ಜನನಾಯಕ ಅನ್ನಿಸಿಕೊಂಡವರ ಅಧಿಕಾರ ಬದಲಿಸುವುದು ಅಷ್ಟು ಸುಲಭದ ಕೆಲಸವಲ್ಲ
ಅವತ್ತು ವಿಧಾನಸಭೆಯ ಮೊಗಸಾಲೆಗೆ ಪ್ರವೇಶ ಮಾಡುತ್ತಿದ್ದಂತೆಯೇ ಪತ್ರಕರ್ತ ರಾಕೇಶನ ಮುಖದಲ್ಲಿ ಮುಗುಳ್ನಗೆ ಮೂಡಿತು. ಹಾಗೆ ನೋಡಿದರೆ ಇತ್ತ ಈಚೆಗೆ ವರದಿಗಾರಿಕೆಗೆ ಅಂತ ವಿಧಾನಸಭೆಗೆ ಬರುವ ರಾಕೇಶನಿಗೆ ಹೇಳಿಕೊಳ್ಳುವಂತಹ ಆಸಕ್ತಿ ಮೂಡುತ್ತಿಲ್ಲ. ಮೂವತ್ತೈದು ವರ್ಷಗಳ ಹಿಂದೆ ವರದಿಗಾರಿಕೆಗೆ ಅಂತ ವಿಧಾನಸೌಧಕ್ಕೆ ಬಂದ ಕಾಲದಲ್ಲಿ ಅದೆಂತಹ ನೆಮ್ಮದಿ ಇರುತ್ತಿತ್ತು?
ಅದು ವಿಧಾನಸೌಧದಲ್ಲಿ ಮಂತ್ರಿಗಳ ಜತೆ ಮಾತನಾಡಿ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಸುದ್ದಿಯನ್ನು ಪಡೆಯುವುದೇ ಇರ ಬಹುದು, ಅಥವಾ ವರ್ಷದಲ್ಲಿ ಮೂರು ಅಥವಾ ನಾಲ್ಕು ಬಾರಿ ನಡೆ ಯುವ ವಿಧಾನಮಂಡಲದ ಕಲಾಪಗಳೇ ಇರಬಹುದು, ನಿತ್ಯವೂ ಹೊಸ ಹೊಸ ಅನುಭವ. ಅದೊಂದು ಅನುಭವ ಮಂಟಪ. ಆದರೆ ಕಾಲ ಕಳೆಯುತ್ತಾ,ಕಳೆಯುತ್ತಾ, ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರಗಳ ಯುಗ ಪ್ರಾರಂಭವಾದ ಮೇಲೆ ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಕಲಾಪಗಳು ರಾಕೇಶನಲ್ಲಿ ಹೇಳಿಕೊಳ್ಳುವಂತಹ ಆಸಕ್ತಿ ಮೂಡಿಸುತ್ತಿಲ್ಲ. ಅನುಭವ ಮಂಟಪ ಕಲ್ಯಾಣ ಮಂಟಪವಾಗಿದೆ ಎಂಬ ಭಾವ. ಶುರುವಾದಾಗ ಜಗಮಗ ಎನ್ನುತ್ತದೆ. ಆನಂತರ ಭಣಭಣ ಅನ್ನುತ್ತದೆ. ಹೊಸತೇನೋ ಕಲಿತೆ ಎಂಬ ಭಾವ ಮೂಡುವುದಿಲ್ಲ. ಇನ್ನು ದಿನ ನಿತ್ಯ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಂತ್ರಿಗಳ ಜತೆ ಮಾತನಾಡಲು ರೌಂಡ್ಸ್ ನಡೆಯುತ್ತಿತ್ತಲ್ಲ ಆ ರೌಂಡ್ಸ್‌ನ ಪರಿ ಪಾಠವೇ ಮಾಯವಾಗಿ ಹೋಗಿದೆ. ಮುಂಚೆಲ್ಲ ದಿನಕ್ಕೆ ನಾಲ್ಕೈದು ಮಂದಿ ಮಂತ್ರಿಗಳನ್ನು ನೋಡಿ ಮಾತನಾಡಿಸುತ್ತಿದ್ದ ಪತ್ರಕರ್ತರಿಗೆ ಈಗ ಯಾರೆಂದರೆ ಯಾರೂ ಸಿಗುತ್ತಿಲ್ಲ. ಒಬ್ಬಬ್ಬರು ಮಂತ್ರಿಗಳು ವಿಧಾನ ಸೌಧಕ್ಕೋ, ವಿಕಾಸಸೌಧಕ್ಕೋ ಬಂದು ಕೂರುತ್ತಾರಾದರೂ ಅವರಿಗೆ ಪತ್ರಕರ್ತರ ಜತೆ ಮಾತನಾಡುವ ಉತ್ಸುಕತೆ ಕಡಿಮೆ.
ರಾಕೇಶನಿಗೆ ಗೊತ್ತಿರುವ ಪ್ರಕಾರ, ಇತ್ತೀಚೆಗೆ ವಿಧಾನಸೌಧಕ್ಕೆ ಮತ್ತು ಅದರ ಪಕ್ಕದಲ್ಲಿರುವ ವಿಕಾಸಸೌಧದ ಚೇಂಬರುಗಳಿಗೆ ಮಂತ್ರಿಗಳು ಬರುವುದು ಕಡಿಮೆ. ಬದಲಿಗೆ ತಮ್ಮ ತಮ್ಮ ಇಲಾಖೆಯಡಿ ಬರುವ ಬೇರೆ ಕಚೇರಿಗಳಿಗೆ ಹೋಗಿ ಅವರು ಸೆಟ್ಲ್ ಆಗುತ್ತಾರೆ. ಇಲಾಖೆಯ ಕೆಲಸವೇ ಇರಲಿ, ಇನ್ನೇನೇ ಇರಲಿ, ಎಲ್ಲವೂ ಅಲ್ಲಿಯೇ. ಹೀಗಾಗಿ ಒಂದು ಕಾಲದಲ್ಲಿ ಜನರ ಆಶೋತ್ತರಗಳಿಗೆ ಸ್ಪಂದಿಸುವ ಉದ್ದೇಶದಿಂದ ಕೆಂಗಲ್ ಹನುಮಂತಯ್ಯನವರು ಕಟ್ಟಿದ ವಿಧಾನಸೌಧದಲ್ಲೇ ಆಗಲಿ,ಆನಂತರ ಮೇಲೆದ್ದು ನಿಂತ ವಿಕಾಸಸೌಧದಲ್ಲೇ ಆಗಲಿ, ಜೀವ ಕಳೆ ಇಲ್ಲ. ಮಂತ್ರಿಗಳು ಬಂದರೆ ತಾನೇ ಅಲ್ಲಿಗೆ ಕಷ್ಟ ಹೇಳಿಕೊಳ್ಳಲು ಜನ ಬರುವುದು? ಅಭಿವೃದ್ಧಿ ಕೆಲಸಗಳ ವಿವರ ಪಡೆಯಲು ಪತ್ರಕರ್ತರು ಹೋಗುವುದು?
ಹೀಗೆ ಹಳೆಯದನ್ನು ನೆನಪಿಸಿಕೊಳ್ಳುತ್ತಾ, ಇಂದಿನ ಪರಿಸ್ಥಿತಿಯನ್ನು ನೋಡುವ ರಾಕೇಶನಿಗೆ ಸಾಹಿತಿ ಎಸ್.ಎಲ್.ಭೈರಪ್ಪನವರ ‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿ ನೆನಪಿಗೆ ಬರುತ್ತದೆ.ಆದರೆ ಏನೇ ಹೋಲಿಕೆ ಮಾಡಿ ನೋಡಿದರೂ ವರ್ತಮಾನದ ಜತೆ ಬದುಕಲೇಬೇಕಲ್ಲ? ಹಾಗಂತಲೇ ರಾಕೇಶ ವರದಿಗಾರಿಕೆಗೆ ಅಂತ ವಿಧಾನಸೌಧದ ಮೆಟ್ಟಿಲು ಹತ್ತುತ್ತಾನೆ. ಅಲ್ಲೀಗ ಮಂತ್ರಿಗಳ ಜತೆ ಮಾತನಾಡಲು ರೌಂಡ್ಸ್ ಇರದಿದ್ದರೂ ವರ್ಷಕ್ಕೆ ಮೂರ್ನಾಲ್ಕು ಬಾರಿ ನಡೆಯುವ ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಕಲಾಪಗಳು ಇರುತ್ತವಲ್ಲ? ತಾನು ಪ್ರತಿನಿಧಿಸುವ ವಿಜಯ ಪ್ರಭ ಪತ್ರಿಕೆಯ ಸೀನಿಯರ್ ರಿಪೋರ್ಟರ್ ರಾಕೇಶನೇ ಆದ್ದರಿಂದ ವಿಧಾನಸಭೆ, ವಿಧಾನಪರಿಷತ್ ಕಲಾಪಗಳ ಮೇಲೆ ನಿಮ್ಮ ಕಣ್ಣಿರಲಿ ಅಂತ ಪತ್ರಿಕೆಯ ಸಂಪಾದಕರು ಹೇಳುತ್ತಾರೆ. ಹೀಗಾಗಿ ಕಲಾಪ ನಡೆಯುವಷ್ಟು ಕಾಲ ದಿನನಿತ್ಯ ರಾಕೇಶ ವಿಧಾನಸೌಧಕ್ಕೆ ಹಾಜರಾಗುತ್ತಾನೆ.
ಇವತ್ತು ವಿಧಾನಸಭೆಯ ಕಲಾಪಕ್ಕೆ ಅಂತ ಮೊಗಸಾಲೆಗೆ ಬಂದವನಿಗೆ ಎದುರಿಗೆ ಬರುತ್ತಿದ್ದವರ ಮುಖ ನೋಡಿ ಖುಷಿಯಾಗಿ ಹೋಯಿತು. ಮಾಜಿ ಸಚಿವ, ಹಾಲಿ ಶಾಸಕ ಈಶ್ವರ ಪ್ರಸಾದ್ ಅವರು ಕಣ್ಣ ಮುಂದೆ ಬಂದಾಗ ಮುಖದಲ್ಲಿ ನಗು ತುಳುಕಿಸಿದ ರಾಕೇಶ: ‘ಸಾರ್,ನಿಮ್ಮ ಜತೆ ಆಫ್ ದಿ ರೆಕಾರ್ಡ್ ಮಾತನಾಡಬೇಕು ಅಂತ ಪ್ರಯತ್ನಿಸುತ್ತಿದ್ದೆ’ ಅಂದ. ಅವನ ಮಾತು ಕೇಳಿದ ಈಶ್ವರ ಪ್ರಸಾದ್ ಅವರು: ‘ಓ ಬನ್ನಿ ರಾಕೇಶ್ ಹೇಗಿದ್ದೀರಿ?’ ಅಂತ ವಿಚಾರಿಸಿದರು. ಹಾಗೆ ವಿಚಾರಿಸುತ್ತಲೇ ರಾಕೇಶನನ್ನು ಮೊಗಸಾಲೆಯಲ್ಲಿದ್ದ ಪ್ರತಿಪಕ್ಷದ ನಾಯಕರ ಕೊಠಡಿಗೆ ಕರೆದುಕೊಂಡು ಹೋದರು. ಪ್ರತಿಪಕ್ಷದ ನಾಯಕರು ಇಲ್ಲದೆ ಹೋದಾಗ ಆಪ್ತ ಮಾತುಕತೆಗೆ ಅಂತ ಪ್ರತಿಪಕ್ಷಗಳ ಇತರ ಶಾಸಕರು ಅಲ್ಲಿಗೆ ಹೋಗುವುದು ರೂಢಿ.
ಹೀಗೆ ರಾಕೇಶನನ್ನು ಆ ಕೊಠಡಿಗೆ ಕರೆದುಕಕೊಂಡು ಹೋದ ಈಶ್ವರ ಪ್ರಸಾದ್ ಅವರು: ‘ಹೇಳಿ ರಾಕೇಶ್, ಏನು ಸಮಾಚಾರ? ಯಾವಸುದ್ದಿಯ ಬೆನ್ನು ಬಿದ್ದಿದ್ದೀರಿ?’ ಎಂದು ಕೇಳಿದಅರು. ಅವರು ಕೇಳಿದ್ದೇ ತಡ, ರಾಕೇಶ ತಡ ಮಾಡದೆ: ‘ಏನಿಲ್ಲ ಸಾರ್ ಸಿಎಂ ಶಿಶಿರ ಚಂದ್ರ ಅವರನ್ನು ಕೆಳಗಿಳಿಸುವ ಯತ್ನ ನಡೆಯುತ್ತಿದೆಯಲ್ಲ? ಅದು ಎಲ್ಲಿಗೆ ಬಂತು?’ ಎಂದು ಕೇಳಿದ.
ರಾಕೇಶನ ಪ್ರಶ್ನೆಯನ್ನು ಕೇಳಿ ಈಶ್ವರಪ್ರಸಾದ್ ಸ್ವಲ್ಪ ಹೊತ್ತು ಮೌನವಾದರು.ಆನಂತರ ರಾಕೇಶನ ಮುಖ ನೋಡುತ್ತಾ:‘ ಮಿಸ್ಟರ್ ರಾಕೇಶ್, ಶಿಶಿರ ಚಂದ್ರ ಅವರನ್ನು ಬದಲಿಸಿ,ತಾವು ಆ ಜಾಗದಲ್ಲಿ ಕೂರಬೇಕು ಅಂತ ಹಲವು ನಾಯಕರು ಯತ್ನಿಸುತ್ತಿದ್ದಾರೆ. ಆದರೆ ಜನನಾಯಕ ಅನ್ನಿಸಿಕೊಂಡ ಒಬ್ಬ ಮುಖ್ಯಮಂತ್ರಿಯನ್ನು ಬದಲಿಸುವುದು ಅಷ್ಟು ಸುಲಭದ ಕೆಲಸವಲ್ಲ’ ಎಂದರು.
‘ಆದರೆ ಮುಖ್ಯಮಂತ್ರಿಗಳನ್ನು ಬದಲಿಸಲು ಯತ್ನಿಸುತ್ತಿರುವ ನಾಯಕರು ಮೊನ್ನೆ ನೆರೆ ರಾಜ್ಯಕ್ಕೆ ಹೋಗಿದ್ದರಲ್ಲ ಅಲ್ಲಿ ಪವರ್ ಲಾಬಿಯ ಪ್ರಮುಖರೊಬ್ಬರ ಅತಿಥಿ ಗೃಹದಲ್ಲಿ ಕುಳಿತು ನೆರೆ ರಾಜ್ಯದ ಮುಖ್ಯಮಂತ್ರಿಗಳ ಜತೆ ಮಾತನಾಡುತ್ತಿದ್ದರಂತೆ. ಇನ್ನೇನು ಈಗಿರುವ ಮುಖ್ಯಮಂತ್ರಿಗಳು ಕೆಳಗಿಳಿದು ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ದಿನ ಹತ್ತಿರವಾಗುತ್ತಿದೆ. ಹೀಗಾಗಿ ಇಲ್ಲಿನ ಉದ್ಯಮಿಗಳು ಬಂಡವಾಳ ಹೂಡಲು ನಮ್ಮ ರಾಜ್ಯಕ್ಕೆ ಬರಲಿ ಎಂದು ಹೇಳಿದರಂತೆ. ಪಕ್ಷದ ವರಿಷ್ಠರ ಭರವಸೆ ಇಲ್ಲದೆ ಅವರು ಇಂತಹ ಆತ್ಮವಿಶ್ವಾಸದ ಮಾತನಾಡಲು ಸಾಧ್ಯವೇ?’ ಎಂದು ರಾಕೇಶ್ ರಪ್ಪಂತ ವಿವರಿಸಿದ.
ರಾಕೇಶನ ಮಾತು ಕೇಳಿದ ಈಶ್ವರಪ್ರಸಾದ್ ಅವರು: ‘ನೋಡಿ, ದಿಲ್ಲಿಯ ನಾಯಕರು ಭರವಸೆ ಕೊಟ್ಟ ಕೂಡಲೇ ಎಲ್ಲವೂ ಸೆಟ್ಲಾಗಿ ಬಿಡುತ್ತದೆ ಎಂದಲ್ಲ. ಮುಖ್ಯಮಂತ್ರಿಗಳನ್ನು ಬದಲಿಸಲು ದಿಲ್ಲಿಯ ಕೆಲನಾಯಕರು ಉತ್ಸುಕರಿರಬಹುದು, ಆದರೆ ಇಲ್ಲಿ ಬಹುತೇಕ ಶಾಸಕರುತಯಾರಿರಬೇಕಲ್ಲ? ನಿನ್ನೆ ವಿಧಾನಸಭೆಯ ಕಲಾಪದಲ್ಲಿ ಗಣಿ ಧಣಿ ಅನ್ನಿಸಿಕೊಂಡ ಶಾಸಕರು ಮಾತನಾಡುವುದನ್ನು ನೀವು ಕೇಳಿದಿರಿ. ಅವರು ಏನೆಂದರು? ಈ ರಾಜ್ಯದ ಹಿತದೃಷ್ಟಿಯಿಂದ ನೀವೇ ಅಧಿಕಾರದಲ್ಲಿ ಮುಂದುವರಿಯಿರಿ ಅಂತ ಮುಖ್ಯಮಂತ್ರಿಗಳಿಗೇ ಹೇಳಿದರು. ಹೀಗೆ ಪ್ರತಿಪಕ್ಷದಲ್ಲಿರುವ ಒಬ್ಬ ಶಾಸಕ, ನಾಯಕ ಇಂತಹ ಮಾತುಗಳನ್ನಾಡುತ್ತಾರೆ ಎಂದರೆ, ಆಡಳಿತ ಪಕ್ಷದ ಶಾಸಕರ ಮನಸ್ಸು ಹೇಗಿರಬಹುದು?’ ಅಂತ ಕೇಳಿದರು ಈಶ್ವರ ಪ್ರಸಾದ್.
ಅವರಾಡಿದ ಮಾತುಗಳನ್ನು ಕೇಳುತ್ತಾ ರಾಕೇಶ ಮೌನಿಯಾದಾಗ ಈಶ್ವರಪ್ರಸಾದ್ ಅವರೇ ಹೇಳಿದರು.‘ಮಿಸ್ಟರ್ ರಾಕೇಶ್, ಈ ಕರ್ನಾಟಕದಲ್ಲಿ ಜನನಾಯಕರು ಅಂತ ನೀವು ಯಾವ್ಯಾವ ಮುಖ್ಯಮಂತ್ರಿಗಳನ್ನು ಗುರುತಿಸುತ್ತೀರೋ? ಉದಾಹರಣೆಗೆ ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಬಂಗಾರಪ್ಪ, ದೇವೇಗೌಡ, ಯಡಿಯೂರಪ್ಪ ಅವರಂತಹವರು. ಇವರೆಲ್ಲ ಹೇಗೆ ಜನನಾಯಕರು ಅನ್ನಿಸಿಕೊಂಡರು ಗೊತ್ತಾ?’ ಅವರ ಮಾತು ಕೇಳಿದ ರಾಕೇಶ ಪ್ರತಿಕ್ರಿಯಿಸಲಿಲ್ಲ. ಆಗ ಈಶ್ವರ ಪ್ರಸಾದ್ ಅವರೇ ವಿವರಿಸತೊಡಗಿದರು.‘ರಾಕೇಶ್ ನೀವು ದೇವರಾಜ ಅರಸರನ್ನೇ ತೆಗೆದುಕೊಳ್ಳಿ, ಅವರು ಜನನಾಯಕರಾಗಿದ್ದು ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದರಿಂದ ಮಾತ್ರವಲ್ಲ, ಆ ಜನರ ಪ್ರತಿನಿಧಿಗಳಾಗಿ ವಿಧಾನಸಭೆಗೆ ಆಯ್ಕೆಯಾಗಿ ಬಂದಿದ್ದರಲ್ಲ ಶಾಸಕರು ಅವರ ಕಷ್ಟಗಳಿಗೂ ಸ್ಪಂದಿಸುತ್ತಿದ್ದುದರಿಂದ ಅವರು ಸುಭದ್ರವಾಗಿ ಮುಖ್ಯಮಂತ್ರಿ ಹುದ್ದೆಯಲ್ಲಿ ಕುಳಿತಿದ್ದರು. ನಾಡಿನ ಬಡವರು, ಶೋಷಿತರಿಗೆ ಭವಿಷ್ಯ ಕಲ್ಪಿಸಬೇಕು ಅಂತ ಅವರು ಹೇಗೆ ಯೋಚಿಸುತ್ತಿದ್ದರೋ ಹಾಗೆಯೇ ಆ ಜನರ ಪ್ರತಿನಿಧಿಗಳಾಗಿ ಬಂದವರ ಕಷ್ಟಗಳನ್ನು ಪರಿಹರಿಸಲೂ ಅವರು ಮುಂದಾಗುತ್ತಿದ್ದರು.
ನಿಮಗೆ ಸಣ್ಣದೊಂದು ಉದಾಹರಣೆ ಕೊಡುತ್ತೇನೆ. ಒಂದು ಸಲ ನಾನೇ ಅರಸರ ಜತೆ ಮಾತನಾಡುತ್ತಾ ಕುಳಿತಾಗ ಉತ್ತರ ಕರ್ನಾಟಕ ಭಾಗದ ಶಾಸಕರೊಬ್ಬರು ಬಂದು ತಮ್ಮ ಪರಿಸ್ಥಿತಿಯನ್ನು ಹೇಳಿಕೊಂಡರು. ಶಾಸಕರಾಗಿದ್ದರೂ ತಮ್ಮ ಕಷ್ಟಗಳು ಕಡಿಮೆಯಾಗಿಲ್ಲ ಎಂದು ಅವರು ಅಲವತ್ತುಕೊಂಡಾಗ ಅರಸರು, ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುತ್ತಿದ್ದ ನೀರಾವರಿ ಕಾಮಗಾರಿಯ ಟೆಂಡರ್ ಪಡೆದಿದ್ದ ಗುತ್ತಿಗೆದಾರನಿಗೆ ಫೋನು ಮಾಡಿ: ಇಂತಹ ಶಾಸಕರನ್ನು ಕಳಿಸುತ್ತೇನೆ. ಅವರಿಗೆ ಒಂದು ಮನೆ ಕಟ್ಟಿಸಿಕೊಡು ಎಂದರು.
ಈ ಮಾತು ಕೇಳಿದ ಕೂಡಲೇ ನೀವು: ‘ಇದು ಭ್ರಷ್ಟಾಚಾರವಲ್ಲವೇ?’ ಎಂದು ಕೇಳಬಹುದು. ಆದರೆ ಅರಸರು ಈ ಕೆಲಸ ಮಾಡದಿದ್ದರೆ ದುಡ್ಡಿದ್ದ ಬೇರೆಯವರು ತಮ್ಮ ಪ್ರಭಾವ ಬಳಸಿ ಗುತ್ತಿಗೆದಾರನಿಂದ ಇಂತಹ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಇದೆಲ್ಲ ಅರಸರಿಗೆ ಗೊತ್ತಿತ್ತು. ಹೀಗಾಗಿ ಅವರು ತಮ್ಮ ಬಳಿ ಬರುವ ಶಾಸಕರಿಗೆ: ನೀವು ಭ್ರಷ್ಟರಾಗಬೇಡಿ. ಕಷ್ಟ ಇದ್ದರೆ ನನ್ನ ಬಳಿ ಹೇಳಿಕೊಳ್ಳಿ.ನಾನು ಪರಿಹರಿಸುತ್ತೇನೆ. ಏಕೆಂದರೆ ಯಾರ ಬಳಿ ನೀವು ನೆರವು ಪಡೆಯಲು ಬಯಸುತ್ತೀರೋ ವಾಸ್ತವದಲ್ಲಿ ಅವರು ಅದರ ಹಲವು ಪಟ್ಟು ನೆರವು ನೀಡುವಷ್ಟು ಲಾಭವನ್ನು ಸರ್ಕಾರದಿಂದ ಪಡೆದಿರುತ್ತಾರೆ. ಹೀಗಾಗಿ ಆ ಲಾಭದ ಕತೆ ನಾನು ನೋಡಿಕೊಳ್ಳುತ್ತೇನೆ. ನೀವು ಕೈ ಕೆಡಿಸಕೊಳ್ಳಬೇಡಿ ಎನ್ನುತ್ತಿದ್ದರು. ಹಾಗೇ ನಡೆದುಕೊಂಡರು ಕೂಡ. ನಿಮಗೆ ಗೊತ್ತಿರಲಿ, ಅರಸರ ಕೊನೆಯ ಕಾಲದಲ್ಲಿ ಸಣ್ಣ ಪ್ರಮಾಣದ ದುಡ್ಡಿಗೂ ಪರದಾಡುವ ಸ್ಥಿತಿ ಇತ್ತು.ಅದರರ್ಥ ಬೇರೇನೂ ಅಲ್ಲ.ಅರಸರು ತಮ್ಮ ಹಿತ ನೋಡಿಕೊಳ್ಳುವ ಬದಲು ರಾಜ್ಯದ ಜನರ, ಜನಪ್ರತಿನಿಧಿಗಳ ಹಿತ ಕಾಪಾಡಿದರು.
ಅವರು ನಿಜಲಿಂಗಪ್ಪನವರ ಸರ್ಕಾರದಲ್ಲಿ ಮಂತ್ರಿಯಾಗಿದ್ದಾಗಲೇ ಜನಪ್ರತಿನಿಧಿಗಳ ಬಗ್ಗೆ ಇಂತಹ ಕಾಳಜಿ ತೋರಿಸುತ್ತಿದ್ದುದರಿಂದ ೧೯೭೨ರಲ್ಲಿ ಅವರೇ ಮುಖ್ಯಮಂತ್ರಿಯಾಗಲಿ ಎಂದು ಬಹುತೇಕ ಶಾಸಕರು ಬಯಸಿದರು. ಅವತ್ತು ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ಸಿಗೆ ಅರಸರೇ ಅಧ್ಯಕ್ಷರಾಗಿದ್ದರೂ ಮತ್ತು ಅವರ ನೇತೃತ್ವದಲ್ಲೇ ಪಕ್ಷ ಅಧಿಕಾರಕ್ಕೆ ಬಂದಿದ್ದರೂ ಇನ್ನೂ ಹಲವು ನಾಯಕರು ಮುಖ್ಯಮಂತ್ರಿ ಹುದ್ದೆಗೇರಲು ಲಾಬಿ ಮಾಡಿದ್ದರು. ಇದೇ ಕಾರಣಕ್ಕಾಗಿ ಇಂದಿರಾ ಗಾಂಧಿಯವರ ಬಳಿಯೂ ಹೋಗಿದ್ದರು. ಆದರೆ ಇಂದಿರಾ ಗಾಂಧಿ ಅವರಿಗೆ ಗೊತ್ತಿತ್ತು. ರಾಜ್ಯದಲ್ಲಿ ಪಕ್ಷದ ಬಹುತೇಕ ಶಾಸಕರು ಅರಸರನ್ನೇ ಬಯಸುತ್ತಾರೆ ಎಂದು. ಅಂದ ಹಾಗೆ ನಿಮಗೆ ಗೊತ್ತಿರಲಿ ರಾಕೇಶ್, ಜನಪ್ರತಿನಿಧಿಗಳಾಗಿ ಬರುವವರೂ ಮನುಷ್ಯರೇ. ಅವರಿಗೂ ಕಷ್ಟವಿರುತ್ತದೆ. ಹೀಗೆ ಕಷ್ಟ ಅನುಭವಿಸಿ, ಮನೆ ಬಾಡಿಗೆ ಕಟ್ಟಲಾಗದ ಸ್ಥಿತಿಯಲ್ಲಿ ತೀರಿಕೊಂಡವರು ಎಷ್ಟು ಜನರಿದ್ದಾರೆ ಗೊತ್ತಾ? ಇದು ಅರಸರಿಗೆ ಗೊತ್ತಿತ್ತು. ಹೀಗಾಗಿ ಅವರು ಶಾಸಕರ ಕಷ್ಟಗಳಿಗೆ ಸ್ಪಂದಿಸುತ್ತಿದ್ದರು. ಇದೇ ಕಾರಣಕ್ಕಾಗಿ ಎಷ್ಟೇ ಪ್ರಬಲ ಎದುರಾಳಿಗಳು ಎದ್ದು ನಿಂತರೂ ಶಾಸಕರು ಅರಸರ ಜತೆ ನಿಲ್ಲುತ್ತಿದ್ದರು.
ಮುಂದೆ ಜನನಾಯಕರು ಅನ್ನಿಸಿಕೊಂಡ ಹೆಗಡೆ, ದೇವೇಗೌಡ, ಬಂಗಾರಪ್ಪ, ಯಡಿಯೂರಪ್ಪ ಅವರೆಲ್ಲ ಇದನ್ನರ್ಥ ಮಾಡಿಕೊಂಡಿದ್ದರು. ಹೀಗಾಗಿ ಇವತ್ತಿಗೂ ಜನರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ. ಈ ಪೈಕಿ ಹಲವರು ಬಲವಂತವಾಗಿ ಅಧಿಕಾರ ಕಳೆದುಕೊಂಡರಲ್ಲ ಅಂತ ನೀವು ಕೇಳಬಹುದು. ಅದರೆ ಅವರು ಅಽಕಾರ ಕಳೆದುಕೊಂಡ ನಂತರ ಅವರಿದ್ದ ಪಕ್ಷಗಳು ಹೀನಾಯವಾಗಿ ಸೋತಿವೆ.
ಇನ್ನು ನೀವು ಮುಖ್ಯಮಂತ್ರಿಗಳನ್ನು ಬದಲಿಸಲು ಹೋರಾಡುತ್ತಿರುವ ನಾಯಕರ ಬಗ್ಗೆ ಕೇಳುತ್ತಿದ್ದೀರಲ್ಲ? ಅವರಿಗೆ ಇವತ್ತು ಶಾಸಕರಾದವರ ಕಷ್ಟಗಳು ಗೊತ್ತಿದ್ದರೆ, ಅವರ ಕಷ್ಟಗಳಿಗೆ ಸ್ಪಂದಿಸುವ ಮನಸ್ಸಿದ್ದಿದ್ದರೆ ಸಿಎಂ ಬದಲಾವಣೆಯ ಆಟಕ್ಕೆ ವೇಗ ಬರುತ್ತಿತ್ತು.
ಇವತ್ತು ನಾನು ಹೇಳುತ್ತಿರುವುದು ನಿಮಗೆ ಕಠಿಣವಾಗಿದೆ ಅನ್ನಿಸಬಹುದು. ಆದರೆ ಇದೇ ವಾಸ್ತವ ರಾಕೇಶ್. ಇದನ್ನರ್ಥ ಮಾಡಿಕೊಳ್ಳದೆ ದಿಲ್ಲಿಯ ನಾಯಕರು ಹಿಂದೆ ಮುಂದೆ ಆಲೋಚಿಸದೆ, ಶಿಶಿರ ಚಂದ್ರ ಅವರ ಮನ ಒಲಿಸದೆ ಕೆಳಗಿಳಿಸಿದರು ಎಂದುಕೊಳ್ಳಿ. ಆಗ ಸರ್ಕಾರವೇ ಅಲುಗಾಡತೊಡಗುತ್ತದೆ ಎಂದರು ಈಶ್ವರ ಪ್ರಸಾದ್. ಅವರಾಡಿದ ಮಾತನ್ನು ಕೇಳಿದ ರಾಕೇಶ್ ಸುಮ್ಮನೆ ನಕ್ಕ.
” ಜನನಾಯಕರು ಅನ್ನಿಸಿಕೊಂಡ ಹೆಗಡೆ, ದೇವೇಗೌಡ, ಬಂಗಾರಪ್ಪ, ಯಡಿಯೂರಪ್ಪ ಅವರೆಲ್ಲ ಇದನ್ನರ್ಥ ಮಾಡಿಕೊಂಡಿದ್ದರು. ಹೀಗಾಗಿ ಇವತ್ತಿಗೂ ಜನರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ. ಈ ಪೈಕಿ ಹಲವರು ಬಲವಂತವಾಗಿ ಅಧಿಕಾರ ಕಳೆದುಕೊಂಡರಲ್ಲ ಅಂತ ನೀವು ಕೇಳಬಹುದು. ಅದರೆ ಅವರು ಅಧಿಕಾರ ಕಳೆದುಕೊಂಡ ನಂತರ ಅವರಿದ್ದ ಪಕ್ಷಗಳು ಹೀನಾಯವಾಗಿ ಸೋತಿವೆ.”
ನವೀನ್ ಡಿಸೋಜ ಕೊಡಗು ಜಿಲ್ಲೆಯಲ್ಲಿ ಇವೆ ಅಪಾಯಕಾರಿ ಸ್ಥಳಗಳು; ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸಲಹೆ ಮಡಿಕೇರಿ:ಬೇಸಿಗೆಯಲ್ಲಿ ಬಿಸಿಲ ಝಳಕ್ಕೆ ನೀರಿಗಿಳಿದು…
ಕೆ.ಬಿ.ರಮೇಶನಾಯಕ ಶೇ.೩೩ ಮಹಿಳಾ ಮೀಸಲು ಜಾರಿಯಾದರೆ ಐದು ಸ್ಥಾನ ಮೀಸಲು ಚಾಮುಂಡೇಶ್ವರಿ, ಕೃಷ್ಣರಾಜ, ನರಸಿಂಹರಾಜ ಕ್ಷೇತ್ರದ ಕೆಲ ಭಾಗಗಳನ್ನು ಬೇರ್ಪಡಿಸಿ…
ಹೇಮಂತ್‌ಕುಮಾರ್ ಮಂಡ್ಯ: ಜಿಲ್ಲೆಯ ಮೇಲುಕೋಟೆ ಪ್ರಖ್ಯಾತ ಧಾರ್ಮಿಕ ಮತ್ತು ಐತಿಹಾಸಿಕ ಕ್ಷೇತ್ರವಾಗಿದ್ದು, ಹತ್ತಾರು ಶತಮಾನಗಳ ವಿಶೇಷತೆಗಳನ್ನು ಒಳಗೊಂಡಿದೆ. ಈ ಪಟ್ಟಿಯಲ್ಲಿ…
ಎಚ್.ಎಸ್.ದಿನೇಶ್‌ಕುಮಾರ್ ಮೈಸೂರು: ಮೈಸೂರು ಸಂಸ್ಥಾನದ ಕೊನೆಯ ಅರಸ, ದೇಶ ಸ್ವತಂತ್ರಗೊಂಡ ನಂತರ ರಾಜ ಪ್ರಮುಖರಾಗಿ ಸೇವೆ ಸಲ್ಲಿಸಿದ್ದ ಜಯಚಾಮರಾಜ ಒಡೆಯರ್…
ದ್ರಾವಿಡ ಚಳವಳಿಗಾರ ಡಾ.ಕೆ.ವೀರಮಣಿ ಅವರಿಗೆ ಬೋಧಿ ವೃಕ್ಷ ಪ್ರಶಸ್ತಿ ಪೆರಿಯಾರ್ ರಾಮಸ್ವಾಮಿ ಅವರ ಸೈದ್ಧಾಂತಿಕ ಉತ್ತರಾಧಿಕಾರಿ ಬೆಂಗಳೂರು: ಮೌಢ್ಯ…