ಪ್ರೊ.ಶಬ್ಬೀರ್ ಮುಸ್ತಾಫಾ
ಜಿ.ಪಿ.ಬಸವರಾಜು
ಸಮುದಾಯದ ನಂಬಿಕೆಯನ್ನು ಉಳಿಸಿಕೊಳ್ಳಬೇಕಾದದ್ದು ಕಾಂಗ್ರೆಸ್ ಪಕ್ಷದ ಹೊಣೆ
ಭಾರತದಂಥ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಚುನಾವಣೆ ಎನ್ನುವುದು ನಿರಂತರ ಕುತೂಹಲ ಹುಟ್ಟಿಸುವ ಸಂಗತಿ. ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭೆಗಳಿಗಾಗಿ ನಡೆಯುತ್ತಿರುವ ಚುನಾವಣೆ ಅನೇಕ ಕಾರಣಗಳಿಗಾಗಿ ಭಾರೀ ಕುತೂಹಲವನ್ನೇ ಹುಟ್ಟಿಸಿದೆ.
ಈ ಎಲ್ಲ ರಾಜ್ಯಗಳಲ್ಲಿ ತನ್ನ ಪ್ರಾಬಲ್ಯವನ್ನು ಸ್ಥಾಪಿಸಲು ಭಾರತೀಯ ಜನತಾ ಪಕ್ಷ ಕೇಂದ್ರದಲ್ಲಿರುವ ತನ್ನ ಪಕ್ಷದ ಸರ್ಕಾರವನ್ನು ತೊಡಗಿಸಿಕೊಂಡು ಮಹಾನ್ ಸಮರವನ್ನೇ ನಡೆಸುತ್ತಿದೆ. ಈ ರಾಜ್ಯಗಳಲ್ಲಿ ಪ್ರಬಲವಾಗಿರುವ ಪಕ್ಷಗಳು ಮತ್ತು ಕಾಂಗ್ರೆಸ್ ಪಕ್ಷ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸವಾಲನ್ನು ಮುಂದುಮಾಡಿಕೊಂಡು ರಣೋತ್ಸಾಹವನ್ನೇ ತೋರಿಸುತ್ತಿವೆ.
ಇದು ಅಳಿವು-ಉಳಿವಿನ ಪ್ರಶ್ನೆಯೂ ಆಗಿರುವುದರಿಂದ ಸಹಜವಾಗಿಯೇ ಎರಡೂ ಕಡೆ ದೊಡ್ಡ ಪೈಪೋಟಿಯೇ ಉಂಟಾಗಿದೆ. ಕರ್ನಾಟಕಕ್ಕೆ ಈ ದೃಷ್ಟಿಯಿಂದ ಅಂಥ ಸವಾಲು ಎದುರಾಗಿಲ್ಲ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯ ಉಪಚುನಾವಣೆ ಫಲಿತಾಂಶ ಏನೇ ಆದರೂ ರಾಜಕೀಯವಾಗಿ ಅಲ್ಲೋಲ ಕಲ್ಲೋಲವಾಗುವ ಬೆಳವಣಿಗೆ ಯಂತೂ ಕರ್ನಾಟಕಕ್ಕೆ ಇಲ್ಲವೇ ಇಲ್ಲ ಎನ್ನಬಹುದು. ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಈ ಎರಡೂ ಸ್ಥಾನಗಳನ್ನು ಕಳೆದುಕೊಂಡರೂ, ಅದರ ಅಸ್ತಿತ್ವಕ್ಕೆ ತೊಂದರೆಯೇನೂ ಆಗುವುದಿಲ್ಲ. ಸರ್ಕಾರ ನಿರಾತಂಕವಾಗಿ ಮುಂದುವರಿಯಲು ದೊಡ್ಡ ಗಂಡಾಂತರವೇನೂ ಇರುವುದಿಲ್ಲ.
ಆದರೆ ದಾವಣಗೆರೆಯ ಉಪಚುನಾವಣೆ ಅನೇಕ ಕಾರಣಗಳಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಸವಾಲೇ ಆಗಲಿದೆ. ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿ ಮತ್ತು ಪ್ರಭಾವಿ ವ್ಯಕ್ತಿಯಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಅವರನ್ನು ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿದಾಗಲೇ ಈ ಸವಾಲು ಎದುರಾಯಿತು. ಮೇಲ್ನೋಟಕ್ಕೆ ಈ ಆಯ್ಕೆ ಸರಿಯಾಗಿ ಕಾಣಬಹುದು. ಚುನಾವಣೆಯನ್ನು ಗೆಲ್ಲುವ ಎಲ್ಲ ಅಂಶಗಳನ್ನೂ ಗಮನಿಸಿಯೇ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಆಯ್ಕೆ ಮಾಡಿರಬಹುದು. ಆದರೆ ಅಭ್ಯರ್ಥಿಯನ್ನು ಆಯ್ಕೆಮಾಡುವಾಗ ಇನ್ನೂ ಕೆಲವು ಸೂಕ್ಷ್ಮ ಸಂಗತಿಗಳನ್ನು ಪರಿಶೀಲಿಸುವ ಅಗತ್ಯ ಕಾಂಗ್ರೆಸ್ ಪಕ್ಷಕ್ಕೆ ಇತ್ತು ಎಂಬುದು ಈಗ ಬಹಳ ಸ್ಪಷ್ಟವಾಗಿ ಕಾಣಿಸುತ್ತಿದೆ.
ಆರು ಬಾರಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ೨೦೨೩ರಲ್ಲಿ ಸ್ಪರ್ಧಿಸಿದಾಗ , ಇದು ನನ್ನ ಕೊನೆಯ ಸ್ಪರ್ಧೆ, ಮುಂದಿನ ಬಾರಿ ಮುಸ್ಲಿಂ ಅಭ್ಯರ್ಥಿ ಇರುತ್ತಾರೆ ಎಂದು ಹೇಳಿದ್ದರು. ಈ ವಿಧಾನಸಭಾ ಕ್ಷೇತ್ರದಲ್ಲಿ ಶೇ.೪೦ರಷ್ಟು ಮತದಾರರು ಮುಸ್ಲಿಂ ಮತದಾರರು. ಪ್ರತಿ ಚುನಾವಣೆಯಲ್ಲೂ ತಮಗೆ ಪ್ರಾತಿನಿಧ್ಯ ಸಿಗಬಹುದೆಂದು ಕಾಯುತ್ತಿದ್ದವರಿಗೆ ಈ ಉಪಚುನಾವಣೆ ದೊಡ್ಡ ಆಶಾ ಕಿರಣವನ್ನೇ ಮೂಡಿಸಿತ್ತು. ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದ ಅಬ್ದುಲ್ ಜಬ್ಬಾರ್ ಅವರು ತಮ್ಮನ್ನೇ ಪಕ್ಷ ಅಭ್ಯರ್ಥಿಯಾಗಿ ಕಣಕ್ಕಿಳಿಸಬಹುದೆಂಬ ಆಶಾ ಭಾವನೆಯನ್ನು ಇಟ್ಟುಕೊಂಡಿ ದ್ದರು. ಇಂಥ ಇನ್ನೂ ಕೆಲವರು ಇದೇ ಹಂಬಲದಿಂದ ಕಾಯುತ್ತಿದ್ದರು. ಆದರೆ ಈ ಎಲ್ಲ ಕನಸುಗಳನ್ನು ಭಗ್ನಗೊಳಿಸುವಂತೆ ಕಾಂಗ್ರೆಸ್ ಪಕ್ಷ ಸಮರ್ಥ ಅವರನ್ನು ತನ್ನ ಸಮರ್ಥ ಅಭ್ಯರ್ಥಿ ಎಂದು ಪರಿಗಣಿಸಿ ಕಣಕ್ಕಿಳಿಸಿತು.
ಈ ಬೆಳವಣಿಗೆಯಿಂದ ಮುಸ್ಲಿಂ ಸಮುದಾಯ ಸಿಟ್ಟಿಗೆದ್ದಿತು. ಅನೇಕ ಮುಸ್ಲಿಂ ಅಭ್ಯರ್ಥಿಗಳು ಕಣಕ್ಕಿಳಿದರು. ಮತ್ತೆ ಅವರನ್ನು ಮನವೊಲಿಸುವ ಪ್ರಯತ್ನವೂ ನಡೆಯಿತು. ಕೆಲವರು ಕಣದಿಂದ ಹಿಂದೆ ಸರಿದರು. ಆದರೂ ಕಾಂಗ್ರೆಸ್ ಪಕ್ಷದ ಬಗ್ಗೆ ಕೆಲವು ಮುಸ್ಲಿಂ ನಾಯಕರ ಅಸಮಾಧಾನ ಶಮನವಾಗಲಿಲ್ಲ. ಈ ಅಂಶವನ್ನು ಕಾಂಗ್ರೆಸ್ ಪಕ್ಷ ಸೂಕ್ಷ್ಮವಾಗಿ ಪರಿಗಣಿಸಿ, ಕೋಪವನ್ನು ತಣಿಸಲು ಪ್ರಯತ್ನಿಸಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರನ್ನು ಆ ಸ್ಥಾನದಿಂದ ತೆಗೆದುಹಾಕಲಾಯಿತು. ಹಿರಿಯ ನಾಯಕ ಅಬ್ದುಲ್ ಜಬ್ಬಾರ್ ಅವರನ್ನು ಪಕ್ಷದಿಂದ ಅಮಾನತ್ತು ಮಾಡಲಾಯಿತು. ಪಕ್ಷ ವಿರೋಧಿ ಚಟುವಟಿಕೆಗಾಗಿ ಈ ಶಿಸ್ತಿನ ಕ್ರಮ ಎಂದೂ ಹೇಳಲಾಯಿತು. ಇನ್ನೂ ಅನೇಕ ಕಾರಣಗಳನ್ನೂ ಪಕ್ಷದ ಹೈಕಮಾಂಡ್ ಕೊಡಬಹುದು.
ಆದರೆ ಕಾಂಗ್ರೆಸ್ ಹೈಕಮಾಂಡ್ ಇನ್ನಷ್ಟು ತಾಳ್ಮೆಯಿಂದ ಮುಸ್ಲಿಂ ಸಮುದಾಯವನ್ನು ನೋಡಬೇಕಾಗಿತ್ತು. ಮುಸ್ಲಿಂ ಸಮುದಾಯದ ಜೊತೆಗಿನ ಸಖ್ಯ ಕಾಂಗ್ರೆಸ್ ಪಕ್ಷಕ್ಕೆ ಹಳೆಯದು ಮತ್ತು ಬಹಳ ಮುಖ್ಯವಾದದ್ದು. ೨೦೧೧ರ ಜನಗಣತಿಯ ಪ್ರಕಾರ ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಶೇ.೧೧ರಷ್ಟಿದೆ. ಶೇ.೧೪ಕ್ಕೂ ಇದು ಏರಿದೆ ಎಂಬ ಅಂದಾಜೂ ಇದೆ. ಇದು ಸಣ್ಣ ಸಂಖ್ಯಾಬಲವೇನೂ ಅಲ್ಲ. ಜೊತೆಗೆ ಕರ್ನಾಟಕದಲ್ಲಿ ಮುಸ್ಲಿಮರಿಗಿರುವ ಆಯ್ಕೆ ನಿಜವಾಗಿಯೂ ಕಾಂಗ್ರೆಸ್ ಪಕ್ಷವೇ. ಎಸ್ ಡಿಪಿಐ (ಸೋಷಲಿಸ್ಟ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ತನ್ನ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ನಿಲ್ಲಿಸಿದರೂ, ಮುಸ್ಲಿಂ ಸಮುದಾಯ ಎಂದೂ ಆ ಅಭ್ಯರ್ಥಿಗಳನ್ನು ಪರಿಗಣಿಸಿಲ್ಲ. ಬಿಜೆಪಿ ಮುಸ್ಲಿಮರನ್ನು ತನ್ನ ಪರಮ ವೈರಿ ಎಂದೇ ಪರಿಗಣಿಸುವ ಮನೋಭಾವವನ್ನು ದೂರಮಾಡಿಲ್ಲ. ಹೀಗಿರುವಾಗ ಮುಸ್ಲಿಂ ಸಮುದಾಯ ತನ್ನೆಲ್ಲ ಆಸೆ ಆಕಾಂಕ್ಷೆಗಳಿಗೆ ಕಾಂಗ್ರೆಸ್ ಪಕ್ಷವನ್ನು ನಂಬಿದರೆ, ಈ ನಂಬಿಕೆಯನ್ನು ಉಳಿಸಿಕೊಳ್ಳಬೇಕಾದದ್ದು ಕಾಂಗ್ರೆಸ್ ಪಕ್ಷದ ಹೊಣೆಗಾರಿಕೆಯಾಗಿತ್ತು.
ರಾಜ್ಯ ವಿಧಾನಸಭೆಯ ೨೨೪ ಶಾಸಕರಲ್ಲಿ ಮುಸ್ಲಿಂ ಶಾಸಕರ ಸಂಖ್ಯೆ ಕೇವಲ ೯. ಹಿಂದಿನ ವಿಧಾನಸಭೆಯಲ್ಲಿ ಈ ಸಂಖ್ಯೆ ಏಳು ಇತ್ತು ಎಂಬುದನ್ನು ಗಮನಿಸಿದರೆ ಈಗಿರುವ ಒಂಬತ್ತು ಶಾಸಕರ ಸಂಖ್ಯ ದೊಡ್ಡದಾಗಿ ಕಾಣಬಹುದು. ಆದರೆ ಮುಸ್ಲಿಂ ಸಮುದಾಯದ ಜನಸಂಖ್ಯೆಯನ್ನು ಪರಿಗಣಿಸಿದರೆ ಅವರನ್ನು ಪ್ರತಿನಿಧಿಸುವವರ ಸಂಖ್ಯಾಬಲ ೨೮ ಇರಬೇಕಾಗಿತ್ತು. ಇದನ್ನು ಗಮನಿಸಬೇಕಾದ ಅಗತ್ಯವೂ ಇದೆ. ಅಹಿಂದ ತತ್ವ ಬಹುದೊಡ್ಡ ತತ್ವ. ಪ್ರಜಾಪ್ರಭುತ್ವದ ಜೀವಾಳವೂ ಆಗಬಲ್ಲದು. ಈ ಚೌಕಟ್ಟಿನೊಳಕ್ಕೆ ಮಹಿಳೆಯರನ್ನೂ ತರುವುದು ಅತ್ಯಗತ್ಯ. ಆಗಲೇ ಈ ತತ್ವ ಇನ್ನಷ್ಟು ಜೀವಕಳೆ ತುಂಬಿಕೊಳ್ಳುತ್ತದೆ. ಇಂಥ ಹೊತ್ತಿನಲ್ಲಿ ಕಾಂಗ್ರೆಸ್ ಪಕ್ಷವು ಮುಸ್ಲಿಮರನ್ನು ಕಡೆಗಣ್ಣಿನಿಂದ ನೋಡಿದ್ದು ಸರಿಯಾದ ಕ್ರಮವಲ್ಲ. ಸಾಮಾಜಿಕ ನ್ಯಾಯ ಎನ್ನುವ ಕುದುರೆಯನ್ನೇರಿ ಹೊರಟವರಿಗಂತೂ ಈ ತತ್ವ ಬಹಳ ಮುಖ್ಯವಾಗಬೇಕಾಗಿತ್ತು.
ಹಾಗಾಗದೇ ಹೋದದ್ದು ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರವಲ್ಲ, ಇಡೀ ಕರ್ನಾಟಕಕ್ಕೇ ದೊಡ್ಡ ಆಪತ್ತನ್ನು ತರುವ ಸಾಧ್ಯತೆ ಇದೆ. ಈಗಲಾದರೂ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಈ ಸಮಸ್ಯೆಯನ್ನು ಎಚ್ಚರಿಕೆಯಿಂದ ಪರಿಶೀಲಿಸಿ ತನ್ನ ತಪ್ಪನ್ನು ಸರಿಪಡಿಸಿಕೊಳ್ಳಬೇಕಾಗಿದೆ.
” ಮುಸ್ಲಿಂ ಸಮುದಾಯದ ಜೊತೆಗಿನ ಸಖ್ಯ ಕಾಂಗ್ರೆಸ್ ಪಕ್ಷಕ್ಕೆ ಹಳೆಯದು ಮತ್ತು ಬಹಳ ಮುಖ್ಯವಾದದ್ದು. ೨೦೧೧ರ ಜನಗಣತಿಯ ಪ್ರಕಾರ ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಶೇ.೧೧ರಷ್ಟಿದೆ. ಶೇ.೧೪ಕ್ಕೂ ಇದು ಏರಿದೆ ಎಂಬ ಅಂದಾಜೂ ಇದೆ. ಇದು ಸಣ್ಣ ಸಂಖ್ಯಾಬಲವೇನೂ ಅಲ್ಲ. ಜೊತೆಗೆ ಕರ್ನಾಟಕದಲ್ಲಿ ಮುಸ್ಲಿಮರಿಗಿರುವ ಆಯ್ಕೆ ನಿಜವಾಗಿಯೂ ಕಾಂಗ್ರೆಸ್ ಪಕ್ಷವೇ.”
ಮೈಸೂರು: ಮೈಸೂರಿನ ಹಳೆ ಕೆಸರೆ ವರುಣ ನಾಲೆಯ ಅಂಡರ್ ಬ್ರಿಡ್ಜ್ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಶವದ ಮೇಲೆ…
ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನ್ಕಕೆ ಸೂರ್ಯನ ಪ್ರತಾಪ ಹೆಚ್ಚಾಗುತ್ತಿದ್ದು, ಇಡೀ ಕರ್ನಾಟಕವೇ ಬಿಸಿಲಿನ ಕೆಂಡದಂತಾಗಿದೆ.. ಬಿಸಿಲಿನ ಝಳ ಹೆಚ್ಚಾಗಿರುವ ಕಾರಣ…
ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿಯ ಸೂತ್ರವನ್ನು ಹೆಣೆಯುವಲ್ಲಿ ಕರ್ನಾಟಕ ಸರ್ಕಾರ ಕೊನೆಗೂ ಯಶಸ್ವಿಯಾಗಿದೆ. ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಬಲಗೈ, ಎಡಗೈಗೆ ತಲಾ…
ಜನನಾಯಕನ ಪೌರುಷವನ್ನು ಕೆಣಕುತ್ತಿದ್ದಾರೆ ಸಿದ್ದು ಆಪ್ತರು ರಾಜ್ಯದ ಆಡಳಿತ ಯಂತ್ರದ ಚುರುಕಿಗೆ ಸಚಿವ ಸಂಪುಟ ಪುನರ್‌ರಚಿಸಬೇಕೆಂಬ ಒತ್ತಾಸೆಯೂ ಇದೆ ಕಳೆದ…
ನವೀನ್ ಡಿಸೋಜ ಚಾರಣಿಗರ ಸುರಕ್ಷತೆ, ಪ್ರಕೃತಿ ಸಂಪತ್ತಿನ ಉಳಿವಿಗೆ ಹೊಸ ಮಾರ್ಗಸೂಚಿ ಸಹಕಾರಿ; ಪರಿಣಾಮಕಾರಿಯಾಗಿ ಜಾರಿಗೊಳಿಸಲು ಒತ್ತಾಯ ಮಡಿಕೇರಿ: ಅರಣ್ಯ…
ವರಹಳ್ಳಿ ಆನಂದ ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಶಾಲೆಯಲ್ಲೀಗ ಕಲಿಯುತ್ತಿರುವುದು ಕೇವಲ ೩೯ ಮಕ್ಕಳು ಮೈಸೂರು: ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದ…