ಸಂಪಾದಕೀಯ

ಸಚಿವ ಸಂಪುಟ ಸಭೆ: ಯೋಜನೆಗಳ ಅನುಷ್ಠಾನವೂ ತ್ವರಿತವಾಗಿ ಆಗಲಿ

ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಇತ್ತೀಚೆಗೆ ನಡೆದ ಮೈಸೂರು ವಿಭಾಗೀಯ ಮಟ್ಟದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಮೈಸೂರು ವಿಭಾಗದ ಎಲ್ಲ ಏಳು ಜಿಲ್ಲೆಗಳ ಅಭಿವೃದ್ಧಿಯ ಕನಸಿಗೆ ನೀರೆರೆದಿದೆ. ಅದರಲ್ಲಿಯೂ ವಿಶೇಷವಾಗಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಪ್ರಗತಿಗಾಗಿ ೩,೬೪೭.೨೪ ಕೋಟಿ ರೂ. ಮೊತ್ತದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಮೊದಲ ಬಾರಿಗೆ ನಡೆದ ಈ ಸಂಪುಟ ಸಭೆಯಲ್ಲಿ ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಅಭಿವೃದ್ಧಿ ಕುರಿತು ಸುದೀರ್ಘ ಚರ್ಚೆ ನಡೆದಿದೆ. ಮಾನವ – ವನ್ಯಜೀವಿ ಸಂಘರ್ಷ ತಡೆಗೆ ೨೧೦ ಕೋಟಿ ರೂ. ವೆಚ್ಚದಲ್ಲಿ ಬ್ಯಾರಿಕೇಡ್ ನಿರ್ಮಾಣ, ಕುಡಿಯುವ ನೀರಿಗಾಗಿ ೩೧೫ ಕೋಟಿ ರೂ., ಆರೋಗ್ಯ ಸುಧಾರಣೆಗೆ ೨೨೮ ಕೋಟಿ ರೂ., ಮೈಸೂರು ವಿಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ೩೦೦ ಕೋಟಿ ರೂ. … ಹೀಗೆ ಅನೇಕ ಅಭಿವೃದ್ಧಿ ಯೋಜನೆಗಳನ್ನು ಘೋಷಿಸಲಾಗಿದೆ.

ಸಂಪುಟ ಸಭೆಯಲ್ಲಿ ಘೋಷಿಸಿರುವ ಯೋಜನೆಗಳು, ಕಾರ್ಯಕ್ರಮಗಳು ಈ ವಿಭಾಗೀಯ ಮಟ್ಟದ ಅಭಿವೃದ್ಧಿಗೆ ಪೂರಕವಾಗಿವೆ. ಆದರೆ, ಈ ಎಲ್ಲ ಯೋಜನೆಗಳೂ ನಿಗದಿತ ಕಾಲಮಿತಿಯೊಳಗೆ ಮುಗಿಯುವಂತೆ ಕ್ರಮವಹಿಸುವುದು ರಾಜ್ಯ ಸರ್ಕಾರದ ಮುಂದಿರುವ ಸವಾಲು. ಸಚಿವ ಸಂಪುಟಸಭೆಯಲ್ಲಿ ಕೈಗೊಳ್ಳುವ ಎಲ್ಲ ನಿರ್ಧಾರಗಳೂ ಅನುಷ್ಠಾನಗೊಳ್ಳುವುದಿಲ್ಲ. ಅದಕ್ಕೆ ಅನುದಾನದ ಕೊರತೆ, ತಾಂತ್ರಿಕ ಅಡಚಣೆ ಇತ್ಯಾದಿ ಕಾರಣಗಳು ಇರುತ್ತವೆ. ಇನ್ನು ಹಲವು ಕಡೆ ಜನಪ್ರತಿನಿಧಿಗಳು, ಸ್ಥಳೀಯ ರಾಜಕಾರಣಿಗಳು ಅಡ್ಡಗಾಲು ಹಾಕುವುದು ಸಹಜ. ಮುಖ್ಯವಾಗಿ ಕಾಮಗಾರಿಗಳನ್ನು ಯಾರಿಗೆ ಅಥವಾ ಯಾವ ಸಂಸ್ಥೆಗೆ ಗುತ್ತಿಗೆ ನೀಡಲಾಗುತ್ತದೆ ಎಂಬುದು ಅಸಮಾಧಾನಕ್ಕೆ ಕಾರಣವಾಗುತ್ತದೆ.

ಒಬ್ಬರಿಗೆ ಗುತ್ತಿಗೆ ನೀಡಿದರೆ ಇನ್ನೊಬ್ಬರಿಗೆ ಅಸಹನೆ ಎನ್ನುವಂತಾಗಿದೆ. ಆಡಳಿತ ಪಕ್ಷದವರೇ ಆಗಿದ್ದರೂ ಗುಂಪುಗಾರಿಕೆ ಶುರುವಾಗುತ್ತದೆ. ಗುತ್ತಿಗೆ ಪಡೆಯಲು ಆನ್‌ಲೈನ್ನಲ್ಲಿ ಮುಕ್ತವಾಗಿ ಟೆಂಡರ್ ಕರೆಯಬಹುದು. ಆದರೆ, ಆತ ಅಥವಾ ಆ ಸಂಸ್ಥೆ ಉಪ ಗುತ್ತಿಗೆ ನೀಡುವಾಗ ಗೊಂದಲ, ಅಡ್ಡಿ ಎದುರಾಗುತ್ತವೆ. ಬೃಹತ್ ಯೋಜನೆಗಳ ಕಾಮಗಾರಿಗಳ ಗುತ್ತಿಗೆಯಲ್ಲಿ ಬಹುಶಃ ಈ ತರಹದ ಆತಂಕ ಇರುವುದಿಲ್ಲ. ಆದರೆ, ತುಂಡು ಗುತ್ತಿಗೆಗಳಲ್ಲಿ ಸ್ವಪಕ್ಷೀಯರು, ಬಂಧುಗಳು ಎಂಬ ವಾಂಛೆಯಿಂದ ನಿಯಮ ಮೀರಿ ಗುತ್ತಿಗೆ ನೀಡಲಾಗುತ್ತದೆ ಎಂಬ ಆರೋಪಗಳು ಇವೆ. ಅಲ್ಲದೆ, ‘ಪರ್ಸೆಂಟೇಜ್ ನಡೆಯುತ್ತದೆ’ ಎಂಬ ಆಪಾದನೆಗಳೂ ಜೋರಾಗಿಯೇ ಸದ್ದು ಮಾಡುತ್ತವೆ.

ಇಂತಹ ಸಂದಿಗ್ಧ ಸ್ಥಿತಿಯಿಂದ ಪಾರಾಗಲು ಕಾಮಗಾರಿಗಳನ್ನೇ ಸ್ಥಗಿತಗೊಳಿಸುವುದೂ ಉಂಟು. ಆದರೆ, ಈಗ ಸಚಿವ ಸಂಪುಟ ಸಭೆ ಪ್ರಕಟಿಸಿರುವ ಯೋಜನೆಗಳಿಗೆ ಅಂತಹ ದುಸ್ಥಿತಿ ಎದುರಾಗಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಈ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಕಟಿಬದ್ಧರಾಗಬೇಕಿದೆ. ಎಲ್ಲೋ ಗಲಾಟೆಯಾಯಿತು, ಬರಗಾಲ ಎದುರಾಯಿತು ಎಂಬ ಕಾರಣಕ್ಕೆ ಯೋಜನೆಗಳ ಜಾರಿ ಕುಂಠಿತಗೊಳ್ಳಬಾರದು. ಅದಕ್ಕೆ ನಿಗದಿತ ಗಡುವಿನೊಳಗೆ ಕಾಮಗಾರಿಗಳ ಎಲ್ಲ ಪ್ರಕ್ರಿಯೆಗಳನ್ನೂ ವೇಗವಾಗಿ ಸಂಪೂರ್ಣಗೊಳಿಸಿದರೆ, ಸಾರ್ವಜನಿಕರಿಗೆ ಅವುಗಳ ಅನುಕೂಲ ಸುಲಭವಾಗಿ ತಲುಪುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಚುನಾವಣೆಗಳು ಈ ಅಭಿವೃದ್ಧಿ ಕಾಮಗಾರಿಗಳಿಗೆ ದೊಡ್ಡ ತಡೆಯೊಡ್ಡಿಬಿಡುತ್ತವೆ. ಲೋಕಸಭೆಯಿಂದ ಗ್ರಾಮ ಪಂಚಾಯಿತಿವರೆಗೆ ಯಾವುದೇ ಚುನಾವಣೆ ಎದುರಾದರೂ ಚುನಾವಣಾ ನೀತಿ ಸಂಹಿತೆಯಿಂದ ಎಲ್ಲ ಕಾಮಗಾರಿಗಳೂ ನನೆಗುದಿಗೆ ಬೀಳುತ್ತವೆ. ಒಂದು ರೀತಿಯಲ್ಲಿ ಬಹುತೇಕ ಆಡಳಿತ ಪಕ್ಷಗಳಿಗೂ ಇದೊಂದು ರೀತಿಯಲ್ಲಿ ಅನುಕೂಲಕರವಾಗುತ್ತದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ, ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡಿರುವ ನಿರ್ಧಾರಗಳ ಅನುಷ್ಠಾನಕ್ಕೆ ಮುಂದಾಗಬೇಕು. ಆ ಮೂಲಕ ಮಹದೇಶ್ವರಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆ ಮಾದರಿಯಾಗಬೇಕು. ಈ ಬಗ್ಗೆ ರಾಜ್ಯ ಸರ್ಕಾರ, ಅಧಿಕಾರಿಗಳು ಹೆಚ್ಚು ಒತ್ತು ನೀಡುವುದು ಕೂಡ ಅತ್ಯಗತ್ಯ.

” ಬೃಹತ್ ಯೋಜನೆಗಳ ಕಾಮಗಾರಿಗಳ ಗುತ್ತಿಗೆಯಲ್ಲಿ ಬಹುಶಃ ಈ ತರಹದ ಆತಂಕ ಇರುವುದಿಲ್ಲ. ಆದರೆ, ತುಂಡು ಗುತ್ತಿಗೆಗಳಲ್ಲಿ ಸ್ವಪಕ್ಷೀಯರು, ಬಂಧುಗಳು ಎಂಬ ವಾಂಛೆಯಿಂದ ನಿಯಮ ಮೀರಿ ಗುತ್ತಿಗೆ ನೀಡಲಾಗುತ್ತದೆ ಎಂಬ ಆರೋಪಗಳು ಇವೆ. ಅಲ್ಲದೆ, ‘ಪರ್ಸೆಂಟೇಜ್ ನಡೆಯುತ್ತದೆ’ ಎಂಬ ಆಪಾದನೆಗಳೂ ಜೋರಾಗಿಯೇ ಸದ್ದು ಮಾಡುತ್ತವೆ. ಇಂತಹ ಸಂದಿಗ್ಧ ಸ್ಥಿತಿಯಿಂದ ಪಾರಾಗಲು ಕಾಮಗಾರಿಗಳನ್ನೇ ಸ್ಥಗಿತಗೊಳಿಸುವುದೂ ಉಂಟು. ಆದರೆ, ಈಗ ಸಚಿವ ಸಂಪುಟ ಸಭೆ ಪ್ರಕಟಿಸಿರುವ ಯೋಜನೆಗಳಿಗೆ ಅಂತಹ ದುಸ್ಥಿತಿ ಎದುರಾಗಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಈ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಕಟಿಬದ್ಧರಾಗಬೇಕಿದೆ.”

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಜನರ ಹಿತ ಕಾಯಲಿ!

ಜನರ ಹಿತ ಕಾಯಲಿ! ನಕಲಿ ವೈದ್ಯರು, ಕಲಬೆರಿಕೆ ಔಷಧದ ಹಾವಳಿಯಿಂದ ಜನ ಬೇಸ್ತುಬಿದ್ದಿರುವಾಗ ನೈಜ ದರಕ್ಕಿಂತ ಅತ್ಯಧಿಕ ದರಕ್ಕೆ ಔಷಧಿ ಮಾರಾಟ…

4 hours ago

ಓದುಗರ ಪತ್ರ: ಜಾಗೃತಿ, ನಿಯಂತ್ರಣ ಇರಬೇಕು

ಆಹಾರದಲ್ಲಿ ಬಳಸುವ ಉಪ್ಪು, ಸಕ್ಕರೆ ಬಳಕೆ ಪ್ರಮಾಣಕ್ಕೆ ಕಡಿವಾಣ ಹಾಕಲು ಅರೋಗ್ಯ ಇಲಾಖೆ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಹಾಗೆಯೇ…

4 hours ago

ಓದುಗರ ಪತ್ರ: ಚಾ.ನಗರ ಜಿಲ್ಲೆಗೆ ವಿಶೇಷ ಅನುದಾನ ನೀಡಲು ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಲಿ

ಚಾಮರಾಜನಗರ ಜಿಯ ಕೊಳ್ಳೇಗಾಲ ಮತ್ತು ಹನೂರು ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು ರೂ.೫೦೦ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ…

4 hours ago

ಆಯಾ ಕೆಲಸ ಮಾಡಿ ಮಕ್ಕಳನ್ನು ಮಾಸ್ಟರ್ಸ್‌ ಮಾಡಿದ ಸತ್ಯಮ್ಮ

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಮಕ್ಕಳು ದೊಡ್ಡ ಹುದ್ದೆಗಳಿಗೆ ಹೋದರೂ ತನ್ನ ಕಾಯಕ ಮುಂದುವರಿಸಿರುವ ‘ಮಹಾತಾಯಿ’ ತೆಲಂಗಾಣದ ಸಂಗಾರೆಡ್ಡಿಯ ರಾಕೇಶ್…

4 hours ago

ಮಂಜಿನ ನಗರಿಯಲ್ಲಿ ರಸ್ತೆಗಳ ದುಸ್ಥಿತಿ

ಪುನೀತ್ ಮಡಿಕೇರಿ ಮಡಿಕೇರಿ ದಸರಾ ಸಮೀಪಿಸುತ್ತಿದ್ದರೂ ಗುಂಡಿಗಳಿಗೆ ಸಿಗದ ಮುಕ್ತಿ ಮಡಿಕೇರಿ ದಸರಾ ಜನೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಆದರೆ, ದಸರಾ…

4 hours ago

ಅ.೧, ೨ರಂದು ಶ್ರೀ ಗುರುಮಲ್ಲೇಶ್ವರ ದಾಸೋಹ ಭವನ ಉದ್ಘಾಟನೆ

ಮಹೇಂದ್ರ ಹಸಗೂಲಿ ದೇಪಾಪುರದಲ್ಲಿ ಗುಡಿಸಲಿನಲ್ಲಿ ಆರಂಭವಾದ ಅನ್ನ ದಾಸೋಹಕ್ಕೆ ಈಗ ದಾಸೋಹ ಭವನದ ರೂಪ ಗುಂಡ್ಲುಪೇಟೆ: ಸಣ್ಣ ಗುಡಿಸಲಿನಲ್ಲಿ ಆರಂಭಗೊಂಡ…

4 hours ago