ಜಿಲ್ಲೆಗಳು

ಇನ್ನು ಮುಂದೆ ವರ್ತುಲ ರಸ್ತೆಯಲ್ಲಿ ಝಗಮಗಿಸಲಿವೆ ವಿದ್ಯುತ್ ದೀಪಗಳು

ಮೈಸೂರು: ಕೆಲ ವರ್ಷಗಳಿಂದ ಕಗ್ಗತಲಿನಲ್ಲಿದ್ದ ನಗರದ ವರ್ತುಲ ರಸ್ತೆಯಲ್ಲಿನ ಬೀದಿ ದೀಪಗಳ ಸಮಸ್ಯೆ ಬಗೆಹರಿದಿದ್ದು, ಗುರುವಾರ ರಾತ್ರಿಯಿಂದ ರಸ್ತೆಯಲ್ಲಿ ಬೆಳಕು ಕಾಣಲಿದೆ ಎಂದು ಸಂಸದ ಪ್ರತಾಪಸಿಂಹ ಹೇಳಿದರು.

ಗುರುವಾರ ಮಹಾನಗರಪಾಲಿಕೆ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಈ ಸಂಬಂಧ ಸಭೆ ನಡೆಸಿ ಅವರು ಮಾತನಾಡಿದರು. ಕಳೆದ ಹಲವಾರು ವರ್ಷಗಳಿಂದ ವರ್ತುಲ ರಸ್ತೆಯಲ್ಲಿ ವಿದ್ಯುತ್ ದೀಪಗಳು ಇರಲಿಲ್ಲ. ಇದರಿಂದ ಪ್ರಯಾಣಿಕರಿಗೆ ಹಾಗೂ ರಾತ್ರಿ ವೇಳೆ ಸಂಚರಿಸುವ ಸಾರ್ವಜನಿಕ ರಿಗೆ ತೊಂದರೆಯಾಗುತ್ತಿತ್ತು ಎಂದರು.

ಈ ಹಿಂದೆ ವಿದ್ಯುತ್ ದೀಪದ ಬಿಲ್ ಕೂಡ ೧.೧೯ ಕೋಟಿ ಚೆಸ್ಕಾಂಗೆ ಬಾಕಿ ಇತ್ತು. ಇದರಿಂದ ಕೂಡ ಬೀದಿ ದೀಪಗಳನ್ನು ಬೆಳಗಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿಂದ ಮುಡಾ ಹಾಗೂ ನಗರಪಾಲಿಕೆ ಅಧಿಕಾರಿಗಳ ಸತತ ಸಭೆಗಳನ್ನು ನಡೆಸಿ ಸಮಸ್ಯೆ ಬಗೆಹರಿಸಲು ಪ್ರಮಾಣಿಕ ಪ್ರಯತ್ನ ನಡೆಸಲಾಗಿತ್ತು ಎಂದು ತಿಳಿಸಿದರು.

ಅದರಂತೆ ಚೆಸ್ಕಾಂಗೆ ಪಾವತಿಸಬೇಕಿದ್ದ ೧.೧೯ ಕೋಟಿ ರೂ.ಗಳನ್ನು ಮುಡಾ ವತಿಯಿಂದ ನೀಡಲಾಗಿದೆ. ಇದೀಗ ಬೀದಿ ದೀಪಗಳ ದುರಸ್ತಿಗಾಗಿ ೧೨ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದ್ದು, ಈ ಹಣವನ್ನು ಮುಡಾ ಭರಿಸಲಿದೆ ಎಂದರು.

ಬೀದಿ ದೀಪಗಳ ನಿರ್ವಹಣೆಗೆ ಒಂದು ವರ್ಷದವರೆಗೆ ಗುತ್ತಿಗೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ವಿದ್ಯುತ್ ಬಿಲ್ ಪಾವತಿ ಹಾಗೂ ನಿರ್ವಹಣೆಯನ್ನು ನಗರಪಾಲಿಕೆ ಮಾಡಲಿದೆ. ಈ ಸಂಬಂದ ಮೂಡಾ ಹಾಗೂ ನಗರಪಾಲಿಕೆ ನಡುವೆ ಒಪ್ಪಂದವಾಗಿದೆ ಎಂದು ತಿಳಿಸಿದರು.

ಈ ಹಿಂದೆ ವರ್ತುಲ ರಸ್ತೆಯ ಸುತ್ತಾ ವಿವಿಧ ಸ್ಥಳಗಳಲ್ಲಿ ವಿದ್ಯುತ್ ಕೇಬಲ್, ಕಂಬ, ಬಲ್ಬ್ ಗಳ ಕಳವು ಪ್ರಕರಣಗಳು ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ವರ್ತುಲ ರಸ್ತೆಯ ಪ್ರತಿ ೨ ಕಿ.ಮೀ.ನಲ್ಲಿ ಸಿಸಿಟಿವಿ ಅಳವಡಿಸಲು ಚಿಂತನೆ ನಡೆಸಲಾಗಿದೆ. ಅಲ್ಲಿಯವರೆಗೆ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆ ಪೊಲೀಸರು ರಾತ್ರಿ ವೇಳೆ ಎರಡು ಸುತ್ತು ಗಸ್ತು ತಿರುಗುವಂತೆ ಆಯುಕ್ತರಿಗೆ ಮನವಿ ಮಾಡಲಾಗುವುದು ಎಂದು ಪ್ರತಾಪಸಿಂಹ ಹೇಳಿದರು.

ನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತ್ ರೆಡ್ಡಿ ಮಾತನಾಡಿ, ವರ್ತುಲ ರಸ್ತೆಯೂ ೪೫ ಕಿ.ಮೀ. ಸುತ್ತಳತೆ ಹೊಂದಿದ್ದು, ಎರಡು ಬದಿಯಲ್ಲಿ ವಿದ್ಯುತ್ ದೀಪ ಅಳವಡಿಸುವ ಕಾರಣ ೮೬ ಕಿ.ಮೀ. ಕೇಬಲ್ ಅಳವಡಿಸಲಾಗಿದೆ. ಇದೀಗ ಮಣಿಪಾಲ್ ಆಸ್ಪತ್ರೆ ವೃತ್ತದಿಂದ ನಂಜನಗೂಡು ಜಂಕ್ಷನ್ ವರೆಗೆ ಇಂದಿನಿಂದ ವಿದ್ಯುತ್ ದೀಪಗಳು ಬೆಳಗಲಿವೆ ಎಂದು ತಿಳಿಸಿದರು.

ವರ್ತುಲ ರಸ್ತೆಯ ಸುತ್ತಾ ಒಟ್ಟು ೪೫೫೦ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಬೇಕಾಗಿದ್ದು, ಈಗಾಗಲೇ ೩೫೫೦ ಬಲ್ಬ್‌ಗಳನ್ನು ಅಳವಡಿಸಲಾಗಿದೆ. ಮುಂದಿನ ೧೦ ದಿನಗಳಲ್ಲಿ ಬಲ್ಬ್ ಹಾಗೂ ಕೇಬಲ್ ಅಳವಡಿಕೆ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.

ಇದರಲ್ಲಿ ವಿವಿಧ ಸ್ಥಳಗಳಲ್ಲಿ ೨೦ ಹೈಮಾಸ್ಕ್ ದೀಪಗಳನ್ನು ಅಳವಡಿಸಲಾಗಿದೆ. ಹಾಳಾಗಿದ್ದ ೮೦ ವಿದ್ಯುತ್ ಕಂಬಗಳನ್ನು ಬದಲಿಸಲಾಗಿದೆ. ಉಳಿದಂತೆ ಮಣಿಪಾಲ್ ಆಸ್ಪತ್ರೆಯಿಂದ ದಟ್ಟಗಳ್ಳಿ ಮಾರ್ಗವಾಗಿ ನಂಜನಗೂಡು ಜಂಕ್ಷನ್‌ವರೆಗೆ ಮುಂದಿನ ೧೦ ದಿನಗಳಲ್ಲಿ ವಿದ್ಯುತ್ ದೀಪ ಬೆಳಗಲಿದೆ ಎಂದು ತಿಳಿಸಿದರು.
ಶೀಘ್ರದಲ್ಲೇ ತ್ಯಾಜ್ಯವಿಲೇವಾರಿ ಅರಂಭ: ನಗರದ ವಿದ್ಯಾರಣ್ಯಪುರಂ ನ ಸುಯೇಜ್ ಫಾರಂನಲ್ಲಿ ೬.೫ ಲಕ್ಷ ಟನ್ ಕಸ ಸಂಗ್ರಹವಾಗಿದೆ. ಇದರ ವಿಲೇವಾರಿ ಸವಾಲಾಗಿತ್ತು. ಈ ಹಿನ್ನೆಲೆಯಲ್ಲಿ ೫೭ ಕೋಟಿ ರೂ. ವೆಚ್ಚದಲ್ಲಿ ತ್ಯಾಜ್ಯ ವಿಲೇವಾರಿಗೆ ಮುಹೂರ್ತ ನಿಗಧಿ ಪಡಿಸಲಾಗಿದೆ ಎಂದು ಸಂಸದ ಪ್ರತಾಪ್‌ಸಿಂಹ ಹೇಳಿದರು.

ಈ ಸಂಬಂಧ ಆದಷ್ಟು ಶೀಘ್ರವಾಗಿ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಲಿದೆ. ಸಂಗ್ರಹವಾಗಿರುವ ತ್ಯಾಜ್ಯದಲ್ಲಿ ಡಾಂಬರ್, ಸಿಮೆಂಟ್‌ಗೆ ಬೇಕಾದ ಕಚ್ಚಾ ವಸ್ತುಗಳನ್ನು ಬೇರ್ಪಡಿಸಿ ಉಳಿದ ಕಸವನ್ನು ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ ಎಂದು ಪ್ರತಾಪಸಿಂಹ ಹೇಳಿದರು.

ಆಯುಕ್ತ ಲಕ್ಷ್ಮಿಕಾಂತರೆಡ್ಡಿ ಮಾತನಾಡಿ, ನಗರದಲ್ಲಿ ಉತ್ಪತ್ತಿಯಾಗುವ ಕಸವನ್ನು ಸದ್ಯ ವಿದ್ಯಾರಣ್ಯ ಪುರಂನಲ್ಲಿರುವ ಸುಯೇಜ್‌ಫಾರಂಗೆ ಸಾಗಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೆಸರೆ, ರಾಯನಕೆರೆ ಹಾಗೂ ವಿದ್ಯಾರಣ್ಯಪುರಂ ನಲ್ಲಿ ತ್ಯಾಜ್ಯ ಸಂಗ್ರಹ ಘಟಕಗಳನ್ನು ಆರಂಭಿಸಲಾಗಿತ್ತದೆ. ಕೆಸರೆಯಲ್ಲಿ ೨೦೦ ಟನ್ ತ್ಯಾಜ್ಯ ಸಂಗ್ರಹ ಸಾಮರ್ಥ್ಯ, ರಾಯನಕೆರೆಯಲ್ಲಿ ೧೫೦ ಟನ್, ವಿದ್ಯಾರಣ್ಯಪುರಂನಲ್ಲಿ ೨೫೦ ಟನ್ ಸಾಮರ್ಥ್ಯ ದ ಕಸ ಸಂಗ್ರಹ ಘಟಕಗಳನ್ನು ಸ್ಥಾಪಿಸಲಾಗುತ್ತದೆ ಎಂದು ಹೇಳಿದರು.

ಅಧೀಕ್ಷಕ ಅಭಿಯಂತರ ಮಹೇಶ್, ಅಭಿವೃದ್ಧಿ ಅಧಿಕಾರಿ ಸತ್ಯಮೂರ್ತಿ, ಚೆಸ್ಕಾಂ ನ ನಾಗೇಶ್ ಇನ್ನಿತರರು ಹಾಜರಿದ್ದರು.

andolana

Recent Posts

ಶ್ರೀರಂಗಪಟ್ಟಣ ದಸರಾ 2026: ಅ.15ರಿಂದ ವೈಭವದ ಆಚರಣೆ, ಆಕರ್ಷಕ ಲೋಗೋ ಬಿಡುಗಡೆ

ಮಂಡ್ಯ: ಐತಿಹಾಸಿಕ ಹಿನ್ನೆಲೆಯುಳ್ಳ 416ನೇ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಅಕ್ಟೋಬರ್.‌15ರಂದು ಖ್ಯಾತ ನಟ ವಿ.ರವಿಚಂದ್ರನ್‌ ಅವರು…

6 hours ago

ಅಮೃತ್ ೨.೦ ಯೋಜನೆಗೆ ನಾಗರಿಕರ ಅಸಮಾಧಾನ

ದಾಸೇಗೌಡ ಸರಗೂರು ಹೊಸ ನಲ್ಲಿ ಸಂಪರ್ಕದಲ್ಲಿ ಸಣ್ಣ ಪ್ರಮಾಣದ ನೀರು; ಕಾಂಕ್ರೀಟ್, ಡಾಂಬರ್ ರಸ್ತೆಗಳ ಅಗೆತಕ್ಕೆ ಆಕ್ರೋಶ  ಸರಗೂರು: ಪಟ್ಟಣದ…

6 hours ago

ಓದುಗರ ಪತ್ರ: ಕೆಪಿಎಸ್‌ಸಿ ರದ್ದು: ಮುಖ್ಯಮಂತ್ರಿಗಳು ಶೀಘ್ರ ನಿರ್ಧಾರ ಕೈಗೊಳ್ಳಲಿ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕ ಲೋಕಸೇವಾ ಆಯೋಗವನ್ನು ರದ್ದುಗೊಳಿಸುವ ಇಂಗಿತವನ್ನು ವ್ಯಕ್ತಪಡಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕೆಪಿಎಸ್‌ಸಿ ಒಂದು ಸ್ವಾಯತ್ತ ಸಂಸ್ಥೆಯಾದರೂ…

7 hours ago

ಓದುಗರ ಪತ್ರ: ಸಮಾಜವನ್ನು ಜಾಗೃತಗೊಳಿಸುವ ಚಿತ್ರಗಳನ್ನು ದುನಿಯಾ ವಿಜಿ ಹೆಚ್ಚಾಗಿ ನಿರ್ದೇಶಿಸಲಿ

ಸಿನಿಮಾ ಮಾಧ್ಯಮ ಸಮಾಜದ ಮೇಲೆ ಹೆಚ್ಚು ಪ್ರಭಾವ ಬೀರುವ ಮಾಧ್ಯಮವಾಗಿದೆ. ಇತ್ತೀಚಿನ ತಂತ್ರಜ್ಞಾನದ ಅಗಾಧ ಬೆಳವಣಿಗೆಯ ನಡುವೆಯೂ ಉತ್ತಮ ಚಿತ್ರಗಳಿಗೆ…

7 hours ago

ಓದುಗರ ಪತ್ರ: ಗವಿಸಿದ್ಧೇಶ್ವರ ಶ್ರೀಗಳಿಂದ ದಸರಾ ಉದ್ಘಾಟನೆ: ಸಿಎಂ ನಿರ್ಧಾರ ಶ್ಲಾಘನೀಯ

ಈ ಬಾರಿಯ ವಿಶ್ವವಿಖ್ಯಾತ ಮೈಸೂರು ನಾಡಹಬ್ಬ ದಸರಾ ಮಹೋತ್ಸವವನ್ನು ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮಿಗಳವರಿಂದ…

7 hours ago

ಇವರ ಪಾಪಗಳನ್ನೆಲ್ಲ ಸಹಿಸಿಕೊ ಸಹ್ಯಾದ್ರಿ!

ನಾಗೇಶ ಹೆಗಡೆ ಕೊನೆಗೂ ಪಶ್ಚಿಮ ಘಟ್ಟಗಳ ರಕ್ಷಣೆ ಅನಿರ್ದಿಷ್ಟ ಕಾಲ ಮುಂದೂಡಿಕೆ ಗಾಡ್ಗೀಳ್ ಸಮಿತಿಯ ಕೆಲವು ನಿಯಮಗಳ ಮತ್ತೊಮ್ಮೆ ಖಡಕ್…

7 hours ago