ಎಡಿಟೋರಿಯಲ್

ಸಂಪಾದಕೀಯ : ಮುನ್ನೆಚ್ಚರಿಕೆ ವಹಿಸಿದ್ದರೆ ವೀರಭದ್ರೇಶ್ವರ ರಥ ಮುರಿಯುತ್ತಿರಲಿಲ್ಲ

ಚಾಮರಾಜನಗರ ತಾಲ್ಲೂಕಿನ ಚನ್ನಪ್ಪನಪುರ ಬಳಿ ಕನ್ನಡ ರಾಜ್ಯೋತ್ಸವದಂದು (ಮಂಗಳವಾರ) ಗುಡ್ಡದ ವೀರಭದ್ರೇಶ್ವರ ರಥೋತ್ಸವ ನಡೆಯುವ ಸಂದರ್ಭ ರಥ ಮುರಿದು ಬಿತ್ತು. ಅದೃಷ್ಟವಶಾತ್ ಭಕ್ತರೆಲ್ಲ ಓಡಿಹೋಗಿ ಅಪಾಯದಿಂದ ಪಾರಾದರೆ, ಅರ್ಚಕರಿಬ್ಬರಿಗೆ ಸಣ್ಣ ಪುಟ್ಟ ಗಾಯಗಳಾದವು. ಸದ್ಯ ದೊಡ್ಡದೊಂದು ದುರಂತ ತಪ್ಪಿತ್ತು. ಕಳೆದ 7 ತಿಂಗಳ ಹಿಂದೆ ಗುಂಡ್ಲುಪೇಟೆ ತಾಲ್ಲೂಕಿನ ಕಂದೇಗಾಲ ಗ್ರಾಮದ ಬಳಿಯ ಪಾರ್ವತಾಂಬ ಬೆಟ್ಟದಲ್ಲಿ ರಥೋತ್ಸವ ನಡೆದ ಸಂದರ್ಭದಲ್ಲಿ ಮುಂಭಾಗದಲ್ಲಿದ್ದವರು ವೇಗವಾಗಿ ರಥ ಎಳೆದಿದ್ದರಿಂದ ನೂಕುನುಗ್ಗಲು ಉಂಟಾಗಿ ನೆಲಕ್ಕೆ ಬಿದ್ದ ನಾಲ್ವರ ಮೇಲೆ ಚಕ್ರ ಹರಿದು ಇಬ್ಬರು ಮೃತಪಟ್ಟಿದ್ದರು. ಮತ್ತಿಬ್ಬರು ಗಾಯಗೊಂಡಿದ್ದರು. ಈ ದುರಂತ ಇನ್ನು ಮಾಸದಿರುವಾಗಲೇ ಚನ್ನಪ್ಪನಪುರದಲ್ಲಿ ರಥ ಮುರಿದು ಬಿದಿದ್ದೆ. ಇಂತಹ ದುರ್ಘಟನೆಗಳಿಂದ ಜಾತ್ರೆ ಮತ್ತು ಉತ್ಸವ ಎಂದರೆ ಭಕ್ತರು ಬೆಚ್ಚಿ ಬೀಳುವ ಪರಿಸ್ಥಿತಿ ಉಂಟಾಗಿದೆ.

ಕೊರೊನಾ ಕಾಡಿದ್ದರಿಂದ 3 ವರ್ಷಗಳ ಕಾಲ ವೀರಭದ್ರೇಶ್ವರ ರಥೋತ್ಸವ ನಡೆದಿರಲಿಲ್ಲ. ಅಮಚವಾಡಿ ಮತ್ತು ಚನ್ನಪ್ಪನಪುರದ ಗ್ರಾಮಸ್ಥರು ಸೇರಿ ರಥೋತ್ಸವ ನಡೆಸುವುದು ಮಾಮೂಲಿ. ಅದರಂತೆ ಈ ವರ್ಷ 2 ಗ್ರಾಮಗಳ ಕೋಮುವಾರು ಮುಖಂಡರು ಸೇರಿ ರಥೋತ್ಸವ ನಡೆಸಲು ಮುಂದಾದರು. ವೀರಭದ್ರೇಶ್ವರ ರಥ ಅಂತಹ ದೊಡ್ಡದೇನಲ್ಲ ಸಣ್ಣದು. ಆದರೆ, ರಥದ ಚಕ್ರಗಳು ಮತ್ತು ಅವುಗಳ ಮಧ್ಯದ ಮರದ ಪಟ್ಟಿ (ದೂರಿ) ನಿರ್ವಹಣೆಯಿಲ್ಲದೆ ಶಿಥಿಲಗೊಂಡಿತ್ತು. ಇದನ್ನು ದೇವಾಲಯದ ಕೋಮುವಾರು ಮುಖಂಡರು ಗಮನಿಸಲಿಲ್ಲ. ಏನೂ ಆಗದು ವೀರಭದ್ರೇಶ್ವರ ದಯೆ ಇದೆ ಎಂಬ ನಂಬಿಕೆಯಿಂದ ರಥವನ್ನು ಕಟ್ಟಿ ಎಳೆದರು ರಥ ದೇವಾಲಯವನ್ನು ಪ್ರದಕ್ಷಿಣೆ ಹಾಕಬೇಕಿತ್ತು. ಸ್ವಲ್ಪ ದೂರ ಸಾಗಿದ ರಥದ ದೂರಿ ಮುರಿದ ಶಬ್ದ ಕೇಳಿ ಬಂದಿದೆ. ನಿಧಾನಕ್ಕೆ ರಥದ ಮೇಲ್ಭಾಗ ಬೀಳುತ್ತಿದ್ದಂತೆ ಭಕ್ತರು ಓಡಿ ಹೋಗಿದ್ದಾರೆ. ರಥ ನೆಲಕ್ಕೆ ಉರುಳುತ್ತಿದ್ದಂತೆ ಅರ್ಚಕರಿಬ್ಬರಿಗೆ ಸಣ್ಣ ಗಾಯಗಳಾದವು. ರಥದ ಮೇಲ್ಭಾಗದಲ್ಲಿದ್ದವೆಲ್ಲಾ ಬಿದಿರ ಅಚ್ಚೆಗಳಾದ್ದರಿಂದ ಅರ್ಚಕರಿಗೂ ಹೆಚ್ಚು ಗಾಯಗಳಾಗಲಿಲ್ಲ. ಅವೆಲ್ಲ ಭಾರವಾದ ಮರದ ಪಟ್ಟಿಗಳಾಗಿದ್ದರೆ ಅರ್ಚಕರ ಸ್ಥಿತಿ ಅಯೋಮಯ ಆಗುತ್ತಿತ್ತು. ಪಾರ್ವತಾಂಬ ಬೆಟ್ಟದಲ್ಲಿ ನಡೆದ ದುರಂತವನ್ನು ನೆನಪಿಸಿಕೊಂಡಾದರೂ ಕೋಮುವಾರು ಮುಖಂಡರು ಎಚ್ಚೆತ್ತುಕೊಳ್ಳಬೇಕು. ಬೆಟ್ಟದ ಮೇಲಿರುವ ದೇವಾಲಯದ ಆವರಣ ಕಿರಿದಾಗಿದೆ. ಸುತ್ತಲಿನ ಹತ್ತಾರು ಗ್ರಾಮಗಳ ಜನರು ಜಾತ್ರೆಗೆ ಬರುತ್ತಾರೆ ಎಂಬುದರ ಅರಿವಿರಬೇಕಿತ್ತು. 3 ವರ್ಷಗಳ ಕಾಲ ಜಾತ್ರೆ ನಡೆದಿಲ್ಲ. ರಥದ ಚಕ್ರಗಳು ಸುಸ್ಥಿತಿಯಲ್ಲಿವೆಯೇ ಎಂಬುದನ್ನು ಗ್ರಾಮಸ್ಥರಾಗಲಿ, ಮುಜರಾಯಿ ಇಲಾಖೆ ಅಧಿಕಾರಿಗಳಾಗಲಿ ಪರಿಶೀಲಿಸಲಿಲ್ಲ ಪರಿಣಾಮ ಅವಘಡವೊಂದು ಸಂಭವಿಸಿದೆ.

ಮುಜರಾಯಿ ಇಲಾಖೆಗೆ ಸೇರಿದ ಸಿ.ದರ್ಜೆಯ ಈ ದೇವಾಲಯವನ್ನು ಮೈಸೂರಿನ ಅರಸರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ದೊಡ್ಡದಾಗಿ ನಿರ್ಮಿಸಿದ್ದರು. ಹಿಂದೆಲ್ಲ ಈ ಪ್ರಾಂತ್ಯ ತಮಿಳುನಾಡಿನ ದೊರೆಗಳಾದ ಚೋಳರ ಆಳ್ವಿಕೆಗೆ ಒಳಪಟ್ಟಿತ್ತು. ಆಗ ಈ ವೀರಭದ್ರೇಶ್ವರ, ಹರದನಹಳ್ಳಿಯಲ್ಲಿ ದಿವ್ಯಲಿಂಗೇಶ್ವರ, ನರಸಮಂಗಲದಲ್ಲಿ ರಾಮಲಿಂಗೇಶ್ವರ ದೇವಾಲಯಗಳು ನಿರ್ಮಾಣವಾಗಿವೆ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ.

ಐತಿಹಾಸಿಕವಾದ ಈ ವೀರಭದ್ರೇಶ್ವರ ದೇವಾಲಯದ ಗೋಪುರ ಮತ್ತು ಛತ್ರಗಳು ಶಿಥಿಲಗೊಂಡಿದೆ. ಆವರಣ ಸಮತಟ್ಟಾಗಿಲ್ಲ. ಉತ್ತಮ ರಸ್ತೆಯಿಲ್ಲ. ಸಮೀಪವೇ ನಿರ್ಮಿಸಿರುವ ಯಾತ್ರಿ ನಿವಾಸ್ ಉದ್ಘಾಟನೆಯಾಗದೆ ನಿರುಪಯುಕ್ತವಾಗಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಸಂಬಂಧಪಟ್ಟ ಶಾಸಕರಾಗಲಿ, ಸಂಸದರಾಗಲಿ ಇತ್ತ ಗಮನಹರಿಸಿಲ್ಲ. ಇತ್ತೀಚೆಗೆ ಬಿಳಿಗಿರಿರಂಗನ ಬೆಟ್ಟದಲ್ಲಿರುವ ರಂಗನಾಥಸ್ವಾಮಿ, ಚಾಮರಾಜನಗರದಲ್ಲಿರುವ ಚಾಮರಾಜೇಶ್ವರ ದೇವಾಲಯಗಳನ್ನು ಕೋಟ್ಯಂತರ ರೂ.ವೆಚ್ಚದಲ್ಲಿ ನವೀಕರಣ ಮಾಡಿಸಿ ಹೊಸ ರಥಗಳನ್ನು ನಿರ್ಮಿಸಲಾಯಿತು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇಂತಹ ದೊಡ್ಡ ದೇವಾಲಯಗಳತ್ತ ಗಮನಹರಿಸುತ್ತಾರೆ. ಆದರೆ, ವೀರಭದ್ರೇಶ್ವರ ದೇವಾಲಯಗಳತ್ತ ಮಾತ್ರ ತಿರುಗಿಯೂ ನೋಡುವುದಿಲ್ಲ ಎಂಬುದು ಭಕ್ತರ ಬೇಸರ.

ಕೇವಲ ಪಾರ್ವತಾಂಬ ರಥದ ದುರಂತವಲ್ಲ. ಕೆಲವು ವರ್ಷಗಳ ಹಿಂದೆ ನಂಜನಗೂಡಿನಲ್ಲಿ ಶ್ರೀಕಂಠೇಶ್ವರ ರಥೋತ್ಸವದ ವೇಳೆ ಚಕ್ರಕ್ಕೆ ಸಿಲುಕಿ ಭಕ್ತರೊಬ್ಬರ ಕಾಲುಗಳು ತುಂಡಾಗಿದ್ದವು. ದೇಶದ ಹಲವು ಕಡೆ ಜಾತ್ರೆ, ಕುಂಭಮೇಳಗಳ ಸಂದರ್ಭಗಳಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಹಲವರು ಮೃತಪಟ್ಟ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಸಹಸ್ರಾರು ಜನರು ಸೇರುವ ಸ್ಥಳದಲ್ಲಿ ಸಂಚಾರ ದಟ್ಟಣೆ, ತಳ್ಳಾಟ ನೂಕಾಟ, ಸಣ್ಣ ಪುಟ್ಟ ಗುಂಪು ಘರ್ಷಣೆ ನಡೆಯುತ್ತಿರುತ್ತವೆ. ದೇವರ ದರ್ಶನ, ಪೂಜೆ ಪುರಸ್ಕಾರ, ಹರಕೆ ತೀರಿಸುವುದು, ಮನಶಾಂತಿ ಬಯಸಿ ಬರುವ ಭಕ್ತರಿಗೆ ಸುರಕ್ಷತೆ ಮುಖ್ಯ. ಇದೆಲ್ಲದರ ಅರಿವು ಜಾತ್ರೆಯ ಜವಾಬ್ದಾರಿ ಹೊತ್ತವರಲ್ಲಿ ಇರಬೇಕು. ಪಾರ್ವತಾಂಬ  ರಥೋತ್ಸವದಲ್ಲಿ ಮೃತಪಟ್ಟವರು ಸಾಮಾನ್ಯ ವರ್ಗದ ಕುಟುಂಬಗಳು ಇವುಗಳ ಆಧಾರ ಸ್ತಂಭವಾಗಿದ್ದವರೇ ಯಾರದೋ ನಿರ್ಲಕ್ಷ್ಯದಿಂದ ಮೃತಪಟ್ಟಾಗ ಅವರ ಮನೆಗಳು ಬೀದಿ ಪಾಲಾಗುತ್ತವೆ. ಸರ್ಕಾರ ಒಂದಷ್ಟು ಪರಿಹಾರ ನೀಡಿ ಸುಮ್ಮನಾಗಬಹುದು. ಆದರೆ, ಮನೆಯ ಒಡೆಯ ಮರಳಿ ಬರುವುದಿಲ್ಲ. ನೆಮ್ಮದಿ ಸಿಗುವುದಿಲ್ಲ. ಇದೆಲ್ಲವನ್ನು ಜಾತ್ರೆ ನಡೆಸುವ ಮಂದಿ ಆಲೋಚಿಸಬೇಕು. ಮುನ್ನೆಚ್ಚರಿಕೆ ಕ್ರಮ ವಹಿಸಿ ರಥೋತ್ಸವಗಳನ್ನು ಯಶಸ್ವಿಯಾಗಿ ನಡೆಸಬೇಕಿದೆ.

andolanait

Recent Posts

ಶ್ರೀರಂಗಪಟ್ಟಣ ದಸರಾ 2026: ಅ.15ರಿಂದ ವೈಭವದ ಆಚರಣೆ, ಆಕರ್ಷಕ ಲೋಗೋ ಬಿಡುಗಡೆ

ಮಂಡ್ಯ: ಐತಿಹಾಸಿಕ ಹಿನ್ನೆಲೆಯುಳ್ಳ 416ನೇ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಅಕ್ಟೋಬರ್.‌15ರಂದು ಖ್ಯಾತ ನಟ ವಿ.ರವಿಚಂದ್ರನ್‌ ಅವರು…

7 hours ago

ಅಮೃತ್ ೨.೦ ಯೋಜನೆಗೆ ನಾಗರಿಕರ ಅಸಮಾಧಾನ

ದಾಸೇಗೌಡ ಸರಗೂರು ಹೊಸ ನಲ್ಲಿ ಸಂಪರ್ಕದಲ್ಲಿ ಸಣ್ಣ ಪ್ರಮಾಣದ ನೀರು; ಕಾಂಕ್ರೀಟ್, ಡಾಂಬರ್ ರಸ್ತೆಗಳ ಅಗೆತಕ್ಕೆ ಆಕ್ರೋಶ  ಸರಗೂರು: ಪಟ್ಟಣದ…

7 hours ago

ಓದುಗರ ಪತ್ರ: ಕೆಪಿಎಸ್‌ಸಿ ರದ್ದು: ಮುಖ್ಯಮಂತ್ರಿಗಳು ಶೀಘ್ರ ನಿರ್ಧಾರ ಕೈಗೊಳ್ಳಲಿ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕ ಲೋಕಸೇವಾ ಆಯೋಗವನ್ನು ರದ್ದುಗೊಳಿಸುವ ಇಂಗಿತವನ್ನು ವ್ಯಕ್ತಪಡಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕೆಪಿಎಸ್‌ಸಿ ಒಂದು ಸ್ವಾಯತ್ತ ಸಂಸ್ಥೆಯಾದರೂ…

7 hours ago

ಓದುಗರ ಪತ್ರ: ಸಮಾಜವನ್ನು ಜಾಗೃತಗೊಳಿಸುವ ಚಿತ್ರಗಳನ್ನು ದುನಿಯಾ ವಿಜಿ ಹೆಚ್ಚಾಗಿ ನಿರ್ದೇಶಿಸಲಿ

ಸಿನಿಮಾ ಮಾಧ್ಯಮ ಸಮಾಜದ ಮೇಲೆ ಹೆಚ್ಚು ಪ್ರಭಾವ ಬೀರುವ ಮಾಧ್ಯಮವಾಗಿದೆ. ಇತ್ತೀಚಿನ ತಂತ್ರಜ್ಞಾನದ ಅಗಾಧ ಬೆಳವಣಿಗೆಯ ನಡುವೆಯೂ ಉತ್ತಮ ಚಿತ್ರಗಳಿಗೆ…

7 hours ago

ಓದುಗರ ಪತ್ರ: ಗವಿಸಿದ್ಧೇಶ್ವರ ಶ್ರೀಗಳಿಂದ ದಸರಾ ಉದ್ಘಾಟನೆ: ಸಿಎಂ ನಿರ್ಧಾರ ಶ್ಲಾಘನೀಯ

ಈ ಬಾರಿಯ ವಿಶ್ವವಿಖ್ಯಾತ ಮೈಸೂರು ನಾಡಹಬ್ಬ ದಸರಾ ಮಹೋತ್ಸವವನ್ನು ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮಿಗಳವರಿಂದ…

7 hours ago

ಇವರ ಪಾಪಗಳನ್ನೆಲ್ಲ ಸಹಿಸಿಕೊ ಸಹ್ಯಾದ್ರಿ!

ನಾಗೇಶ ಹೆಗಡೆ ಕೊನೆಗೂ ಪಶ್ಚಿಮ ಘಟ್ಟಗಳ ರಕ್ಷಣೆ ಅನಿರ್ದಿಷ್ಟ ಕಾಲ ಮುಂದೂಡಿಕೆ ಗಾಡ್ಗೀಳ್ ಸಮಿತಿಯ ಕೆಲವು ನಿಯಮಗಳ ಮತ್ತೊಮ್ಮೆ ಖಡಕ್…

7 hours ago