ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉತ್ಸಾಹದ ಕುದುರೆಯ ಮೇಲಿದ್ದಾರೆ. ಈ ಕುದುರೆಯನ್ನು ಸಮರ್ಥವಾಗಿ ಓಡಿಸುವ ವಿಶ್ವಾಸ ಇರುವುದರಿಂದ ಸಹಜವಾಗಿಯೇ ಅವರಿಗೆ ಒಂದು ನಂಬಿಕೆ ಇದೆ.
ಅದೆಂದರೆ ೨೦೨೮ರ ವಿಧಾನಸಭೆ ಚುನಾವಣೆಯಲ್ಲೂ ಗೆದ್ದು ನಾವು ಅಧಿಕಾರ ಹಿಡಿಯುತ್ತೇವೆ ಎಂಬುದು. ಪರಿಣಾಮ ಡಿ.ಕೆ.ಶಿವಕುಮಾರ್ ಅವರ ಈ ನಂಬಿಕೆ ರಾಜಕೀಯ ವಲಯಗಳ ಕುತೂಹಲಕ್ಕೆ ಕಾರಣವಾಗಿದೆ. ಅಂದ ಹಾಗೆ ಈ ಕುತೂಹಲದ ಮಧ್ಯೆಯೇ ಕೆಲವು ಪ್ರಶ್ನೆಗಳು ಹುಟ್ಟಿ ಕೊಂಡಿವೆ. ಅವುಗಳಿಗೆ ಅನುಮಾನದ ಛಾಯೆಯೂ ಅಂಟಿಕೊಂಡಿದೆ. ಅದರ ಪ್ರಕಾರ, ಮುಖ್ಯಮಂತ್ರಿ ಹುದ್ದೆಯಿಂದ ಸಿದ್ದರಾಮಯ್ಯ ಅವರು ಕೆಳಗಿಳಿದ ಬೆಳವಣಿಗೆ ಕರ್ನಾಟಕದ ರಾಜಕೀಯ ಸ್ವರೂಪವನ್ನು ಬದಲಿಸುವುದು ನಿಶ್ಚಿತ ಮತ್ತು ಡಿ.ಕೆ.ಶಿವಕುಮಾರ್ ಅವರ ಹಾದಿಯನ್ನು ಕಠಿಣಗೊಳಿಸುವುದು ಸಹಜ.
ಏಕೆಂದರೆ ಸಿದ್ದರಾಮಯ್ಯ ಅವರು ಸಿಎಂ ಹುದ್ದೆಯಿಂದ ಕೆಳಗಿಳಿದು ಡಿ.ಕೆ.ಶಿವಕುಮಾರ್ ಆ ಜಗಕ್ಕೆ ಬರುವ ಹೊತ್ತಿಗೆ ಇಂತಹ ಬದಲಾವಣೆಯ ಕುದಿ ಸ್ಪಷ್ಟವಾಗಿದೆ. ಅದರ ಪ್ರಕಾರ, ಸಿದ್ದರಾಮಯ್ಯ ಅವರ ಪದಚ್ಯುತಿಯ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಕುರುಬ ಸಮುದಾಯ ದೊಡ್ಡಮಟ್ಟದಲ್ಲಿ ವಲಸೆಗೆ ಸಜಗಿದೆ. ಇದರಲ್ಲಿ ಸಿದ್ದರಾಮಯ್ಯ ಅವರ ನಿರ್ಧಾರದ ಪಾತ್ರವೂ ಇದೆ.
ಅದೆಂದರೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂಬ ಅವರ ಘೋಷಣೆ. ಹೀಗೆ ಸಿದ್ದರಾಮಯ್ಯ ಅವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬುದರ ಅರ್ಥವೇನು? ಕುರುಬ ಮತ ಬ್ಯಾಂಕಿನ ಪ್ರಕಾರ, ಇನ್ನು ಕಾಂಗ್ರೆಸ್ ಪಕ್ಷದಲ್ಲಿ ತಮಗೆ ಭವಿಷ್ಯವಿಲ್ಲ. ಹೀಗಾಗಿ ಕಾಂಗ್ರೆಸ್‌ಗೆ ಪರ್ಯಾಯವಾದ ಶಕ್ತಿಯ ಕಡೆ ನೋಡುವುದು ಅನಿವಾರ್ಯ ಎಂಬುದು ಅದರ ನಂಬಿಕೆ. ಪರಿಣಾಮ ಇದುವರೆಗೆ ಕಾಂಗ್ರೆಸ್ ಮತ ಬ್ಯಾಂಕಿಗೆ ಪುಷ್ಟಿ ತುಂಬುತ್ತಿದ್ದ ಕುರುಬ ಮತ ಬ್ಯಾಂಕಿನ ಷೇರಿನ ಪ್ರಮಾಣ ಗಣನೀಯವಾಗಿ ಕುಸಿಯಲಿದೆ. ಇನ್ನು ಇದೇ ರೀತಿ ದಲಿತರ ಒಳ ಮೀಸಲಾತಿಯ ವಿಷಯ ಕೂಡಾ ಕಾಂಗ್ರೆಸ್ ಪಕ್ಷದ ಮತ ಬ್ಯಾಂಕಿಗೆ ಹೊಡೆತ ನೀಡಲಿದೆ. ಕಾರಣ, ಒಳಮೀಸಲಾತಿಯ ಸ್ವರೂಪ ದಲಿತ ವರ್ಗದ ಎಡಗೈ ಸಮುದಾಯಕ್ಕೇ ಆಗಲಿ, ಬಲಗೈ ಸಮುದಾಯಕ್ಕೇ ಆಗಲಿ ತೃಪ್ತಿ ತಂದಿಲ್ಲ. ಹಾಗೆ ನೋಡಿದರೆ ಒಳಮೀಸಲಾತಿಯ ಪ್ರಸ್ತಾಪಕ್ಕೆ ಬಲಗೈ ಸಮುದಾಯ ಯಾವತ್ತೂ ಸಹಮತ ವ್ಯಕ್ತಪಡಿಸಿರಲಿಲ್ಲ. ಕಾರಣ, ಒಳಮೀಸಲಾತಿ ಎಂಬುದು ಪ್ರಬಲ ದಲಿತ ಸಮುದಾಯವನ್ನು ಒಡೆಯುವ ಯತ್ನ ಎಂಬುದೇ ಅದರ ನಂಬಿಕೆ.
ಅದರ ಈ ನಂಬಿಕೆ ಹಾಗೆಯೇ ಉಳಿದಿದೆ. ಮತ್ತು ಕೆಲ ದಿನಗಳ ಹಿಂದೆ ಸರ್ಕಾರ ರೂಪಿಸಿದ ಒಳಮೀಸಲಾತಿಯ ಸ್ವರೂಪ ಈಗ ಎಡಗೈ ಸಮುದಾಯದಲ್ಲೂ ಅತೃಪ್ತಿ ಸೃಷ್ಟಿಸಿದೆ. ಕಾರಣ, ಒಳಮೀಸಲಾತಿಯನ್ನು ಕಲ್ಪಿಸುವಾಗ ತಮಗೆ ಕೊರತೆ ಮಾಡಲಾಗಿದೆ ಎಂಬುದು ಅದರ ನೋವು. ಪರಿಣಾಮ; ದಲಿತ ವರ್ಗದ ಎಡಗೈ ಸಮುದಾಯ ಈ ಹಿಂದಿಗಿಂತ ಪ್ರಬಲವಾಗಿ ಬಿಜೆಪಿ ಜತೆ ನಿಲ್ಲುವ ಸಾಧ್ಯತೆಗಳು ಕಾಣಿಸಿಕೊಂಡಿವೆ. ಇದೇ ರೀತಿ ಕರ್ನಾಟಕದ ವಾಲ್ಮೀಕಿ ಸಮುದಾಯ ಕೂಡ ಆಡಳಿತಾರೂಢ ಕಾಂಗ್ರೆಸ್ ಬಗ್ಗೆ ಮುನಿಸಿಕೊಂಡಿದೆ. ಅದರ ಮುನಿಸಿಗೆ ಕಾರಣವೂ ಇದೆ. ಅದೆಂದರೆ ಇವತ್ತು ಹಿಂದುಳಿದ ವರ್ಗಗಳ ಹಿರಿಯಣ್ಣ ಅನ್ನಿಸಿಕೊಂಡ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲು ಕಾಂಗ್ರೆಸ್ ಸರ್ಕಾರ ಶಿ-ರಸ್ಸು ಮಾಡಿರುವುದು. ಇವತ್ತು ಪರಿಶಿಷ್ಟ ಪಂಗಡದ ಪಟ್ಟಿಗೆ ಕುರುಬರನ್ನು ಸೇರಿಸಿದರೆ, ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ ತಮಗೆ ಅನ್ಯಾಯವಾಗಲಿದೆ ಎಂಬುದು ವಾಲ್ಮೀಕಿ ಸಮುದಾಯದ ಅಸಮಾಧಾನ.
ಇವತ್ತು ಪರಿಶಿಷ್ಟ ಪಂಗಡಕ್ಕೆ ಒದಗಿಸಿರುವ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಿ, ಆನಂತರ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವ ಪ್ರಸ್ತಾಪಮಾಡಿದ್ದರೆ ಅದು ನ್ಯಾಯಯುತ ಮಾರ್ಗವಾಗುತ್ತಿತ್ತು. ಅದರೆ ಅದನ್ನು ಮಾಡದೆ ಇರುವ ಮೀಸಲಾತಿಯ ಕುರುಬರೂ ಸೇರಿಕೊಂಡರೆ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ ತಮಗೆ ಅನ್ಯಾಯವಾಗಲಿದೆ ಎಂಬುದು ವಾಲ್ಮೀಕಿ ಸಮುದಾಯದ ಸಿಟ್ಟು. ಅದರ ಸಿಟ್ಟು ಮುಂದಿನ ವಿಧಾನಸಭಾ ಚುನಾವಣೆಯ ಹೊತ್ತಿಗೆ ಕಾಂಗ್ರೆಸ್ ಪಾಲಿಗೆ ಕಂಟಕವಾಗಬಹುದು.
ಏಕೆಂದರೆ ಇವತ್ತು ರಾಜ್ಯದ ನಲವತ್ತಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ವಾಲ್ಮೀಕಿ ಸಮುದಾಯದ ಮತದಾರರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಅರ್ಥಾತ್, ಈ ಕ್ಷೇತ್ರಗಳಲ್ಲಿ ತಲಾ ಇಪ್ಪತ್ತರಿಂದ ನಲವತ್ತೈದು ಸಾವಿರದಷ್ಟು ಮತಗಳನ್ನು ಆ ಸಮುದಾಯ ಹೊಂದಿದೆ. ಹೀಗಾಗಿ ಅದು ಕಾಂಗ್ರೆಸ್ ಪಕ್ಷದ ಪಾಲಿಗೆ ಡೆಡ್ಲಿಯಾಗಬಹುದು. ಇದೇ ರೀತಿ ಡಿಕೆಶಿ ಸಂಪುಟಕ್ಕೆ ಬಲಗೈ ಸಮುದಾಯದ ಮಾಸ್ ಲೀಡರ್ ಹೆಚ್.ಸಿ.ಮಹದೇವಪ್ಪ ಅವರು ಸೇರ್ಪಡೆಯಾಗದ ಬೆಳವಣಿಗೆ ಆ ಸಮುದಾಯದಲ್ಲೂ ಅತೃಪ್ತಿ ಮೂಡಿಸಿದೆ. ಮತ್ತು ಸಹಜವಾಗಿಯೇ ಅದು ಒಂದು ಮಟ್ಟದಲ್ಲಿ ಪಲ್ಲಟಗೊಳ್ಳಲು ಕಾರಣವಾಗುತ್ತದೆ. ಅಂದ ಹಾಗೆ ಕಾಂಗ್ರೆಸ್ ಕೋಟೆಯನ್ನು ನೋಡಿದರೆ ಬಲಗೈ ಸಮುದಾಯದ ದೊಡ್ಡ ದೊಡ್ಡ ಸೇನಾನಿಗಳು ಕಾಣಬಹುದು. ಆದರೆ ನಿಜವಾದ ನಾಯಕನ ಶಕ್ತಿ ಇರುವುದು ಮಹದೇವಪ್ಪ ಅವರಿಗೆ.
ಉಳಿದಂತೆ ಮುಸ್ಲಿಂ ಮತ ಬ್ಯಾಂಕಿನ ವಿಷಯವನ್ನೇ ತೆಗೆದುಕೊಳ್ಳಿ. ಅದು ಸಾಮಾನ್ಯವಾಗಿ ಬಿಜೆಪಿಯ ಕಡೆ ಮುಖ ತಿರುಗಿಸುವ ಸಾಧ್ಯತೆ ಕಡಿಮೆ. ಆದರೆ ಈಗ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಆಗಿರುವ ಬದಲಾವಣೆ ಮತ್ತು ರಾಷ್ಟ್ರ ರಾಜಕಾರಣದ ಪರಿಸ್ಥಿತಿಗಳು ಮುಸ್ಲಿಂ ಸಮುದಾಯ ವಿವಶವಾಗಲು ಕಾರಣವಾಗಿದೆ. ಅರ್ಥಾತ್, ಇದುವರೆಗೆ ಕರ್ನಾಟಕದ ಮುಸ್ಲಿಂ ಮತ ಬ್ಯಾಂಕಿನ ಫ್ರಂಟ್ ಲೈನಿನಲ್ಲಿದ್ದ ಜಮೀರ್ ಅಹ್ಮದ್ ಖಾನ್ ಅವರ ಶಕ್ತಿ ಕಡಿಮೆಯಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರವಿದ್ದಾಗ ನಿರ್ವಿವಾದ ಮುಸ್ಲಿಂ ನಾಯಕರಾಗಿ ಹೊರಹೊಮ್ಮಿದ್ದ ಜಮೀರ್ ಅಹ್ಮದ್ ಅವರು ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ನಂತರ ಬಲ ಕಳೆದುಕೊಂಡಿದ್ದಾರೆ. ಅವರೀಗ ಕೇವಲ ವಸತಿ ಖಾತೆ ಸಚಿವ. ಮುಸ್ಲಿಂ ಸಮುದಾಯದ ಕಣ್ಣಿಗೆ ಪದೇ ಪದೇ ಕಾಣಲು ಅವಕಾಶ ನೀಡುತ್ತಿದ್ದ ವಕ್, ಹಜ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಈಗ ಆರೋಗ್ಯ ಸಚಿವರಾದ ಯು.ಟಿ.ಖಾದರ್ ಅವರ ಕೈ ಸೇರಿದೆ. ಅಂದ ಹಾಗೆ ಯು.ಟಿ.ಖಾದರ್ ಅವರು ಮುಸ್ಲಿಂ ಮತ ಬ್ಯಾಂಕಿನ ಪಾಲಿಗೆ ಕ್ಲಾಸ್ ಲೀಡರ್. ಆದರೆ ಜಮೀರ್ ಅಹ್ಮದ್ ಅವರು ಮಾಸ್ ಲೀಡರ್. ಇಂತಹ ಮಾಸ್ ಲೀಡರ್ ಶಕ್ತಿ ಕುಸಿದಿರುವ ಪರಿಣಾಮ ಏನಾಗಲಿದೆ ಎಂದರೆ ಮುಂದಿನ ವಿಧಾನಸಭಾ ಚುನಾವಣೆಯ ಹೊತ್ತಿಗೆ ರಾಜದ್ಯಂತ ಎಸ್‌ಡಿಪಿಐ ಅಭ್ಯರ್ಥಿಗಳು ಮತ್ತು ಓವೈಸಿಯವರ ಎಂಐಎಂ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ.
ಹಾಗೆ ನೋಡಿದರೆ ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದ ಎಸ್‌ಡಿಪಿಐನ ಅಭ್ಯರ್ಥಿಗಳು ದೊಡ್ಡ ಮಟ್ಟದಲ್ಲಿ ಕಣಕ್ಕಿಳಿಯಬೇಕಿತ್ತು. ಆದರೆ ಜಮೀರ್ ಅಹ್ಮದ್ ಖಾನ್ ಅವರ ಪ್ರಭಾವ ಧರ್ಮಗುರುಗಳ ಮಟ್ಟದಲ್ಲಿ ಕೆಲಸ ಮಾಡಿದ್ದರಿಂದ ಎಸ್‌ಡಿಪಿಐ ಗೆ ಹೇಳಿಕೊಳ್ಳುವಂತಹ ಶಕ್ತಿ ಸಿಕ್ಕಿರಲಿಲ್ಲ. ಎಂಐಎಂ ಕೂಡಾ ಮನಸ್ಸು ಮಾಡಿರಲಿಲ್ಲ. ಆದರೆ ಈಗ ಜಮೀರ್ ಅಹ್ಮದ್ ಅವರ ಶಕ್ತಿಯೇ ಕುಗ್ಗಿರುವುದರಿಂದ ಮುಂದಿನ ಚುನಾವಣೆಯ ಹೊತ್ತಿಗೆ ಎಸ್‌ಡಿಪಿಐ ಮತ್ತು ಎಂಐಎಂ ಶಕ್ತಿ ಮೇಲೆದ್ದು ನಿಲ್ಲಲಿದೆ.
ಅದು ಮುಸ್ಲಿಂ ಮತ ಬ್ಯಾಂಕಿನ ಗಣನೀಯ ಪಾಲನ್ನು ಸೆಳೆದರೆ ಹಾನಿ ಯಾಗುವುದು ಯಾರಿಗೆ? ಸಹಜವಾಗಿಯೇ ಕಾಂಗ್ರೆಸ್ ಪಕ್ಷಕ್ಕೆ. ಹೀಗೆ ನೋಡುತ್ತಾ ಹೋದರೆ ಹಲವು ವರ್ಗಗಳು ಕಾಂಗ್ರೆಸ್ ಬಗ್ಗೆ ಮುನಿಸಿ ಕೊಂಡಿವೆ. ಪರಿಣಾಮ ಮುಂದಿನ ವಿಧಾನಸಭಾ ಚುನಾವಣೆಯ ಹೊತ್ತಿಗೆ ಕಾಂಗ್ರೆಸ್ ಪಕ್ಷ ಮತಗಳ ಕೊರತೆ ಅನುಭವಿಸುವ ಸ್ಥಿತಿ ಎದುರಾಗಲಿದೆ. ಈ ಕೊರತೆಯನ್ನು ನೀಗಿಕೊಳ್ಳುವುದೇ ಹಾಲಿ ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ಅವರ ಎದುರಿಗಿರುವ ಬಹುದೊಡ್ಡ ಸವಾಲು. ಅಂದ ಹಾಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಡಿ.ಕೆ.ಶಿವಕುಮಾರ್ ಅವರ ಪಾತ್ರವೂ ಇದೆ. ಆದರೆ ಅದು ರಣತಂತ್ರ ಹೆಣೆಯುವ ವಿಷಯಕ್ಕೆ ಸೀಮಿತವಾಗಿತ್ತು. ಉಳಿದಂತೆ ಸಿದ್ದರಾಮಯ್ಯ ಅವರ ವರ್ಚಸ್ಸು ಕಾಂಗ್ರೆಸ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಆದರೆ ಮುಂದಿನ ಚುನಾವಣೆಯ ಹೊತ್ತಿಗೆ ಸಿದ್ದರಾಮಯ್ಯ ಅವರ ಪೂರ್ಣ ಶಕ್ತಿಯೊಂದಿಗೆ ಕಾಂಗ್ರೆಸ್ ಚುನಾವಣೆಗೆ ಹೋಗುವುದಿಲ್ಲವಾದ್ದರಿಂದ ಸಹಜವಾಗಿಯೇ ಅದರ ಶಕ್ತಿ ದೊಡ್ಡ ಮಟ್ಟದಲ್ಲಿ ಕುಸಿಯಲಿದೆ. ಇವತ್ತು ಡಿ.ಕೆ.ಶಿವಕುಮಾರ್ ಅವರೇನೋ ೨೦೨೮ ಕ್ಕೂ ನಮ್ಮದೇ ಸರ್ಕಾರ ಬರಲಿದೆ ಎನ್ನುತ್ತಾರೆ.
ಆದರೆ ಕಳೆದ ನಲವತ್ತು ವರ್ಷಗಳಲ್ಲಿ ಆಡಳಿತಾರೂಢ ಪಕ್ಷ ಮರಳಿ ಅಧಿಕಾರ ಹಿಡಿದ ಉದಾಹರಣೆ ಇಲ್ಲ. ಇಂತಹ ಉದಾಹರಣೆ ಕಣ್ಣ ಮುಂದಿರುವಾಗ, ಕರ್ನಾಟಕದ ಹಲವು ಮತ ಬ್ಯಾಂಕುಗಳು ವಲಸೆಗೆ ಸಜಗಿರುವಾಗ ಕಾಂಗ್ರೆಸ್ ಪಕ್ಷವನ್ನು ಪುನಃ ಅಧಿಕಾರಕ್ಕೆ ತರುವ ಲೆಕ್ಕಾಚಾರ ಸುಲಭವಲ್ಲ. ಆದರೂ ಡಿ.ಕೆ.ಶಿವಕುಮಾರ್ ಅವರು ಇಂತಹ ಕನಸನ್ನು ಕಾಣಲು ಬಿಜೆಪಿ-ಜಾ.ದಳ ಮಿತ್ರಕೂಟದಲ್ಲಿರುವ ಬಿರುಕೇ ಕಾರಣ. ಇವತ್ತು ಏನೇ ಪ್ರಯತ್ನ ಮಾಡಿದರೂ ಬಿಜೆಪಿ ಮತ್ತು ಜಾ.ದಳ ಪಕ್ಷಗಳ ನಡುವೆ ಸುಮಧುರ ಸಂಬಂಧ ಉಳಿದಿಲ್ಲ. ಹೀಗಾಗಿಯೇ ಮಿತ್ರಕೂಟ ಅಧಿಕಾರಕ್ಕೆ ಬಂದರೆ ಹೆಚ್.ಡಿ.ಕುಮಾರಸ್ವಾಮಿ ಎಲ್ಲಿ ಮುಖ್ಯಮಂತ್ರಿ ಯಾಗುತ್ತಾರೋ ಅಂತ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಜಯೇಂದ್ರ ಎಲ್ಲಿ ಕೈ ಕೊಡುತ್ತಾರೋ ಅಂತ ಯೋಚನೆ ಮಾಡುವುದರಲ್ಲಿ ಜಾ.ದಳ ಮುಳುಗಿದೆ. ಹೀಗೆ ಉಭಯ ಪಕ್ಷಗಳ ನಾಯಕರಲ್ಲಿರುವ ಅಸಮಾಧಾನವೇ ಕಾಂಗ್ರೆಸ್‌ಗೆ ಶ್ರೀರಕ್ಷೆ ಎಂಬುದು ಡಿಕೆಶಿ ನಂಬಿಕೆ. ಅದು ಎಷ್ಟರಮಟ್ಟಿಗೆ ನಿಜವಾಗುತ್ತದೋ? ಕಾದು ನೋಡಬೇಕು.
” ಇವತ್ತು ಏನೇ ಪ್ರಯತ್ನ ಮಾಡಿದರೂ ಬಿಜೆಪಿ ಮತ್ತು ಜಾ.ದಳ ಪಕ್ಷಗಳ ನಡುವೆ ಸುಮಧುರ ಸಂಬಂಧ ಉಳಿದಿಲ್ಲ. ಹೀಗಾಗಿಯೇ ಮಿತ್ರಕೂಟ ಅಧಿಕಾರಕ್ಕೆ ಬಂದರೆ ಹೆಚ್.ಡಿ.ಕುಮಾರಸ್ವಾಮಿ ಎಲ್ಲಿ ಮುಖ್ಯಮಂತ್ರಿಯಾಗುತ್ತಾರೋ ಅಂತ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಜಯೇಂದ್ರ ಎಲ್ಲಿ ಕೈ ಕೊಡುತ್ತಾರೋ ಅಂತ ಯೋಚನೆ ಮಾಡುವುದರಲ್ಲಿ ಜಾ.ದಳ ಮುಳುಗಿದೆ.”
ಮಂಜು ಕೋಟೆ ಎಚ್.ಡಿ.ಕೋಟೆ: ರಾಜ್ಯದ ಗಡಿಭಾಗ ಕಬಿನಿ ಹಿನ್ನೀರಿನ ಪ್ರದೇಶವಾದ ತಾಲ್ಲೂಕಿನ ಡಿ.ಬಿ.ಕುಪ್ಪೆ ಗ್ರಾಮದಲ್ಲಿ ಕಪಿಲಾ ನದಿಗೆ ಅಡ್ಡಲಾಗಿ, ಡಿ.ಬಿ.ಕುಪ್ಪೆಯಿಂದ…
ಅಣ್ಣೂರು ಸತೀಶ್ ೩೦ ಹಾಸಿಗೆಯ ಆಸ್ಪತ್ರೆಯಲ್ಲಿ ಖಾಯಂ ವೈದ್ಯರಿಲ್ಲ; ತುರ್ತು ಚಿಕಿತ್ಸೆಯೂ ಲಭ್ಯವಿಲ್ಲ ಭಾರತೀನಗರ: ಸುಮಾರು ನೂರಕ್ಕೂ ಹೆಚ್ಚು ಗ್ರಾಮಗಳ…
ಕೃಷ್ಣ ಸಿದ್ದಾಪುರ ಸ್ಥಳಾಂತರಿಸಿದ್ದ ಪುಂಡಾನೆ ಪುನಃ ಕೊಡಗಿನಲ್ಲಿ ಸಂಚಾರ: ನರಹಂತಕ ಆನೆಯನ್ನು ಸೆರೆ ಹಿಡಿದು ಪಳಗಿಸುವಂತೆ ಗ್ರಾಮಸ್ಥರ ಆಗ್ರ ಸಿದ್ದಾಪುರ:…
ಕೆ.ಎಸ್.ಚಂದ್ರಶೇಖರಮೂರ್ತಿ ರಾಮಕೃಷ್ಣ ನಗರದ ನಂದನವನ ಈಗ ಕುಡುಕರ ತಾಣ, ಬಯಲು ಶೌಚಾಲಯ ! ಮೈಸೂರು: ಸಾರ್ವಜನಿಕರಿಗೆ ವಿಶ್ರಾಂತಿಯ ತಾಣವಾಗಬೇಕಿದ್ದ ಉದ್ಯಾನವನ…
ಮಂಡ್ಯ: ವೃದ್ಧ ಭೀಕ್ಷುಕಿಯೊಬ್ಬರು ತಾನು ಬೇಡಿ ಸಂಗ್ರಹಿಸಿಟ್ಟಿದ್ದ ಸಂಪತ್ತು ಇದೀಗ ಪರರ ಪಾಲಾಗಿರುವ ಸಂಗತಿ ಜನರನ್ನು ಅಚ್ಚರಿಗೊಳಿಸಿದೆ. ಮಂಡ್ಯ ನಗರದ…