ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆಯುವ ಚಿತ್ರಗಳಿದ್ದರೂ, ಆಯಾ ವರ್ಷದಲ್ಲಿನ ಸ್ಪರ್ಧೆಯ ಕಾರಣವೋ ಇನ್ನೇನೋ, ಅನಂತನಾಗ್ ಅವರಿಗೆ ಈ ತನಕ ಆ ಪ್ರಶಸ್ತಿ ಬಂದಿರಲಿಲ್ಲ. ಅವರು ಅಭಿನಯಿಸಿದ ‘ಬರ’, ‘ಫಣಿಯಮ್ಮ’, ‘ಆಕ್ಸಿಡೆಂಟ್’, ‘ಮತದಾನ’, ‘ಕಲ್ಲರಳಿ ಹೂವಾಗಿ’ ಮತ್ತು ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು: ಕೊಡುಗೆ ರಾಮಣ್ಣ ರೈ’ ಚಿತ್ರಗಳು ರಾಷ್ಟ್ರಪ್ರಶಸ್ತಿಗೆ ಭಾಜನವಾಗಿದ್ದವು. ಪಿ ವಿ ನಂಜರಾಜೇ ಅರಸರ ‘ಸಂಕಲ್ಪ’ದೊಂದಿಗೆ ಆರಂಭವಾದ ಅವರ ಸಿನಿಮಾ ಯಾನ ಈಗಲೂ ಸಾಗಿದೆ. ಕನ್ನಡ, ದಖನಿ, ಹಿಂದಿ, ತಮಿಳು, ತೆಲುಗು, ಮಲಯಾಳ, ಮರಾಠಿ, ತುಳು ಮತ್ತು ಇಂಗ್ಲಿಷ್ – ಹೀಗೆ ಒಂಬತ್ತು ಭಾಷೆಗಳ ಚಿತ್ರಗಳಲ್ಲಿ ನಟಿಸಿದ ಅನಂತನಾಗ್ ಅವರಿಗೆ ದೇಶದ ಅತ್ಯುನ್ನತ ಚಲನಚಿತ್ರ ಪ್ರಶಸ್ತಿ ಸಂದ ಸುದ್ದಿ ಪ್ರಕಟವಾದಾಗ ೧೯೯೨ರಲ್ಲಿ ಗೌರವ ಆಸ್ಕರ್ ಪ್ರಶಸ್ತಿ ಪಡೆದ ರೇ ನೆನಪಾದರು. ಅವರ ಯಾವುದೇ ಚಿತ್ರಕ್ಕೆ ಆಸ್ಕರ್ ಸಂದಿರಲಿಲ್ಲ. ಅಲ್ಲಿ ಸ್ಪರ್ಧೆಗೆ ಹೋದಂತೆಯೂ ಇಲ್ಲ. ಆದರೆ ೧೯೯೨ರಲ್ಲಿ ವಿಶ್ವ ಸಿನಿಮಾ ರಂಗಕ್ಕೆ ಸಲ್ಲುವ ಅತ್ಯನ್ನತ ಗೌರವ ಅವರಿಗೆ ಸಂದಿತ್ತು.
ಕೆಲವು ಪ್ರಶಸ್ತಿಗಳು ಒಂದು ಕಾಲಘಟ್ಟವನ್ನೇ ಗುರುತಿಸುತ್ತವೆ. ಅನಂತ್ ನಾಗ್ ಅವರಿಗೆ ದೊರೆತಿರುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಇದು ಎಂದರೆ ತಪಾಗಲಾರದು. ಏಕೆಂದರೆ ಇದು ಕೇವಲ ಐದು ದಶಕಗಳಿಗೂ ಮೀರಿದ ಒಬ್ಬ ನಟನ ಅಭಿನಯವನ್ನು ಗೌರವಿಸುವ ಪ್ರಶಸ್ತಿಯಲ್ಲ. ಇದರ ಹಿಂದೆ ಕನ್ನಡ ಚಿತ್ರರಂಗದ ಒಂದು ಮಹತ್ವದ ಪರಿವರ್ತನೆಯ ಕಾಲವಿದೆ. ಮದ್ರಾಸ್ ಕೇಂದ್ರಿತವಾಗಿದ್ದ ದಕ್ಷಿಣ ಭಾರತದ ಚಲನಚಿತ್ರ ಚಟುವಟಿಕೆಗಳ ನಡುವೆ, ಕನ್ನಡ ಚಿತ್ರೋದ್ಯಮ ತನ್ನದೇ ನೆಲದಲ್ಲಿ ನಿಧಾನವಾಗಿ ಬೇರುಬಿಡುತ್ತಿದ್ದ ಕಾಲವಿದೆ. ಆ ಬದಲಾವಣೆಯನ್ನು ಕಂಡ, ಅದರೊಳಗೆ ಕೆಲಸ ಮಾಡಿದ, ಕೆಲವು ಸಂದರ್ಭಗಳಲ್ಲಿ ಅದಕ್ಕೆ ಮೂಲಸೌಕರ್ಯ ನಿರ್ಮಿಸಲು ಪ್ರಯತ್ನಿಸಿದ ಕಲಾವಿದರ ಪೈಕಿ ಅನಂತ್ ನಾಗ್ ಅವರೂ ಒಬ್ಬರು.
ಅನಂತ್ ನಾಗ್ ಅವರ ಅಭಿನಯದ ಬಗ್ಗೆ ಮಾತನಾಡುವಾಗ ಮೊದಲು ನೆನಪಿಗೆ ಬರುವುದು ಅವರ ಸಹಜತೆ. ಅವರು ನಾಯಕನಾದರೂ ನಾಯಕನಂತೆ ವರ್ತಿಸುವುದಿಲ್ಲ. ಅವರು ಪ್ರೇಮಿಸಿದರೂ ಪ್ರೇಮದ ದೃಶ್ಯವನ್ನು ಪ್ರದರ್ಶಿಸುವುದಿಲ್ಲ. ಅವರು ನೋವನ್ನು ಅನುಭವಿಸಿದರೂ ಅದನ್ನು ಪ್ರೇಕ್ಷಕರ ಮೇಲೆ ಹೊರಿಸುವುದಿಲ್ಲ. ಅವರ ಅಭಿನಯದ ದೊಡ್ಡ ಗುಣವೆಂದರೆ ಪಾತ್ರವನ್ನು ಅಭಿನಯಿಸುವ ಬದಲು ಪಾತ್ರದೊಳಗೆ ಬದುಕುವುದು.
ಒಂದೆಡೆ ಶ್ಯಾಮ್ ಬೆನಗಲ್ ಅವರ ಅಂಕುರ’, ನಿಶಾಂತ್’, ಮಂಥನ್’, ಭೂಮಿಕಾ’, ಕೊಂಡುರಾ’, ಕಲಿಯುಗ್’ದಂತಹ ಚಿತ್ರಗಳ ಮೂಲಕ ರಾಷ್ಟ್ರೀಯ ಸಮಾನಾಂತರ ಸಿನಿಮಾದ ಪ್ರಮುಖ ಮುಖವಾದರು; ಮತ್ತೊಂದೆಡೆ ಕನ್ನಡದ ಜನಪ್ರಿಯ ಚಿತ್ರಗಳಲ್ಲಿ ಸಾಮಾನ್ಯ ಪ್ರೇಕ್ಷಕನ ಮನೆಯವನಾದರು. ಐದು ದಶಕಗಳ ಈ ಪಯಣದಲ್ಲಿ ಅವರ ಪಾತ್ರಗಳ ವ್ಯಾಪ್ತಿ ಅವರ ಅಭಿನಯದ ವಿಸ್ತಾರವನ್ನು ತೋರಿಸುತ್ತದೆ.
ಕನ್ನಡ ಚಿತ್ರಗಳ ನಿರ್ಮಾಣದ ಬಹುಮುಖ್ಯ ಚಟುವಟಿಕೆಗಳು ಮದ್ರಾಸಿನಲ್ಲಿದ್ದ ಕಾಲವನ್ನು ಅನಂತ್ ನಾಗ್ ತಮ್ಮ ಕಣ್ಣಾರೆ ಕಂಡವರು. ೧೯೭೦ರ ದಶಕದಲ್ಲಿ ಅವರು ಬೆಂಗಳೂರಿಗೆ ಬಂದು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ, ಮತ್ತೆ ಮುಂಬೈಗೆ ತೆರಳುತ್ತಿದ್ದ ದಿನಗಳಿದ್ದವು. ಅವರು ಸ್ವತಃ ನೆನಪಿಸಿಕೊಂಡಿರುವಂತೆ, ಆ ಕಾಲದಲ್ಲಿ ಬೆಂಗಳೂರಿನ ಸಿನಿಮಾ ಕ್ಷೇತ್ರಕ್ಕೆ ಅಗತ್ಯವಾದ ಹಲವು ವ್ಯವಸ್ಥೆಗಳನ್ನು ರೂಪಿಸುವುದು ಸುಲಭದ ಕೆಲಸವಾಗಿರಲಿಲ್ಲ.
ಇಂತಹ ಸಂದರ್ಭದಲ್ಲಿ ಅನಂತ್ ನಾಗ್ ಮತ್ತು ಅವರ ಸಹೋದರ ಶಂಕರ್ ನಾಗ್ ಸಂಕೇತ್ ಸ್ಟುಡಿಯೊ ಸ್ಥಾಪಿಸಿದ್ದು ಕೇವಲ ಒಂದು ಸ್ಟುಡಿಯೊ ಕಟ್ಟಿದ ಘಟನೆ ಅಲ್ಲ. ಅದು ಬೆಂಗಳೂರಿನಲ್ಲಿ ಸಿನಿಮಾ ನಿರ್ಮಾಣಕ್ಕೆ ಬೇಕಾದ ಸೃಜನಶೀಲ ವಾತಾವರಣವನ್ನು ಬೆಳೆಸುವ ಪ್ರಯತ್ನವೂ ಆಗಿತ್ತು. ಅನಂತ್ ನಾಗ್ ಅವರೇ ಹೇಳಿರುವಂತೆ, ೧೯೮೫ರಲ್ಲಿ ಸ್ಟುಡಿಯೊ ಆರಂಭವಾದಾಗ ಇಲ್ಲಿ ಕೆಲಸ ಮಾಡುತ್ತಿದ್ದ ಸಂಗೀತಗಾರರಿಗೆ ಸಿನಿಮಾ ಸಂಗೀತದ ಅಗತ್ಯಗಳಿಗೆ ಅನುಗುಣವಾಗಿ ತರಬೇತಿ ನೀಡಬೇಕಾಯಿತು. ಹಂಸಲೇಖಾ ಮತ್ತು ಎಲ. ವೈದ್ಯನಾಥನ್ ಮೊದಲಾದವರು ಆ ತರಬೇತಿಯಲ್ಲಿ ನೆರವಾದರು. ಅಂದರೆ, ಸಂಕೇತ್ ಕೇವಲ ರೆಕಾರ್ಡಿಂಗ್ ಸ್ಟುಡಿಯೊ ಆಗಿರಲಿಲ್ಲ; ಬೆಂಗಳೂರಿನಲ್ಲಿ ಸಿನಿಮಾ ಸಂಗೀತದ ವೃತ್ತಿಪರ ಪರಿಸರ ನಿರ್ಮಿಸುವ ಪ್ರಯತ್ನವೂ ಆಗಿತ್ತು. ಶಂಕರ್ ನಾಗ್ ಅಕಾಲಿಕವಾಗಿ ನಿಧನರಾದ ನಂತರ ಆ ಪ್ರಯತ್ನ ದೊಡ್ಡ ಆರ್ಥಿಕ ಹೊರೆಗೂ ಕಾರಣವಾಯಿತು.
ಚಿತ್ರೋದ್ಯಮ ಎಂದರೆ ನಟ-ನಿರ್ದೇಶಕ-ನಿರ್ಮಾಪಕರಷ್ಟೇ ಅಲ್ಲ. ಬೆಳಕಿನ ಹುಡುಗನಿಂದ ಹಿಡಿದು ಮೇಕಪ್ ಕಲಾವಿದ, ಚಾಲಕ, ನೃತ್ಯಗಾರ, ಸ್ಟಂಟ್ ಕಲಾವಿದ, ತಾಂತ್ರಿಕ, ಸಹಾಯಕ-ಸಾವಿರಾರು ಜನರ ದುಡಿಮೆಯ ಮೇಲೆ ನಿಂತಿರುವ ಉದ್ಯಮ ಅದು. ಉದ್ಯಮ ಬೆಳೆದರೆ ಮಾತ್ರ ಕಲಾವಿದನೂ ಬೆಳೆಯುತ್ತಾನೆ. ಒಬ್ಬ ನಟನಿಗೆ ಒಳ್ಳೆಯ ಚಿತ್ರ ಬೇಕು. ಒಳ್ಳೆಯ ಚಿತ್ರಕ್ಕೆ ನಿರ್ಮಾಪಕ ಬೇಕು. ನಿರ್ಮಾಪಕನಿಗೆ ತಂತ್ರಜ್ಞರು ಬೇಕು. ತಂತ್ರಜ್ಞರಿಗೆ ತರಬೇತಿ, ಉದ್ಯೋಗ ಮತ್ತು ಮೂಲಸೌಕರ್ಯ ಬೇಕು. ಅದರ ಹಿಂದೆ ಸ್ಟುಡಿಯೊ, ಪ್ರಯೋಗಾಲಯ, ರೆಕಾರ್ಡಿಂಗ್ ವ್ಯವಸ್ಥೆ, ವಿತರಣಾ ವ್ಯವಸ್ಥೆ, ಪ್ರದರ್ಶನ ವ್ಯವಸ್ಥೆ, ಕಾರ್ಮಿಕರ ಸಂಘಟನೆ-ಒಂದು ಸಂಪೂರ್ಣ ಪರಿಸರ ಬೇಕು. ಆ ಪರಿಸರವನ್ನು ಕಟ್ಟದೆ ಕೇವಲ ಒಳ್ಳೆಯ ನಟರಿಂದ ಒಳ್ಳೆಯ ಚಿತ್ರೋದ್ಯಮ ನಿರ್ಮಾಣ ಆಗುವುದಿಲ್ಲ. ಅನಂತ್ ನಾಗ್ ಪಯಣದ ವೈಶಿಷ್ಟ್ಯವೆಂದರೆ ಅವರು ಈ ಬದಲಾವಣೆಯ ಕಾಲದ ಸಾಕ್ಷಿಯೂ ಹೌದು; ಅದರ ಒಂದು ಭಾಗವೂ ಹೌದು.
ಅವರ ನಟನೆಯ ಮೂಲ ರಂಗಭೂಮಿಯಲ್ಲಿದೆ. ೧೯೬೭ರಿಂದ ೧೯೭೨ರವರೆಗೆ ಕನ್ನಡ, ಕೊಂಕಣಿ, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಐವತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಅವರು ಅಭಿನಯಿಸಿದ್ದರು. ಸತ್ಯದೇವ ದುಬೆ, ಅಮೋಲ್ ಪಾಲೇಕರ್ ಮೊದಲಾದವರೊಂದಿಗೆ ಅವರ ರಂಗಭೂಮಿ ಸಂಬಂಧ ಅವರ ಕಲಾವಿದನ ವ್ಯಕ್ತಿತ್ವವನ್ನು ರೂಪಿಸಿತು. ಆದ್ದರಿಂದ ಅವರ ಸಿನಿಮಾ ಅಭಿನಯದಲ್ಲಿ ರಂಗಭೂಮಿಯ ಶಿಸ್ತು ಇದೆ; ಆದರೆ ರಂಗಭೂಮಿಯ ಛಾಯೆ ಇಲ್ಲ. ಅವರ ಸಂಭಾಷಣೆಯಲ್ಲಿ ಸಾಹಿತ್ಯದ ಸೊಗಡಿದೆ; ಆದರೆ ಸಾಹಿತ್ಯವನ್ನು ಓದುತ್ತಿರುವಂತೆ ಕಾಣುವುದಿಲ್ಲ. ಅವರ ಮುಖದಲ್ಲಿ ಅಭಿನಯವಿದೆ; ಆದರೆ ಅಭಿನಯ ಮಾಡುತ್ತಿರುವ ಮುಖ ಕಾಣುವುದಿಲ್ಲ.ಇದು ಸುಲಭವಾಗಿ ಬರುವ ಗುಣವಲ್ಲ.
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಜನಪ್ರಿಯ ಸಿನಿಮಾ ಮತ್ತು ಕಲಾತ್ಮಕ ಸಿನಿಮಾಗಳ ನಡುವೆ ಒಂದು ಕೃತಕ ಗಡಿ ನಿರ್ಮಾಣವಾಗಿದ್ದ ಕಾಲವಿತ್ತು. ಅನಂತ್ ನಾಗ್ ಆ ಗಡಿಯನ್ನು ದಾಟಿದರು. ಶ್ಯಾಮ್ ಬೆನಗಲ್ ಅವರ ಚಿತ್ರಗಳಲ್ಲಿ ಅಭಿನಯಿಸಿದ ಅದೇ ನಟ ಗಣೇಶನ ಮದುವೆ’, ಗೌರಿ ಗಣೇಶ’ಗಳಲ್ಲೂ ಪ್ರೇಕ್ಷಕರನ್ನು ನಗಿಸಿದರು. ಸಮಾನಾಂತರ ಸಿನಿಮಾದ ಗಂಭೀರ ನಟನೇ ಕನ್ನಡದ ಹಾಸ್ಯಚಿತ್ರಗಳ ಪ್ರಮುಖ ಮುಖವಾದರು. ಜನಪ್ರಿಯತೆ ಗಳಿಸಲು ಕಲಾತ್ಮಕತೆ ತ್ಯಜಿಸಬೇಕಾಗಿಲ್ಲ ಎಂಬುದನ್ನು ಅವರ ಪಯಣ ತೋರಿಸಿತು.
ಅನಂತ್ ನಾಗ್ ಅವರ ದೀರ್ಘ ಪಯಣದ ಇನ್ನೊಂದು ವಿಶೇಷತೆ-ಅವರು ತಮ್ಮ ಕಾಲದ ಸಿಲುಕಿಕೊಂಡಿಲ್ಲ. ಮಾಲ್ಗುಡಿ ಡೇಸ ಮೂಲಕ ಕಿರುತೆರೆಯ ರಾಷ್ಟ್ರೀಯ ಪ್ರೇಕ್ಷಕರನ್ನು ತಲುಪಿದರು. ನಂತರದ ತಲೆಮಾರಿನ ಚಿತ್ರಗಳಲ್ಲೂ ಕಾಣಿಸಿಕೊಂಡರು. ಗೋಽ ಬಣ್ಣ ಸಾಧಾರಣ ಮೈಕಟ್ಟು, ಸರ್ಕಾರಿ ಹಿ.ಪ್ರಾ. ಶಾಲೆ, ಕಾಸರಗೋಡು, ಕವಲುದಾರಿ, ಗಾಳಿಪಟ ೨ ಮೊದಲಾದ ಚಿತ್ರಗಳ ಮೂಲಕ ಹೊಸ ಪೀಳಿಗೆಯ ನಿರ್ದೇಶಕರು ಮತ್ತು ನಟರೊಂದಿಗೆ ಕೆಲಸ ಮಾಡಿದರು. ಹೀಗಾಗಿ ಅನಂತ್ ನಾಗ್ ಅವರ ಐದು ದಶಕಗಳ ಪಯಣವನ್ನು ಕೇವಲ ಹಿರಿಯ ನಟನ ದೀರ್ಘ ವೃತ್ತಿಜೀವನ ಎಂದು ಕರೆಯಲಾಗದು. ಅದು ಕನ್ನಡ ಸಿನಿಮಾದ ಹಲವು ತಲೆಮಾರುಗಳ ನಡುವಿನ ಒಂದು ಜೀವಂತ ಸೇತುವೆ.
೪೩ನೇ ರಾಷ್ಟ್ರೀಯ ಪ್ರಶಸ್ತಿ(೧೯೯೫)ಯ ದಾದಾಸಾಹೇಬ್ -ಲ್ಕೆ ಪ್ರಶಸ್ತಿ ಡಾ. ರಾಜ್ಕುಮಾರ್ ಅವರಿಗೆ ಬಂದಿತ್ತು. ಈಗ, ೩೦ ವರ್ಷಗಳ ನಂತರ, ೭೨ನೇ ರಾಷ್ಟ್ರಪ್ರಶಸ್ತಿ (೨೦೨೪)ಯ ಗೌರವ ಕನ್ನಡದ ಮತ್ತೊಬ್ಬ ಮಹತ್ವದ ನಟ ಅನಂತ್ ನಾಗ್ ಅವರಿಗೆ ಬಂದಿದೆ. ಇಬ್ಬರ ದಾರಿಗಳು ಬೇರೆ. ಆದರೆ ಕನ್ನಡ ಸಿನಿಮಾವನ್ನು ಭಾರತದ ಚಲನಚಿತ್ರ ನಕ್ಷೆಯಲ್ಲಿ ಗುರುತಿಸುವಂತೆ ಮಾಡಿದ ಇಬ್ಬರೂ ಮೇರು ಸದೃಶರು
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಒಬ್ಬ ನಟನ ಅತ್ಯುತ್ತಮ ಅಭಿನಯಕ್ಕೆ ನೀಡುವ ಪ್ರಶಸ್ತಿ ಮಾತ್ರವಲ್ಲ. ಭಾರತೀಯ ಚಿತ್ರರಂಗಕ್ಕೆ ಒಟ್ಟಾರೆ ಕೊಡುಗೆಯನ್ನು ಗುರುತಿಸುವ ಜೀವಮಾನ ಸಾಧನೆಯ ಗೌರವ. ಈ ಗೌರವ ಬಂದಿರುವ ಸಂದರ್ಭದಲ್ಲಿ ಅನಂತ್ ನಾಗ್ ಅವರ ಕೊಡುಗೆಯನ್ನು ಅವರು ಅಭಿನಯಿಸಿದ ಚಿತ್ರಗಳ ಸಂಖ್ಯೆಗೆ ಸೀಮಿತಗೊಳಿಸುವುದಲ್ಲ. ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಹೇಳುವುದು ಸರಿ.
ಸಿನಿಮಾಗಳಲ್ಲಿ ಅವರ ನಟನೆ, ರಂಗಭೂಮಿ, ಸಮಾನಾಂತರ ಸಿನಿಮಾ, ಜನಪ್ರಿಯ ಸಿನಿಮಾ, ಕಿರುತೆರೆ, ಸಂಕೇತ್ ಸ್ಟುಡಿಯೊ, ಬೆಂಗಳೂರಿನಲ್ಲಿ ಸಿನಿಮಾ ಚಟುವಟಿಕೆಗಳಿಗೆ ನೆಲೆ ಕಲ್ಪಿಸುವ ಪ್ರಯತ್ನ, ಚಿತ್ರೋದ್ಯಮದ ಕಾರ್ಮಿಕರ ಪ್ರಶ್ನೆಗಳ ಬಗ್ಗೆ ಕಾಳಜಿ, ಮತ್ತುಐದು ದಶಕಗಳ ಕಾಲ ತನ್ನ ವೃತ್ತಿಯನ್ನು ಒಂದು ಕಲೆಯಂತೆ ನಡೆಸಿದ ಶಿಸ್ತು ಇವೆಲ್ಲಕ್ಕೂ ಸಂದ ಗೌರವ ಅದು.
ಅನಂತ್ ನಾಗ್ ಅವರು ಪ್ರಶಸ್ತಿಯನ್ನು ಕರ್ನಾಟಕಕ್ಕೆ ಅರ್ಪಿಸುತ್ತೇನೆ ಎಂದಿzರೆ. ಇತ್ತೀಚಿನ ಅವರ ಮಾತುಗಳಲ್ಲಿಯೂ ಈ ಗೌರವವನ್ನು ತಮ್ಮ ವೈಯಕ್ತಿಕ ಸಾಧನೆಗಿಂತ ಕರ್ನಾಟಕವನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಿದ ಗೌರವವೆಂದು ಅವರು ನೋಡಿರುವುದು ಸ್ಪಷ್ಟ. ಅದು ಅವರ ಪಯಣವನ್ನು ಅರ್ಥಮಾಡಿಕೊಳ್ಳಲು ಬಹುಶಃ ಅತ್ಯಂತ ಸೂಕ್ತವಾದ ಮಾತು.
ಏಕೆಂದರೆ ಅನಂತ್ ನಾಗ್ ಕನ್ನಡ ಸಿನಿಮಾದಲ್ಲಿ ಕೇವಲ ಪಾತ್ರಗಳನ್ನು ಮಾಡಲಿಲ್ಲ. ಅವರು ಬೆಳೆದದ್ದು ಒಂದು ಚಿತ್ರರಂಗದ ಜೊತೆ. ಆ ಚಿತ್ರರಂಗ ತನ್ನದೇ ನೆಲದಲ್ಲಿ ನಿಲ್ಲಲು ಆರಂಭಿಸಿದಾಗ ಅದರೊಂದಿಗೆ ನಡೆದರು. ಅದು ಬದಲಾಗುತ್ತಿದ್ದಾಗ ತಮ್ಮನ್ನೂ ಬದಲಿಸಿಕೊಂಡರು. ಆದರೆ ನಟನಾಗಿ ತಮ್ಮ ಮೂಲವನ್ನು ಮಾತ್ರ ಬದಲಿಸಲಿಲ್ಲ. ಅದು ಕನ್ನಡದ ನೆಲ. ಹಾಗಾಗಿ ಅನಂತ್ ನಾಗ್ ಅವರಿಗೆ -ಲ್ಕೆ ಪ್ರಶಸ್ತಿ ಸಂದಿರುವುದು ಒಬ್ಬ ಕಲಾವಿದನ ಗೌರವ ಮಾತ್ರವಲ್ಲ; ಕನ್ನಡ ಚಿತ್ರರಂಗದ ಒಂದು ದೀರ್ಘ, ಸಂಕೀರ್ಣ, ಸೃಜನಶೀಲ ಪಯಣಕ್ಕೆ ರಾಷ್ಟ್ರ ನೀಡಿದ ಗೌರವವೂ ಹೌದು.
ಬಾಲಸುಬ್ರಹ್ಮಣ್ಯ ಕಂಜರ್ಪಣೆ ನಮ್ಮೂರಿನಲ್ಲಿ ಒಬ್ರು ಬಹಳ ಒಳ್ಳೆಯ ಮನುಷ್ಯ ಇದ್ರು. ಅವರು ಕುಡೀತಿರ್ಲಿಲ್ಲ. ಅವರಿಗೆ ಒಂದಿಬ್ಬರು ಗೆಳೆಯರು ಸೇರಿ ಕುಡಿಯೋದನ್ನು…
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ,…
ಕಾರ್ಮಿಕರು ಅಥವಾ ವಿಶಾಲಾರ್ಥದಲ್ಲಿ ದುಡಿಯುವ ವರ್ಗಗಳು ತಮ್ಮ ಜೀವನಾವಶ್ಯ-ವೃತ್ತಿಕೇಂದ್ರಿತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಉದ್ಯೋಗದಾತರ ವಿರುದ್ಧ ಮುಷ್ಕರ ಹೂಡುವುದು ಚಾರಿತ್ರಿಕವಾಗಿ ನಡೆದುಬಂದಿರುವಂತಹ…
ನ್ಯಾಯಬೆಲೆ ಅಂಗಡಿಗಳ ಗ್ರಾಹಕರ ಮನವಿಗೆ ಸರ್ಕಾರದ ಸ್ಪಂದನೆ ಅ.1ರಿಂದ ಬೆಳಿಗ್ಗೆ 7ರಿಂದ ಮಧ್ಯಾಹ್ನ 12; ಸಂಜೆ 4ರಿಂದ ರಾತ್ರಿ 8…
ಬೆಂಗಳೂರು : ಕರ್ನಾಟಕದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದ್ದು, ಮೊದಲ ಹಂತದಲ್ಲಿ ಘೋಷಿಸಲಾದ 101…