ಎಡಿಟೋರಿಯಲ್

ಹಾಲಿನ ಪ್ರೋತ್ಸಾಹ ಧನ ಬಿಡುಗಡೆಗೆ ಸರ್ಕಾರ ಮುಂದಾಗಲಿ

ಅನಿಲ್ ಅಂತರಸಂತೆ

ರಾಜ್ಯದಲ್ಲಿ ಕೃಷಿಯ ನಂತರದ ೨ನೇ ಸ್ಥಾನವನ್ನು ರೈತರ ಬೆನ್ನೆಲುಬಾಗಿರುವ ಹೈನುಗಾರಿಕೆಗೆ ನೀಡಬಹುದಾಗಿದೆ. ಅದರಲ್ಲೂ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಹಾಸನ ಜಿಲ್ಲೆಗಳ ರೈತರು ಹೆಚ್ಚಾಗಿ ಈ ಹೈನುಗಾರಿಕೆ ಉಪಕಸುಬನ್ನೇ ಅವಲಂಬಿಸಿದ್ದಾರೆ.

ಇತ್ತೀಚೆಗೆ ರಾಜ್ಯದಲ್ಲಿ ಹಾಲು ಮಾರಾಟದ ದರವು ಏರಿಕೆಯಾದ್ದರಿಂದ ರೈತರು ತಮ್ಮ ಆದಾಯ ಮತ್ತಷ್ಟು ಹೆಚ್ಚಳವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಸರ್ಕಾರ ತಾನು ನೀಡಿದ ಭರವಸೆಯಂತೆ ರೈತರಿಗೆ ನೀಡಬೇಕಿರುವ ೫ ರೂ. ಪ್ರೋತ್ಸಾಹಧನವನ್ನು ಮಾತ್ರ ಇನ್ನೂ ಬಾಕಿ ಉಳಿಸಿಕೊಂಡಿದ್ದು, ಸರ್ಕಾರದ ಭರವಸೆ ಹಾಗೆಯೇ ಉಳಿದಿದೆ.

ಹೈನುಗಾರಿಕೆಯನ್ನು ಆಶ್ರಯಿಸಿ ಹಾಲು ಉತ್ಪಾದನೆ ಮಾಡುತ್ತಿರುವ ರೈತರಿಂದ ಮೈಮುಲ್ ಪ್ರತಿ ಲೀಟರ್‌ಗೆ ೩೦ ರೂ. ಬೆಲೆ ನೀಡಿ ಖರೀದಿಸುತ್ತಿತ್ತು. ಆದರೆ ಸರ್ಕಾರ ನಂದಿನಿ ಹಾಲಿನ ದರ ಏರಿಸಿದ್ದರಿಂದ ಮೈಮುಲ್ (ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ)ಕೂಡ ೨ ರೂ. ಏರಿಸಿ, ೩೨ ರೂ.ಗಳನ್ನು ರೈತರಿಗೆ ನೀಡಲು ಮುಂದಾಗಿದೆ.

ಆದರೆ ಈ ಹಿಂದೆ ರೈತರಿಗೆ ಮೈಮುಲ್ ನೀಡುತ್ತಿರುವ ಹಣ ಸಾಕಾಗುತ್ತಿಲ್ಲ ಎಂದಾಗ ೫ ರೂ. ಪ್ರೋತ್ಸಾಹ ಧನ ನೀಡುವುದಾಗಿ ಭರವಸೆ ನೀಡಿದ್ದ ಸರ್ಕಾರ ಈಗ ಆ ಹಣವನ್ನು ಕಳೆದ ೩ ತಿಂಗಳುಗಳಿಂದ ಬಾಕಿ ಉಳಿಸಿಕೊಂಡಿರುವುದು, ಸರ್ಕಾರ ಕೇವಲ ಘೋಷಣೆ ಮಾತ್ರ ಮಾಡುತ್ತದೆ ವಿನಾ ಅದನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರುವಲ್ಲಿ ವಿಫಲವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಮೈಸೂರು ಜಿಲ್ಲೆಯಲ್ಲಿ ಪ್ರತಿನಿತ್ಯ ೧೧೫೬ ಸಂಘಗಳಿಂದ ೯೬ ಸಾವಿರ ಹೈನುಗಾರರು ಡೇರಿಗೆ ಸುಮಾರು ೬.೫೦ ಲಕ್ಷ ಲೀ. ಹಾಲು ಹಾಕುತ್ತಿದ್ದು, ಇವರಿಗೆ ಬರಬೇಕಾದ ಮೊತ್ತವೇ ಬರೋಬ್ಬರಿ ತಿಂಗಳಿಗೆ ೩೦ ಕೋಟಿ ರೂ.ಗಳಷ್ಟಿದೆ.

ಇದರೊಂದಿಗೆ ಮಂಡ್ಯದಲ್ಲಿ ೧೨೭೪ ಸಂಘಗಳ ೧,೦೨,೦೦೦ ಸದಸ್ಯರು ಒಟ್ಟು ೯ ಲಕ್ಷ ಲೀ. ಹಾಲು ಡೇರಿಗೆ ಹಾಕುತ್ತಿದ್ದಾರೆ. ಚಾಮರಾಜನಗರದಲ್ಲಿ ೪೬೫ ಸಂಘದ ೩೨ ಸಾವಿರ ಸದಸ್ಯರಿಂದ ೨.೧೦ ಲಕ್ಷ ಲೀ., ಕೊಡಗಿನಿಂದ ೩೮ ಸಂಘದ ೨೭೦೦ ಸದಸ್ಯರಿಂದ ೫೦,೦೦೦ ಲೀ ಹಾಲು ಸಂಗ್ರಹವಾಗುತ್ತಿದೆ.

ಆದರೆ ಸರ್ಕಾರ ಮಾತ್ರ ಇವರಿಗೆ ನೀಡಬೇಕಾದ ೫ ರೂ. ಪ್ರೋತ್ಸಾಹಧನವನ್ನು ಕಳೆದ ೩ ತಿಂಗಳಿನಿಂದ ಬಾಕಿ ಉಳಿಸಿಕೊಂಡಿದ್ದು, ಮಂಡ್ಯ ಜಿಲ್ಲೆಗೇ

೩೫ ಕೋಟಿ ರೂ. ಹಾಗೆಯೇ, ಚಾ.ನಗರ ಮತ್ತು ಕೊಡಗಿನಲ್ಲಿಯೂ ಸಾಕಷ್ಟು ಪ್ರಮಾಣದಲ್ಲಿ ಬಾಕಿ ಉಳಿಸಿಕೊಂಡಿದೆ.

ಸದ್ಯ ಈ ಪರಿಸ್ಥಿತಿ ಹೈನುಗಾರಿಕೆಯನ್ನೇ ನಂಬಿರುವ ಗ್ರಾಮೀಣ ಭಾಗದ ಕುಟುಂಬಗಳಿಗೆ ನುಂಗಲಾರದ ತುಪ್ಪವೆನಿಸಿದೆ.

ಬೇಸಾಯವನ್ನು ನಂಬಿ ಸಾಕಷ್ಟು ನಷ್ಟ ಅನುಭವಿಸುತ್ತಿರುವ ಗ್ರಾಮೀಣ ಭಾಗದ ರೈತರು ತಮ್ಮ ಜೀವನೋಪಾಯಕ್ಕಾಗಿ ಹೈನುಗಾರಿಯನ್ನು ಆರಂಭಿಸಿ ಆರ್ಥಿಕವಾಗಿ ಸಫಲತೆ ಕಾಣುವ ಬಯಕೆಯನ್ನು ಹೊಂದಿದ್ದರು. ಇದಕ್ಕಾಗಿ ಸ್ಥಳೀಯ ಬ್ಯಾಂಕುಗಳಿಂದ ಸಾಕಷ್ಟು ಸಾಲ ಮಾಡಿ ಹಸುಗಳನ್ನು ಖರೀದಿಸಿ ಹೈನುಗಾರಿಕೆಯನ್ನು ಆರಂಭಿಸಿದ್ದಾರೆ.

ಈ ನಡುವೆ ಸರ್ಕಾರ ಕೂಡ ಪ್ರೋತ್ಸಾಹ ಧನವನ್ನು ನೀಡುವ ಬಗ್ಗೆ ಭರವಸೆ ನೀಡಿ ಘೋಷಣೆಯನ್ನೂ ಮಾಡಿ ರೈತರಲ್ಲಿ ಆಸೆಯನ್ನು ಚಿಗುರಿಸಿತ್ತು. ಆದರೆ ಇದೀಗ ೩ ತಿಂಗಳ ಹಣ ಬಾಕಿ ಉಳಿಸಿಕೊಂಡಿದೆ. ಅಲ್ಲದೆ ಈ ಪ್ರೋತ್ಸಾಹ ಧನವು ಸಮಯಕ್ಕೆ ಸರಿಯಾಗಿ ಎಂದೂ ಬಂದಿಲ್ಲ ಎಂಬುದು ರೈತರ ಮತ್ತೊಂದು ಆರೋಪವಾಗಿದೆ. ಸರಿಯಾದ ಸಮಯಕ್ಕೆ

ನೀಡಲು ಸಾಧ್ಯವಿಲ್ಲದ ಮೇಲೆ ಸರ್ಕಾರ ಘೋಷಣೆಯನ್ನಾದರೂ ಏಕೆ ಮಾಡಬೇಕು? ಎಂಬುದು ಪ್ರಶ್ನೆಯಾಗಿದೆ. ಇನ್ನಾದರೂ ಸರ್ಕಾರ ಇಂತಹ ಗಂಭೀರ ವಿಚಾರಗಳ ಕುರಿತು ಆಲೋಚನೆ ಮಾಡಬೇಕಿದೆ. ಘೋಷಣೆ ಮಾಡಿ ಬಳಿಕ ಅನುಷ್ಠಾನ ಮಾಡದೆ ಕೇವಲ ಅರೆಬರೆ ಆಶ್ವಾಸನೆಗಳನ್ನು ನೀಡುತ್ತಾ ಮುಂದುವರಿಯುವ ಬದಲು ಯೋಜನೆಯನ್ನು ಯಶಸ್ವಿಯಾಗಿ ರೈತನ ಕೈ ಸೇರುವಂತೆ ಮಾಡಬೇಕಿದೆ.

andolanait

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಭಾಷೆ, ಬದುಕು ಕಲಿಸಿದ ನನ್ನಪ್ಪ

ಸಂತೋಷ ಕೌಲಗಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಅವನ ತಂದೆಯ ಪಾತ್ರ ಬಹಳ ದೊಡ್ಡದು. ಒಬ್ಬ ಆದರ್ಶ ಮನೋಭಾವದ, ಮಕ್ಕಳನ್ನು ಸಮಾನವಾಗಿ…

8 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಮತಗಳ ಪರಿಚಯ

ನಾನು ಇಂಗ್ಲೆಂಡಿಗೆ ಹೋದ ಎರಡನೆಯ ವರ್ಷದ ಕೊನೆಯಲ್ಲಿ ನನಗೆ ಇಬ್ಬರು ಥಿಯಾಸಫಿಸ್ಟರ ಪರಿಚಯವಾಯಿತು. ಅವರಿಬ್ಬರೂ ಅಣ್ಣ ತಮ್ಮಂದಿರು ಮತ್ತು ಅವಿವಾಹಿತರು.…

8 hours ago

ರೆಟ್ರೋ ಫೋಟೋಗಳ ಹೊಸ ಅಲೆ

ಹಳೆಯ ನೆನಪು, ಹೊಸ ತಂತ್ರಜ್ಞಾನ ೧೯೭೦-೮೦ರ ದಶಕದ ರೂಪದಲ್ಲಿ ಹೊಸ ತಲೆಮಾರು -ಡಾ.ಎಂ.ಲೋಕೇಶ ಒಮ್ಮೆ ಯೋಚಿಸಿ ನೋಡಿ... ಇಂದು ತೆಗೆದ…

8 hours ago

ಮಹಾಪಂಚ್‌ ಕಾರ್ಟೂನ್‌

  ಮಹಾಪಂಚ್‌ ಕಾರ್ಟೂನ್‌ | ಸೆಪ್ಟಂಬರ್‌ 12 ಶನಿವಾರ

8 hours ago

ಒಳ್ಳೆಯತನಕ್ಕೂ ಕೆಟ್ಟತನಕ್ಕೂ ಜಾತಿ ಮಾನದಂಡ ಅಲ್ಲ

ಜಾತಿ ಯಾವುದು?" - ಒಂದು ಪ್ರಶ್ನೆಯ ಹಿಂದೆ ಅಡಗಿರುವ ಮನಸ್ಥಿತಿ ಟಿ.ಕೆ.ಹರೀಶ್ ನೀವು ಯಾವ ಜಾತಿ?... ಪರಿಚಯವಾದ ಕೆಲವೇ ಕ್ಷಣಗಳಲ್ಲಿ…

9 hours ago

ಓದುಗರ ಪತ್ರ | ‘ಅಕ್ಕ’ ಸಮ್ಮೇಳನದಲ್ಲೂ ‘ನಂದಿನಿ’ ಮಿಂಚಿಂಗ್!

ಸೆಪ್ಟೆಂಬರ್ ೪, ೫, ೬ ರಂದು ಅಮೆರಿಕಾದ ಫಿಲಡೆಲಿಯಾದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲೂ ಕನ್ನಡಿಗರ ಹೆಮ್ಮೆ ನಂದಿನಿ ಅಂಗಡಿ ಇದ್ದದ್ದು…

9 hours ago