Andolana originals

ಸಂಪುಟ ವಿಸ್ತರಣೆ ವಿಳಂಬ; ಡಿಕೆಶಿ ಅಸಮಾಧಾನ

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ 

ಸರ್ಕಾರ ಟೇಕಾಫ್ ಆಗಲು ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಅನಿವಾರ್ಯ

ಕಳೆದ ವಾರ ಸಚಿವ ಸಂಪುಟ ವಿಸ್ತರಣೆಯ ಕುರಿತಂತೆ ಮಾತುಕತೆಗೆ ದಿಲ್ಲಿಗೆ ಹೋಗಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಸಮಾಧಾನ ಗೊಂಡಿದ್ದರಂತೆ.

ಕಾರಣ ತಮ್ಮ ಸಚಿವ ಸಂಪುಟದ ವಿಸ್ತರಣೆಯ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ದಿಲ್ಲಿಯಲ್ಲಿ ಸೇರಿದ್ದ ಪಕ್ಷದ ನಾಯಕರ ಸಭೆ ಇನ್ನೇನು ಆರಂಭವಾಗಬೇಕು. ಅಷ್ಟರಲ್ಲೇ ರಾಹುಲ್ ಗಾಂಧಿಯವರಿಗೆ ಒಂದು ಕರೆ ಬಂದಿದೆ. ಈ ಕರೆ ಬಂದಿದ್ದೇ ತಡ, ರಾಹುಲ್ ಗಾಂಧಿ ಅವರು ಎದ್ದು ಹೋಗಿದ್ದಾರೆ. ಹೀಗೆ ಅವರು ಅಲ್ಲಿಂದ ಹೋಗಿದ್ದು ನೀಟ್ ಪರೀಕ್ಷೆಯ ಆಕ್ರಮಗಳವಿರುದ್ಧ ಕಾಕ್ರೋಚ್‌ಜನತಾ ಪಕ್ಷ ನಡೆಸುತ್ತಿದ್ದ ಧರಣಿಯಲ್ಲಿ ಪಾಲ್ಗೊಳ್ಳಲು. ಹೀಗೆ ಅವರು ಅಲ್ಲಿಗೆ ಹೋಗಿದ್ದೇ ತಡ, ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದ ಮಾತುಕತೆ ಅಲ್ಲಿಗೆ ಬರಕಾಸ್ತಾಗಿದೆ.

ಯಾವಾಗ ಈ ಬೆಳವಣಿಗೆ ನಡೆಯಿತೋ ಆಗ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವ ಕುರಿತಂತೆ ರಾಜ್ಯದ ನಾಯಕರೊಬ್ಬರು ಪಕ್ಷದ ಹಿರಿಯ ನಾಯಕರೊಬ್ಬರ ಬಳಿ ಪ್ರಶ್ನಿಸಿದ್ದಾರೆ. ಹೀಗೆ ವಿಳಂಬವಾಗುತ್ತಾ ಹೋದರೆ ಸರ್ಕಾರಕ್ಕೆ ಶಕ್ತಿ ದಕ್ಕುವುದು ಯಾವಾಗ? ಎಂದು ಕೇಳಿದ್ದಾರೆ. ಅದಕ್ಕೆ ಆ ನಾಯಕರು: ನೀವು ಹೇಳಿದ್ದು ನಿಜ. ಆದರೆ ಕಾಕ್ರೋಚ್ ಜನತಾ ಪಾರ್ಟಿಯ ಧರಣಿಯಲ್ಲಿ ಪಾಲ್ಗೊಳ್ಳಲು ಹೋದ ರಾಹುಲ್ ಗಾಂಧಿಯವರಿಗೆ ಈ ಪ್ರಶ್ನೆ ಕೇಳಿದರೆ ಅವರು ಸಿಟ್ಟಿಗೇಳುತ್ತಾರೆ. ನಿಮಗೆ ಅಷ್ಟು ಅರ್ಜೆಂಟಾಗಿ ಅಧಿಕಾರ ಬೇಕೇ ಎಂದು ಕೇಳುತ್ತಾರೆ. ಹೀಗಾಗಿ ಈ ಕುರಿತು ಯಾರೂ ರಾಹುಲ್ ಗಾಂಽಯವರನ್ನು ಪ್ರಶ್ನಿಸುವುದಿಲ್ಲ ಎಂದು ವಿವರಿಸಿದ್ದಾರೆ.

ಇದು ಏನೇ ಇರಲಿ, ಆದರೆ ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಪಡೆದು ಕರ್ನಾಟಕಕ್ಕೆ ಮರಳುವ ಲೆಕ್ಕಾಚಾರದಲ್ಲಿದ್ದ ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ಅಸಮಾಧಾನದಿಂದಲೇ ರಾಜ್ಯಕ್ಕೆ ಮರಳಿದ್ದಾರೆ. ಅಂದ ಹಾಗೆ ರಾಜ್ಯ ಸಚಿವ ಸಂಪುಟದ ಎರಡನೇ ಕಂತಿನ ವಿಸ್ತರಣೆ ಕಾರ್ಯಕ್ಕೆ ಏನಾದರೂ ಅಡ್ಡಿಗಳಿವೆಯಾ ಎಂದರೆ ದಿಲ್ಲಿ ಮೂಲಗಳು ಅದನ್ನು ನಿರಾಕರಿಸುತ್ತವೆ. ಅಷ್ಟೇ ಅಲ್ಲ, ವಿಸ್ತರಣೆಗೆ ಅಗತ್ಯವಾದಂತೆ ನೂತನ ಸಚಿವರು ಯಾರು? ಎಂಬ ಪಟ್ಟಿ ಅದಾಗಲೇ ಸಿದ್ಧವಾಗಿದೆ. ರಾಹುಲ್ ಗಾಂಧೀಯವರು ಒಪ್ಪಿಗೆ ನೀಡಿದರೆ ಮರುದಿನವೇ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಎಂದು ಸ್ಪಷ್ಟಪಡಿಸುತ್ತಿವೆ.ಹೀಗಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಎರಡನೇ ಕಂತಿನ ಸಂಪುಟ ವಿಸ್ತರಣೆ ಈ ವಾರ ಆಗಬಹುದು. ಅಥವಾ ವಿಳಂಬವೂ ಆಗಬಹುದು. ಇಷ್ಟಾದರೂ ಇವತ್ತು ಸಚಿವ ಸಂಪುಟ ವಿಸ್ತರಣೆ ಕಾರ್ಯ ತ್ವರಿತವಾಗಿ ಆಗಲಿ ಎಂದು ಡಿ.ಕೆ.ಶಿವಕುಮಾರ್ ಬಯಸುತ್ತಿರುವುದಕ್ಕೆ ಕೆಲ ಕಾರಣಗಳಿವೆ.

ಅದರ ಪ್ರಕಾರ, ಸರ್ಕಾರ ಟೇಕಾಫ್ ಆಗಲು ಅವರಿಗೆ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಯಾಗಲೇ ಬೇಕು. ಕಾರಣ ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ. ಒಂದು ಸರ್ಕಾರದ ಪರಿಸ್ಥಿತಿ ನೆಟ್ಟಗಿದ್ದಾಗ ಪೂರ್ಣ ಪ್ರಮಾಣದ ಸಚಿವ ಸಂಪುಟ ಇಲ್ಲದಿದ್ದರೂ ಅದನ್ನು ನಿಭಾಯಿಸಬಹುದು. ಆದರೆ ಆರ್ಥಿಕ ಪರಿಸ್ಥಿತಿ ಕಷ್ಟಕರವಾಗಿದ್ದಾಗ ಮುಖ್ಯಮಂತ್ರಿಗಳಾದವರು ಹೆಜ್ಜೆ ಹೆಜ್ಜೆಗೂ ತಮ್ಮ ಸಚಿವ ಸಂಪುಟದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕು. ಏಕೆಂದರೆ ಅವರು ಕೈಗೊಳ್ಳುವ ತೀರ್ಮಾನ ಪರಿಪೂರ್ಣ ಸಂಪುಟದ ತೀರ್ಮಾನವಲ್ಲ ಎಂದಾದರೆ ಅದಕ್ಕೆ ತಕರಾರುಗಳು ಹೆಚ್ಚಾಗಿ ಕೇಳಿ ಬರುತ್ತವೆ.

ಇದನ್ನು ಒಂದಷ್ಟು ವಿಸ್ತ್ತ್ಯೃತವಾಗಿ ನೋಡಬೇಕು ಎಂದರೆ, ಇವತ್ತು ರಾಜ್ಯ ಸರ್ಕಾರದ ಸಾಲದ ಪ್ರಮಾಣ ಎಂಟು ಲಕ್ಷ ಕೋಟಿ ರೂಪಾಯಿಗಳನ್ನು ಮೀರಿದೆ. ಈ ಪ್ರಮಾಣದ ಸಾಲದ ಮೇಲೆ ಪ್ರತಿ ವರ್ಷ ದೊಡ್ಡ ಮೊತ್ತದ ಹಣವನ್ನು ಅಸಲು, ಬಡ್ಡಿ, ಚಕ್ರಬಡ್ಡಿಯ ರೂಪದಲ್ಲಿ ತೀರಿಸಬೇಕಾಗುತ್ತದೆ. ಇವತ್ತು ಸಾಲದ ಮೇಲಿನ ಅಸಲು, ಬಡ್ಡಿ, ಚಕ್ರಬಡ್ಡಿ ಕಟ್ಟುವಕತೆ ಒಂದು ಕಡೆಯಾದರೆ, ಸರ್ಕಾರಿ ನೌಕರರ ವೇತನ, ಪಿಂಚಣಿಯ ಬಾಬ್ತಿನಲ್ಲಿ ಅಪಾರ ಪ್ರಮಾಣದ ಹಣ ಒದಗಿಸುವುದು ಮತ್ತೊಂದು ಕಡೆ, ಈ ಮಧ್ಯೆ ಅಧಿಕಾರಕ್ಕೆ ಬರುವ ಮುನ್ನ ಜನರಿಗೆ ನೀಡಿದ ಐದು ಗ್ಯಾರಂಟಿ ಯೋಜನೆಗಳಿಗೆ ದೊಡ್ಡ ಪ್ರಮಾಣದ ಹಣ ಒದಗಿಸುವ ಅನಿವಾರ್ಯತೆ.

ಈಗ ಅಧಿಕಾರ ಹಿಡಿದ ಮೇಲೆ ಡಿ.ಕೆ.ಶಿವಕುಮಾರ್ ಅವರು ಈ ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಿಸಿ ಪ್ರತಿ ವರ್ಷ ಮಾಡುತ್ತಿರುವ ಐವತ್ತೆರಡು ಸಾವಿರ ಕೋಟಿ ರೂಪಾಯಿಗಳಷ್ಟು ಹಣದ ಪೈಕಿ ಅರ್ಧದಷ್ಟು ಹಣವನ್ನಾದರೂ ಉಳಿಸಬೇಕು ಎಂದು ಬಯಸುತ್ತಿದ್ದಾರೆ. ಅವರ ಬಯಕೆಯ ಪ್ರಕಾರ ಆ ಕೆಲಸ ನಡೆಯತೊಡಗಿದೆ. ಆದರೆ ಇಷ್ಟೆಲ್ಲದರ ನಡುವೆಯೂ ಸರ್ಕಾರದ ವಾರ್ಷಿಕ ಬಜೆಟ್‌ನ ಶೇಕಡಾ ಇಪ್ಪತ್ತೈದರಷ್ಟು ಹಣ ಮಾತ್ರ ಅಭಿವೃದ್ಧಿ ಯೋಜನೆಗಳಿಗೆ ಒದಗಿಸಲಾಗಿದೆ. ಆದರೆ ಅಭಿವೃದ್ಧಿ ಯೋಜನೆಗಳಿಗೆ ಒದಗಿಸಿದ ಹಣವನ್ನು ಪೂರ್ಣ ಪ್ರಮಾಣದಲ್ಲಿ ಖರ್ಚು ಮಾಡಲಾಗುತ್ತದೆ ಅಂತಲ್ಲ. ಏಕೆಂದರೆ ಅನಿರೀಕ್ಷಿತ ಖರ್ಚುಗಳು ಬಂದರೆ ಸರ್ಕಾರ ತನ್ನ ಬಜೆಟ್ನಲ್ಲಿರುವ ಯೋಜನೇತರ ಬಾಬ್ತಿನ ಹಣವನ್ನು ಕಡಿತ ಮಾಡಲು ಸಾಧ್ಯವಿಲ್ಲ. ಬದಲಿಗೆ ಅಭಿವೃದ್ಧಿಗೆ ಮೀಸಲಿಟ್ಟ ಯೋಜನೆ ಬಾಬ್ತಿನ ಹಣವನ್ನೇ ಕಿತ್ತು ಕೊಡಬೇಕು.

ಇದೆಲ್ಲ ಸಂಕಟಗಳು ಒಂದು ಕಡೆಗಾದರೆ ಈ ಹಿಂದೆ ಅಧಿಕಾರದಲ್ಲಿದ್ದಬಿಜೆಪಿ ಸರ್ಕಾರ ಮಾಡಿಟ್ಟು ಹೋದ ಹಳವಂಡಗಳು ಬೇರೆ. ಅದರ ಪೈಕಿ ಮುಖ್ಯವಾದುದು ಎಂದರೆ ಬಜೆಟ್ ಅನುಮೋದನೆ ಇಲ್ಲದೆಯೂ ಜಲಸಂಪನ್ಮೂಲ ಇಲಾಖೆಯಲ್ಲಿ ನಲವತ್ತ್ತ್ಯೈದು ಸಾವಿರ ಕೋಟಿರೂಪಾಯಿಗಳಷ್ಟು ಹೆಚ್ಚುವರಿ ಹಣವನ್ನು ವಿವಿಧ ಯೋಜನೆಗಳಿಗೆ ಮಂಜೂರು ಮಾಡಿರುವುದು. ಈ ಮಧ್ಯೆ ಸರ್ಕಾರಿ ಕಾಮಗಾರಿಗಳ ಕತೆ ಹೇಗಾಗಿದೆ ಎಂದರೆ, ಸರ್ಕಾರ ವಹಿಸುವ ಗುತ್ತಿಗೆ ಕಾರ್ಯವನ್ನು ಕೈಗೆತ್ತಿಕೊಳ್ಳಲು ರಾಜ್ಯದ ಬಹುತೇಕ ಗುತ್ತಿಗೆದಾರರು ಸಿದ್ಧರಿಲ್ಲ. ಕಾರಣ ಅವರು ಈ ಹಿಂದೆ ಮಾಡಿದ ಸರ್ಕಾರಿ ಕಾಮಗಾರಿಗಳ ಬಾಕಿ ಹಣವೇ ಅವರಿಗೆ ಬಂದಿಲ್ಲ.

ಸರ್ಕಾರದ ಕಾಮಗಾರಿಗಳನ್ನು ಮಾಡಿದರೂ ಬಾಕಿ ಹಣ ಬಂದಿಲ್ಲ ಎಂದರೆ ಗುತ್ತಿಗೆದಾರರು ಏಕೆ ಮತ್ತೆ ಸರ್ಕಾರದ ಟೆಂಡರ್‌ಗಳನ್ನು ವಹಿಸಿಕೊಳ್ಳಲು ಸಿದ್ಧರಾಗುತ್ತಾರೆ. ಹೀಗಾಗಿಯೇ ಸರ್ಕಾರದ ಆಡಳಿತ ಯಂತ್ರದ ಮೇಲೆ ಸಾಕಷ್ಟು ಪ್ರತಿಕೂಲ ಪರಿಣಾಮಗಳಾಗಿವೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ನೆರವಾದರೂ ಸಮರ್ಪಕ ಪ್ರಮಾಣದಲ್ಲಿ ಬರುತ್ತಿದೆಯೇ ಎಂದರೆ ಅದೂ ಇಲ್ಲ. ಒಂದು ಅಂದಾಜಿನಪ್ರಕಾರ ಜಿಎಸ್‌ಟಿ, ಆದಾಯ ತೆರಿಗೆ ಸೇರಿದಂತೆ ವಿವಿಧ ಬಾಬ್ತಿನಡಿವಾರ್ಷಿಕ ನಾಲ್ಕು ಲಕ್ಷದ ಐವತ್ತು ಸಾವಿರ ಕೋಟಿ ರೂಪಾಯಿಗಳಷ್ಟು ಹಣ ಕೇಂದ್ರ ಸರ್ಕಾರದ ಬೊಕ್ಕಸ ಸೇರುತ್ತದೆ. ಆದರೆ ಇಷ್ಟು ಪ್ರಮಾಣದ ಹಣ ಹೋದರೂ ವಿಬಿ ಜಿರಾಮ್‌ಜಿ ಯೋಜನೆ ಸೇರಿದಂತೆ ರಾಜ್ಯದಲ್ಲಿ ಜಾರಿಯಾಗುವ ಕೇಂದ್ರದ ಅನುದಾನಿತ ಯೋಜನೆಗಳಿಗೆ ಸುಮಾರು ಐವತ್ತು ಸಾವಿರ ಕೋಟಿ ರೂಪಾಯಿ ಮಾತ್ರ ಬರುತ್ತದೆ. ಇಂತಹ ಕಠಿಣ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದವರು ತಮ್ಮ ಸಚಿವ ಸಂಪುಟದ ಪರಿಪೂರ್ಣ ಬಲವನ್ನು ಬಳಸಿ ಮುನ್ನಡೆಯ ಬೇಕಾಗುತ್ತದೆ.ಆದರೆ ಮೇಲಿಂದ ಮೇಲೆ ದಿಲ್ಲಿಗೆ ಹೋದರೂ, ವರಿಷ್ಠರನ್ನು ಕೇಳಿಕೊಂಡರೂ ಸಂಪುಟ ವಿಸ್ತರಣೆಯ ಆಟಕ್ಕೆ ಚಾಲನೆ ಸಿಗುತ್ತಿಲ್ಲ. ಪರಿಣಾಮ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಸಮಾಧಾನಗೊಂಡಿದ್ದಾರೆ. ತಮ್ಮ ಪರಿಪೂರ್ಣ ಪ್ರಮಾಣದ ಸಂಪುಟದ ದಾರಿಯನ್ನು ಅವರೂ ಕಾಯುತ್ತಲೇ ಇದ್ದಾರೆ.

” ರಾಜ್ಯ ಸಚಿವ ಸಂಪುಟದ ಎರಡನೇ ಕಂತಿನ ವಿಸ್ತರಣೆ ಕಾರ್ಯಕ್ಕೆ ಏನಾದರೂ ಅಡ್ಡಿಗಳಿವೆಯಾ ಎಂದರೆ ದಿಲ್ಲಿ ಮೂಲಗಳು ಅದನ್ನು ನಿರಾಕರಿಸುತ್ತವೆ. ಅಷ್ಟೇ ಅಲ್ಲ, ವಿಸ್ತರಣೆಗೆ ಅಗತ್ಯವಾದಂತೆ ನೂತನ ಸಚಿವರು ಯಾರು? ಎಂಬ ಪಟ್ಟಿ ಅದಾಗಲೇ ಸಿದ್ಧವಾಗಿದೆ. ರಾಹುಲ್ಗಾಂಧಿಯವರು ಒಪ್ಪಿಗೆ ನೀಡಿದರೆ ಮರುದಿನವೇ ಪ್ರಕ್ರಿಯೆಪೂರ್ಣಗೊಳ್ಳುತ್ತದೆ ಎಂದು ಸ್ಪಷ್ಟಪಡಿಸುತ್ತಿವೆ.”

 

 

ಆಂದೋಲನ ಡೆಸ್ಕ್

Recent Posts

ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಸರ್ಕಾರ ಮಣಿಸಿದ ಜೆನ್ ಝೀ ಚಳವಳಿ

ದೇಶ ಆಳುವ ವರ್ಗದ ಏಕಚಕ್ರಾಧಿಪತ್ಯವನ್ನು ವಿರೋಧಿಸಿ ನಡೆದ ಚಳವಳಿ ಸರ್ಕಾರವನ್ನು ಮಂಡಿಯೂರುವಂತೆ ಮಾಡಿದೆ. ದೇಶಾದ್ಯಂತ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ…

3 mins ago

ಕೃಷಿಗೆ ನೀರಿಲ್ಲ ಎಂಬ ಆದೇಶದಿಂದ ರೈತರು ಕಂಗಾಲು

ಆನಂದ್ ಹೊಸೂರು ಚುಂಚನಕಟ್ಟೆ ಹೋಬಳಿಯಲ್ಲಿ ಭತ್ತ ಬೆಳೆಯುತ್ತಿದ್ದ ರೈತರಿಗೆ ಈಗ ಸಂಕಷ್ಟದ ಸ್ಥಿತಿ ಹೊಸೂರು: ಕಾವೇರಿ ನೀರು ಕುಡಿಯಲು ಮಾತ್ರ,…

12 mins ago

ರಸ್ತೆ ಬದಿ ಅಗೆದು ಹಾಗೆಯೇ ಬಿಟ್ಟ ಗುತ್ತಿಗೆದಾರರು

ಮಹೇಂದ್ರ ಹಸಗೂಲಿ ಸಂಚಾರಕ್ಕೆ ಅಡಚಣೆ; ಬಿಎಸ್‌ಎನ್‌ಎಲ್ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ ಗುಂಡ್ಲುಪೇಟೆ: ಬಿಎಸ್‌ಎನ್‌ಎಲ್‌ನಿಂದ ನೇಮಿಸಲ್ಪಟ್ಟಿರುವ ಗುತ್ತಿಗೆದಾರರು ಕೇಬಲ್…

18 mins ago

ಎಕ್ಸ್ ಬಿಟ್ಟು ಇನ್‌ಸ್ಟಾ ಹಿಡಿದ ರಾಜಕಾರಣ : ಮೋದಿಗೆ ಜೆನ್-ಝೀ ಕಾಟ

ನವದೆಹಲಿ : ದೇಶದ ರಾಜಕೀಯದ ಭಾಷೆ ಬದಲಾಗುತ್ತಿದೆ. ಒಮ್ಮೆ ಟ್ವಿಟರ್, ಈಗಿನ ಎಕ್ಸ್‌ನಲ್ಲಿ ನಡೆಯುತ್ತಿದ್ದ ವಾಗ್ವಾದ, ಟ್ರೆಂಡ್‌ಗಳು ಈಗ ಇನ್‌ಸ್ಟಾಗ್ರಾಂ…

12 hours ago

ಓದುಗರ ಪತ್ರ: ಕಠಿಣ ಕ್ರಮ ಅಗತ್ಯ

ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಶ್ರಮಪಡುವುದು ಗೊತ್ತಿರುವ ವಿಷಯವೇ. ವೃತ್ತಿಪರ ಕೋರ್ಸ್‌ಗಳು ಮತ್ತು ನಂತರ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ವಿದ್ಯಾರ್ಥಿಗಳು…

21 hours ago