ಬಹಳ ಪ್ರಸಿದ್ಧ ಶ್ರೀಮಂತರೊಬ್ಬರು ತಮ್ಮೆಲ್ಲಾ ಲಕ್ಷ ಲಕ್ಷ ಹಣವನ್ನು ತಮ್ಮ ಹೆಂಡತಿಯ ಕೈಯಲ್ಲಿಟ್ಟು ತೀರಿಕೊಂಡರು. ೬೦ ವರ್ಷ ವಯಸ್ಸಿನ ಆಕೆ ಎಲ್ಲಾ ದುಡ್ಡನ್ನು ಬ್ಯಾಂಕಿನಲ್ಲಿ ಠೇವಣಿ ಮಾಡಿ ತಮ್ಮ ಹಿರಿಯ ಮಗನನ್ನು ನಾಮಿನಿ ಮಾಡಿ ನಿಶ್ಚಿಂತರಾದರು.
ಅವರಿಗೆ ಆರು ಜನ ಮಕ್ಕಳು. ಎಲ್ಲರ ಬಗ್ಗೆಯೂ ಒಂದೇ ಪ್ರೀತಿ ಒಂದೇ ಜವಾಬ್ದಾರಿ. ಎಲ್ಲ ಮಕ್ಕಳಿಗೂ ಆ ದುಡ್ಡು ಸಮನಾಗಿ ಬರಬೇಕು ಎನ್ನುವ ಉದ್ದೇಶ ಅವರಿಗಿತ್ತು. ಆಗ ಯಾರಾದರೂ ಒಬ್ಬರನ್ನು ಮಾತ್ರ ನಾಮಿನಿ ಮಾಡಲು ಸಾಧ್ಯವಿತ್ತು. (ಈಗ ಇಬ್ಬರನ್ನು ನಾಮಿನಿ ಮಾಡುವ ಅವಕಾಶ ಇದೆ) ಹಾಗಾಗಿ ರೂಢಿಗತವಾಗಿ ಮೊದಲ ಮಗನನ್ನು ಮಾಡಿದ್ದರು.
ವಯಸ್ಸಿಗೆ ಅನುಗುಣವಾಗಿ ಆಕೆ ಹಾಸಿಗೆ ಹಿಡಿದರು, ತೀರಿಕೊಂಡರು. ನಾಮಿನಿ ಎಂದು ದಾಖಲೆಗಳಲ್ಲಿ ನಮೂದಾಗಿದ್ದ ಹಿರಿಯ ಮಗ ಬ್ಯಾಂಕಿಗೆ ಹೋದರು, ಮರಣ ನೋಂದಾವಣೆ ಪತ್ರ ನೀಡಿದರು ದುಡ್ಡು ಪಡೆದು ಎಲ್ಲವನ್ನೂ ತಮ್ಮದಾಗಿಸಿಕೊಂಡರು. ಮತ್ತ್ಯಾವ ವಾರಸುದಾರರಿಗೂ ಕೊಡಲಿಲ್ಲ. ಅವರುಗಳು ಕೇಳಿದರೆ ತಾಯಿ ತನ್ನನ್ನು ಮಾತ್ರ ನಾಮಿನಿ ಮಾಡಿದ್ದರಿಂದ ಅದು ತನಗೇ ಸೇರಬೇಕಾದ ಹಣ ಎನ್ನುವ ವಾದ ಮುಂದಿಟ್ಟರು ಕೋರ್ಟಿನಲ್ಲೂ ಕೂಡ. ವರ್ಷಗಳ ಕಾಲ ಆ ಪ್ರಕರಣ ಬಗೆಹರಿಯದೆ ಉಳಿದಿತ್ತು.
ಬ್ಯಾಂಕುಗಳಲ್ಲಿ ಖಾತೆ ತೆರೆದಾಗ, ಠೇವಣಿ ಇಟ್ಟಾಗ, ಇನ್ಶೂರೆನ್ಸ್ ಪಾಲಿಸಿಗಳನ್ನು ಮಾಡಿಸಿದಾಗ, ಷೇರು ಖರೀದಿ ವ್ಯವಹಾರ ಮಾಡುವಾಗ ಸಂಬಂಧಪಟ್ಟ ಕಾನೂನುಗಳಲ್ಲಿ ಹೇಳಿರುವಂತೆ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೀಡುವ ನಿಯಮಗಳನುಸಾರ ನಾಮಿನಿ ಎಂದು ಒಬ್ಬ ಅಥವಾ ಇಬ್ಬರು ವ್ಯಕ್ತಿಗಳ ಹೆಸರನ್ನು ಅವರ ವಿವರಗಳ ಸಹಿತ ದಾಖಲಿಸಬೇಕಿರುತ್ತದೆ. ಖಾತೆದಾರ ಮರಣ ಹೊಂದಿದ ನಂತರ ನಾಮಿನಿಯು ಮರಣ ಪ್ರಮಾಣ ಪತ್ರವನ್ನು ಕೊಟ್ಟು ಸಂಸ್ಥೆಗಳಿಂದ ಖಾತೆದಾರರ ಆ ಹಣವನ್ನು ಪಡೆಯಬಹುದು.
ಇತ್ತೀಚೆಗೆ ಸಂಸ್ಥೆಗಳು ವಂಶವೃಕ್ಷ ದಾಖಲೆ ಹಾಗೂ ಉಳಿದ ವಾರಸುದಾರರಿಂದ ಒಪ್ಪಿಗೆ ಪತ್ರ ((No objection certificate) ಪಡೆದು ಕೊಂಡು ಹಣವನ್ನು ನಾಮಿನಿಗಳಿಗೆ ನೀಡುತ್ತಿವೆ. ಕಾನೂನಿನ ಪ್ರಕಾರ ನಾಮಿನಿ ಎನ್ನುವುದು ಆಡಳಿತಾತ್ಮಕ ಅನುಕೂಲಕ್ಕಾಗಿ ಇರುವ ಒಂದು ಮಧ್ಯಸ್ಥಿಕೆದಾರ ಪದವಿ ಅಷ್ಟೇ. ನಾಮಿನಿಯ ಜವಾಬ್ದಾರಿಯೆಂದರೆ ಬಂದ ಹಣವನ್ನು ಇತರೆ ವಾರಸುದಾರರಿಗೆ ಕಾನೂನು ಹೇಳಿರುವ ಅನುಪಾತದಲ್ಲಿ ಹಂಚಿಕೆ ಮಾಡುವುದು.
ಉಯಿಲು (WILL) ಇರುವಂತಹ ಸಂದರ್ಭದಲ್ಲಿ ಅದರಂತೆ ಪಾಲುಗಾರಿಕೆ ಮಾಡುವ ಜವಾಬ್ದಾರಿ ನಾಮಿನಿಯ ಮೇಲಿರುತ್ತದೆ. ಕಮಲಾಕ್ಷಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದರು. ಮೊದಲಿನಿಂದ ಕೊನೆಯವರೆಗೂ ಗಂಡನ ನವರಂಗಿ ಸ್ವಭಾವದಿಂದ ನೊಂದು ಹೋಗಿದ್ದರು. ಕಷ್ಟಪಟ್ಟುಗಳಿಸಿದ ಹಣದಲ್ಲಿ ಬ್ಯಾಂಕ್ ಠೇವಣಿ ಇಟ್ಟು, ಒಂದಷ್ಟು ಇನ್ಶೂರೆನ್ಸ್ ಪಾಲಿಸಿ ಮಾಡಿಸಿದ್ದರು ಮತ್ತು ಸಾಕಷ್ಟು ಕಂಪೆನಿಗಳ ಷೇರುಗಳನ್ನೂ ಖರೀದಿಸಿದ್ದರು. ಇದ್ದ ಒಬ್ಬಳೇ ಮಗಳನ್ನು ಎಲ್ಲಕ್ಕೂ ನಾಮಿನಿ ಮಾಡಿದ್ದರು.
ವಯೋಸಹಜವಾಗಿ ಆಕೆ ತೀರಿಕೊಂಡಾಗ ಧುತ್ತೆಂದು ಎದುರುಬಂದ ಆಕೆಯ ಗಂಡ ತನ್ನ ಪಾಲಿಗಾಗಿ ಒತ್ತಾಯಪಡಿಸಿದ, ಜಗಳವಾಡಿದ. ಆಕೆ ನಾಮಿನಿ ಮಾಡಿದ್ದರೂ ಉಯಿಲು ಮಾಡದೆಯೇ ತೀರಿಕೊಂಡಿದ್ದರಿಂದ ಕಾನೂನಿನಪ್ರಕಾರ ಎಲ್ಲಾ ಹಣದಲ್ಲೂ, ಕಷ್ಟಕ್ಕಾಗದ, ಸುಖ ಸಂತೋಷಕ್ಕೊದಗದ ಆಕೆಯ ಗಂಡನಿಗೂ ಶೇ.೫೦ರಷ್ಟು ಭಾಗ ಸಂದಾಯವಾಯ್ತು.
ಇಂತಹ ಹಲವು ಪ್ರಕರಣದಲ್ಲಿ ನಾಮಿನಿ ಮಾಡಬೇಕೆಂಬ ಅರಿವು ಮಹಿಳೆಯರಿಗೆ ಇತ್ತು ಎಂದು ಸಮಾಧಾನ ಪಟ್ಟುಕೊಳ್ಳಬೇಕೋ ಅಥವಾ ಸರಿಯಾದ ಮಾಹಿತಿ ಇರದ ಕಾರಣ ಅವರಿಚ್ಛೆಯಂತೆ ಅವರ ಹಣಕಾಸು ವಿಲೇವಾರಿ ಯಾಗದೆ ಮುಂದಿನವರ ಸಂಬಂಧಗಳಲ್ಲಿ ಬಿರುಕು ಮೂಡಿತು ಎಂದು ಪರಿತಪಿಸಬೇಕೋ! ನಾಮಿನಿ ಎಂದರೆ ಏಕೈಕ ವಾರಸು ದಾರ ಅಂತಲ್ಲ ಹಾಗೆಯೇ ವಿಲ್ ಅಥವಾ ಮರಣ ಪತ್ರ (ಉಯಿಲು ) ಮಾಡದೇ ತೀರಿಕೊಂಡರೆ ಸ್ಥಿರಾಸ್ತಿ ಮತ್ತು ಚರಾಸ್ತಿ ನಮ್ಮಿಚ್ಛೆ ಯಂತೆ ಭಾಗ ವಾಗುವುದಿಲ್ಲ. ಮಾಹಿತಿ ಹೊಂದುವುದು ಎಷ್ಟು ಅವಶ್ಯವೋ ಸರಿಯಾದ ಮೂಲದಿಂದ ಸರಿ ಯಾದ ಮಾಹಿತಿ ಹೊಂದುವುದೂ ಅಷ್ಟೇ ಅವಶ್ಯ.
ಅಂಜಲಿ ರಾಮಣ್ಣ
ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳ ವಕೀಲರು
ಬೆಂಗಳೂರು : ಭಾರತವನ್ನು ಆತ್ಮನಿರ್ಭರ ರಾಷ್ಟ್ರವನ್ನಾಗಿಸುವ ದಿಶೆಯಲ್ಲಿ ಕರ್ನಾಟಕದಂತಹ ಸ್ವಾವಲಂಬಿ ರಾಜ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ…
ಹನೂರು : ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ದಾಳಿ…
ಬೆಂಗಳೂರು : ರಾಜ್ಯದ ಎಲ್ಲಾ ರೀತಿಯ ಸಿವಿಲ್ ಹುದ್ದೆಗಳಿಗೆ 2027ರ ಡಿಸೆಂಬರ್ 31ರವರೆಗೆ ಹೊರಡಿಸುವ ನೇಮಕಾತಿ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲಾ…
ಮಂಡ್ಯ : ಸಾರ್ವಜನಿಕರಿಗೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ವು ಜಿಲ್ಲೆಯಲ್ಲಿ…
ಮಂಡ್ಯ : ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಯದ್ದು ಬರಿ ಡಬಲ್ ಸ್ಟ್ಯಾಂಡರ್ಡ್ ನಾಟಕವಾಗಿದೆ. ಜಾತ್ಯತೀತ ಜನತಾದಳವನ್ನು ಓಡಿಸುವುದಕ್ಕೆ ಅವರಿಗೆ ತಾಕತ್ತಿದೆಯೇ?.…
ನಾಗಮಂಗಲ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ ಪ್ರಕರಣ ಮಂಡ್ಯ : ನಾಗಮಂಗಲ ತಾಲ್ಲೂಕಿನ ನಕಲಿ ದಾಖಲೆ ಸೃಷ್ಟಿ…