ಅಂಕಣಗಳು

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ | ಪ್ರೇಕ್ಷಕ ಚಿತ್ರಮಂದಿರದಿಂದ ವಿಮುಖನಾಗುತ್ತಿದ್ದಾನೆಯೇ?

ಸಾಮಾಜಿಕ ತಾಣಗಳಲ್ಲಿ, ನವ ಮಾಧ್ಯಮಗಳಲ್ಲಿ ಅವರವರ ಭಾವಕ್ಕೆ ಅವರವರ ಅನುಭವಕ್ಕೆ ತಕ್ಕಂತೆ ಜಿಜ್ಞಾಸೆ ನಡೆದಿದೆ. ಚಿತ್ರಮಂದಿರಗಳಿಂದ ಪ್ರೇಕ್ಷಕ ದೂರವಾಗುತ್ತಿದ್ದಾನೆ; ಅವನನ್ನು ಮತ್ತೆ ಇತ್ತ ಮುಖ ಮಾಡುವಂತೆ ಮಾಡುವುದು ಹೇಗೆ ಎನ್ನುವ ಚರ್ಚೆ. ಇದು ಕನ್ನಡ ಚಿತ್ರಗಳಿಗೆ ಮಾತ್ರ ಸೀಮಿತ ಅಲ್ಲ. ಭಾರತದ ಬಹುತೇಖ ಭಾಷಾ ಚಿತ್ರರಂಗಗಳ ಮುಂದಿರುವ ಪ್ರಶ್ನೆ.

ಅತ್ಯಂತ ಕಡಿಮೆ ವೆಚ್ಚದಲ್ಲಿ ಮನರಂಜನೆ ಸಿಗುವ ಜಗ ಪ್ರದರ್ಶನ ಮಂದಿರ ಎನ್ನುವುದೀಗ ಹಳೆಯ ಮಾತು. ಚಿತ್ರಮಂದಿರಗಳಲ್ಲಿನ ಪ್ರವೇ ದರ ಗಗನಕ್ಕೇರಿದೆ. ಮಲ್ಟಿಪ್ಲೆಕ್ಸ್‌ಗಳ ಚಕ್ರಾಽಪತ್ಯಕ್ಕೆ ನಿಯಂತ್ರಣ ಇದ್ದಂತಿಲ್ಲ. ಅವುಗಳ ಗಮನ ವ್ಯಾಪಾರ ಮಾತ್ರ. ಆಯಾ ರಾಜ್ಯಭಾಷೆ, ಅಲ್ಲಿನ ಚಿತ್ರೋದ್ಯಮಗಳಿಗೆ ಆದ್ಯತೆ ನೀಡುವ ಯೋಚನೆ ಸುತಾರಾಂ ಅವುಗಳತ್ತ ಸುಳಿಯುವುದಿಲ್ಲ.

ನೆರೆಯ ತಮಿಳು ಮತ್ತು ತೆಲುಗು ಚಿತ್ರರಂಗಗಳಿಗೆ ಪರವಾಗಿಲ್ಲ. ಚೆನ್ನೈನ ಚಿತ್ರಮಂದಿರವೊಂದರಲ್ಲಿ ಪ್ರವೇಶ ದರ ೫೪ ರೂ. ಗಳಿಂದ ಆರಂಭವಾಗುತ್ತದೆ. ಅದು ೨೦೦ರೂ. ಗಡಿ ದಾಟುವುದಿಲ್ಲ. ಹೈದರಾಬಾದಿನಲ್ಲಿ ೫೦ ರೂ. ಗೆ ನೀವು ಸಿನಿಮಾ ಟಿಕೆಟ್ ಪಡೆಯಬಹುದು. ಗರಿಷ್ಟ ಅಲ್ಲಿ ಕೂಡ ೨೦೦ರೂ. ಮೀರುವುದಿಲ್ಲ. ಆದರೆ ಕರ್ನಾಟಕದ, ೧೦೦ ರೂ. ಗಳಿಗಿಂತ ಕಡಿಮೆ ಇಲ್ಲ. ಜನಪ್ರಿಯ ನಟರ ಹೊಸ ಚಿತ್ರಗಳ ಬಿಡುಗಡೆ ವೇಳೆ ಬೆಂಗಳೂರಿನಂತಹ ನಗರದಲ್ಲಿ ೧,೫೦೦ -೨,೦೦೦ ರೂ. ವರೆಗೆ ಪ್ರವೇಶದರ ಇರುತ್ತದೆ.

ನೆರೆಯ ರಾಜ್ಯಗಳಂತೆ, ಕರ್ನಾಟಕದಲ್ಲೂ ಗರಿಷ್ಟ ೨೦೦ ರೂ ಪ್ರವೇಶದರ ಮೀರುವಂತಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿತ್ತು. ಮಲ್ಟಿಪ್ಲೆಕ್ಸ್ ಅಸೋಸಿ ಯೇಶನ್ ಆ- ಇಂಡಿಯಾ ಇದರ ವಿರುದ್ಧ ನ್ಯಾಯಾಲಯಕ್ಕೆ ಹೋಗಿ ತಡೆಯಾe ತಂದಿದೆ. ನ್ಯಾಯಾಲಯ ಷರತ್ತುಬದ್ಧ ತಡೆಯಾe ನೀಡಿದೆ.

ಮಲ್ಟಿಪ್ಲೆಕ್ಸ್‌ಗಳು ೨೦೦ ರೂ. ಗಳಿಗಿಂತ ಹೆಚ್ಚು ಪ್ರವೇಶ ದರ ಸಂಗ್ರಹಿಸಬಹುದು; ಒಂದು ವೇಳೆ ಅಂತಿಮ ತೀರ್ಪು ಸರ್ಕಾರದ ಆದೇಶದಂತೆ ಆದರೆ, ಅಲ್ಲಿಯವರೆಗೆ ವಿಽಸಿದ ಹೆಚ್ಚಿನ ಮೊತ್ತವನ್ನು ಪ್ರೇಕ್ಷಕರಿಗೆ ಹಿಂದಿರುಗಿಸಬೇಕು. ಅದಕ್ಕಾಗಿ ಚಿತ್ರಮಂದಿರಕ್ಕೆ ಪ್ರವೇಶ ಪಡೆಯುವ ಎಲ್ಲರ ವಿವರಗಳನ್ನೂ ದಾಖಲಿಸಿ ಇಡಬೇಕು ಎನ್ನುವ ಷರತ್ತು ಇತ್ತು.

ಮಲ್ಟಿಪ್ಲೆಕ್ಸ್‌ಗಳ ಪ್ರವೇಶ ದರ ನಿಯಂತ್ರಣದ ಗರಿಷ್ಟಮಿತಿ ಮಾಡಲು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಒಪ್ಪುವ ಸಾಧ್ಯತೆ ಕಡಿಮೆ ಎನ್ನುವ ಚರ್ಚೆ ಉದ್ಯಮದಲ್ಲಿ ಅದಾಗಲೇ ಆರಂಭವಾಗಿದೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಮೂಲತಃ ಚಲನಚಿತ್ರ ಪ್ರದರ್ಶಕರಾಗಿದ್ದ ಶಿವಕುಮಾರ್ ಅವರ ಒಡೆತನದ ಮಲ್ಟಿಪ್ಲೆಕ್ಸ್‌ಗಳೂ ಇವೆ ಎನ್ನುವುದು ಈ ವಾದ ಮಾಡುವವರ ಅಂಬೋಣ.

ಚಿತ್ರಮಂದಿರಗಳ ಪ್ರವೇಶದರ ಮಾತ್ರವೇ ಪ್ರೇಕ್ಷಕರ ನಿರಾಕರಣಕ್ಕೆ ಕಾರಣವಾದರೆ, ಪರಭಾಷೆಯ ಕೆಲವು ಚಿತ್ರಗಳು ಇಲ್ಲಿ ಕೋಟಿಗಟ್ಟಲೆ ಗಳಿಸುವುದರ ಗುಟ್ಟೇನು? ಅದ್ದೂರಿ ನಿರ್ಮಾಣವೆಚ್ಚದ, ಭಾರೀ ಪ್ರಚಾರದ ಚಿತ್ರಗಳು ಗಳಿಕೆಯಲ್ಲಿ ಸೋಲುವುದೂ ಇದೆ. ಇತ್ತೀಚೆಗೆ ತೆರೆಕಂಡ ತೆಲುಗು ಚಿತ್ರವೊಂದರ ಕುರಿತಂತೆ ಈ ಮಾತಿದೆ.

ಕನ್ನಡದ ಸಂದರ್ಭವನ್ನೇ ತೆಗೆದುಕೊಳ್ಳೋಣ. ಇನ್ನೂ ಅರ್ಧ ವರ್ಷ ಆಗಿಲ್ಲ. ಅದಾಗಲೇ ೧೧೦ಕ್ಕೂ ಹೆಚ್ಚು ಚಿತ್ರಗಳು ತೆರೆಕಂಡಿವೆ. ಸರಾಸರಿ ವಾರಕ್ಕೆ ಐದರಂತೆ ಎನ್ನಿ. ಇವುಗಳಲ್ಲಿ ವರ್ಷಗಳ ಹಿಂದೆ ತಯಾರಾದವುಗಳೂ ಇದ್ದವು. ಇಂದು ತೆರೆಗೆ ಬರುತ್ತಿರುವ ‘ಅಭ್ಯಂಜನ’ ೨೦೧೯ರಲ್ಲಿ ತಯಾರಾದ ಚಿತ್ರ! ಹೆಚ್ಚಿನ ಚಿತ್ರಗಳ ಬಿಡುಗಡೆಯ ವೇಳೆ ಸಾಕಷ್ಟು ಪ್ರಚಾರವಿರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಮೂಲಕ ಎಲ್ಲರನ್ನೂ ತಲುಪಿಬಿಡುತ್ತೇವೆ ಎನ್ನುವ ನಂಬಿಕೆ ನಿರ್ಮಾಪಕರಿಗೆ. ಅದರಲ್ಲೂ ಚಿತ್ರದ ಹಾಡು, ಟೀಸರ್, ಟ್ರೇಲರ್‌ಗಳನ್ನು ಮಿಲಿಯಗಟ್ಟಲೆ ಮಂದಿ ವೀಕ್ಷಿಸಿದರೆ, ಅದನ್ನೇ ಬಹು ದೊಡ್ಡ ಪ್ರಚಾರ ಮಾಡುವುದಿದೆ. ಆದರೆ ಅದನ್ನು ನೋಡಿದವರಲ್ಲಿ ಎಷ್ಟು ಮಂದಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಾರೆ?

ಚುನಾವಣೆಗಳ ಸಂದರ್ಭದಲ್ಲಿ ರಾಜಕೀಯ ನೇತಾರರು ಪಕ್ಷದ ಪರವಾಗಿ ಪ್ರಚಾರ ಭಾಷಣ ಮಾಡಲು ಬಂದಾಗ ಸೇರುವ ಜನಸಂದಣಿ ಬಹುದೊಡ್ಡದಿದ್ದರೂ, ಅವರಲ್ಲಿ ಎಲ್ಲರೂ ಆ ಪಕ್ಷಕ್ಕೆ ಮತ ಹಾಕುವ ಮಂದಿ ಅಲ್ಲ. ಅಲ್ಲಿ ಕೆಲವರನ್ನು ಪಕ್ಷದ ಕಾರ್ಯಕರ್ತರೇ ಕರೆತರುವುದೂ ಇದೆ. ಇತ್ತೀಚೆಗೆ ಅಂತಹ ಪ್ರವೃತ್ತಿ ಚಿತ್ರರಂಗದಲ್ಲೂ ತೊಡಗಿದೆ ಎನ್ನುವ ಮಾತೂ ಕೇಳಿ ಬರುತ್ತಿದೆ. ಅದ್ದೂರಿ ಚಿತ್ರಗಳ ನಿರ್ಮಾಪಕರು ಇದಕ್ಕಾಗಿಯೇ ಸಾಕಷ್ಟು ವೆಚ್ಚ ಮಾಡುತ್ತಾರೆ. ಮಾತ್ರವಲ, ತಮ್ಮ ಚಿತ್ರ ರೂ. ಕೋಟಿಗಟ್ಟಲೆ ಮೊದಲ ವಾರಾಂತ್ಯದ ಗಳಿಸಿದೆ ಎನ್ನುವ ಪ್ರಚಾರವನ್ನೂ ಮಾಡಿಸುತ್ತಾರೆ!

ಇಂತಹ ಬೆಳವಣಿಗೆ ಕನ್ನಡದ ಸಾಧಾರಣ ವೆಚ್ಚದ ಚಿತ್ರಗಳ ಪಾಲಿಗೆ ಕುಠಾರಪ್ರಾಯವಾಗಿದೆ. ಅದ್ದೂರಿ ವೆಚ್ಚದ ಚಿತ್ರಗಳ ನಿರ್ಮಾಪಕರು ಪ್ರಚಾರಕ್ಕೆ ವೆಚ್ಚ ಮಾಡುವ ಮೊತ್ತ, ಇಂತಹ ಚಿತ್ರಗಳ ನಿರ್ಮಾಣ ವೆಚ್ಚಕ್ಕಿಂತ ಹೆಚ್ಚು. ಕನ್ನಡ ಚಿತ್ರರಂಗವನ್ನು ಎಲ್ಲರೂ ತಿರುಗಿನೋಡುವಂತೆ ಮಾಡಿದ ಕೆಜಿಎ-, ಕಾಂತಾರಗಳಂತಹ ಚಿತ್ರಗಳು ಎರಡು ಮೂರು ವರ್ಷಗಳಿಗೊಮ್ಮೆ ಬರು ವುದೇ ಹೊರತು, ವರ್ಷದಲ್ಲಿ ಹಲವು ಬರುವುದಿಲ್ಲ. ಎರಡು ಕೆಜಿಎ-ಗಳ ನಡುವೆ, ಎರಡು ಕಾಂತಾರಗಳ ನಡುವೆ ಇದ್ದ ಅಂತರವೇ ಇದಕ್ಕೆ ಸಾಕ್ಷಿ.

ಸಾಮಾನ್ಯವಾಗಿ ಇಂತಹ ಚಿತ್ರಗಳ ಬಿಡುಗಡೆಯ ನಂತರ ಕೆಲವು ವಾರ ತೆರೆಗೆ ಬರುವ ಕನ್ನಡ ಚಿತ್ರಗಳು ಗಪೆಟ್ಟಿಗೆಯಲ್ಲಿ ಗೆಲ್ಲುವುದು ಅಪರೂಪ. ಪರಭಾಷೆಯ ಜನಪ್ರಿಯ ನಟರ ಅದ್ದೂರಿ ಚಿತ್ರಗಳು ತೆರೆಗೆ ಬಂದಾಗಲೂ ಇದೇ ಪುನರಾವರ್ತನೆ ಆಗುತ್ತದೆ. ಇದು ಅದ್ದೂರಿ ಚಿತ್ರಗಳಿಗೆ ಮಾತ್ರವಲ್ಲ, ಸಿನಿಮಾ ಮಾಧ್ಯಮದ ಪ್ರಾಥಮಿಕ ತಿಳಿವಳಿಕೆಯೂ ಇಲ್ಲದೆ ಕಡಿಮೆ ವೆಚ್ಚದಲ್ಲಿ ತಯಾರಾದ ಚಿತ್ರಗಳಿಗೂ ಅನ್ವಯವಾಗುತ್ತದೆ. ಕನ್ನಡದಲ್ಲಿ ಪ್ರತಿವರ್ಷ ತಯಾರಾಗುವ ಚಿತ್ರಗಳಲ್ಲಿ ಹೆಚ್ಚಿನವು ಇಂತಹವು.

ಕಲಾತ್ಮಕ ಚಿತ್ರಗಳ ಹೆಸರಿನಲ್ಲಿ ಚಿತ್ರ ನಿರ್ಮಿಸುವ ಕೆಲವು ನಿರ್ಮಾಪಕರು ಅವುಗಳನ್ನು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ, ಪ್ರಶಸ್ತಿಗೆ ಕಳುಹಿಸಿಕೊಡುವುದಿದೆ. ವಿಶ್ವಾದ್ಯಂತ ಇಂತಹ ನಾಮ್ ಕೆ ವಾಸ್ತೆ ಚಿತ್ರೋತ್ಸವಗಳು, ಪ್ರಶಸ್ತಿಗಳು ಸಾಕಷ್ಟು ಹುಟ್ಟಿಕೊಂಡಿವೆ. ಭಾರತದ ಸಾಕಷ್ಟಿವೆ. ಅವು ವಿಧಿಸುವ ಶುಲ್ಕ ನೀಡಬೇಕು ಅಷ್ಟೇ. ಫಾಲ್ಕೆ ಹೆಸರಿನಲ್ಲಿ ಪ್ರಶಸ್ತಿ ನೀಡುವ ಎಷ್ಟು ಸಂಸ್ಥೆಗಳಿವೆ!

ಸಹಾಯಧನವನ್ನು ದೃಷ್ಟಿಯಲ್ಲಿಟ್ಟುಕೊಂಡು ಚಿತ್ರಗಳನ್ನು ನಿರ್ಮಿಸುವ ಮಂದಿ ಇದ್ದಾರೆ. ಆ ವಲಯ ಕೂಡ ಸಾಕಷ್ಟು ದೊಡ್ಡದಾಗಿದೆ ಎನ್ನುವ ಮಾತಿದೆ. ಸಿನಿಮಾ ಡಿಜಿಟಲ್‌ಗೆ ಹೊರಳಿದ ನಂತರ, ಇಂತಹ ಚಿತ್ರಗಳನ್ನು ಕಡಿಮೆ ಮೊತ್ತ ಹೂಡಿ ಸುತ್ತಿ, ಸಹಾಯಧನ ಪಡೆಯುತ್ತಿದ್ದ ಮಂದಿಗೆ ಈ ದಿನಗಳಲ್ಲಿ ಅದು ಕಷ್ಟಸಾಧ್ಯ ಆಗತೊಡಗಿದೆ. ಚಿತ್ರವೊಂದಕ್ಕೆ ಪ್ರಮಾಣಪತ್ರ ಪಡೆಯಲು ತೆರಬೇಕಾದ ಶುಲ್ಕ ಮತ್ತು ಅದರ ಸಿದ್ಧತೆಗೆ ಸುಮಾರು ಒಂದೂವರೆ ಲಕ್ಷ ರೂ ವೆಚ್ಚವಾಗುತ್ತದೆ. ಕೊರೋನಾ ಪೂರ್ವದ ದಿನಗಳಲ್ಲಿ ನಾಲ್ಕು- ಐದು ಲಕ್ಷ ರೂ. ಗಳಿಗೆ ಚಿತ್ರ ನಿರ್ಮಿಸಿ, ಸಹಾಯಧನ ಪಡೆದ ಪ್ರಸಂಗವೂ ಇತ್ತು ಎನ್ನುತ್ತಾರೆ ಅದನ್ನು ಪಡೆದವರು!

ಇತ್ತೀಚೆಗೆ ಚಿತ್ರನಿರ್ಮಾಪಕರ ವಾಟ್ಸಾಪ್ ಗುಂಪುಗಳಲ್ಲಿ ಬಹಳ ಚರ್ಚೆಯಾಗುತ್ತಿರುವ ವಿಷಯ ಎಂದರೆ ಕಳೆದ ಕೆಲವು ವರ್ಷಗಳ ಸಹಾಯಧನ ಬಾಕಿಯದು. ೨೦೧೮ರ ನಂತರ ಕೆಲವು ವರ್ಷ ಸಹಾಯಧನ ಮತ್ತು ಪ್ರಶಸ್ತಿಗಳ ಆಯ್ಕೆ ಆಗಿರಲಿಲ್ಲ.

೨೦೨೪ರ ಜನವರಿಯಲ್ಲಿ ಸರ್ಕಾರ ೨೦೧೯, ೨೦೨೦, ೨೦೨೧ರ ಸಾಲಿನ ಸಹಾಯಧನ ಮತ್ತು ಪ್ರಶಸ್ತಿ ಆಯ್ಕೆ ಸಮಿತಿಗಳನ್ನು ನೇಮಿಸಿತು. ಅವು ಕಳೆದ ವರ್ಷ ತಮ್ಮ ಆಯ್ಕೆಗಳ ಶಿ-ರಸನ್ನು ಮಾಡಿವೆ. ಇನ್ನೀಗ ೨೦೨೨, ೨೦೨೩, ೨೦೨೪ ಮತ್ತು ೨೦೨೫ರ ಸಾಲಿಗೆ ಈ ಆಯ್ಕೆಗಳಾಗಬೇಕು. ಅದಕ್ಕಾಗಿ ಸರ್ಕಾರ ಅರ್ಜಿಗಳನ್ನು ಕರೆಯಬೇಕು, ಆಯ್ಕೆ ಸಮಿತಿಗಳ ರಚನೆ ಆಗಬೇಕು. ಆದರೆ ಪ್ರಸ್ತುತ ಬದಲಾದ ಸಂದರ್ಭದಲ್ಲಿ ಇವುಗಳತ್ತ ಸರ್ಕಾರ ಯಾವಾಗ ಗಮನ ಹರಿಸುತ್ತದೆ ನೋಡಬೇಕು.

ವಿಷಯಾಂತರವಾಯಿತು. ಜನಪ್ರಿಯ ನಟರ ಚಿತ್ರಗಳು ಬಾರದೆ ಇರುವುದರಿಂದ ಚಿತ್ರಮಂದಿರ ಮುಚ್ಚುವ ಸ್ಥಿತಿ ಬಂದಿದೆ ಎನ್ನುವುದು ಪ್ರದರ್ಶಕರ ಆರೋಪ. ಹಾಗಂತ ಜನಪ್ರಿಯ ನಟರ ಚಿತ್ರಗಳೆಲ್ಲ ಗೆಲ್ಲುತ್ತವೆ ಎಂದೇನಿಲ್ಲ. ಜನಪ್ರಿಯ ನಟರಿರಲಿ, ಹೊಸಬರಿರಲಿ ಪ್ರೇಕ್ಷಕನಿಗೆ ಚಿತ್ರ ಇಷ್ಟವಾದರೆ ಅದು ಗೆಲ್ಲುತ್ತದೆ. ಕಳೆದ ವರ್ಷ ತೆರೆಕಂಡ ಸು -ಫ್ರಂ ಸೋ, ಈ ವರ್ಷದ ಲವ್ ಮಾಕ್ಟೇಲ್ ೩ಯಂತಹ ಚಿತ್ರಗಳ ಗೆಲುವು ಇದಕ್ಕೆ ಪುರಾವೆ. ಕಂಟೆಂಟ್ ಈಸ್ ದ ಕಿಂಗ್ ಎನ್ನುವುದಾಗಿ ಉದ್ಯಮದ ಮಂದಿ ಈಗ ಹೇಳತೊಡಗಿದ್ದಾರೆ. ಜೊತೆಗೆ ಅದನ್ನು ಹೇಳುವ ರೀತಿಯೂ ಮುಖ್ಯ ಎನ್ನಿ.

ಕಿರುತೆರೆ ನಡುಮನೆಗೆ ಬರುತ್ತಲೇ ದೊಡ್ಡ ಸಂಖ್ಯೆಯ ಮಹಿಳಾ ಪ್ರೇಕ್ಷಕರು ದೈನಂದಿನ ಸರಣಿಯತ್ತ ವಾಲಿದರು. ನೇರ ಮನೆಗೆ ಸಂಪರ್ಕ, ಒಟಿಟಿಗಳು ಕೊರೋನಾ ದಿನಗಳಲ್ಲಿ ದೇಶ-ವಿದೇಶಗಳಲ್ಲಿ ತಯಾರಾಗುತ್ತಿದ್ದ ಚಿತ್ರಗಳನ್ನು ಪ್ರೇಕ್ಷಕರಿಗೆ ಮನೆಯ ತೋರಿಸಿದವು. ಅವು ಕನ್ನಡ ಚಿತ್ರಗಳ ಜೊತೆ ಇತರ ಭಾಷಾ ಚಿತ್ರಗಳನ್ನು ಹೋಲಿಸಲು ದಾರಿಮಾಡಿಕೊಟ್ಟವು. ಪರಭಾಷೆಯ ಚಿತ್ರಗಳ ಕನ್ನಡ ಡಬ್ಬಿಂಗ್ ಅವತರಣಿಕೆಗಳು ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಹಾನಿ ಮಾಡುತ್ತವೆ. ಒಟಿಟಿಗಳು ಕನ್ನಡ ಚಿತ್ರಗಳನ್ನು ಕೊಳ್ಳದೆ ಇರಲು ಇರುವ ಮುಖ್ಯ ಕಾರಣಗಳಲ್ಲಿ ಇದೂ ಒಂದು. ಇತರ ಭಾರತೀಯ ಭಾಷೆಗಳ, ವಿಶೇಷವಾಗಿ ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳ ಹೊಸ ಮತ್ತು ಹಳೆಯ ಚಿತ್ರಗಳ ಡಬ್ಬಿಂಗ್ ಅವತರಣಿಕೆಗಳು ಈಗ ಅಲ್ಲಿವೆ. ಕುಟುಂಬ ಸಮೇತ ನೋಡುವ ಕಥಾವಸ್ತುಗಳುಳ್ಳ ಚಿತ್ರಗಳು ಈಗ ಕಡಿಮೆಯಾಗಿವೆ. ಈ ವರ್ಷ ತೆರೆಕಂಡ ಚಿತ್ರಗಳಲ್ಲಿ ಸುಮಾರು ೨೦ ‘ವಯಸ್ಕರಿಗೆ’ ಮಾತ್ರಇರುವ ‘ಎ’ ಪ್ರಮಾಣ ಪತ್ರ ಪಡೆದವು. ೭೦ ಚಿತ್ರಗಳು ಯುಎ ೧೬+ ಮತ್ತು ಯುಎ ೧೩+ ಪ್ರಮಾಣಪತ್ರದವು. ಅಂದರೆ ಕುಟುಂಬ ಸಮೇತ ನೋಡುವ ಚಿತ್ರಗಳು ಇಲ್ಲ, ಇಲ್ಲವೇ ಕಡಿಮೆ ಎಂದರ್ಥ. ಹಿಂದೆ ಸೆಲ್ಯುಲಾಯ್ಡ ದಿನಗಳಲ್ಲಿ ರೀಲುಗಳು ಪ್ರೇಕ್ಷಕನನ್ನು ಚಿತ್ರಮಂದಿರಕ್ಕೆ ಕರೆತಂದರೆ, ಡಿಜಿಟಲ್ ದಿನಗಳ ರೀಲ್‌ಗಳು ಎಲ್ಲ ವಯೋಮಾನದ ಬಹುತೇಕ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಹೊರಳದಂತೆ ಮಾಡುತ್ತಿವೆ! ಅದನ್ನು ತಡೆಯುವುದು ಹೇಗೆ? ಮಿಲಿಯನ್ ಡಾಲರ್ ಪ್ರಶ್ನೆ ಇದು.

ಆಂದೋಲನ ಡೆಸ್ಕ್

Recent Posts

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜೂನ್‌ 12 ಶುಕ್ರವಾರ

3 hours ago

ಮಳವಳ್ಳಿ | ಚಿರತೆ ಪ್ರತ್ಯಕ್ಷ ; ಆತಂಕ

ಮಳವಳ್ಳಿ: ತಾಲ್ಲೂಕಿನ ತಳಗವಾದಿ ಗ್ರಾಮಕ್ಕೆ ಹೊಂದುಕೊಂಡಂತೆ ಚಿರತೆಯೊಂದು ಕಾಣಿಸಿಕೊಂಡಿದ್ದು, ಜನರು ಆತಂಕಗೊಂಡಿದ್ದಾರೆ. ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಮೀಪವೇ…

13 hours ago

ಎಚ್.ಸಿ.ಮಹದೇವಪ್ಪಗೆ ಸಚಿವ ಸ್ಥಾನ ನೀಡಲು ಆಗ್ರಹ

ಬೆಂಗಳೂರು : ಕರ್ನಾಟಕದ ಪ್ರಭಾವಿ ದಲಿತ ಸಮುದಾಯದ ನಾಯಕ ಹಾಗೂ ಮಾಜಿ ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ ಅವರಿಗೆ ಮುಖ್ಯಮಂತ್ರಿ ಡಿ.ಕೆ…

17 hours ago

ಮಲ್ಲಿಕಾರ್ಜುನ್‌ ಖರ್ಗೆ, ಎಂ.ನಾಗರಾಜ್‌ ಸಹಿತ ನಾಲ್ವರು ರಾಜ್ಯಸಭೆಗೆ ಅವಿರೋಧ ಆಯ್ಕೆ

ಬೆಂಗಳೂರು : ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಧೈವಾರ್ಷಿಕ ಚುನಾವಣೆಯಲ್ಲಿ ನಿರೀಕ್ಷೆಯಂತೆ ನಾಲ್ವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳಾದ ಎಂ.ಮಲ್ಲಿಕಾರ್ಜುನ…

18 hours ago

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ 11ನೇ ನೀತಿ ಆಯೋಗದ ಸಭೆ

ಕರ್ನಾಟಕ ಸಿಎಂ ಡಿಕೆಶಿ ಸೇರಿ ಹಲವು ರಾಜ್ಯಗಳ ಸಿಎಂಗಳು ಭಾಗಿ ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ರಾಷ್ಟ್ರ…

18 hours ago

ಕಾಂಗ್ರೆಸ್‌ ಶಾಸಕ ಷಡಕ್ಷರಿ ಆರೋಗ್ಯ ಸ್ಥಿತಿ ಗಂಭೀರ

ನವದೆಹಲಿ: ತಿಪಟೂರು ಕಾಂಗ್ರೆಸ್‌ ಶಾಸಕ ಕೆ.ಷಡಕ್ಷರಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಚಿವ ಸ್ಥಾನಕ್ಕಾಗಿ ಪಕ್ಷದ…

22 hours ago