ಹಾಡು ಪಾಡು

ಹಿರಿಯ ಅರಣ್ಯಾಧಿಕಾರಿ ಹೇಳಿದ ಕಾಡಿನ ಕಥೆಗಳು

ಕೀರ್ತಿ ಬೈಂದೂರು

ಹೆಚ್.ಸಿ.ಕಾಂತರಾಜ್ ಅವರ ತಾತ ಹುಲಿ ಕೈಗೆ ಸಿಕ್ಕಿ ತೀರಿಹೋಗಿದ್ದರೆಂಬುದು ಆ ಕಾಲಕ್ಕೆ ದೊಡ್ಡ ಸುದ್ದಿಯಾಗಿತ್ತು. ಕಾಂತರಾಜ್ ಅವರಿಗೂ ತಾನೊಬ್ಬ ಅರಣ್ಯಾಧಿಕಾರಿ ಆಗಬಹುದೆಂಬ ನಿರೀಕ್ಷೆಗಳೇನೂ ಇರಲಿಲ್ಲ. ಆದರೆ ಇವರ ಬದುಕಿನ ಹಾದಿ ಕಾಡಿನತ್ತ ತಿರುಗಿದ್ದೇ ಅಚ್ಚರಿ!

ಕಾಂತರಾಜ್ ಅವರು ಬೆಳೆದಿದ್ದು ಮಂಡ್ಯದ ಬಿಳಿಗೆರೆ ಹೊಸೂರಿನಲ್ಲಿ. ಹಳ್ಳಿಗಾಡಾದ್ದರಿಂದ ಕಾಡಿನ ಸುತ್ತಮುತ್ತವೇ ಇವರ ಬದುಕು ರೂಪುಗೊಳ್ಳುತ್ತಿತ್ತು. ಪಿಯುಸಿ ಓದು ಮುಗಿದಾಗ ಕಾಂತರಾಜ್ ಅವರನ್ನು ಕೃಷಿ ವಿಭಾಗದಲ್ಲಿ ಬಿ.ಎಸ್ಸಿ ಪದವಿಗೆ ಸೇರಿಸಬೇಕೆಂಬುದು ಅಣ್ಣನ ಹೆಬ್ಬಯಕೆ. ಊರಿನಲ್ಲಿದ್ದ ಶಾಸಕರು ಕೃಷಿ ವಿಭಾಗದಲ್ಲಿ ಬಿ.ಎಸ್ಸಿ. ಪದವಿ ಪಡೆದಿದ್ದರೆಂಬ ಕಾರಣಕ್ಕೆ ತಮ್ಮನೂ ಇದನ್ನೇ ಓದಬೇಕೆಂಬುದು ಅಣ್ಣನ ಕನಸಾಗಿತ್ತು. ಕಾಂತರಾಜ್ ಅವರು ಅದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದರು. ಈ ನಡುವೆ ಪದವಿ ಓದು ಮುಗಿಯುತ್ತಿದ್ದಂತೆಯೇ ಕೆಲಸಕ್ಕೂ ಸೇರಿದರು. ಬೆನ್ನಲ್ಲೇ ಸ್ನಾತಕೋತ್ತರ ಪದವಿಗೆಂದು ಸೇರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಿಯನ್ನೂ ನಡೆಸತೊಡಗಿದ್ದರು.

೧೯೮೫ರ ಹೊತ್ತಿಗೆ ರಾಜ್ಯದ ಅರಣ್ಯ ಸೇವಾ ಪರೀಕ್ಷೆಯಲ್ಲಿ ಕಾಂತರಾಜ್ ಅವರು ಆಯ್ಕೆಯಾಗಿದ್ದರು. ಕೊಳ್ಳೇಗಾಲದಲ್ಲಿ ಪ್ರೊಬೇಷನರಿ ಅವಧಿಯನ್ನು ಪೂರೈಸುತ್ತಿದ್ದ ಸಂದರ್ಭವದು. ಅಲ್ಲಿನ ಜನ ಬಾವಿ ತೋಡಿ, ಪಂಪ್‌ಸೆಟ್‌ಗಳನ್ನು ಹಾಕಿಕೊಂಡು ವ್ಯವಸಾಯ ಮಾಡುತ್ತಿದ್ದರು. ಗುಂಡಾಲ್ ಡ್ಯಾಮ್ ಕಟ್ಟುತ್ತಿದ್ದಂತೆಯೇ ಜನರಿಗೆಲ್ಲ ಪರಿಹಾರ ನೀಡಿ ಜನರನ್ನು ಅಲ್ಲಿಂದ ಕಳಿಸಲಾಯಿತು. ಈ ಜನರೆಲ್ಲರೂ ತಮ್ಮ ಬೆಲೆಬಾಳುವ ವಸ್ತುಗಳನ್ನೆಲ್ಲ ಕೊಂಡೊಯ್ದರೇ ವಿನಾ ತೋಡಿದ್ದ ಬಾವಿಗಳನ್ನು ಮುಚ್ಚಬೇಕೆಂದು ಯೋಚಿಸಲೇ ಇಲ್ಲ. ಕಾಡು ಪ್ರಾಣಿಗಳೆಲ್ಲ ಡ್ಯಾಮ್ ಬಳಿ ಬಂದು, ನೀರು ಕುಡಿದು ಆಟವಾಡಿ ಹೋಗುತ್ತಿದ್ದವು. ಒಮ್ಮೆ ಎರಡು ಮರಿ ಆನೆಗಳು ನೀರು ಕುಡಿದು ಮರಳುತ್ತಿರುವಾಗ ಅಕಸ್ಮಾತಾಗಿ ಹದಿನೆಂಟು ಅಡಿ ಆಳವಿದ್ದ ಪಾಳುಬಾವಿಗೆ ಬಿದ್ದವು. ಮೇಲೆ ಬರಲು ದಿಕ್ಕುತೋಚದೆ, ನೀರಲ್ಲೇ ಒದ್ದಾಡುತ್ತಿರುವಾಗ, ತಾಯಿ ಆನೆ ಬಂದು ಬಗ್ಗಿ, ಸೊಂಡಿಲಲ್ಲಿ ತನ್ನ ಮರಿಗಳೆರಡನ್ನು ಮೇಲೆತ್ತುವ ಪ್ರಯತ್ನದಲ್ಲಿ ಅದೂ ನೀರಿಗೆ ಬಿದ್ದಿತು. ಎರಡು ದಿನ ಕಳೆದ ಬಳಿಕ ಆನೆ ನೀರಿಗೆ ಬಿದ್ದಿರುವ ಸುದ್ದಿ ತಿಳಿಯಿತು. ೧೯೮೮ರಲ್ಲಿ ಈಗಿನಷ್ಟು ಯಂತ್ರೋಪಕರಣಗಳ ಬಳಕೆ ಇರಲಿಲ್ಲ.

ಮಾರಾಟಕ್ಕೆಂದು ತಂದಿಟ್ಟಿದ್ದ ಎಂಟು ಹತ್ತು ಟ್ರ್ಯಾಕ್ಟರ್‌ಗಳಷ್ಟು ಕಟ್ಟಿಗೆಗಳನ್ನೆಲ್ಲ ಬಾವಿಗೆ ಹಾಕಲಾಯಿತು. ಅದು ಅವನ್ನೆಲ್ಲ ಅಡಿಗೆ ತಳ್ಳಿಕೊಂಡು ಮೇಲೆದ್ದು ಬಂತು. ದುರಂತವೆಂದರೆ ಮರಿ ಆನೆಗಳೆರಡೂ ಸತ್ತಿದ್ದವು! ಕತ್ತಲಾದ್ದರಿಂದ ತಾಯಿ ಆನೆಯನ್ನು ಕಾಡಿಗಟ್ಟಿ, ಕಾಂತರಾಜ್ ಮತ್ತೆ ಉಳಿದ ಸಿಬ್ಬಂದಿಗಳೆಲ್ಲ ತಂತಮ್ಮ ಮನೆಗಳಿಗೆ ತೆರಳಿದರು. ಮರುದಿನ ಬಂದು ನೋಡಿದರೆ, ಮಕ್ಕಳನ್ನರಸುತ್ತಾ ಆ ತಾಯಿ ಆನೆ ಬಾವಿಗೆ ಬಿದ್ದು ಸತ್ತುಹೋಗಿತ್ತು! ಆ ದೃಶ್ಯ ಇನ್ನೂ ಕಣ್ಣಿಗೆ ಕಟ್ಟಿದಂತಿದೆ ಎಂದು ಕಾಂತರಾಜ್ ಅವರು ನೆನಪಿಸಿಕೊಳ್ಳುತ್ತಾರೆ. ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಲ್ಲೂ ಇರುವ ಮಾತೃವಾತ್ಸಲ್ಯ ಕಂಡ ಕಾಂತರಾಜ್ ಅವರಿಗೆ ಪ್ರಾಣಿಗಳ ಬಗೆಗಿನ ಆಸಕ್ತಿ ಇನ್ನೂ ಹೆಚ್ಚಾಯಿತು.

ಮುಂದೆ ಅಧಿಕಾರಿಯಾಗಿ ನೇಮಕಗೊಂಡ ಮೇಲೆ ಕಾಂತರಾಜ್ ಅವರು ಕೈಗೊಂಡ ಮಹತ್ವದ ಕಾರ್ಯವನ್ನು ಕಾಡು-ನಾಡು ಸ್ಮರಿಸುವಂಥದ್ದು. ಬೇಸಿಗೆಯ ನೀರ ದಾಹಕ್ಕೆ ಊರಿಗೆ ಬರುತ್ತಿದ್ದ ವನ್ಯ ಮೃಗಗಳ ಉಪಟಳಕ್ಕೆ ಕಡಿವಾಣ ಹಾಕುವುದು ಅಷ್ಟು ಸುಲಭವಿರಲಿಲ್ಲ. ನೈಸರ್ಗಿಕ ಮತ್ತು ಮಾನವ ನಿರ್ಮಿತ ಕೆರೆಗಳಿಗೆ ಪ್ಲಾಸ್ಟಿಕ್ ಹೊದೆಸಿ, ನೀರು ಹಾಯಿಸಿ, ಬೇಸಿಗೆಯಲ್ಲಿ ಕಾಡುಪ್ರಾಣಿಗಳ ಬಾಯಾರಿಕೆ ತಣಿಸಿದ್ದರು. ಕಾಡುಪ್ರಾಣಿಗಳನ್ನು ಉಳಿಸಲು ಹೋದರೆ ನಾಡಜನರು ಸಾಯಬೇಕಾಗುತ್ತದೆ ಎಂದವರೊಂದಷ್ಟು ಮಂದಿ. ಇನ್ನೂ ಕೆಲವರು, ಬಲಾಢ್ಯರು ಬದುಕುಳಿವ ಜೀವವಿಕಾಸದ ಸಿದ್ಧಾಂತವನ್ನೇ ಏರುಪೇರು ಮಾಡುತ್ತಿದ್ದೀರಿ ಎಂದಿದ್ದರು. ಕ್ಯಾರೆ ಎನ್ನದೆ ಮನುಷ್ಯ ಮತ್ತು ಪ್ರಾಣಿ ಜಗತ್ತಿನ ಸಂಘರ್ಷದಾಚೆಗೆ ಜೀವದುಳಿವಿನ ಸೇತುವನ್ನು ಕಾಂತರಾಜ್ ಅವರು ಬೆಸೆದಿದ್ದರು. ಅಚ್ಚರಿ ಎನಿಸಬಹುದು, ಇವರ ಈ ದೂರದೃಷ್ಟಿ ಯೋಚನೆಯನ್ನು ಸರ್ಕಾರವೂ ಬೆಂಬಲಿಸಿತು. ಇಂದಿಗೂ ವನ್ಯ ಜೀವಿಗಳಿಗಾಗಿ ಬೇಸಿಗೆಯ ಸಮಯದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಫಲಪ್ರದವಾಗಿ ನಡೆಯುತ್ತಿದೆ.

ನಂತರ ಗುಂಡ್ಲುಪೇಟೆಯ ಕಾಡಿಗೆ ಅಧಿಕಾರಿಯಾಗಿದ್ದಾಗ ಗಂಧದ ಮರಗಳ ಕಳ್ಳ ಸಾಗಾಣಿಕೆ ತೀವ್ರವಾಗಿ ನಡೆಯುತ್ತಿತ್ತು. ಐದಾರು ದಿನಗಳ ತನಕ ಹೊರೆಯಾಗಿ ತಲೆ ಮೇಲೆ ಹೊತ್ತುಕೊಂಡು ಸಾಗುತ್ತಿದ್ದರು. ಬೆಳಗಿನ ಘಳಿಗೆಯಲ್ಲಿ ಕಾಡಿನಲ್ಲೇ ವಿಶ್ರಾಂತಿ ಪಡೆದು, ರಾತ್ರಿ ಹೊತ್ತಿನಲ್ಲಿ ಸಂಚರಿಸುತ್ತಿದ್ದರು. ಕೇರಳದಲ್ಲಿ ಆಗ ಶ್ರೀಗಂಧದ ತುಂಡು ಇತರ ಕಟ್ಟಿಗೆಗಳಿಗೆ ಸಮಾನವಾಗಿದ್ದರಿಂದ ಗಂಧದ ವ್ಯವಹಾರ ಅಪರಾಧವಾಗೇನೂ ಇರಲಿಲ್ಲ. ಹಾಗಾಗಿ ಕರ್ನಾಟಕದ ಗಡಿ ದಾಟುವುದಕ್ಕೆ ಕಳ್ಳಕಾಕರು ಹವಣಿಸುತ್ತಿದ್ದರು. ಕಾಂತರಾಜ್ ಅವರು ಮಾಹಿತಿದಾರರ ಮಾತಿಗೆ ಅನುಗುಣವಾಗಿ ಕಳ್ಳ ಸಾಗಾಣಿಕೆ ಮಾಡುತ್ತಿದ್ದವರ ಕೆಲ ಗುಂಪುಗಳನ್ನು ಬಂಧಿಸಿದ್ದರು. ಒಂದೊಂದು ಗುಂಪುಗಳನ್ನು ಸೆರೆಹಿಡಿದಾಗಲೂ ಮೂವತ್ತು, ನಲವತ್ತು ಹೊರೆಯಷ್ಟು ಗಂಧದ ಕಟ್ಟಿಗೆಗಳು ದೊರಕುತ್ತಿದ್ದವು. ಅದೆಲ್ಲವನ್ನು ರೇಂಜ್ ಆಫೀಸಿನ ಬಳಿ ತಂದು ಗುಡ್ಡೆಹಾಕುತ್ತಿದ್ದರು. ಮಹಜರು ಮಾಡುವ ವೇಳೆ ತಡವಾಗುತ್ತದೆ, ಮತ್ತೆ ಮಾಡಿದರಾಯಿತು ಎಂದು ಅಲ್ಲೇ ಮಲಗಿದ್ದರೆ ಬೆಳಗಾಗುವುದರೊಳಗೆ ಗಂಧದ ಕಟ್ಟಿಗೆಗಳ ಸಂಖ್ಯೆಯೇ ಕಡಿಮೆಯಾಗಿತ್ತು. ಉಳಿದವೆಲ್ಲ ಎಲ್ಲಿ ಹೋಯಿತೆಂದು ಕಾಂತರಾಜ್ ಮತ್ತವರ ಬಳಗ ಹುಡುಕುತ್ತಿದ್ದರೆ, ಡ್ರೈವರ್ ಮುರಳಿ ಅವರ ತಂದೆ ಕುಡಿದ ಅಮಲಿನಲ್ಲಿ ಗಂಧದ ಕಟ್ಟಿಗೆಗಳನ್ನು ಸುಟ್ಟು ಬಿಸಿನೀರು ಕಾಯಿಸಿಟ್ಟಿದ್ದರಂತೆ! ಅಷ್ಟು ಯಥೇಚ್ಛವಾಗಿ ಶ್ರೀಗಂಧ ದೊರಕುತ್ತಿತ್ತು.

ಸ್ವಾಭಾವಿಕ ಕಾಡುಗಳೆಲ್ಲ ಮರೆಯಾಗಿ ಈಗ ಬರೀ ನೀಲಗಿರಿ ತೋಪುಗಳಿರುವ ಕಾಡುಗಳಿವೆಯಷ್ಟೆ ಎಂದು ಬೇಸರಿಸುವ ಕಾಂತರಾಜ್ ಅವರಿಗೆ ಕಾಡೆಂದರೆ ಆಸರೆ. ಮೊದಲೆಲ್ಲ ಒಂದೋ ಎರಡೋ ಜಂಗಲ್ ಲಾಡ್ಜ್ಗಳಿರುತ್ತಿದ್ದವು. ಈಗ ಅದನ್ನವಲಂಬಿಸಿ ಹತ್ತಿಪ್ಪತ್ತು ರೆಸಾಟ್ ಗಳಾಗಿವೆ. ಪ್ರಾಣಿಗಳಿಗೆ ಪ್ರೈವೆಸಿ ಎನ್ನುವುದೇ ಇಲ್ಲ. ಬೇಟೆಯಾಡುವ ದೃಶ್ಯ ಸಿಕ್ಕಿದ್ದೇ ಎಲ್ಲಾ ಜೀಪುಗಳು ಅಲ್ಲಿಗೇ ದೌಡಾಯಿಸುತ್ತವೆ

” ಮನುಷ್ಯ ಮತ್ತು ಪ್ರಾಣಿ ಪ್ರಪಂಚದ ನಡುವೆ ಒಂದು ಅಂತರ ಇರಲೇಬೇಕು ಎನ್ನುತ್ತಾರೆ ಹೆಚ್.ಸಿ.ಕಾಂತರಾಜ್ ಅವರು.”

ಆಂದೋಲನ ಡೆಸ್ಕ್

Recent Posts

ಗಣೇಶ ಮೆರವಣಿಗೆಗೆ ಮುಸ್ಲಿಮರ ಸಾರಥ್ಯ ; ನಾಗಮಂಗಲದಲ್ಲಿ ಕೋಮು ಸೌಹಾರ್ದದ ಮೆರವಣಿಗೆ

ನಾಗಮಂಗಲ : ಎರಡು ವರ್ಷಗಳ ಹಿಂದೆ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಪಟ್ಟಣ ಕೋಮು…

6 hours ago

ಇ-ಕೆವೈಸಿಗೆ ಗಡುವು ವಿಸ್ತರಣೆ

ಬೆಂಗಳೂರು : ತಾಂತ್ರಿಕ ದೋಷ ಹಾಗೂ ಸರ್ವರ್ ಮಂದಗತಿಯ ಕಾರಣದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಲು ಬಿಪಿಎಲ್, ಎಪಿಎಲ್ ಪಡಿತರದಾರರಿಗೆ…

18 hours ago

ಯುಪಿಐ ಶುಲ್ಕ | ನಮ್ಮ ಕಿಸೆಯೊಳಗೆ ಸರ್ಕಾರದ ಕೈ

ಬಾಲಸುಬ್ರಹ್ಮಣ್ಯ ಕಂಜರ್ಪಣೆ ನಮ್ಮೂರಿನಲ್ಲಿ ಒಬ್ರು ಬಹಳ ಒಳ್ಳೆಯ ಮನುಷ್ಯ ಇದ್ರು. ಅವರು ಕುಡೀತಿರ್ಲಿಲ್ಲ. ಅವರಿಗೆ ಒಂದಿಬ್ಬರು ಗೆಳೆಯರು ಸೇರಿ ಕುಡಿಯೋದನ್ನು…

19 hours ago

ಓದಗರ ಪತ್ರ | ಮರಳಿಗೆ ಮೊಳೆ ಹೊಡೆಯದೇ ದೀಪಾಲಂಕಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಿ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ,…

19 hours ago

ಓದುಗರ ಪತ್ರ | ಮುಷ್ಕರದ ಉದ್ದೇಶವೇ ಭಂಗಗೊಳಿಸುವುದಲ್ಲವೇ ?

ಕಾರ್ಮಿಕರು ಅಥವಾ ವಿಶಾಲಾರ್ಥದಲ್ಲಿ ದುಡಿಯುವ ವರ್ಗಗಳು ತಮ್ಮ ಜೀವನಾವಶ್ಯ-ವೃತ್ತಿಕೇಂದ್ರಿತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಉದ್ಯೋಗದಾತರ ವಿರುದ್ಧ ಮುಷ್ಕರ ಹೂಡುವುದು ಚಾರಿತ್ರಿಕವಾಗಿ ನಡೆದುಬಂದಿರುವಂತಹ…

19 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಅನಂತ್‌ಗೆ ಫಾಲ್ಕೆ : ಕನ್ನಡ ಚಿತ್ರರಂಗಕ್ಕೆ ಅತ್ಯುನ್ನತ ಗೌರವ

ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆಯುವ ಚಿತ್ರಗಳಿದ್ದರೂ, ಆಯಾ ವರ್ಷದಲ್ಲಿನ ಸ್ಪರ್ಧೆಯ ಕಾರಣವೋ ಇನ್ನೇನೋ, ಅನಂತನಾಗ್ ಅವರಿಗೆ ಈ ತನಕ ಆ…

19 hours ago