Andolana originals

ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಸರ್ಕಾರ ಮಣಿಸಿದ ಜೆನ್ ಝೀ ಚಳವಳಿ

ದೇಶ ಆಳುವ ವರ್ಗದ ಏಕಚಕ್ರಾಧಿಪತ್ಯವನ್ನು ವಿರೋಧಿಸಿ ನಡೆದ ಚಳವಳಿ ಸರ್ಕಾರವನ್ನು ಮಂಡಿಯೂರುವಂತೆ ಮಾಡಿದೆ. ದೇಶಾದ್ಯಂತ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ನಡೆದ ಜೆನ್ ಝೀ ಹೋರಾಟಕ್ಕೆ ಕೇಂದ್ರದ ಎನ್‌ಡಿಎ ಸರ್ಕಾರ ಕೊನೆಗೂ ಮಣಿದಿದೆ. ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಹಾಗೂ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಆಗ್ರಹಿಸಿ ಯುವಜನರು ನಡೆಸಿದ ಪ್ರತಿಭಟನೆ ಸರ್ಕಾರವನ್ನು ಬಗ್ಗಿಸಿದೆ. ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಯುವಜನರ ಈ ಹೋರಾಟವು ಚಳವಳಿಗೆ ಹೊಸ ವ್ಯಾಕರಣವನ್ನೇ ಬರೆದಿದೆ.

ಈ ಬಾರಿಯ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು ಪರೀಕ್ಷೆ ನಂತರ ಬಯಲಾಯಿತು. ಆ ಪರೀಕ್ಷೆಯನ್ನು ರದ್ದುಪಡಿಸಿ ಮರು ಪರೀಕ್ಷೆಗೆ ಆದೇಶಿಸಲಾಯಿತು. ಪ್ರಶ್ನೆಪತ್ರಿಕೆ ಸೋರಿಕೆಯಿಂದ ವಿದ್ಯಾರ್ಥಿಗಳು ಮನನೊಂದರು.

ಸುಮಾರು ೨೦ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ಕಳೆದ ೧೦ ವರ್ಷಗಳಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ೭೦ಕ್ಕೂ ಹೆಚ್ಚು ಬಾರಿ ಸೋರಿಕೆಯಾಗಿದ್ದು, ಆದಾಗ್ಯೂ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರುವಲ್ಲಿ ಸರ್ಕಾರ ಅಲಕ್ಷ್ಯ ಮಾಡಿದ್ದರಿಂದ ಯುವ ಸಮೂಹದ ಆಕ್ರೋಶ ಕಟ್ಟೆಯೊಡೆಯಿತು. ವಿದ್ಯಾರ್ಥಿಗಳು ಪರೀಕ್ಷಾ ಅಕ್ರಮಗಳ ತಡೆಗೆ ಆಗ್ರಹಿಸಿದರು. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ನೈತಿಕ ಹೊಣೆಗಾರಿಕೆಯ ಪ್ರಶ್ನೆ ಎತ್ತಿದರು.

ಕೇಂದ್ರ ಸರ್ಕಾರದಿಂದ ಸಾಂತ್ವನ, ಧೈರ್ಯದ ಮಾತುಗಳನ್ನು ಬಯಸಿದರು. ಆದರೆ, ಸರ್ಕಾರ ಮಾತ್ರ ಎಂದಿನಂತೆ ಜಾಣ ಮೌನಕ್ಕೆ ಜಾರಿತ್ತು. ಪರೀಕ್ಷಾ ಅಕ್ರಮಗಳಿಗೆ ಸರ್ಕಾರದ ವತಿಯಿಂದ ಯಾರೊಬ್ಬರೂ ನೈತಿಕ ಹೊಣೆಗಾರಿಕೆ ಹೊತ್ತುಕೊಳ್ಳಲೇ ಇಲ್ಲ. ತನ್ನ ವೈಫಲ್ಯಗಳಿಗೆ ಉತ್ತರದಾಯಿತ್ವ ತೋರಲಿಲ್ಲ. ಇದು ವಿದ್ಯಾರ್ಥಿಗಳು, ಪೋಷಕರನ್ನು ಕೆರಳಿಸಿತ್ತು.

ಕಾಕ್ರೋಚ್ ಜನತಾ ಪಾರ್ಟಿ ಪರೀಕ್ಷಾ ಅಕ್ರಮ ತಡೆ, ಶಿಕ್ಷಣ ವ್ಯವಸ್ಥೆ ಸುಧಾರಣೆ, ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ ಒಂದು ಕೋಟಿ ರೂಪಾಯಿ ಪರಿಹಾರ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು ಹಿಡಿದು ಚಳವಳಿ ಹೂಡಿತು. ಹೊಸದಿಲ್ಲಿಯ ಜಂತರ್ ಮಂಥರ್‌ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿದರು. ಸಾಮಾಜಿಕ ಕಾರ್ಯಕರ್ತ ಲಡಾಕ್‌ನ ಸೋನಮ್ ವಾಂಗ್ಚುಕ್ ಪ್ರತಿಭಟನಾಕಾರರನ್ನು ಬೆಂಬಲಿಸಿ ಉಪವಾಸ ಸತ್ಯಾಗ್ರಹ ಹೂಡಿದರು. ಆದರೆ, ಸರ್ಕಾರ ಮಾತ್ರ ಅದೇ ಉದಾಸೀನತೆ ತೋರಿತು. ಹಟಮಾರಿ ಧೋರಣೆ ಪ್ರದರ್ಶಿಸಿತು. ಪ್ರತಿಭಟನಾಕಾರರ ಜೊತೆ ಸಂಧಾನದ ಬಾಗಿಲನ್ನೇ ಮುಚ್ಚಿತ್ತು. ಬಲಪ್ರಯೋಗದಿಂದಲೇ ಎಲ್ಲವನ್ನೂ ಸಾಧಿಸಬಹುದು ಎಂಬ ಅಹಂ ಅನ್ನು ಪ್ರದರ್ಶಿಸಿತು.

ವಿದ್ಯಾರ್ಥಿಗಳು ಪಟ್ಟುಬಿಡದೆ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಸತ್ ಚಲೋಗೆ ಕರೆ ನೀಡಿ ಹೊರಟಾಗ ಪೊಲೀಸರು ತಡೆದು ದೌರ್ಜನ್ಯ ನಡೆಸಿದರು. ಅಮಾಯಕ ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗಿಸಿದರು. ಪೆಲೆಟ್ ಗನ್ ಸಿಡಿಸಿದರು. ಅನೇಕರು ಗಾಯಗೊಂಡು ಆಸ್ಪತ್ರೆ ಸೇರಿದರು. ಆದರೆ ಇದ್ಯಾವುದಕ್ಕೂ ಜಗ್ಗದೇ ವಿದ್ಯಾರ್ಥಿಗಳು, ಯುವಜನರು ಪೊಲೀಸರ ದೌರ್ಜನ್ಯಕ್ಕೆ ಎದೆಯೊಡ್ಡಿ ನಿಂತರು. ಪ್ರತಿಭಟನಾಕಾರರು ಸುನಾಮಿಯಂತೆ ದೇಶದ ನಾನಾ ಭಾಗಗಳಿಂದ ಹೊಸದಿಲ್ಲಿಯ ರಸ್ತೆಗಳಿಗೆ ಹರಿದು ಬಂದರು. ದೇಶಾದ್ಯಂತ ಯುವಜನರು, ಪೋಷಕರು, ಹಿರಿಯರು ರಸ್ತೆಗಿಳಿದರು. ಸರ್ಕಾರ ಅನಿವಾರ್ಯವಾಗಿ ಪ್ರತಿಭಟನಾಕಾರರೊಂದಿಗೆ ಸಂಧಾನಕ್ಕೆ ಮುಂದಾಗಬೇಕಾಯಿತು. ವಿದ್ಯಾರ್ಥಿಗಳ ಬೇಡಿಕೆಗಳಿಗೆ ಮಣಿಯಿತು.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು (ಎನ್‌ಟಿಎ) ಸಂಪೂರ್ಣ ಪುನರ್ ರಚಿಸಲು ಕೇಂದ್ರ ಸರ್ಕಾರ ಈಗ ನಿರ್ಧರಿಸಿದೆ. ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ೪೭ ಅಧಿಕಾರಿಗಳನ್ನು ವಜಾಗೊಳಿಸಿದೆ. ಉನ್ನತ ಶಿಕ್ಷಣ ಸಚಿವಾಲಯದ ಕಾರ್ಯದರ್ಶಿಯವರನ್ನು ಎತ್ತಂಗಡಿ ಮಾಡಿದೆ. ವಿಚಾರಣೆಗೆ ತ್ವರಿತಗತಿಯ ನ್ಯಾಯಾಲಯ ಸ್ಥಾಪನೆ ಮಾಡುವುದಾಗಿ ಘೋಷಿಸಿದೆ. ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದವರನ್ನು ಶಿಕ್ಷಿಸಲು ಹೊಸ ಕಾನೂನು ರೂಪಿಸುವ ಭರವಸೆ ನೀಡಿದೆ. ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಆದರೆ, ವಿದ್ಯಾರ್ಥಿ ಸಮೂಹದ ಪ್ರತಿಭಟನೆಯ ಬಿಸಿ ಏರಿದ ನಂತರ ಒತ್ತಡಕ್ಕೆ ಮಣಿದು ಸರ್ಕಾರ ಈ ಕ್ರಮಗಳನ್ನು ಕೈಗೊಂಡಿತೇ ವಿನಾ ಪ್ರಶ್ನೆಪತ್ರಿಕೆ ಸೋರಿಕೆಯಾಗಿ ವಿದ್ಯಾರ್ಥಿಗಳು ಆತ್ಮಹತ್ಯೆ ದಾರಿ ಹಿಡಿದಾಗ ಮೌನವಾಗಿತ್ತು.

ಜಂತರ್‌ಮಂಥರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳು, ಯುವಜನರ ಮೇಲೆ ನಡೆದ ಪೊಲೀಸ್ ದೌರ್ಜನ್ಯದ ಬಗ್ಗೆ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ನ್ಯಾಯಾಲಯವೂ ಈ ಬಗ್ಗೆ ಗಮನ ಹರಿಸಿದೆ. ಮಹಾತ್ಮ ಗಾಂಽ ಅವರ ಕಾಲದಿಂದಲೂ ಅಹಿಂಸಾತ್ಮಕ ಮಾರ್ಗದಲ್ಲೇ ದೇಶವು ಅನೇಕ ಚಳವಳಿಗಳನ್ನು ಕಂಡಿದೆ. ಜೆನ್ ಝೀಗಳ ಈ ಚಳವಳಿಯು ಅಹಿಂಸಾತ್ಮಕ ಮಾರ್ಗದಲ್ಲೇ ಸಾಗಿದ್ದು ಚಳವಳಿಗಾರರು ಯಶಸ್ಸು ಸಾಽಸಿದ್ದಾರೆ. ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು ಹಿಡಿದು ಸರ್ಕಾರವನ್ನೇ ಬಗ್ಗಿಸಿದ್ದಾರೆ. ವಾಟ್ಸಾಪ್ ಪೀಳಿಗೆಯಲ್ಲಿ ಬೆಳೆದು ಅಽಕಾರಕ್ಕೆ ಏರಿ ಹಟಮಾರಿ ಧೋರಣೆ ತಳೆದಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಇನ್ ಸ್ಟಾಗ್ರಾಂ ಪೀಳಿಗೆಯ ಯುವಜನರು ಪಾಠ ಕಲಿಸಿದ್ದಾರೆ. ಇದು ಲೋಪ ಎಸಗುವ ಉಳಿದವರಿಗೂ ಎಚ್ಚರಿಕೆಯ ಘಂಟೆ. ಕೇಂದ್ರದ ಹಾಗೂ ರಾಜ್ಯ ಸರ್ಕಾರಗಳಿಂದ ಜನತೆ ಶಿಕ್ಷಣ ವ್ಯವಸ್ಥೆಯ ಸುಧಾರಣೆಯನ್ನು ನಿರೀಕ್ಷಿಸಿದ್ದಾರೆ. ಸರ್ಕಾರಗಳು ಸಮರೋಪಾದಿಯಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಚಳವಳಿಗಳೇ ಪಾಠ ಕಲಿಸುತ್ತವೆ ಎಂಬುದಕ್ಕೆ ಈ ಬೆಳವಣಿಗೆಗಳೇ ಸಾಕ್ಷಿ.

” ವಾಟ್ಸಾಪ್ ಪೀಳಿಗೆಯಲ್ಲಿ ಬೆಳೆದು ಅಧಿಕಾರಕ್ಕೆ ಏರಿ ಹಟಮಾರಿ ಧೋರಣೆ ತಳೆದಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಇನ್ ಸ್ಟಾಗ್ರಾಂ ಪೀಳಿಗೆಯ ಯುವಜನರು ಪಾಠ ಕಲಿಸಿದ್ದಾರೆ. ಇದು ಲೋಪ ಎಸಗುವ ಉಳಿದವರಿಗೂ ಎಚ್ಚರಿಕೆ ಘಂಟೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಜನತೆ ಶಿಕ್ಷಣ ವ್ಯವಸ್ಥೆಯ ಸುಧಾರಣೆಯನ್ನು ನಿರೀಕ್ಷಿಸಿದ್ದಾರೆ. ಸರ್ಕಾರಗಳು ಸಮರೋಪಾದಿಯಲ್ಲಿ ಶಿಕ್ಷಣ ವ್ಯವಸ್ಥೆಯ ಸುಧಾರಣೆಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಚಳವಳಿಗಳೇ ಪಾಠ ಕಲಿಸುತ್ತವೆ ಎಂಬುದಕ್ಕೆ ಈ ಬೆಳವಣಿಗೆಗಳೇ ಸಾಕ್ಷಿ”

 

 

ಆಂದೋಲನ ಡೆಸ್ಕ್

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

8 hours ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

12 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

12 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

12 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

12 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

12 hours ago