ಸುರೇಶ ಕಂಜರ್ಪಣೆ

ದೆಹಲಿಯ ಯುವ ಜನಾಂಗದ ಪ್ರತಿಭಟನೆ ದೇಶದ ಗಮನ ಸೆಳೆದಿದೆ. ಎಲ್ಲ ಚಳವಳಿಗಳ ಆರಂಭಿಕ ಶಂಕೆ, ಆತಂಕಗಳನ್ನು ಮೀರಿ ಈ ಚಳವಳಿ ಬೆಳೆದಿದೆ. ಇದು ಇನ್ನಷ್ಟು ವಿಸ್ತಾರವಾದ ವಿಷಯಗಳ ಕಾರ್ಯಸೂಚಿ ಇಟ್ಟುಕೊಳ್ಳಬೇಕಿತ್ತು ಎಂದು ನಾನೇ ಹೇಳಿದ್ದಿದೆ. ಚಳವಳಿಗಳು ಕಾಳ್ಗಿಚ್ಚಿನ ಹಾಗೆ ಗಾಳಿ ಬೀಸಿದಂತೆ ಹರಡಿಕೊಳ್ಳುತ್ತಾ ಹೋಗುತ್ತವೆ. ಬಹುತೇಕ ಚಳವಳಿಗಳ ಬಗ್ಗೆ ಒಂದು ಮಾತಿದೆ, ಪ್ರಭುತ್ವದ ದಮನದ ಪ್ರಮಾಣಕ್ಕನುಗುಣವಾಗಿ ಚಳವಳಿಗಳು ಬೆಳೆಯುತ್ತವೆ; ಪ್ರಭುತ್ವ ದಮನಿಸಿದಷ್ಟೂ ಇವು ಉಗ್ರವಾಗುತ್ತವೆ. ಸಮೂಹದ ಮನೋಧರ್ಮವೇ ಹಾಗೆ. ಜಾಣ ಪ್ರಭುತ್ವವಾಗಿದ್ದರೆ ರಾಜನನ್ನು ಉಳಿಸಲು ಕಾಲಾಳುವನ್ನು ಬಲಿಕೊಟ್ಟ ಹಾಗೆ ಒಬ್ಬ ಸಚಿವನನ್ನು ಮೊದಲೇ ಬಲಿ ಕೊಟ್ಟು ತಣ್ಣಗೆ ಮಾಡುತ್ತಿತ್ತು. ಆದರೆ ಮೋದಿ ಸರ್ಕಾರದ ಚಹರೆ ಬೇರೆಯಾಗಿತ್ತು ಅನಿಸುತ್ತದೆ.

ಕಳೆದೊಂದು ದಶಕದಿಂದ ವ್ಯಕ್ತಿಪೂಜೆಯನ್ನು ಪ್ರೋತ್ಸಾಹಿಸುತ್ತಾ ಪ್ರಶ್ನಾತೀತ ನಾಯಕನೆಂಬ ವರ್ಚಸ್ಸು ಬಿಂಬಿಸುತ್ತಾ ಬಂದ ಒಬ್ಬ ನಾಯಕನಿಗೆ ಸವಾಲುಗಳನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ಇಷ್ಟು ದಿನವೂ ಸವಾಲುಗಳು ಎದುರಾದಾಗ ಬಾಯಿ ಮುಚ್ಚಿ ಕೂತು ಅದು ನಿರಸನಗೊಳ್ಳಲು ಕಾದು ಮತ್ತೆ ಮುಂದೆ ಹೋಗುವ ಒಂದು ತಂತ್ರವನ್ನು ಮೋದಿ ಖಾಯಂ ಆಗಿ ಬಳಸುತ್ತಿದ್ದಾರೆ! ಇರಲಿ. ಯುದ್ಧದ ಇನ್ನೊಂದು ಮಾತಿದೆ. ಕೋಟೆಗೆ ಮುತ್ತಿಗೆ ಹಾಕಿದಾಗ ಕೋಟೆಯ ಗೋಡೆಯ ಅಭದ್ರ ಭಾಗವನ್ನು ಹುಡುಕುತ್ತಿದ್ದರಂತೆ. ಪಸೆ ಬಂದಿರೋ ಭಾಗ! ಅಲ್ಲಿಗೆ ಹೊಡೆದರೆ ಪುಸಕ್ಕನೆ ಅದು ಕುಸಿಯುತ್ತದೆ ಮತ್ತೆ ಉಳಿದ ಭಾಗ ಕೆಡವುವುದು ಕಷ್ಟವಲ್ಲ (ಮೃಚ್ಛ ಕಟಿಕಾದಲ್ಲಿ ಕಳ್ಳನೊಬ್ಬ ಅವನು ಬ್ರಾಹ್ಮಣ- ಮನೆಗೆ ಕನ್ನ ಹಾಕಲು ಬಂದು ಗೋಡೆ ಪರೀಕ್ಷಿಸುತ್ತಾನೆ. ಇರುವೆ ಹೊರಬರುವ ಭಾಗ ನೋಡಿ ಅಲ್ಲಿ ಟೊಳ್ಳಿದೆ ಎಂದು ತೀರ್ಮಾನಿಸುತ್ತಾನೆ) ಈ ಪ್ರಧಾನ್, ಮೋದಿ ಸರ್ಕಾರದ ದುರ್ಬಲ ಗೋಡೆ. ಅಸಲಿಗೆ ಬಹುತೇಕ ಸಚಿವರೂ ದುರ್ಬಲರೇ, ಅಮಿತ್ ಶಾ ಬಿಟ್ಟು! ಅವರವರ ಖಾತೆಯ ಬಿಕ್ಕಟ್ಟುಗಳು ಬಂದರೆ ಸರಿಪಡಿಸಲೂ ಬರುವುದಿಲ್ಲ, ಸಮರ್ಥಿಸಲೂ ಬಾರದ ಉಗ್ಗು ಬಡುಕರು. ಆದ್ದರಿಂದಲೇ ಯಃಕಶ್ಚಿತ್ ಸಚಿವನೊಬ್ಬನ ರಾಜೀನಾಮೆ ಅಂದರೆ ಚಕ್ರವರ್ತಿಗೇ ಎಸೆದ ಸವಾಲು ಎಂಬುದು ಸ್ಪಷ್ಟ. ಈತನನ್ನು ಬಲಿಕೊಡುವುದೂ ಹೇಡಿತನದ ಸಂಕೇತ ಎಂದು ಮೋದಿ ತೀರ್ಮಾನಿಸಿದಂತಿತ್ತು ಎಂದು ಅನಿಸುತ್ತದೆ. ಮೋದಿ ಸರ್ಕಾರ ನಡೆದುಕೊಂಡ ರೀತಿ ವರ್ತನೆಯೂ ಕಾಲದ ಬೆಳವಣಿಗೆ. ಈ ಘಟನಾವಳಿಗಳಲ್ಲಿ ಎರಡು ಅಂಶಗಳನ್ನು ನಾವು ವಿಶ್ಲೇಷಿಸಬೇಕಾಗಿದೆ.

ಒಂದು, ಪ್ರಭುತ್ವದ ಚಹರೆ. ಅದು ಪ್ರಜಾಸತ್ತಾತ್ಮಕ ಎಂದು ನಾವು ಭಾವಿಸಿದ್ದೇವೆ. ಆದರೆ ಅದಕ್ಕೆ ವ್ಯವಸ್ಥೆಯ ಅಂಗಗಳ ಮೇಲೆ ಎಂಥಾ ಕಪಿಮುಷ್ಠಿ, ಇರುತ್ತದೆಂದರೆ ಅದನ್ನು ಚುನಾವಣೆ ಅಲ್ಲದೇ ಅಲ್ಲಾಡಿಸುವುದು ಯಮ ಯಾತನೆಯ ಕೆಲಸ. ಪ್ರಜಾಸತ್ತೆ ಬೆಳೆಯುತ್ತಾ ಪ್ರಜೆಗಳ ಬಲ ಸಂವರ್ಧನೆ ಆಗುತ್ತದೆ ಎಂಬ ವಿಕಾಸವಾದದ ನಂಬಿಕೆ ಈಗೆರಡು ದಶಕದವರೆಗೂ ಇತ್ತು. ಆದರೆ ಕಾರ್ಪೋರೇಟ್ ಆರ್ಥಿಕ ನಿಯಂತ್ರಣ ಮತ್ತು ತಂತ್ರಜ್ಞಾನಗಳು ಬೆಳೆದಂತೆ, ಪ್ರಭುತ್ವ ಅದನ್ನು ಪ್ರಜೆಗಳನ್ನು ನಿಯಂತ್ರಿಸಲು ಬಳಸುತ್ತಿದೆ. ನಮ್ಮ ಎಲ್ಲಾ ಚಲನವಲನ, ವ್ಯಾಪಾರ ವಹಿವಾಟುಗಳ ದಾಖಲೆಯಿಂದ ಹಿಡಿದು ಪ್ರತಿಯೊಂದರ ಮೇಲೂ ನಿಗಾ ಇಡುತ್ತಿದೆ. ಸಾಮಾಜಿಕ ಮಾಧ್ಯಮಗಳನ್ನೂ ಮುಖ್ಯ ವಾಹಿನಿ ಮಾಧ್ಯಮಗಳನ್ನೂ ಸರ್ಕಾರ ನಿಯಂತ್ರಿಸುವ ಬಗೆ ನಮಗೆ ಗೊತ್ತೇ ಇದೆ. ಇದರೊಂದಿಗೆ ಜಾಗತೀಕರಣ ಉದ್ಘಾಟನೆಯಾದ ಬಳಿಕ ಮಾಧ್ಯಮಗಳೂ ಕಾರ್ಪೋರೇಟೀಕರಣಗೊಂಡು, ಮಾಧ್ಯಮಗಳು ಬಹುತೇಕ ಆಳುವ ಪ್ರಭುತ್ವದ ಹಿತಾಸಕ್ತಿಗೆ ತಕ್ಕಂತೆ ಕೆಲಸ ಮಾಡುತ್ತಿವೆ. ಇದನ್ನು ಮುರ್ಡೋಕೀಕರಣ ಎನ್ನುತ್ತಾರೆ. (ರೂಪರ್ಟ್ ಮುರ್ಡೋಕ್ ಎಂಬ ಮಾಧ್ಯಮ ಮೊಗಲ್ ಶುರು ಮಾಡಿದ ಕೆಲಸ ಇದು.) ಆದ್ದರಿಂದಲೇ ತನ್ನ ವಿರುದ್ಧ ಯಾವುದೇ ಅಸಮಾಧಾನ, ಅತೃಪ್ತಿ ಸ್ಛೋಟವಾಗಿ ಅದುಪ್ರತಿಭಟನೆಯ ಸ್ವರೂಪ ಪಡೆಯುತ್ತಿದ್ದಂತೆ ಪ್ರಭುತ್ವ ಅದನ್ನು ಸಂವಹನ ಮಾಧ್ಯಮಗಳ ಮೂಲಕವೇ ಹಣಿಯಲು ನೋಡುತ್ತದೆ. ಹೆಸರು ಕೆಡಿಸುವ ಸಂಚಿನ ಗುಮಾನಿಗಳನ್ನು ಛೂ ಬಿಡುತ್ತದೆ. ಇದಾದ ಬಳಿಕವೇ ಸಾಂಪ್ರದಾಯಿಕ ದಮನದ ಪೊಲೀಸ್ ಕಾರ್ಯಾಚರಣೆ ಆರಂಭಿಸುವುದು. ಇಂಥ ದಮನ ಮಾರ್ಗಗಳ ಕುತಂತ್ರಕ್ಕೆ ಹತ್ತು ಹಲವು ಚಳವಳಿಗಳು ಬಸವಳಿದು ಹೋಗಿವೆ.

ದಶಕಗಳ ಹಿಂದೆ ಭಾರತದ ಚಡಪಡಿಕೆಗಳು ಹೋರಾಟ ಚಳವಳಿಗಳ ಮೂಲಕ ವ್ಯಕ್ತವಾಗುತ್ತಿದ್ದಾಗ ವಿ.ಎಸ್.ನೈಪಾಲ್ ಭಾರತವನ್ನು ದಶಲಕ್ಷ ದಂಗೆಗಳ ದೇಶವೆಂದು ಕರೆದಿದ್ದ. ಈಗ ಪ್ರಭುತ್ವದ ದಶಲಕ್ಷ ದಮನದ ದೇಶವೆಂದು ಕರೆಯಬಹುದು. ಆದರೂಜನ ಬೀದಿಗಿಳಿಯುತ್ತಿದ್ದಾರೆ. ಒಂದು ಅಸ್ಪಷ್ಟ ಉದ್ವಿಗ್ನತೆ ಇದ್ದಾಗಲಷ್ಟೇ ಜನ ಪರಿಣಾಮ ಲೆಕ್ಕಿಸದೇ ಬೀದಿಗಿಳಿಯುತ್ತಾರೆ. ಇದನ್ನು ಹಣಿಯಲು ನಿರಂಕುಷ ಪ್ರಭುತ್ವದಲ್ಲೂ ಅಸ್ತ್ರಗಳಿಲ್ಲ.ಹೆಚ್ಚೆಂದರೆ ಪೊಲೀಸ್ ಮೂಲಕ ಬಲಿ ಹಾಕಬಹುದು. ಇದು ಬೆಂಕಿಗೆ ತುಪ್ಪ ಸುರಿದಂತೆ ಆದರೆ ಇನ್ನೂ ಕಷ್ಟ.

ಐವತ್ತು ವರ್ಷಗಳ ಮೊದಲು ಕುಲದೀಪ್ ನಯ್ಯಾರ್ ಒಂದು ಲಕ್ಷಣವನ್ನು ಗಮನಿಸಿದ್ದರು. ಅವರು ಅದನ್ನು ಚುನಾವಣೆಯ ಕಾಲ ಮತ್ತು ಚುನಾವಣೆಗಳ ನಡುವಿನಕಾಲ ಎನ್ನುತ್ತಾರೆ. ಚುನಾವಣೆಯ ಒಂದು ತಿಂಗಳ ಅವಽಯಲ್ಲಿ ಒಂದು ಲಕ್ಷ ಮಂದಿಯ ಪ್ರತಿಕ್ರಿಯೆಯೂ ಪರಿಣಾಮ ಬೀರದು. ಆದರೆ ಚುನಾವಣೆಗಳ ಮಧ್ಯಂತರದಲ್ಲಿ ಹತ್ತು ಸಾವಿರದ ಸಮೂಹವೂ ಪರಿಣಾಮಕಾರಿ ಅಂತ. ಎಷ್ಟೆಲ್ಲಾ ನಿಯಂತ್ರಣದ ವಾಮಮಾರ್ಗಗಳನ್ನು ಪ್ರಭುತ್ವ ಹುಡುಕಿದರೂ ಸಮೂಹ ಅಸಂಖ್ಯವಾದಾಗ ಅದರ ಪ್ರವಾಹೋಪಾದಿ ಶಕ್ತಿ ಬೇರೆಯೇ. ಆ ಬಗೆಯ ಒಂದು ಸ್ವಭಾವ ದೆಹಲಿಯ ಚಳವಳಿಯಲ್ಲಿ ಕಂಡಿತು. ಆದರೆ ಅದು ದೇಶದ ವಿವಿಧ ಭಾಗಗಳಿಗೆ ಕಾಳ್ಗಿಚ್ಚಿನಂತೆ ಹರಡಿದಾಗಷ್ಟೇ ಪರಿಣಾಮಕಾರಿ. ಇದು ಎರಡನೇ ಅಂಶದತ್ತ ನಮ್ಮ ಗಮನ ಹೊರಳಿಸುತ್ತದೆ.

ಯಾವ ಯಾವ ಇಶ್ಯೂಗಳು ಹೆಣೆದುಕೊಂಡಾಗ ಸರ್ಕಾರ ದಿಕ್ಕೆಡುತ್ತದೆ ಎಂಬ ಪ್ರಶ್ನೆ. ಸ್ಥಳೀಯವಾಗಿ ಪ್ರಭುತ್ವದ ಜನ ವಿರೋಧಿ ಕಾರ್ಯಗಳತ್ತ ಬೆಳಕು ಚೆಲ್ಲಿ ಅವನ್ನೆಲ್ಲಾ ಒಂದು ಹೆಣಿಗೆಯಲ್ಲಿಟ್ಟರೆ ಆಗ ಭಾಗವಹಿಸುವಿಕೆಗೆ ವಿಸ್ತಾರವೂ ಬರುತ್ತದೆ. ಉತ್ಕಟತೆಯೂ ಇರುತ್ತದೆ. ಕರ್ನಾಟಕವನ್ನೇ ತೆಗೆದುಕೊಳ್ಳಿ, ಈಗ ದೆಹಲಿಗೆ ಬೆಂಬಲದ ನಮ್ಮ ಬಹುತೇಕ ಪ್ರತಿಭಟನೆಗಳೆಲ್ಲಾ ಪ್ರಭುತ್ವ ಸಹಿಸುವ ಸಾಂಕೇತಿಕ ಪ್ರತಿಭಟನೆ. ಸಾಲಿಡಾರಿಟಿ ತೋರುವ ಸ್ಪಂದನೆ. ಇದು ಬೇಕು. ಆದರೆ ಇದು ಪ್ರಭುತ್ವದ ನಿದ್ದೆ ಗೆಡಿಸದು. ನಮ್ಮ ವಿರೋಧಾಭಾಸವೆಂದರೆ ದೆಹಲಿಯ ಕೇಂದ್ರ ಸರ್ಕಾರವನ್ನು ಭಾಜಪ ಸರ್ಕಾರವೆಂದೂ ಕರ್ನಾಟಕದ ರಾಜ್ಯ ಸರ್ಕಾರವನ್ನು ಕಾಂಗ್ರೆಸ್ ಸರ್ಕಾರವೆಂದೂ ಗುರುತಿಸುವುದು! ಕೋಮು ಅಜೆಂಡಾ ಬಿಟ್ಟರೆ, ಆರ್ಥಿಕ ನೀತಿ, ಪರಿಸರ ನೀತಿ, ಶಿಕ್ಷಣ ನೀತಿ, ಅಧಿಕಾರ ಕೇಂದ್ರೀಕರಣದ ಸ್ವಭಾವಗಳಲ್ಲಿ ಕೇಂದ್ರ ಸರ್ಕಾರಕ್ಕೂ ರಾಜ್ಯ ಸರ್ಕಾರಕ್ಕೂ ಏನು ವ್ಯತ್ಯಾಸ ಇದೆ? ಎರಡು ಉದಾಹರಣೆ ನೋಡಿ.

ಮೊದಲನೆಯದು ಬಿಡದಿಯ ಭೂಸ್ವಾಧೀನ. ಈ ಜಮೀನಿನ ವ್ಯಾವಹಾರಿಕ ನಗರೀಕರಣದ ಯೋಜನೆಯಲ್ಲಿ ಕೆಲಸ- ಮೋಜಿನ ಸೂಚಿಗಳನ್ನು ಸರ್ಕಾರವೇ ಮುಂದಿಟ್ಟಿದೆ. ಈ ಕಾರ್ಪೋರೇಟ್ ಹೂಡಿಕೆ ಇಲ್ಲದೇ ಬದುಕೇ ಸಾಧ್ಯವಿಲ್ಲ ಎಂಬ ನೀತಿ ಫಲಕವನ್ನು ಸರ್ಕಾರ ಝಳಪಿಸುತ್ತಿದೆ. ಈ ಹಾದಿಗೆ ಯಾರು ಅಡ್ಡಿ ಬಂದರೂ ಒರೆಸಿ ಹಾಕುವ ನಿಲುವು ಸರ್ಕಾರದ್ದು. ಇದು ಮೋದಿ ಸರ್ಕಾರದ ನೀತಿಯ ನೇರ ಅಳವಡಿಕೆ ಮತ್ತು ಮುಂದುವರಿಕೆ. ಎರಡನೆಯದು ಇನ್ನೂ ಆಳ ಪರಿಣಾಮ ಉಳ್ಳದ್ದು. ಹೊಸ ಶಿಕ್ಷಣ ನೀತಿ ಏನೇ ಸ್ಥಳೀಯ ಭಾಷಾ ಶಿಕ್ಷಣದ ವೈಯಾರದ ಮಾತುಗಳನ್ನಾಡಿದರೂ ಅದರ ಒಟ್ಟಾರೆ ಒತ್ತು ಇಂಗ್ಲಿಷ್ ಶಿಕ್ಷಣ ಮತ್ತು ಖಾಸಗೀಕರಣದತ್ತ ಇದೆ. ಇಂಗ್ಲಿಷ್ ಮೀಡಿಯಂ ಇಲ್ಲದಿದ್ದರೆ ನಮ್ಮ ಮಕ್ಕಳ ಭವಿಷ್ಯ ಶೂನ್ಯ ಎಂಬ ನಂಬಿಕೆಯನ್ನು ಸಾರ್ವತ್ರಿಕಗೊಳಿಸಲಾಗಿದೆ. ಇದೇ ಕಾರಣಕ್ಕೆ ಕರ್ನಾಟಕ ಸರ್ಕಾರ ಏಳುವರ್ಷ ಮೊದಲುಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸಿತ್ತು. ಈ ವರ್ಷ ಸಾವಿರಾರು ಶಾಲೆಗಳಲ್ಲಿ ಆರಂಭ ಮಾಡಿ ಈ ಸಂಖ್ಯೆ ಹೆಚ್ಚಿಸಲಾಗುತ್ತಿದೆ.

ಮೊನ್ನೆ ಬಂದ ಸುದ್ದಿ ನೋಡಿ!! ಏಳುವರ್ಷಗಳ ಮೊದಲು ಆರಂಭವಾದ ಇಂಗ್ಲಿಷ್ ಮೀಡಿಯಂನಲ್ಲಿ ಓದಿದ ಮಕ್ಕಳೂ ಏಳನೇ ತರಗತಿ ಪಾಸಾದ ಮೇಲೆ ಸರ್ಕಾರಿ ಶಾಲೆಗೆ ಸೇರೋಣವೆಂದರೆ ಸರ್ಕಾರಿ ಹೈಸ್ಕೂಲಲ್ಲಿ ಇಂಗ್ಲಿಷ್ ಮಾಧ್ಯಮ ಇಲ್ಲವಂತೆ! (ಮಾಧ್ಯಮದ ತಾತ್ವಿಕ ಚರ್ಚೆ ಬೇರೆ)ಗ್ರಾಮಾಂತರದ ಬಡ ಮಕ್ಕಳೂ ಇವರು. ಈಗ ಈ ಮಕ್ಕಳೂ ಖಾಸಗಿ ಶಾಲೆಗೆ ಸೇರಬೇಕು. ಅರ್ಥಾತ್ ಸರ್ಕಾರ ಖಾಸಗಿ ಶಾಲೆಗಳ ದಳ್ಳಾಳಿ ಕೆಲಸ ಮಾಡಿದೆ. ಈ ದ್ರೋಹ ನೀಟ್ ಪರೀಕ್ಷೆ ಪತ್ರಿಕೆಗಳ ಲೀಕಿಗಿಂತ ಹೇಗೆ ಕಡಿಮೆ? ಇದನ್ನು ಅರ್ಥ ಮಾಡಿಕೊಂಡರೆ ಈ ಪಕ್ಷದ ಲೇಬಲ್ ಕೇವಲ ಪಾಳಿಯ ನೌಕರರ ಲೇಬಲ್ ಅಷ್ಟೇ!! ಅಲ್ಲಾಗಲೀ, ಇಲ್ಲಾಗಲೀ, ಪ್ರಭುತ್ವದ ಗುರಿ, ಕಾರ್ಯಸೂಚಿ ಒಂದೇ ಎಂಬುದು ಅರ್ಥವಾದರೆ ದೆಹಲಿಯ ಹೋರಾಟ ಕರ್ನಾಟಕದಲ್ಲೂ ಕೊಂಚ ಬೇರೆ ವಿಷಯಗಳ ಬೆಡಿ ಚರೆ ತುಂಬಿಸಿ ಮುಂದುವರಿಯಬಹುದು; ಮುಂದುವರಿಯಬೇಕು. ಆಗ ಏನಿಲ್ಲವೆಂದರೂ ಪ್ರಭುತ್ವದ ಮೂಲ ಲಕ್ಷಣದ ಅರಿವಾದರೂ ಮೂಡೀತು. ವ್ಯವಸ್ಥೆ ಬದಲಾಗುತ್ತದೋ ಎಂಬುದು ಮುಂದಿನ ಮಾತು!

” ಕೋಮು ಅಜೆಂಡಾ ಬಿಟ್ಟರೆ, ಆರ್ಥಿಕ ನೀತಿ, ಪರಿಸರ ನೀತಿ, ಶಿಕ್ಷಣ ನೀತಿ, ಅಧಿಕಾರ ಕೇಂದ್ರೀಕರಣದ ಸ್ವಭಾವಗಳಲ್ಲಿ ಕೇಂದ್ರ ಸರ್ಕಾರಕ್ಕೂ ರಾಜ್ಯ ಸರ್ಕಾರಕ್ಕೂ ಏನು ವ್ಯತ್ಯಾಸ ಇದೆ?”

 

 

ಆಂದೋಲನ ಡೆಸ್ಕ್

Recent Posts

‘ಅಂಕಲ್ ಚೋಕ್’ ಕಟ್ಟಿದ ಬಿದಿರಿನ ಮಾಯಾಲೋಕ

ಜಿ.ಕೃಷ್ಣ ಪ್ರಸಾದ್ ‘ಇಂದು ನಿಮ್ಮನ್ನು ಬಿದಿರಿನ ಲೋಕಕ್ಕೆ ಕರೆದೊಯ್ಯುತ್ತೇನೆ’. ಬೆಳಿಗ್ಗೆ ಕಾಫಿ ಕುಡಿಯುತ್ತಿದ್ದಾಗ ಗೆಳೆಯ ಮೈಕೆಲ್ ಕಾಮನ್ಸ್ ಹೇಳಿದ ಈ…

2 mins ago

ಮುಚ್ಚುತ್ತಿರುವ ಚಿತ್ರಮಂದಿರ

ಮಧುಕರ ಎಂ.ಎಲ್. ಒಂದು ಕಾಲದಲ್ಲಿ ಚಲನಚಿತ್ರವೇ ನಮ್ಮ ಮನರಂಜನೆ ಮಾಧ್ಯಮವಾಗಿದ್ದು, ಪೌರಾಣಿಕ ಕಥೆಗಳು, ರಾಮಾಯಣ ಕಥೆಗಳು, ಮಹಾಭಾರತ ಪ್ರಸಂಗಗಳು ಚಲನಚಿತ್ರವಾಗಿ…

6 mins ago

ವಿರಾಜಪೇಟೆ: ರಸ್ತೆಯುದ್ದಕ್ಕೂ ಗುಂಡಿಗಳದ್ದೇ ಪಾರಮ್ಯ

ಕಾಂಗೀರ ಬೋಪಣ್ಣ ವಿರಾಜಪೇಟೆ: ತಾಲ್ಲೂಕಿನಲ್ಲಿನ ಮುಖ್ಯರಸ್ತೆಗಳು ವಾಹನಗಳು ಸಂಚರಿಸಲಾರದಷ್ಟು ಹಾಳಾಗಿದ್ದು, ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಈ…

14 mins ago

ಇದು ಅಂತ್ಯವಲ್ಲ-ಹೊಸ ಆರಂಭ

ರೇಣುಕಾ ನಿಡುಗುಂದಿ ಜಂತರ್ ಮಂತರ್‌ನಲ್ಲಿ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಇಂದು ತಾತ್ಕಾಲಿಕ ನೈತಿಕ ಗೆಲುವು ದೊರೆತಿದೆ. ಕೇಂದ್ರ ಶಿಕ್ಷಣ ಸಚಿವ…

19 mins ago

ಎಸ್‌ಐಆರ್ ಅರ್ಜಿ; ಅನಿವಾರ್ಯ ಮರ್ಜಿ

ಚಿರಂಜೀವಿ ಸಿ ಹುಲ್ಲಹಳ್ಳಿ ಗ್ರಾಮೀಣ ಭಾಗಗಳಲ್ಲಿ ಸಮಸ್ಯೆ ಇನ್ನಷ್ಟು ಗಂಭೀರವಾಗಿದೆ. ಹಲವು ಗ್ರಾಮಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಕುರಿತು ಸಮರ್ಪಕ ಜಾಗೃತಿಯೇ…

23 mins ago

ಮಿರ್ಲೆ-ಭೇರ್ಯ-ಕೊಡಿಯಾಲ ರಸ್ತೆ ಅಭಿವೃದ್ಧಿ ಯಾವಾಗ?

ಭೇರ್ಯ ಮಹೇಶ್ ಪ್ರತಿನಿತ್ಯ ಈ ಹದಗೆಟ್ಟ ರಸ್ತೆಯಲ್ಲಿ ಸಂಚರಿಸುವವರಿಗೆ ಸಮಸ್ಯೆ; ಅಧಿಕಾರಿಗಳ ವಿರುದ್ಧ ಆಕ್ರೋಶ ಕೆ.ಆರ್.ನಗರ: ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ…

28 mins ago