ಅಂಕಣಗಳು

ಚಲನಚಿತ್ರ ವಾಣಿಜ್ಯ ಮಂಡಳಿಯೂ ಕನ್ನಡಪರ ನಿಲುವೂ

ವೈಡ್‌ ಆಂಗಲ್

– ಬಾ.ನಾ.ಸುಬ್ರಹ್ಮಣ್ಯ 

ಇದು ಬಹಳಷ್ಟು ಮಂದಿಗೆ ಬಹುಶಃ ಮುದ ತರಬಹುದಾದ ವಿಷಯ. ಒಳ್ಳೆಯ ಬೆಳವಣಿಗೆ ಎನ್ನುವ ಮಂದಿಯೂ ಇದ್ದಾರೆ. ಸಹಜವೇ. ಕಮಲಹಾಸನ್ ತಮ್ಮ ಅಭಿನಯದ ಹೊಸ ಚಿತ್ರ ಥಗ್ ಲೈಫ್ ಟ್ರೈಲರ್ ಚೆನ್ನೈಯಲ್ಲಿ ಬಿಡುಗಡೆ ವೇಳೆ ಮಾಡಿದ ಭಾಷಣದಲ್ಲಿ ಆಡಿದ ಒಂದು ಮಾತು ವಿವಾದಕ್ಕೆ ದಾರಿ ಮಾಡಿಕೊಟ್ಟಿತು. ತಮಿಳಿನಿಂದ ನಿಮ್ಮ ಭಾಷೆ ಹುಟ್ಟಿತು ಎಂದ ಮಾತದು. ಅವರು ಆ ಮಾತನ್ನು ಸಮಾರಂಭಕ್ಕೆ ಅತಿಥಿಯಾಗಿ ಹೋಗಿದ್ದ, ಶಿವರಾಜ್‌ಕುಮಾರ್ ಅವರನ್ನು ಉದ್ದೇಶಿಸಿ ಹೇಳಿದ್ದರು. ಮೊದಲಿನಿಂದಲೂ ತಮಿಳು ಮತ್ತು ಕನ್ನಡ ನಡುವೆ ಇದ್ದ ಪ್ರೀತಿ, ದ್ವೇಷ ಸಂಬಂಧದ ಕುದಿಗೆ ಅದು ತುಪ್ಪಹಾಕಿದಂತಾಯಿತು.

ಕನ್ನಡಪರ ಹೋರಾಟಗಾರರು, ಮಾಧ್ಯಮಗಳು, ರಾಜಕೀಯ ಪಕ್ಷಗಳು ಇದನ್ನು ಅವರವರು ಗ್ರಹಿಸಿದಂತೆ ತೆಗೆದುಕೊಂಡರು. ತಾವಾಡಿದ ಮಾತು ಕರ್ನಾಟಕದಲ್ಲಿ ವಿವಾದದ ಕೇಂದ್ರವಾಗುತ್ತಿದ್ದಂತೆ, ಚಿತ್ರದ ಪ್ರಚಾರದಲ್ಲಿ ತೊಡಗಿದ್ದ ಕಮಲ್ ಹಾಸನ್, ತಿರುವನಂತಪುರದಲ್ಲಿ ಇದಕ್ಕೆ ಪ್ರತಿಕ್ರಿಯಿಸಿ, ದಕ್ಷಿಣದವರ ಪ್ರಕಾರ ನೋಡಿದರೆ ನಾನು ಹೇಳುವುದು ಸರಿ; ಉತ್ತರದವರ ಪ್ರಕಾರ ಅವರು ಹೇಳುತ್ತಿರುವುದು ಸರಿ. ಆದರೆ ಇದಕ್ಕೂ ಮಿಗಿಲಾಗಿ ಮೂರನೆಯದೊಂದಿದೆ. ಅದನ್ನು ರಾಜಕಾರಣಿಗಳು, ನಾನೂ ಸೇರಿದಂತೆ ಯಾರೂ ಹೇಳಲಿಕ್ಕಾಗದು; ಅದನ್ನು ಭಾಷಾ ಶಾಸ್ತ್ರಜ್ಞರು, ಇತಿಹಾಸಕಾರರು ಹೇಳಬೇಕು ಎಂದರು.

ಗಮನಿಸಿ. ಅಲ್ಲಿ ತಾನು ರಾಜಕಾರಣಿ ಎನುವ ಮಾತನ್ನು ಅವರೇ ಹೇಳಿಕೊಳ್ಳುತ್ತಾರೆ. ಆ ಮೂಲಕ ಈ ಮಾತಿನ ಹಿಂದೆ ಏನಾದರೂ ರಾಜಕಾರಣ ಇದೆಯೇ ಎನ್ನುವ ಮಾತಿಗೆ ಅವರು ಪರೋಕ್ಷ ಉತ್ತರ ನೀಡಿದ ಹಾಗೆಆಯಿತು. ೩೮ ವರ್ಷಗಳ ನಂತರ ಮಣಿರತ್ನಂ ಮತ್ತು ಅವರು ಜೊತೆಯಾದ ಚಿತ್ರದ ಬಿಡುಗಡೆಯ ವೇಳೆ, ಚಿತ್ರದ ಜೊತೆಗೆ ರಾಜಕೀಯವೂ ಥಳಕು ಹಾಕಿಕೊಂಡಿತು. ತಮಿಳುನಾಡಿನಲ್ಲಿ ಈಗ ಆಡಳಿತದ ಚುಕ್ಕಾಣಿ ಹಿಡಿದಿರುವ ಡಿಎಂಕೆ ನೆರವಿನೊಂದಿಗೆ ಅವರು ರಾಜ್ಯಸಭೆ ಪ್ರವೇಶಿಸುವುದು ಪಕ್ಕಾ ಆಗಿದೆ. ಈ ಹಿನ್ನೆಲೆಯಲ್ಲಿ ಈಗ ಅವರ ಮಾತುಗಳನ್ನು ವಿಶ್ಲೇಷಿಸಲಾಗುತ್ತಿದೆ.

ತಮಿಳು ಸುದ್ದಿವಾಹಿನಿಗಳು ಮತ್ತಿತರ ಮಾಧ್ಯಮಗಳಲ್ಲಿ ನಡೆಯುವ ಬಹುತೇಕ ಚರ್ಚೆಗಳು ತಮಿಳು ಪಾರಮ್ಯವನ್ನು ಮತ್ತೆಮತ್ತೆ ಹೇಳುತ್ತಿವೆ. ರೆ. ರಾಬರ್ಟ್ ಕಾಲ್ಡ್‌ವೆಲ್ ೧೮೫೬ರಲ್ಲಿ ಪ್ರಕಟವಾದ ತಮ್ಮ ಅ A COMPARATIVE GRAMMAR OF DRAVIDIAN OR SOUTH-INDIAN FAMILY OF LANGUAGES ಕೃತಿಯಲ್ಲಿ ಮೊದಲ ಬಾರಿಗೆ ‘ದ್ರಾವಿಡ ಭಾಷಾ ಕುಟುಂಬ’ ಎಂಬುದಾಗಿ ಈ ಭಾಷಾ ಸಮೂಹವನ್ನು ಕರೆಯುತ್ತಾರೆ. ಆ ಕೃತಿಯ ಪರಿಚಯದಲ್ಲಿ, ಆಗ ಯುರೋಪಿನ ಬರಹಗಾರರು ‘ದ್ರಾವಿಡ’ ಬದಲು ‘ತಮಿಳು’ ಪದ ಬಳಸುತ್ತಿದ್ದರು ಎನ್ನುವುದನ್ನು ಪ್ರಸ್ತಾಪಿಸುತ್ತಾ ಒಂದು ಭಾಷೆಯಿಂದ ಇನ್ನೊಂದು ಭಾಷೆ ಹುಟ್ಟುವುದಕ್ಕೆ ಸಾಧ್ಯವಿಲ್ಲ, ಅವುಗಳೆಲ್ಲ ಪ್ರತ್ಯೇಕವಾಗಿರಬೇಕು ಎಂದು ಹೇಳುತ್ತಾರೆ. ಅರ್ಥಾತ್, ತಮಿಳಿನಿಂದ ಕನ್ನಡವಾಗಲಿ, ತೆಲುಗು, ಮಲಯಾಳಗಳಾಗಲಿ ಹುಟ್ಟಲು ಸಾಧ್ಯವಿಲ್ಲ.

ಎಲ್ಲವನ್ನೂ ಸೋದರ ಭಾಷೆಗಳೆಂದು ಕರೆಯಬಹುದು, ಕರೆಯಲಾಗುತ್ತಿದೆ. ಮೂಲ ದ್ರಾವಿಡ ಭಾಷೆ, ಅದರ ವಿಭಜನೆ, ಅವುಗಳಿಂದ ಹುಟ್ಟಿದ ಭಾಷೆಗಳು, ಅವುಗಳನ್ನಾಡುವ ಜನ ದೇಶದ ಬೇರೆಬೇರೆ ಕಡೆ ಇದ್ದಾರೆ ಎನ್ನುತ್ತಾರೆ ಅವುಗಳನ್ನು ಬಲ್ಲ ತಜ್ಞರು. ತಮಿಳುನಾಡಿನ ಬಹಳಷ್ಟು ಮಂದಿಗೆ, ಇದು ತಿಳಿದಿಲ್ಲವೇನೋ. ಮೊನ್ನೆ ಪತ್ರಿಕಾಗೋಷ್ಠಿ ಕರೆದಿದ್ದ ಕಮಲಹಾಸನ್ ಈ ವಿವಾದ ಬೆಳವಣಿಗೆಯ ಸಂದರ್ಭದಲ್ಲಿ ತಮ್ಮ ಬೆಂಬಲಕ್ಕೆ ನಿಂತ ತಮಿಳರನ್ನು ನೆನೆದುಕೊಂಡಿದ್ದಾರೆ.

ವಿವಾದದ ಕುರಿತಂತೆ ಮತ್ತೆ ಮಾತನಾಡುವೆ ಎಂದಿದ್ದಾರೆ. ಈ ನಡುವೆ ಚಿತ್ರದ ಬಿಡುಗಡೆಗೆ ಭದ್ರತೆ ಕೋರಿ ‘ಥಗ್ ಲೈಫ್’ ನಿರ್ಮಾಪಕರು ಕರ್ನಾಟಕದ ಹೈಕೋರ್ಟು ಮೆಟ್ಟಲೇರಿದ್ದರು. ನ್ಯಾಯಮೂರ್ತಿಗಳು, ಕ್ಷಮೆ ಕೇಳಿದ್ದರೆ ಎಲ್ಲಾ ಸರಿಹೋಗುತ್ತಿತ್ತಲ್ಲ, ಜನರ ಭಾವನೆಗಳನ್ನು ಘಾಸಿಗೊಳಿಸುವ ಕೆಲಸ ಮಾಡಿ, ಮತ್ತೆ ರಕ್ಷಣೆ ಕೋರುತ್ತೀರಿ ಎಂದು ವಾಸ್ತವ ಸ್ಥಿತಿಗೆ ಕನ್ನಡಿ ಹಿಡಿದರು. ಈ ನಡುವೆ ಕಮಲ್‌ಹಾಸನ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಿಗೆ ಪತ್ರ ಬರೆದು, ತಾವು ಕನ್ನಡಿಗರ ಮನನೋಯಿಸುವ ಕೆಲಸ ಮಾಡಿಲ್ಲ, ಶಿವರಾಜ್‌ಕುಮಾರ್ ಅವರ ಎದುರು ಆಡಿದ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಮುಂತಾಗಿ ಹೇಳಿ, ನನ್ನಿಂದಾಗಿ ಅವರಿಗೆ ಮುಜುಗರದ ಪ್ರಸಂಗ ಒದಗಿ ಬಂದಿದ್ದಕ್ಕೆ ವಿಷಾದವಿದೆ ಎಂದಿದ್ದರು.

ಮಧ್ಯಾಹ್ನದ ನಂತರ ನ್ಯಾಯಾಲಯದಲ್ಲಿ ಕಮಲ್‌ಹಾಸನ್ ಪರ ವಕೀಲರು ತಮ್ಮ ಚಿತ್ರದ ಬಿಡುಗಡೆಯನ್ನು ಒಂದು ವಾರ ಮುಂದೂಡುವುದಾಗಿಯೂ, ವಾಣಿಜ್ಯ ಮಂಡಳಿ ಜೊತೆ ಮಾತನಾಡುವುದಾಗಿಯೂ ಹೇಳಿದರು. ಚಲನಚಿತ್ರ ವಾಣಿಜ್ಯ ಮಂಡಳಿ ಇದೀಗ ‘ಕ್ಷಮೆ ಕೇಳದೆ ಮುಂದಿನ ಪ್ರಶ್ನೆಯೇ ಇಲ್ಲ’ ಎಂದು ತನ್ನ ನಿರ್ಧಾರವನ್ನು ಹೇಳಿದೆ. ಕ್ಷಮೆ ಕೇಳುವ ಸಾಧ್ಯತೆ ಕಡಿಮೆ ಎನ್ನುವುದು ಕಮಲ್‌ಹಾಸನ್ ಅವರನ್ನು ಹತ್ತಿರದಿಂದ ಬಲ್ಲವರ ಅಭಿಪ್ರಾಯ. ಹಿಂದೆ ಅವರ ಚಿತ್ರವೊಂದರ ಬಿಡುಗಡೆಗೆ ಇಂತಹದೇ ವಿವಾದ ಎದ್ದಾಗ, ತಮಿಳುನಾಡಿನಲ್ಲಿ ಅದನ್ನು ಅವರು ಬಿಡುಗಡೆ ಮಾಡಿರಲಿಲ್ಲ.

ವಿವಾದದ ಮಾತು ಒತ್ತಟ್ಟಿಗಿರಲಿ, ‘ಥಗ್ ಲೈಫ್’ ಕರ್ನಾಟಕದಲ್ಲಿ ತೆರೆಗೆ ಬರದೆ ಇರುವುದು, ಈ ವಾರ ತೆರೆಗೆ ಬರಲಿರುವ ಕನ್ನಡ ಚಿತ್ರಗಳ ಪಾಲಿಗೆ ಕೊಂಚ ಅನುಕೂಲ ಆಗಬಹುದೇನೋ. ಪರಭಾಷಾ ಚಿತ್ರಗಳು ಬಂದಾಗ, ಅದರಲ್ಲೂ, ಜನಪ್ರಿಯ ನಟರ ಚಿತ್ರಗಳು ಬಂದಾಗ, ರಾಜ್ಯದಲ್ಲಿ ಎಷ್ಟು ಸಾಧ್ಯವೋ ಅಷ್ಟು ಚಿತ್ರಮಂದಿರಗಳಲ್ಲಿ ಅವುಗಳನ್ನು ಬಿಡುಗಡೆ ಮಾಡುತ್ತಾರೆ. ಐನೂರರಿಂದ ಸಾವಿರದವರೆಗೆ ಪ್ರದರ್ಶನಗಳು ಬೆಂಗಳೂರಿನಲ್ಲೇ ಇರುತ್ತವೆ. ಅಂತಹ ಬೆಳವಣಿಗೆಗೆ ಮಲ್ಟಿಪ್ಲೆಕ್ಸ್‌ಗಳು ಒತ್ತಾಸೆ ಆಗಿರುತ್ತವೆ. ಈ ವಾರ ಕನ್ನಡದ ಆರು ಚಿತ್ರಗಳು ತೆರೆಗೆ ಬರುತ್ತಿವೆ.

ಮರುಬಿಡುಗಡೆಯಾಗುತ್ತಿರುವ ‘ಸಂಜು ವೆಡ್ಸ್ ಗೀತಾ ಪಾರ್ಟ್ ೨ ’, ‘ಮಾದೇವ’, ‘ಕಾಲೇಜ್ ಕಲಾವಿದ’, ‘ಸ್ಕೂಲ್ ರಾಮಾಯಣ’, ‘ಸೀಸ್‌ಕಡ್ಡಿ’ ಮತ್ತು ‘ನೀತಿ’ ಈ ಚಿತ್ರಗಳು. ಚಲನಚಿತ್ರ ವಾಣಿಜ್ಯ ಮಂಡಳಿ ಕನ್ನಡ ಚಿತ್ರಗಳತ್ತ ಗಮನ ಹರಿಸಲು ಇದು ಸಕಾಲ ಎನ್ನುವ ಮಾತು ಕೇಳಿಬರುತ್ತಿದೆ. ಎಂಬತ್ತರ ದಶಕದ ಆರಂಭದಲ್ಲಿ, ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕನ್ನಡ ಚಿತ್ರಗಳಿಗೆ ನ್ಯಾಯ ಸಿಗುವುದಿಲ್ಲ ಎಂದು ನಿರ್ಮಾಪಕರು ಅಲ್ಲಿಂದ ಸಿಡಿದು ಹೊರ ಬಂದಿದ್ದರು. ನಿರ್ಮಾಪಕರ ಸಂಘದ ಸ್ಥಾಪನೆಗೆ ಅದು ನಾಂದಿ ಹಾಡಿತ್ತು. ಸಂಘದ ಅಧ್ಯಕ್ಷರು ಯಾರಾಗಿರುತ್ತಾರೋ, ಅವರ ಕಚೇರಿಯೇ, ನಿರ್ಮಾಪಕರ ಸಂಘದ ಕಚೇರಿಯಾಗುತ್ತಿತ್ತು. ಈಗ ನಿರ್ಮಾಪಕರ ಸಂಘಕ್ಕೆ ಅದರದ್ದೇ ಆದ ಕಟ್ಟಡ ಬಂದಿದೆ. ವಿತರಕರ ಮತ್ತು ಪ್ರದರ್ಶಕರ ಸಂಘಗಳೂ ಇವೆ. ಆದರೆ ಅವು ಕೇವಲ ಕನ್ನಡ ಚಿತ್ರಗಳಿಗೆ ಸೀಮಿತ ಆಗಿರಲು ಸಾಧ್ಯವಿಲ್ಲ.

ಕನ್ನಡ ಚಿತ್ರಗಳಿಗೆ ವಾಣಿಜ್ಯ ಮಂಡಳಿಯಲ್ಲಿ ನ್ಯಾಯ ಸಿಗುತ್ತಿಲ್ಲ, ಇದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಆಗಬೇಕು ಎಂದು ಬಯಸುವವರೂ ಇದ್ದಾರೆ. ಅವರು ಮಂಡಳಿಯ ಹೊಸ ಕಟ್ಟಡ ತಲೆ ಎತ್ತಿದಾಗ, ಹೊರಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಎಂದು ಬೋರ್ಡ್ ಬರೆಸಿದ್ದೂ ಆಗಿತ್ತು. ಈ ಪ್ರಸ್ತಾಪಕ್ಕೆ ಕಮಲ್ ಹಾಸನ್ ಪ್ರಕರಣ ಕಾರಣ. ಕನ್ನಡಕ್ಕೆ ಅವಮಾನ ಆಯಿತು ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಒಕ್ಕೊರಲಿನಿಂದ ಅವರ ಕ್ಷಮೆ ಕೇಳಲು ಹೇಳಿದೆ. ಕ್ಷಮೆ ಕೇಳಿದರೆ ಅವರ ಚಿತ್ರಗಳು ಎಲ್ಲ ಭಾಷೆಗಳಲ್ಲಿ ಪ್ರದರ್ಶನ ಕಾಣಲಿದೆಯೇ ಅಥವಾ ಕನ್ನಡದ ಆವೃತ್ತಿಗೆ ಸೀಮಿತವಾಗಲಿದೆಯೇ?!

ಏಕೆಂದರೆ, ದಶಕಗಳಿಂದ ದೂರವಿದ್ದ ಡಬ್ಬಿಂಗ್ ಈಗ ಕನ್ನಡಕ್ಕೆ ಬಂದಿದೆ. ಕನ್ನಡ ಹೋರಾಟಗಾರರು ಇದನ್ನು ಬಯಸಿದವರ ಜೊತೆಗಿದ್ದರು. ಹೇಗಿದ್ದರೂ ಕನ್ನಡದಲ್ಲೂ ಪರಭಾಷೆಯ ಚಿತ್ರಗಳು ಡಬ್ ಆಗುತ್ತಿವೆ. ಅವುಗಳು ಮಾತ್ರ ಇಲ್ಲಿ ತೆರೆಕಾಣಬೇಕು ಎಂದು ಹೋರಾಟಗಾರರು ಏಕೆ ಒತ್ತಾಯ ಮಾಡಬಾರದು? ವಾಣಿಜ್ಯ ಮಂಡಳಿಯಂತೂ ಈಗ ಕನ್ನಡಕ್ಕಾಗಿ ಕೈ ಎತ್ತಿದೆ. ಕನ್ನಡ ಚಿತ್ರಗಳ ಪರವಾಗಿ ಯಾಕೆ ಪಾಂಚಜನ್ಯ ಮೊಳಗಬಾರದು? ಚಿತ್ರಗಳಲ್ಲಿ ಅವಕಾಶಕ್ಕಾಗಿ ನಟಿಯರು ‘ಹೊಂದಾಣಿಕೆ’ ಮಾಡಿಕೊಳ್ಳಬೇಕು, ಸಹಕಾರ ನೀಡಬೇಕು ಎನ್ನುವುದನ್ನು ಸುದ್ದಿವಾಹಿನಿಯೊಂದು ಸ್ಟಿಂಗ್ ಆಪರೇಶನ್ ಮೂಲಕ ಹೊರಗೆಡಹಿದೆ. ‘ದೂರು ಕೊಟ್ಟರೆ ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ವಾಣಿಜ್ಯ ಮಂಡಳಿಯ ವಕ್ತಾರರು ಹೇಳಿದ್ದಾಗಿ ವರದಿಯಾಗಿದೆ. ಆದರೆ ದೂರು ಯಾರು ಕೊಡುತ್ತಾರೆ? ಕೇರಳದಲ್ಲಿ ಹೇಮಾ ಕಮಿಶನ್ ವರದಿಯಲ್ಲಿ ಹೇಳಿದ್ದ ಮಂದಿಯ ವಿರುದ್ಧ ತನಿಖೆ ಆರಂಭ ಮಾಡಲಾಗಿತ್ತು. ಆದರೆ ಮೊದಲು ಲೈಂಗಿಕ ಶೋಷಣೆ ಆಗಿದೆ ಎಂದು ದೂರನ್ನು ಗೌಪ್ಯವಾಗಿ ನೀಡಿದವರು, ಈಗ ಪೊಲೀಸರ ಮುಂದೆ ಹೇಳಲು ಸಿದ್ಧರಿಲ್ಲ. ಅವರಿಗೆ ಬೆದರಿಕೆ ಹಾಕಲಾಗುತ್ತಿದೆ ಎನ್ನುವ ಮಾತೂ ಕೇಳಿ ಬಂದಿದೆ.

ಇದೀಗ ತನಿಖೆಯನ್ನು ಕೈಬಿಡಲು ನಿರ್ಧರಿಸಿದ್ದಾಗಿ ಅಲ್ಲಿಂದ ವರದಿಯಾಗಿದೆ. ತಾವು ಮಾತನಾಡುತ್ತಿರುವುದು ಕ್ಯಾಮರಾ ಮುಂದೆ ಎನ್ನುವ ವಿಷಯ ಆ ನಟಿಯರಿಗಾಗಲೀ, ನಿರ್ದೇಶಕನಿಗಾಗಲೀ, ಮಧ್ಯವರ್ತಿಗಾಗಲೀ ತಿಳಿದಿದ್ದರೆ ಈ ಸತ್ಯವನ್ನು ಅವರು ಮುಚ್ಚಿಡುತ್ತಿದ್ದರು! ವಾಣಿಜ್ಯ ಮಂಡಳಿ ಕನ್ನಡ ಪರವಾಗುತ್ತಿರುವುದು ಬಹಳಷ್ಟು ಮಂದಿಗೆ ಬಹುಶಃ ಮುದ ತರಬಹುದಾದ ವಿಷಯ ಎಂದು ಮೊದಲೇ ಹೇಳಿದೆ. ಕನ್ನಡ ಚಿತ್ರಗಳು, ಚಿತ್ರೋದ್ಯಮದ ಮಂದಿಯತ್ತಲೂ ಅದರ ಗಮನ ಹರಿಯಬೇಕು.

” ಚಲನಚಿತ್ರ ವಾಣಿಜ್ಯ ಮಂಡಳಿ ಇದೀಗ ‘ಕ್ಷಮೆ ಕೇಳದೆ ಮುಂದಿನ ಪ್ರಶ್ನೆಯೇ ಇಲ್ಲ’ ಎಂದು ತನ್ನ ನಿರ್ಧಾರವನ್ನು ಹೇಳಿದೆ. ಕ್ಷಮೆ ಕೇಳುವ ಸಾಧ್ಯತೆ ಕಡಿಮೆ ಎನ್ನುವುದು ಕಮಲ್ ಹಾಸನ್ ಅವರನ್ನು ಹತ್ತಿರದಿಂದ ಬಲ್ಲವರ ಅಭಿಪ್ರಾಯ. ಹಿಂದೆ ಅವರ ಚಿತ್ರವೊಂದರ ಬಿಡುಗಡೆಗೆ ಇಂತಹದೇ ವಿವಾದ ಎದ್ದಾಗ, ತಮಿಳುನಾಡಿನಲ್ಲಿ ಅದನ್ನು ಅವರು ಬಿಡುಗಡೆ ಮಾಡಿರಲಿಲ್ಲ.”

ಆಂದೋಲನ ಡೆಸ್ಕ್

Recent Posts

ಲಂಚಕ್ಕೆ ಬೇಡಿಕೆ : ಪಿಎಸ್ಐ ಚೇತನ್ ಲೋಕಾ ಬಲೆಗೆ

ತುಮಕೂರು : ರಸ್ತೆಯಲ್ಲಿ ನಿಲ್ಲಿಸಿದ್ದ ಕಾರನ್ನು ತೋ ಮಾಡಿಕೊಂಡು ಠಾಣೆಗೆ ತಂದಿದ್ದ ಕಾರನ್ನು ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟು…

4 hours ago

ಪೊಲೀಸ್‌ ದಾಳಿ : ಮೈಸೂರಲ್ಲಿ ಡ್ರಗ್ಸ್‌ಗೆ ಬಳಸುವ ರಾಸಾಯನಿಕ ವಸ್ತುಗಳ ಪತ್ತೆ

ಮೈಸೂರು : ಮಾದಕ ವಸ್ತು ತಯಾರಿಕೆ ಶಂಕೆ ಮೇರೆಗೆ ಮನೆಯೊಂದರ ಮೇಲೆ ಮೈಸೂರು ದಕ್ಷಿಣ ಪೊಲೀಸ್ ಠಾಣೆ ಪೊಲೀಸರು ದಾಳಿ…

5 hours ago

ಚಿನ್ನಾಭರಣ ಪಡೆದು ವಂಚನೆ : ಮಾಲೀಕನ ಬಂಧನ

ಮೈಸೂರು : ಕಡಿಮೆ ಬಡ್ಡಿ ದರದಲ್ಲಿ ಚಿನ್ನಾಭರಣದ ಮೇಲೆ ಸಾಲ ನೀಡುವುದಾಗಿ ನಂಬಿಸಿ ಗ್ರಾಹಕರಿಂದ ಚಿನ್ನಾಭರಣ ಪಡೆದು ವಂಚಿಸಿ ಪರಾರಿಯಾಗಿದ್ದ…

5 hours ago

ನಾಳೆ ಕೇಂದ್ರ ಬಜೆಟ್‌ : ಕರ್ನಾಟಕದ ರಾಜ್ಯದ ನಿರೀಕ್ಷೆಗಳೇನು?

ಹೊಸದಿಲ್ಲಿ : ನಾಳೆ ಕೇಂದ್ರ ಸರ್ಕಾರದ 2026-27 ಸಾಲಿನ ಆಯವ್ಯಯ ಮಂಡನೆಯಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ…

5 hours ago

ಐತಿಹಾಸಿಕ ಮಳವಳ್ಳಿ ಸಿಡಿ ಜಾತ್ರಾ ಮಹೋತ್ಸವ ಸಂಪನ್ನ

ಮಳವಳ್ಳಿ : ಪಟ್ಟಣದ ಗ್ರಾಮ ದೇವತೆಗಳಾದ ಶ್ರೀ ಪಟ್ಟಲದಮ್ಮ-ದಂಡಿನ ಮಾರಮ್ಮ ಶಕ್ತಿ ದೇವತೆಗಳ ಸಿಡಿ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು. ಜ.27ರಿಂದ…

6 hours ago

ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ : ತನಿಖೆಗೆ ಎಸ್‌ಐಟಿ ರಚನೆ

ಬೆಂಗಳೂರು : ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಛಿಡೆಂಟ್ ಗ್ರೂಪ್ ಅಧ್ಯಕ್ಷ ಮತ್ತು ಸಂಸ್ಥಾಪಕ ಸಿ.ಜೆ.ರಾಯ್ ಅವರು ಶುಕ್ರವಾರ ತಮ್ಮ…

6 hours ago