ಹಾಡು ಪಾಡು

ಮನುಷ್ಯನ ಬೆನ್ನೇರಿರುವ ಎಐ ಬೇತಾಳ

ಮಾನವ ದುಡಿಮೆಯನ್ನು ಕಡಿಮೆಗೊಳಿಸಿರುವ ಎಐಯನ್ನು ಸಂಪೂರ್ಣವಾಗಿ ಹೀಗಳೆಯುವಂತೆಯೂ ಇಲ್ಲ. ಮನುಷ್ಯ ನಿರ್ಮಿತ ಈ ಕೃತಕ ಬುದ್ಧಿಯ ಬೇತಾಳ ನಮ್ಮದೇ ಕೂಸು!

ಅಕ್ಷತಾ

ಇತ್ತೀಚೆಗೆ ಗೂಗಲ್ ಆಘಾತಕಾರಿ ವರದಿಯೊಂದನ್ನು ಬಹಿರಂಗಪಡಿಸಿತು. ತನ್ನದೇ ಕೂಸಾದ ಗೂಗಲ್ ಜೆಮಿನಿ ಎಐ ಮೂರು ಸಂಸ್ಥೆಗಳ ವೆಬ್ ಸೈಟ್‌ಗೆ ಏಕಾಏಕಿ ನುಗ್ಗಿ ಹ್ಯಾಕ್ ಮಾಡಿದೆ. ಆದರೆ ಕರ್ತವ್ಯ ನಿರ್ವಹಿಸದೆ ತನ್ನ ಕೆಲಸವನ್ನು ಅಲ್ಲಿಗೇ ನಿಲ್ಲಿಸಿದ ಕಾರಣ ಸಂಸ್ಥೆಗಳ ಮಾಹಿತಿ ಸೋರಿಕೆಯಾಗಿಲ್ಲ ಎಂದು! ಇಲ್ಲಿ ಅಪಾಯ ಸಂಭವಿಸಿಲ್ಲ ಎನ್ನುವುದಕ್ಕಿಂತಲೂ ತನ್ನದೇ ಸೃಷ್ಟಿ ಮಾರಕ ಹಾದಿ ಹಿಡಿಯುತ್ತಿದೆಯೇ ಎಂಬುದು ಆಘಾತಕಾರಿ ಸಮಾಚಾರ. ತನ್ನದೇ ಆಡುಂಬೊಲದಲ್ಲಿ ಬೆಳೆದ ಎಐ ತನಗೇ ತಿರುಗಿ ಬಿದ್ದಿದೆಯೇ ಎಂದು ಗೂಗಲ್ ಅನುಮಾನ ವ್ಯಕ್ತಪಡಿಸಿತು.

ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ರುವ ಸಂಸ್ಥೆ ಓಪನ್ ಎಐ. ಚಾಟ್ ಜಿಪಿಟಿ ಸೇರಿದಂತೆ ಹಲವು ಎಐ ಮಾದರಿಗಳನ್ನು ಅಭಿವೃದ್ಧಿಪಡಿಸಿರುವ ಸಂಸ್ಥೆ, ಉಪಯುಕ್ತವಾಗುವ ರೀತಿ ಕೃತಕ ಬುದ್ಧಿಮತ್ತೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ೨೦೧೫ರಲ್ಲಿ ಲಾಭರಹಿತ ಸಂಸ್ಥೆಯಾಗಿ ಆರಂಭವಾಯಿತು. ೨೦೨೧ರಲ್ಲಿ ಬಿಡುಗಡೆಯಾದ DALL-E ಎಂಬ ಎಐ ಮಾದರಿ ಬಳಕೆದಾರರು ನೀಡುವ ವಿವರಣೆಯ ಆಧಾರದ ಮೇಲೆ ಚಿತ್ರಗಳನ್ನು ರಚಿಸುವ ಸಾಮರ್ಥ್ಯ ಹೊಂದಿದ್ದರೂ ಜನಪ್ರಿಯವಾಗಲಿಲ್ಲ. ನಂತರ ೨೦೨೨ರ ನವೆಂಬರ್‌ನಲ್ಲಿ ಬಿಡುಗಡೆಯಾದ ಚಾಟ್ ಜಿಪಿಟಿ ವಿಶ್ವದಾದ್ಯಂತ ಸದ್ದೆಬ್ಬಿಸಿತು.

ಆದರೆ ಇಂತಹ ಎಐ ಬೆಳವಣಿಗೆಯೊಡನೆ ಹಲವು ಪ್ರಶ್ನೆಗಳೂ ಹುಟ್ಟಿಕೊಂಡವು. ಅಪಾಯಕಾರಿ ಮಾಹಿತಿಯ ಸೃಷ್ಟಿ, ದತ್ತಾಂಶದ ಗೌಪ್ಯತೆ, ಹಕ್ಕುಸ್ವಾಮ್ಯ ಮತ್ತು ಎಐ ಬಳಕೆಯ ನೈತಿಕತೆಯ ಕುರಿತು ಚರ್ಚೆ ಆರಂಭವಾಯಿತು.

ಓಪನ್ ಎಐ ಬಳಕೆ ಜಗವ್ಯಾಪಿ. ಸಣ್ಣ ಮಾಹಿತಿಗಳಿಂದ ಹಿಡಿದು ಪ್ರತಿಯೊಂದಕ್ಕೂ ಎಐ ಅವಲಂಬಿಸಿದ ಜನ ಸಿಂಪಲ್ ವಿಷಯಗಳಿಗೂ ಚಾಟ್ ಜಿಪಿಟಿ, ಜೆಮಿನಿಯಂತಹ ಎಐ ಮೊರೆ ಹೋಗುವ ಅನಿವಾರ್ಯತೆಯನ್ನು ಸ್ವತಃ ಸೃಷ್ಟಿಸಿಕೊಂಡಿದ್ದೇವೆ. ಪ್ರತಿನಿತ್ಯ ಬರುವಂತಹ ಹೊಸ ಹೊಸ ಸೋಶಿಯಲ್ ಮೀಡಿಯಾ ಟ್ರೆಂಡಿಂಗ್ ಕ್ರೇಜ್‌ಗಳು ಬೇಡವೆಂದರೂ ತನ್ನತ್ತ ಸೆಳೆಯುವ ಎಐ ಮಾಯಾವಿಯ ಕಬಂಧಬಾಹು ಎಂಬುದರ ಪರಿವೆಯಿಲ್ಲದೆ ಮೋಡಿಗೆ ಒಳಗಾಗುತ್ತಿರುವುದು ಕೂಡ ಒಂದು ರೀತಿಯ ‘ಎಐ ಹ್ಯಾಕಿಂಗ್’ ಎನ್ನುತ್ತಾರೆ ತಜ್ಞರು!

ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ ಇತ್ತೀಚೆಗೆ ಟ್ರೆಂಡಿಂಗ್ ಆಗಿದ್ದ ೮೦ರ ದಶಕದ ಫೋಟೋ, ವಿಡಿಯೋ ಮರುಸೃಷ್ಟಿ. ಎಷ್ಟರ ಮಟ್ಟಿಗೆ ಇದು ಹವಾ ಎಬ್ಬಿಸಿತೆಂದರೆ ತಮ್ಮ ಖಾಸಗಿ ಫೋಟೋಗಳನ್ನು ಬೇಕಾಬಿಟ್ಟಿ ಎಐಗೆ ಕೊಟ್ಟು ಹೊಸ ಅವತಾರಗಳನ್ನು ನೋಡುವುದಷ್ಟೇ ಅಲ್ಲದೆ ನಾಯಿ, ಬೆಕ್ಕು ಹೀಗೆ ಮನೆಯ ಸಾಕುಪ್ರಾಣಿಗಳನ್ನೂ ಎಐ ಮಾಯಾಲೋಕಕ್ಕೆ ನೂಕಿ ಬಿಟ್ಟವರೇ ಬಹಳ ಮಂದಿ. ಸೈಬರ್ ಸೆಕ್ಯುರಿಟಿ ವಿಭಾಗ ‘ಇದು ಸೈಬರ್ ಅಪರಾಧದ ಭಾಗವಾಗಿರಬಹುದು, ಫೊಟೋ ಅಪ್ಲೋಡ್ ಮಾಡುವ ಮೂಲಕ ಖಾಸಗಿ ಮಾಹಿತಿಗಳ ಸೋರಿಕೆಯಾಗಬಹುದು ಎಚ್ಚರ’ ಎಂಬ ಎಚ್ಚರಿಕೆಯನ್ನು ಕೊಟ್ಟಿತು. ಅಪರಿಚಿತ ಎಐ ಟೂಲ್ ಲಿಂಕ್‌ಗಳನ್ನು ಒತ್ತುವ ಮೊದಲು ಯೋಚಿಸಿ ಎಂಬ ಸಂದೇಶ ಕೊಟ್ಟಿತಾದರೂ ಕೋಟ್ಯಂತರ ಜನ ಅಷ್ಟರಲ್ಲಾಗಲೇ ಎಐ ಮೋಡಿಯ ಬಲೆಗೆ ಸಿಲುಕಿ ಆಗಿತ್ತು ಎಂಬುದು ವಾಸ್ತವ!

ಎಷ್ಟೇ ಸುರಕ್ಷತಾ ಕೋಡ್ಗಳಿದ್ದರೂ ಆಸ್ಟ್ರೇಲಿಯಾದಲ್ಲಿ ಸರ್ಕಾರಿ ಸೇವೆಯ ವೈದ್ಯಕೀಯ ಜಾಲತಾಣವೊಂದು ಇತ್ತೀಚೆಗೆ ಎಐ ಹ್ಯಾಕ್‌ಗೆ ಒಳಗಾಯಿತು. ಸರ್ಕಾರಿ ಸೇವೆಯ ಜಾಲಕ್ಕೆ ಎಐ ಹ್ಯಾಕರ್ ಪ್ರವೇಶಿಸಿರುವುದು ಜಗತ್ತಿನ ಮೊದಲ ಪ್ರಕರಣವಾಗಿದ್ದು ಇದಕ್ಕೆ ಕಾರಣವೇನು ಎಂಬುದರ ಕುರಿತಾಗಿ ಬಹಳಷ್ಟು ಚರ್ಚೆಯೆದ್ದಿತು. ಈ ಕುರಿತು ಸಂಶೋಧನೆ ಮುಂದುವರಿಸಿದ ಹ್ಯಾಕ್ಟ್ರಾನ್ ಎಂಬ ಸಂಸ್ಥೆ ಹೊಸ ಪರೀಕ್ಷೆಗೆ ಸಿದ್ಧವಾಯಿತು. ಭಾರತೀಯ ಸಂಶೋಧಕರಾದ ಮೋಹನ್ ಪೆದ್ದಪತಿ, ಹರ್ಷ್ ಜೈಸ್ವಾಲ್ ಮತ್ತು ರಾಹುಲ್ ಮೈನಿ ಎನ್ನುವ ಮೂವರು ಎಐ ಮಾದರಿ ಬಳಸಿ ಓಪನ್ ಎಐಗೆ ಪ್ರತಿಸ್ಪರ್ಧಿಯಾಗಿ ‘ಆಂಥ್ರೋಪಿಕ್ಸ್ ಕ್ಲೌಡ್’ ಎಂಬ ಎಐ ಮಾದರಿ ಯನ್ನು ಬಳಸಿಕೊಂಡು ಓಪನ್ ಎಐ ವ್ಯವಸ್ಥೆಗೆ ಪ್ರವೇಶಿಸಿದರು. ಡಿಸ್ಕ್ ಸೋರ್ಸ್‌ನಲ್ಲಿದ್ದ ದೋಷ ಪತ್ತೆಹಚ್ಚಿ ಸರಿ ಪಡಿಸಲೆತ್ನಿಸಿದರೂ ವಿಫಲರಾದರು. ಅದೇ ರಾತ್ರಿ ‘ಕ್ಲೌಡ್ ಒಪಸ್ ೫’ ಎನ್ನುವ ಇನ್ನೊಂದು ಎಐ ಮಾದರಿಯಲ್ಲಿ ಚಾಟ್‌ಜಿಪಿಟಿ ಮತ್ತು ಕೋಡೆಕ್ಸ್ ಖಾತೆಗಳಿಗೆ ಪ್ರವೇಶಿಸಿದವರಿಗೆ ಅಚ್ಚರಿ ಕಾದಿತ್ತು!

ಬಳಕೆದಾರರ ಸಂಭಾಷಣೆ, ಓಪನ್ ಎಐ ಉದ್ಯೋಗಿಗಳ ಖಾತೆಗಳು, ಇ-ಮೇಲ್ ಸೇರಿದಂತೆ ಇತರ ಅಪ್ಲಿಕೇಶನ್‌ಗಳೊಂದಿಗೆ ಸಂಪರ್ಕ ಸಾಧ್ಯತೆಯಿರುವುದೇ ಎಐ ದಾಳಿಕೋರರಿಗೆ ಮಾಹಿತಿ ಕಬಳಿಸಲು ಕಾರಣವೆಂಬ ಸತ್ಯಾಂಶ ಹೊರಬಿತ್ತು. ಎಐ ಜಗತ್ತಿನ ವೇಗದ ಬಗ್ಗೆ ಹೇಳುವ ಈ ಭಾರತೀಯ ಸಂಶೋಧಕರು ‘ಮೊದಲು ಇಂತಹ ದಾಳಿ ನಡೆಸಲು ಎರಡರಿಂದ ಮೂರು ತಿಂಗಳು ಬೇಕಾಗಿದ್ದರೆ ಈಗ ಎಐ ಮಾದರಿಗಳು ಮೂರು ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ಕೆಲಸವನ್ನು ಸುಲಲಿತಗೊಳಿಸಿದೆ. ದೊಡ್ಡ ಸಂಸ್ಥೆಗಳು ಹೊರಗಿನ ಸೇವೆಗಳ ಮೇಲೆ ಅವಲಂಬಿತವಾಗಿರುತ್ತವೆ. ಹೀಗಾಗಿ ಸಂಸ್ಥೆಯ ಸ್ವಂತ ಕೋಡ್‌ನಲ್ಲಿ ದೋಷ ಇಲ್ಲದಿದ್ದರೂ ಸಂಪರ್ಕ ಸೇವೆಯ ದೌರ್ಬಲ್ಯದಿಂದ ಹ್ಯಾಕಿಂಗ್ ಸಮಸ್ಯೆ ಕಾಣಿಸುತ್ತಿದೆ’ ಎನ್ನುತ್ತಾರೆ. ಆದರೆ ಇಂತಹ ಎಐ ಮಾದರಿಗಳು ಅನುಭವಿ ಹ್ಯಾಕರ್‌ಗಳಿಗೆ ‘ಸಾಮರ್ಥ್ಯ ಹೆಚ್ಚಿಸುವ ಸಾಧನ’ದಂತೆ ಕೆಲಸ ಮಾಡಬಹುದು ಎಂಬುದು ಅತಂಕಕಾರಿ ಸಂಗತಿ.

ಏತನ್ಮಧ್ಯೆ ವಿಶ್ವದ ದೊಡ್ಡಣ್ಣ ಅಮೆರಿಕ ಎಐ ಫೋರ್ಸ್ ರಚಿಸುವುದಾಗಿಯೂ ಎಐ ವಿಭಾಗಕ್ಕೆ ಮುಖ್ಯಸ್ಥರನ್ನು ನಿಯೋಜಿಸುವುದಾಗಿಯೂ ಹೇಳಿಕೆ ಕೊಟ್ಟಿದೆ. ಚೀನಾದೊಡನೆ ಎಐ ಸ್ಪರ್ಧೆಗಿಳಿದಿರುವ ಅಮೆರಿಕ ಎಐ ಕ್ಷೇತ್ರದಲ್ಲಿ ಚೀನಾವನ್ನು ಹಿಂದಿಕ್ಕಬೇಕೆಂಬ ಮಹದಾಸೆಯನ್ನೂ ಹೊಂದಿದೆ. ಉದ್ಯೋಗ ಭೀತಿ, ಸೈಬರ್ ಅಪರಾಧ, ಮಾಹಿತಿ ಸೋರಿಕೆ ಇತ್ಯಾದಿ ಆರೋಪ ಪ್ರತ್ಯಾರೋಪದ ನಡುವೆಯೂ ಎಐ ಎಂದರೆ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಒಂದು ಮತ್ತೊಂದು ಹೊಸ ಪ್ರಯೋಗಗಳು, ಸಂಶೋಧನೆಗಳು ನಡೆಯುತ್ತಲೇ ಇವೆ. ಅಂಗೈಯಲ್ಲಿ ಜಗತ್ತಿನ ಮಾಹಿತಿ ಕಣಜವಾದ, ಮನುಷ್ಯ ಕೆಲಸ ವನ್ನು ಕಡಿಮೆಗೊಳಿಸಿರುವ ಎಐಯನ್ನು ಪೂರ್ಣ ಪ್ರಮಾಣ ದಲ್ಲಿ ದೂಷಿಸುವಂತೆಯೂ ಇಲ್ಲ. ಕಾರಣ! ‘ಹೆತ್ತವರಿಗೆ ಹೆಗ್ಗಣ ಮುದ್ದು’ ಎಂಬಂತೆ ಎಐ ಮಾಯಾಲೋಕವನ್ನು ಸೃಷ್ಟಿಸಿದವರು ನಾವೇ ಆಗಿರುವುದರಿಂದ ಮನುಷ್ಯ ನಿರ್ಮಿತ ಕೃತಕ ಬುದ್ಧಿ ನಮ್ಮದೇ ಕೂಸು!

ಆಂದೋಲನ ಡೆಸ್ಕ್

Recent Posts

ಡೂಮರ್ಸ್ ಮತ್ತು ಬೂಮರ್ಸ್

ನಾನು ಎ.ಐ. ಅಥವಾ ಕೃತಕ  ಬುದ್ಧಿಮತ್ತೆಯ ರಂಗಕ್ಕೆ ಪ್ರಪ್ರಥಮವಾಗಿ ಇಳಿದದ್ದು ಸುಮಾರು ೩೫ ವರ್ಷಗಳ ಹಿಂದೆ, ನ್ಯೂಯಾರ್ಕಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾಗ.…

3 mins ago

ವಂದೇ ಮಾತರಂ: ದೇಶಪ್ರೇಮ-ಬಹುತ್ವದ ಭಿನ್ನ ವ್ಯಾಖ್ಯಾನ

೧೮೭೫ರಲ್ಲಿ ಬಂಕಿಮಚಂದ್ರ ಚಟ್ಟೋಪಾಧ್ಯಾಯ ರಚಿಸಿದ ‘ವಂದೇ ಮಾತರಂ’ ಸ್ವಾತಂತ್ರ್ಯ ಚಳವಳಿಯ ಭಾಗವಾಗಿತ್ತು. ಧಾರ್ಮಿಕ ಆಕ್ಷೇಪಣೆಗಳಿಂದಾಗಿ ೧೯೩೭ರಲ್ಲಿ ಕಾಂಗ್ರೆಸ್ ಮೊದಲ ಎರಡು…

13 mins ago

ಚುನಾವಣಾ ಆಯೋಗದ ಬಿಕ್ಕಟ್ಟು ಬಗೆಹರಿಯುವುದು ಹೇಗೆ?

ದೆಹಲಿ ಕಣ್ಣೋಟ  ಶಿವಾಜಿ ಗಣೇಶನ್‌  ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಬೇಕಾದ ಚುನಾವಣಾ ಆಯೋಗದ ಈಗಿನ ಕಾರ್ಯವೈಖರಿ, ನಿರಂಕುಶ ಅಧಿಕಾರ ಚಲಾವಣೆ ಇಂದು…

22 mins ago

ಮೈತ್ರಿ ಪಕ್ಷದ ೮ ನಿರ್ದೇಶಕರ ರಾಜೀನಾಮೆ ಅಂಗೀಕಾರ

ಮಂಜು ಕೋಟೆ ಕೋಟೆ ಟಿಎಪಿಸಿಎಂಎಸ್‌ನ ಆಡಳಿತ ಮಂಡಳಿ ಭವಿಷ್ಯದ ಕುರಿತು ಮೂಡಿದ ಕುತೂಹಲ ಎಚ್.ಡಿ.ಕೋಟೆ: ರಾಜಕೀಯ ಕಾರ್ಯತಂತ್ರಗಳಿಂದ ಕೂಡಿ ಕುತೂಹಲ…

29 mins ago

ಶ್ರೀರಂಗಪಟ್ಟಣ ದಸರಾ 2026: ಅ.15ರಿಂದ ವೈಭವದ ಆಚರಣೆ, ಆಕರ್ಷಕ ಲೋಗೋ ಬಿಡುಗಡೆ

ಮಂಡ್ಯ: ಐತಿಹಾಸಿಕ ಹಿನ್ನೆಲೆಯುಳ್ಳ 416ನೇ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಅಕ್ಟೋಬರ್.‌15ರಂದು ಖ್ಯಾತ ನಟ ವಿ.ರವಿಚಂದ್ರನ್‌ ಅವರು…

10 hours ago