ಅಂಕಣಗಳು

ಯಾಕೆ ಬಿಟ್ಟು ಹೋದದ್ದು ನನ್ನ ಅವನು?

• ನಂದಿನಿ ಹೆದ್ದುರ್ಗ

́ಹತ್ತು ನಿಮಿಷ ಮೊದಲೇ ಬಂದಿದ್ದರೆ ಅವನಿದ್ದ ಅದೇ ಸಮಯದಲ್ಲಿ ನಾನೂ ಆ ಕೋಣೆಯೊಳಗೆ ಕೂರಬಹುದಿತ್ತು!́ “ಅರ್ಧಗಂಟೆ ಇನ್ನೂ ಅಲ್ಲೇ ಕುಳಿತಿದ್ದರೆ ಅವಳ ಜೊತೆಯಲ್ಲಿದ್ದೇನೆ ಎನ್ನುವ ಪುಳಕ ಉಳಿಯುತ್ತಿತ್ತು’

ತಡವಾಯಿತು ಅಂತ ಒಂದೇ ಉಸುರಿಗೆ ಆ ಎತ್ತರದ ಮೆಟ್ಟಿಲುಗಳನ್ನು ಬೇಗಬೇಗನೆ ಹತ್ತುತ್ತಿದ್ದೆ. ಮಹತ್ತಿನ ಮಾತೇನೂ ನಡೆಯುತ್ತಿಲ್ಲ ಎನ್ನುತ್ತಾ ಆ ಮೀಟಿಂಗ್‌ನಿಂದ ಅವನು ನಿಧಾನವಾಗಿ ಹೊರಬಂದ. ನಮ್ಮ ನೋಟಗಳು ಸಂಧಿಸಿದಾಗ ತೀರಾ ಹತ್ತಿರದಲ್ಲೇನೂ ಇರಲಿಲ್ಲ ನಾವು. ನಾನು ಕೆಳಗಿನಿಂದ ಎಡಕ್ಕೆ ತಿರುಗಿ ಎರಡನೇ ಮೆಟ್ಟಿಲಿಗೆ ಕಾಲಿಡುವಾಗ ಮೇಲೆ ನೋಡಿದ್ದು, ಅವನು ಐದನೇ ಮೆಟ್ಟಿಲು ಇಳಿಯುತ್ತಾ ಕೈಲಿದ್ದ ಫೋನು ಕಿಸೆಗೆ ಹಾಕಿಕೊಂಡವ ಕೆಳಗೆ ನೋಡಿದ. ಇವತ್ತು ಅವನನ್ನು ನೋಡಬಹುದು ಅಂತೊಂದು ಊಹೆಯಿತ್ತು ತಾನೇ? ಛೇ. ಈ ಜೀವಕ್ಕೇನಾಗಿದೆ.

ಖಳಕ್ಕನೆ ಉಳುಕುತ್ತಿದೆ ಕಾಲು ನಡುಗುವ ಹೊತ್ತಿನಲ್ಲೇ ದೇಹ ಪಳಪಳ ದಳ ಬಿಚ್ಚುತ್ತಿದೆ. ಒಳಗುಟ್ಟನ್ನು ಬಚ್ಚಿಡಲಾಗದ ಅಸಹಾಯಕತೆಯಲ್ಲಿ ಈ ನೋಟ ಎಲ್ಲವನ್ನೂ ಚೆಲ್ಲಿ ಸುತ್ತೂ ನೋಡುತ್ತದೆ ಅಮಾಯಕದಂತೆ. ಊಹು. ಹೀಗಾಗುವಂತಿಲ್ಲ. ಹೀಗಾಗಬಾರದು ಕೂಡ.

ನಾವು ಪರಿಚಿತ ಅಪರಿಚಿತರು. ಆದರೆ ಇಡೀ ದೇಹವನ್ನು ನಿಯಂತ್ರಿಸಿಕೊಳ್ಳುವುದು ಮತ್ತು ಬೇಕಾದಷ್ಟು ಮಾತ್ರ ನುಡಿಯುವಂತೆ ಮಾಡುವುದು ಸುಮ್ಮನೇ ಅಲ್ಲ. ಅವನನ್ನು ನೋಡಿ ಪರಿಚಯದ… ಕೇವಲ ಪರಿಚಯ ಮಾತ್ರದ ನಗು ನಕ್ಷೆ. ಭಾಷಣಕಾರರ ಆಗಮನ ತಡವಾಯಿತು?’ ಎಂದ.

ಆಹಾ! ಕಲಾವಿದ!! ಯಾವುದನ್ನು ಎಲ್ಲಿ ಹೇಗೆ ಎಷ್ಟು ವೇಗದಲ್ಲಿ ಮತ್ತು ಎಷ್ಟು ಓಘದಲ್ಲಿ ಆಡಿದರೆ ಸರಿಯಾಗಿ ತಾಕುತ್ತದೆ ಎನ್ನುವುದರಲ್ಲಿ ಡಾಕ್ಟರೇಟ್ ಮಾಡಿದ್ದಾನೆ ಅನಿಸುತ್ತೆ.

ಅಷ್ಟರಲ್ಲಿ ಹತ್ತಿರ ಬಂದಿದ್ದೆವು ನಾವು.

ತೀರಾ ಒಂದೂವರೆ ಅಡಿ ಅಗಲವಿದ್ದ ಆ ಮೆಟ್ಟಿಲಿನಲ್ಲಿ ಮುಂದುವರಿಯ ಬೇಕಾದರೆ ಒಬ್ಬರನ್ನೊಬ್ಬರು ತೀರಾ ಹತ್ತಿರಕ್ಕೆ ಬಂದೇ ದಾಟಬೇಕು. ಯಾಕೋ ಇದನ್ನು ಬರೆಯುವಾಗ ಸಣ್ಣಗೆ ಜೀವ ನೋಯುತ್ತದೆ. ಅವನನ್ನು ನೋಡಿದ ಸಂಭ್ರಮಕ್ಕೆ ಕೋಲಿಂಚಿನಂತೆ ಹೊಳೆದ ನನ್ನ ಕಣ್ಣ ಬೆಳಕು ಆ ಕೆಂಪು ಸಾರಣೆಯ ಮೆಟ್ಟಿಲುಗಳನ್ನು ಇನ್ನಷ್ಟು ಶುಭ್ರಗೊಳಿಸಿತಾ? ಗೊತ್ತಾಗಲಿಲ್ಲ. ಅಷ್ಟರಲ್ಲಾಗಲೇ ಅಂಚು ಕುಸುರಿಯಿದ್ದ ನನ್ನ ಗುಲಾಬಿ ದುಪ್ಪಟ್ಟಾ ಅವನ ನಶ್ಯ ಬಣ್ಣದ ಪ್ಯಾಂಟಿಗೆ ತಾಗುತಿತ್ತು. ಅದನ್ನು ಸಂಭಾಳಿಸುತ್ತ ಕೆಳಕ್ಕೆ ನೋಡಿದೆ.

ಅದೇ ಚಪ್ಪಲಿ!

ಅರೆ ಕಳ್ಳಾ… ಆರು ವರ್ಷದಲ್ಲಿ ನೀನು ಕೇವಲ ಒಂದೇ ಜೊತೆ ಚಪ್ಪಲಿ ಸವೆಸಿದ್ದ ಹಾಗಾದರೆ? ಮೋಡ ಮುಸುಕಿ ಕತ್ತಲಿನಂತಾಗಿದ್ದ ಆ ಮಳೆಗಾಲದ ಸಂಜೆಯಲ್ಲಿ ನನ್ನ ಮನೆಯ ಮುಂಬಾಗಿಲಿನಲ್ಲಿ ಮೊದಲ ಬಾರಿ ಕಳಚಿದ್ದ ಅವೇ ಚಪ್ಪಲಿ!! ಹೀಗೆ ಊರು ಸುತ್ತುವವನಿಗೆ ವರ್ಷಕ್ಕೆ ಆರು ಜೋಡಿ ಮೆಟ್ಟಿದ್ದರೂ ಸಾಲದು ಎಂದಿದ್ದೆ ನಾನು.

ಹಾಗಿದ್ದರೆ… ನಾನು ಅಂದುಕೊಂಡಿದ್ದೆಲ್ಲವೂ ಸತ್ಯವಲ್ಲವಾ? ದೃಷ್ಟಿ ಮತ್ತೆ ಅವನ ಕಣ್ಣುಗಳಲ್ಲಿ ಕೂಡಿಕೊಂಡಿತು. ಇದ್ದಿಲಿನ ಬಣ್ಣದವ ಈ ನಡುವೆ ಇನ್ನಷ್ಟು ಕಪ್ಪಗಾಗಿದ್ದ. ಮೀಸೆಯ ನೆರೆಯಲ್ಲಿ ತುಸು ಹೆಚ್ಚೇ ಬೆಳದಿಂಗಳು, ಕಳ್ಳನೋಟ ಮೆಲ್ಲಗೆ ಕತ್ತಿನ ಕೆಳಗೆ ಇಳಿಯಿತು. ಅದೇ ಹಂದರ. ಅದೇ ನೆಳಲುಬೆಳಕು. ಪ್ರೇಮದಲ್ಲಿ ಅಂಬೆಗಾಲಿಟ್ಟು ನಾನಾಡಿದ ಹಸನು ಅಂಗಳ, ಛೀ… ನನಗೇನಾಗಿದೆ.

ಅದೆಲ್ಲವನ್ನೂ ನೋಡುವುದು ಬೇಕಿತ್ತಾ? ಮತ್ತೆ ಅವನನ್ನೇ ನೋಡಿದೆ. ಕಣ್ಣಬಟ್ಟಲಿನಲ್ಲಿ ನೀರಿನ ತೆಳು ಪರದೆ! ‘ತಡವಾಯಿತು’ ಅಂದೆ.

‘ಕಳೆದುಕೊಳ್ಳುವುದೇನಿಲ್ಲ’ ಎಂದ. ಹಾಗೆ ದಾಟಿಕೊಳ್ಳುವಾಗ ಅವನ ಮೈಯ ವಾಸನೆ ನನ್ನ ಉಸಿರಿನೊಳಗಿಳಿದು ದೇಹದ
ಮೂಲೆಮೂಲೆಗೂ ತಲುಪಿ ಸುಖದ
ಹಾರ್ಮೋನಿನ ಕುಡತೆ ಛಿಲ್ಲನೆ ಚಿಮ್ಮಿತು. ನನ್ನ ಕಿವಿ ಬಿಸಿಯಾದವು. ತೀರಾ ಪರಿಚಯವಿದ್ದ ನನ್ನ ಶ್ಯಾಂಪೂವಿನ ಪರಿಮಳ ಅವನನ್ನು ಒಂದು ಕ್ಷಣ ಪರವಶಗೊಳಿಸಿರಬಹುದಾ?

ಕಾಲದ ಕನವರಿಕೆಯ ಕಾಲನೇ ಒಂದು ಭಾಗ ಅವನನ್ನು ತಾಕಿದ ನನ್ನ ದುಪ್ಪಟ್ಟಾ ದಕ್ಕಿದ್ದಿಷ್ಟೆ ಎನ್ನುತ್ತಾ ಗಾಳಿಯಲ್ಲಿ ಹಗೂರಾಗಿ ತೇಲಿ ಮತ್ತೆ ನನ್ನ ಮೈಯ ಬಳಿ ಬಂದಿತು. ನಾನು ಮೇಲಕ್ಕೆ ಓಡಹತ್ತಿದೆ. ಅವನು ಸಾವಕಾಶವಾಗಿ ಕೆಳಗೆ ಇಳಿಯುತ್ತಿದ್ದ. ಏನಾದರೂ ಕೇಳಬಹುದಿತ್ತಾ ನಾನು? ಹೇಗಿದ್ದೀಯಾ? ಬೇಗ ಬಂದೆಯಾ? ಅಥವಾ ಮಾಮೂಲಿನಂತೆ… ಮಳೆ ಬಂತಾ? ತೋಟದಲ್ಲಿ ಏನು ಕೆಲಸ? ಛೇ, ಅವೆಲ್ಲವನ್ನೂ ಕೇಳುವುದಾ?
ಅವನಾದರೂ ಮುಂದುವರಿಯಬಹುದಿತ್ತು.

‘ನೆನೆದವರ ಮನದಲ್ಲಿ!’ ಎನ್ನುವ ಹಳೆಯ ಡೈಲಾಗ್ ಆದರೂ ಹೇಳಬಹುದಿತ್ತು. ಅವನ ಹೂದಳದಂತಹ ಕಣ್ಣಿನಲ್ಲಿ ತೋಯ್ದಾಡುತ್ತಿದ್ದ ಆ ಕಡಲು ನನ್ನ ಕಣ್ಣುಗಳಲ್ಲಿ ತುಳುಕುತ್ತಿದ್ದ ಉದಯಾಸ್ತಮಾನಗಳ ಬಣ್ಣವನ್ನು ಕದಡಿಕೊಳ್ಳಲು ಹಂಬಲಿಸಿದಂತೆ ಕಂಡಿದ್ದು ನನ್ನ ಕಲ್ಪನೆಯಾ? ಅದು ಸರಿ… ಅವನು ನಿತ್ಯವೂ ಹೊಸ ನದಿಗಳ ಹಸಿವೆಯಿದ್ದವನಲ್ಲವಾ? ಯಾಕೆ ಹೀಗಾಗಿದ್ದಾನೆ ಈಗ?
ಬೇಸರ ಬಂತಾ ಅದು? ಇಳಿಯುತ್ತಿದ್ದವ ತಿರುಗಿ ನೋಡುತ್ತಿರ ಬಹುದಾ ನನ್ನ ಕೊನೆಯ ಮೆಟ್ಟಿಲು ಹತ್ತಿ ಬಲಕ್ಕೆ ತಿರುಗಿ…, ತಿರುಗುವ ಮುನ್ನ ಎಂದಿನಂತೆ ಮಾತು ಕೇಳದ ಕಣ್ಣು ಕೆಳಗೆ ನೋಡಿದವು. ಕಾಯುತ್ತಿದ್ದವನಂತೆ ಸಣ್ಣಗೆ ನಕ್ಕ. ಮೊದಲಿಗಿಂತಲೂ ತುಂಬಿಕೊಂಡಿದ್ದಾನೆ.

ಎರಡು ವಿರುದ್ಧ ಹೆಜ್ಜೆಗಳ ನಡುವೆ ನಿತ್ರಾಣದ ಪುಳಕವೊಂದು ಈಗಷ್ಟೇ ಪ್ರಸವಿಸಿ ಪೊರೆಯುತ್ತಿದೆ ಲೋಕದ ಕ್ಷೇಮವನ್ನು. ಆ ಹೊತ್ತು ಪಾದ ಮತ್ತು ಮಣ್ಣು ಮೊದಲ ಸ್ಪರ್ಶಕ್ಕೊಳಗಾದವರಂತೆ ನಾಚಿದವು. ಗಾಳಿ ಮತ್ತು ಶಬ್ದ ಮುದ್ದಿಸಿಕೊಳ್ಳಲು ಮರದ ಮರೆಗೆ ಸರಿದವು. ಪುಟ್ಟ ಹಕ್ಕಿಯೊಂದು ಅವನು ಅಡಿ ನಿಂತಿದ್ದ ಆ ಹಳದಿ ಹೂಮರದ ಹರೆಯಲ್ಲಿ ತನ್ನ ತ್ರಾಣ ಮೀರಿ ಹಾಡುತ್ತಿದೆ. ಯಾರನ್ನು ಕೂಗುತ್ತಿದೆ ಅದು ಈ ಬೆಳಗು ಮಧ್ಯಾಹ್ನವಾಗುವ ವೇಳೆಯಲ್ಲಿ? ಇನ್ನೂ ಹರಯವಿದ್ದೂ ಕೆಳಗೆ ಉದುರಿದ್ದ ಹೂವೊಂದನ್ನು ಬಗ್ಗಿ ಎತ್ತಿಕೊಂಡವನು ಮತ್ತೆ ಮೇಲೆ ನೋಡಿದ. ನನಗಾಗಿ ಅವನು ಹಾಡುತ್ತಿದ್ದ ಹಾಡು ನೆನಪಾಯ್ತು. ಛೇ… ನೋಡಬಾರದಿತ್ತು ಹೀಗೆ ತಿರುಗಿ ನಾನು. ಎಲ್ಲವೂ ನನ್ನ ಕೈಮೀರಿ ಹರವಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಯಾವುದೆಲ್ಲವನ್ನು ಅಡಗಿಸಲಿ ನನ್ನ ಕಪ್ಪು ಹುಡುಗನೆ? ತುಂಬಿಕೊಂಡು ಬಾಳಿದ ಬದುಕು, ಪ್ರೀತಿಯಾದದ್ದು ತಿಳಿದ ಪುಳಕ, ಮೊದಮೊದಲ ಕದನ, ತಿರುಗಾಡಿದ ಹಾದಿ, ನನಗಾಗಿಯೇ ಗುನುಗಿದ ರಾಗ, ಧರಿಸಿದ ಎರಡೇ ದಿನಕ್ಕೆ ಸೂಚನೆಯೆಂಬಂತೆ ಕೊಂಡಿ ಕಳಚಿ ಕೆಳಕೆ ಬಿದ್ದ ನಿನ್ನ ಹೆಸರಿನ ಮೊದಲಕ್ಷರದ ಆ ಪದಕ,

ಸಂಜೆ ಕರಗಿ ಕತ್ತಲಾಗಿ ಕತ್ತಲು ಕಳೆದು ನಡುರಾತ್ರಿಯಾದರೂ ಮುಗಿಯದ ನಮ್ಮ ಮಾತು, ನನ್ನ ಮೆಚ್ಚಿ ಮಮತೆ ಹರಿಸುತ್ತಿದ್ದ ನಿನ್ನ ಅಪ್ಪ, ನಮ್ಮಿಬ್ಬರನ್ನೂ ಪೂರ್ಣಗೊಳಿಸಿದ ಆ ಹಾಡು, ನನ್ನ ಹಾಸಿಗೆಯ ಈ ಬದಿ, ನಿನ್ನ ಬೆರಳಿಗಂಟಿದ ಆ ಕುಂಕುಮದ ಹುಡಿ ಮತ್ತು ಮತ್ತು ಬದುಕಿನಲ್ಲೊಂದೇ ಬಾರಿ ಎನ್ನುವಂತೆ ಅನುಭವಕ್ಕೆ ಬಂದ ಆ ಎತ್ತರ!

ದೇವರೇ… ನನಗೇನಾಗುತ್ತಿದೆ. ಇದೆಲ್ಲವೂ ನನ್ನ ನಿಯಂತ್ರಣ ತಪ್ಪಿ ಕಣ್ಣನೋಟದ ಮೂಲಕ ಚೆಲ್ಲಿಹೋಯಿತೇ ಅಲ್ಲಿ? ಅವನಿಗೆ ಅದೆಲ್ಲವೂ ತಿಳಿಯುತ್ತಿದೆಯೇ?

ನನ್ನನ್ನೇ ನೋಡುತ್ತಿದ್ದವ ‘ಹೊರಡುವ ಮುನ್ನ ಆಫೀಸಿಗೆ ಬಂದುಹೋಗು… ಗಿ. ಒಂದು ಪ್ರಾಜೆಕ್ಟ್ ಕುರಿತು ಮಾತಾಡಬೇಕಿತ್ತು’ ಅಂದ. ಅದೇ… ಅದೇ ಬೇಕಿದ್ದಿದ್ದು ನನಗೂ, ‘ನನ್ನ ಹೊಸ ಪುಸ್ತಕ ಕೊಡಬೇಕಿದೆ’ ತುಸು ಸ್ವರ ಏರಿಸಿದೆ. ತೋರಿಕೆಯ ಆತ್ಮವಿಶ್ವಾಸ ಅದು. ಏನಿದ್ದರೂ ನನ್ನ ದಾರಿಯಲ್ಲಿ ಹಾಡು ಉಳಿದಿರುತ್ತವೆ ಮತ್ತು ಅವು ನನಗಾಗಿಯೇ ಕಾಯುತ್ತವೆ ಅಂತ ತಿಳಿಸಬೇಕಿದ್ದ ಡೌಲು. ನೆರೆತ ಮೀಸೆಯಡಿ ಮಳ್ಳನಗು ನಕ್ಕಿದ್ದು ಕಂಡಿತು.

ಎಂದೋ ಪಡೆದಿದ್ದ ಮುತ್ತಿನ ಉಪ್ಪು ಈಗ ನಾಲಿಗೆಗೆ ತಾಗಿದವನಂತೆ ಕೆಳತುಟಿ ಒಳಕ್ಕೆಳೆದು ಹಗೂರ ಜೀವದಲ್ಲಿ ಆಗಲೆಂಬಂತೆ ಹೆಬ್ಬೆರಳನ್ನೆತ್ತಿದ. ಬಲಕ್ಕೆ ಹೊರಳಿಕೊಂಡೆ. ಮೂರುವರೆ ನಿಮಿಷದಲ್ಲಿ ಘಟಿಸಿದ ಈ ಹಿತವಾದ ಅಚಾತುರ್ಯಕ್ಕೆ ಆ ಮೆಟ್ಟಿಲುಗಳು ಬೆರಗಾಗಿದ್ದವು. ಆ ಮಹಡಿಯ ಗೋಡೆಗಳು ಮಾಗಿಯ ಹಗಲು ಸುರಿಯುತ್ತಿದ್ದ ಉರಿ ಯಲ್ಲೂ ತಂಪಾಗಿದ್ದವು. ಒಳಗೆ ಹೋದೊಡನೆ ಬಾಗಿಲಲ್ಲಿ ನಿಂತಿದ್ದ ಹುಡುಗಿ ‘ಇಲ್ಲಿ ಸೈನ್ ಹಾಕಿ ಮ್ಯಾಡಮ್ ಅಂತ ರಿಜಿಸ್ಟರ್‌ ಪುಸ್ತಕ ಕೊಟ್ಟಳು.

ಎಂದಿನಂತೆ ನ… ಅಂತ ಬರೆದು ತಳಕೊಂದು ಗೆರೆ ಎಳೆದವಳು ಒಮ್ಮೆಗೆ ಬೆಚ್ಚಿಬಿದ್ದೆ.

ಇದು ಎಂದೋ ಸತ್ತುಹೋದ ಮೊದಲ ಪ್ರೇಮದ ಕಳೇಬರ! ಒಣಗಿ ಹಕ್ಕಳೆಯಾದ ಮೇಲೂ ಹೊತ್ತು ತಿರುಗುತ್ತಿದ್ದೇನೆ!!
ಯಾಕೆ ಬಿಟ್ಟು ಹೋದದ್ದು ನನ್ನ ಅವನು??
ಇಂದಾದರೂ ಕೇಳಿಬಿಡಲಾ ನಾನು??
nandinihm.1975@gmail.com

andolanait

Recent Posts

59 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…

1 hour ago

ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ ಮೋರಿ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…

1 hour ago

ನಾನು ಅಶ್ಲೀಲ ಪದ ಬಳಸಿಲ್ಲ : ಪೊಲೀಸರ ಬಳಿ ಸಿ.ಟಿ ರವಿ ಹೇಳಿಕೆ

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…

2 hours ago

ವೈದ್ಯ ಮೇಲೆ ಹಲ್ಲೆ: ದೂರು ದಾಖಲು

ಮೈಸೂರು: ನಗರದ ಅಲ್‌ ಅನ್ಸಾರ್‌ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ  ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…

2 hours ago

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

4 hours ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

4 hours ago