Andolana originals

ದಕ್ಷ ಮತ್ತೆ ಪ್ರತ್ಯಕ್ಷ: ಸಾರ್ವಜನಿಕರಲ್ಲಿ ತಲ್ಲಣ

ಕೃಷ್ಣ ಸಿದ್ದಾಪುರ

ಸ್ಥಳಾಂತರಿಸಿದ್ದ ಪುಂಡಾನೆ ಪುನಃ ಕೊಡಗಿನಲ್ಲಿ ಸಂಚಾರ: ನರಹಂತಕ ಆನೆಯನ್ನು ಸೆರೆ ಹಿಡಿದು ಪಳಗಿಸುವಂತೆ ಗ್ರಾಮಸ್ಥರ ಆಗ್ರ

ಸಿದ್ದಾಪುರ: ಅರಣ್ಯ ಇಲಾಖೆ ಲಕ್ಷಾಂತರ ರೂ. ವೆಚ್ಚ ಮಾಡಿ ಸೆರೆಹಿಡಿದು, ರೇಡಿಯೋ ಕಾಲರ್ ಅಳವಡಿಸಿ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಿದ್ದ ೩೨ ವರ್ಷದ ದಕ್ಷ ಎಂಬ ಪುಂಡಾನೆ ಮತ್ತೆ ಜಿಲ್ಲೆಗೆ ಮರಳಿ ಬಂದು ಉಪಟಳ ನೀಡುತ್ತಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ವಿರಾಜಪೇಟೆ ವಲಯದ ಅಮ್ಮತ್ತಿ ಶಾಖಾ ವ್ಯಾಪ್ತಿಯಲ್ಲಿ ನಿರಂತರವಾಗಿ ಉಪಟಳ ನೀಡುತ್ತಾ ದಾಂದಲೆ ನಡೆಸುತ್ತಿದ್ದ ಒಂಟಿಸಲಗವನ್ನು ೨೦೨೩ರ ಜೂನ್ ೨೫ರಂದು ಅಮ್ಮತ್ತಿಯ ಒಂಟಿ ಅಂಗಡಿ ಸಮೀಪ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಸೆರೆಹಿಡಿದಿತ್ತು. ಬಳಿಕ ಅದಕ್ಕೆ ರೇಡಿಯೋ ಕಾಲರ್ ಅಳವಡಿಸಿ, ದಕ್ಷ ಎಂದು ನಾಮಕರಣ ಮಾಡಿ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ವ್ಯಾಪ್ತಿಯ ಅರಣ್ಯಕ್ಕೆ ಬಿಡಲಾಗಿತ್ತು. ಆದರೆ ಸ್ಥಳಾಂತರಗೊಂಡ ಕೆಲವೇ ದಿನಗಳಲ್ಲಿ ದಕ್ಷ ಮತ್ತೆ ಕೊಡಗಿನತ್ತ ವಾಪಸಾಗಿರುವುದು ಅರಣ್ಯ ಇಲಾಖೆಯ ಕಾರ್ಯವೈಖರಿ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ.

ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿ ಪ್ರಕಾರ, ಈ ಆನೆಗೆ ಜನರ ಭಯವೇ ಇಲ್ಲ. ಎದುರಿಗೆ ಸಿಕ್ಕವರನ್ನು ಹಿಂಬಾಲಿಸಿ ದಾಳಿ ಮಾಡಲು ಮುಂದಾಗುತ್ತಿದೆ. ಆ.೧೭ರಂದು ದಕ್ಷ ಆನೆಯು ಶಿಲ್ಪಿ ಎಸ್ಟೇಟ್‌ನ ತೋಟದಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳದ ಪುರುಲಿಯಾ ಮೂಲದ ಕಾರ್ಮಿಕ ಗೋಪಾಲ್ ಬಾವೂರಿ (೪೪) ಅವರನ್ನು ಬಲಿ ಪಡೆದಿದ್ದು, ಮತ್ತೋರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ಮಿಕರ ಕಣ್ಣೆದುರೇ ದಾಳಿ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.

ಸಿದ್ದಾಪುರ, ಮಾಲ್ದಾರೆ, ಅಮ್ಮತ್ತಿ, ನೆಲ್ಯಹುದಿಕೇರಿ, ಕರಡಿಗೋಡು, ಅರೆಕಾಡು ಸೇರಿದಂತೆ ಹಲವು ಗ್ರಾಮಗಳಲ್ಲಿ ಈ ಆನೆ ಸಂಚರಿಸುತ್ತಿದ್ದು, ಕೊರಳಿನಲ್ಲಿ ಅಳವಡಿಸಿರುವ ರೇಡಿಯೋ ಕಾಲರ್ ಮೂಲಕ ಇದರ ಚಲನವಲನ ಪತ್ತೆಯಾಗುತ್ತಿದೆ. ತೋಟಗಳು, ಲೈನ್‌ಮನೆಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಪ್ರತ್ಯಕ್ಷವಾಗುತ್ತಿರುವ ಆನೆ, ತೋಟಗಳಿಗೆ ಅಳವಡಿಸಿರುವ ಸೌರ ವಿದ್ಯುತ್ ಬೇಲಿಗಳನ್ನು ಮುರಿದು ಒಳನುಗ್ಗುತ್ತಿದೆ. ಬೆಳಗಿನ ಜಾವ ಕೆಲಸಕ್ಕೆ ತೆರಳುವ ಕಾರ್ಮಿಕರನ್ನು ಅಟ್ಟಿಸಿಕೊಂಡು ಹೋಗಿ ದಾಳಿ ಮಾಡುವುದರಿಂದ ಜೀವಭಯದಲ್ಲೇ ದಿನ ಕಳೆಯುವಂತಾಗಿದೆ.

ಉಪಟಳ ನೀಡುತ್ತಿರುವ ದಕ್ಷ ಆನೆಯ ಬದಲಿಗೆ ಬೇರೆ ಯಾವುದೋ ಆನೆಯನ್ನು ಸೆರೆಹಿಡಿದು ಸ್ಥಳಾಂತರಿಸುವ ಸಾಧ್ಯತೆ ಇದೆ ಎಂಬ ಅನುಮಾನವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ರೇಡಿಯೋ ಕಾಲರ್ ಹೊಂದಿರುವ ದಕ್ಷ ಆನೆಯೇ ಈ ಭಾಗದಲ್ಲಿ ನಿರಂತರವಾಗಿ ಸಂಚರಿಸುತ್ತಿದ್ದು, ಜನರಿಗೆ ಅಪಾಯ ಉಂಟುಮಾಡುತ್ತಿದೆ. ಆದ್ದರಿಂದ ಅರಣ್ಯ ಇಲಾಖೆ ಪರಿಸ್ಥಿತಿಯನ್ನು ನೇರವಾಗಿ ಪರಿಶೀಲಿಸಿ, ಬೇರೆ ಯಾವುದೋ ಆನೆಯನ್ನು ಹಿಡಿಯದೆ, ಉಪಟಳ ನೀಡುತ್ತಿರುವ ದಕ್ಷ ಆನೆಯನ್ನು ಮೊದಲು ಸೆರೆಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕೊಡಗಿನಲ್ಲಿ ಈ ಹಿಂದೆ ಹಲವು ಕಾಡಾನೆಗಳನ್ನು ಸೆರೆಹಿಡಿದು ಬೇರೆ ಪ್ರದೇಶಗಳಿಗೆ ಸ್ಥಳಾಂತರಿಸಿದ್ದರೂ, ಅವು ಮತ್ತೆ ಕೊಡಗಿಗೆಮರಳಿರುವ ಘಟನೆಗಳು ನಡೆದಿವೆ. ಹೀಗಾಗಿ ಕೇವಲ ಸ್ಥಳಾಂತರ ಮಾಡುವ ಬದಲು ಸಮಸ್ಯೆ ಉಂಟು ಮಾಡುತ್ತಿರುವ ಆನೆಗಳನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಹಾಗೂಅಗತ್ಯವಿದ್ದಲ್ಲಿ ಪಳಗಿಸುವ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ದಕ್ಷ ಆನೆ ಮತ್ತೆ ಜನನಿಬಿಡ ಪ್ರದೇಶಗಳಲ್ಲಿ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಪ್ರಾಣಹಾನಿ ಸಂಭವಿಸುವ ಮುನ್ನ ಅರಣ್ಯ ಇಲಾಖೆ ತಕ್ಷಣ ಕಾರ್ಯಾಚರಣೆ ನಡೆಸಿ ಅದನ್ನು ಸೆರೆಹಿಡಿಯಬೇಕು. ಕೇವಲ ಆನೆಗಳನ್ನು ಹಿಡಿದು ಬೇರೆಡೆ ಬಿಡುವುದಕ್ಕಿಂತ ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಹಾಗೂ ವೈಜ್ಞಾನಿಕ ಪರಿಹಾರ ರೂಪಿಸಬೇಕು ಎಂಬುದು ಗ್ರಾಮಸ್ಥರು ಮತ್ತು ರೈತರ ಒಕ್ಕೊರಲಿನ ಆಗ್ರಹವಾಗಿದೆ.

” ಅಮ್ಮತ್ತಿ ಭಾಗದಲ್ಲಿ ಈ ಹಿಂದೆ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿದ್ದ ದಕ್ಷ ಆನೆ, ಕಳೆದ ಸೋಮವಾರ ಶಿಲ್ಪಿ ತೋಟದಲ್ಲಿ ಕಾರ್ಮಿಕನೊಬ್ಬನನ್ನು ಬಲಿ ಪಡೆದಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ಅಪಾಯಕಾರಿ ಆನೆಯನ್ನು ಮತ್ತೆ ಕಾಡಿಗೆ ಓಡಿಸುವುದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ. ಮತ್ತಷ್ಟು ಜೀವಹಾನಿ ಸಂಭವಿಸುವ ಮುನ್ನ ಅರಣ್ಯ ಇಲಾಖೆ ದಕ್ಷ ಆನೆಯನ್ನು ತಕ್ಷಣ ಸೆರೆಹಿಡಿದು, ತಜ್ಞರ ಸಲಹೆಯಂತೆ ಪಳಗಿಸುವ ಕ್ರಮ ಕೈಗೊಳ್ಳಬೇಕು.”

-ಭರತ್, ಕಾರ್ಮಿಕ ಮುಖಂಡ

” ಸಾರ್ವಜನಿಕರಿಗೆ ಉಪಟಳ ನೀಡುವ ಆನೆಯನ್ನು ಮೊದಲು ಸೆರೆಹಿಡಿಯಬೇಕು. ಇಲಾಖೆಯೇ ನೀಡಿದ ಅಂಕಿ-ಅಂಶದ ಪ್ರಕಾರ ಜಿಲ್ಲೆಯಲ್ಲಿ ೨೪೦ ಆನೆಗಳು ಕಾಫಿ ತೋಟಗಳಲ್ಲಿ ಇದ್ದು, ಬೆರಳೆಣಿಕೆಯ ಆನೆಗಳನ್ನು ಸೆರೆಹಿಡಿಯುವುದು ಆಗಬಾರದು. ಬದಲಾಗಿ ಎಲ್ಲಾ ಆನೆಗಳನ್ನು ಸೆರೆಹಿಡಿದು, ಅರಣ್ಯದಲ್ಲಿ ನೀರು, ಮೇವು ಒಳಗೊಂಡ ಆನೆಧಾಮದಲ್ಲಿ ಸಾಕುವಂತಾಗಬೇಕು.”

-ಚೇದಂಡ ಅಜೀತ್ ಪೂಣಚ್ಚ, ಅಮ್ಮತ್ತಿ ಹೋಬಳಿ ರೈತ ಸಂಘದ ಅಧ್ಯಕ್ಷ

”  ನಾನು ಅಧಿಕಾರ ಸ್ವೀಕರಿಸಿ ಕೆಲವೇ ದಿನಗಳಾಗಿದ್ದು, ದಕ್ಷ ಆನೆ ಕೊಡಗು ಪ್ರದೇಶದಲ್ಲಿ ಇರುವುದು ಗೊತ್ತಾಗಿದೆ. ಇದೇ ಆನೆ ಕಾರ್ಮಿಕರ ಮೇಲೆ ದಾಳಿ ಮಾಡಿರುವ ಬಗ್ಗೆ ಮಾಹಿತಿ ಇಲ್ಲ. ಕಾರ್ಯಾಚರಣೆ ವೇಳೆ ದಕ್ಷ ಆನೆಯನ್ನೇ ಹಿಡಿಯುತ್ತೇವೆ ಎಂದು ಹೇಳಲಾಗದು. ಆದರೆ ಪ್ರಯತ್ನಪಡುತ್ತೇವೆ.”

-ವಿನಿತ್ ಚೌಹಾಣ್, ಡಿಎಫ್‌ಒ, ವಿರಾಜಪೇಟೆ ತಾಲ್ಲೂಕು

 

 

ಆಂದೋಲನ ಡೆಸ್ಕ್

Recent Posts

ಎಚ್.ಡಿ.ಕೋಟೆ ಗಡಿಯಲ್ಲಿ ಸೇತುವೆ ನಿರ್ಮಾಣಕ್ಕೆ ಎನ್‌ಒಸಿ!

ಮಂಜು ಕೋಟೆ ಎಚ್.ಡಿ.ಕೋಟೆ: ರಾಜ್ಯದ ಗಡಿಭಾಗ ಕಬಿನಿ ಹಿನ್ನೀರಿನ ಪ್ರದೇಶವಾದ ತಾಲ್ಲೂಕಿನ ಡಿ.ಬಿ.ಕುಪ್ಪೆ ಗ್ರಾಮದಲ್ಲಿ ಕಪಿಲಾ ನದಿಗೆ ಅಡ್ಡಲಾಗಿ, ಡಿ.ಬಿ.ಕುಪ್ಪೆಯಿಂದ…

5 mins ago

ಭಾರತೀನಗರ: ಆರೋಗ್ಯ ಕೇಂದ್ರಕ್ಕೆ ಅನಾರೋಗ್ಯ!

ಅಣ್ಣೂರು ಸತೀಶ್ ೩೦ ಹಾಸಿಗೆಯ ಆಸ್ಪತ್ರೆಯಲ್ಲಿ ಖಾಯಂ ವೈದ್ಯರಿಲ್ಲ; ತುರ್ತು ಚಿಕಿತ್ಸೆಯೂ ಲಭ್ಯವಿಲ್ಲ  ಭಾರತೀನಗರ: ಸುಮಾರು ನೂರಕ್ಕೂ ಹೆಚ್ಚು ಗ್ರಾಮಗಳ…

10 mins ago

ಇದು ಉದ್ಯಾನವಲ್ಲ: ಅನೈತಿಕ ಚಟುವಟಿಕೆಗಳ ತಾಣ

ಕೆ.ಎಸ್.ಚಂದ್ರಶೇಖರಮೂರ್ತಿ ರಾಮಕೃಷ್ಣ ನಗರದ ನಂದನವನ ಈಗ ಕುಡುಕರ ತಾಣ, ಬಯಲು ಶೌಚಾಲಯ ! ಮೈಸೂರು: ಸಾರ್ವಜನಿಕರಿಗೆ ವಿಶ್ರಾಂತಿಯ ತಾಣವಾಗಬೇಕಿದ್ದ ಉದ್ಯಾನವನ…

21 mins ago

ಮಂಡ್ಯದಲ್ಲಿ ಭಿಕ್ಷುಕಿ ನಿಧನ : ಮೃತಳ ಮನೆಯಲ್ಲಿ ಮೂಟೆಗಟ್ಟಲೆ ಹಣ ಪತ್ತೆ; ಊರಿಗೂರೇ ಶಾಕ್!

ಮಂಡ್ಯ: ವೃದ್ಧ ಭೀಕ್ಷುಕಿಯೊಬ್ಬರು ತಾನು ಬೇಡಿ ಸಂಗ್ರಹಿಸಿಟ್ಟಿದ್ದ ಸಂಪತ್ತು ಇದೀಗ ಪರರ ಪಾಲಾಗಿರುವ ಸಂಗತಿ ಜನರನ್ನು ಅಚ್ಚರಿಗೊಳಿಸಿದೆ. ಮಂಡ್ಯ ನಗರದ…

10 hours ago

ಜಿಲ್ಲೆಗೊಂದು ಕೈಗಾರಿಕೆ ತರುತ್ತೇನೆ : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ

ಪಾಂಡವಪುರ : ಜಿಲ್ಲೆಯ ಜನರ ನಿರೀಕ್ಷೆಯಂತೆ ಕೇಂದ್ರ ಸಚಿವನಾಗಿ ನನ್ನ ಅಧಿಕಾರದ ಅವಧಿಯೊಳಗೆ ಜಿಲ್ಲೆಗೊಂದು ಕೈಗಾರಿಕೆಯನ್ನು ತಂದೇ ತರುತ್ತೇವೆ ಎಂದು…

11 hours ago