Andolana originals

ಎಚ್.ಡಿ.ಕೋಟೆ ಗಡಿಯಲ್ಲಿ ಸೇತುವೆ ನಿರ್ಮಾಣಕ್ಕೆ ಎನ್‌ಒಸಿ!

ಮಂಜು ಕೋಟೆ

ಎಚ್.ಡಿ.ಕೋಟೆ: ರಾಜ್ಯದ ಗಡಿಭಾಗ ಕಬಿನಿ ಹಿನ್ನೀರಿನ ಪ್ರದೇಶವಾದ ತಾಲ್ಲೂಕಿನ ಡಿ.ಬಿ.ಕುಪ್ಪೆ ಗ್ರಾಮದಲ್ಲಿ ಕಪಿಲಾ ನದಿಗೆ ಅಡ್ಡಲಾಗಿ, ಡಿ.ಬಿ.ಕುಪ್ಪೆಯಿಂದ ಕೇರಳ ರಾಜ್ಯದ ವಯನಾಡು ಜಿಲ್ಲೆಯ ಪೆರಿಕಲ್ಲೂರ್ ಗ್ರಾಮವನ್ನು ಸಂಪರ್ಕಿಸಲು ಸೇತುವೆ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಸರ್ಕಾರವು, ಕೇರಳ ರಾಜ್ಯಕ್ಕೆ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ಕೊಟ್ಟಿರುವುದು ಅರಣ್ಯ ಇಲಾಖೆ ಮತ್ತು ನಾಡಿನ ಪರಿಸರ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ.

ಕೇರಳ ರಾಜ್ಯದ ಲೋಕೋಪಯೋಗಿ ಇಲಾಖೆ ರಾಜ್ಯದ ಮುಖ್ಯಮಂತ್ರಿಗಳಿಗೆ ಈ ಸಂಬಂಧ ಜೂ.೧೩ರಂದು ಪತ್ರ ಬರೆದಿತ್ತು. ಇದಕ್ಕೆ ಅನುಮತಿ ನೀಡಿರುವ ರಾಜ್ಯ ಸರ್ಕಾರ, ಅಂತರರಾಜ್ಯವನ್ನು ಸಂಪರ್ಕಿಸುವ ಯೋಜನೆ ಯಡಿ ಕಾಮಗಾರಿ ನಡೆಸಬಹುದು. ಅದಕ್ಕೆ ತಗುಲುವ ವೆಚ್ಚವನ್ನು ಕರ್ನಾಟಕ ರಾಜ್ಯ ಸರ್ಕಾರ ಭರಿಸುವುದಿಲ್ಲ. ಎಲ್ಲ ವೆಚ್ಚವನ್ನೂ ನೀವೇ ಭರಿಸಬೇಕು ಎಂದಿದೆ. ಈ ಸ್ಥಳದಲ್ಲಿ ಸೇತುವೆ ನಿರ್ಮಾಣ ಮಾಡಲು, ವೀರಪ್ಪ ಮೊಯಿಲಿ ಸಿಎಂ ಆಗಿದ್ದ ಅವಧಿಯಲ್ಲಿ (೧೯೯೩) ಭೂಮಿಪೂಜೆ ನೆರವೇರಿಸಲಾಗಿತ್ತು. ಆದರೆ ಡಿ.ಬಿ.ಕುಪ್ಪೆ ಗ್ರಾಮದಿಂದ ಪೆರಿಕಲ್ಲೂರು ಗ್ರಾಮಕ್ಕೆ ಸೇತುವೆ ನಿರ್ಮಿಸಿದರೆ, ವನ್ಯಜೀವಿಗಳ ಸಂರಕ್ಷಣೆಗೆ ತೊಂದರೆ ಅಗುತ್ತದೆ. ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ಕಷ್ಟವಾಗಲಿದೆ ಎಂಬುದೂ ಸೇರಿದಂತೆ ತಾಂತ್ರಿಕ ಕಾರಣಗಳಿಂದ ಇಲ್ಲಿ ಸೇತುವೆ ನಿರ್ಮಾಣ ಮಾಡಲು ಆಗಿರಲಿಲ್ಲ.

ಆದರೆ ಈಗ ದಿಢೀರ್ ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ನಿರಾಕ್ಷೇಪಣಾ ಪತ್ರ ಕೊಟ್ಟಿರುವುದರಿಂದ, ವಯನಾಡು ಜಿಲ್ಲೆಯ ಸಂಸದೆ ಪ್ರಿಯಾಂಕ ಗಾಂಧಿ ಅವರ ಒತ್ತಡಕ್ಕೆ ರಾಜ್ಯ ಸರ್ಕಾರ ತಲೆ ಬಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಲ್ಲದೆ ಪೆರಿಕಲ್ಲೂರು ಗ್ರಾಮಕ್ಕೆ ಹೋಗಲು, ತಾಲ್ಲೂಕಿನ ಗಡಿ ಭಾಗ ಬಾವಲಿ ಗ್ರಾಮದಿಂದ ೨ ಕಿ.ಮೀ. ದೂರದಲ್ಲಿರುವ ಚೆಯಾ ಗಾಡಿ ಎನ್ನುವ ಗ್ರಾಮದಲ್ಲಿ ಕಬಿನಿ ನದಿಗೆ ಅಡ್ಡಲಾಗಿ ೮ ವರ್ಷಗಳ ಹಿಂದೆ ಬೃಹತ್ ಸೇತುವೆ ನಿರ್ಮಾಣ ಆಗಿದೆ. ಈ ಸೇತುವೆ ಮೂಲಕ ಪುಳ್‌ಪಳ್ಳಿ ಗ್ರಾಮಕ್ಕೆ ತಲುಪಿ, ಅಲ್ಲಿಂದ ಪೆರಿಕಲ್ಲೂರು ಗ್ರಾಮಕ್ಕೆ ತೆರಳಬಹುದು.

ಅಲ್ಲದೆ ಡಿ.ಬಿ.ಕುಪ್ಪೆ ಗ್ರಾಮದಿಂದ ಪೆರಿಕಲ್ಲೂರು ಗ್ರಾಮಕ್ಕೆ ಸಂಚರಿಸಲು ರಾಜ್ಯ ಸರ್ಕಾರ ನಾಡ ದೋಣಿ ವ್ಯವಸ್ಥೆ ಮಾಡಿದೆ. ನಿತ್ಯ ನೂರಾರು ಮಂದಿ ಈ ದೋಣಿಯ ಮೂಲಕ ಸಂಚಾರ ಮಾಡುತ್ತಾರೆ. ಕಬಿನಿ ನದಿಯಲ್ಲಿ ಹೆಚ್ಚುವರಿ ಒಳ ಹರಿವು ಉಂಟಾ ದಾಗ ಮಾತ್ರ ನಾಡ ದೋಣಿ ಸೇವೆ ಸ್ಥಗಿತಗೊಳಿಸಲಾಗುತ್ತದೆ. ಇಲ್ಲಿಂದ ದಿನಕ್ಕೆ ಸಾವಿರಾರು ಮಂದಿಯೇನೂ ಓಡಾಡುವುದಿಲ್ಲ. ಎರಡೂ ಗ್ರಾಮಗಳ ನಡುವೆ ವ್ಯವಹಾರ ನಡೆಸುವ ಮತ್ತು ೧೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಾತ್ರ ಓಡಾಡುತ್ತಾರೆ. ಒಟ್ಟಾರೆ ಇಲ್ಲಿ ಸೇತುವೆ ನಿರ್ಮಾಣ ಆದರೆ, ಇಲ್ಲಿ ಅರಣ್ಯ ಮತ್ತು ಪೊಲೀಸ್ ತನಿಖಾ ಠಾಣೆ ಸ್ಥಾಪಿಸಬೇಕಾಗುತ್ತದೆ. ಈಗಿರುವ ಬಾವಲಿ ಗ್ರಾಮದಲ್ಲಿ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳ ಕೊರತೆ ಇದೆ. ಆರ್‌ಟಿಒ ತನಿಖಾ ಠಾಣೆ ಇಲ್ಲ. ಬಾವಲಿಯಿಂದ ಸುಲಭವಾಗಿ ಆರ್ ಟಿಒ ತನಿಖಾ ಠಾಣೆ ಇಲ್ಲದಿರುವುದರಿಂದ ವಾಹನಗಳು ಸಲೀಸಾಗಿ ನಮ್ಮ ರಾಜ್ಯಕ್ಕೆ ಬರುತ್ತವೆ. ರಾಜ್ಯ ಸರ್ಕಾರ ತಾನು ನೀಡಿರುವ ನಿರಾಕ್ಷೇಪಣಾ ಪತ್ರವನ್ನು ಹಿಂದೆ ಪಡೆಯಬೇಕು ಎಂಬುದು ಸಾರ್ವಜನಿಕರು, ವನ್ಯಜೀವಿ ಪ್ರಿಯರು, ಜನಪ್ರತಿನಿಧಿಗಳ ಆಗ್ರಹವಾಗಿದೆ.

” ಸೇತುವೆ ನಿರ್ಮಾಣದಿಂದ ಎರಡೂ ರಾಜ್ಯಗಳ ಜನಸಾಮಾನ್ಯರಿಗೆ ಅನುಕೂಲವಾದರೂ ಕರ್ನಾಟಕ ರಾಜ್ಯದಲ್ಲಿ ಪೊಲೀಸ್ ಮತ್ತು ಅರಣ್ಯ ಇಲಾಖೆಯ ಚೆಕ್‌ಪೋಸ್ಟ್‌ನಲ್ಲಿ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾಗುತ್ತದೆ. ಯಾವುದೇ ಸಮಸ್ಯೆಗಳು ಉದ್ಭವಿಸದೆ ಸೇತುವೆ ಸಾರ್ವಜನಿಕ ಉಪಯೋಗಕ್ಕೆ ಸದುಪಯೋಗವಾಗಲಿದೆ.”

-ಶ್ರೀನಿವಾಸ್, ತಹಸಿಲ್ದಾರ್ 

ಆತಂಕ ಏಕೆ?

* ಸೇತುವೆಯಿಂದ ವಾಹನಗಳ ಸಂಚಾರ ಹೆಚ್ಚಾಗಿ ವನ್ಯಜೀವಿಗಳ ಸಂರಕ್ಷಣೆಗೆ ತೊಂದರೆ ಆಗುತ್ತದೆ. ಅಕ್ರಮ ಚಟುವಟಿಕೆಗಳಿಗೂ ಕಡಿವಾಣ ಹಾಕಲು ಕಷ್ಟವಾಗಲಿದೆ.

* ಇಲ್ಲಿ ಸೇತುವೆ ನಿರ್ಮಾಣವಾದರೆ, ಅರಣ್ಯ ಮತ್ತು ಪೊಲೀಸ್ ತನಿಖಾ ಠಾಣೆ ಸ್ಥಾಪಿಸಬೇಕಾಗುತ್ತದೆ. ಈಗಿರುವ ಬಾವಲಿ ಗ್ರಾಮದಲ್ಲಿ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳ ಕೊರತೆ ಇದೆ.

* ಆರ್‌ಟಿಒ ತನಿಖಾ ಠಾಣೆ ಇಲ್ಲ. ಇದರಿಂದಾಗಿ ಬಾವಲಿಯಿಂದ ಸುಲಭವಾಗಿ ವಾಹನಗಳು ಕರ್ನಾಟಕ ರಾಜ್ಯಕ್ಕೆ ಬರುತ್ತವೆ

” ರಾಜ್ಯದ ಗಡಿಭಾಗದಲ್ಲಿ ಮೂಲ ಸೌಕರ್ಯ ಕಲ್ಪಿಸುವ ಮೂಲಕ ಅಭಿವೃದ್ಧಿಪಡಿಸಿ ನಾಡು ನುಡಿಗೆ ಸರ್ಕಾರ ಒತ್ತು ನೀಡಬೇಕು. ಇಲ್ಲಿರುವ ಅನೇಕ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಮುಂದಾಗದೆ, ಸೇತುವೆ ನಿರ್ಮಾಣಕ್ಕೆ ಅವಕಾಶ ನೀಡಿರುವುದು ಇಲ್ಲಿನ ವನ್ಯಪ್ರಾಣಿಗಳಿಗೆ ಬಹಳಷ್ಟು ಸಮಸ್ಯೆ ತಂದೊಡ್ಡಲಿದೆ. ಜತೆಗೆ ಅಕ್ರಮ ಚಟುವಟಿಕೆಯ ತಾಣವಾಗಲಿದೆ. ಆದ್ದರಿಂದ ಸರ್ಕಾರ ಮತ್ತು ಜನಪ್ರತಿನಿಧಿಗಳು ಇದರ ಬಗ್ಗೆ ಗಮನಹರಿಸಬೇಕು”

-ಕನ್ನಡ ಪ್ರಮೋದ್, ತಾಲ್ಲೂಕು ಅಧ್ಯಕ್ಷ, ಕಸಾಪ

ಕೇರಳದ ಒತ್ತಡ:  ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಅಂತರ ಸಂತೆ ಮತ್ತು ಡಿ.ಬಿ.ಕುಪ್ಪೆ ವನ್ಯ ಜೀವಿ ವಲಯದ ನಡುವೆ ಹಾದು ಹೋಗುವ ಮೈಸೂರು-ಮಾನಂದವಾಡಿ ಅಂತಾರಾಜ್ಯ ರಸ್ತೆ ಸಂಚಾರವನ್ನು ಸಂಜೆ ೬ರಿಂದ ಬೆಳಿಗ್ಗೆ ೬ ಗಂಟೆತನಕ ನಿಷೇಧ ಮಾಡಲಾಗಿದ್ದು, ಅದರ ತೆರವಿಗೆ ಕೇರಳ, ಕರ್ನಾಟಕ ಸರ್ಕಾರದ ಮೇಲೆಒತ್ತಡ ತರುತ್ತಲೇ ಇದೆ. ವಯನಾಡು ಕ್ಷೇತ್ರದ ಸಂಸದೆ ಪ್ರಿಯಾಂಕ ಗಾಂಧಿ ಕೂಡ ಚುನಾವಣಾಪೂರ್ವದಲ್ಲಿ ಸಂಚಾರ ನಿಷೇಧ ತೆರವಿಗೆ ಪ್ರಯತ್ನಿಸಲಾಗುವುದು ಎಂದಿದ್ದರು.

 

 

ಆಂದೋಲನ ಡೆಸ್ಕ್

Recent Posts

ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಲು ಯತ್ನಿಸಿದ್ದರು: ಸಿಎಂ ಡಿಕೆಶಿ ಬಾಂಬ್

ಬೆಂಗಳೂರು: ತಮ್ಮ ವಿರುದ್ಧವೂ ಸ್ಟಿಂಗ್ ಆಪರೇಷನ್ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.…

2 hours ago

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್!

ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ…

3 hours ago

ಎಸ್‌ಐಆರ್‌ ವಿರುದ್ಧ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಬೆಂಗಳೂರು: ದೇಶಾದ್ಯಂತ ತೀವ್ರ ವಿವಾದ ಸೃಷ್ಟಿಸಿರುವ ಮತದಾರರ ಪಟ್ಟಿ ಪರಿಷ್ಕರಣೆ(ಎಸ್‍ಐಆರ್) ಸಂಬಂಧ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‍ಕುಮಾರ್ ವಜಾ ಮತ್ತು…

4 hours ago

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ಗೆ ಮತ್ತೆ ಶಾಕ್‌

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ ಕಾನೂನು ಸಂಕಷ್ಟಗಳು ಮತ್ತಷ್ಟು ಬಿಗಿಯಾಗುತ್ತಿವೆ.…

5 hours ago

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ: 75ನೇ ವಯಸ್ಸಿನಲ್ಲಿ ನಿಧನ

ಮುಂಬೈ: ಬಾಲಿವುಡ್ ಚಿತ್ರರಂಗಕ್ಕೆ ಆಘಾತಕಾರಿ ಸುದ್ದಿ. ಹಿರಿಯ ನಟ ನಾನಾ ಪಾಟೇಕರ್ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಗೋವಾದ…

8 hours ago

ಓದುಗರ ಪತ್ರ: ಪಿಎಚ್‌ಸಿಗಳಲ್ಲಿ ಬಿಪಿ, ಶುಗರ್ ಮಾತ್ರೆಗಳು ಸಿಗುವಂತೆ ಕ್ರಮ ಕೈಗೊಳ್ಳಿ

ಮೈಸೂರು ಜಿ ಎಚ್.ಡಿ.ಕೋಟೆ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶುಗರ್ ಮತ್ತು ಬಿಪಿಗೆ ಹಾಗೂ ಇತರೆ ಕಾಯಿಲೆಗಳಿಗೆ ಸಂಬಂಧಪಟ್ಟ…

8 hours ago