ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ
ಕರ್ನಾಟಕದ ರಾಜಕಾರಣ ಧ್ರುವೀಕರಣದ ನೆಲೆಗಟ್ಟಿಗೆ ಬಂದು ತಲುಪಿದೆ. ಅಂದ ಹಾಗೆ ಧ್ರುವೀಕರಣಕ್ಕೆ ಅಸಮಾ ಧಾನ,ಅತೃಪ್ತಿ,ಭಿನ್ನಾಭಿಪ್ರಾಯಗಳೇ ಮೂಲ ಕಾರಣ. ಅರ್ಥಾತ್, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ಎರಡನೇ ವಿಸ್ತರಣೆಯನ್ನು ಕಂಡ ಬೆನ್ನ ಇಂತಹ ಅಸಮಾಧಾನ, ಅತೃಪ್ತಿ ಮತ್ತು ಭಿನ್ನಾಭಿಪ್ರಾಯಗಳು ಮೇಲೆದ್ದು ಕಂಡಿವೆ.
ಹಾಗಂತ ಇಂತಹ ಅಸಮಾಧಾನ,ಅತೃಪ್ತಿ ಮತ್ತು ಭಿನ್ನಾಭಿಪ್ರಾಯಗಳು ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿಬಿಡುತ್ತವೆ ಎಂದರ್ಥವಲ್ಲ. ಕಾರಣ,ನೂರಾ ನಲವತ್ತರಷ್ಟು ಶಾಸಕರ ಬೆಂಬಲವನ್ನು ಹೊಂದಿರುವ ಕಾಂಗ್ರೆಸ್ ಪಕ್ಷದ ಸರ್ಕಾರ ಸದ್ಯಕ್ಕಂತೂ ಅಲುಗಾಡಲು ಸಾಧ್ಯವಿಲ್ಲ.
ಏಕೆಂದರೆ ಎರಡನೇ ಕಂತಿನ ಸಂಪುಟ ರಚನೆಯ ಸಂದರ್ಭದಲ್ಲಿ ತಮಗೆ ಅವಕಾಶ ಸಿಗಬೇಕು ಎಂದು ಬಯಸಿದ್ದ ಶಾಸಕರೇನಿzರೆ ಇವರ ಪೈಕಿ ಬಹುತೇಕರು ರಾಜೀನಾಮೆ ಕೊಡುವ ಮನ:ಸ್ಥಿತಿಯಲ್ಲಿಲ್ಲ. ಒಂದು ವೇಳೆ ಈಗ ಮಂತ್ರಿಗಿರಿ ಸಿಗದ ಕಾರಣಕ್ಕಾಗಿ ಅಪಸ್ವರ ಎತ್ತಿದವರ ಪೈಕಿ ಹತ್ತಲ್ಲ, ಇಪ್ಪತ್ತು ಮಂದಿ ರಾಜೀನಾಮೆ ಕೊಟ್ಟರೂ ಸರ್ಕಾರಕ್ಕೆ ಯಾವ ತೊಂದರೆಯೂ ಇಲ್ಲ. ಅದೇ ರೀತಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಮುಂದೇನು ಎಂಬ ಪ್ರಶ್ನೆ ಎದುರಾಗುತ್ತದೆ.ಅಷ್ಟೇ ಅಲ್ಲ, ಮುಂದಿನ ಆರು ತಿಂಗಳಲ್ಲಿ ನಡೆಯುವ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಪಡೆಯಬೇಕಾದ ಅನಿವಾರ್ಯತೆ ಅವರ ಮುಂದೆ ಸೃಷ್ಟಿಯಾಗುತ್ತದೆ.
ಇಂತಹ ಅನಿವಾರ್ಯತೆಯನ್ನು ನಿಭಾಯಿಸಬೇಕೆಂದರೆ ಒಂದೋ ರಾಜೀನಾಮೆ ಕೊಡುವ ಶಾಸಕರಿಗೆ ಸ್ವಯಂಬಲವಿರಬೇಕು.ಇಲ್ಲವೇ ಬೇರೆ ಪಕ್ಷಗಳಿಗೆ ವಲಸೆ ಹೋಗಿ ಸ್ಪರ್ಧಿಸಲು ಅವಕಾಶ ಸಿಗಬೇಕು. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ರಾಜ್ಯ ಕಾಂಗ್ರೆಸ್‌ನಲ್ಲಿ ಅಸಮಾಧಾನಿತರು ಅಂತ ಯಾರಿದ್ದಾರೆ. ಅವರಲ್ಲಿ ಬಹುತೇಕರಿಗೆ ಇಂತಹ ರಿಸ್ಕು ತೆಗೆದುಕೊಳ್ಳುವ ಆಸಕ್ತಿ ಇಲ್ಲ. ಒಂದು ವೇಳೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪಚುನಾವಣೆಯಲ್ಲಿ ಸ್ಪರ್ಧಿಸಿದರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಟ್ಟು ಬಿಡದೆ ಯುದ್ಧಕ್ಕಿಳಿಯುತ್ತಾರೆ. ಹೀಗಾಗಿ ರಾಜೀನಾಮೆ ನೀಡಿ ಯುದ್ಧಕ್ಕಿಳಿಯುವ ಆಸಕ್ತಿ ಬಹುತೇಕರಿಗೆ ಇಲ್ಲ. ಶಕ್ತಿ ಇದ್ದವರೂ ಈಗ ಉಪಚುನಾವಣೆಯ ಕಣಕ್ಕಿಳಿಯಲು ಬಯಸುವುದಿಲ್ಲ. ಪರಿಣಾಮ? ಎರಡನೇ ಕಂತಿನ ಸಚಿವ ಸಂಪುಟ ವಿಸ್ತರಣೆಯ ನಂತರ ಭುಗಿಲೆದ್ದಿರುವ ಶಾಸಕರ ಅಸಮಾಧಾನವೇನಿದೆ ಅದು ಮುಂದಿನ ಕೆಲ ಕಾಲದಲ್ಲಿ ತಣ್ಣಗಾಗುತ್ತದೆ.
ಆದರೆ ಹೀಗೆ ಅಸಮಾಧಾನಿತ ಶಾಸಕರು ತಣ್ಣಗಾಗುತ್ತಾರೆ ಎಂದ ಮಾತ್ರಕ್ಕೆ ದೂರಗಾಮಿ ನೆಲೆಯಲ್ಲಿ ಅದರ ವ್ಯತಿರಿಕ್ತ ಪರಿಣಾಮಗಳು ಕಾಣುವುದಿಲ್ಲ ಎಂದಲ್ಲ. ವಸ್ತುಸ್ಥಿತಿ ಎಂದರೆ ತಕ್ಷಣಕ್ಕಲ್ಲದಿದ್ದರೂ ಹಲವು ಶಾಸಕರು ಈಗಾಗಲೇ ಬಿಜೆಪಿ ಮತ್ತು ಜಾ.ದಳ ಜತೆಗಿನ ಬಾಂಧವ್ಯವನ್ನು ಉತ್ತಮಪಡಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಒಂದೆರಡು ಉದಾಹರಣೆಗಳನ್ನು ನೋಡಬೇಕು ಎಂದರೆ, ಡಿ.ಕೆ. ಶಿವಕುಮಾರ್ ಅವರನ್ನು ಯಾವತ್ತೂ ಒಪ್ಪದ ಬೆಂಗಳೂರಿನ ಪಕ್ಕದ ಜಿಯ ಇಬ್ಬರು ಶಾಸಕರು ಈಗಾಗಲೇ ಜಾ.ದಳ ನಾಯಕರ ಜತೆ ಬಾಂಧವ್ಯ ಕುದುರಿಸಿಕೊಂಡಿದ್ದಾರೆ.
ಈ ಪೈಕಿ ಒಬ್ಬರು ಜಾ.ದಳ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರ ಬಗ್ಗೆ ಕಿಡಿ ಕಾರುತ್ತಾ ಇದ್ದವರು.ಆದರೆ ಅವರು ಈಗ ಎರಡನೇ ಕಂತಿನ ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದಂತೆಯೇ, ಇವತ್ತು ನಾನು ಕುಮಾರ ಸ್ವಾಮಿಯವರನ್ನು ನೆನಪಿಸಿಕೊಳ್ಳುತ್ತೇನೆ ಎಂದಿzರೆ. ಕಾರಣ, ಈ ಹಿಂದೆ ಜಾ.ದಳ ಪಕ್ಷದಲ್ಲಿದ್ದು ನಂತರ ಭಿನ್ನಾಭಿಪ್ರಾಯದ ಕಾರಣಕ್ಕಾಗಿ ಆ ಪಕ್ಷವನ್ನು ತೊರೆದಿದ್ದ ಅವರು ಕಾಂಗ್ರೆಸ್ ಪಕ್ಷ ಸೇರಿದ್ದರು. ಆದರೆ ಕಾಂಗ್ರೆಸ್ ಪಕ್ಷ ಸೇರಿ ಗೆಲುವು ಸಾಧಿಸಿದರೂ ಮಂತ್ರಿಗಿರಿಯ ಭಾಗ್ಯ ಸಿಗುತ್ತಿಲ್ಲ. ಆದರೆ ಈ ಶಾಸಕರು ಹಿಂದೆ ಜಾ.ದಳ ಪಕ್ಷದಲ್ಲಿದ್ದಾಗ ಮಂತ್ರಿಯಾಗುವ ನಿರೀಕ್ಷೆ ಇಲ್ಲದಿದ್ದರೂ ಮಂತ್ರಿಯಾಗಿದ್ದರು. ಕಾರಣ, ಮನೆಯಲ್ಲಿ ಕುಳಿತಿದ್ದ ಅವರಿಗೆ ಫ್ಲಾನು ಮಾಡಿದ ಕುಮಾರಸ್ವಾಮಿಯವರು ಮಂತ್ರಿಯಾಗಲು ಸಿದ್ಧರಾಗಿ ಎಂದು ಹೇಳಿದ್ದರು. ಹೀಗೆ ನಿರೀಕ್ಷಿಸದ ಕಾಲದಲ್ಲೂ ತಮಗೆ ಮಂತ್ರಿಗಿರಿ ದಯಪಾಲಿಸಿದ್ದ ಕುಮಾರಸ್ವಾಮಿ ಅವರ ಜತೆಗಿನ ವಿಶ್ವಾಸ ಈ ಶಾಸಕರಿಗೆ ಪುನ: ನೆನಪಾಗು ತ್ತಿದೆ.
ಅರ್ಥಾತ್,ಮುಂದಿನ ಚುನಾವಣೆಯ ಹೊತ್ತಿಗೆ ಅವರು ಜಾ.ದಳ ಪಕ್ಷಕ್ಕೆ ಸೇರಿ ಅದರ ಹುರಿಯಾಳಾಗಲಿದ್ದಾರೆ. ಇದೇ ರೀತಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ವಿರುದ್ಧ ಶರಂಪರ ಅಬ್ಬರಿಸುತ್ತಿದ್ದ ಮಾಜಿ ಸಚಿವ ಪ್ಲಸ್ ಶಾಸಕರೊಬ್ಬರು ಈಗ ಇದ್ದಕ್ಕಿದ್ದಂತೆ ಧ್ವನಿ ಬದಲಿಸಿದ್ದಾರೆ. ಕೇವಲ ತಾವು ಮಾತ್ರವಲ್ಲ, ತಮ್ಮ ಪುತ್ರನಿಗೂ ಜಾ.ದಳ ಪಕ್ಷದ ಟಿಕೆಟ್ ಅನ್ನು ಬಯಸುತ್ತಿದ್ದಾರೆ. ಮೂಲಗಳ ಪ್ರಕಾರ, ಈ ತಂದೆ, ಮಗನಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡಲು ಜಾ.ದಳ ವರಿಷ್ಠರು ಒಪ್ಪಿದ್ದಾರೆ. ಹೀಗೆ ಕಾಂಗ್ರೆಸ್‌ನಿಂದ ಬೇರೆ ಕಡೆ ವಲಸೆ ಹೋಗಲು ನಿರ್ಧರಿಸಿದವರ ಹೆಜ್ಜೆ ಜಡು ಇದು. ಇದರರ್ಥ, ಮುಂದಿನ ವಿಧಾನಸಭಾ ಚುನಾವಣೆಯ ವೇಳೆಗೆ ಒಂದಷ್ಟು ಮಂದಿ ಶಾಸಕರು ತಮ್ಮ ಭವಿಷ್ಯ ನೋಡಿಕೊಳ್ಳಲು ಪರ್ಯಾಯ ದಾರಿಗಳನ್ನು ನೋಡುತ್ತಿದ್ದಾರೆ.
ಗಮನಿಸಬೇಕಾದ ಅಂಶವೆಂದರೆ, ಅವರು ಹೀಗೆ ಯೋಚಿಸಲು ಪೂರಕವಾದ ಹಲವು ಬೆಳವಣಿಗೆಗಳು ಕಾಂಗ್ರೆಸ್‌ನಲ್ಲಿ ನಡೆಯುತ್ತಿವೆ. ಮೊದಲನೆಯದಾಗಿ ಸಿದ್ದರಾಮಯ್ಯ ಅವರು ಚುನಾವಣಾ ನಿವೃತ್ತಿಯನ್ನು ಘೋಷಿಸಿರುವುದು. ಹೀಗೆ ಅವರು ನಿವೃತ್ತಿ ಘೋಷಿಸಿದರೆ ಸಹಜವಾಗಿ ಏನಾಗುತ್ತದೆ? ಅವರ ನಾಯಕತ್ವವನ್ನು ಒಪ್ಪಿಕೊಂಡ ಸಮುದಾಯಗಳು ಪರ್ಯಾಯ ರಾಜಕೀಯ ಶಕ್ತಿಯ ಕಡೆ ನೋಡತೊಡಗುತ್ತವೆ. ಹೀಗೆ ಮತ ಬ್ಯಾಂಕುಗಳು ಪಲ್ಲಟವಾದರೆ ತಮಗೆ ನಷ್ಟವಾಗುವುದು ಗ್ಯಾರಂಟಿ ಎಂಬುದು ಹಲವು ಶಾಸಕರ ಲೆಕ್ಕಾಚಾರ. ಹೀಗಾಗಿ ಮಂತ್ರಿಗಿರಿ ಸಿಗದವರು ಮಾತ್ರವಲ್ಲ, ಉಳಿದ ಬಹುತೇಕರು ಇಂತಹದೇ ಯೋಚನೆಯಲ್ಲಿದ್ದಾರೆ.
ಇದೇ ರೀತಿ ಎರಡನೇ ಕಂತಿನ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ತಾವು ನೆಚ್ಚಿಕೊಂಡ ನಾಯಕರು ತಮ್ಮ ಕೈ ಹಿಡಿಯಲಿಲ್ಲ ಎಂಬ ನೋವು ಬಹುತೇಕ ಎಲ್ಲ ನಾಯಕರ ಹಿಂಬಾಲಕರಲ್ಲೂ ಇದೆ. ಅಂದರೆ, ಇಂತವರು ಕಾಂಗ್ರೆಸ್ ಪಕ್ಷದಲ್ಲಿ ಭದ್ರವಾಗಿರಲು ಯಾವ ನಾಯಕರನ್ನು ನಂಬಿಕೊಂಡಿದ್ದಾವೋ? ಅದೇ ನಾಯಕರು ತಮ್ಮ ಕೈ ಹಿಡಿಯಲಿಲ್ಲ ಎಂದ ಮೇಲೆ ಮುಂದೇನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾರೆ. ಹೀಗೆ ಸಂಪುಟ ವಿಸ್ತರಣೆ ಎಂಬುದು ಕಾಂಗ್ರೆಸ್‌ನ ಬಹುದೊಡ್ಡ ಗುಂಪಿನಲ್ಲಿ ಅಸ್ಥಿರತೆಯ ಭಾವನೆಯನ್ನು ಮೂಡಿಸಿದೆಯಷ್ಟೇ ಅಲ್ಲ, ಮುಂದೆ ತಾವು ಇಡಬೇಕಾದ ಹೆಜ್ಜೆಗಳ ಬಗ್ಗೆ ಯೋಚಿಸುವಂತಾಗಿದೆ. ಪರಿಣಾಮ,ದಿನ ಕಳೆದಂತೆ ಹಲವು ಶಾಸಕರು ಮತ್ತು ಆ ಶಾಸಕರ ಬೆಂಬಲಿಗರು ಪರ್ಯಾಯ ಶಕ್ತಿಗಳ ಕಡೆ ಹೋಗಲು ದಾರಿ ಮಾಡಿಕೊಳ್ಳುತ್ತಾರೆ. ಕರ್ನಾಟಕದ ರಾಜಕಾರಣ ಧ್ರುವೀಕರಣದ ನೆಲೆಗಟ್ಟಿನ ಮೇಲೆ ಬಂದು ನಿಂತಿರುವುದು ಹೀಗೆ.
ಆದರೆ ಇಂದು ಸೂಕ್ಷ್ಮವಿದೆ. ಅದೆಂದರೆ, ಇಂತಹ ಧ್ರುವೀಕರಣಕ್ಕೆ ಪೂರಕವಾದ ಹೆಜ್ಜೆಗಳನ್ನು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜಾ.ದಳ ಇಡ ಬೇಕು. ಧ್ರುವೀಕರಣಕ್ಕೆ ಪೂರಕವಾದ ಹೆಜ್ಜೆಗಳನ್ನು ಅವು ಇಟ್ಟರೆ ಮುಂದಿನ ಚುನಾವಣೆಯ ಹೊತ್ತಿಗೆ ರಾಜ್ಯ ರಾಜಕೀಯದ ಸ್ವರೂಪವೇ ಬದಲಾಗಬಹುದು. ಆದರೆ ಸದ್ಯದ ಸ್ಥಿತಿ ನೋಡಿದರೆ ರಾಜಕೀಯ ಧ್ರುವೀಕರಣಕ್ಕೆ ಪೂರಕವಾದ ಹೆಜ್ಜೆಗಳನ್ನು ಜಾ.ದಳ ಇಡುತ್ತಿದೆ. ಆದರೆ ಬಿಜೆಪಿ ಈವರೆಗೂ ಅಂತಹ ಹೆಜ್ಜೆಗಳನ್ನು ಇಡುತ್ತಿಲ್ಲ. ಕಾರಣ, ಅಲ್ಲಿ ನಾಯಕತ್ವದ ವಿಷಯವೇ ಸಮಸ್ಯೆ ಯಾಗಿ ಕುಳಿತಿದೆ. ಈ ಸಮಸ್ಯೆ ಬಗೆಹರಿಯುವವರೆಗೆ ಅದು ರಾಜಕೀಯ ಧ್ರುವೀಕರಣದ ಸಂದರ್ಭವನ್ನು ಎನ್ ಕ್ಯಾಶ್ ಮಾಡಿಕೊಳ್ಳುವುದು ಕಷ್ಟ.
” ಮುಂದಿನ ವಿಧಾನಸಭಾ ಚುನಾವಣೆಯ ವೇಳೆಗೆ ಒಂದಷ್ಟು ಮಂದಿ ಶಾಸಕರು ತಮ್ಮ ಭವಿಷ್ಯ ನೋಡಿ ಕೊಳ್ಳಲು ಪರ್ಯಾಯ ದಾರಿಗಳನ್ನು ನೋಡುತ್ತಿದ್ದಾರೆ.”
ಪುಷ್ಪ ವೃಷ್ಟಿ..! ಅತಿವೃಷ್ಟಿ, ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ‘ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ ಕಾರಣ, ಅಲ್ಲಿಗಿಲ್ಲ ಮಂತ್ರಿ…
ರಿಯಾಯಿತಿಗೆ ಸರ್ಕಾರ ಕ್ರಮ ಕೈಗೊಳ್ಳಲಿ ರಾಜ್ಯದ ಹಲವು ಭಾಗಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ನಿರೀಕ್ಷಿಸಿದಷ್ಟು ಮಳೆಯಿಲ್ಲದ ಕಾರಣ ಕೃಷಿ ಕ್ಷೇತ್ರ…
ರಾಜ್ಯದಲ್ಲಿ ನಗರೀಕರಣದ ವೇಗದಿಂದಾಗಿ ಕೃಷಿ ಭೂಮಿಯ ವಿಸ್ತೀರ್ಣ ಸುಮಾರು ಶೇ. ೧೩ರಷ್ಟು ಕುಸಿದಿದೆ ಎಂದು ವರದಿಗಳು ಹೇಳಿವೆ. ಮೂಲಸೌಕರ್ಯಗಳ ಹೆಸರಿನಲ್ಲಿ…
ಮಹೇಶ್ ಕರೋಟಿ ಹೇಮಾವತಿ ನದಿ ದಡದಲ್ಲೇ ನೀರಿಗಾಗಿ ಹಾಹಾಕಾರ ಕಿಕ್ಕೇರಿ: ಮಂದಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಮಂದಗೆರೆ ಗ್ರಾಮವು ಹೇಮಾವತಿ…
ನವೀನ್ ಡಿಸೋಜ ಇಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಜಂತುಹುಳು ಬಾಧೆ ತಡೆಗೆ ಆರೋಗ್ಯ ಇಲಾಖೆಯ ಮಹತ್ವದ ಹೆಜ್ಜೆ ಮಡಿಕೇರಿ:…