ಮೈಸೂರಿನ ಸಮತಾ ಅಧ್ಯಯನ ಕೇಂದ್ರ ಆಯೋಜಿಸಿದ್ದ ರಾಜ್ಯಮಟ್ಟದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕಥೆ.

ಎಡೆಯೂರು ಪಲ್ಲವಿ

ಎಂಟ್ನೆ ಮೈಲಿಯಿಂದ ಆಟೋದಲ್ಲಿ ಮಲ್ಲಸಂದ್ರ ಆಸ್ಪತ್ರೆ ತಲುಪೋ ಹೊತ್ತಿಗಾಗ್ಲೆ ಸೂರ್ಯನ ಹರಿತ ಪ್ರಭೆಯು ಭೂಮಿ ಮುಟ್ಟಿತ್ತು. ‘ಅಂಕಲ್ ಎಲ್ಡೇ ನಿಮ್ಷ. ರಿಪೋರ್ಟ್ ತಗಂಡ್ ಬತ್ತೀನಿರಿ’ ಎಂದ್ಹೇಳಿ ತನ್ನಕ್ಕ ಭಾನುಳನ್ನು ಕರೆದುಕೊಂಡು ಸರ್ಕಾರಿ ಆಸ್ಪತ್ರೆಯ ಒಳ ಹೋದವ್ಳು ಹತ್ತು ಹದಿನೈದು ನಿಮಿಷಗಳಾದ್ರೂ ಹಿಂತಿರುಗಿರ್ಲಿಲ್ಲ. ಇತ್ತ ಆಟೋದವ್ನು ಇದೇ ಸಮಯಾನ ನೆಪವಾಗಿಸ್ಕೊಂಡು ಒಂದಿಷ್ಟು ಹೆಚ್ಚಿಗೆ ಕೇಳ್ಬೊದೆಂದು ರೋಡು ದಾಟಿಬಂದು ಗೇಟು ಮುಟ್ಟಿದ. ಕೋವಿಡ್-೧೯ರ ಹಿನ್ನೆಲೆಯಲ್ಲಿ ಸರ್ಕಾರವು ಹಲ್ವು ರಿಯಾಯ್ತೀಲಿ ಜನ್ರಿಗೆ ಓಡಾಡೋಕೆ ಅನುಮತಿ ನೀಡಿತ್ತು. ಆದ್ರೆ ಸದ್ಯಕ್ಕೆ ಆಸ್ಪತ್ರೇಲಿ ರೋಗಿಗಳ್ನ ಬಿಟ್ರೆ, ಬೇರಾರ್ನು ಒಳಕ್ಕೆ ಬಿಡ್ತಿರಲಿಲ್ಲ. ಆಚೆಯೇ ನಿಂತು ಕೀರ್ತಿ ತನ್ನ ಬಲ ಕಿವಿಗೆ ಫೋನಂಟಿಸಿ ಮಾತಾಡುತ್ತಿದ್ದಾಗ, ‘ಇನ್ನು ಎಷ್ಟೊತ್ತಮ್ಮ’ ಎಂದ ಆಟೋದವ. ಮಾಸ್ಕ್ ಹಿಂದಿನ ಆಟೋದೋನ ಮುಖ ಪರಿಚಯಕ್ಕೆ ಅವ್ಳು ತಡಕಾಡ್ವಾಗ ಅವ್ನೇ ‘ಟೈಂ ಆಯ್ತು. ಮೀಟರ್ ಓಡ್ತಿದೆ’ ಎಂದ.

‘ಬೇಗ ಕೊಡೋಕೆ ಹೇಳಿದಿನಿ. ನಾನು ಅದ್ಕೆ ಕಾಯ್ತಿದೀನಿ ಸ್ವಲ್ಪ ಇರಿ. ಇನ್ನೊಂದ್ ಸಹಿ ಆಗ್ಬೇಕಂತೆ’ ಎಂದು ಪರಿಸ್ಥಿತಿಯನ್ನು ತಿಳಿಗೊಳಿಸಲು ಮಾಸ್ಕ್ ತಗ್ದು ಮುಗುಳ್ನಕ್ಕಳು. ಅಕ್ಕನ ಕೋವಿಡ್ ರಿಪೋರ್ಟ್ ನೆಗೆಟೀವ್ ಬಂದೈತಂತ ಎರಡು ನಿಮ್ಷದ ಹಿಂದೆನೆ ಆರ್ಟಿಪಿಸಿಆರ್ ಪ್ರಿಂಟ್ ತರುವಾಗ ಕಂಡ್ಕಂಡಿದ್ಲು. ಮತ್ತದಕ್ಕೀಗ ದೃಢೀಕರಣದ ಸಲುವಾಗಿ ಮೇಲಧಿಕಾರಿಯ ಸಹಿ ಬೇಕಿತ್ತು. ಅಷ್ಟ್ರಲ್ಲಿ ಕೀರ್ತಿ ಕರೆ ಮಾಡಿದ್ದ ಆ ವ್ಯಕ್ತಿ ಏದುಸ್ರು ಬಿಡ್ತಾ ಬಂದು ‘ಒಂದೇ ನಿಮಿಷ’ ಎಂದು ಒಳಹೋಗಿ ‘ಇವ್ರು ನಮ್ಮೋರೆ ಬೇಗ ಕೊಡಿ’ ಎಂದು ಇಂಗ್ಲಿಷ್ ಅಕ್ಷರಗಳೇ ತುಂಬಿದ್ದ ಎರಡು ಹಾಳೆಯನ್ನ ಹಿಡಿದು ಅದೇ ವೇಗದಲ್ಲಿ ಹೊರ ಬಂದವ, ಅಲ್ಲಿಯೇ ಕಾಯ್ತಿದ್ದ ಕೀರ್ತಿಗೆ ಆ ಪತ್ರವನ್ನ ತುಸು ಅಕ್ಕರೆಯಿಂದಲೇ ನೀಡಿದಂತಿತ್ತು. ಆತನ ಕೈಗೆ ರಿಪೋರ್ಟ್ ಕೊಟ್ಟ ಆ ಕೆಂಪು ಸ್ಕರ್ಟಿನ ಹುಡ್ಗೀನ ಧನ್ಯತಾಭಾವದಿಂದ ನೋಡಿದ ಕೀರ್ತಿ ಅಲ್ಲೇ ನಿಂತಿದ್ದ ಹೊಳಪಿನ ಮಕ, ಎಳಸಾಗಿ ಮೀಸೆ ಚಿಗ್ರುತಿದ್ದ ಶಿವುನತ್ತ ತಿರುಗುದ್ಲು. ‘ತುಂಬಾ ಥ್ಯಾಂಕ್ಸ್. ಬರ್ತೀನಿ’ ಎಂದ್ಲು ಅವ್ನನ್ನ ಕಣ್ಣಲ್ಲೇ ಕಿಚಾಯಿಸೋಳಂತೆ. ‘ಮತ್ತೇನಾದ್ರು ಇದ್ರೆ ಫೋನಾಕು’ ಶಿವು ಆತ್ಮೀಯನಂತೆ ಹೇಳಿದ್ದ. ಅವ್ಳೂ ತನ್ನಕ್ಕನ್ನ ಮತ್ತದೇ ಆಟೋಲಿ ಕೂರುಸ್ಕೊಂಡು ಸಂಜೀವಿನಿ ಆಸ್ಪತ್ರೆ ತಲುಪ್ದಾಗ ಹೆಚ್ಚು ಕಮ್ಮಿ ಹನ್ನೊಂದ್ಗಂಟೆ ಮೀರಿತ್ತೇನೋ. ನಮ್ಗೆ ಜನರಲ್ ವಾರ್ಡ್ ಸಾಕೆಂದೇಳಿ ನೇರ ಅಲ್ಲೇ ಸಾಮಾನುಗಳ್ನ ಇಳಿಸಿದ್ರು. ಚೂರು ನೆಮ್ಮದಿ ಎನ್ಸಿದ್ದವ್ಳಿಗೀಗ ನೀಳಕಾಯದ ಶಿವುನ ಭುಜದ ಪಕ್ಕಕ್ಕೆ ತನ್ನನ್ನಿಟ್ಟುಕೊಂಡು ಕಲ್ಪಿಸಿಕೊಂಡ ಕೀರ್ತಿಗೆ ನಾಚ್ಗೆ ಮೊಖದಲ್ಲಿ ರಂಗು ತಂದಿತ್ತು.

ಶಿವು ಕೀರ್ತಿಗೆ ಪರಿಚಯವಾದ್ದು ಮೂರು ದಿನದ ಹಿಂದಷ್ಟೆ. ಅದಕ್ಕೂ ಹಿಂದೆ ಭಾನುಗೆ ಈ ಮೂತ್ರದ ಕಾಯ್ಲೆ ಕಾಣುಸ್ಕಂಡಿದ್ದು ಐದಾರು ತಿಂಗ್ಳಲ್ಲಿ. ಪದೇ ಪದೇ ಮೂತ್ರಕ್ಕೆ ಕೂರಂಗಾಗದು. ಅದ್ರ ಬಗ್ಗೆ ಗಮ್ನ ಕೊಡ್ದವ್ಳು ಸಣ್ಣಗೆ ಭಯಸ್ಥಳಾಗಿದ್ದು ವಿಪ್ರೀತವಾದಾಗ್ಲೆ. ಮೊದ್ಮೊದ್ಲು ಒಂದ್ರಿಂದ ಎರಡ್ಗಂಟೆಯ ಆಸುಪಾಸಿಲ್ಲಿ ಮೂತ್ರಕ್ಕೆ ಅರ್ಜೆಂಟ್ ಆಗುತ್ತಿದ್ದುದು ಬತ್ತಾ ಬತ್ತಾ ಇಪ್ಪತ್ತು ನಿಮ್ಷ, ಕಾಲು ಗಂಟೆಗೆ ಬಡ್ತಿ ಪಡೆದಿತ್ತು. ಇದ್ನ ಸಂಭಾಳಿಸೋದ್ಹೇಗೆಂದು ತಿಳಿದೇ ಇದ್ದಾಗ ಜೊತೆಗೆ ಸ್ವಲ್ಪ ಅಲ್ಲಲ್ಲಿ ಬಾವು ಕಾಣಿಸ್ಕೊಂಡ್ಮೇಲೆ ಅಮ್ಮ ನಂಜಮ್ಮನ ಮುಖಾಂತ್ರ ಅಪ್ಪನ ಕಿವಿಗೆ ಮುಟ್ಟಿಸಿದ್ಲು.

ಆನಂತ್ರ ತೋರಿಸ್ದ ಮೂರ್ನಾಲ್ಕು ಆಸ್ಪತ್ರೆಗಳಲ್ಲಿ ಡಾಕ್ಟ್ರಮ್ಮ/ಪ್ಪಗೊಳು ‘ನಮ್ಗೂ ಪದೇ ಪದೇ ಮೂತ್ರ ಹೋಗುವ ಸಮಸ್ಯೆ ಇದ್ದಿದ್ದೇ ನಮ್ಮ. ಇದರ ಬಗ್ಗೆಯೆಲ್ಲಾ ಜಾಸ್ತಿ ಯೋಚ್ನೆ ಮಾಡ್ಬಾರ್ದು’ ಎಂದು ಸಮಸ್ಯೆನಾ ಬಗೆಹರಿಸ್ದೆ ಸಹನೆ ಪಾಠಾನ ಹೇಳಿ ಕಳಿಸಿದ್ರು. ಅವ್ರ ಸಾಗಾಕಿದ್ನ ಮನೆಲಿ ಹೇಳಿ ‘ನೀನ್ ಮೂತ್ರ ಬತ್ತದೆ ಅನ್ನೊದ್ನ ನೆನುಸ್ಕಳ್ದೆ ಸುಮ್ನಿರು. ಸರಿಯೋಯ್ತದೆ. ಏನೋ ಆಗ್ಬಾರ್ದಾಗೈತೆ ಅನ್ನಂಗಾಡ್ತವೆ’ ಅಂತ ಬೈಸ್ಕೊಂ ಡಿದ್ಲು. ಅಲ್ದೆ ಅದೇ ಸಂದರ್ಭಕ್ಕೆ ಸರ್ಯಾಗಿ ಮದ್ವೆ ನಿಶ್ಚಿತವಾದ ಕಾರಣ ಮದ್ವೆ ಕೆಲ್ಸಗಳಿಂದಾಗಿ ಇದ್ನ ಕಡಗಣಿಸಲಾಗಿತ್ತು. ‘ಅದೆಷ್ಟೊತ್ತು ಕೂರ್ತೀಯಾ ಆಚೆ ಬಾ’ ಎಂದು ಮೂತ್ರಕ್ಕೆ ಹೋದ ಅವ್ಳನ್ನ ತಂಗಿಯಾದಿಯಾಗಿ ಎಲ್ರೂ ಹೀಗಳೆಯವ್ರೆ. ಅದೊಮ್ಮೆ ಭಾನು ಧೈರ್ಯ ತಂದ್ಕಂಡು ‘ಅಪ್ಪ ಇವಾಗೇನೊ ಪರ್ವಾಗಿಲ್ಲ. ಮದ್ವೆ ದಿನ ಹೀಗೆ ಗಂಟೆಗಟ್ಲೆ ನೆಂಟ್ರ ಮುಂದೆ ಮೂತ್ರಕ್ಕೆ ಟಾಯ್ಲೆಟ್ಟಾಗೆ ನಾನ್ ಲಾಕ್ ಮಾಡ್ಕೊಂಡು ಕೂತ್ರೆ ನಾಕಾರು ಮಂದಿ ಗುಮಾನಿಯಿಂದ ನೋಡಲ್ವ’ ಇವ್ಳಿಗೆ ಎಂತದೋ ಮೂತ್ರದ ಕಾಯ್ಲೆ ಅದೆ. ವಂದಾನೆ ಹೊರಿಕೆ ಹೋಗಲ್ವಂತೆ. ಶೀ… ಹೊಟ್ಟೆನಲ್ಲೇ ಗಲೀಜಿಟ್ಕಂಡು ಅದೆಂಗೋಡಾಡ್ತಾಳಪ್ಪ ಎಂದು ಅಸಹ್ಯ ಮಾಡ್ತಾರೆ’ ಎಂದ್ಲು ನೆಂಟ್ರಿಷ್ಟರ ಹಾವಭಾವ್ದಲ್ಲಿ ತೋರಿಸ್ತಾ. ನಮ್ ನೆಂಟ್ರುಗಳು ಚೂರು ಸಿಕ್ರೆ ಸಾಕು ಹಿಂಗೆಲ್ಲ ಮಗ್ಳ ಬಗ್ಗೆ ಅಪಪ್ರಚಾರ ಮಾಡಿ ಮದ್ವೆ ನಿಲ್ಸಾಕ್ಕು ಏಸಲ್ಲ. ಹಾಲ್ಕುಡ್ದು ಊರ್ಗೇನೆ ಸಿಹಿ ಹಂಚಿ ಹಬ್ಬ ಮಾಡ್ಬುಡ್ತವೆ ಬೋಳಿಮಕ್ಳು ಎಂದ್ಕಂಡ ಮಾರುತಪ್ಪ.

ಈ ಹಿಂದೆ ಇದೇ ತೊಂದರೆಯನ್ನ ಭಾನು ತನ್ನ ತಂಗಿಗೆ ಹೇಳ್ದಾಗ ‘ಅದ್ಕೇನಂತೆ’ ಎಂದು ಕಪಾಟಿನಲ್ಲಿದ್ದ ಸ್ಯಾನಿಟರಿ ಪ್ಯಾಡ್ಗಳ್ನ ಮುಂದೆ ನೀಡಿದ್ಲು.

‘ಅವುಗಳ ಧೈರ್ಯದ ಅಡಿಪಾಯ್ದಿಂದ್ಲೇ ಮದ್ಮಗ್ಳಾಗಿ ಹಸೆಮಣೆ ಏರಿ ತಾಳಿನೇನೊ ಕಟ್ಟಿಸ್ಕೋಬೋದು’ ಎಂದ ಭಾನು ಮುಂದುವರ್ದು, ತುಸು ಆತಂಕದ ಗಂಟ್ಲಲ್ಲಿ ‘ಆದ್ರೆ ಮದ್ವೆ ಶಾಸ್ತ್ರಗೋಳು ಅದು ಇದಂತ ಅವ್ರ ಮನೆಲ್ಲಿ, ನೆಂಟ್ರು ಮನೇಲಿ ಹ್ಯಾಗ್ ಓಡಾಡ್ಲಿ? ಕಾಯಿಲೆ ಮುಚ್ಚಿಟ್ಟು ಮದ್ವೆ ಮಾಡವ್ರೆ ಅಂತ ಇದ್ನೆ ನೆಪ ಮಾಡ್ಕಂಡ್ರೆ ಏನ್ ಮಾಡೋದು’ ಎಂದಿದ್ಲು. ಇದೇ ಕಾರಣವಾಗಿ ಗಂಡನಾಗೋನು ಅಥ್ವಾ ಗಂಡನ ಮನೆಯೋರು ತನ್ನನ್ನ ತಿರಸ್ಕಾರದಿಂದ ನೋಡ್ಬಾರ್ದು ಹಾಗೂ ಅವ್ರ ತಪ್ಪನ್ನ ಇನ್ನೇನಕೊ ನೆಪ್ಪಾಗಿಸ್ಕೊಬಾರ್ದು ಎನ್ನೋದು ಅವ್ಳ ಸ್ಪಷ್ಟ ಉದ್ದೇಶ ಆಗಿತ್ತು. ಹಂಗಾಗಿಯೇ ಭಾನು ‘ಅಪ್ಪ ನಂಗೆ ಮದ್ವೆಗೆ ಮುಂಚೆನೆ ಬೆಂಗ್ಳೂರಲ್ಲಿ ಯಾವ್ದಾದ್ರೂ ದೊಡ್ಡಾಸ್ಪತ್ರೆಲಿ ತೋರ್ಸು’ ಎಂದು ಅದಕ್ಕೆ ಸಕಾರಣಗಳ್ನ ಹೇಳಿ ಪಟ್ಟಿಡಿದು ಕೂತಾಗಲೇ, ಮಾರುತಪ್ಪ ಇದು ಕೊನೆಬಾರಿ ಎಂಬಂತೆ ನೋಡಿ ಒಂದಿಷ್ಟು ಹಣವನ್ನು ಮಗ್ಳ ಕೈಗಿಟ್ಟಿದ್ದ.

ಬಿ.ಎ. ಅಂತಿಮ ಸೆಮಿಸ್ಟರ್‌ನಲ್ಲಿದ್ದ ಕೀರ್ತಿಗೆ ಸದ್ಯ ಯಾವ್ದೇ ಕ್ಲಾಸ್ ಇಲ್ಲದ್ರಿಂದ ಆಸ್ಪತ್ರೆಯಲ್ಲಿನ ಅಕ್ಕನ ಆರೈಕೆಗೆ ಅವ್ಳೆ ನಿಲ್ಬೇಕಾಗಿದ್ದು, ಸಂಜೀವಿನಿ ಆಸ್ಪತ್ರೆ ಒಳಹೊಕ್ಕಿದ್ಲು. ಜನಪ್ರಿಯ ಯೂರಾಲಜಿ ಸರ್ಜನ್ ಡಾ.ಶೇಖರ್ ಮೊದ್ಲನೇ ದಿನಾನೆ ಅವ್ಳ ತೊಂದ್ರೆ ಆಲಿಸಿ, ಯೂರೋಪ್ಲೋಮೆಟ್ರಿ ಟೆಸ್ಟ್ಗೆ ಬರೆದ್ಕೊಟ್ಟಿದ್ರು. ಆ ಡಿಪಾರ್ಟ್ಮೆಂಟ್‌ನಲ್ಲೇ ದೊಡ್ಡೆಂತ್ರಕ್ಕೆ ಅಳ್ವಡಿಸಿದ್ದ ಡಬ್ಬವೊಂದರಲ್ಲಿ ವಂದ ಉಯ್ದು ಬಂದಿದ್ದ ಭಾನುಗೆ, ಮೂತ್ರಚೀಲದಿಂದ ವಂದ ಕ್ಲಿಯರ್ ಆಗದೆ ಅನ್ನಿಸಿರಲಿಲ್ಲ. ಒಳ್ಗೆ ಇನ್ನೂ ಉಳ್ಕಂಡೈತೆ ಆದ್ರೆ ಆಚೆ ಬತ್ತಿಲ್ಲ ಅನ್ಸಿತು. ಇದ್ಕೆ ಒಂದಿಟು ಇಂಬು ನೀಡ್ವಂತೆ ಅರ್ಧ ಗಂಟೆ ನಂತ್ರ ನರ್ಸ್ ನೀಡ್ದ ಯುರೋ-ಮೆಟ್ರಿ ರಿಪೋರ್ಟ್ಸ್ನಾಗ ಒಳಗೆ ಉಳ್ಕಂಡಿದ್ದೆಷ್ಟು, ಹೊರ ಹಾಕಿದ್ದೆಷ್ಟು ಅನ್ನೋದ್ನ ಸಮೀಕ್ಷೆಯಂತೆ ನಿಖರವಾದ ಅಂಕಿ-ಅಂಶ್ದಲ್ಲಿ ನೀಡಿತ್ತು. ಅದನ್ನು ನೋಡಿದ ಡಾಕ್ಟರ್ ‘ಸಣ್ಣ ಸರ್ಜರಿ ಮಾಡಬೇಕು. ಮೂತ್ರನಾಳ ಚಿಕ್ಕದಾಗಿದೆ. ಮೂತ್ರ ಅಲ್ಲೇ ಉಳಿದುಕೊಂಡು ಇನ್ಛೆಕ್ಷನ್ ಆಗಿ ಮೂತ್ರಪಿಂಡಕ್ಕೆ ತೊಂದರೆಯಾಗುವ ಸಂಭವ ಹೆಚ್ಚು. ಸಣ್ಣ ಟ್ಯೂಬ್ ಹಾಕಿ ಮೂತ್ರನಾಳವನ್ನ ಹಿಗ್ಗಿಸಬೇಕು’ ಎಂದಿದ್ರು. ಮೂವತ್ರಿಂದ ಮೂವತ್ತೈದಾಗ್ಬೋದು ಎಂದಾಗ ಯಾವ್ದಕ್ಕೂ ಇರ್ಲಿ ಎಂದು ಕೀರ್ತಿ ಅಪ್ಪನ ಎಟಿಎಂ ಕಾರ್ಡನ್ನು ತಂದಿದ್ದು, ಅದೀಗ ಹೀಗೆ ಉಪ್ಯೋಗಕ್ಕೆ ಬಂದಿದ್ದು ಅವ್ಳ ಮನಸ್ನಾ ಪೂರಿಯಂಗೆ ಅರಳಿಸಿತ್ತು.

ಆಸ್ಪತ್ರೇಲಿ ಬೆಳ್ಗೆ ಆರುಕ್ಕೆ ಎಬ್ಸಿ ನರಕ್ಕೆ ಕ್ಯಾನುಲಾ ಹಾಕಿ ಡ್ರಿಪ್ಸೆಟ್ನು ಜೋಡಿಸಿದ್ಲು. ನರಕ್ಕೆ ಹನಿ ಹನಿಯಾಗಿ ಜಾರ್ತಿದ್ದ ಸೊಲುಷನ್ ನೋಡ್ತಿದ್ದ ಭಾನುಗೆ ಭಾವಿ ಪತಿ ಕರೆ ಬರ್ತಿದ್ದು ಕಾಣಿಸ್ತು. ಸ್ವೀಕರಿಸೋದು ಬೇಡಂತ ಹಾಗೆ ಇದ್ದಾಗ್ಲೂ ಮೂರನೇ ಬಾರಿಯೂ ಪರದೆ ಮೇಲೆ ರಿಂಗಿಂಗ್ ಅಂತ ಕಾಣುಸ್ಕೊಂಡಾಗ ತುಸು ಗಾಬ್ರಿಯಿಂದ್ಲೆ ರಿಸೀವ್ ಮಾಡಿದ್ಲು. ತಾನಿವತ್ತು ಮನೆಗೆ ಬರುವುದಾಗಿ ತಿಳಿಸಿದ್ದ. ಅವ್ತ್ಯ್ನು ಬರ್ತಾನೆಂಬ ಸೂಚ್ನೆ ಕೊಡದೆ, ಎಲ್ಲಿದ್ಯಾ ಎಂದು ಕೇಳಿದ್ದಕ್ಕೆ, ಮನೆಲೆ ಇದ್ದಿನೆಂದು ಸುಳ್ಳಾಡಿದ್ದವ್ಳಿಗೆ ಆಸ್ಪತ್ರೆಲ್ಲಿರೋ ಇಚಾರ ಆಗ್ಲಿ ಅಥ್ವಾ ಮತ್ತಿನ್ನೆಲ್ಲೊ ಇರೊದಾಗಿ ಹೇಳಿ ತಪ್ಪಿಸ್ಕೊಳೋಕೆ ಆಗ್ಲಿಲ್ಲ. ‘ಅಪ್ಪ ಅಮ್ಮನೂ ಹೊಂಟವ್ರೆ. ಮತ್ತೆ ಮದ್ವೆದು ಬೇರೆ ಬೇರೆ ಕೆಲ್ಸಗಳು ಇರೋದ್ರಿಂದ, ಮತ್ತೆ ಮತ್ತೆ ನಿನ್ನ ನೋಡುಕೆ ಆಗಲ್ಲ. ಈಗ ನಿನ್ನ ನೋಡಿ, ಮಾತಾಡಿಸ್ಕೊಂಡು ಬಂದಂಗಾಯ್ತದೆ’ ಎಂದಿದ್ದ. ‘ಆಯ್ತು’, ಎಂದು ಕರೆನ ಕಟ್ ಮಾಡಿದ ವೇಗದಷ್ಟೆ ಅಪ್ಪನಿಗೆ ಫೋನಾಯಿಸಿ ಅವ್ರು ಇವತ್ತೆ ಮನೆಗ್ ಬರ್ತಿರೋ ವಿಷ್ಯ ಅರಹಿದ್ಲು. ‘ಮದ್ವೆಗೆ ಮುಂಚೆನೆ ಇದೆಲ್ಲ ಬ್ಯಾಡ ಕಂಡ್ರೆ ಅಂದ್ರೆ ಕೇಳುದ್ರಾ. ಏನೋ ಮಾಕಾಯ್ಲೆ ಅನ್ಕೊಂಡೋದ್ರಿ. ಅವ್ರು ಬಂದಾಗ್ ನೀನಿಲ್ಲ ಅಂದ್ರೆ ಏನುತ್ರ ಹೇಳ್ಳಿ ನಾನು. ಆಮೇಲೆ ಹಿಂಗೆಲ್ಲ ಮುಚ್ಚಿಟ್ಟವ್ರೆ ಅಂದ್ರೂ ಕಷ್ಟನೆಯ. ಏನಾದ್ರು ಸುಳ್ಳೇಳಿ ತಡಿ ಅಷ್ಟೆ. ಅದೆಷ್ಟೇ ತ್ರಾಸ್ ಕೊಡ್ತೀರಾ ಮುಂಡೇರು ನೀವು’ ಹೀಗೆ ಸಾಗಿದ್ವು ಮಾತ್ಗೋಳು. ತನ್ನ ಮೂತ್ರ ಸರ್ಯಾಗಿ ಆಚೆ ಹೋಗಿದ್ದರೆ ಇದೆಲ್ಲ ತಾಪತ್ರಾನೇ ಇರ್ಲಿಲ್ಲ ಅನ್ಸಿತ್ತು ಅವ್ಳಿಗೆ. ಮತ್ತೊಮ್ಮೆ ತನ್ನ ಯುರೊಫ್ಲೊಮೆಟ್ರಿ ಗ್ರಾಫ್ನ ನೋಡ್ದ ಭಾನುಳ ಹಣೆನ ಯಾರೋ ಬಡಿದ ಹಾಗಿತ್ತು. ಇದೇನಾದ್ರು ತನ್ನ ಬದ್ಕಿನ ದಿಕ್ನ ಬದ್ಲಾಯಿಸ್ತದ ಎಂದ್ಕೊಳ್ತ ಇದ್ದಾಗ್ಲೆ ಅವ್ಳನ್ನ ಒಟಿ ರೋಮ್ಗೆ ಶಿಫ್ಟ್ ಮಾಡೆಂದು ಹೇಳೋದ್ರು ನರ್ಸಮ್ಮ. ಅಂತೆನೆ ಬರಿ ಮೈ ಮೇಲೆ ತೆಳ್ಳ ಹಸಿರು ಗೌನ್ ಮಾತ್ರ ತೊಟ್ಟು ತಣ್ಣಗೆ ಸ್ಟ್ರೆಚರ್ ಮೇಲೆ ಒರಗಿ ಕೂತ ಭಾನು ‘ಹುಷಾರು. ಅಮ್ಮುಂಗೆ ಒಸಿ ಹೇಳ್ನೋಡು. ಅಮ್ಮಾದ್ರೆ ಏನಾದ್ರು ಹೇಳಾತು’ ಎಂದು ಮೊಬೈಲನ್ನು ಕೀರ್ತಿಗೆ ರವಾನಿಸಿದ್ಲು. ಔಷಽಗಳ್ನ ತರೋಕಂತ ಫಾರ್ಮಸಿ ಮುಂದೆ ಕ್ಯೂ ನಿಂತಿದ್ದ ಕೀರ್ತಿಗೆ, ಅಪ್ಪ ಎಂದು ಸ್ಕ್ರೀನಿನ ಮೇಲೆ ಮೂಡಿದ್ನ ಗಮನಿಸಿ ಗ್ರೀನ್ ಬಟನ್ ಅನ್ನು ಸ್ವೈಪ್ ಮಾಡಿ ‘ಆಪ್ರೇಷನ್ ರೂಮ್ಗೆ ಶಿಫ್ಟ್ ಮಾಡವ್ರೆ’ ಎನ್ನಲು, ‘ಆಪ್ರೇಷನ್ನು ಬ್ಯಾಡ, ಏನು ಬ್ಯಾಡ. ನೀವ್ ಬಂದ್ಬಿಡಿ’ ಕರಾರುವಾಕ್ಕಾಗಿ ಹೇಳಿದ್ದ ಮಾರುತ್ತಪ್ಪ. ಕಾಲ್ಬುಡ್ದಲ್ಲಿದ್ದ ನೀರು ಇದ್ಕಿದ್ದಂಗೆ ಮೂಗ್ಮಟ್ಟ ಬಂದಂಗಾಗಿತ್ತು

ಮಾರುತಪ್ನಿಗೆ. ಆದ್ರೆ ಅಪ್ಪನ ಈ ಅನಿರೀಕ್ಷಿತ ಆಜ್ಞೆಗೆ ಕಕ್ಕಾಬಿಕ್ಕಿಯಾಗಿ ‘ಅಪ್ಪ ಎಲ್ಲಾ ಅರೆಂಜ್ ಆಗ್ಬಿಟ್ಟೈತೆ ಇಲ್ಲಿ. ಈಗ ಡಾಕ್ಟರಿಗೆ ಹಿಂಗಿಂಗೆ ಅಂದ್ರೆ ಬೈಯಲ್ವಾ’ ಎಂದು ಮತ್ತೆ ‘ಅದಲ್ದೆ ಅಕ್ಕನ ಪರಿಸ್ಥಿತಿ ಬಗ್ಗೆ ಇಲ್ಲೇನೈತೆ ಅಂತ ಯೋಚ್ಸಿದ್ಯಾ’ ರಕ್ತಪರೀಕ್ಷೆ ಮುಗ್ದೈತೆ, ಎಲ್ಲಾನು ಮತ್ತೊಂದ್ ಸಾರಿ ರಕ್ತ ಚೆಲ್ಬೇಕಾ? ನಿದ್ದೆ ಇಂಜೆಕ್ಷನ್ನು ಕೊಟ್ಟಾಗೈತೆ’ ಹೀಗೆ ಹಲವಾರು ಪ್ರಶ್ನೆಗಳನ್ನು ಎತ್ತಿದ್ದಕ್ಕೆ ಅಪ್ಪನದು ಮತ್ತದೇ ಬಡಬಡಿಸುವ ‘ಬೋಸುಡಿಗ್ಳ ಮದ್ವೆ ನಿಂತ್ರೆ ಊರಲ್ಲಿ ಓಡಾಡೋಕ್ಕಾಯ್ತದ. ಪತ್ರುಕೆ ಅಂಚಾಗೈತೆ. ಇಪ್ರೀತ ಆಡ್ತಿರಾ ಹಂಗೆನೆಯಾ. ಸಂಬಂಧಿಕ್ರುಗೆ ಏನ್ ಉತ್ರ ಕೊಡ್ಲಿ ನಾನು’ ಜನ್ರು ಮುಂದೆ ತಲೆ ಕತ್ರುಸ್ಕೊಳಂಗ್ ಮಾಡ್ತೀರಾ. ಅವ್ರು ಬಂದಾಗ ಅವ್ಳಿಲ್ದೆ ಇಲ್ಲಿ ಕಷ್ಟಕ್ಕಿಟ್ಕತದೆ’ ಹೀಗೆ ಅವವೇ ಮಾತ್ಗಳು ಮೊಬೈಲಿಂದ ತೂರ್ಕೊಂಡು ಬರತ್ತಿದ್ವು. ‘ನೋಡು ಈ ಸಮ್ಯದಲ್ಲಿ ಅವ್ರಿಗೆ ಸಣ್ಣ ಸುಳೇವು ಸಿಕ್ರು ಮುಂದೆ ಕಷ್ಟಕ್ಕಿಡ್ತದೆ. ಈ ಹುಡ್ಗಿಗೆ ಏನೋ ಕಾಯ್ಲೆ ಐತೆ. ಮುಚ್ಚಿಡ್ತಾವ್ರೆ ಅನ್ನೋದ್ನೆ ನೆವ ಮಾಡ್ಕೊಂಡು ಹೆಚ್ಗೆ ಕೇಳ್ತಾರೆ. ಇಲ್ಲ ಮದ್ವಿ ನಿಲ್ಸಿದ್ರೆ ಏನ್ ಮಾಡ್ಲೇ? ಎಂದವ ‘ಏ… ಏನ್ ಆಗಕ್ಕಿಲ್ಲ. ನಮ್ಮತ್ರ ಅಷ್ಟೊಂದು ದುಡ್ಡಿಲ್ಲ. ಆಮೇಲ್ಬಂದು ಆಪ್ರೇಸನ್ ಮಾಡ್ಸ್ಕೋತೀವಿ ಅಂತ ಹೇಳ್ಬಿಟ್ಟು ಕರ್ಕಂಡ್ ಬಾ. ಏನಾಗಲ್ಲ’ ಎಂದು ಜೋರು ದನಿಯಲ್ಲೇ ಅಲಿಖಿತ ಕಟ್ಟಾಜ್ಞೆಯನ್ನ ಹೊರಡಿಸಿದ್ದ. ಕೀರ್ತಿ ಅಮ್ಮಂಗೆ ಫೋನಾಕಿ ‘ನೀನೆ ಸಂಭಾಳಿಸ್ಕೊ ನಿನ್ನ ಭಾವಿ ಅಳಿಯನ್ನ’ ಎಂದ್ಹೇಳಿ ಫೋನಿಟ್ಟಿದ್ಲು.

ಏನ್ಮಾಡೋಕು ತೋಚ್ದೆ ಹೆಣಗಾಡ್ತಿದ್ದ ಅವ್ಳ ಮನಸ್ಸು ಗೊಂದಲದಲ್ಲೇ ಬೇಯ್ವಾಗ ಅವ್ಳ ಸರ್ದಿ ಬಂದು ಮೆಡಿಸನ್ಸ್ ತಗೊಂಡು ಒಟಿಯೊಳಕ್ಕೆ ಹೋಗಿ ಅಕ್ಕನ ಮುಖ ನೋಡಿದಳು. ಹೇಳಲೋ ಬೇಡವೋ ಎಂದು ಯೋಚಿಸುತ್ತಿರುವಾಗಲೇ ಅನಾಮತ್ತಾಗಿ ಅಪ್ಪ ಹೇಳಿದ್ನ ಅಕ್ಕನ ಮುಂದೆ ಒದರಿದ್ಲು. ಆಗ್ಲೆ ಇಂಜೆಕ್ಷನ್‌ಗಳ ಪ್ರಭಾವದಿಂದ ನಿದ್ರೆ ಅಮ್ರುಕೊತಿದ್ದ ಭಾನುಗೆ ಹೇಳಲೇನು ತೋಚಲಿಲ್ಲ. ಇಬ್ಬರ ಕೆನ್ನೆಗೊಳು ಕಣ್ಣೀರಲ್ಲಿ ಜೋತು ಬೀಳಲು, ಸಂಧಿಸಿದ್ದು ಕೇವಲ ಕಣ್ಗಳ ಸಾಂತ್ವನವಷ್ಟೇ ಹೊರ್ತು ಯಾರ ಬಾಯಿಂದ್ಲೂ ಸ್ವರ ಹೊರುಡ್ಲಿಲ್ಲ. ಕೀರ್ತಿಗೆ ಇದು ಹಣದ, ಪ್ರತಿಷ್ಠೆ, ಮಾನ-ಮರ್ವಾದೆ ಪ್ರಶ್ನೆಗಳಾಗಿರಲಿಲ್ಲ. ಆದರೆ ಅದೆಷ್ಟೋ ಟೆಸ್ಟುಗಳೆಂದು ಸುರ್ದಿದ್ದ ರಕ್ತ, ನರಕ್ಕೆ ನೀಡಿದ್ದ ಚುಚ್ಚು ಮದ್ದುಗಳು, ಮತ್ತೆ ಈ ನರಕವನ್ನ ಮೊದಲ್ನಿಂದ ಅನುಭವಿಸ್ಬೇಕಾ? ಎಂಬುದಾಗಿತ್ತು. ಇತ್ತ ಅಪ್ಪನ್ ಮಾತ್ಕೇಳ್ದೆ ಇಲ್ಲಿದ್ಕೊಂಡ್ರೆ ಮದ್ವೆಗೆ ಅಡ್ಡಿಯಾದ್ರೆ? ನಿಂತೋದ್ರೆ? ಎದೇಲಿ ಅವಿರತ ಭಯ ಆವರಿಸ್ತು.

ಕೀರ್ತಿ ಮುಕ್ದಲ್ಲಿ ಮೂಡ್ತಿದ್ದ ಬೆವ್ರ ಬಿಂದುಗಳು ನದಿಯಂತೆ ಹರಿಯವಂತಾಯ್ತು. ಉಮ್ಮಳಿಸಿ ಬಂದ ದುಃಖವನ್ನ ಎಲ್ಲಾರ ಮುಂದೆಯೂ ತೋರಗೊಡೋದೆಂದು ಆಚಿಕೆ ಬಂದವ್ಳು ‘ಬಹುಶಃ ಅವ್ವನೊ ಅಪ್ನೋ ಅಕ್ಕನನ್ನ ಈ ಸ್ಥಿತಿಲಿ ಕಣ್ಣಾರೆ ಕಂಡಿದ್ರೆ ವಾಪಸ್ ಬಾ ಅಂತ ಕರಿತಿರ್ಲಿಲ್ವೆನೋ’ ಎಂದು ತಾನೆ ಮನ್ಸಿಗೆ ಸಮಾಧಾನ ತಂದ್ಕಂಡು ಅಸ್ಪಷ್ಟ ಗೊಂದ್ಲದಿಂದ್ಲೆ ಆಪ್ರೇಷನ್ ಫಾರ್ಮಿಗೆ ಸಹಿ ಬರೆದ್ಲು. ಅಷ್ಟ್ರಲ್ಲಿ ಅಲ್ಲಿಗೆ ಶಿವುನು ಎಂಟ್ರಿ ನೀಡ್ದಾಗ ನಡೆದಿದ್ನ ಹೇಳಿದ್ಲು.

ಆಪ್ರೇಷನ್ ಮುಗ್ದ ತಕ್ಷಣಾನೆ ಡಾಕ್ಟರ್‌ನ ಭೇಟಿ ಮಾಡಿದ ಕೀರ್ತಿ ಡಿಸ್ಚಾರ್ಜ್ ಬಗ್ಗೆ ಕೇಳಿದ್ಕೆ ‘ಒಂದಿನ ಅಬ್ಸರ್ವೇಷನ್ನಲ್ಲಿಟ್ಟು ನಾಳೆ ಮಾಡಿದ್ರೆ ಚೆನ್ನಾಗಿರೋದು. ಬಸ್ನಲ್ಲಿ ಕುಲುಕುದ್ರೆ ಬ್ಲೀಡಿಂಗ್ ಆಗುತ್ತಮ್ಮ. ಟ್ಯಾಕ್ಸಿ ಆದ್ರು ಅಷ್ಟೆ. ಇಲ್ಲಾದ್ರೆ ನಿಗಾ ಮಾಡ್ಲಿಕ್ಕೆ ನರ್ಸ್ ಇರ್ತಾರೆ. ನಿಮ್ಮ ರಿಸ್ಕ್’ ಅಂತಂದು ? ‘ನೋವು ಜಾಸ್ತಿ ಆದ್ರೆ ಇದ್ನ ಕೊಡಿ’ ಅಂತ ಮಾತ್ರೆ ಚೀಟಿ ನೀಡಿದ್ರು ತಲೆ ಎತ್ತದೆಯೆ.

ಪ್ರಜ್ಞೆ ಬಂದ ಮೂರ್ನಾಲ್ಕು ತಾಸಿನ ನಂತ್ರ ಭಾನುಗೆ ಬೇಕಾದ್ದನ್ನ ಒದಗಿಸಿದ ಶಿವು ಸಂಜೆಯಷ್ಟೊತ್ಗೆ ಡಿಸ್ಚಾರ್ಜ್ ಮಾಡುವಾಗಿನ ಓಡಾಟವನ್ನ ಕೀರ್ತಿಗೆ ತಾಕ್ದಂತೆ ನೋಡ್ಕಂಡಿದ್ದ. ಇದೆಲ್ಲದ್ರಲ್ಲೂ ಅವ್ನನ್ನ ಒಂದ್ಸಾರಿ ಸ್ಪರ್ಶಿಸ್ಬೇಕೆಂಬ ಹೆಬ್ಬಯಕೆ ಮನ್ದಲ್ಲಿ ಗಟ್ಟಿಯಾದ್ರಿಂದ ಆಸ್ಪತ್ರೆ ಸಿಬ್ಬಂದಿ, ಜನಜಂಗ್ಳಿನೂ ಮರ್ತು ಗಟ್ಟಿಯಾಗಿ ತಬ್ಬಿ ಹಿಡಿದಿದ್ಲು ಕೀರ್ತಿ. ನಂತ್ರ ಅವರಿಬ್ರನ್ನು ಸಂಜೀವಿನಿ ಆಸ್ಪತ್ರೆಯ ಹೊರಭಾಗದ ಅಂಗಳದಲ್ಲಿ ಕೂರಿಸ್ದೋನು ಫ್ರೂಟ್ ಕುಲ್ಛಿ ಹಿಡಿದು ನಗುತ್ತಾ ಬಂದಿದ್ದ. ಕೀರ್ತಿ ಇನ್ನೂ ತಿಂದು ಮುಗ್ಸಿರದಿದ್ದಷ್ಟ್ರಲ್ಲೇ ಕ್ಯಾಬ್ ಬುಕ್ ಮಾಡಿದ್ದ. ಬಂದ ಕ್ಯಾಬ್ ಡ್ರೈವರ್‌ಗೆ ಶಿವು ‘ಇವತ್ತು ಆಪರೇಶನ್ ಆಗೈತೆ ಸಾರ್ ಹುಷಾರಾಗಿ ಹೋಗಿ. ಅದೇನು ಕೊಡನ. ಏನೇ ಆದ್ರು ನಿಧಾನಕ್ಕೋಗಿ. ಬ್ಲೀಡಿಂಗ್ ಆದ್ರೆ ಕಷ್ಟ’ ಎಂದು ಎಚ್ಚರಿಕೆ ಹೇಳಿದ. ನಂತ್ರ ಅವ್ನು, ಕೀರ್ತಿ ಇಬ್ರು ಸೇರಿ ಭಾನುನ ಹಿಂದಣ ಸೀಟ್ನಲ್ಲಿ ಮಲಗಿಸಿದ್ರು. ಕಾರ್ ಆಸ್ಪತ್ರೆಯ ಗೇಟ್ ದಾಟುವಷ್ಟರಲ್ಲೇ ಕಾರ್ ಸ್ವಲ್ಪವೇ ಅಲುಗಾಡಿದ್ದರಿಂದ ವಂದಕ್ಕೆ ಹೊಂದಿಸಿದ್ದ ಕೆಥೆಟರ್, ಹಾಗೆ ಅದ್ಕೆ ಹೊಂದಿಕೊಂಡಿದ್ದ ಮೂತ್ರದ ಬ್ಯಾಗಿನತ್ತ ರಕ್ತ ನಿರಾತಂಕದಿಂದ ಹರೀತಿತ್ತು.

ಆಂದೋಲನ ಡೆಸ್ಕ್

Recent Posts

ಸಿಲಿಂಡರ್‌ ಸ್ಪೋಟ ಪ್ರಕರಣ : ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಮಂಜುಳ ಸಾವು

ಮೈಸೂರು : ಮೈಸೂರಿನ ವಿಶ್ವ ವಿಖ್ಯಾತ ಅರಮನೆ ಸಮೀಪ ಸಂಭವಿಸಿದ್ದ ಹೀಲಿಯಂ ಗ್ಯಾಸ್ ಸಿಲೆಂಡರ್ ಸ್ಫೋಟ ದುರಂತದಲ್ಲಿ ಸಾವಿನ ಸಂಖ್ಯೆ…

46 mins ago

ಇತಿಹಾಸ ಸೃಷ್ಟಿಸಿದ ಬಿಜೆಪಿ : ತಿರುವನಂತಪುರಂನ ಮೇಯರ್ ಆಗಿ ವಿ.ವಿ.ರಾಜೇಶ್ ಆಯ್ಕೆ

ತಿರುವನಂತಪುರಂ : ಬಿಜೆಪಿಯಿಂದ ಮೊದಲ ಬಾರಿಗೆ ತಿರುವನಂತಪುರಂ ನಗರ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ವಿ.ವಿ.ರಾಜೇಶ್ ಇತಿಹಾಸ ನಿರ್ಮಿಸಿದ್ದಾರೆ. 49…

53 mins ago

ಅಧಿಕಾರ ಶಾಶ್ವತವಲ್ಲ : ‘ನನ್ನ ತಂದೆಯ ಇಚ್ಛೆಯಂತೆಯೇ ನಡೆಯುವೆ’ ; ಯತೀಂದ್ರ

ಚಿಕ್ಕೋಡಿ : ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಯಾವುದೇ…

56 mins ago

ಗುರುಪುರದ ಬಳಿ ಮತ್ತೆ ಹುಲಿ ಪ್ರತ್ಯಕ್ಷ : ಸ್ಥಳೀಯರಲ್ಲಿ ಹೆಚ್ಚಿದ ಆತಂಕ

ಹುಣಸೂರು : ತಾಲ್ಲೂಕಿನ ಗುರುಪುರದ ಟಿಬೆಟ್ ನಿರಾಶ್ರಿತರ ಕೇಂದ್ರದಲ್ಲಿ ಮತ್ತೆ ಹುಲಿ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ನಾಗರಹೊಳೆ ರಾಷ್ಟ್ರೀಯ…

1 hour ago

ಜಗತ್ತಿಗೆ ಸ್ಪರ್ಧೆ ನೀಡುತ್ತಿದ್ದ ಬೆಂಗಳೂರಿನ ಮೂಲಸೌಕರ್ಯ ಹಾಳಾಗಿದೆ : ಎಚ್‌ಡಿಕೆ

ಬೆಂಗಳೂರು : ಭಾರತವು ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಗತ್ತಿನ ಮೂರನೇ ಆರ್ಥಿಕ ಶಕ್ತಿ ಆಗುವತ್ತ ದಾಪುಗಾಲಿಡುತ್ತಿದೆ. ಆದರೆ, ಉತ್ತಮ…

1 hour ago

ಮೈಸೂರು | ಹೊಸ ವರ್ಷದ ಸಂಭ್ರಮಾಚರಣೆಗ ಸಿದ್ದವಾಗ್ತಿದೆ 2 ಲಕ್ಷ ಲಡ್ಡು.!

ಯೋಗ ನರಸಿಂಹಸ್ವಾಮಿ ದೇವಸ್ಥಾನದಲ್ಲಿ 2 ಲಕ್ಷ ಲಡ್ಡುಗಳ ವಿತರಣೆ ಮೈಸೂರು : ನೂತನ ವರ್ಷವನ್ನು ಸ್ವಾಗತಿಸಲು ಸಾಂಸ್ಕೃತಿಕ ನಗರಿ ಮೈಸೂರು…

2 hours ago