ಕೊಡಗು

ಮಡಿಕೇರಿ: ಮಳೆ ಹಾನಿ ಪ್ರದೇಶಕ್ಕೆ ಸಚಿವರ ಭೇಟಿ, ಪರಿಶೀಲನೆ

ಮಡಿಕೇರಿ: ನಿರಂತರ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಹಾಗೂ ಶಾಸಕರಾದ ಡಾ.ಮಂತರ್ ಗೌಡ ಅವರು ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಳೆ ಹಾನಿ ಪ್ರದೇಶಗಳಿಗೆ ಭಾನುವಾರ(ಜು.21) ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮುಕ್ಕೊಡ್ಲು, ಐಗೂರು, ಮಲ್ಲಳ್ಳಿ ಜಲಪಾತದ ಸೇತುವೆ ಸೇರಿದಂತೆ ಮಳೆಹಾನಿ ಪ್ರದೇಶ ಹಾಗೂ ಮದಾಪುರ ಬಳಿಯ ಜಂಬೂರು ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಜನರ ಕುಂದುಕೊರತೆ ಆಲಿಸಿದರು.

ನಂತರ ಸೋಮವಾರಪೇಟೆಯಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಸಚಿವರು, ಪ್ರಾಕೃತಿಕ ವಿಕೋಪ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದ್ದು, ಸರ್ಕಾರದಿಂದ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದರು.
ಮನೆ, ರಸ್ತೆ, ಸೇತುವೆ, ತಡೆಗೋಡೆ, ವಿದ್ಯುತ್ ಕಂಬ ಹಾಗೂ ಪರಿವರ್ತಕಗಳು, ಬೆಳೆ ಹಾನಿ ಹೀಗೆ ಮಳೆಯಿಂದ ವಿವಿಧ ರೀತಿಯ ಹಾನಿಯಾಗಿದ್ದು, ಈ ಸಂಬಂಧ ನಷ್ಟದ ಅಂದಾಜು ಮಾಡಿ ಮುಖ್ಯಮಂತ್ರಿ ಅವರು ಹಾಗೂ ಕಂದಾಯ ಸಚಿವರಿಗೆ ವರದಿ ನೀಡಿ, ವಿಶೇಷ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರಾಕೃತಿಕ ವಿಕೋಪ ಎದುರಿಸಲು ಜಿಲ್ಲಾಡಳಿತದ ಬಳಿ ಈಗಾಗಲೇ 30 ಕೋಟಿ ರೂ ಇದ್ದು, ಇದರಿಂದ ಪರಿಹಾರ ನೀಡಲಾಗುತ್ತಿದೆ. ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಹಣದ ಕೊರತೆ ಇಲ್ಲ ಎಂದು ಸಚಿವರು ಹೇಳಿದರು.

ಮನೆ ಹಾನಿ ಸಂಬಂಧ ಎನ್ ಡಿಆರ್ ಎಫ್ ನಿರ್ದೇಶನದಂತೆ ಕ್ರಮವಹಿಸಲಾಗುವುದು. ಸಂತ್ರಸ್ತರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಗಮನಹರಿಸಲಾಗುವುದು ಎಂದರು.

ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಆಗಬೇಕಿರುವ ಕೆಲಸಗಳ ಬಗ್ಗೆ ಮುಖ್ಯಮಂತ್ರಿ ಅವರ ಗಮನ ಸೆಳೆಯಲಾಗುವುದು. ಪ್ರವಾಹದ ಸಂತ್ರಸ್ತ ಕುಟುಂಬಗಳಿಗೆ ಮನೆ ನಿರ್ಮಾಣ ಹಾಗೂ ಜಂಬೂರು ಗ್ರಾಮದಲ್ಲಿ ಅಗತ್ಯ ಮೂಲ ಸೌಲಭ್ಯ ಸೇರಿದಂತೆ ಹಲವು ಯೋಜನೆಗಳಿಗೆ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದು ಸಚಿವರು ವಿವರಿಸಿದರು.

ಕೊಡಗು ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಹೆಚ್ಚಿನ ಮಳೆಯಾಗಿದೆ. ಇನ್ನೂ ಮುಂದಿನ ದಿನಗಳಲ್ಲಿಯೂ ಮಳೆ ಇರುವುದರಿಂದ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ರಾಜ್ಯದಲ್ಲಿ ಪ್ರಾಕೃತಿಕ ವಿಕೋಪ ಎದುರಿಸಲು ಈಗಾಗಲೇ ಎಲ್ಲಾ ಜಿಲ್ಲೆಗಳಿಗೆ ಸರ್ಕಾರ ಹೆಚ್ಚಿನ ಹಣ ಬಿಡುಗಡೆ ಮಾಡಿದೆ. ಇನ್ನೂ 200 ಕೋಟಿ ರೂ ಬಿಡುಗಡೆ ಮಾಡಲಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಮಾತನಾಡಿ, ಜಂಬೂರು ಗ್ರಾಮದ ನಿವಾಸಿಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲಾಗುವುದು. ಜಂಬೂರಿನಲ್ಲಿ ವಿದ್ಯುತ್ ಉಪ ಕೇಂದ್ರ ನಿರ್ಮಾಣ ಮಾಡುತ್ತಿರುವುದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಈ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಲಾಗುವುದು ಎಂದರು.

ಒಳಚರಂಡಿ ಕಾಮಗಾರಿ ಸಂಪೂರ್ಣ ಪೂರ್ಣಗೊಂಡಿಲ್ಲ, ಹಾಗಾಗಿ ಕೆಲವು ಸಮಸ್ಯೆ ಉಂಟಾಗುತ್ತಿದ್ದು, ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಳೆ ಹಾನಿ ಬಗ್ಗೆ ಮಾಹಿತಿ ನೀಡಿ, ಎನ್ ಡಿಆರ್ ಎಫ್ ನಿರ್ದೇಶನದಂತೆ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭ ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ಧರ್ಮಜ ಉತ್ತಪ್ಪ ಸೇರಿದಂತೆ ಇನ್ನಿತರರು ಇದ್ದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ತಿರುವಿನಲ್ಲಿ ಉರುಳಿಬಿದ್ದ ಲಾರಿ: ತಪ್ಪಿದ ಭಾರೀ ಅನಾಹುತ

ಕೊಡಗು: ಕೊಡಗು ಜಿಲ್ಲೆ ಶನಿವಾರಸಂತೆ ಬಳಿಯ ಗುಡುಗಳಲೆಯಲ್ಲಿ ಸಿಮೆಂಟ್ ತುಂಬಿದ್ದ ಲಾರಿ ಉರುಳಿಬಿದ್ದಿದೆ. ಶನಿವಾರಸಂತೆ–ಅರಕಲಗೂಡು ರಸ್ತೆಯ ಗುಡುಗಳಲೆ ತಿರುವಿನಲ್ಲಿ ಘಟನೆ…

4 hours ago

ದುಬಾರೆ ಆನೆ ಶಿಬಿರದಲ್ಲಿ19 ವರ್ಷದ ಗಂಡಾನೆ ಸಾವು

ಕುಶಾಲನಗರ: ದುಬಾರೆ ಆನೆ ಶಿಬಿರದಲ್ಲಿದ್ದ ಸುಮಾರು 19 ವರ್ಷ ಪ್ರಾಯದ ಗಂಡಾನೆಯೊಂದು ಐದು ತಿಂಗಳಿಗೂ ಹೆಚ್ಚು ಕಾಲ ನಿರಂತರ ಚಿಕಿತ್ಸೆ…

5 hours ago

ಪ್ರೀತಿಗೆ ನಿರಾಕರಣೆ: ಮೈಸೂರಿನಲ್ಲಿ ಬೆಚ್ಚಿಬೀಳಿಸಿದ ಒನ್‌ ಸೈಡ್‌ ಲವ್‌ ಕೃತ್ಯ

ಮೈಸೂರು: ಪ್ರೀತಿಗೆ ನಿರಾಕರಿಸಿದ ಪರಿಣಾಮ ಯುವಕನೋರ್ವ ಯುವತಿಯನ್ನು ತಬ್ಬಿಕೊಂಡು ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನ ವಿಜಯನಗರದ ಬಳಿ…

7 hours ago

ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣ: ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಅಧ್ಯಕ್ಷ ಶಿವಕುಮಾರ್ ಅರೆಸ್ಟ್​!

ಮಂಡ್ಯ: ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮನ್ ಮುಲ್ ಅಧ್ಯಕ್ಷ ಶಿವಕುಮಾರ್(ಶಿವಪ್ಪ)…

8 hours ago

ಭಾರೀ ಮಳೆಗೆ ರೈತರ ಬೆಳೆ ನಾಶ: ಲಕ್ಷಾಂತರ ರೂ. ನಷ್ಟ, ಮನೆ ಗೋಡೆ ಕುಸಿತ

ಹನೂರು: ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಕ್ಷೇತ್ರದ ಹಲವು ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳು ಸಂಪೂರ್ಣ ಜಲಾವೃತಗೊಂಡು ಲಕ್ಷಾಂತರ ರೂಪಾಯಿ…

8 hours ago

ಸ್ಕೂಲ್ ಬಸ್‌ ಹರಿದು ಒಂದೂವರೆ ವರ್ಷದ ಮಗು ಸಾವು

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ರಸ್ತೆ ಬದಿ ನಿಂತಿದ್ದ ಒಂದೂವರೆ ವರ್ಷದ ಪುಟ್ಟ…

9 hours ago