ಪುನೀತ್
೯೪ ಕೋಟಿ ರೂ. ವೆಚ್ಚದ ಕಾಮಗಾರಿ; ೧೮ ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆ
ಮಡಿಕೇರಿ: ರಾಷ್ಟ್ರೀಯ ಹೆದ್ದಾರಿ ೨೭೫ರಲ್ಲಿ ೨೧ ಅಪಾಯಕಾರಿ ಸ್ಥಳಗಳಲ್ಲಿ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ.
ಬೆಂಗಳೂರಿನಿಂದ ಕರಾವಳಿ ಭಾಗ ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ರಾಷ್ಟ್ರೀಯ ಹೆದ್ದಾರಿ ೨೭೫ನ್ನು ಸುರಕ್ಷಿತ ಮಾರ್ಗ ಮಾಡುವತ್ತ ರಾಷ್ಟ್ರೀಯ ಹೆದ್ದಾರಿ ವಿಭಾಗ ಹೆಜ್ಜೆ ಇಟ್ಟಿದೆ. ಈ ಹೆದ್ದಾರಿಯ ೨೧ ಕಡೆಗಳಲ್ಲಿ ಇರುವ ಅಪಾಯಕಾರಿ ಸ್ಥಳಗಳಲ್ಲಿ ಕಾಂಕ್ರೀಟ್ ತಡೆಗೋಡೆ ಕಟ್ಟಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ.
ಬೆಂಗಳೂರು ಮತ್ತು ಮಂಗಳೂರನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್, ಶಿರಾಡಿ ಘಾಟ್‌ಗಳಲ್ಲಿ ಸಮಸ್ಯೆ ಉಂಟಾದರೆ ಇವೆರಡೂ ನಗರಗಳನ್ನು ಸಂಪರ್ಕಿಸುವ ಪ್ರಮುಖ ಪರ್ಯಾಯ ಮಾರ್ಗವಾಗಿ ಸಂಪಾಜೆ ಘಾಟ್ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ೨೭೫ ಗುರುತಿಸಿಕೊಂಡಿದೆ. ಆದರೆ, ೨೦೧೮ರಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಈ ಹೆದ್ದಾರಿಯೂ ಹಲವೆಡೆ ಕುಸಿದು ಮಡಿಕೇರಿ-ಸುಳ್ಯ ನಡುವೆ ೨ ತಿಂಗಳುಗಳ ಕಾಲ ಸಂಪರ್ಕ ಕಡಿತವಾಗಿತ್ತು.
ನಂತರದ ವರ್ಷಗಳಲ್ಲಿ ಅಪಾಯಕಾರಿ ಸ್ಥಳಗಳಲ್ಲಿ ತಾತ್ಕಾಲಿಕ ಪರಿಹಾರ ಕಾರ್ಯಗಳು ನಡೆದಿರುವುದರಿಂದ ಒಂದೆರಡು ಸ್ಥಳಗಳನ್ನು ಹೊರತುಪಡಿಸಿದರೆ ಉಳಿದ ಕಡೆಗಳಲ್ಲಿ ಸದ್ಯಕ್ಕೆ ಬಹುತೇಕ ಸುರಕ್ಷಿತ ಅನ್ನಬಹುದಾದ ಸ್ಥಿತಿ ಇದೆ.
ರಾಷ್ಟ್ರೀಯ ಹೆದ್ದಾರಿ ವಿಭಾಗದ ೯೪ ಕೋಟಿ ರೂ.ಗಳ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಯೋಜನೆಯ ಮೊತ್ತ ಕೂಡ ಬಿಡುಗಡೆ ಆಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಕಾಮಗಾರಿ ಆರಂಭಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಸ್ತೆ ಮೇಲ್ಭಾಗ ಮತ್ತು ಕೆಳಭಾಗದ ಎರಡೂ ಕಡೆಯೂ ತಡೆಗೋಡೆಗಳ ನಿರ್ಮಾಣ ಕಾರ್ಯ ನಡೆಯಲಿದೆ. ಇಳಿಜಾರು ಪ್ರದೇಶಗಳನ್ನು ಕೇಂದ್ರೀಕರಿಸಿ ಕಾಮಗಾರಿ ನಡೆಯಲಿದೆ.
ರಾಷ್ಟ್ರೀಯ ಹೆದ್ದಾರಿ ೨೭೫ರಲ್ಲಿ ಮಡಿಕೇರಿ- ಸಂಪಾಜೆ ಮಧ್ಯೆ ಕಾಟಕೇರಿ, ಕರ್ತೋಜಿ, ೧ನೇ ಮೊಣ್ಣಂಗೇರಿ, ೨ನೇ ಮೊಣ್ಣಂಗೇರಿ, ಮದೆನಾಡು, ಜೋಡುಪಾಲ ಸೇರಿದಂತೆ ಸುಮಾರು ೨೧ ಕಡೆ ಮಣ್ಣು ಕುಸಿತದ ಸಾಧ್ಯತೆಯನ್ನು ರಾಷ್ಟ್ರೀಯ ಹೆದ್ದಾರಿ ವಿಭಾಗವೇ ಗುರುತಿಸಿದೆ. ಈ ಪೈಕಿ ಮಳೆಯ ಅಬ್ಬರ ಹೆಚ್ಚಾದರೆ ಮದೆನಾಡು ಸಮೀಪದ ಕರ್ತೋಜಿ ಸುತ್ತಮುತ್ತ ರಸ್ತೆಯಲ್ಲೇ ನೀರು ಉಕ್ಕುವ ಸಾಧ್ಯತೆ ಇರುವುದರಿಂದ ಹೆಚ್ಚು ಅಪಾಯಕಾರಿ ಆಗಬಹುದು ಎನ್ನುವುದು ಅಧಿಕಾರಿಗಳ ಆತಂಕ. ಇಲ್ಲಿ ೨೦೦ ಮೀಟರ್ ವ್ಯಾಪ್ತಿಯಲ್ಲಿ ೨ ಕಡೆ ಭೂಕುಸಿತದ ಸಾಧ್ಯತೆಯನ್ನು ಅಂದಾಜಿಸಲಾಗಿದೆ.
ದೀರ್ಘಕಾಲೀನ ಪರಿಹಾರ ಕಲ್ಪಿಸುವ ಸಲುವಾಗಿ ನಡೆಸಲಾಗುವ ೯೪ ಕೋಟಿ ರೂ. ಮೊತ್ತದ ಯೋಜನೆ ೧೮ ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎನ್ನುತ್ತಾರೆ ಅಧಿಕಾರಿಗಳು. ಈಗಾಗಲೇ ಹೆಚ್ಚು ಅಪಾಯಕಾರಿ ಎಂದು ಗುರುತಿಸಲಾಗಿರುವ ಕರ್ತೋಜಿ ಭಾಗದಿಂದಲೇ ಕಾಮಗಾರಿ ಆರಂಭಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಇದರ ಜತೆಗೆ ಈ ಭಾಗದಲ್ಲಿ ತುರ್ತು ಪರಿಸ್ಥಿತಿ ಎದುರಾದರೆ ಅದನ್ನು ಎದುರಿಸಲು ಕೂಡ ರಾಷ್ಟ್ರೀಯ ಹೆದ್ದಾರಿ ವಿಭಾಗ ಸಜ್ಜಾಗಿದೆ.
” ರಾಷ್ಟ್ರೀಯ ಹೆದ್ದಾರಿ ೨೭೫ರಲ್ಲಿ ೭೮ ಕಿ.ಮೀ. ನಿಂದ ೧೨೫ ಕಿ.ಮೀ. ತನಕ ೪೭ ಕಿ.ಮೀ. ವ್ಯಾಪ್ತಿಯಲ್ಲಿ ೨೧ ಕಡೆಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸುವ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದೆ. ೯೪ ಕೋಟಿ ರೂ. ವೆಚ್ಚದ ಈ ಯೋಜನೆಯ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಗುತ್ತಿಗೆದಾರರಿಗೆ ಕಾಮಗಾರಿಯ ಆದೇಶವನ್ನೂ ನೀಡಲಾಗಿದೆ. ಹೆಚ್ಚು ಅಪಾಯಕಾರಿ ಎಂದು ಗುರುತಿಸಲಾಗಿರುವ ಕರ್ತೋಜಿ ಭಾಗದಲ್ಲಿ ಮೊದಲು ಕಾಮಗಾರಿ ಆರಂಭಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಸದ್ಯದಲ್ಲೇ ಕೆಲಸ ಆರಂಭವಾಗಲಿದೆ.”
-ಗಿರೀಶ್, ಎಇಇ, ರಾಷ್ಟ್ರೀಯ ಹೆದ್ದಾರಿ ವಿಭಾಗ
ನಾಗಮಂಗಲ : ಎರಡು ವರ್ಷಗಳ ಹಿಂದೆ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಪಟ್ಟಣ ಕೋಮು…
ಬೆಂಗಳೂರು : ತಾಂತ್ರಿಕ ದೋಷ ಹಾಗೂ ಸರ್ವರ್ ಮಂದಗತಿಯ ಕಾರಣದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಲು ಬಿಪಿಎಲ್, ಎಪಿಎಲ್ ಪಡಿತರದಾರರಿಗೆ…
ಬಾಲಸುಬ್ರಹ್ಮಣ್ಯ ಕಂಜರ್ಪಣೆ ನಮ್ಮೂರಿನಲ್ಲಿ ಒಬ್ರು ಬಹಳ ಒಳ್ಳೆಯ ಮನುಷ್ಯ ಇದ್ರು. ಅವರು ಕುಡೀತಿರ್ಲಿಲ್ಲ. ಅವರಿಗೆ ಒಂದಿಬ್ಬರು ಗೆಳೆಯರು ಸೇರಿ ಕುಡಿಯೋದನ್ನು…
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ,…
ಕಾರ್ಮಿಕರು ಅಥವಾ ವಿಶಾಲಾರ್ಥದಲ್ಲಿ ದುಡಿಯುವ ವರ್ಗಗಳು ತಮ್ಮ ಜೀವನಾವಶ್ಯ-ವೃತ್ತಿಕೇಂದ್ರಿತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಉದ್ಯೋಗದಾತರ ವಿರುದ್ಧ ಮುಷ್ಕರ ಹೂಡುವುದು ಚಾರಿತ್ರಿಕವಾಗಿ ನಡೆದುಬಂದಿರುವಂತಹ…
ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆಯುವ ಚಿತ್ರಗಳಿದ್ದರೂ, ಆಯಾ ವರ್ಷದಲ್ಲಿನ ಸ್ಪರ್ಧೆಯ ಕಾರಣವೋ ಇನ್ನೇನೋ, ಅನಂತನಾಗ್ ಅವರಿಗೆ ಈ ತನಕ ಆ…