ಹಾಡು ಪಾಡು

ಕೆಲವಷ್ಟು ಭರವಸೆಗಳು ಮತ್ತು ಹಲವಷ್ಟು ಆತಂಕಗಳು

ಸ್ವಾಮಿ ಪೊನ್ನಾಚಿ

ನಾನು ಸಾಹಿತ್ಯವನ್ನು ಗಂಭೀರವಾಗಿ ಓದಿಕೊಳ್ಳುವ ಕಾಲಕ್ಕೆ ಹೆಚ್ಚು ಕಡಿಮೆ ಚಳವಳಿಗಳ ಕಾವು ನಿಂತೇ ಹೋಗಿತ್ತು. ಜೋರು ಗಾಳಿ ಬೀಸಿದಾಗ ಬೂದಿ ಹಾರಿ ಹೋಗಿ ಚೂರು ಕೆಂಡದ ಕಿಡಿ ಕಾಣುವಂತೆ ಇವತ್ತಿನ ಚಳವಳಿಗಳು ಆಗಾಗ ಮಿಂಚಿ ಮರೆಯಾಗುತ್ತಿವೆ. ಇತ್ತೀಚಿನ ಯಶಸ್ವಿ ಸಂಘಟಿತ ಚಳವಳಿಯೆಂದರೆ ಮೊನ್ನೆ ಹೊಸದಿಲ್ಲಿಯಲ್ಲಿ ನಡೆದ ವಿದ್ಯಾರ್ಥಿ ಚಳವಳಿ. ಅದು ಬಿಟ್ಟರೆ ಈ ದೇಶದಲ್ಲಿ ಹೇಳಿಕೊಳ್ಳುವಂತಹ ಯಾವ ಹೋರಾಟವು ಯಶಸ್ವಿಯಾಗಲಿಲ್ಲ ಅಥವಾ ಹತ್ತಿಕ್ಕಲಾಯಿತು. ನಮ್ಮ ಹಿರಿಯರ ಬರಹಗಳನ್ನು ಓದುವಾಗಲೆಲ್ಲ ಕನ್ನಡ ಚಳವಳಿ, ರೈತ ಚಳವಳಿ, ದಲಿತ ಚಳವಳಿಗಳ ಕುರಿತು ಪ್ರಸ್ತಾಪವಿರುತ್ತಿತ್ತು. ಆ ಕಾಲಕ್ಕೆ ನಂಜುಂಡಸ್ವಾಮಿ, ವಾಟಾಳ್ ನಾಗರಾಜು, ಕಡಿದಾಳ್ ಶಾಮಣ್ಣ, ಗೋಪಾಲಗೌಡ, ಬಸವಲಿಂಗಪ್ಪ, ಕೃಷ್ಣಪ್ಪ, ಲಿಂಗಪ್ಪ, ತೇಜಸ್ವಿ ಮುಂತಾದವರ ಹೆಸರು ಚಳವಳಿಗಳೊಂದಿಗೆ ತಳುಕು ಹಾಕಿಕೊಂಡಿದ್ದವು. ಅಷ್ಟರಮಟ್ಟಿಗೆ ಚಳವಳಿಗಳು ಗಂಭೀರ ಹಾಗೂ ತೀವ್ರವಾಗಿದ್ದವು. ಚಳವಳಿಗಳ ಕುರಿತಂತೆ ಅಲ್ಪಸ್ವಲ್ಪ ವಿಚಾರ ತಲೆಯೊಳಗೆ ಹೋಗುತ್ತಿದ್ದರೂ ಅದನ್ನು ಕಲ್ಪಿಸಿಕೊಳ್ಳುತ್ತಿದ್ದೇವೆಯೇ ಹೊರತು ನೇರ ಚಳವಳಿಗಳನ್ನು ನೋಡಿರಲಿಲ್ಲ, ಭಾಗವಹಿಸಿರಲೂ ಇಲ್ಲ. ಹಾಗಾಗಿ ಚಳವಳಿಗಳೆಂದರೆ ನಮಗೆ ಸ್ವಾತಂತ್ರ್ಯ ಚಳವಳಿಯಷ್ಟೇ ಸಾವು-ನೋವು, ಜೈಲುವಾಸಗಳಲ್ಲಿ ನಡೆಯುವಂತಹವು ಮತ್ತು ಚಳವಳಿಕಾರರೆಂದರೆ ದೊಡ್ಡ ಕ್ರಾಂತಿಕಾರಿಗಳೆಂದೇ ಭಾವಿಸಿದ್ದೆವು. ಒಳಗೊಳಗೆ ನಮಗೂ ಈ ತರಹದ ಒಂದು ಚಳವಳಿ ಆಗಲಿ ಮತ್ತು ಅದರಲ್ಲಿ ನಾವೂ ಭಾಗವಹಿಸುವಂತಾಗಲಿ, ಸಾಧ್ಯವಾದರೆ ನಮ್ಮನ್ನು ಬಂಧಿಸಿ ಎರಡು ಮೂರು ದಿನ ಜೈಲಿಗೆ ಹಾಕಲಿ ಎನ್ನುವ ಬಯಕೆಯೊಂದು ಗುಪ್ತವಾಗಿ ಇದ್ದೇ ಇತ್ತು.

ಈ ಯೋಚನೆಗಳಲ್ಲಿ ಇರುವಾಗಲೇ ಡಿ.ಎಡ್ ವ್ಯಾಸಂಗದಲ್ಲಿ ಆರು ತಿಂಗಳ ಇಂಟರ್ನ್‌ಶಿಪ್ ಅನ್ನು ತೆಗೆದುಹಾಕಿ ಎರಡು ವರ್ಷದ ಕೋರ್ಸಿನೊಳಗೇ ಅದನ್ನು ಸೇರಿಸಬೇಕೆಂದು ಎಐಡಿಎಸ್‌ಒ ನೇತೃತ್ವದಲ್ಲಿ ಹೋರಾಟ ಶುರುವಾದಾಗ ಕಾಲೇಜುಗಳಿಂದ ನಮ್ಮನ್ನು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಲು ಕರೆದೊಯ್ಯುತ್ತಿದ್ದರು. ಪ್ರತಿದಿನ ಗ್ರೌಂಡ್‌ಗೆ ಹೋಗಿ ಭಾಷಣ ಕೇಳಿ ಧಿಕ್ಕಾರ ಕೂಗಿ ವಾಪಸ್ ಬರುವುದು ನಡೆದಿತ್ತು.

ಆದರೆ ಲಾಠಿಚಾರ್ಜ್ ಅಥವಾ ನಮ್ಮನ್ನು ಬಂಧಿಸಿ ಜೈಲಿಗೆ ಹಾಕುವುದು ನಡೆಯಲಿಲ್ಲ. ಸರ್ಕಾರ ತನ್ನ ಆದೇಶ ವಾಪಸ್ ತೆಗೆದುಕೊಂಡು ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿತು. ಅಯ್ಯೋ ಇನ್ನಷ್ಟು ದಿನ ಈ ಹೋರಾಟ ನಡೆಯಬಾರದೇ ಎನಿಸಿದ್ದು ನಿಜ. ಮೊನ್ನೆಯಷ್ಟೇ ಹೊಸದಿಲ್ಲಿಯಲ್ಲಿ ವಿದ್ಯಾರ್ಥಿಗಳ ಚಳವಳಿ ನಡೆದು ಅಹಿತಕರ ಘಟನೆಗಳೂ ಉಂಟಾಗಿ ತಾತ್ಕಾಲಿಕವಾಗಿ ವಿದ್ಯಾರ್ಥಿಗಳಿಗೆ ಜಯ ಸಿಕ್ಕಿತು ನಿಜ! ಆದರೆ ಈ ಕಾಲದ ಹೋರಾಟದ ತೀವ್ರತೆ ಯಾವ ಸೈದ್ಧಾಂತಿಕ ಸ್ಪಷ್ಟತೆ, ತಾತ್ವಿಕವಾದ ನಿಲುವು ಹೊಂದಿದೆ ಎಂಬುದೇ ಪ್ರಶ್ನೆ!? ಹಾಗಾದರೆ ಇತ್ತೀಚೆಗೆ ಚಳವಳಿ ಮಾಡದಷ್ಟು ಮಟ್ಟಿಗೆ ಈ ವ್ಯವಸ್ಥೆ ಸುಧಾರಣೆ ಆಗಿದೆಯೇ ಎಂದು ನೋಡಿದರೆ ಖಂಡಿತ ಇಲ್ಲ!

ಹಿಂದೆಂದಿಗಿಂತಲೂ ಸಮಸ್ಯೆ ಹೆಚ್ಚೇ ಇದೆ. ಆದರೆ ಯಾಕೆ ಅವುಗಳ ವಿರುದ್ಧ ಚಳವಳಿಗಳು ನಡೆಯುತ್ತಿಲ್ಲ? ನಮ್ಮ ತಲೆಮಾರು ಯಾಕೆ ಚಳವಳಿಗಳಿಂದ ವಿಮುಖವಾಗಿದೆ? ಯಾವ ಕಾರಣಕ್ಕೆ ಆಸಕ್ತಿ ಕಳೆದುಕೊಂಡಿವೆ? ಯಾಕೆ? ನಾವು ಈ ವ್ಯವಸ್ಥೆಗೂ ನಮಗೂ ಸಂಬಂಧವೇ ಇಲ್ಲ ಎನ್ನುವಂತೆ ಬದುಕುತ್ತಿದ್ದೇವೆ ಅಥವಾ ಭೌತಿಕವಾದ ಚಳವಳಿಗಳಿಗಿಂತ ಬೌದ್ಧಿಕವಾದ ಚಳವಳಿಗಳ ಕಡೆ ವಾಲಿದ್ದೇವೆಯೇ? ಅಂದರೆ ನಮ್ಮೆಲ್ಲ ಸಿಟ್ಟು, ಆಕ್ರೋಶಗಳನ್ನು ನಾಲ್ಕು ಸಾಲಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಇದೇ ಈ ವ್ಯವಸ್ಥೆಯ ವಿರುದ್ಧದ ದನಿ ಎತ್ತುವ ವಿಧಾನ ಎಂದು ಸುಮ್ಮನಾಗಿದ್ದೇವೆಯೇ?

ಒಂದಂತೂ ನಿಜ. ಪರಂಪರೆಯಲ್ಲಿದ್ದ ಸೈದ್ಧಾಂತಿಕ ಒಟ್ಟುಗೂಡುವಿಕೆ ನಮ್ಮಲ್ಲಿ ಈಗ ಇಲ್ಲ. ನಮ್ಮ ಚಿಂತನೆಗಳೆಲ್ಲವೂ ಸಮಷ್ಠಿ ನೆಲೆಯಿಂದ ವೈಯಕ್ತಿಕ ನೆಲೆಗೆ ದಾಟಿಕೊಂಡಿವೆ. ಸಾರ್ವಜನಿಕ ಕೊಳಾಯಿ ಕೆಟ್ಟುಹೋದರೆ ನನಗೇಕೆ? ಯಾರೋ ಮಾಡಿಸುತ್ತಾರೆ ಎನ್ನುವ ನಾವು, ಮನೆಯಲ್ಲಿನ ಕೊಳಾಯಿ ನಿಂತರೆ ತಲೆಕೆಡಿಸಿಕೊಳ್ಳುತ್ತೇವೆ. ಆದರೆ ಸಾರ್ವಜನಿಕ ಕೊಳಾಯಿಗೂ ನಮ್ಮ ಮನೆಗೂ ಪರಸ್ಪರ ಸಹ ಸಂಬಂಧ ಇದೆ ಎಂಬ ಸಾಮಾಜಿಕ ಪ್ರಜ್ಞೆಯನ್ನು ಮಾತ್ರ ಕಳೆದುಕೊಳ್ಳುತ್ತಿದ್ದೇವೆ. ಇದು ಒಂದು ಉದಾಹರಣೆ ಅಷ್ಟೆ. ಐದು ದಶಕಗಳ ಹಿಂದೆ ಇದ್ದಂತಹ ಶೈಕ್ಷಣಿಕ ವ್ಯವಸ್ಥೆಯ ಚಿಂತನೆಗಳು ಈಗ ಇಲ್ಲ, ಶಿಕ್ಷಣ ಎಂದರೆ ಕೇವಲ ಪಠ್ಯಪುಸ್ತಕದ ಇನ್‌ಪುಟ್ ಮಾತ್ರ ಆಗಿದೆ. ಕನ್ನಡ ಪಾಠ ಹೇಳಿಕೊಡುವವರು ಕನ್ನಡ ಭಾಷೆಯ ಹಿರಿಮೆ, ಮಹತ್ವ, ಪರಂಪರೆ ಅದರ ಸ್ವರೂಪದ ಬಗ್ಗೆ ಹೇಳಿಕೊಡುವ ಬದಲು ಪುಸ್ತಕದಲ್ಲಿರುವ ಪಠ್ಯವನ್ನಷ್ಟೇ ಹೇಳಿ ನೋಟ್ಸ್ ಕೊಟ್ಟು ಹೋಗಿ ಬಿಡುತ್ತಿದ್ದಾರೆ. ಹಾಗಾಗಿ ನೆಲ, ಜಲ, ಭಾಷೆ ಇವುಗಳ ಬಗ್ಗೆ ತೀವ್ರತರವಾದ ಭಾವನೆಗಳು ಒಳಗಿನಿಂದ ಹುಟ್ಟು ತ್ತಿಲ್ಲ. ಅವುಗಳ ಬಗ್ಗೆ ಆಪ್ತ ಭಾವವೇ ಬರುತ್ತಿಲ್ಲ.

ಈಗಿನ ಆಕರ್ಷಣೆ ಅರ್ಬನೈಸ್ ಕಲ್ಚರ್, ವೆಸ್ಟರ್ನ್ ಕಲ್ಚರ್ ನಮ್ಮನ್ನು ತುಂಬಾ ಪ್ರಭಾವಿಸಿ, ಜೀವನಶೈಲಿ ಅಥವಾ ಉತ್ತಮವಾದ ಜೀವನ ಎಂದರೆ ನಮ್ಮ ಹಿರಿಯರಿಂದ ಪರಂಪರಾನುಗತವಾಗಿ ಬಂದ ಸಂಗತಿಗಳೇ ಅಲ್ಲ, ಎಂಬಂತಾಗಿದೆ. ಹಾಗಾಗಿ ಪರಂಪರೆಗೆ ಧಕ್ಕೆ ಆದರೆ ವೈಯಕ್ತಿಕವಾಗಿ ನಮಗೆ ಆಗುವ ಆಘಾತ ಎಂದು ನಾವು ಎಂದಿಗೂ ಅಂದುಕೊಳ್ಳುವುದಿಲ್ಲ.

ಈಗ ನಮ್ಮಲ್ಲಿ ಸುಲಭವಾಗಿ ಸಂಘಟಿತವಾಗಲು ಬೇಕಾದ ಎಲ್ಲಾ ಪರಿಕರಗಳು ಅಂಗೈಯಲ್ಲಿ ಇದ್ದರೂ ನಮ್ಮ ಮನಸ್ಸುಗಳು ಬೇರೆ ಬೇರೆ ಕ್ಷುಲ್ಲಕ ಕಾರಣಕ್ಕೆ – ವಿಚಾರಕ್ಕೆ ಒಂದುಗೂಡುತ್ತಿಲ್ಲ. ಈ ಸೋಶಿಯಲ್ ಮೀಡಿಯಾಗಳ ಇಂಪ್ಯಾಕ್ಟ್ ನಮ್ಮ ತಲೆಗಳಿಗೆ ಹೇಗೆ ಹೊಕ್ಕಿದೆ ಎಂದರೆ ಒಂದು ವಿಚಾರವನ್ನು ದಿನಗಟ್ಟಲೇ ಇರಲಿ, ಕೆಲವೇ ನಿಮಿಷಗಳ ಕಾಲವಾದರೂ ಚಿಂತನೆ ಮಾಡಲು ಮನಸ್ಸಿನಲ್ಲಿ ಉಳಿಯದಂತೆ ಮಾಡಿಬಿಟ್ಟಿವೆ. ಸುಮ್ಮನೆ ಸ್ಕ್ರಾಲ್ ಮಾಡುತ್ತಾ ಹೋಗುವುದಷ್ಟೇ ಉಳಿದಿರುವುದು. ಮತ್ತೆ ಕೆಲವು ಶಕ್ತಿಗಳು, ಸಂಘಟನೆಗಳು, ಉದ್ದೇಶಪೂರ್ವಕವಾಗಿ ಯುವ ತಲೆಮಾರಿನ ಮನಸ್ಸಿನೊಳಗೆ ಜಾತಿಯ, ಧರ್ಮದ, ಸಾಮಾಜಿಕ ಅಂತಸ್ತುಗಳ ಹುಳ ಬಿಟ್ಟು ಅವರನ್ನು ಸ್ವತಂತ್ರವಾಗಿ ಆಲೋಚನೆ ಮಾಡದಷ್ಟು ಮೆದುಳನ್ನು ಹ್ಯಾಕ್ ಮಾಡಿಕೊಂಡಿವೆ. ಇದು ಒಂದು ಗುಲಾಮಿ ಸಂತತಿಯನ್ನು ಹುಟ್ಟು ಹಾಕುತ್ತದೆಯೇ ವಿನಃ ಸ್ವತಂತ್ರವಾಗಿ ಆಲೋಚಿಸುವ, ಹೋರಾಟದ ಮನೋಭಾವದ ಮುನ್ನುಗ್ಗುವ ಮನಸ್ಥಿತಿಯನ್ನೇ ನಾಶ ಮಾಡುತ್ತಿದೆ.

ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೇಗಾದರೂ ಮಾಡಿ ಬದುಕು ಕಟ್ಟಿ ಕೊಳ್ಳಬೇಕೆಂಬ ಹಂಬಲದಿಂದ ಚಳವಳಿಗಳಿಂದ ವಿಮುಖರಾಗಿ ದ್ದೇವೆ. ಹೆಗಲ ಮೇಲಿನ ಕೌಟುಂಬಿಕ, ಸಾಮಾಜಿಕ ಜವಾಬ್ದಾರಿಗಳು ಊರ ಉಸಾಬರಿ ಹೊತ್ತುಕೊಳ್ಳದಂತೆ ನಮ್ಮನ್ನು ತಡೆದಿವೆ. ಅದಾಗಿಯೂ ಚಳವಳಿ ಹೋರಾಟದಲ್ಲಿ ಭಾಗವಹಿಸಿದಾಗ ನಾಯಕರು ಭ್ರಷ್ಟರಾಗಿ ಈ ವ್ಯವಸ್ಥೆ ಒಳಗೆ ಒಂದಾಗುವುದನ್ನು ಕಂಡು ಹೇಸಿಗೆ ಉಂಟಾಗಿದೆ. ಸ್ಪಷ್ಟವಾದ ತಾತ್ವಿಕ ನಿಲುವು, ಸೈದ್ಧಾಂತಿಕ ಚೌಕಟ್ಟು ಇಲ್ಲದ ಚಳವಳಿಗಳು ಈಗ ಬಹಳ ದಿನಗಳ ಕಾಲ ನಿಲ್ಲುತ್ತಿಲ್ಲ. ಒಂದೇ ವಿಷಯಕ್ಕೆ ಹೋರಾಟ ನಡೆದರೂ ಕೂಡ ಹತ್ತು ನಾಯಕರು ಹತ್ತುಕಡೆ ಧರಣಿ ಕೂರುತ್ತಾರೆ ಹೊರತು ಒಟ್ಟಾಗಿ ಸಂಘಟಿತರಾಗುತ್ತಿಲ್ಲ. ಬೇರೆ ಬೇರೆ ಕಡೆ ನಡೆಯುವಂತಹ ಚಳವಳಿಗಳಲ್ಲಿ ಸಣ್ಣಪುಟ್ಟ ಗಲಭೆಗಳಾಗುತ್ತವೆಯೇ ವಿನಃ ಒಂದು ಮುಖ್ಯ ಪ್ರವಾಹವಾಗುವುದೇ ಇಲ್ಲ. ಈ ರಾಜಕೀಯ ವ್ಯವಸ್ಥೆಗೆ ಇಂತಹ ವಿಘಟನೆಗಳೇ ಬೇಕಿರುವುದು. ನಾವು ಇದ್ಯಾವುದನ್ನೂ ಅರ್ಥೈಸಿಕೊಳ್ಳದೇ ಕುರಿಗಳಂತೆ ಹೋಗುತ್ತಿದ್ದೇವೆ. ಐದು ದಶಕಗಳ ನಮ್ಮ ಈ ಮನೋಧೋರಣೆ ಹೊಚ್ಚ ಹೊಸ ಪೀಳಿಗೆಗೂ ಮುಂದುವರಿದರೆ ಚಳವಳಿಗಳಿಗೆ ಅರ್ಥವೇ ಇಲ್ಲದಂತಾ ಗುತ್ತದೆ. ಆದರೂ ಈಗ ಹೊಸ ತಲೆಮಾರು ಒಗ್ಗಟ್ಟಾಗುತ್ತಿರುವುದು ಭರವಸೆಯ ಜೊತೆಗೆ ಆತಂಕವನ್ನೂ ಉಂಟುಮಾಡುತ್ತದೆ.

” ಈಗ ನಮ್ಮಲ್ಲಿ ಸುಲಭವಾಗಿ ಸಂಘಟಿತವಾಗಲು ಬೇಕಾದ ಎಲ್ಲಾ ಪರಿಕರಗಳು ಅಂಗೈಯಲ್ಲಿ ಇದ್ದರೂ ನಮ್ಮ ಮನಸ್ಸುಗಳು ಬೇರೆ ಬೇರೆ ಕ್ಷುಲ್ಲಕ ಕಾರಣಕ್ಕೆ, ವಿಚಾರಕ್ಕೆ ಒಂದುಗೂಡುತ್ತಿಲ್ಲ. ಈ ಸೋಶಿಯಲ್ ಮೀಡಿಯಾಗಳ ಇಂಪ್ಯಾಕ್ಟ್ ನಮ್ಮ ತಲೆಗಳಿಗೆ ಹೇಗೆ  ಹೊಕ್ಕಿದೆ ಎಂದರೆ ಒಂದು ವಿಚಾರವನ್ನು ದಿನಗಟ್ಟಲೆ ಇರಲಿ, ಕೆಲವೇ ನಿಮಿಷಗಳ ಕಾಲವಾದರೂ ಚಿಂತನೆ ಮಾಡಲು ಮನಸ್ಸಿನಲ್ಲಿ ಉಳಿಯದಂತೆ ಮಾಡಿಬಿಟ್ಟಿವೆ”

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಸಿಗಲಿ ನ್ಯಾಯ!

ಸಿಗಲಿ ನ್ಯಾಯ! ಮರುಜೀವ ಬಂದಿದೆ ಹೊಸಬೆಳಕು ಮೂಡಿದೆ ಸುಪ್ರೀಂಕೋರ್ಟಿನ ಸೌಜನ್ಯಾ ಪ್ರಕರಣದ ಮರುತನಿಖೆಯ ಆದೇಶ! ಸಲಾಂ ಸುಪ್ರೀಂಗೆ! ನಡೆಯಲಿ ತನಿಖೆ…

5 hours ago

ಓದುಗರ ಪತ್ರ: ಸರ್ಕಾರಿ ಶಾಲಾ, ಕಾಲೇಜುಗಳೆಂದರೆ ತಾತ್ಸಾರವೇಕೆ?

ಇತ್ತೀಚೆಗೆ ಮೈಸೂರಿನ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ನಡೆದ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ನಗರದ ಸರ್ಕಾರಿ ಹಾಗೂ…

5 hours ago

ಓದುಗರ ಪತ್ರ: ಕೆಪಿಎಸ್‌ಸಿ ರದ್ದತಿಗಿಂತ ‘ಶುದ್ಧೀಕರಣ’ ತುರ್ತು ಅಗತ್ಯ

ಕರ್ನಾಟಕ ಲೋಕಸೇವಾ ಆಯೋಗವನ್ನು ರದ್ದುಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು…

5 hours ago

ಆರೋಗ್ಯಕರ ನಾಳೆಗಾಗಿ ಆಯುರ್ವೇದ – ಒಂದು ಆರೋಗ್ಯ, ಒಂದು ಭವಿಷ್ಯ

ಡಾ. ಮಾನಸ ಎಸ್.ಡಿ. ವೈಯಕ್ತಿಕ ಆರೋಗ್ಯದ ಜೊತೆಗೆ ಸಾಮೂಹಿಕ ಆರೋಗ್ಯ ಹಾಗೂ ಪರಿಸರದ ಅರೋಗ್ಯವನ್ನೂ ಕಾಪಾಡುವುದು ಅಗತ್ಯ ಆರೋಗ್ಯವೆಂದರೆ ಕೇವಲ…

6 hours ago

ಡಾ.ಎಸ್.ಜೆ. ನಾಗಲೋಟಿಮಠ ಅವರ ಸ್ಛೂರ್ತಿದಾಯಕ ನಡವಳಿಕೆ

ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಅಧಿಕಾರದ ಶಕ್ತಿಯಿಂದಲ್ಲ, ಆದರ್ಶದ ನಡವಳಿಕೆಯಿಂದ ಮುನ್ನಡೆಸುವುದೇ ನಿಜವಾದ ನಾಯಕತ ಕೆಲವೊಮ್ಮೆ…

6 hours ago

ಯುವನಿಧಿ; ೨,೧೭೯ ಮಂದಿಗೆ ೬.೩೦ ಕೋಟಿ ರೂ. ನೆರವು

ನವೀನ್ ಡಿಸೋಜ ೨,೪೫೯ ನಿರುದ್ಯೋಗಿ ಯುವಕ-ಯುವತಿಯರಿಂದ ನೋಂದಣಿ; ಶೇ.೮೮.೦೬ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆ  ಮಡಿಕೇರಿ: ಉದ್ಯೋಗದ ನಿರೀಕ್ಷೆಯಲ್ಲಿರುವ…

6 hours ago