Andolana originals

ರಂಗನತಿಟ್ಟು ಸಮೀಪ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ: ಪರ-ವಿರೋಧ ಅಭಿಪ್ರಾಯ

ಪರಿಸರ ಪ್ರೇಮಿಗಳು, ಸಾರ್ವಜನಿಕರ ಪರ-ವಿರೋಧ ಅಭಿಪ್ರಾಯ

ಮಂಡ್ಯ: ಮೈಸೂರು ಬೈಪಾಸ್ ಮಾಡುವ ಗುರಿಯನ್ನು ಹೊಂದಿರುವ ಎನ್‌ಎಚ್ ೨೭೫ರ ವಿಸ್ತೃತ ಮಾರ್ಗವಾದ ಬೆಂಗಳೂರು-ಕುಶಾಲನಗರ ಹೆದ್ದಾರಿಯು ರಂಗನತಿಟ್ಟು ಪಕ್ಷಿಧಾಮದ ಪರಿಸರ ಸೂಕ್ಷ್ಮ ವಲಯದ ಮೂಲಕ ಹಾದುಹೋಗಲಿದ್ದು, ವನ್ಯಜೀವಿಗಳ ಮೇಲೆ ಯಾವುದೇ ಪರಿಣಾಮ ಬೀರದಂತೆ ಯೋಜನೆ ರೂಪಿಸಲು ಪರಿಸರ ಸೂಕ್ಷ ವಲಯದ ಅಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ.

ಬೆಂಗಳೂರು-ಕುಶಾಲನಗರ ಹೆದ್ದಾರಿ ನಿರ್ಮಾಣಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಽಕಾರ ಈ ಯೋಜನೆಗೆ ಅನುಮತಿ ಪಡೆದುಕೊಂಡಿದೆ. ಈ ಬಗ್ಗೆ ಸಾರ್ವಜನಿಕರು, ಪರಿಸರ ಪ್ರೇಮಿಗಳು ಸಾಧಕ ಮತ್ತು ಬಾಧಕಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಪರಿಸರ ಇಲಾಖೆ ಅನುಮತಿ ಸರಿಯಲ್ಲ…: 

ರಂಗನತಿಟ್ಟು ಪಕ್ಷಿಧಾಮ ಪರಿಸರ ಸೂಕ್ಷ  ವಲಯ. ಇಲ್ಲಿಗೆ ದೂರದ ದೇಶಗಳಿಂದ ಪಕ್ಷಿಗಳು ಸಂತಾನೋತ್ಪತ್ತಿಗಾಗಿ ಬರುತ್ತವೆ. ಹೀಗಿರುವಾಗ ಅರಣ್ಯ ಇಲಾಖೆ, ಪರಿಸರ ಇಲಾಖೆಯವರು ಹೇಗೆ ಹೈವೇ ಹಾದು ಹೋಗಲು ಒಪ್ಪಿಗೆ ಕೊಟ್ಟರು? ಡಿಪಿಆರ್ ಆಗುವ ಸಮಯದಲ್ಲಿ ಶಾಸಕರು ಇದನ್ನು ನಿರ್ಲಕ್ಷಿಸಿದರೆ ಪಕ್ಷಿಧಾಮದ ಪಕ್ಕದಲ್ಲೇ ರಸ್ತೆ ಹಾದು ಹೋಗಬೇಕೆ? ಅನತಿ ದೂರದಲ್ಲಿ ಹೋಗಿದ್ದರೆ ನಷ್ಟವೇನಾಗುತ್ತಿತ್ತು? ಅರಣ್ಯ ಮತ್ತು ಪರಿಸರ ಇಲಾಖೆ ಒಪ್ಪಿಗೆ ಕೊಟ್ಟಿದ್ದರೆ ಅವರು ಅಪರಾಧಿಗಳಾಗುತ್ತಾರೆ.

ಸುನಂದಾ ಜಯರಾಂ, ರೈತ ಹೋರಾಟಗಾರರು

ಪಕ್ಷಿಗಳ ಸಹಜ ಜೀವನಕ್ಕೆ ತೊಂದರೆ…: 

ಈಗಾಗಲೇ ರಸ್ತೆಗಾಗಿ ಭೂಸ್ವಾಧೀನವಾಗಿರುವ ರೈತರಿಗೆ ಹಣ ಪಾವತಿಯಾಗಿದೆ. ಕಾಮಗಾರಿಯೂ ಪ್ರಗತಿಯಲ್ಲಿದೆ. ಇದು ಮೊದಲೇ ಎಚ್ಚೆತ್ತುಕೊಳ್ಳಬೇಕಾಗಿದ್ದ ವಿಚಾರ. ವಾಸ್ತವದಲ್ಲಿ ಹೈವೇನಲ್ಲಿ ಸಂಚರಿಸುವ ವಾಹನಗಳಿಂದ ಶಬ್ದ ಮಾಲಿನ್ಯ, ವಾಯು ಮಾಲಿನ್ಯ, ರಾತ್ರಿ ವೇಳೆ ಬೆಳಕಿನ ಪ್ರಭಾವ ಇವೆಲ್ಲ ಪಕ್ಷಿಗಳ ಸಹಜ ಜೀವನವನ್ನು ವಿಚಲಿತಗೊಳಿಸುವ ಸಂಗತಿ.”

ಅರ್ಜುನಹಳ್ಳಿ ಪ್ರಸನ್ನಕುಮಾರ್, ನೀರಾವರಿ ಹಾಗೂ ಪರಿಸರ ತಜ್ಞರು

ಹೈವೇ ನಿರ್ಮಾಣದ ಅಗತ್ಯ ಇರಲಿಲ್ಲ…:  ಈಗಾಗಲೇ ಬೆಂಗಳೂರು-ಮೈಸೂರು ಹೈವೇ ಚೆನ್ನಾಗಿದೆ. ಸುಗಮ ಸಂಚಾರವೂ ಇದೆ. ಹೀಗಿರುವಾಗ ಪರಿಸರ ಸೂಕ್ಷ  ವಲಯದಲ್ಲಿ ಹೈವೇ ನಿರ್ಮಾಣದ ಅಗತ್ಯವೇ ಇರಲಿಲ್ಲ. ಇನ್ನು ಮುಂದೆ ಕೆಆರ್‌ಎಸ್‌ಗೆ ಬರುವ ಕೇರಳ, ತಮಿಳುನಾಡಿನ ಪ್ರವಾಸಿಗರು, ದೊಡ್ಡ ಲಾರಿಗಳವರು ಈ ರಸ್ತೆಯನ್ನೇ ಬಳಸುತ್ತಾರೆ. ಹೆಚ್ಚು ಶಬ್ದವಾಗುವುದು, ಹೊಗೆ, ಲೈಟ್ ಇವೆಲ್ಲ ಪಕ್ಷಿಗಳ ಸಹಜ ಜೀವನಕ್ಕೆ ಮಾರಕವಾಗುತ್ತವೆ. ಖಂಡಾಂತರದಿಂದ ವಲಸೆ ಬರುವ ಪಕ್ಷಿಗಳಿಗೆ ಇದು ಅತ್ಯಂತ ಸೂಕ್ತವಾದ ಸ್ಥಳ ಎಂದೇ ಗುರುತಿಸಿಕೊಂಡಿರುತ್ತವೆ. ಒಮ್ಮೆ ಇದು ಸರಿಯಿಲ್ಲ ಎಂದಾದರೆ ವಲಸೆ ತಪ್ಪಿಹೋಗುತ್ತದೆ. ಮುಂದೆ ಇದು ಇಕೊಲಜಿ ಮೇಲೆ ಪರಿಣಾಮ ಬೀರಲಿದೆ.

ಎಂ.ಜಿ.ವಿನಯ್‌ಕುಮಾರ್, ಕಿರುಚಿತ್ರ ನಿರ್ದೇಶಕರು, ಅಧ್ಯಕ್ಷರು, ಕನ್ನಡ ಕರ್ನಾಟಕ ಫೌಂಡೇಶನ್‌  

ಪಕ್ಷಿಗಳು ವಿಚಲಿತವಾಗುತ್ತವೆ…: 

ರಂಗನತಿಟ್ಟು ಪಕ್ಷಿಧಾಮ ನೈಸರ್ಗಿಕವಾಗಿದ್ದು, ಇಲ್ಲಿ ಯಾವುದೇ ಅಭಿವೃದ್ಧಿಪರ ಚಟುವಟಿಕೆಗಳು ನಡೆಯಕೂಡದು ಎಂಬುದು ನಿಯಮಗಳೇ ಹೇಳುತ್ತವೆ. ಹೀಗಿರುವಾಗ ಪಕ್ಷಿಗಳು ಸೂಕ್ಷ ಜೀವಿಗಳಾಗಿದ್ದು, ಶಬ್ದ, ಬೆಳಕು ಸೇರಿದಂತೆ ಮಾನವನ ಅನೈಸರ್ಗಿಕ ಕಾಮಗಾರಿಗಳಿಂದ ಅವುಗಳು ವಿಚಲಿತವಾಗುತ್ತವೆ. ಎತ್ತರದ ಗೋಡೆ ಕಟ್ಟುವುದರಿಂದ, ಬೆಳಕು ಹಕ್ಕಿಗಳ ಆವಾಸಸ್ಥಾನಕ್ಕೆ ಬೀಳದಂತೆ ಗಿಡ ಬೆಳೆಸುತ್ತೇವೆಂಬುದು ವ್ಯರ್ಥ ಪ್ರಯತ್ನ.

ಮದನ್‌ರಾವ್, ಪ್ರವಾಸಿ ಮಾರ್ಗದರ್ಶಕರು, ಶ್ರೀರಂಗಪಟ್ಟಣ

ಈ ಮಾರ್ಗದಲ್ಲಿ ಹಾದು ಹೋಗುವುದು ಸರಿಯಲ್ಲ…: 

ಸಾವಿರಾರು ಕಿ.ಮೀ.ದೂರದಿಂದ ಸಂತಾನೋತ್ಪತ್ತಿಗಾಗಿ ಬಂದು ಹೋಗುವ ಅಪರೂಪದ ಪಕ್ಷಿಗಳಿಗೆ ಆಶ್ರಯ ತಾಣವಾಗಿರುವ ಪಕ್ಷಿಧಾಮ ಇಡೀ ಭಾರತದಲ್ಲಿಯೇ ಅಪರೂಪವಾದ ನೈಸರ್ಗಿಕ ತಾಣ. ಸಹಜವಾಗಿ ಪಕ್ಷಿಗಳು ಶಬ್ದ ಮಾಲಿನ್ಯದಿಂದ ದೂರವಿರಲು ಬಯಸುತ್ತವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನೆ ರೂಪಿಸುವಾಗ ಪಕ್ಷಿಧಾಮಕ್ಕೆ ಅನತಿ ದೂರದಲ್ಲಿ ಮಾಡಿದ್ದರೆ ಪಕ್ಷಿಗಳಿಗೆ ಯಾವುದೇ ತೊಂದರೆಯಾಗುತ್ತಿರಲಿಲ್ಲ.”

ಮಂಗಲ ಎಂ.ಯೋಗೀಶ್, ಅಧ್ಯಕ್ಷರು, ಪರಿಸರ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಮಂಡ್ಯ

ಯಾವುದೇ ಸಮಸ್ಯೆ ಇಲ್ಲ…: 

ಈ ಕುಶಾಲನಗರ ಹೈವೇ ರಸ್ತೆಯು ರಂಗನತಿಟ್ಟು ಪಕ್ಷಿಧಾಮದಿಂದ ಅನತಿ ದೂರದಲ್ಲಿರುವುದರಿಂದ ಪಕ್ಷಿಗಳಿಗೆ ಯಾವುದೇ ರೀತಿ ಧಕ್ಕೆಯಾಗುತ್ತದೆಂದು ನನಗನಿಸುತ್ತಿಲ್ಲ. ಆದಾಗ್ಯೂ ಪಕ್ಷಿಗಳಿಗೆ ತೊಂದರೆ ಆಗಬಾರದೆಂಬ ನಿಟ್ಟಿನಲ್ಲಿ ಹೈವೇ ಪ್ರಾಧಿಕಾರ ಎತ್ತರದ ಗೋಡೆ ನಿರ್ಮಾಣ ಮಾಡುತ್ತಾರೆಂಬ ವಿಚಾರ ತಿಳಿಯಿತು. ಹಾಗಾಗಿ ಸಮಸ್ಯೆ ಇಲ್ಲ.

ವೈ.ರಮೇಶ್, ಪರಿಸರ ಪ್ರೇಮಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಶ್ರೀರಂಗಪಟ್ಟಣ

 

 

ಆಂದೋಲನ ಡೆಸ್ಕ್

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಭಾಷೆ, ಬದುಕು ಕಲಿಸಿದ ನನ್ನಪ್ಪ

ಸಂತೋಷ ಕೌಲಗಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಅವನ ತಂದೆಯ ಪಾತ್ರ ಬಹಳ ದೊಡ್ಡದು. ಒಬ್ಬ ಆದರ್ಶ ಮನೋಭಾವದ, ಮಕ್ಕಳನ್ನು ಸಮಾನವಾಗಿ…

29 mins ago

ಗಾಂಧಿ ಅಭಿಯಾನ ಅರಿವಿನ ಯಾನ | ಮತಗಳ ಪರಿಚಯ

ನಾನು ಇಂಗ್ಲೆಂಡಿಗೆ ಹೋದ ಎರಡನೆಯ ವರ್ಷದ ಕೊನೆಯಲ್ಲಿ ನನಗೆ ಇಬ್ಬರು ಥಿಯಾಸಫಿಸ್ಟರ ಪರಿಚಯವಾಯಿತು. ಅವರಿಬ್ಬರೂ ಅಣ್ಣ ತಮ್ಮಂದಿರು ಮತ್ತು ಅವಿವಾಹಿತರು.…

44 mins ago

ರೆಟ್ರೋ ಫೋಟೋಗಳ ಹೊಸ ಅಲೆ

ಹಳೆಯ ನೆನಪು, ಹೊಸ ತಂತ್ರಜ್ಞಾನ ೧೯೭೦-೮೦ರ ದಶಕದ ರೂಪದಲ್ಲಿ ಹೊಸ ತಲೆಮಾರು -ಡಾ.ಎಂ.ಲೋಕೇಶ ಒಮ್ಮೆ ಯೋಚಿಸಿ ನೋಡಿ... ಇಂದು ತೆಗೆದ…

57 mins ago

ಮಹಾಪಂಚ್‌ ಕಾರ್ಟೂನ್‌

  ಮಹಾಪಂಚ್‌ ಕಾರ್ಟೂನ್‌ | ಸೆಪ್ಟಂಬರ್‌ 12 ಶನಿವಾರ

1 hour ago

ಒಳ್ಳೆಯತನಕ್ಕೂ ಕೆಟ್ಟತನಕ್ಕೂ ಜಾತಿ ಮಾನದಂಡ ಅಲ್ಲ

ಜಾತಿ ಯಾವುದು?" - ಒಂದು ಪ್ರಶ್ನೆಯ ಹಿಂದೆ ಅಡಗಿರುವ ಮನಸ್ಥಿತಿ ಟಿ.ಕೆ.ಹರೀಶ್ ನೀವು ಯಾವ ಜಾತಿ?... ಪರಿಚಯವಾದ ಕೆಲವೇ ಕ್ಷಣಗಳಲ್ಲಿ…

1 hour ago

ಓದುಗರ ಪತ್ರ | ‘ಅಕ್ಕ’ ಸಮ್ಮೇಳನದಲ್ಲೂ ‘ನಂದಿನಿ’ ಮಿಂಚಿಂಗ್!

ಸೆಪ್ಟೆಂಬರ್ ೪, ೫, ೬ ರಂದು ಅಮೆರಿಕಾದ ಫಿಲಡೆಲಿಯಾದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲೂ ಕನ್ನಡಿಗರ ಹೆಮ್ಮೆ ನಂದಿನಿ ಅಂಗಡಿ ಇದ್ದದ್ದು…

1 hour ago