ಅಂಕಣಗಳು

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಅಪಹರಣ ಸಂತ್ರಸ್ತೆಯರ ಕಡಿದ ಬದುಕನ್ನು ಜೋಡಿಸುವ ನಸೀಮಾ

ನಾಲ್ಕು ಸಾವಿರಕ್ಕೂ ಹೆಚು ಜನರಿಗೆ ಬದುಕು ರೂಪಿಸಿದ ಉತ್ಥಾನ್ ಕಲೆಕ್ಟಿವ್

‘ಉತ್ಥಾನ್ ಕಲೆಕ್ಟಿವ್’ ಎಂಬುದು ಅಪಹರಣ ಸಂತ್ರಸ್ತೆಯರಿಗೆ ಆಶ್ರಯ ನೀಡಿ, ವೃತ್ತಿ ತರಬೇತಿ ಕೊಟ್ಟು, ಮಾನಸಿಕವಾಗಿ ಜರ್ಜರಿತರಾದ ಅವರಲ್ಲಿ ಆತ್ಮವಿಶ್ವಾಸ ತುಂಬಿ, ಕಡಿದು ಹೋದ ಅವರ ಬದುಕನ್ನು ಪುನಶ್ಚೇತನಗೊಳಿಸುವ ಒಂದು ಸರ್ಕಾರೇತರ ಸಂಸ್ಥೆ. ಈ ವರೆಗೆ ಈ ಸಂಸ್ಥೆ ನಾಲ್ಕು ಸಾವಿರಕ್ಕೂ ಹೆಚ್ಚು ಸಂತ್ರಸ್ತೆಯರಿಗೆ ಹೊಸ ಬದುಕನ್ನು ನೀಡಿದೆ. ವಿಶೇಷವೆಂದರೆ, ಉತ್ಥಾನ್ ಕಲೆಕ್ಟಿವ್‌ನ್ನು ಹುಟ್ಟು ಹಾಕಿದ ೨೯ ವರ್ಷ ಪ್ರಾಯದ ನಸೀಮಾ ಗೈನ್ ಸ್ವತಃ ಒಬ್ಬ ಅಪಹರಣ ಸಂತ್ರಸ್ತೆ!

ಪಶ್ಚಿಮ ಬಂಗಾಳದ ಉತ್ತರ ೨೪ ಪಾದಗಣ ಜಿಲ್ಲೆಯ ಮಸ್ಲಂದಪುರದ ನಸೀಮಾ ಗೈನ್‌ರ ಬಾಲ್ಯ ಅವರೇ ಹೇಳಿಕೊಳ್ಳುವಂತೆ ಬಹಳ ಸಂತೋಷದಾಯಕವಾಗಿತ್ತು. ಎಲ್ಲಾ ಸಾಮಾನ್ಯ ಮಕ್ಕಳಂತೆ ಅವರು ಆಟ, ಊಟ ಹಾಗೂ ಪಾಠಗಳಲ್ಲಿ ತನ್ನ ಬಾಲ್ಯದ ದಿನಗಳನ್ನು ಆನಂದದಿಂದ ಕಳೆದಿದ್ದರು. ಆದರೆ, ಅವರಿಗೆ ೧೩ ವರ್ಷ ಪ್ರಾಯವಾದಾಗ ನಡೆದ ಒಂದು ದುರ್ಘಟನೆ ಅವರ ಆ ಸಂತೋಷದ ಬಾಲ್ಯವನ್ನು ಕಸಿದುಕೊಂಡಿತಲ್ಲದೆ ಅವರು ಕನಸಲ್ಲೂ ಕಾಣದ ರೀತಿಯಲ್ಲಿ ಅವರ ಬದುಕಿನ ಪಥವನ್ನು ಬದಲಾಯಿಸಿತು.

೨೦೦೯ರ ಒಂದು ದಿನ ನಸೀಮಾ ಗೈನ್ ಶಾಲೆಯಲ್ಲಿ ನಡೆದ ಪೂಜೆಯಲ್ಲಿ ಭಾಗಿಯಾಗಿ ತನ್ನ ಸಹಪಾಠಿ ಗೆಳತಿಯೊಂದಿಗೆ ಮನೆಗೆ ನಡೆದುಕೊಂಡು ಬರುತ್ತಿದ್ದರು. ಆಗ ಒಂದು ಕಾರು ಅವರ ಬಳಿ ಬಂದು ನಿಂತಿತು. ಕಾರಿನಲ್ಲಿ ಇಬ್ಬರು ವ್ಯಕ್ತಿಗಳಿದ್ದರು. ಅವರಲ್ಲೊಬ್ಬನು ನಸೀಮಾರ ಕುಟುಂಬಕ್ಕೆ ಪರಿಚಯದವನು. ಇನ್ನೊಬ್ಬ ವ್ಯಕ್ತಿ ಕಾರು ಚಲಾಯಿಸುತ್ತಿದ್ದವನು. ನಸೀಮಾರ ಪರಿಚಯದ ವ್ಯಕ್ತಿ ಜಾಲಿ ರೈಡ್ ಹೋಗೋಣ, ಬರುತ್ತೀರಾ? ಎಂದು ಕೇಳಿದ. ಶಾಲೆಯಲ್ಲಿನ ಪೂಜೆಯಿಂದ ಖುಷಿಯಲ್ಲಿದ್ದ ನಸೀಮಾ ಮತ್ತು ಅವರ ಗೆಳತಿ ಹಿಂದೆ ಮುಂದೆ ಆಲೋಚಿಸದೆ ಅವನ ಆಹ್ವಾನವನ್ನು ಒಪ್ಪಿ ಕಾರೊಳಗೆ ಕುಳಿತರು. ಕಾರು ಬಹಳಷ್ಟು ದೂರ ಹೋದ ನಂತರ ಒಂದೆಡೆ ನಿಂತಿತು. ನಸೀಮಾಳ ಆ ಪರಿಚಿತ ವ್ಯಕ್ತಿ ಈಗ ಬರುತ್ತೇನೆ ಎಂದು ಹೇಳಿ ಕಾರಿಂದ ಇಳಿದು ಎಲ್ಲಿಗೋ ಹೋದನು. ಬಹಳ ಹೊತ್ತಾದರೂ ಅವನು ವಾಪಸ್ ಬರಲಿಲ್ಲ. ಆಗ ಕಾರನ್ನು ನಡೆಸುತ್ತಿದ್ದ ವ್ಯಕ್ತಿ ನಿಮ್ಮನ್ನು ಮನೆಗೆ ಬಿಡುತ್ತೇನೆ ಎಂದು ಕಾರು ಚಲಾಯಿಸಿದನು.

ಕಾರು ಎಷ್ಟೇ ದೂರ ಹೋದರೂ ನಸೀಮಾರ ಮನೆ ಬರಲಿಲ್ಲ. ಅಷ್ಟರಲ್ಲಿ ರಾತ್ರಿಯಾಯಿತು. ಮುಂದೇನು ಆಗಲಿದೆ ಎಂಬುದರ ಅರಿವಿಲ್ಲದ ನಸೀಮಾ ಮತ್ತು ಅವರ ಗೆಳತಿ ಕಾರಲ್ಲೇ ನಿದ್ರೆ ಹೋದರು. ಬೆಳಗಾದಾಗ ಎಚ್ಚೆತ್ತು ನೋಡಿದರೆ ಅವರು ಬಿಹಾರದ ಯಾವುದೋ ಒಂದು ಅಪರಿಚಿತ ಸ್ಥಳದಲ್ಲಿದ್ದರು. ಸುತ್ತಲಲ್ಲಿದ್ದ ಜನ ಅಪರಿಚಿತ ಭಾಷೆಯಲ್ಲಿ ಏನೋ ಮಾತಾಡುತ್ತಿದ್ದರು. ಏನಾಗುತ್ತಿದೆ ಎಂಬುದನ್ನು ಅವರ ಮಿದುಳಿಗೆ ಗ್ರಹಿಸಲಾಗುತ್ತಿರಲಿಲ್ಲ. ಆದರೆ, ಏನೋ ಆಗಬಾರದ್ದು ಆಗಿದೆ ಎಂಬುದು ನಿಧಾನವಾಗಿ ಅವರ ಅರಿವಿಗೆ ಬರತೊಡಗಿತು. ಆಗ ಅಲ್ಲಿದ್ದವರಲ್ಲೊಬ್ಬನು ನೀವೀಗ ವಾಪಸ್ ನಿಮ್ಮ ಮನೆಗಳಿಗೆ ಹೋಗುವಂತಿಲ್ಲ. ನೀವಿಬ್ಬರೂ ನನಗೆ ಮಾರಾಟವಾಗಿದ್ದೀರಿ ಎಂದು ಹೇಳಿದನು. ನಸೀಮಾ ಮತ್ತು ಅವಳ ಗೆಳತಿ ತಮ್ಮನ್ನು ಮನೆಗೆ ಹಿಂತಿರುಗಿಸುವಂತೆ ಪರಿಪರಿಯಾಗಿ ಅವನನ್ನು ಬೇಡಿಕೊಂಡರು. ಅವನು ನಾನು ನಿಮ್ಮನ್ನು ಮಾರಿದ ವ್ಯಕ್ತಿಗೆ ಕೊಟ್ಟ ಹಣವನ್ನು ಹಿಂದಿರುಗಿಸಿದರೆ ನಿಮ್ಮನ್ನು ಹೋಗಲು ಬಿಡುತ್ತೇನೆ ಅಂದನು.

ನಸೀಮಾ ಮತ್ತು ಅವರ ಸ್ನೇಹಿತೆಯನ್ನು ಖರೀದಿಸಿದ ಆ ವ್ಯಕ್ತಿ ರಾಯ್ ಗಂಜಿನ ಒಬ್ಬ ಬಂಗಾಳಿ. ಮುಂದೆ ಕೆಲವು ದಿನಗಳ ನಂತರ ಅವನು ನಸೀಮಾ ಮತ್ತು ಅವರ ಸ್ನೇಹಿತೆಗೆ ನೃತ್ಯದ ತರಬೇತಿ ಕೊಡಿಸಲು ಪ್ರಾರಂಭಿಸಿದನು. ನಿರಾಕರಿಸಿದರೆ ಪ್ರತೀದಿನ ಹೊಡೆತ ತಿನ್ನುವುದು, ಹಿಂಸೆ ಅನುಭವಿಸುವುದು, ಆಹಾರವಿಲ್ಲದ ಹಸಿವೆಯಿಂದ ಬಳಲುವುದು ಅವರ ದೈನಂದಿನ ದಿನಚರಿಯಾಯಿತು. ಒಂದು ದಿನವೂ ಅವರು ಆ ಮನೆಯಿಂದ ಹೊರ ಬರಲಾಗಲಿಲ್ಲ. ಬಿಡುಗಡೆ ಹೊಂದುವ ಯಾವುದೇ ನಿರೀಕ್ಷೆಯಿರಲಿಲ್ಲ. ಒಂದು ದಿನ ನಸೀಮಾ ಮತ್ತು ಅವರ ಸ್ನೇಹಿತೆಯನ್ನು ಬಿಹಾರದ ಒಂದು ಮನೆಗೆ ಕೆಲಸದಾಳುಗಳಾಗಿ ಕರೆದುಕೊಂಡು ಹೋಗಲಾಯಿತು. ಆ ಮನೆಯ ಮಾಲೀಕ ಒಬ್ಬ ಪ್ರೊಫೆಸರ್. ಅಲ್ಲಿ ಕೆಲಸ ಮಾಡುತ್ತ ಒಂದು ದಿನ ನಸೀಮಾ ತನ್ನ ಇದ್ದ ಬದ್ದ ಧೈರ್ಯವನ್ನೆಲ್ಲ ಒಟ್ಟುಗೂಡಿಸಿಕೊಂಡು, ತಾನು ಮತ್ತು ತನ್ನ ಸ್ನೇಹಿತೆ ಮಾರಾಟವಾದುದರ ಬಗ್ಗೆ ಆ ಪ್ರೊಫೆಸರ್‌ಗೆ ಹೇಳಿದಳು. ಆತನೂ ಉಳಿದವರಂತೆ ತಮಗೆ ಹೊಡೆಯುತ್ತಾನೆ ಎಂದು ನಸೀಮಾ ನಿರೀಕ್ಷಿಸಿದ್ದರು. ಆದರೆ, ಆತ ಅವರ ತಂದೆತಾಯಿಗಳ ಟೆಲಿಫೋನ್ ನಂಬರ್ ಇದೆಯೇ ಎಂದು ಕೇಳಿದನು. ನಸೀಮಾರ ಸ್ನೇಹಿತೆಗೆ ಆಕೆಯ ತಂದೆಯ ನಂಬರು ನೆನಪಿತ್ತು. ಅವನು ಆ ನಂಬರಿಗೆ ಫೋನ್ ಮಾಡಿದಾಗ ಅವರ ಸಂಪರ್ಕವಾಯಿತು. ಅವರಿಂದ ವಿಷಯ ತಿಳಿದ ನಸೀಮಾರ ತಂದೆ ತಾಯಿ ಪೊಲೀಸರನ್ನು ಕರೆದುಕೊಂಡು ಬಂದರು. ಆದರೆ, ಅಷ್ಟರಲ್ಲಿ ನಸೀಮಾ ಮತ್ತು ಅವರ ಸ್ನೇಹಿತೆಯನ್ನು ಖರೀದಿಸಿದ ವ್ಯಕ್ತಿಗೆ ವಿಷಯ ತಿಳಿದು, ಅವನು ಅವರಿಬ್ಬರನ್ನು ಬೇರೆಡೆ ಸ್ಥಳಾಂತರಿಸಿದನು. ಪೊಲೀಸರು ಕೆಲವು ದಿನಗಳಲ್ಲಿ ಅವರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಹೀಗೆ ನಸೀಮಾ ಮತ್ತು ಅವರ ಗೆಳತಿಯನ್ನು ಅವರು ಅಪಹರಿಸಲ್ಪಟ್ಟ ಹತ್ತು ತಿಂಗಳ ನಂತರ ಹುಡುಕಿ ಮನೆಗೆ ತರಲಾಯಿತು.

ಆದರೆ, ಮನೆ ಸೇರಿದ ನಸೀಮಾ ಗೈನ್‌ಗೆ ಬೇರೊಂದು ಪರಿಸ್ಥಿತಿ ಎದುರಾಯಿತು. ಅವರ ತಂದೆ ತಾಯಿ ಮಗಳು ವಾಪಸ್ ಬಂದುದಕ್ಕೆ ಸಮಾಧಾನದ ನಿಟ್ಟುಸಿರು ಬಿಟ್ಟರೆ, ಅವರ ನೆರೆಹೊರೆಯವರು ಅವಳನ್ನೇ ಅಪರಾಧಿಯಾಗಿ ಕಾಣ ತೊಡಗಿದರು. ತಮ್ಮ ಮಕ್ಕಳಿಗೆ ಅವರೊಂದಿಗೆ ಮಾತಾಡಬೇಡಿ. ಮಾತಾಡಿದರೆ ನೀವೂ ಅವಳಂತೆ ಅಪಹರಿಸಲ್ಪಡುತ್ತೀರಿ ಎಂದು ನಿರ್ಬಂಧಿಸಿದರು. ಅವರು ಕಲಿಯುತ್ತಿದ್ದ ಶಾಲೆಯೂ ಅವರನ್ನು ವಾಪಸ್ ಸೇರಿಸಿಕೊಳ್ಳಲಿಲ್ಲ. ಅವರನ್ನು ರಕ್ಷಿಸಿ ವಾಪಸ್ ತಂದ ಬಂಗಾಳ ಪೊಲೀಸರೂ ಅವರೊಂದಿಗೆ ಸರಿಯಾಗಿ ನಡೆದುಕೊಳ್ಳಲಿಲ್ಲ. ಅವರ ಮೇಲೆ ಲೈಂಗಿಕ ಹಲ್ಲೆ ನಡೆದಿದೆಯೋ ಇಲ್ಲವೋ ಎಂದು ಖಾತರಿ ಮಾಡಿಕೊಳ್ಳಲು ವೈದ್ಯಕೀಯ ಪರೀಕ್ಷೆ ನಡೆಸಿದರೆ ಅಕ್ಕಪಕ್ಕದವರ ದೃಷ್ಟಿಯಲ್ಲಿ ಅವರ ಹೆತ್ತವರು ಅವಮಾನಿತರಾಗುತ್ತಾರೆ ಎಂದು ಹೇಳಿ ಯಾವುದೇ ರೀತಿಯ ವೈದ್ಯಕೀಯ ತಪಾಸಣೆ ನಡೆಸಲಿಲ್ಲ. ಇದೆಲ್ಲದರಿಂದಾಗಿ ನಸೀಮಾ ಖಿನ್ನತೆಗೊಳಗಾಗಿ ಮುಂದೆ ಐದು ವರ್ಷಗಳ ಕಾಲ ಮನೆಯಿಂದ ಹೊರಗೆ ಬರಲಿಲ್ಲ! ನಸೀಮಾ ಹೀಗೆ ಮನೆಯಿಂದ ಹೊರಬಾರದೆ ಸಾಮಾಜಿಕವಾಗಿ ಯಾರೊಂದಿಗೂ ಬೆರೆಯದಿರುವುದನ್ನು ಕಂಡ ಅವರ ಹೆತ್ತವರು ಅವರನ್ನು ಅಪಹರಣಗೊಂಡು ಬಚಾವಾಗಿ ಬರುವವರನ್ನು ಸಂತೈಸಿಸುವ ಒಂದು ಸರ್ಕಾರೇತರ ಸಂಸ್ಥೆಗೆ ಕರೆದುಕೊಂಡು ಹೋದರು. ಅಲ್ಲಿ ತನ್ನಂತಹ ಹಲವಾರು ಸಂತ್ರಸ್ತ ಹೆಣ್ಣು ಮಕ್ಕಳು ತಮ್ಮ ಕತೆ ಹಾಗೂ ಹೋರಾಟಗಳನ್ನು ಹಂಚಿಕೊಳ್ಳುವುದನ್ನು ನೋಡಿದ ನಸೀಮಾ, ಅವರಿಗೆ ಸಾಧ್ಯವಾಗುವುದು ತನಗೇಕೆ ಸಾಧ್ಯವಾಗದು? ಎಂದು ತನಗೆ ತಾನೇ ಹೇಳಿಕೊಂಡು, ತಾನೂ ಇತರರೊಂದಿಗೆ ತನ್ನ ಕತೆಯನ್ನು ಹೇಳಿಕೊಳ್ಳಲು ಶುರು ಮಾಡಿದರು. ಅದು ಅವರಲ್ಲಿ ಅಪಾರವಾದ ಧೈರ್ಯ ಹಾಗೂ ಆತ್ಮವಿಶ್ವಾಸವನ್ನು ತುಂಬಿತು. ಆ ಆತ್ಮವಿಶ್ವಾಸವೇ ಅವರಿಗೆ ಮುಂದೆ ಇತರ ಕೆಲವು ಸಂತ್ರಸ್ತೆಯರ ಜೊತೆಗಾರಿಕೆಯಲ್ಲಿ ೨೦೧೬ರಲ್ಲಿ ‘ಉತ್ಥಾನ್ ಕಲೆಕ್ಟಿವ್’ ನ್ನು ಹುಟ್ಟು ಹಾಕಲು ಪ್ರೇರಣೆ ನೀಡಿತು.

” ನಸೀಮಾ ಅವರಿಗೆ ೧೩ ವರ್ಷ ಪ್ರಾಯವಾದಾಗ ನಡೆದ ಒಂದು ದುರ್ಘಟನೆ ಅವರ ಆ ಸಂತೋಷದ ಬಾಲ್ಯವನ್ನು ಕಸಿದುಕೊಂಡಿತಲ್ಲದೆ ಅವರು ಕನಸಲ್ಲೂ ಕಾಣದ ರೀತಿಯಲ್ಲಿ ಅವರ ಬದುಕಿನ ಪಥವನ್ನು ಬದಲಾಯಿಸಿತು”

 

 

ಆಂದೋಲನ ಡೆಸ್ಕ್

Recent Posts

ಬಿಜೆಪಿ-ಜಾ.ದಳ ಮನಸ್ತಾಪ; ಸಿಎಂ ಡಿಕೆಶಿ ‘ಭವಿಷ್ಯ’ಕ್ಕೆ  ವರ?

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉತ್ಸಾಹದ ಕುದುರೆಯ ಮೇಲಿದ್ದಾರೆ. ಈ ಕುದುರೆಯನ್ನು ಸಮರ್ಥವಾಗಿ ಓಡಿಸುವ ವಿಶ್ವಾಸ ಇರುವುದರಿಂದ…

2 hours ago

ಎಚ್.ಡಿ.ಕೋಟೆ ಗಡಿಯಲ್ಲಿ ಸೇತುವೆ ನಿರ್ಮಾಣಕ್ಕೆ ಎನ್‌ಒಸಿ!

ಮಂಜು ಕೋಟೆ ಎಚ್.ಡಿ.ಕೋಟೆ: ರಾಜ್ಯದ ಗಡಿಭಾಗ ಕಬಿನಿ ಹಿನ್ನೀರಿನ ಪ್ರದೇಶವಾದ ತಾಲ್ಲೂಕಿನ ಡಿ.ಬಿ.ಕುಪ್ಪೆ ಗ್ರಾಮದಲ್ಲಿ ಕಪಿಲಾ ನದಿಗೆ ಅಡ್ಡಲಾಗಿ, ಡಿ.ಬಿ.ಕುಪ್ಪೆಯಿಂದ…

2 hours ago

ಭಾರತೀನಗರ: ಆರೋಗ್ಯ ಕೇಂದ್ರಕ್ಕೆ ಅನಾರೋಗ್ಯ!

ಅಣ್ಣೂರು ಸತೀಶ್ ೩೦ ಹಾಸಿಗೆಯ ಆಸ್ಪತ್ರೆಯಲ್ಲಿ ಖಾಯಂ ವೈದ್ಯರಿಲ್ಲ; ತುರ್ತು ಚಿಕಿತ್ಸೆಯೂ ಲಭ್ಯವಿಲ್ಲ  ಭಾರತೀನಗರ: ಸುಮಾರು ನೂರಕ್ಕೂ ಹೆಚ್ಚು ಗ್ರಾಮಗಳ…

2 hours ago

ದಕ್ಷ ಮತ್ತೆ ಪ್ರತ್ಯಕ್ಷ: ಸಾರ್ವಜನಿಕರಲ್ಲಿ ತಲ್ಲಣ

ಕೃಷ್ಣ ಸಿದ್ದಾಪುರ ಸ್ಥಳಾಂತರಿಸಿದ್ದ ಪುಂಡಾನೆ ಪುನಃ ಕೊಡಗಿನಲ್ಲಿ ಸಂಚಾರ: ನರಹಂತಕ ಆನೆಯನ್ನು ಸೆರೆ ಹಿಡಿದು ಪಳಗಿಸುವಂತೆ ಗ್ರಾಮಸ್ಥರ ಆಗ್ರ ಸಿದ್ದಾಪುರ:…

2 hours ago

ಇದು ಉದ್ಯಾನವಲ್ಲ: ಅನೈತಿಕ ಚಟುವಟಿಕೆಗಳ ತಾಣ

ಕೆ.ಎಸ್.ಚಂದ್ರಶೇಖರಮೂರ್ತಿ ರಾಮಕೃಷ್ಣ ನಗರದ ನಂದನವನ ಈಗ ಕುಡುಕರ ತಾಣ, ಬಯಲು ಶೌಚಾಲಯ ! ಮೈಸೂರು: ಸಾರ್ವಜನಿಕರಿಗೆ ವಿಶ್ರಾಂತಿಯ ತಾಣವಾಗಬೇಕಿದ್ದ ಉದ್ಯಾನವನ…

2 hours ago