತ್ರೋತ್ಸವ ನಿರ್ದೇಶಕರಾಗಿದ್ದರು. ನಾಲ್ಕನೇ ಚಿತ್ರೋತ್ಸವದ ವೇಳೆ ಚಲನಚಿತ್ರ ಅಕಾಡೆಮಿಯು ಸ್ಥಾಪನೆಯಾಗಿತ್ತು. ಸರ್ಕಾರವೇ ಚಿತ್ರೋತ್ಸವ ನಡೆಸಲು ನಿರ್ಧರಿಸಿತ್ತು. ಈ ಕುರಿತಂತೆ ವಾರ್ತಾ ಇಲಾಖೆ ಉದ್ಯಮದ ಸಂಘಟನೆಗಳ, ಪ್ರಮುಖರ ಸಭೆಯೊಂದನ್ನು ಕರೆಯಿತು. ಚಿತ್ರೋತ್ಸವದ ನಿರ್ದೇಶಕರಾಗಿ ಗಿರೀಶ್ ಕಾಸರವಳ್ಳಿಯವರನ್ನೇ ಮುಂದುವರಿಯಲು ಕೋರಲಾಯಿತು. ಅವರು ತಮ್ಮ ಹೊಸ ಚಿತ್ರದ ಕೆಲಸದಲ್ಲಿ ತೊಡಗಿರುವುದರಿಂದ ಪೂರ್ತಿಯಾಗಿ ತೊಡಗಿಸಿಕೊಳ್ಳುವುದು ಸಾಧ್ಯ ಆಗದು ಎಂದರು. ನಂತರ ಬಂದ ಹೆಸರು ನಾಗಾಭರಣ
ಅವರದು. ಅವರು ಚಿತ್ರೋತ್ಸವ ನಿರ್ದೇಶಕರಾದರು. ಅವರೇ
ಅಕಾಡೆಮಿಯ ಅಧ್ಯಕ್ಷರೂ ಆಗಿದ್ದರು. ಮುಂದೆ ಬಂದ ಅಧ್ಯಕ್ಷರೆಲ್ಲ, ಅದು ತಮ್ಮ ಅಧಿಕಾರ ಎಂದು ತಿಳಿದುಕೊಂಡು ಮುಂದುವರಿದರು. ಅದನ್ನು ಯಾರೂ ಪ್ರಶ್ನಿಸಿಲ್ಲವೆನ್ನಿ.
ಅಧ್ಯಕ್ಷರ ಆಯ್ಕೆ, ಸಾಮಾನ್ಯವಾಗಿ ಸರ್ಕಾರದ ಆಡಳಿತ ಪಕ್ಷದ ಮರ್ಜಿಗೆ ಅನುಗುಣವಾಗಿ ನಡೆಯುತ್ತದೆ. ಚಿತ್ರೋತ್ಸವ ನಿರ್ದೇಶಕರಾಗಿ ಸಿನಿಮಾ ಬಲ್ಲ, ಸಾಧ್ಯವಾದರೆ, ರಾಷ್ಟ್ರೀಯ ಅಂತಾರಾಷ್ಟ್ರೀಯ ನೆಲೆಯ ಪರಿಚಯ ಇರುವವರನ್ನು ನೇಮಿಸುವುದು ಹೆಚ್ಚು ಸೂಕ್ತ. ಕೇರಳದಲ್ಲಿ ಚಿತ್ರೋತ್ಸವ ನಿರ್ದೇಶನಾಲಯ ಇದೆ. ಇಲ್ಲೂ ಅದು ಆಗಬೇಕಾಗಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಬಿಫೆಸ್ ಹಮ್ಮಿಕೊಳ್ಳುವುದು ಮಾತ್ರವಲ್ಲ, ೨೦೧೯, ೨೦, ೨೧ರ ಸಹಾಯಧನ ಹಾಗೂ ಪ್ರಶಸ್ತಿಗಳನ್ನು ನೀಡುವ, ಹೊಸ ಚಲನಚಿತ್ರ ನೀತಿಯನ್ನು  ಪ್ರಕಟಿಸುವ, ಸಹಾಯಧನ ನೀಡುವ ಕುರಿತಂತೆ ಮರುಪರಿಶೀಲಿಸುವುದೇ ಮೊದಲಾದ ಕೆಲಸಗಳು ಸರದಿಯಲ್ಲಿವೆ. ಈ ನಿಟ್ಟಿನಲ್ಲಿ ಇಲಾಖೆ ಕಾರ್ಯಪ್ರವೃತ್ತವಾಗುತ್ತದೆಂದು ನಿರೀಕ್ಷಿಸೋಣ.
andolanait

Recent Posts

ಮುಡಾಗೆ ಆರ್ಥಿಕ ಸಂಕಷ್ಟ; 20 ಕೋಟಿ ರೂ ನಷ್ಟ

ಮೈಸೂರು: ಬದಲಿ ನಿವೇಶನ ಹಂಚಿಕೆ, ೫೦:೫೦ ಅನುಪಾತದಲ್ಲಿ ನಿವೇಶನ ಅಕ್ರಮ ಹಂಚಿಕೆ ಹಗರಣದಿಂದಾಗಿ ಇಡೀ ರಾಜ್ಯದ ಗಮನ ಸೆಳೆದಿರುವ ಮೈಸೂರು…

56 mins ago

ಆಂದೋಲನ ಫಲಶ್ರುತಿ: ಕೊನೆಗೂ ತೆರವಾಯ್ತು ಬೃಹತ್‌ ಮರದ ಕಾಂಡ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜುಂಬೂ ಸವಾರಿ ಸಾಗುವ ಮಾರ್ಗದಲ್ಲಿ ಕಳೆದ ಎರಡೂ ವರ್ಷಗಳಿಂದ ಬಿದ್ದಿದ್ದ ಬೃಹತ್ ಮರದ ಕಾಂಡವನ್ನು…

1 hour ago

ಜಂಬೂ ಸವಾರಿ ಮಾರ್ಗದಲ್ಲಿ ಸಣ್ಣ ಬದಲಾವಣೆ

ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಜಂಬೂ ಸವಾರಿಯನ್ನು ವೀಕ್ಷಿಸಲು ಆಗಮಿಸಿದ ಎಲ್ಲರಿಗೂ ಚಿನ್ನದ ಅಂಬಾರಿ ನೋಡುವ ಅವಕಾಶ ಸಿಗಬೇಕು…

1 hour ago

ಪೈಲ್ವಾನರ ಕಸರತ್ತಿಗೆ ಗರಡಿ ಮನೆಗಳು ಸಜ್ಜು

ಮೈಸೂರು: ಸಾಂಸ್ಕೃತಿಕ ರಾಜಧಾನಿ, ಅರಮನೆಗಳ ನಗರಿ ಎಂದು ಕರೆಯುವ ಮೈಸೂರನ್ನು ಗರಡಿ ಮನೆಗಳ ನಗರಿ ಎಂದೂ ಇತ್ತೀಚಿನ ವರ್ಷಗಳಲ್ಲಿ ಕರೆಯುವುದು…

1 hour ago

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

9 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

11 hours ago