ಜಿಲ್ಲೆಗಳು

ಹೆಚ್ಚಿದ ಚಿರತೆಗಳ ಹಾವಳಿ; ಬೋನುಗಳ ಕೊರತೆ

ಚಿರಂಜೀವಿ ಸಿ ಹುಲ್ಲಹಳ್ಳಿ

ಗ್ರಾಮೀಣ ಪ್ರದೇಶಗಳ ಜನರಲ್ಲಿ ಆತಂಕ; ಅರಣ್ಯ ಇಲಾಖೆ ಅಧಿಕಾರಿಗಳಿಗೆ ಇಕ್ಕಟ್ಟು

ಮೈಸೂರು: ಜಿಲ್ಲೆಯ ತಿ.ನರಸೀಪುರ, ನಂಜನಗೂಡು, ಎಚ್.ಡಿ.ಕೋಟೆ, ಸರಗೂರು, ಹುಣಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ ತಾಲ್ಲೂಕಿನ ಗ್ರಾಮಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿರುವುದಲ್ಲದೆ, ಮನುಷ್ಯರ ಸಾವಿಗೂ ಕಾರಣವಾಗಿವೆ. ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಗಲಿರುಳು ಸತತ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ, ಚಿರತೆಗಳನ್ನು ಸೆರೆ ಹಿಡಿಯುವುದಕ್ಕೆ ಬೋನುಗಳ ಕೊರತೆ ಎದುರಾಗಿದೆ.

ಚಿರತೆಗಳ ಸಂಖ್ಯೆ ಹಾಗೂ ಅವು ನಡೆಸುವ ದಾಳಿ ಸಂಖ್ಯೆಗಳು ಅರಣ್ಯ ಇಲಾಖೆ ಅಧಿಕಾರಿಗಳ ನಿರೀಕ್ಷೆಗೂ ಮೀರಿ ಹೆಚ್ಚಾಗಿದೆ. ರಾತ್ರಿ ವೇಳೆ ಆಹಾರ ಅರಸಿ ಚಿರತೆಗಳು ಕಬ್ಬು, ಜೋಳವನ್ನು ಬೆಳೆದಿರುವ ಜಮೀನುಗಳಿಗೆ ನುಗ್ಗುತ್ತಿವೆ. ಚಿರತೆಗಳು ಆಗಾಗ ಗ್ರಾಮಗಳಿಗೆ ನುಗ್ಗಿ ಕರುಗಳು ಮತ್ತು ನಾಯಿಗಳ ಮೇಲೆ ದಾಳಿ ಮಾಡುತ್ತಿವೆ. ಇದಲ್ಲದೆ, ತಿ.ನರಸೀಪುರ ತಾಲ್ಲೂಕಿನಲ್ಲಿ ಚಿರತೆ ದಾಳಿಗೆ ಮೂವರು ಮೃತಪಟ್ಟಿದ್ದಾರೆ.

ಮೈಸೂರು ತಾಲ್ಲೂಕಿನ ವಿವಿಧ ಪ್ರದೇಶಗಳಲ್ಲಿ ಮೆಟಲ್ ರಾಡ್ ಕೇಜ್‌ನ 12 ಬೋನುಗಳನ್ನು ಮತ್ತು 2 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜಿಲ್ಲೆಯಲ್ಲಿ ಚಿರತೆ ಹಾವಳಿಯಿಂದ 3 ಮಂದಿ ಜೀವ ಕಳೆದುಕೊಂಡಿರುವ ತಿ.ನರಸೀಪುರ ತಾಲ್ಲೂಕಿನಲ್ಲಿ 5 ಫೈಬರ್ ಕೇಜ್ ಮತ್ತು 4 ಮೆಟಲ್ ರಾಡ್ ಕೇಜ್ ಮತ್ತು 39  ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಸರಗೂರು ತಾಲ್ಲೂಕಿನಲ್ಲಿ 3 ಮೆಟಲ್ ರಾಡ್ ಕೇಜ್ ಇಡಲಾಗಿದ್ದು, ನಂಜನಗೂಡು ತಾಲ್ಲೂಕಿನ 4 ಪ್ರದೇಶದಲ್ಲಿ ಫೈಬರ್ ಕೇಜ್ ಮತ್ತು 7 ಭಾಗದಲ್ಲಿ ಮೆಟಲ್ ರಾಡ್ ಕೇಜ್ ಅಳವಡಿಸಲಾಗಿದೆ. ಇನ್ನು ಹುಲಿ ದಾಳಿಗೆ ಆದಿವಾಸಿ ಯುವಕನೊಬ್ಬ ಪ್ರಾಣತೆತ್ತಿರುವ ಎಚ್.ಡಿ.ಕೋಟೆ ತಾಲ್ಲೂಕಿನ 3 ಭಾಗದಲ್ಲಿ ಫೈಬರ್ ಕೇಜ್ ಮತ್ತು 7 ಮೆಟಲ್ ರಾಡ್ ಕೇಜ್ ಅನ್ನು ಅಳವಡಿಸಲಾಗಿದೆ.

ಹುಣಸೂರು ವಲಯದ 11 ಭಾಗಗಳಲ್ಲಿ ಮೆಟಲ್ ರಾಡ್ ಕೇಜ್ ಮತ್ತು ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ 9 ಮತ್ತು ಕೆ.ಆರ್.ನಗರ ತಾಲ್ಲೂಕಿನಲ್ಲಿ 5 ಮೆಟಲ್ ರಾಡ್ ಕೇಜ್ ಅಳವಡಿಸಲಾಗಿದೆ. ಇಷ್ಟಾದರೂ ಸಾರ್ವಜನಿಕರು ಚಿರತೆ ಮತ್ತು ಹುಲಿಯನ್ನು ಕಂಡ ತಕ್ಷಣ ಅರಣ್ಯ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಪೊಲೀಸ್ ಇಲಾಖೆಗೆ ಕರೆ ಮಾಡಿ ಆತಂಕ ವ್ಯಕ್ತಪಡಿಸಿ ಬೋನು ಇಡುವಂತೆ ಮನವಿ ಮಾಡುತ್ತಿದ್ದಾರೆ. ಕೆಲವೊಂದು ಭಾಗದಲ್ಲಿ ಮೂರು ನಾಲ್ಕು ಬಾರಿ ಕರೆ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಬೋನು ಅಳಡಿಸುವುದೇ ಪರಿಹಾರವಲ್ಲ:
ಚಿರತೆಗಳ ಹಾವಳಿ ಇರುವ ತಾಲ್ಲೂಕಿನ ಆರ್‌ಎಫ್‌ಓ ಮತ್ತು ಅರಣ್ಯ ಸಿಬ್ಬಂದಿಗೆ ಪ್ರತಿದಿನ ಐದಾರು ಫೋನ್ ಕರೆಗಳು ಬರತೊಡಗಿವೆ. ಕೆಲವರು ಡಿಸಿಎಫ್‌ಗಳಿಗೆ ಕರೆ ಮಾಡಿ ಚಿರತೆ ಸೆರೆಗೆ ಒತ್ತಾಯಿಸಿದ್ದಾರೆ. ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಚಿರತೆ ಅಥವಾ ಹುಲಿಯ ಹೆಜ್ಜೆಗಳನ್ನು ಪತ್ತೆ ಹಚ್ಚಲು ಕಾರ್ಯಪ್ರವೃತ್ತರಾಗುತ್ತಾರೆ. ಎಲ್ಲ ಪ್ರದೇಶಗಳಲ್ಲಿ ಬೋನು ಅಳವಡಿಸುವುದೇ ಪರಿಹಾರವಲ್ಲ. ಕೆಲವೊಂದು ಪ್ರದೇಶಗಳಲ್ಲಿ ಕ್ಯಾಮೆರಾ ಅಳವಡಿಸಿ ಪ್ರಾಣಿಗಳ ಚಲನವಲನಗಳನ್ನು ವೀಕ್ಷಿಸಿ ಸೆರೆಯ ಕಾರ್ಯಾಚರಣೆ ನಡೆಯಲಿದೆ. ಚಿರತೆಯಿಂದ ಅತಿಯಾದ ಉಪಟಳ ಮತ್ತು ಚಿರತೆ ಇರುವುದು ಖಚಿತವಾದ ಸ್ಥಳಗಳಲ್ಲಿ ಬೋನುಗಳನ್ನು ಅಳವಡಿಸಲಾಗುವುದು ಎಂಬುದಾಗಿ ಮೈಸೂರು ವಲಯದ ಸಿಎಫ್ ಮಾಲತಿ ಪ್ರಿಯ ಹೇಳುತ್ತಾರೆ.


ಇನ್ನೊಂದು ವಾರದೊಳಗೆ ಕಂಟ್ರೋಲ್ ರೂಂ :

ಮೈಸೂರು ಅರಣ್ಯ ಭವನದಲ್ಲಿ ಒಂದು ವಾರದೊಳಗೆ ಚಿರತೆ ಕಾರ್ಯಪಡೆ ನಿಯಂತ್ರಣ ಕೊಠಡಿ ಸ್ಥಾಪಿಸಿ, ದಿನದ 24 ಗಂಟೆಗಳ ಕಾಲವೂ ಕರ್ತವ್ಯ ನಿರ್ವಹಿಸಲು ತೀರ್ಮಾನಿಸಲಾಗಿದೆ ಎಂದು ಟಾಸ್ಕ್ ಫೋರ್ಸ್ ಮುಖ್ಯಸ್ಥರಾಗಿರುವ ಡಿಸಿಎಫ್ ಸೌರಭ್ ಕುಮಾರ್ ಮಾಹಿತಿ ನೀಡಿದರು.


ಚಿರತೆ ಸೆರೆ ಹಿಡಿಯುವ ಕಾರ್ಯವೈಖರಿ :

ಮೈಸೂರು: ಸಾಮಾನ್ಯವಾಗಿ ಚಿರತೆಯನ್ನು ಸೆರೆಹಿಡಿಯಲು ಬೋನಿನ ಒಂದು ವಿಭಾಗದಲ್ಲಿ ನಾಯಿ ಅಥವಾ ಮೇಕೆಯನ್ನು ಕಟ್ಟುತ್ತಾರೆ. ನಾಯಿ ಅಥವಾ ಮೇಕೆಯ ಸದ್ದು ಮತ್ತು ವಾಸನೆಗೆ ಆಕರ್ಷಿತವಾಗಿ ಚಿರತೆ ಬೋನಿನೊಳಗೆ ಹೋಗುತ್ತದೆ. ಬೋನಿನ ಒಳಗಡೆ ಭಾರಕ್ಕೆ ಮುಚ್ಚಿಕೊಳ್ಳುವ ಒಂದು ಸಣ್ಣ ಅಲ್ಯೂಮಿನಿಯಂ ಹಲಗೆಯನ್ನು ನೆಲದ ಮೇಲೆ ಇರಿಸಿರುತ್ತಾರೆ ಮತ್ತು ಅದನ್ನು ತಂತಿಯ ಮೂಲಕ ಬೋನಿನ ಬಾಗಿಲಿಗೆ ಕಟ್ಟಿರುತ್ತಾರೆ. ಆ ಅಲ್ಯೂಮಿನಿಯಂ ಹಲಗೆಯ ಮೇಲೆ ಚಿರತೆ ಕಾಲಿಟ್ಟ ಕೂಡಲೇ ಮಾರ್ಜಾಲದ ಭಾರಕ್ಕೆ ಹಲಗೆ ಕೆಳಗೆ ಹೋಗುತ್ತದೆ. ಹಲಗೆ ಕೆಳಗೆ ಹೋದ ಕೂಡಲೇ ಅದಕ್ಕೆ ಕಟ್ಟಿರುವ ಕಬ್ಬಿಣದ ತಂತಿ ಬಾಗಿಲನ್ನು ಮುಚ್ಚಿಕೊಳ್ಳುತ್ತದೆ. ಜೊತೆಗೆ ಚಿರತೆಯ ಚಲನವಲನವನ್ನು ಕ್ಯಾಮೆರಾ ಕೂಂಬಿಂಗ್‌ನಲ್ಲಿ ಗಮನಿಸಿ ಚಿರತೆಗೆ ಅರಿವಳಿಕೆ ನೀಡಿ ಸೆರೆ ಹಿಡಿಯಲಾಗುವುದು ಎನ್ನುತ್ತಾರೆ ವನ್ಯಜೀವಿ ವಿಜ್ಞಾನಿ ಸಂಜಯ್ ಗುಬ್ಬಿ.


ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಮತ್ತು ಕಾರ್ಯ ಮುಖ್ಯ ರಸ್ತೆಯಲ್ಲಿ ಜೋಳದ ಮೆದೆಯೊಳಗೆ ಚಿರತೆ ಸದ್ದು ಕೇಳಿಸಿದ್ದನ್ನು ಅಧಿಕಾರಿಗಳಿಗೆ ತಿಳಿಸಲಾಗಿದೆ. ಜೊತೆಗೆ ಈ ಚಿರತೆ ಕೆಲ ದಿನಗಳ ಹಿಂದೆ ಅಕ್ಕ-ಪಕ್ಕದ ಮನೆಗಳ ನಾಯಿಗಳನ್ನು ಭಕ್ಷಿಸಿದೆ. ಜೊತೆಗೆ ಗದ್ದೆ ಕೆಲಸ ಮತ್ತು ರಸ್ತೆಯಲ್ಲಿ ಸಂಚರಿಸುವ ವೇಳೆ ಅನೇಕರಿಗೆ ಚಿರತೆ ಕಾಣಿಸಿಕೊಂಡಿದೆ. ಆದರೆ, ಈವರೆಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ಬೋನುಗಳ ಸಂಖ್ಯೆ ಕಡಿಮೆ ಇದೆ ಎಂದು ತಿಳಿಸಿದ್ದಾರೆ. ಕೂಡಲೇ ಚಿರತೆ ಸೆರೆ ಹಿಡಿದು ಜನರ ಆತಂಕ ದೂರ ಮಾಡಬೇಕು.

– ಚಂದ್ರು, ಸ್ಥಳೀಯ.

 

 

 

 

andolanait

Recent Posts

ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ ಅಜ್ಜಿ ನಿಧನ

ಮುಂಬೈ: ಸಿಜೆಪಿ ಸಂಸ್ಥಾಪಕ ಅಭಿಜಿತ್‌ ದೀಪ್ಕೆ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದ ಗಂಟೆಗಳಲ್ಲಿ ಅವರ ಅಜ್ಜಿ ನಿಧನರಾಗಿದ್ದಾರೆ. ದೀರ್ಘಕಾಲದ…

17 hours ago

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ: ನಾಳೆ ಅಧಿಕೃತ ಚಾಲನೆ

ಮೈಸೂರು: ಮೈಸೂರಿನ ದಸರಾ ಮಹೋತ್ಸವದ ಉದ್ಘಾಟನೆಗೆ ಚಾಮುಂಡಿಬೆಟ್ಟದಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಉದ್ಘಾಟನಾ ಸಮಾರಂಭಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ…

18 hours ago

ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಲಯ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಹಾಲಯ ಅಮಾವಾಸ್ಯೆ ಪ್ರಯುಕ್ತ ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ…

19 hours ago

ಅಭಿಜಿತ್ ದೀಪ್ಕೆ ಪೊಲೀಸ್ ವಶಕ್ಕೆ: ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಅಜಿಂಕ್ಯ ಶಿಂಧೆ ಸಾರಥ್ಯ

ನವದೆಹಲಿ: ಅಭಿಜಿತ್ ದೀಪ್ಕೆ ಪೊಲೀಸ್ ವಶದಲ್ಲಿರುವ ಹಿನ್ನೆಲೆಯಲ್ಲಿ, ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಿಜೆಪಿಯ ಸಂಘಟನಾ ಉಸ್ತುವಾರಿ ಅಜಿಂಕ್ಯ ಶಿಂಧೆ…

19 hours ago

ಓದುಗರ ಪತ್ರ: ಹೋರಾಟಗಳು ರಚನಾತ್ಮಕವಾಗಿರಲಿ, ಗಂಭೀರವಾಗಿರಲಿ

ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳು ಹಾಗೂ ಕೆಲವು ಸಂಘಟನೆಗಳು ಪ್ರತಿಭಟನೆಗಳನ್ನು ಮಾಡುತ್ತಿರುವುದು ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ವಾತಾವರಣ ದಲ್ಲಿ…

23 hours ago

ಓದುಗರ ಪತ್ರ: ಒಂದು ವರ್ಷ ಅಲೆದಾಡಿಸಿದ ನಂತರ… !

ಮೈಸೂರಿನಲ್ಲಿ ಇ-ಖಾತಾ ಹಾಗೂ ಸಿ ಆರ್ ವಿತರಣೆ ಸಂಬಂಧ ಸಾರ್ವಜನಿಕರಿಂದ ಕುಂದು ಕೊರತೆ ಆಲಿಸಿದ ನಂತರ ಮೈಸೂರು ನಗರ ಪಾಲಿಕೆಯ…

23 hours ago