Andolana originals

ಆರ್‌ಟಿಇ; ಮಕ್ಕಳು ಅವಕಾಶ ವಂಚಿತರಾಗಬಾರದು

ಶಾಂತರಾಜು ಬಸ್ತೀಪುರ

ಬಜೆಟ್ ಘೋಷಣೆಯಂತೆ ಪ್ರೌಢಶಾಲೆಗೂ ವಿಸ್ತರಣೆಯಾಗಲಿ

ಬಡತನ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಂಕಷ್ಟ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಜಾರಿಯಾಗಿದ್ದು, ೧ರಿಂದ ೮ನೇ ತರಗತಿವರೆಗೆ ಉಚಿತ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈಗ ರಾಜ್ಯ ಸರ್ಕಾರ ೧೦ನೇ ತರಗತಿವರೆಗೂ ವಿಸ್ತರಿಸಿದೆ. ಆದರೆ, ಖಾಸಗಿ ಶಾಲೆಗಳ ಒಕ್ಕೂಟ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟುಗಳ ಮಕ್ಕಳೂ ಸೇರಿದಂತೆ ಬಡತನದ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಆತಂಕ ಎದುರಾಗಿದೆ.

ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ (೨೦೨೬- ೨೭ನೇ ಆರ್ಥಿಕ ವರ್ಷ)ನಲ್ಲಿ ಹಲವು ಮಹತ್ವದ ಯೋಜನೆಗಳಿವೆ. ಅದರಲ್ಲಿ ಪರಿಶಿಷ್ಟ ಜಾತಿ/ ಪಂಗಡಗಳಿಗೆ ಸೇರಿದ ಆರ್‌ಟಿಇ ಮಕ್ಕಳಿಗೆ ನೆರವಾಗುವಂಥ ಯೋಜನೆಯೂ ಇದೆ. ಆರ್‌ಟಿಇ ಅಡಿ ಎಂಟನೇ ತರಗತಿವರೆಗಿದ  ಮಿತಿಯನ್ನು ಹತ್ತನೇ ತರಗತಿವರೆಗೆ ವಿಸ್ತರಿಸಿದರಲ್ಲದೆ, ಈ ಯೋಜನೆಗೆಂದು ೧೯ ಕೋಟಿ ರೂ.ಗಳನ್ನು ನೀಡಿರುವುದಾಗಿ ಘೋಷಿಸಿದರು.

ಆದರೆ, ದಿ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್‌ಆಫ್ ಗೌರ್ನಮೆಂಟ್ ರೆಕಗ್ನೈಸ್ಡ್ ಇಂಗ್ಲಿಷ್ ಮೀಡಿಯಂ ಸ್ಕೂಲ್ಸ್ ಇನ್ ಕರ್ನಾಟಕ (ಕ್ಯಾಮ್ಸ್), ಯೋಜನೆ ಅನುಷ್ಠಾನಕ್ಕೆ ತಡೆಯೊಡ್ಡಿ, ಆಕ್ಷೇಪಣೆಗಳನ್ನು ಎತ್ತಿದೆ. ಅವುಗಳಲ್ಲಿ ಎರಡು ಪ್ರಮುಖವಾದುದು. ಕೇಂದ್ರ ಸರ್ಕಾರದ ೨೦೦೯ರ ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ೬ರಿಂದ ೧೪ನೇ ವರ್ಷದವರೆಗೆ ಮಾತ್ರವೇ ಅನ್ವಯ. ಕರ್ನಾಟಕ ಸರ್ಕಾರದ ಈ ನಿರ್ಧಾರ ಕಾಯಿದೆಯ ಸ್ಪಷ್ಟ ಉಲ್ಲಂಘನೆ ಎಂಬುದು ಒಂದನೆಯದಾದರೆ, ಯೋಜನೆಯನ್ನು ಪರಿಶಿಷ್ಟರಿಗೆ ಮಾತ್ರವೇ ಕಲ್ಪಿಸಿರುವುದು, ಸಂವಿಧಾನದ ೧೪ ಹಾಗೂ ೧೫ನೇ ಕಲಂನ ಸಮಾನತೆ ಹಾಗೂ ತಾರತಮ್ಯ ಆಶಯಕ್ಕೆ ವಿರುದ್ಧ ಎಂಬುದು ಎರಡನೆಯದು.

ಅಂದಹಾಗೆ, ಕಳೆದ ಮೂರು ವರ್ಷಗಳಲ್ಲಿ ಗ್ಯಾರಂಟಿ ಯೋಜನೆಗಳಿಗೆಂದೇ ಎಸ್ಸಿ/ಎಸ್ಟಿಗೆ ಮೀಸಲಿರಿಸಿದ ಅನುದಾನದಲ್ಲಿ ಸರಿ ಸುಮಾರು, ೩೮,೦೦೦ ಕೋಟಿ ರೂ.ಗಳಿಗೂ ಹೆಚ್ಚು ಸರ್ಕಾರ ಬಳಸಿಕೊಂಡಿದೆ. ಇದನ್ನು ಈ ನಾಡಿನ ಪ್ರಮುಖ ದೈನಿಕವೊಂದು ಪ್ರಕಟಿಸಿರುವ ವರದಿಯಲಿ ಉಲ್ಲೇಖಿಸಲಾಗಿದೆ. ೨೦೨೩-೨೪ನೇ ಸಾಲಿನಲ್ಲಿ ೧೧,೧೪೪ ರೂ., ೨೦೨೪-೨೫ರಲ್ಲಿ ೧೪,೨೮೩ ರೂ., ೨೦೨೫-೨೬ನೇ ಸಾಲಿನಲ್ಲಿ ೧೩,೪೩೪ ಕೋಟಿ ರೂ.ಗಳನ್ನು ಬಳಸಲಾಗಿದೆ. ಇದನ್ನು ಗಮನಿಸಿದರೆ, ಗ್ಯಾರಂಟಿ ಯೋಜನೆಯ ಫಲಾನುಭವಿಗಳು ಕೇವಲ ಪರಿಶಿಷ್ಟರೇ ಅಲ್ಲ ಎಂಬ ಸತ್ಯವನ್ನು ಕ್ಯಾಮ್ಸ್ ಅರಿತಂತಿಲ್ಲ.

ಪರಿಶಿಷ್ಟರ ಅನುದಾನವು ಸಮುದಾಯದ ಕಲ್ಯಾಣಕ್ಕಷ್ಟೇ ಬಳಸುವಂಥದ್ದು, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳಿಗೆ ಉಪಯೋಗಿಸುವಂತಿಲ್ಲ ಎಂಬ ಕೂಗಿಗೆ ಇಲ್ಲಿಯವರೆಗೂ ಸರ್ಕಾರ ಕಿವಿಗೊಟ್ಟಿಲ್ಲ. ಹಲವಾರು ಬಾರಿ ಈ ಕುರಿತು ಖುದ್ದು ಸಿದ್ದರಾಮಯ್ಯ ಅವರಿಗೆ ದಲಿತ ಸಚಿವರು, ದಲಿತ ಪರ ಸಂಘಟನೆಗಳ ಮುಖಂಡರು ಮನವಿ ಮಾಡಿದರೂ ಪ್ರಯೋಜನ ಆಗಿರಲಿಲ್ಲ. ಬಹುಶಃ ಸಿದ್ದರಾಮಯ್ಯ ಅವರು ಈ ಮೂಲಕವಾದರೂ ಶೋಷಿತ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಲು ಈ ಯೋಜನೆಗೆ ಮನಸ್ಸು ಮಾಡಿದ್ದಿರಬೇಕು.

ಕಡ್ಡಾಯ ಶಿಕ್ಷಣ ಹಕ್ಕಿಗೆ ಇರುವ ಆರರಿಂದ ಹದಿನಾಲ್ಕನೇ ವಯಸ್ಸಿನವರೆಗಿನ ನಿರ್ಬಂಧವನ್ನು ರದ್ದುಗೊಳಿಸಿ ಕನಿಷ್ಠ ಹದಿನೆಂಟನೇ ವಯಸ್ಸಿನವರೆಗಾದರೂ ಉಚಿತ ಶಿಕ್ಷಣ ನೀಡಬೇಕೆಂಬ ಕೂಗು ಆರ್‌ಟಿಇ ಕಾಯಿದೆ ರೂಪುಗೊಳ್ಳುವುದಕ್ಕಿಂತ ಮೊದಲಿನಿಂದಲೂ ಇದೆ. ಇಷ್ಟಕ್ಕೂ ‘ಶಿಕ್ಷಣ’ವು ರಾಜ್ಯ ಸಮವರ್ತಿ ಪಟ್ಟಿಯಲ್ಲಿ ಬರುವ ಕಾರಣ ಸರ್ಕಾರದ ನಿರ್ಧಾರದಿಂದ ಕಾಯಿದೆಯ ಆಶಯಕ್ಕೇನೂ ಧಕ್ಕೆಯಾಗದು. ಆದರೆ, ಆರ್‌ಟಿಇ ವಿಸ್ತರಣೆಯಿಂದ ಒಬ್ಬೊಬ್ಬ ಮಕ್ಕಳಿಂದ ಲಕ್ಷಾಂತರ ರೂ. ಡೊನೇಷನ್ ಕೈತಪ್ಪುತ್ತದೆಯಲ್ಲ ಎಂಬುದೇ ಕ್ಯಾಮ್ಸ್ ಈ ಯೋಜನೆಯನ್ನು ವಿರೋಧಿಸಲು ಬಲವಾದ ಕಾರಣ. ಕೆಲ ಖಾಸಗಿ ಶಾಲೆಗಳು ಒಂಬತ್ತನೇ ತರಗತಿಗೆ ಪ್ರವೇಶ ನೀಡಲು ಒಂದು ೧,೦೦,೦೦೦ ರೂ.ಗಳಿಂದ ಹಿಡಿದು ೧,೭೫,೦೦೦ ರೂ.ಗಳಷ್ಟು ಶುಲ್ಕ ತೆರುವಂತೆ ಒತ್ತಾಯಿಸುತ್ತಿವೆ. ನಿಜವಾಗಿಯೂ ಈ ಮೊತ್ತವನ್ನು ಭರಿಸಲು ಪರಿಶಿಷ್ಟ ಸಮುದಾಯಕ್ಕೆ ಸಾಧ್ಯವೇ? ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಣ ಎಂಬುದು ವ್ಯಾಪಾರೀಕರಣವಾಗಿದ್ದು, ಎಲ್ಲೆ ಮೀರಿದ ಶುಲ್ಕದಿಂದಾಗಿ ಬಡಮಕ್ಕಳ ಶಿಕ್ಷಣಕ್ಕೆ ಬಹುದೊಡ್ಡ ಬೆದರಿಕೆಯಾಗಿದೆ. ಇಲ್ಲಿನ ನೆಲ, ಜಲ ಸೇರಿ ಮೂಲಸೌಕರ್ಯಗಳನ್ನು ಪಡೆಯುತ್ತಿರುವ ಖಾಸಗಿ ಶಾಲೆಗಳು, ಸರ್ಕಾರದ ಅನುಕರಣೀಯ ಯೋಜನೆಗಳಿಗೆ ಅಡ್ಡಗಾಲು ಹಾಕದೆ ಅದರೊಂದಿಗೆ ಕೈಜೋಡಿಸಬೇಕಿದೆ.

ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವು ಇದೇ ಆರ್‌ಟಿಇ ಪ್ರಕರಣವೊಂದರಲ್ಲಿ, ಉತ್ತರ ಪ್ರದೇಶದ ಲಖನೌನ ಖಾಸಗಿ ಶಾಲೆಯೊಂದನ್ನು ತರಾಟೆಗೆ ತೆಗೆದುಕೊಂಡಿತ್ತಲ್ಲದೆ, “ಸರ್ಕಾರ ಜಾರಿಗೆ ತಂದಿರುವ ಈ ಯೋಜನೆಯು ಸಾಂವಿಧಾನಿಕ ಉದ್ದೇಶವಾಗಿದೆ ಮಾತ್ರವಲ್ಲ, ಇದೊಂದು ‘ರಾಷ್ಟ್ರೀಯ ಮಿಷನ್’ನಂತೆ. ಈ ಆಶಯಕ್ಕೆ ಯಾರೂ ಭಂಗ ತರಬಾರದು, ನ್ಯಾಯಾಲಯಗಳು ಕೂಡ ಇಂಥ ಪ್ರಕರಣಗಳಲ್ಲಿ ಮಕ್ಕಳ ಪರನಿಲ್ಲಬೇಕೆಂದು’ ಸ್ಪಷ್ಟ ನಿರ್ದೇಶನ ನೀಡಿದೆ.

ಸದ್ಯ ಯೋಜನೆಗೆ ಮಧ್ಯಂತರ ತಡೆ ನೀಡಿ, ಸಂಬಂಧಿಸಿದವರಿಗೆ ನೋಟಿಸ್ ನೀಡಿದ್ದ ಕರ್ನಾಟಕ ರಾಜ್ಯದ ಘನ ಉಚ್ಚ ನ್ಯಾಯಾಲಯವು ಜುಲೈ ೩, ೨೦೨೬ರಂದು ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತ್ತು. ಆದರೆ, ಅಂದು ವಿಚಾರಣೆಗೆ ಅದು ಬಂದಂತಿಲ್ಲ. ಜತೆಗೆ ಮುಂದಿನ ದಿನಾಂಕ ಇನ್ನಷ್ಟೇ ಪ್ರಕಟವಾಗಬೇಕಿದೆ.

ಗ್ಯಾರಂಟಿ ಸೇರಿ ಹಲವಾರು ಜನಪರ ಯೋಜನೆಗಳನ್ನು ಪರಿಚಯಿಸಿ ಇಡೀ ದೇಶಕ್ಕೆ ಕರ್ನಾಟಕ ಮಾದರಿಯಾಗಿದೆ. ಇದೀಗ ತನ್ನದೇ ಯೋಜನೆಯನ್ನು ನ್ಯಾಯಾಲಯದಲ್ಲಿ ಸಮರ್ಥಿಸಿಕೊಳ್ಳುವ ಸವಾಲೂ ಅದರ ಮುಂದಿದೆ. ತಾನೆಂದೂ ಬಡವರ, ದೀನ-ದಲಿತರ ಪರ ಎನ್ನುವ ಕಾಂಗ್ರೆಸ್ ಪಕ್ಷವು, ಈ ‘ಗ್ಯಾರಂಟಿ’ಗಳಿಂದ ಬೊಕ್ಕಸವನ್ನು ಬರಿದುಮಾಡುತ್ತಿದೆ ಎಂಬ ಟೀಕೆಗೆ ಗುರಿಯಾಗಿದೆ. ಆದರೆ, ಅಖಿಲ ಭಾರತ ಮಟ್ಟದಲ್ಲಿ ಕನಿಷ್ಠ ‘ಉಚಿತ ಶಿಕ್ಷಣ ಹಕ್ಕು’ ಹಾಗೂ ‘ಉಚಿತ ಆರೋಗ್ಯ ಭಾಗ್ಯ’ ಯೋಜನೆಗಳಂಥವನ್ನು ನಿಶ್ಚಿತ ‘ಗ್ಯಾರಂಟಿ’ಯಾಗಿಸಿದರೆ ಟೀಕಾಕಾರರ ಬಾಯನ್ನು ಮುಚ್ಚಿಸುವುದಷ್ಟೇ ಅಲ್ಲ, ತಾನೆಂದೂ ಸಮ ಸಮಾಜದ ಪರ ಎಂಬುದನ್ನು ಅಕ್ಷರಶಃ ನಿರೂಪಿಸಿದಂತಾಗುತ್ತದೆ.

(ಲೇಖಕರು, ಕೊಳ್ಳೇಗಾಲ ನಗರಸಭೆ ಮಾಜಿ ಅಧ್ಯಕ್ಷರು)

” ಗ್ಯಾರಂಟಿ ಸೇರಿ ಹಲವಾರು ಜನಪರ ಯೋಜನೆಗಳನ್ನು ಪರಿಚಯಿಸಿ ಇಡೀ ದೇಶಕ್ಕೆ ಕರ್ನಾಟಕ ಮಾದರಿಯಾಗಿದೆ. ಇದೀಗ ತನ್ನದೇ ಯೋಜನೆಯನ್ನು ನ್ಯಾಯಾಲಯದಲ್ಲಿ ಸಮರ್ಥಿಸಿಕೊಳ್ಳುವ ಸವಾಲೂ ಅದರ ಮುಂದಿದೆ.”

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಬರ…ಅಬ್ಬರ !

ಬರ...ಅಬ್ಬರ ! ಬರ ಬರ ಬರ್ಬರ ಮಳೆ ಇಲ್ಲ; ಬೆಳೆ ಇಲ್ಲ ಬರಡಾಯಿತಲ್ಲ ಬದುಕೆಲ್ಲ ಜನ-ಜನುವಾರುಗಳ ಬದುಕೀಗ ಅಕ್ಷರಶಃ ಬರ್ಬರ…

1 min ago

ಓದುಗರ ಪತ್ರ: ಪರೀಕ್ಷಾ ವ್ಯವಸ್ಥೆ ಸಮಗ್ರ ಸುಧಾರಣೆ ಅತ್ಯಗತ್ಯ

ನಂದನ್ ನಿಲೇಕಣಿ ಅವರ ನೇತೃತ್ವದಲ್ಲಿ ಪರೀಕ್ಷಾ ವ್ಯವಸ್ಥೆಯ ಸುಧಾರಣೆಗೆ ಉನ್ನತ ಅಧಿಕಾರ ಕಾರ್ಯಪಡೆ ರಚಿಸಿರುವುದು ಅತ್ಯಂತ ಸಮಯೋಚಿತ ಕ್ರಮವಾಗಿದೆ. ಪ್ರತಿವರ್ಷ…

3 mins ago

ಕೋವಿಡ್: ಕೊಡಗು ಜಿಲ್ಲೆಯಲ್ಲಿಯೂ ಅಗತ್ಯ ಕಟ್ಟೆಚ್ಚರ

ನವೀನ್ ಡಿಸೋಜ ಮಡಿಕೇರಿ: ಕೋವಿಡ್-೧೯ ಸೋಂಕಿನ ಪ್ರಕರಣಗಳು ಮತ್ತೆ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಅಗತ್ಯ…

8 mins ago

ಮರದ ಹಿಂದೆ ಮರೆಯಾದ ಸಿಗ್ನಲ್ ಲೈಟ್‌ಗಳು!

ಪ್ರಶಾಂತ್ ಎನ್ ಮೈಸೂರು: ಸುಗಮ ಸಂಚಾರ ಹಾಗೂ ಜನರ ಸುರಕ್ಷತೆಗಾಗಿ ನಗರದ ವಿವಿಧ ರಸ್ತೆ, ವೃತ್ತಗಳಲ್ಲಿ ಅಳವಡಿಸಿರುವ ಟ್ರಾಫಿಕ್ ಸಿಗ್ನಲ್…

13 mins ago

ಸಫಾರಿ ಟಿಕೆಟ್ ದರ ಹೆಚ್ಚಳ; ಪ್ರವಾಸಿಗರಿಗೆ ಹೊರೆ

ದಾ.ರಾ.ಮಹೇಶ್ ಪರಿಷ್ಕತ ಶುಲ್ಕ ಸೆಪ್ಟೆಂಬರ್ ೧ರಿಂದ ಜಾರಿ; ಸಫಾರಿ ಸಮಯ ೧ ಗಂಟೆ ಹೆಚ್ಚಳ ಹನಗೋಡು : ಬಂಡೀಪುರ ಮತ್ತು…

18 mins ago