ಎಡಿಟೋರಿಯಲ್

ಸಂಪಾದಕೀಯ: ದಸರಾ ವೇಳೆಯಾದರೂ ಮಹಾರಾಜರ ಕೊಡುಗೆಗಳ ಸ್ಮರಣೆಯಾಗಲಿಲ್ಲ

ದಸರಾ ವೇಳೆಯಾದರೂ ಮಹಾರಾಜರ ಕೊಡುಗೆಗಳ ಸ್ಮರಣೆಯಾಗಲಿಲ್ಲ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಆರಂಭಗೊಂಡಿದೆ. ಮೈಸೂರು ಜಿಲ್ಲೆಯ ಜೊತೆ ಅವಿನಾಭಾವ ಸಂಬಂಧ ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲೂ ೪ ದಿನಗಳ ದಸರಾ ಮಹೋತ್ಸವ ಶುರುವಾಗಿದೆ. ವೇದಿಕೆ ಕಾರ್ಯಕ್ರಮಗಳು, ಫಲಪುಷ್ಪ ಪ್ರದರ್ಶನ, ಮಹಿಳಾ ಹಾಗೂ ರೈತ ದಸರಾ, ಕಲಾತಂಡಗಳ ಮೆರವಣಿಗೆ ನಡೆಯುತ್ತಿವೆ. ಮೈಸೂರು ಅರಸರಾಗಿದ್ದ ಚಾಮರಾಜ ಒಡೆಯರ್ ಹೆಸರಿನ ಜಿಲ್ಲೆಯಿದೆ. ಅವರು ಹುಟ್ಟಿದ ಸ್ಥಳವಾದ ಜನನ ಚಾ.ನಗರದ ಮಂಟಪದ ಚಾಮರಾಜೇಶ್ವರ ದೇವಾಲಯದ ಹಿಂಭಾಗವಿದೆ. ದಸರಾ ಹಿನ್ನೆಲೆಯಲ್ಲಿ ಅದನ್ನು ಶುಚಿಗೊಳಿಸಿ ಸುಣ್ಣ ಬಣ್ಣ ಬಳಿದು ಅಲಂಕರಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಲಿಲ್ಲ.
ದಸರಾದಲ್ಲಿ ಮೈಸೂರು ಒಡೆಯರ್ ಅರಸರ ಕೊಡುಗೆಗಳ ಬಗ್ಗೆಯೂ ಯಾವುದೇ ಕಾರ್ಯಕ್ರಮವಿಲ್ಲ. ಆ ಬಗ್ಗೆ ವಿದ್ವಾಂಸರ ಮೂಲಕ ಒಂದು ವಿಚಾರ ಸಂಕಿರಣವನ್ನಾದರೂ ಏರ್ಪಡಿಸಿ ಅವರನ್ನು ಸ್ಮರಿಸುವ ಕೆಲಸ ಆಗಲಿಲ್ಲ. ಸರ್ಕಾರಿ ಉತ್ಸವವಾಗಿ ನಡೆಸಲಾಗುತ್ತಿದೆ.
ಎರಡೂವರೆ ದಶಕಗಳ ಹಿಂದೆ ಚಾಮರಾಜನಗರ ಜಿಲ್ಲೆಯು ಮೈಸೂರು ಜಿಲ್ಲೆಗೆ ಸೇರಿತ್ತು. ಮೈಸೂರಿನ ಯದುವಂಶಸ್ಥರ (ಒಡೆಯರ) ಆಳ್ವಿಕೆಗೆ ಒಳಪಟ್ಟಿತ್ತು. ತೆರಕಣಾಂಬಿ, ಉಮ್ಮತ್ತೂರು ಅಮಚ್ವಾಡಿ, ಯಳಂದೂರು, ಬೆಟ್ಟದ ಕೋಟೆ ಮುಂತಾದ ಪಾಳೆಯಪಟ್ಟುಗಳ ಸಾಮಂತರು ಮೈಸೂರು ಅರಸರ ರಕ್ತ ಸಂಬಂಧಿಗಳೇ ಆಗಿದ್ದು ಈ ಮನೆತನದ ಜೊತೆ ವೈವಾಹಿಕ ಸಂಬಂಧಗಳನ್ನು ಹೊಂದಿದ್ದರು. ಈ ಮನೆತನಗಳ ಹಲವರು ಮೈಸೂರು ಒಡೆಯರಿಗೆ ದತ್ತಕರಾಗಿ ರಾಜ್ಯವಾಳಿರುವ ನಿದರ್ಶನಗಳಿವೆ.
ಕ್ರಿಸ್ತಶಕ ೧೭೯೯ ರಿಂದ ೧೮೬೮ ರವರೆಗೆ ಎರಡು ಬೇರೆ ಬೇರೆ ಅವಧಿಗಳಲ್ಲಿ ಮೈಸೂರು ಸಿಂಹಾಸನವನ್ನು ಅಲಂಕರಿಸಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅಪಾರ ದೈವಭಕ್ತ ಹಾಗೂ ದಾನಶೀಲ ದೊರೆ. ಈ ದೊರೆಯ ತಂದೆ ಚಾಮರಾಜ ಒಡೆಯರ ಜನ್ಮಸ್ಥಳ ಇಂದಿನ ಚಾಮರಾಜನಗರ. ಅದರ ಆಗಿನ ಹೆಸರು ಅರೆ ಕೊಟ್ಟಾರ. ತಂದೆಯ ನೆನಪಿನಲ್ಲಿ ಅರೆಕೊಟ್ಟಾರದಲ್ಲಿ ಚಾಮರಾಜೇಶ್ವರ ದೇವಾಲಯವನ್ನು ಕಟ್ಟಿಸಿದ ಕೃಷ್ಣರಾಜ ಒಡೆಯರು ಆ ಊರಿಗೆ ಚಾಮರಾಜನಗರ ಎಂದು ಹೆಸರು ಬದಲಾಯಿಸಿದರು. ಇಲ್ಲಿ ಸಂಸ್ಕೃತ ಪಾಠಶಾಲೆ ಅನ್ನು ಸ್ಥಾಪಿಸಿ, ನೂರಾರು ವಿದ್ವಾಂಸರನ್ನು ಕರೆತಂದ ನಂತರ ಈ ಊರು ಮಹತ್ವ ಪಡೆಯಿತು.
ಇದಲ್ಲದೆ ಮೈಸೂರಿನ ಒಡೆಯರಲ್ಲಿ ಒಬ್ಬರಾದ ರಣಧೀರ ಕಂಠೀರವ ನರಸಿಂಹರಾಜ ಒಡೆಯರ್ ಸ್ವತಃ ಕುಸ್ತಿ ಪಟುವಾಗಿದ್ದರು. ತಮಿಳುನಾಡಿನ ತಿರುಚನಾಪಳ್ಳಿಯ ಜಗಜಟ್ಟಿಯನ್ನು ಸೋಲಿಸಿ ಪ್ರಖ್ಯಾತರಾಗಿದ್ದರು ಎಂದು ಇತಿಹಾಸದಲ್ಲಿ ದಾಖಲಾಗಿದೆ. ಇವರು ತೆರಕಣಾಂಬಿಯ ಜೊತೆ ಹೆಚ್ಚು ಒಡನಾಟ ಇಟ್ಟುಕೊಂಡಿದ್ದರು.
ಜಿಲ್ಲೆಯು ಈಗಲೂ ಶೇ.೫೨ ರಷ್ಟು ಅರಣ್ಯ ಹೊಂದಿದೆ. ಮೈಸೂರಿನ ಒಡೆಯರ್‌ಗಳು ಆಳ್ವಿಕೆ ಮಾಡುವಾಗ ಜಿಲ್ಲೆಯಲ್ಲಿ ದಟ್ಟ ಅರಣ್ಯವಿತ್ತು. ಕಾಡು ಪ್ರಾಣಿಗಳಾದ ಹುಲಿ, ಚಿರತೆ, ಆನೆ, ಕರಡಿ ಸೇರಿದಂತೆ ಇನ್ನು ಅನೇಕ ಕ್ರೂರ ಮೃಗಗಳ ಉಪಟಳವಿತ್ತು. ಈ ಬಗ್ಗೆ ಸ್ಥಳೀಯರಿಂದ ದೂರು ಹೋದಾಗಲೆಲ್ಲ ಮೈಸೂರಿನ ಮಹಾರಾಜರು ಸೈನ್ಯ ಸಮೇತ ಕಾಡಿನತ್ತ ತೆರಳಿ ಶಿಕಾರಿ ಮಾಡುತ್ತಿದ್ದರು. ಅವರು ಇಲ್ಲಿಗೆ ಬಂದಾಗಲೆಲ್ಲ ವಿಶ್ರಾಂತಿ ಪಡೆಯಲು ಬಂಡೀಪುರ ಅರಣ್ಯ ಮತ್ತು ಬಿಳಿಗಿರಿರಂಗನಬೆಟ್ಟ ಅರಣ್ಯ ಪ್ರದೇಶಗಳಲ್ಲಿ ವಿಶ್ರಾಂತಿ ಧಾಮಗಳನ್ನು ತೆರೆದಿದ್ದರು. ಅವುಗಳೇ ಇಂದಿನ ಜಂಗಲ್ ರೆಸಾರ್ಟ್‌ಗಳು.
ಇದಷ್ಟೇ ಅಲ್ಲದೆ ಮೈಸೂರಿನಿಂದ ಚಾಮರಾಜನಗರಕ್ಕೆ ಹೊಸ ರೈಲು ಮಾರ್ಗ ನಿರ್ಮಿಸಿದವರೇ ನಾಲ್ವಡಿ ಕೃಷ್ಣರಾಜ ಒಡೆಯರ್.
ಮೊದಲನೇ ರೈಲು ನಗರಕ್ಕೆ ಬಂದಾಗ ನಾಲ್ವಡಿಯವರು ಅದರಲ್ಲಿ ಪ್ರಯಾಣಿಸಿ ಚಾಮರಾಜನಗರಕ್ಕೆ ಬಂದರು. ಇಲ್ಲಿಗೆ ಬಂದಾಗಲೆಲ್ಲ ನಗರದ ಸತ್ಯಮಂಗಲ ರಸ್ತೆಯಲ್ಲಿರುವ ಪ್ರವಾಸಿ ಮಂದಿರದಲ್ಲಿ ನಾಲ್ವಡಿಯವರು ವಾಸ್ತವ್ಯ ಮಾಡುತ್ತಿದ್ದರು. ನಗರದ ಪೂರ್ವ ಭಾಗದಲ್ಲಿರುವ ಬಿಳಿಗಿರಿರಂಗನಬೆಟ್ಟ ಅರಣ್ಯದ ಅಂಚಿನ ಸಿದ್ದಯ್ಯನಪುರ, ಹೊಂಗಲವಾಡಿ, ದೊಳ್ಳಿಪುರ, ಹೊಂಡರಬಾಳು ಸೇರಿದಂತೆ ಇನ್ನು ಕೆಲವು ಗ್ರಾಮಗಳು ಅಮೃತಕಾವಲ್ ಹುಲ್ಲುಗಾವಲು ಪ್ರದೇಶವಾಗಿದ್ದವು. ಮೈಸೂರಿನ ಅರಸರು ಅವುಗಳನ್ನು ಬಿಟ್ಟುಕೊಟ್ಟಿದ್ದರು ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ.
ಮೈಸೂರಿನ ಶ್ರೇಯೋಭಿವೃದ್ಧಿಗೆ ಹೆಚ್ಚು ಕೊಡುಗೆ ನೀಡಿದ್ದ ಮೈಸೂರು ಮಹಾರಾಜರು ಚಾಮರಾಜನಗರ ಜಿಲ್ಲೆಗೂ ಒಂದಷ್ಟು ಕೊಡುಗೆ ಕೊಟ್ಟಿದ್ದಾರೆ. ಅಂತಹ ಕಾರ್ಯಗಳನ್ನು ಸ್ಮರಿಸುವ ಕೆಲಸ ಮಾಡಿದ್ದರೆ ಜಿಲ್ಲೆಯ ದಸರಾಗೆ ಮತ್ತೆ ಮೆರುಗು ಬರುತ್ತಿತ್ತು. ಜೊತೆಗೆ ಯದುಕುಲಕ್ಕೆ ಸಲ್ಲಿಸಿದ ಗೌರವವಾಗುತ್ತಿತ್ತು. ಈ ಸಂಬಂಧ ದಸರಾ ಪೂರ್ವಭಾವಿ ಸಭೆಗಳಲ್ಲಿ ನಗರದ ಹಿರಿಯ ಚಿಂತಕರು, ಹೋರಾಟಗಾರರು ಈ ವಿಷಯವನ್ನು ಪ್ರಸ್ತಾಪಿಸಿ ಕಾರ್ಯಕ್ರಮ ಆಯೋಜನೆಗೆ ಮುಂದಾಗಬೇಕಿತ್ತು. ದಸರಾ ಮಹೋತ್ಸವ ಎಂದರೆ ಮೈಸೂರು ಒಡೆಯರ್ ಮಹಾರಾಜರ ಉತ್ಸವ ಎಂದೇ ಖ್ಯಾತಿ. ದಸರಾ ಎಂದರೆ ಸಾಂಸ್ಕೃತಿಕ ಕಲಾತಂಡಗಳ ಮೆರವಣಿಗೆ, ಕವಿಗೋಷ್ಠಿ, ಪೂಜೆ ಪುನಸ್ಕಾರ, ಎಲ್ಲ ಬಗೆಯ ಗಾಯನಗಳು ಹೂರಣ ಇರುವುದು ಸೂಕ್ತ. ಜೊತೆಗೆ ಮಹಾರಾಜರನ್ನು ಸ್ಮರಿಸುವ ಕೆಲಸವಾಗಬೇಕಿತ್ತು. ಈ ಕಾರ್ಯಕ್ರಮವು ಮುಂದಿನ ವರ್ಷವಾದರೂ ನಡೆಯಲಿ.

andolanait

Recent Posts

ಕಾವೇರಿ ಕೊಳ್ಳದ ರೈತರಿಗೆ 4 ಕಟ್ಟು ನೀರು ; ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

ಬೆಂಗಳೂರು : ಮುಂಗಾರು ಮಳೆ ಕೊರತೆ ಮತ್ತು ಕಾವೇರಿ ಜಲಾನಯನ ಪ್ರದೇಶದಲ್ಲಿ ಜಲಾಶಯಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದುಬಾರದ ಹಿನ್ನೆಲೆಯಲ್ಲಿ,…

9 hours ago

ಮೈಸೂರು | ಭಾರತ್ ಜೋಡೋ ನೋಂದಣಿಗೆ ಚಾಲನೆ

ಮೈಸೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಮುಖ್ಯಮಂತ್ರಿಯವರು ಯುವ ಶಕ್ತಿ ರಾಷ್ಟ್ರ ಶಕ್ತಿ ಎಂಬ ಶೀರ್ಷಿಕೆಯಡಿ ಭಾರತ್…

9 hours ago

ಎಂಡಿಎ ಬದಲಿ ನಿವೇಶನ ಹಂಚಿಕೆ ರದ್ದುಪಡಿಸಿ ಸರ್ಕಾರ ಆದೇಶ

ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (MDA) ನಿಯಮಗಳನ್ನು ಉಲ್ಲಂಘಿಸಿ ಮಾಡಲಾಗಿರುವ 50:50 ಬದಲಿ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಏಕಸದಸ್ಯ…

10 hours ago

ಹನೂರು ಶೂಟೌಟ್ ಪ್ರಕರಣದ ಬಗ್ಗೆ ಕೂಲಂಕುಷ ತನಿಖೆ : ಸಿ.ಎಂ ಡಿ.ಕೆ.ಶಿವಕುಮಾರ್*

ಬೆಂಗಳೂರು : ಹನೂರು ಶೂಟೌಟ್ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದ್ದು, ತನಿಖೆ ಬಳಿಕ ಪ್ರತಿಕ್ರಿಯೆ ನೀಡುತ್ತೇವೆ ಎಂದು ಸಿಎಂ…

13 hours ago

ಕ್ಯಾಪ್ಟನ್ ಅಭಿಮನ್ಯು ಆನೆಗೆ ರಾಜೋಚಿತ ಬೀಳ್ಕೊಡುಗೆ ನೀಡಿ : ಸಚಿವ ಖಂಡ್ರೆ

ಬೆಂಗಳೂರು : ಆರು ಬಾರಿ ಚಿನ್ನದಂಬಾರಿ ಹೊತ್ತ 60 ವರ್ಷದ ಕ್ಯಾಪ್ಟನ್ ಅರ್ಜುನ ಆನೆಗೆ ಈ ಬಾರಿ ದಸರಾ ಜಂಬೂಸವಾರಿಯಲ್ಲಿ…

15 hours ago

ಹನೂರು ಶೂಟೌಟ್ ಪ್ರಕರಣದ ಬಗ್ಗೆ ಕೂಲಂಕುಷ ತನಿಖೆ: ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: ಹನೂರು ಶೂಟೌಟ್ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದ್ದು, ತನಿಖೆ ಬಳಿಕ ಪ್ರತಿಕ್ರಿಯೆ ನೀಡುತ್ತೇವೆ ಎಂದು ಸಿಎಂ ಡಿ…

16 hours ago