ಎಡಿಟೋರಿಯಲ್

ಗೀತಾ ಪ್ರೆಸ್‌ಗೆ ಗಾಂಧಿ ಪ್ರಶಸ್ತಿ- ವಿಕರಾಳ ವಿಡಂಬನೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯ ತೀರ್ಪುಗಾರರ ಸಮಿತಿಯು 2021ರ ಗಾಂಧಿ ಶಾಂತಿ ಪ್ರಶಸ್ತಿಯನ್ನು ಗೋರಖಪುರದ ಗೀತಾ ಪ್ರೆಸ್‌ಗೆ ನೀಡಿದೆ. ಗಾಂಧೀಜಿ ಪ್ರತಿಪಾದಿಸಿದ ಶಾಂತಿ, ಸಹಿಷ್ಣುತೆ, ಸಹಬಾಳುವೆ, ಸಮಭಾವದ ಮಾನವೀಯ ಮೌಲ್ಯಗಳ ನಿರ್ಲಜ್ಜ ಅಪಮೌಲ್ಯವಿದು. ಗಾಂಧೀಜಿಗೆ ಮಾಡಿದ ಅಪಮಾನ. ದ್ವೇಷ, ಅಸಹನೆ ಅಸಮಾನತೆಯ ಅಮಾನವೀಯ ಸಿದ್ಧಾಂತವನ್ನು ಎತ್ತಿ ಹಿಡಿಯಲು ಮಾಡಿಕೊಂಡಿರುವ ಗಾಂಧೀಜಿಯ ದುರುಪಯೋಗ.

‘ಅಹಿಂಸಾತ್ಮಕ ಮತ್ತು ಇತರೆ ಗಾಂಧಿ ವಿಧಾನಗಳಿಂದ ಸಾಮಾಜಿಕ ಆರ್ಥಿಕ ಹಾಗೂ ರಾಜಕೀಯ ಪರಿವರ್ತನೆಗೆ ಅದ್ವಿತೀಯ ಕೊಡುಗೆ ನೀಡಿದ್ದಕ್ಕಾಗಿ’ ಗಾಂಧೀ ಶಾಂತಿ ಪ್ರಶಸ್ತಿಯನ್ನು ಗೀತಾ ಪ್ರೆಸ್‌ಗೆ ನೀಡಲಾಗಿದೆ ಎಂದು ತೀರ್ಪುಗಾರರ ಸಮಿತಿಯು ತಿಳಿಸಿದೆ.

ಸನಾತನ ಧಾರ್ಮಿಕ ಪಠ್ಯಗಳ ಅತಿ ದೊಡ್ಡ ಪ್ರಕಾಶನ ಸಂಸ್ಥೆ ಗೀತಾ ಪ್ರೆಸ್. ಸನಾತನ ಧರ್ಮ ಮತ್ತು ತತ್ವ ಸಿದ್ಧಾಂತಗಳ ಪ್ರಸಾರಕ್ಕಾಗಿ 1923ರಲ್ಲಿ ಹುಟ್ಟಿತು. ಭಗವದ್ಗೀತೆ ಮುಂತಾದ ಹಿಂದೂ ಧಾರ್ಮಿಕ ಗ್ರಂಥಗಳ 93 ಕೋಟಿ ಪ್ರತಿಗಳನ್ನು ಈವರೆಗೆ ಅಚ್ಚು ಮಾಡಿದೆ. ಭಗವದ್ಗೀತೆಯ ಹನ್ನೆರಡು ಕೋಟಿ ಮತ್ತು ರಾಮಚರಿತ ಮಾನಸದ ಒಂಬತ್ತೂಕಾಲು ಕೋಟಿ ಪ್ರತಿಗಳನ್ನು ದೇಶದ ಮನೆ ಮನೆಗಳಿಗೆ ತಲುಪಿಸಿದೆಯಂತೆ.

ಆರೆಸ್ಸೆಸ್ಸಿಗಿಂತ ಮೊದಲು ಹುಟ್ಟಿದ ಈ ಸಂಸ್ಥೆ ಹಿಂದುತ್ವ ಆಂದೋಲನದ ಕಾಲುದಾರಿಯನ್ನು ಹೆದ್ದಾರಿಯಾಗಿ ರೂಪಿಸಲು ಆರೆಸ್ಸೆಸ್ಸಿಗೆ ಹೆಗಲೆಣೆಯಾಗಿ ಶ್ರಮಿಸಿದ ಕತೆಯನ್ನು ವಿದ್ವತ್ಪೂರ್ಣ ಸಂಶೋಧನೆಯ ಮೂಲಕ ಹೆಜ್ಜೆ ಹೆಜ್ಜೆಗೆ ಆಧಾರ ಪುರಾವೆಗಳೊಂದಿಗೆ ತೆರೆದಿಟ್ಟಿದ್ದಾರೆ ಅಕ್ಷಯ ಮುಕುಲ್. gita press and the making of the hindu india ಎಂಬುದು ಈ ಕೃತಿಯ ಶೀರ್ಷಿಕೆ. ಬಹು ಕಾಲದ ನಂತರ ಹೊರಬಿದ್ದಿರುವ ಆಳ ಸಂಶೋಧನೆಯ ಕೃತಿ ಎಂಬ ಮೆಚ್ಚುಗೆಗೆ ಪಾತ್ರವಾಗಿದೆ. ಎಲೆಮರೆಯ ಕಾಯಿಯ ಪಾತ್ರವಹಿಸಿದ್ದ ಗೀತಾ ಪ್ರೆಸ್ಸು ಅರಗಿಸಿಕೊಳ್ಳಲು ಮುಜುಗರಪಡುವ ಅನೇಕ ಸಂಗತಿಗಳನ್ನು ಅಕ್ಷಯ ಹೊರಗೆಳೆದಿದ್ದಾರೆ.

ಆರಂಭದಲ್ಲಿ ಆಧ್ಯಾತ್ಮಕ್ಕೆ ಸೀಮಿತವಾಗಿದ್ದ ಗೀತಾ ಪ್ರೆಸ್ ಮತ್ತು ಕಲ್ಯಾಣ ನಿಯತಕಾಲಿಕ, ಹಿಂದೂ ರಾಷ್ಟ್ರವಾದಿ ಗುಂಪುಗಳ ಆಂದೋಲನ ಮತ್ತು ರಾಜಕಾರಣದ ಜೊತೆ ಸಕ್ರಿಯವಾಗಿ ಗುರುತಿಸಿಕೊಂಡವು. ಆನಂತರ ಈ ಸಹಭಾಗಿತ್ವ ಜನಸಂಘಕ್ಕೂ ಚಾಚಿಕೊಂಡಿತು. ಸಂವಿಧಾನ ಎತ್ತಿ ಹಿಡಿದಿದ್ದ ಸಮಾನತೆಯ ತತ್ವಗಳನ್ನು ಸಮಾಜ ಸುಧಾರಣೆಗಳ ಮೂಲಕ ಜಾರಿಗೆ ತರುವ ನೆಹರೂ ಸರ್ಕಾರದ ಪ್ರಯತ್ನಗಳನ್ನು ಕಟುವಾಗಿ ವಿರೋಽಸಿತು ಈ ಮೈತ್ರಿಕೂಟ. ಈ ಪೈಕಿ ದೊಡ್ಡ ಉದಾಹರಣೆ ಹಿಂದೂ ಕೋಡ್ ಬಿಲ್ ಎಂದು ಕರೆಯಲಾದ ಹಿಂದೂ ಸಂಹಿತೆಯ ವಿಧೇಯಕದ್ದು.

ಗೀತಾ ಪ್ರೆಸ್ಸಿನ ಸ್ಥಾಪಕ ಜಯದಯಾಳ ಗೋಯೆಂಡ್ಕಾ ಪ್ರಕಾರ ಶಾಸ್ತ್ರಗಳೇ ಪರಮ. ಹಿಂದೂ ಜೀವನ ಪದ್ಧತಿಯ ಎಲ್ಲ ಆಯಾಮಗಳನ್ನೂ ಶಾಸ್ತ್ರಗಳು ಅದಾಗಲೇ ನಿರ್ಧರಿಸಿದ್ದವು. ವಿವಾಹ ವಿಚ್ಛೇದನ, ಅಂತರ್ಜಾತಿ ವಿವಾಹ ಹಾಗೂ ಸಗೋತ್ರದ ವಿವಾಹಗಳನ್ನು ಕಾನೂನುಬದ್ಧಗೊಳಿಸುವ ನಡೆಯನ್ನು ಅವರು ವಿರೋಧಿಸಿದ್ದರು. ಮಹಿಳೆಯನ್ನು ಸಶಕ್ತಳನ್ನಾಗಿ ಮಾಡುವ ಬದಲು ನೈತಿಕ ಭ್ರಷ್ಟತೆಗೆ ನೂಕುವ ಈ ಕಾನೂನುಗಳನ್ನು ಹಿಂದುಗಳು ಬಲವಾಗಿ ವಿರೋಽಸಬೇಕೆಂದಿದ್ದರು.

ಗೀತಾ ಪ್ರೆಸ್ ಮತ್ತು ಕಲ್ಯಾಣದ ಸಂಸ್ಥಾಪಕ ಸಂಪಾದಕರು ಹನುಮಾನ್ ಪ್ರಸಾದ್ ಪೋದ್ದಾರ್. ದಲಿತರನ್ನು ದೇವಾಲಯಗಳಿಂದ ಹೊರಗಿಡುವ ಮತ್ತು ಅವರೊಡನೆ ಸಹಭೋಜನ ಮಾಡುವ ಎರಡೂ ಆಲೋಚನೆಗಳ ಪಕ್ಕಾ ವಿರೋಧಿಯಾಗಿದ್ದವರು. ಗಾಂಧಿ ಜೊತೆ ಇದ್ದವರು ಈ ವಿಚಾರಕ್ಕಾಗಿಯೇ ಅವರಿಂದ ದೂರವಾದವರು. ಹಿಂದುಗಳ ಮನಸ್ಸಿನಲ್ಲಿ ಮುಸಲ್ಮಾನರ ವಿರುದ್ಧದ ಭಾವನೆಗಳನ್ನು ನಿತ್ಯ ಬದುಕಿನಲ್ಲಿ ಬಿತ್ತಿದ್ದು ಇದೇ ಕಲ್ಯಾಣದ ಮೂಲಕ. ಇಂಗ್ಲಿಷ್ ಶಿಕ್ಷಣ, ಜನನ ನಿಯಂತ್ರಣ, ಸಿನೆಮಾ ವಿರುದ್ಧ ಆಂದೋಲನ ಸಾರಿದ ಪತ್ರಿಕೆ. ಬಾಲ್ಯವಿವಾಹವನ್ನು ಎತ್ತಿ ಹಿಡಿದಿತ್ತು.

ಗೀತಾ ಪ್ರೆಸ್‌ನ ಮುಖವಾಣಿಯಾದ ‘ಕಲ್ಯಾಣ’ ಎಂಬ ಮಾಸಿಕಕ್ಕೆ ಗಾಂಧೀಜಿ ಅವರ ಲೇಖನಗಳನ್ನು ಬಳಸಿಕೊಳ್ಳಲಾಗುತ್ತಿತ್ತು. ಆದರೆ ಗಾಂಧಿ ಮೌಲ್ಯಗಳು ಮತ್ತು ಗೀತಾ ಪ್ರೆಸ್ ನಡುವೆ ದೂರ ದೂರದ ಸಂಬಂಧ ಕೂಡ ಇರಲಿಲ್ಲ. ಗಾಂಧಿ ಜೊತೆ ಈ ಪ್ರಕಾಶನ ಸಂಸ್ಥೆ ಸೌಹಾರ್ದ ಸಂಬಂಧವನ್ನು ಕೂಡ ಹೊಂದಿರಲಿಲ್ಲ. ಗಾಂಧಿ ಹತ್ಯೆಯ ಕುರಿತು ವಿಚಿತ್ರ ವಿಕರಾಳ ಮೌನ ತಳೆದಿದ್ದ ಸಂಸ್ಥೆಯಿದು. ಎರಡು ತಿಂಗಳ ತನಕ ಖಂಡಿಸುವುದಿರಲಿ, ಪ್ರಸ್ತಾಪ ಕೂಡ ಮಾಡಿರಲಿಲ್ಲ. ಗಾಂಧೀಜಿ ಹತ್ಯೆಯ ನಂತರ ಆರೆಸ್ಸೆಸ್ ಮೇಲೆ ನಿಷೇಧ ಹೇರಿದ್ದನ್ನು ವಾಜಪೇಯಿ ಜೊತೆಗೂಡಿ ಖಂಡಿಸಿದ್ದವರು ‘ಕಲ್ಯಾಣ’ದ ಸಂಸ್ಥಾಪಕ ಸಂಪಾದಕ ಹನುಮಾನ್ ಪ್ರಸಾದ್ ಪೋದ್ದಾರ್. ಅದೇ ದಿನಗಳಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ ಆರೆಸ್ಸೆಸ್ ಮುಖ್ಯಸ್ಥ ಎಂ.ಎಸ್.ಗೋಲ್ವಲ್ಕರ್ ಅವರ ಸ್ವಾಗತಕ್ಕೆ ಬನಾರಸಿನಲ್ಲಿ ಏರ್ಪಡಿಸಿದ್ದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದವರು ಪೋದ್ದಾರ್.

1937ರ ಆರಂಭ. ಪೋದ್ದಾರ್ ತಮಗೆ ಬಿದ್ದ ಕನಸೊಂದರ ಕುರಿತು ಗಾಂಧೀಜಿಗೆ ಪತ್ರ ಬರೆಯುತ್ತಾರೆ. ಗಾಂಧೀಜಿ ಬಹು ಕಾಲ ಬದುಕಿರುವುದಿಲ್ಲ ಎಂಬುದು ಆ ಕನಸಿನ ತಿರುಳು. ಗಾಂಧಿ ಪ್ರತಿಕ್ರಿಯಿಸುತ್ತಾರೆ- ‘ನಾನು ಎಷ್ಟೇ ದೀರ್ಘಕಾಲ ಬದುಕಿದರೂ ನನ್ನ ಸ್ನೇಹಿತರಿಗೆ ತೃಪ್ತಿಯಾಗದು. ಕಡಿಮೆಯೇ ಎನಿಸುತ್ತದೆ. ಹೀಗಾಗಿ ಪೋದ್ದಾರ್‌ಗೆ ಬಿದ್ದಿರುವ ಕನಸು ಅವರು ನನ್ನ ಮೇಲಿಟ್ಟಿರುವ ಪ್ರೀತಿಯ ಪ್ರತೀಕ’.

ಗಾಂಧೀವಾದಿ ಘನಶ್ಯಾಮದಾಸ್ ಬಿರ್ಲಾ ಪ್ರಕಾರ ಪೋದ್ದಾರ್ ಮತ್ತು ಅವರ ಗುರು ಜಯದಯಾಳ ಗೊಯೆಂಡ್ಕಾ ಎತ್ತಿ ಹಿಡಿದದ್ದು ‘ಶೈತಾನ ಧರ್ಮವೇ ವಿನಾ ಸನಾತನ ಧರ್ಮ ಅಲ್ಲ’. ಗಾಂಧಿ ಹತ್ಯೆಯ ನಂತರ ಬಂಧಿಸಲಾಗಿದ್ದ ಸಾವಿರಾರು ಮಂದಿಯಲ್ಲಿ ಈ ಇಬ್ಬರೂ ಸೇರಿದ್ದರು.

ಗಾಂಧೀಜಿ ಸಹನೆ, ಶಾಂತಿ, ಸರ್ವಧರ್ಮ ಸಮಭಾವದ ಹಿಂದೂ ತತ್ವವನ್ನು ಬೋಧಿಸಿದರೆ, ಬಿಜೆಪಿ ಮತ್ತು ಆರೆಸ್ಸೆಸ್ಸು ಅಸಹನೆ ದ್ವೇಷದ ತಳಹದಿಯ ಮೇಲೆ ಕಟ್ಟರ್ ವಾದಿ ಮಿಲಿಟರಿ ಹಿಂದುತ್ವವನ್ನು ನಿರ್ಮಿಸತೊಡಗಿವೆ. ಈ ನಿರ್ಮಾಣದಲ್ಲಿ ಕೈ ಜೋಡಿಸುತ್ತ ಬಂದಿರುವ ಸಂಸ್ಥೆ ಗೀತಾ ಪ್ರೆಸ್.

ಇಂತಹ ಗೀತಾ ಪ್ರೆಸ್‌ಗೆ ಗಾಂಧಿ ಶಾಂತಿ ಪ್ರಶಸ್ತಿ ನೀಡಿಕೆಯ ತೀರ್ಮಾನ ಗಾಂಧೀಜಿ ಮತ್ತು ಪೋದ್ದಾರ್ ಇಬ್ಬರಿಗೂ ತೀವ್ರ ಆಘಾತ ಉಂಟು ಮಾಡುವಂತಹುದು.

lokesh

Recent Posts

ನಾಲ್ವರು ಯೋಧರು ಹುತಾತ್ಮ ; ನಕ್ಸಲರಿಟ್ಟಿದ್ದ ನೆಲಬಾಂಬ್ ನಿಷ್ಕ್ರಿಯಗೊಳಿಸುವಾಗ ದುರ್ಘಟನೆ

ಛತ್ತೀಸಗಢ : ನಾರಾಯಣಪುರ ಗಡಿ ಪ್ರದೇಶದಲ್ಲಿ ನೆಲಬಾಂಬ್ ತೆಗೆಯುವ ಕಾರ್ಯಾಚರಣೆಯ ಸಮಯದಲ್ಲಿ ಐಇಡಿ ಸ್ಛೋಟಗೊಂಡಿದ್ದು ನಾಲ್ವರು ಡಿಆರ್‌ಜಿ ಯೋಧರು ಹುತಾತ್ಮರಾಗಿದ್ದಾರೆ.…

5 hours ago

ಮಂಡ್ಯ | ನೀರಿನ ಕೊಳದಲ್ಲಿ ಗೃಹಿಣಿಯ ಶವ ಪತ್ತೆ ; ಕೊಲೆ ಶಂಕೆ

ಮಂಡ್ಯ : ತಾಲ್ಲೂಕಿನ ಜವನಹಳ್ಳಿ ಗ್ರಾಮದಲ್ಲಿ ನೀರಿನ ಕೊಳದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿಯ ಮೃತ ದೇಹ ಪತ್ತೆಯಾಗಿದ್ದು, ಕೊಲೆ ಶಂಕೆ…

5 hours ago

ಮಂಡ್ಯ ನಗರದಲ್ಲಿ ಮರಗಳ ಸಮೀಕ್ಷೆಗೆ ಅರಣ್ಯ ಸಚಿವರ ಆದೇಶ

ಮದ್ದೂರು : ಜಾಗತಿಕ ತಾಪಮಾನ ಏರಿಕೆಗೆ ವೃಕ್ಷ ಸಂವರ್ಧನೆ, ಸಂರಕ್ಷಣೆಯೇ ಮಾರ್ಗವಾಗಿದ್ದು, ಹಸಿರು ಹೊದಿಕೆ ಹೆಚ್ಚಿಸುವಂತೆ ಮತ್ತು ಮಂಡ್ಯ ನಗರದ…

6 hours ago

ಬಜೆಟ್ ಘೋಷಣೆ ಕಡತದಲ್ಲೇ ಉಳಿಯಬಾರದು ; ಕಾರ್ಯದರ್ಶಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ

ಬೆಂಗಳೂರು : ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳು ಘೋಷಣೆಯಾಗಿಯೇ ಉಳಿಯಬಾರದು. ಅನುಷ್ಠಾನದಲ್ಲಿ ವಿಳಂಬವಾದರೆ ಸಂಬಂಧಪಟ್ಟ ಕಾರ್ಯದರ್ಶಿಗಳೇ ಹೊಣೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

7 hours ago

ಟೆಂಪೋ-ಬೈಕ್‌ ಡಿಕ್ಕಿ : ಬೈಕ್‌ ಸವಾರ ಸಾವು ; ಓರ್ವ ಗಂಭೀರ

ಹನೂರು : ಮಲೆ ಮಹದೇಶ್ವರ ಬೆಟ್ಟದಿಂದ ತಮಿಳುನಾಡಿನ ಮೆಟ್ಟೂರಿಗೆ ತೆರಳುತ್ತಿದ್ದ ದ್ವಿಚಕ್ರ ವಾಹನ ಸವಾರನಿಗೆ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ…

7 hours ago

NEET UG Exam | ನಾಳೆ ನೀಟ್ ಪರೀಕ್ಷೆ ; ʼಜೀರೋ ಲೀಕ್‌ʼ ಪಾಲಿಸಿ ಜಾರಿ

ಬೆಂಗಳೂರು : ದೇಶದ ಅತಿದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ನೀಟ್ ಯುಜಿ ಭಾನುವಾರ…

8 hours ago