ಅಂಕಣಗಳು

ಮಾಡೋನಿಗೆ ಮೂರು ಹಣ… ಹೇಳೋನಿಗೆ ಆರು ಹಣ

 ಎನ್. ಕೇಶವಮೂರ್ತಿ

ನಾನು ತೀರ್ಥಹಳ್ಳಿ ಸಮೀಪದ ಒಬ್ಬ ದೊಡ್ಡ ಹಿಡುವಳಿ ಹೊಂದಿರುವ ಅಡಕೆ ಬೆಳೆಗಾರನನ್ನು ಭೇಟಿ ಮಾಡಲು ಹೋಗಿದ್ದೆ. ಅವರ ಅಡಕೆ ತೋಟ ತಂಪಾಗಿತ್ತು. ಅಡಕೆಗೆ ಹಬ್ಬಿಸಿದ್ದ ಕಾಳುಮೆಣಸು, ವೀಳ್ಯದೆಲೆ ಹಂಬು ನಳನಳಿಸುತ್ತಿತ್ತು. ದೂರದಲ್ಲಿ ಜನರ ಸದ್ದು ಕೇಳುತ್ತಿತ್ತು. ಹತ್ತಿರ ಹೋದೆ ಅಲ್ಲಿ ಹತ್ತಾರು ಜನ ಕೆಲಸಗಾರರು ಖಾಕಿ ಚಡ್ಡಿ ಧರಿಸಿ ಎಲೆ ಹಂಬು ತೆಕ್ಕೆ ಇಳಿಸ್ತಾ ಇದ್ದರು. ಪ್ರತಿಯೊಬ್ಬರೂ ಒಂದೊಂದು ಕೆಲಸದಲ್ಲಿ ನಿರತರಾಗಿದ್ದರು. ನಾನು ಅಲ್ಲಿರುವ ಒಬ್ಬ ಕೆಲಸಗಾರನನ್ನು ಕೇಳಿದೆ.

‘ನಾನು ದೂರದಿಂದ ಬಂದಿದ್ದೇನೆ, ಈ ತೋಟದ ಮಾಲೀಕರನ್ನು ನೋಡಬೇಕಿತ್ತು’ ಎಂದೆ.

ಅದಕ್ಕೆ ಆತ ಹೇಳಿದ, `ಓ ಯಜಮಾನರಾ, ಅಗೋ ಅಲ್ಲಿ ಗುಡಿಸಲಿದೆಯಲ್ಲಾ ಅಲ್ಲಿ ಕುಳಿತಿರಿ. ನಾನು ಅವರನ್ನು ಕರೆದುಕೊಂಡು ಬರುತ್ತೀನಿ’ ಅಂದ. ನಾನು ಹೋಗಿ ಕುಳಿತೆ. ಹತ್ತು ನಿಮಿಷದಲ್ಲಿ ಒಬ್ಬ ಎಳನೀರು ತಂದ, ಮತ್ತೊಬ್ಬ ಬಾಳೆಹಣ್ಣು ತಂದ.

ನಾನು ‘ಯಜಮಾನರೆಲ್ಲಪ್ಪಾ?’ ಅಂದೆ. ‘ಬರ್ತಾರೆ ಕುಳಿತಿರಿ’ ಅಂದ ಅವ. ಒಂದು ಗಂಟೆ ಆಯ್ತು. ಅಷ್ಟರಲ್ಲಿ ಎಲೆ ಹಂಬಿನ ತೆಕ್ಕೆ ಇಳಿಸುವ ಕೆಲಸವೂ ಮುಗಿದಿತ್ತು. ಮತ್ತೊಬ್ಬ ಕೆಲಸಗಾರ ಬೆವರೊರೆಸುತ್ತಾ ನನ್ನೆದುರು ಬಂದು ನಿಂತ. ‘ಅಯ್ಯಾ ಕಾದು ಕಾದು ಸಾಕಾಗಿದೆ, ಈಗಲಾದರೂ ಯಜಮಾನರನ್ನು ಕರಿತೀಯಾ?’ ಕೇಳಿದೆ. ಆತ ನಿಧಾನವಾಗಿ ನುಡಿದ, ‘ಕ್ಷಮಿಸಿ, ನಾನೇ ಈ ತೋಟದ ಯಜಮಾನ. ನಿಮ್ಮನ್ನು ಕಾಯಿಸಿಬಿಟ್ಟೆ’ ಅಂದ. ನಾನು ಅವಕ್ಕಾದೆ.

ಅವರು ನಗುನಗುತ್ತಾ ಹೇಳಿದರು, “ನನ್ನ ತಂದೆ ಯಾವಾಗಲೂ ಹೇಳೋರು, ‘ಮಾಡೋನಿಗೆ ಮೂರು ಹಣ ಆದ್ರೆ ಹೇಳೋನಿಗೆ ಆರು ಹಣ’ ಎಂದು. ಅವರ ಗರಡೀಲೇ ನಾನು ಬೆಳೆದಿದ್ದು. ಹಾಗಾಗಿ ನನಗೆ ಎಲ್ಲ ಕೆಲಸಾನೂ ಗೊತ್ತು. ನಾನು ನನ್ನ ಕೆಲಗಾರರಿಗೆ ಹೇಳ್ತಿರ್ತೀನಿ. ನಾನು ಮಾಡುವ ಕೆಲಸದಲ್ಲಿ ಅರ್ಧ ಮಾಡಿ ಸಾಕು ಅಂತಾ. ನಾನು ಹೇಳಿ, ನಿಂತು ಕೆಲಸ ಮಾಡಿ ತೋರಿಸದಿದ್ದರೆ ಅವರು ಮಾಡುವುದಿಲ್ಲ. ಮಾಲೀಕ ಆದವನು, ಆಳಿಗೆ ಕೆಲಸ ಹೇಳಿ ಊರೂರು ತಿರುಗೋಕೆ ನಿಂತರೆ ತೋಟ ಹಾಳು, ನೆಮ್ಮದಿಯೂ ಇರುವುದಿಲ್ಲ ನೋಡಿ’ ಅಂದರು. ಅದಕ್ಕೆ ಅಲ್ಲವೇ ನೀವು ಕೃಷಿ

ಪಂಡಿತರಾದದ್ದು ಅಂತ ಮನದಲ್ಲೇ ಅಂದುಕೊಂಡೆ.

ಆದರೂ ಕೇಳಿದೆ ‘ಅಲ್ಲಾ ಸ್ವಾಮಿ, ಕೆಲಸ ಮಾಡೋದು ಕಷ್ಟ, ಹೇಳೋದು ಸುಲಭ ಅಲ್ವಾ. ಹೀಗಾಗಿ ಮಾಡೋನಿಗೆ ಜಾಸ್ತಿ ಹಣ ಬರಬೇಕು ಅಲ್ವಾ?’

ಅವರು ಜೋರಾಗಿ ನಕ್ಕರು. ‘ನೋಡಿ, ನಾನು ಆಳುಗಳಿಗೆ ಈ ಎಲೆ ಹಂಬು ತೆಕ್ಕೆ ಬಿಡ್ರಯ್ಯಾ ಅಂತಾ ಹೇಳಿದೆ. ಆಗ ಅವರು ಹೇಳಿದ್ರು, ಅಯ್ಯಾ ನಮಗೆ ಇದು ಹೊಸದು. ಸ್ವಲ್ಪ ತೋರಿಸ್ತೀರಾ ಅಂತಾರೆ. ಆಗ ಏನು ಮಾಡ್ತೀರಾ? ನೀವು ಮಾಡಿ ತೋರಿಸಬೇಕು ತಾನೆ. ಅಲ್ಲಿಗೆ ಹೇಳೋನಿಗೆ, ಮಾಡೋನಿಗಿಂತ ಜಾಸ್ತಿಯಾಗಿ ಅನುಭವ ಇರಬೇಕು ತಾನೆ? ಅದಕ್ಕೇ ಜಾಸ್ತಿ ಹಣ’ ಅಂದು ಪಕ್ಕದಲ್ಲಿರುವ ಬದುವಿನಲ್ಲಿ ಕುಳಿತರು. ನಾನೂ ಕುಳಿತೆ.

ಸುಧಾರಿಸಿಕೊಂಡು ಅವರೇ ಹೇಳಿದರು. ‘ನಮ್ಮಪ್ಪ ನಮ್ಮನ್ನು ತೋಟದಲ್ಲಿ ಮಕ್ಕಳಂತೆ ಕಾಣಿರಲಿಲ್ಲ. ಇಲ್ಲಿ ನಾನೂ ಒಬ್ಬ ಕೆಲಸಗಾರನ ಹಾಗೇ ನಮ್ಮಪ್ಪನೂ ಒಬ್ಬ ಕೆಲಸಗಾರ. ವ್ಯವಸಾಯ ನಾಲ್ಕು ಗೋಡೆಗಳ ನಡುವೆ ಪಡೆಯುವ ಶಿಕ್ಷಣ ಅಲ್ಲ. ಭೂಮಿಯ ಒಡಲಲ್ಲಿ ಪ್ರಾಯೋಗಿಕವಾಗಿ ಪಡೆಯುವ ಜ್ಞಾನ. ಈಗಿನ ಮಕ್ಕಳಿಗೆ ಮೇಣಿ ಹಿಡಿಯಲೂ ಬರೋಲ್ಲ, ಎತ್ತು ಹೂಡಲು ಬರೋಲ್ಲ, ಸರಿಯಾಗಿ ಸಾಲು ಹಿಡಿದು ಉಳಲು ಬರೋಲ್ಲ, ಸನಿಕೆ ಹಿಡಿದು ಮಣ್ಣು ಕೆಲಸ ಮಾಡೋಕೆ ಬರೋಲ್ಲ. ನಮ್ಮ ದುರದೃಷ್ಟ ಯಾವ ಕಾಲೇಜೂ ಈ ಪ್ರಾಯೋಗಿಕ ಜ್ಞಾನವನ್ನು ಕಲಿಸುವುದಿಲ್ಲ. ಮಾತೆತ್ತಿದ್ರೆ ಯಂತ್ರ ಅಂತಾರೆ. ಕೃಷಿಯ ಎಲ್ಲ ಕೆಲಸಗಳನ್ನು ಯಂತ್ರಗಳಿಂದಲೇ ಮಾಡಲು ಸಾಧ್ಯವೇ? ಆಗೋಲ್ಲ. ಎತ್ತು ಬೇಕು, ನುರಿತ ಕೆಲಸಗಾರರು ಬೇಕು, ಸಾಧನ ಸಲಕರಣೆ ಇರಬೇಕು, ಹೇಳೋನಿಗೆ ತಿಳಿದಿರಬೇಕು, ಪ್ರಾಯೋಗಿಕ ಅನುಭವ ಇರಬೇಕು, ಆಗ ತೋಟತುಡಿಕೆ ನೋಡುವ ಹಾಗಿರುತ್ತೆ. ನಿಮ್ಮಂತಹವರು ಬಂದು

ನೋಡುವಂತಿರುತ್ತದೆ’ ಎಂದು ‘ಬನ್ನಿ, ಎಲ್ಲರಿಗೂ ಊಟ ಬಂದಿದೆ ಮಾಡೋಣ’ ಎಂದ. ಹೇಳಿದ ಹಾಗೇ ಎಲ್ಲರಿಗೂ ಒಂದೇ ಊಟ. ಮಾಲೀಕ, ಕಾರ್ಮಿಕ ಭೇದವಿಲ್ಲ. ಎಲ್ಲರೂ ಬದುವಿನ ಪಕ್ಕದಲ್ಲೇ ಕುಳಿತು, ಸೊಗಸಾದ ಬಾಳೆಲೆಯಲ್ಲಿ ಊಟ ಮಾಡಿದ್ದಾಯ್ತು. ನನ್ನ ಮನದಲ್ಲಿ ಅವರ ಮಾತೇ ಉಳಿಯಿತು. ಮಾಡೋನಿಗೆ ಮೂರು ಹಣ… ಹೇಳೋನಿಗೆ ಆರು ಹಣ. ನಿಮಗೇನನ್ನಿಸುತ್ತೆ? ನಿಜ ತಾನೇ?

keshavamurthy.n@gmail.com

andolanait

Recent Posts

ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆ: ಗರಿಕೆ ಖಂಡಿ ಅರಣ್ಯದಲ್ಲಿ ಶವ ಪತ್ತೆ

ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…

1 hour ago

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…

2 hours ago

ಶ್ರಾವಣ ಮಾಸದ ಕೊನೆಯ ದಿನದ 108 ಕುಂಭಾಭಿಷೇಕ: ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಭಕ್ತಿ ವೈಭವ

ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…

3 hours ago

ಹನೂರು| ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಮೂವರು ಯುವಕರು ದುರ್ಮರಣ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…

4 hours ago

ಓದುಗರ ಪತ್ರ: ದಸರಾ ಚಿತ್ರೋತ್ಸವ ಮುಂದುವರಿಯಲಿ

ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…

9 hours ago

ಓದುಗರ ಪತ್ರ: ಫಿಲಂ ಸಿಟಿ ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ

ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…

9 hours ago