ಅಂಕಣಗಳು

ಕೆಂಪುಕೋಟೆ ಬಳಿ ಸ್ಛೋಟ : ನಲುಗಿದ ದೆಹಲಿ, ನಡುಗಿದ ಮನಗಳು

ಸೋಮವಾರ (ನ.೧೦) ಸಂಜೆ ರೈಲ್ವೆ ಸ್ಟೇಷನ್ ತಲುಪುವ ಹೊತ್ತಿಗೆ ಅಲ್ಲಿನ ಜನಸಂದಣಿ ನೋಡಿಯೇಗಾಬರಿಯಾಗಿತ್ತು. ಅಸಹಜವೆನ್ನುವಷ್ಟು ಪೊಲೀಸು ಪಡೆಯ ನಾಯಿಗಳು ಪ್ಲಾಟ್ ಫಾರ್ಮಿನ ಉದ್ದಕ್ಕೂ ಪರಿವೀಕ್ಷಣೆ ನಡೆಸಿದ್ದವು. ಹಿಂದಿನ ದಿನವಷ್ಟೇ ಫರೀದಾಬಾದಿನ ಒಂದು ಮನೆಯಲ್ಲಿ ಸ್ಛೋಟಕ ವಸ್ತು ದೊರೆತ ವರದಿ ಓದಿದ್ದೆ. ಕೆಲವೇ ಕ್ಷಣಗಳಲ್ಲಿ ದಿಲ್ಲಿಯ ಕೆಂಪುಕೋಟೆಯ ಬಳಿ ನಡೆದ ಸ್ಛೋಟದ ಸುದ್ದಿ ಹರಡಿ ರೈಲ್ವೆ ನಿಲ್ದಾಣದಲ್ಲಿನ ಇಡೀ ವಾತಾವರಣದಲ್ಲಿ ಒಂದು ತೆರನಾದ ಭಯ ಆವರಿಸಿದಂತೆ ಶರತ್ಕಾಲದ ಸಂಜೆಗಪ್ಪು ಆವರಿಸಿತ್ತು.

ದೆಹಲಿಯ ಬದುಕಿನಲ್ಲಿ ಅದೆಷ್ಟು ಬಾಂಬ್ ಸ್ಛೋಟಗಳನ್ನು ಕಂಡಿಲ್ಲ, ಜೀವ ಅಂಗೈಯಲ್ಲಿಟ್ಟುಕೊಂಡು ಓಡಾಡಿಲ್ಲ, ನಾಲ್ಕು ದಶಕದ ಈ ದೆಹಲಿ ವಾಸದಲ್ಲಿ ! ೨೦೦೫ರಲ್ಲಿ ಬಹುಶಃ ಸೆಪ್ಟೆಂಬರ್ ತಿಂಗಳಿರಬಹುದು. ದೀಪಾವಳಿಯ ಖರೀದಿಗಾಗಿ ಸರೋಜಿನಿ ನಗರಕ್ಕೆ (ಮಾರ್ಕೆಟ್) ಹೋಗಿ ಸಂಜೆ ತಡವಾಗಿ ಬರ್ತೀನಿ ಅಂತ ಮನೆಯಲ್ಲಿ ಹೇಳಿಬಂದಿದ್ದೆ. ಆಫೀಸಿನಲ್ಲಿ ಇದೇ ಕಾರಣ ಹೇಳಿ ಅವತ್ತು ಬೇಗ ಬಿಟ್ಟೆ. ಆಟೋ ತಗೊಳ್ಳಲು ಕಂಜೂಸಿ ಮಾಡಿ ಎರಡು ಬಸ್ಸು ಬದಲಿಸಿಕೊಂಡು ಸರೋಜಿನಿ ಮಾರ್ಕೆಟ್ ತಲುಪಿ ಅತ್ತ ಹೆಜ್ಜೆ ಹಾಕಬೇಕು, ಅಷ್ಟರಲ್ಲಿ ಅತ್ತಲಿಂದ ಜನ ಓಡೋಡಿ ಬರುತ್ತಿದ್ದಾರೆ, ಇತ್ತ ಮೊಬೈಲ್ ಹೊಡೆದುಕೊಳ್ಳತೊಡಗಿದೆ… ಅತ್ತ ಹೋಗಲೋ.. ಬಿಡಲೋ… ಏನಾಗುತ್ತಿದೆ ಎಂದು ಯೋಚಿಸಲೂ ಆಗದಂತಹ ಜನಜಂಗುಳಿಯಿಂದ ‘ಉಧರ್ ಮತ್ ಜಾವ್’ ಅನ್ನುವ ಸಾಮೂಹಿಕ ಕೂಗುಗಳಿಂದ ಅಲ್ಲೆನೋ ಆಗಿದೆ ಎಂದು ಗ್ರಹಿಸಿದ ಕಾಲುಗಳು ಅಲ್ಲೇ ನಿಂತವು. ಫೋನ್ ತಗೊಂಡಾಗ ಮನೆಯವರೆಲ್ಲ ಗಾಬರಿಯಲ್ಲಿ ಬ್ಲಾಸ್ಟ್ ಸುದ್ದಿಯ ಭೀಕರತೆಯನ್ನು ತಿಳಿಸಿದಾಗಲೇ ಮೈ ನಡುಗಿದ್ದು. ಮಾರ್ಕೆಟ್‌ನ ಒಂದು ಕಡೆಯಿಂದ ಏಳುತ್ತಿದ್ದ ದಟ್ಟ ಹೊಗೆ ಅನಂತವನ್ನು ಸೇರುತ್ತಿತ್ತು. ಸ್ವಲ್ಪದರಲ್ಲೇ ಬದುಕಿದೆನೇನೋ ಎಂಬ ಯೋಚನೆಯಿಂದ ಎದೆ ಢವಗುಡುತ್ತಿತ್ತು. ಬಸ್ಸಿಗಾಗಿ ಕಾಯದೇ ಆಟೋ ಹಿಡಿದು ತಲುಪಿದ್ದರೇ… ನಾನೂ..! ಕೈಕಾಲಿನ ಶಕ್ತಿಯೇ ಉಡುಗಿದಂತಾಗಿತ್ತು. ಹೇಗೆ ಮನೆ ಸೇರಿದೆನೋ ನನಗೇ ಗೊತ್ತಿಲ್ಲ.

ಇನ್ನೊಮ್ಮೆ ಆಫೀಸಿನ ಹತ್ತಿರದ ಗ್ರೇಟರ್ ಕೈಲಾಶ್‌ನ MBlock ಮಾರ್ಕೆಟ್ಟಿನಲ್ಲಿನ ಸ್ಛೋಟದ ಮುನ್ನ ಅಲ್ಲಿಯೇ ಇದ್ದೆ. ಡಿ ಪಾಲ್ ಕೋಲ್ಡ್ ಕಾಫೀ ಕುಡಿದು… ಹಾಗೇ ವಿಂಡೋ ಶಾಪಿಂಗ್ ಮಾಡುತ್ತಾ ಗೋಲಾ ಬರ್ಫಿನ ಚುಸ್ಕಿ ಕೈಗಾಡಿಯವನಿದ್ದ ಸ್ಛೋಟಗೊಂಡ ಜಾಗದಲ್ಲೇ ಇದ್ದೆ. ಕಾಯುವ ದೇವರು ದೊಡ್ಡವನು ಅನ್ನೋದು ನಿಜವಿರಬೇಕು. ಈಗ ದಶಕಗಳ ನಂತರ ಮತ್ತೆ ಸ್ಛೋಟ ದೆಹಲಿಯನ್ನು ನಡುಗಿಸಿದೆ.

ಇದನ್ನು ಓದಿ:  75 ರ ಪ್ರಾಯದಲ್ಲಿ ಜೆಸಿಬಿ ಚಲಾಯಿಸುವ ಮಣಿ ಅಮ್ಮ!

ದೆಹಲಿಯ ಹೃದಯವೆನಿಸಿರುವ ಕೆಂಪುಕೋಟೆ – ರಾಷ್ಟ್ರದ ಗೌರವದ ಸಂಕೇತ, ಸ್ವಾತಂತ್ರ್ಯದ ನೆನಪಿನ ಪುಣ್ಯಸ್ಥಳ. ಆ ಕೋಟೆಯ ಪಕ್ಕದಲ್ಲೇ, ಸುತ್ತಮುತ್ತಲಿನ ಚಾಂದನೀ ಚೌಕ್, ಜಮಾ ಮಸೀದಿಯಾಚೆಗಿನ ನಿತ್ಯವೂ ಸಾವಿರಾರು ಜನರು ನಡೆಯುವ ಆ ಬೀದಿಯಲ್ಲಿ ಮತ್ತೊಮ್ಮೆ ಅಕಸ್ಮಾತ್ ಉಂಟಾದ ಸ್ಛೋಟದ ಶಬ್ದ ನಗರವನ್ನೇ ನಡುಗಿಸಿದೆ. ಕ್ಷಣದಲ್ಲಿ ದೃಶ್ಯವೇ ಬದಲಾಯಿತು. ಕಾಲ ಕಾಲವೇ ಸ್ತಬ್ಧಗೊಂಡಿತು. ಹಕ್ಕಿಗಳು ನಿಶ್ಶಬ್ದವಾದವು, ಜನರ ಕಿರುಚಾಟದ ಮಧ್ಯೆ ಕಣ್ಮರೆಯಾದವು ನಗುಗಳು, ಕನಸುಗಳು. ಕೆಂಪುಕೋಟೆಯ ಆ ಭಿತ್ತಿಗಳ ಮೇಲೆ ಭಯ ಮತ್ತು ನೋವಿನ ಅಕ್ಷರಗಳಲ್ಲಿ ರಕ್ತದ ಕಲೆಗಳು ಹೊಸ ಇತಿಹಾಸವನ್ನು ಬರೆದಂತಿದ್ದವು.

ಸದಾ ಪ್ರವಾಸಿಗರ ಕಲರವ ಗಡಿಬಿಡಿ ಧಾವಂತದಲ್ಲಿ ಕೊಡಕೊಳ್ಳುವಿಕೆಯಲ್ಲಿ ಹಬ್ಬದಂತೆ ತುಂಬಿಕೊಂಡಿರುತ್ತಿದ್ದ ಆ ಸ್ಥಳ ಸೋಮವಾರ ಭಯದ ಬೂದಿಯೊಳಗೆ ಮುಳುಗಿತ್ತು. ಯಾರೋ ಒಬ್ಬ ತಂದೆ ತನ್ನ ಮಗುವನ್ನು ಹೊತ್ತು ಓಡುತ್ತಿರಬಹುದು, ಯಾರೋ ಒಬ್ಬ ತರುಣಿ ತನ್ನ ಸ್ನೇಹಿತನ ಹೆಸರನ್ನು ಕೂಗಿ ಹುಡುಕುತ್ತಿರಬಹುದು, ಆಂಬುಲೆನ್ಸ್‌ನ ಸೈರನ್‌ಗಳ ಶಬ್ದ ಗಗನಕ್ಕೇರಿದಾಗ ದೆಹಲಿಯ ನಾಡಿ ಬಡಿತವೇ ನಿಂತಂತಾಗುತ್ತದೆ. ಆದರೆ ಇಂತಹ ಹೃದಯವಿದ್ರಾವಕ ದಂಗೆಗಳನ್ನು, ದಾಳಿ – ಹಲ್ಲೆಗಳನ್ನು, ರಕ್ತದ ಹೊಳೆಗಳನ್ನು, ಗಾಯಗಳನ್ನು ಕಾಣುತ್ತಲೇ ಬಂದ ದೆಹಲಿಯೆಂಬ ಮಾಯಾಂಗನೆಯ ಅಂತಃ ಸತ್ವಕ್ಕೆ ಬೆರಗಾಗುತ್ತದೆ.

ಎಲ್ಲೋ ಕಣ್ಣೀರಿನ ನಡುವೆ ಕೈಹಿಡಿದು ಸಂತೈಸುವ ನೂರಾರು ಹೃದಯವಂತರೂ ಇದ್ದಾರೆ. ನೊಂದವರ ಕಣ್ಣೊರೆಸಿ ತುತ್ತು ಕೊಡುವ ಕೈಗಳೂ ಇವೆ. ಇಲ್ಲಿ ಮಾನವೀಯತೆಯ ಅತ್ಯಂತ ಪ್ರಕಾಶಮಾನ ಮುಖಗಳಿವೆ. ಅಪರಿಚಿತರೇ ಪರಸ್ಪರ ಕೈಹಿಡಿದರು, ರಕ್ತದ ಮಧ್ಯೆ ಜೀವ ಉಳಿಸಲು ಹೋರಾಡಿದರು. ಸಂಘಟನೆಯ ಶಬ್ದವನ್ನು ಮೀರಿಸಿಕೊಂಡು – ದಯೆಯ ಶಬ್ದ ಕೇಳಿಬರುತ್ತದೆ.

ಸ್ಛೋಟವು ದೆಹಲಿಯ ಗೋಡೆಗಳನ್ನು ನಡುಗಿಸಬಹುದು. ಆದರೆ ದೆಹಲಿಯ ಆತ್ಮವನ್ನು ಮುರಿಯಲಾರದು. ಕೆಂಪುಕೋಟೆಯ ಆ ಕೆಂಪು ಇಟ್ಟಿಗೆಗಳಂತೆ, ಈ ನಗರವೂ ಮತ್ತೆ ಮತ್ತೆ ಎದ್ದು ನಿಲ್ಲುತ್ತದೆ – ಮತ್ತೆ ಬದುಕು ಮಾಮೂಲಾಗತೊಡಗುತ್ತದೆ. ಆದರೆ ಮನಸ್ಸಿನೊಳಗೆ ಉಳಿಯುವ ಒಂದು ಪ್ರಶ್ನೆ: ಯುದ್ಧ ಮತ್ತು ಹಿಂಸೆಗಳನ್ನು ಯಾವ ದೇಶದ ಜನರೂ ಬಯಸುವುದಿಲ್ಲ… ಹಾಗಾದರೆ ಕ್ಯೂಂ ಹೋತಾ ಹೈ?

” ಎಲ್ಲೋ ಕಣ್ಣೀರಿನ ನಡುವೆ ಕೈಹಿಡಿದು ಸಂತೈಸುವ ನೂರಾರು ಹೃದಯವಂತರೂ ಇದ್ದಾರೆ. ನೊಂದವರ ಕಣ್ಣೊರೆಸಿ ತುತ್ತು ಕೊಡುವ ಕೈಗಳೂ ಇವೆ. ಇಲ್ಲಿ ಮಾನವೀಯತೆಯ ಅತ್ಯಂತ ಪ್ರಕಾಶಮಾನ ಮುಖಗಳಿವೆ. ಅಪರಿಚಿತರೇ ಪರಸ್ಪರ ಕೈಹಿಡಿದರು, ರಕ್ತದ ಮಧ್ಯೆ ಜೀವ ಉಳಿಸಲು ಹೋರಾಡಿದರು. ಸಂಘಟನೆಯ ಶಬ್ದವನ್ನು ಮೀರಿಸಿಕೊಂಡು – ದಯೆಯ ಶಬ್ದ ಕೇಳಿಬರುತ್ತದೆ.”

–ರೇಣುಕಾ ನಿಡುಗುಂದಿ, ನವದೆಹಲಿ

ಆಂದೋಲನ ಡೆಸ್ಕ್

Recent Posts

ಎಐ ಮನುಷ್ಯನನ್ನು ಆಳಲಾಗದು!

ಮೊನ್ನೆ ತುಮಕೂರು ರಸ್ತೆ ಹಿಡಿದು ಬೆಂಗಳೂರಿನ ಕಡೆ ಬರುತ್ತಿರುವಾಗ, ರಸ್ತೆಯ ಬಲಭಾಗದಲ್ಲಿ ದೊಡ್ಡ ಕಲ್ಲು ಬೆಟ್ಟ ಕಾಣಿಸಿತು. ಕುಂಬಳಕಾಯಿಯನ್ನು ಚಾಕುವಿನಿಂದ…

3 hours ago

ಭಯಗೊಳಿಸುವ ಸಿನೆಮಾ ಕಥೆ ನಿಜವಾಗುವ ಸಾಧ್ಯತೆ!

ಐಟಿ, ಆರೋಗ್ಯ, ಆಡಳಿತ ಹೀಗೆ ಎಲ್ಲೆಲ್ಲಿ ಎಐ ಬಳಕೆ ಸಾಧ್ಯವೋ ಅಲ್ಲೆಲ್ಲಾ ಪ್ರಾಥಮಿಕ ಹಂತದ ಉದ್ಯೋಗ ಗಳು ಕಡಿತವಾಗಲಿವೆ. ಎಐ…

3 hours ago

‘ಎಐ’ ಅತಿ ಬಳಕೆಯ ವ್ಯಸನದ ಬಗ್ಗೆ ಎಚ್ಚರದಿಂದಿರಿ

‘ಕೃತಕ ಬುದ್ಧಿವಂತಿಕೆ’ಯನ್ನು ನಮ್ಮ ಸಹಾಯಕನಾಗಿ ಬಳಸಿಕೊಳ್ಳಬೇಕೇ ಹೊರತು, ಅದರ ಮೇಲೆ ಅವಲಂಬಿತರಾಗಬಾರದು; ಇಂದು ಶಾಲೆ, ಕಾಲೇಜಿನ ಪ್ರಾಧ್ಯಾಪಕರಿಂದ ‘ಎಲ್ಲರ ಅಸೈನ್‌ಮೆಂಟೂ…

3 hours ago

ಡೂಮರ್ಸ್ ಮತ್ತು ಬೂಮರ್ಸ್

ನಾನು ಎ.ಐ. ಅಥವಾ ಕೃತಕ  ಬುದ್ಧಿಮತ್ತೆಯ ರಂಗಕ್ಕೆ ಪ್ರಪ್ರಥಮವಾಗಿ ಇಳಿದದ್ದು ಸುಮಾರು ೩೫ ವರ್ಷಗಳ ಹಿಂದೆ, ನ್ಯೂಯಾರ್ಕಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾಗ.…

3 hours ago

ಮನುಷ್ಯನ ಬೆನ್ನೇರಿರುವ ಎಐ ಬೇತಾಳ

ಮಾನವ ದುಡಿಮೆಯನ್ನು ಕಡಿಮೆಗೊಳಿಸಿರುವ ಎಐಯನ್ನು ಸಂಪೂರ್ಣವಾಗಿ ಹೀಗಳೆಯುವಂತೆಯೂ ಇಲ್ಲ. ಮನುಷ್ಯ ನಿರ್ಮಿತ ಈ ಕೃತಕ ಬುದ್ಧಿಯ ಬೇತಾಳ ನಮ್ಮದೇ ಕೂಸು!…

3 hours ago

ವಂದೇ ಮಾತರಂ: ದೇಶಪ್ರೇಮ-ಬಹುತ್ವದ ಭಿನ್ನ ವ್ಯಾಖ್ಯಾನ

೧೮೭೫ರಲ್ಲಿ ಬಂಕಿಮಚಂದ್ರ ಚಟ್ಟೋಪಾಧ್ಯಾಯ ರಚಿಸಿದ ‘ವಂದೇ ಮಾತರಂ’ ಸ್ವಾತಂತ್ರ್ಯ ಚಳವಳಿಯ ಭಾಗವಾಗಿತ್ತು. ಧಾರ್ಮಿಕ ಆಕ್ಷೇಪಣೆಗಳಿಂದಾಗಿ ೧೯೩೭ರಲ್ಲಿ ಕಾಂಗ್ರೆಸ್ ಮೊದಲ ಎರಡು…

4 hours ago