ಎ.ಬಿ.ಇಬ್ರಾಹಿಂ, ಮೈಸೂರು ನಗರಪಾಲಿಕೆ ಮಾಜಿ ಆಯುಕ್ತರು ಹಾಗೂ ನಿವೃತ್ತ ಐಎಎಸ್ ಅಧಿಕಾರಿ
ದಸರಾ ವಾಣಿಜ್ಯೀಕರಣಕ್ಕೆ ಕಡಿವಾಣ ಹಾಕಿ ಮೈಸೂರಿನ ಬ್ರಾಂಡ್ ಐಡೆಂಟಿಟಿಯಾಗಿ ರೂಪಿಸಬೇಕು
ಮೈಸೂರು ಮಹಾನಗರ ಪಾಲಿಕೆಯಲ್ಲಿ ನಾನು ೨೦೦೩ರಿಂದ ೨೦೦೬ರವರೆಗೆ ಆಯುಕ್ತರಾನಾಗಿದ್ದ ಸಂದರ್ಭದಲ್ಲಿ ದಸರಾ ಉಪ ವಿಶೇಷಾಧಿಕಾರಿಯಾಗಿ, ಜಿಲ್ಲಾ ಮಟ್ಟದ ವಿಶೇಷಾಧಿಕಾರಿಯಾಗಿ ಮೈಸೂರು ದಸರಾವನ್ನು ಮೂರು ವರ್ಷಗಳ ಕಾಲ ನಿರಂತರವಾಗಿ ಆಚರಿಸಿದ್ದೆವು. ಅಂದು ರಾಜ್ಯದಲ್ಲಿ ಬರಗಾಲ ಘೋಷಿಸಿದ್ದ ಸಂದರ್ಭ. ಈ ಹೊತ್ತಿನಲ್ಲಿ ದಸರಾ ಮಾಡಬೇಕೇ, ಬೇಡವೇ ಎಂಬ ಜಿಜ್ಞಾಸೆ ನಮ್ಮಲ್ಲಿತ್ತು. ಆಗಿನ ಉಸ್ತುವಾರಿ ಸಚಿವರಾಗಿದ್ದ ಹೆಚ್.ವಿಶ್ವನಾಥ್ ಅವರು ದಸರಾ ಮತ್ತು ಜನರ ನಡುವೆ ಇರುವ ಭಾವನಾತ್ಮಕ ಸಂಬಂಧ ಮತ್ತು ಆರ್ಥಿಕತೆಯ ಕುರಿತು ಯೋಚಿಸಿ ದಸರಾ ಮಾಡಿದರೆ ಮಾತ್ರ ಮೈಸೂರು ಸುತ್ತಮುತ್ತಲಿನ ರೈತರು ಬೆಳೆದಿರುವ ಕಡಲೆಕಾಯಿ, ಜೋಳ ಅಥವಾ ಇತರ ಉತ್ಪನ್ನಗಳು ಮಾರುಕಟ್ಟೆಗೆ ಬಂದು ಮಾರಾಟವಾಗಬಹುದು, ಆ ಮೂಲಕ ರೈತರ ಬದುಕಿಗೆ ದಸರಾ ಒಂದು ರೀತಿಯಲ್ಲಿ ಚಿಮ್ಮುಹಲಗೆಯಾಗಬಹುದು (Springboard for the economic activity of the farmers in and around Mysuru district)) ಎಂಬ ದೂರದೃಷ್ಟಿಯಿಂದ ಯೋಚಿಸಿದ್ದರು.
ದಸರಾವನ್ನು ನಾವು ಮೈಸೂರು ಮಹಾರಾಜರು ಸುಮಾರು ನಾಲ್ಕುನೂರು ವರ್ಷಗಳ ಕಾಲ ಆಚರಿಸಿಕೊಂಡು ಬಂದ ಪರಂಪರೆಯ ಹಿನ್ನೆಲೆಯಲ್ಲಿಯೇ ನೋಡಬೇಕಾಗುತ್ತದೆ. ಹಳೆಯ ಮೈಸೂರು ಭಾಗದಲ್ಲಿ ದಸರಾ ಎನ್ನುವುದು ಕೇವಲ ಧಾರ್ಮಿಕ ವಿಚಾರವಲ್ಲ, ಇದರೊಂದಿಗೆ ಜನರ ಭಾವನೆಗಳು ಬೆಸೆದುಕೊಂಡಿವೆ. ಹಿಂದೆ ದಸರಾ ಸಂದರ್ಭದಲ್ಲಿ ಮಹಾರಾಜರನ್ನು ನೋಡುವ ಅವಕಾಶ ಇತ್ತು. ತದನಂತರ ಚಾಮುಂಡಿ ದೇವಿಯ ದರ್ಶನ ಮಾಡುವ ಅವಕಾಶ ದೊರೆಯುತ್ತಿದೆ.
ಈ ಹಿನ್ನೆಲೆಯಲ್ಲಿ ಮೂರ್ನಾಲ್ಕು ಜಿಲ್ಲೆಗಳ ಜನರು ಮೈಸೂರಿಗೆ ಬರುತ್ತಾರೆ. ಗ್ರಾಮೀಣ ಪ್ರದೇಶದ ಜನರೂ ದಸರಾವನ್ನು ನೋಡಿ ಆನಂದಿಸುತ್ತಾರೆ. ಆದರೆ ಈ ಭಾವನಾತ್ಮಕ ವಿಷಯ ಈಗ ಎಲ್ಲೋ ಒಂದು ಕಡೆ ಅತಿರೇಕಕ್ಕೆ ಸರಿಯುತ್ತಿದೆಯೇ? ದಸರಾ ಕೇವಲ ಹೈಫೈ ಕಾರ್ಯಕ್ರಮವಾಗಿ ಬದಲಾಗುತ್ತಿದೆಯೇ ಎಂಬ ಭಾವನೆಯನ್ನು ಹುಟ್ಟುಹಾಕುತ್ತಿದೆ. ಕಳೆದ ಹಲವಾರು ವರ್ಷಗಳಿಂದ ದಸರಾದ ಮೂಲಭೂತ ಪರಿಕಲ್ಪನೆಗಳಿಂದ ಭಿನ್ನವಾಗಿ ಬೇರೆ ಬೇರೆ ಹೊಸ ಕಾರ್ಯಕ್ರಮಗಳನ್ನು ಸರ್ಕಾರ ಆಯೋಜಿಸುತ್ತಿದೆ. ಯೋಗ ದಸರಾ, ಮಹಿಳಾ ದಸರಾ, ಮಕ್ಕಳ ದಸರಾ ಹಾಗೂ ಈ ವರ್ಷದ ಕಂಬಳ ಇತ್ಯಾದಿ ಹಲವಾರು ಕಾರ್ಯಕ್ರಮಗಳು ಸೇರ್ಪಡೆಯಾಗಿವೆ.
ದಸರಾ ಕಾರ್ಯಕ್ರಮಕ್ಕೆ ಯುವಕರನ್ನು ಆಕರ್ಷಿಸಬೇಕು, ಅವರಿಗೂ ಸ್ವಲ್ಪ ಮನರಂಜನೆ ಇರಬೇಕು ಎಂಬ ಉದ್ದೇಶದಿಂದ ಯುವ ದಸರಾ ಕಾರ್ಯಕ್ರಮವನ್ನು ಹಿಂದೆ ನಮ್ಮ ಅವಧಿಯಲ್ಲಿಯೇ ವಿಶ್ವವಿದ್ಯಾನಿಲಯದ ಮೈದಾನದಲ್ಲಿ ಆಯೋಜಿಸಿದ್ದೆವು. ಆಗ ಸಣ್ಣ ಬಜೆಟ್ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವಾಗಿತ್ತು. ಆದರೆ ಈಗ ಯುವ ದಸರಾ ನಗರದ ಹೊರಭಾಗಕ್ಕೆ ಹೋಗಿದೆ.
ಒಟ್ಟು ಬಜೆಟ್ನಲ್ಲಿ ಒಟ್ಟಾರೆ ಖರ್ಚಿನಲ್ಲಿ ಯುವ ದಸರಾದ್ದೇ ಸಿಂಹಪಾಲು! ಕೋಟಿಗಟ್ಟಲೆ ರೂಪಾಯಿಗಳ ವ್ಯವಹಾರ ನಡೆಯುವ ರೀತಿಯಲ್ಲಿ ಯುವ ದಸರಾ ಬೆಳೆಯುತ್ತಿದೆ. ಇಷ್ಟೊಂದು ಬಜೆಟ್ ಖರ್ಚು ಮಾಡಿ, ಸರ್ಕಾರದ ಬೊಕ್ಕಸದ ಹಣವನ್ನು ವೆಚ್ಚ ಮಾಡಿ ಯುವ ದಸರಾ ಎಂಬ ಕಾರ್ಯಕ್ರಮ ಆಯೋಜಿಸುವುದು ಎಷ್ಟರಮಟ್ಟಿಗೆ ಪ್ರಸ್ತುತ ಎಂಬುದರ ಬಗ್ಗೆಯೂ ಯೋಚಿಸಬೇಕಾಗಿದೆ.
ಮೈಸೂರು ದಸರಾ ಪರಂಪರೆ, ವಾಣಿಜ್ಯೀಕರಣ ಮತ್ತು ದೀಪಾಲಂಕಾರ ದಸರಾದ ಪಾವಿತ್ರ್ಯತೆ, ವಿಶಿಷ್ಟತೆ ಎಲ್ಲೋ ಒಂದು ಕಡೆ ನಶಿಸಿಹೋಗುತ್ತಿದೆ. ಈಗ ಹೆಚ್ಚೆಚ್ಚು ಯುವ ದಸರಾ ರೀತಿಯ ಕಾರ್ಯಕ್ರಮಗಳು ವಾಣಿಜ್ಯೀಕರಣಗೊಳ್ಳುತ್ತಿವೆ.
ಅದಕ್ಕೆ ಸ್ವಲ್ಪ ಕಡಿವಾಣ ಹಾಕಿ ದಸರಾವನ್ನು ಮೈಸೂರಿನ ಒಂದು ಬ್ರ್ಯಾಂಡ್ ಐಡೆಂಟಿಟಿಯಾಗಿ ರೂಪಿಸಬೇಕು. ಮೈಸೂರು ನಗರಕ್ಕೆ, ಮೈಸೂರಿನ ರಾಜಮನೆತನಕ್ಕೆ ಹಾಗೂ ಇಲ್ಲಿನ ರಾಜ ಪರಂಪರೆಗೆ ಸಂಬಂಧಿಸಿದಂತೆ ದಸರಾವನ್ನು ಒಂದು ವಿಶಿಷ್ಟ ಬ್ರ್ಯಾಂಡ್ ಆಗಿ ರೂಪಿಸಿದರೆ ಮುಂದಿನ ದಿನಗಳಲ್ಲಿ ದಸರಾವನ್ನು ಸರಿಯಾದ ದಿಕ್ಕಿನಲ್ಲಿ ಮುಂದುವರಿಸಿಕೊಂಡು ಹೋಗಬಹುದು.
ಸರ್ಕಾರ ಕೋಟಿಗಟ್ಟಲೆ ಹಣ ಖರ್ಚು ಮಾಡಿ ದಸರಾಕ್ಕೆ ನೇರ ಸಂಬಂಧವಿಲ್ಲದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅಂತಹ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಕಡಿಮೆ ಮಾಡಬೇಕು. ಮೈಸೂರಿನ ರಾಜಪರಂಪರೆ ಹಾಗೂ ಈ ಭಾಗದ ಸಂಸ್ಕೃತಿಗೆ ನೇರವಾಗಿ ಸಂಬಂಧಿಸದ ಕಾರ್ಯಕ್ರಮಗಳನ್ನು ಆಯೋಜಿಸುವ ಅಗತ್ಯವಾದರೂ ಏನಿದೆ?
ಮೈಸೂರಿನ ರಾಜಮನೆತನದ ಪರಂಪರೆ ಹಾಗೂ ಈ ಭಾಗದ ಸಾಂಸ್ಕೃತಿಕ ಹಿನ್ನೆಲೆಗೆ ಸಂಬಂಽಸಿದ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಿ ಅಂತಹ ಕಾರ್ಯಕ್ರಮಗಳ ಮೂಲಕ ದಸರಾದ ವಿಶಿಷ್ಟತೆಯನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೂ ತಲುಪಿಸಬೇಕು. ಇತ್ತೀಚಿನ ವರ್ಷಗಳಲ್ಲಿ ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ದೀಪಾಲಂಕಾರವೂ ಒಂದು. ನಾನು ಮೈಸೂರು ಚಾಮುಂಡೇಶ್ವರಿವಿದ್ಯುತ್ ಸರಬರಾಜು ನಿಗಮದ (ಸೆಸ್ಕ್) ವ್ಯವಸ್ಥಾಪಕ ನಿರ್ದೇಶಕನಾಗಿದ್ದ ಸಂದರ್ಭದಲ್ಲಿ ದಸರಾ ದೀಪಾಲಂಕಾರಕ್ಕೆ ಸಂಬಂಧಿಸಿದಂತೆ ಹೊಸ ಪ್ರಯತ್ನ ಮಾಡಿದ್ದೆವು.
ದಸರಾ ದೀಪಾಲಂಕಾರಕ್ಕೆ ಎಲ್ಇಡಿ ಮೆರುಗು: ಆ ಸಮಯದಲ್ಲಿ ದಸರಾ ದೀಪಾಲಂಕಾರಕ್ಕೆ ಸಾಮಾನ್ಯ ಬಲ್ಬ್ಗಳನ್ನು ಬಳಸಲಾಗುತ್ತಿತ್ತು. ಆ ವರ್ಷ ಮೊದಲ ಬಾರಿಗೆ ನಾವು ಎಲ್ಇಡಿ ಬಲ್ಬ್ಗಳನ್ನು ಬಳಸಿಕೊಂಡು ದಸರಾ ದೀಪಾಲಂಕಾರವನ್ನು ಆರಂಭಿಸಿದ್ದೆವು. ಇದರಿಂದ ಒಟ್ಟು ವಿದ್ಯುತ್ ಬಳಕೆಯಲ್ಲಿ ಸುಮಾರು ಶೇ.೯೦ರಷ್ಟು ಉಳಿತಾಯ ಮಾಡಲು ಸಾಧ್ಯವಾಯಿತು. ಜನರು ಕೂಡ ಈ ಹೊಸ ರೀತಿಯ ದೀಪಾಲಂಕಾರವನ್ನು ಬಹಳ ಮೆಚ್ಚಿಕೊಂಡರು. ಎಲ್ ಇಡಿ ಬಲ್ಬ್ಗಳನ್ನು ಬಳಸುವ ಮೂಲಕ ವಿದ್ಯುತ್ ಉಳಿತಾಯದ ಜೊತೆಗೆ ಆಕರ್ಷಕ ದೀಪಾಲಂಕಾರವನ್ನೂ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟೆವು.
ಆಗಿನ ಕೆಲವು ಅಧಿಕಾರಿಗಳು ಹಾಗೂ ರಾಜಮನೆತನಕ್ಕೆ ಸಂಬಂಽಸಿದ ಕೆಲವರು ಈ ರೀತಿಯ ಬದಲಾವಣೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.ನಾವು ದಸರಾ ದೀಪಾಲಂಕಾರವನ್ನು ಮದುವೆ ಮಂಟಪದ ರೀತಿಯಲ್ಲಿ ಮಾಡುತ್ತಿದ್ದೇವೆಯೇ ಎಂಬ ಪ್ರಶ್ನೆಯನ್ನೂ ಹಾಕಿದ್ದರು. ಆ ಸಂದರ್ಭದಲ್ಲಿ ನಾವು ಹೊಸ ಪ್ರಯತ್ನದ ಉದ್ದೇಶವನ್ನು ವಿವರಿಸಿ ಒಂದು ಕಡೆ ವಿದ್ಯುತ್ ಉಳಿತಾಯ, ಮತ್ತೊಂದು ಕಡೆ ಎಲ್ಇಡಿ ಬಲ್ಬ್ಗಳನ್ನು ಮೂಲಕ ಹಲವಾರು ವಿಶೇಷ ಪರಿಕಲ್ಪನೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೆವು.
ಸಂಸತ್ ಭವನ ಮಾದರಿ, ವಿಧಾನಸೌಧದ ಮಾದರಿ ಇತ್ಯಾದಿ ದೀಪಾಲಂಕಾರಗಳು ನೋಡುಗರ ಕಣ್ಮನ ಸೆಳೆದವು. ಈಗ ಪ್ರತಿವರ್ಷ ದಸರಾ ದೀಪಾಲಂಕಾರದಲ್ಲಿ ಇಂತಹ ಅನೇಕ ಆಕರ್ಷಕ ಮಾದರಿಗಳನ್ನು ನೋಡುತ್ತಿದ್ದೇವೆ. ಮೈಸೂರು ದಸರಾ ಉತ್ಸವಕ್ಕೆ ಪ್ರತ್ಯೇಕ ಪ್ರಾಧಿಕಾರ ಬೇಕೇ? ಇದು ಇತ್ತೀಚಿನ ಬೇಡಿಕೆಯಲ್ಲ. ಹಲವಾರು ವರ್ಷಗಳಿಂದ, ಸುಮಾರು ಮೂವತ್ತು-ನಲವತ್ತು ವರ್ಷಗಳ ಹಿಂದಿನಿಂದಲೇ ದಸರಾಗೆ ಒಂದು ಪ್ರಾಧಿಕಾರ ಬೇಕು ಎಂಬ ಬೇಡಿಕೆ ಇದೆ. ಆದರೆ ಕೇವಲ ಎಂಟು-ಹತ್ತು ದಿನಗಳ ಕಾರ್ಯಕ್ರಮವನ್ನು ಆಯೋಜಿಸಲು ಒಂದು ಪ್ರಾಧಿಕಾರ ಬೇಕೇ ಎಂಬುದನ್ನು ಯೋಚಿಸಬೇಕಾಗಿದೆ. ಈಗಾಗಲೇ ಮೈಸೂರಿನಲ್ಲಿ ಪ್ರಾದೇಶಿಕ ಅಭಿವೃದ್ಧಿಗೆ ಸಂಬಂಧಿಸಿದ ಪ್ರಾಧಿಕಾರ, ಅರಮನೆ ಮಂಡಳಿ ಇವೆ. ಎಲ್ಲವನ್ನೂ ಒಟ್ಟುಗೂಡಿಸಿ ದಸರಾ ಉತ್ಸವಕ್ಕಾಗಿ ಒಂದು ಸಮಗ್ರ ಪ್ರಾಧಿಕಾರವನ್ನು ರಚಿಸಿದರೆ, ಒಂದೇ ಸೂರಿನಡಿ ತರಲು ಸಾಧ್ಯವಾಗುತ್ತದೆ.
ದಸರಾ ಉತ್ಸವ ಆರಂಭಕ್ಕೂ ಮುನ್ನ ಒಂದು ಅಥವಾ ಎರಡು ತಿಂಗಳ ಹಿಂದಿನಿಂದ ಪೂರ್ವಸಿದ್ಧತೆ ನಡೆಯುತ್ತದೆ. ಅಂದರೆ ಒಟ್ಟು ಮೂರು ತಿಂಗಳು ದಸರಾ ಚಟುವಟಿಕೆಗಳು ನಡೆಯುತ್ತವೆ. ಉಳಿದ ಒಂಬತ್ತು ತಿಂಗಳು ಯಾವುದೇ ಕಾರ್ಯಕ್ರಮ ಇರುವುದಿಲ್ಲ. ಹೀಗಾದರೆ ಪ್ರಾಧಿಕಾರಕ್ಕೆ ಬರುವ ಬಜೆಟ್ ಆಡಳಿತ ವೆಚ್ಚಗಳಿಗೆ ಮಾತ್ರ ಸಾಕಾಗಬಹುದು.
ಬದಲಾಗಿ ಮೈಸೂರು ಪ್ರದೇಶದ ಸಮಗ್ರ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಈ ಪ್ರಾಽಕಾರ ಕಾರ್ಯನಿರ್ವಹಿಸುವಂತಾಗಬೇಕು. ಮೂರು ತಿಂಗಳ ಅವಧಿಯಲ್ಲಿ ದಸರಾ ಸಿದ್ಧತೆ ಮತ್ತು ಉತ್ಸವ ನಡೆಸಿ ಉಳಿದ ಅವಽಯಲ್ಲಿ ಮೈಸೂರಿನ ಪರಂಪರೆ ಹಾಗೂ ಇಲ್ಲಿನ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಮೈಸೂರು ಮಾತ್ರವಲ್ಲದೆ ದೇಶದ ವಿವಿಧ ನಗರಗಳು ಹಾಗೂ ವಿವಿಧ ರಾಜ್ಯಗಳಲ್ಲಿ ಮೈಸೂರು ದಸರಾ ಮತ್ತು ಮೈಸೂರು ಸುತ್ತಮುತ್ತಲಿನ ಭೌಗೋಳಿಕ ವಿಶೇಷತೆಗಳ ಬಗ್ಗೆ ಪ್ರಚಾರ ಮಾಡಬೇಕು.
ಇದರಿಂದ ದಸರಾಕ್ಕೂ ವಿಶೇಷ ಒತ್ತು ದೊರೆಯುತ್ತದೆ. ಜೊತೆಗೆ ಮೈಸೂರು ಸುತ್ತಮುತ್ತಲಿನ ನಾಲ್ಕೈದು ಜಿಲ್ಲೆಗಳ ಪ್ರವಾಸೋದ್ಯಮ ಹಾಗೂ ಆರ್ಥಿಕ ಅಭಿವೃದ್ಧಿಗೂ ಇದು ಪೂರಕವಾಗುತ್ತದೆ. ಈ ದೃಷ್ಟಿಯಲ್ಲಿ ಪ್ರಾಧಿಕಾರದ ಅಗತ್ಯ ಖಂಡಿತವಾಗಿಯೂ ಇದೆ. ಆದರೆ ಮತ್ತೊಂದು ಹೊಸ ಪ್ರಾಧಿಕಾರವನ್ನು ರಚಿಸುವ ಬದಲು ಈಗಾಗಲೇ ಇರುವ ಸಂಸ್ಥೆಗಳನ್ನು ಒಟ್ಟುಗೂಡಿಸಿ, ಅವುಗಳ ನಡುವೆ ಸಮನ್ವಯ ಸಾಧಿಸಬೇಕು. ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ, ಅರಮನೆ ಮಂಡಳಿ ಹಾಗೂ ದಸರಾ ಉತ್ಸವದ ಚಟುವಟಿಕೆಗಳನ್ನು ಒಟ್ಟುಗೂಡಿಸುವ ಒಂದು ಸಮಗ್ರ ಪ್ರಾಧಿಕಾರ ರಚಿಸುವುದು ಹೆಚ್ಚು ಸಮರ್ಪಕ.
ಈಗ ದಸರಾ ಎಲ್ಲೋ ಒಂದು ಕಡೆ ತನ್ನ ಮೂಲ ಸ್ವರೂಪದಿಂದ ದೂರ ಸರಿದು ಕಾರ್ನಿವಲ್ ಮಾದರಿಯ ಕಾರ್ಯಕ್ರಮವಾಗಿ ಬದಲಾಗುತ್ತಿದೆ. ಜನೋತ್ಸವ ಮಾಡಬಾರದು ಎಂದಲ್ಲ. ಆದರೆ ಅದನ್ನು ದಸರಾ ಜೊತೆಗೆ ತಳುಕು ಹಾಕಿಕೊಂಡು, ಆ ಸಂದರ್ಭಕ್ಕೆ ಅನುಗುಣವಾಗಿ ಮಾಡಬೇಕಾಗಿರುವುದು ಅನಿವಾರ್ಯವೇ? ಹೀಗಾಗಿ ಈಗಿನ ಕಾರ್ಯಕ್ರಮಗಳನ್ನು ಪುನರ್ ರೂಪಿಸಿಕೊಳ್ಳಬೇಕಾಗಿದೆ. ದಸರಾ ನಾಡಹಬ್ಬವಾಗಿಯೇ ಉಳಿಯಬೇಕಾ? ಅಥವಾ ಅದನ್ನು ಜನೋತ್ಸವವಾಗಿ ಮಾಡಬೇಕಾ ಎಂಬುದರ ಬಗ್ಗೆ ಸರ್ಕಾರ ವಸ್ತುನಿಷ್ಠವಾದ ತೀರ್ಮಾನ ತೆಗೆದುಕೊಳ್ಳಬೇಕು. ಜನೋತ್ಸವವಾಗಿ ಮಾಡಿದರೆ ದಸರಾದ ಮೂಲ ಆಶಯದಿಂದ ನಾವು ದೂರ ಸರಿಯುವ ಸಾಧ್ಯತೆಯಿದೆ. ನಾಡಹಬ್ಬವಾಗಿ ಆಚರಿಸುವುದಾದರೆ ದಸರಾದ ಮೂಲಭೂತ ಆಶಯಗಳನ್ನು ಉಳಿಸಿಕೊಂಡು, ಪರಂಪರೆಯನ್ನು ಕಾಪಾಡಿಕೊಂಡು, ಪಾರಂಪರಿಕ ವಿಚಾರಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಮೂಲ ದಸರಾಕ್ಕೆ ಮರಳಿದರೆ ಮಾತ್ರ ದಸರಾದ ಗತವೈಭವ ಮತ್ತೆ ಮರಳಬಹುದು.
” ಮೈಸೂರು ದಸರಾ ಉತ್ಸವಕ್ಕೆ ಪ್ರತ್ಯೇಕ ಪ್ರಾಧಿಕಾರ ಬೇಕು ಎಂಬ ಬೇಡಿಕೆ ಇದೆ. ಕೇವಲ ಎಂಟು-ಹತ್ತು ದಿನಗಳ ಕಾರ್ಯಕ್ರಮವನ್ನು ಆಯೋಜಿಸಲು ಒಂದು ಪ್ರಾಧಿಕಾರ ರಚಿಸುವ ಬದಲು ಮೈಸೂರಿನಲ್ಲಿರುವ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ, ಅರಮನೆ ಮಂಡಳಿ ಎಲ್ಲವನ್ನೂ ಸೇರಿಸಿ ದಸರಾ ಉತ್ಸವಕ್ಕಾಗಿ ಒಂದು ಸಮಗ್ರ ಪ್ರಾಧಿಕಾರವನ್ನು ರಚಿಸಿದರೆ, ಒಂದೇ ಸೂರಿನಡಿ ತರಲು ಸಾಧ್ಯವಾಗುತ್ತದೆ”
ಜಗಜ್ಯೋತಿ ಬಸವೇಶ್ವರರನ್ನು ಅವಮಾನಿಸುವ ಕೃತಿ ‘ಬಸವ ಮಂಟಪ’ ಈಗ ವಿವಾದವನ್ನು ಎಬ್ಬಿಸಿದೆ. ಈ ಕೃತಿಯ ಲೇಖಕ ರವಿ ಹಂಜ್ ಹಾಗೂ…
ಬೆಂಗಳೂರು ಡೈರಿ ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ರಾಜ್ಯದ ಎನ್ಡಿಎ ನಾಯಕರಿಗೆ ದಿಲ್ಲಿಯ ಬಿಜೆಪಿ ಪಾಳೆಯದಿಂದ ಸಂದೇಶ ದಿಲ್ಲಿಯ ಬಿಜೆಪಿ…
ಗಿರೀಶ್ ಹುಣಸೂರು ‘ವಿದ್ಯಾರ್ಥಿಗಳ ಖಾಸಗಿತನ, ಸಮ್ಮತಿ ಮತ್ತು ಡೇಟಾ ಸಂರಕ್ಷಣೆ’ ಕುರಿತು ಕನ್ನಡದ ಮೊದಲ ಪ್ರಾಯೋಗಿಕ ಕೈಪಿಡಿ ರಚನೆ ಮೈಸೂರು:…
ಕೇಶವ್ ಎಂ. ಮೀನುಗಾರಿಕೆಯನ್ನೇ ನಂಬಿರುವ ಕುಟುಂಬಗಳು ಕಂಗಾಲು ಮೈಸೂರು: ಜಿಲ್ಲೆಯ ತಾಲ್ಲೂಕುವಾರು ೫೦೦ಕ್ಕೂ ಹೆಚ್ಚು ಮಳೆಯಾಶ್ರಿತ ಕೆರೆಗಳು ಹಾಗೂ ನೀರಾವರಿ…
ಭೇರ್ಯ ಮಹೇಶ್ ಅವಳಿ ತಾಲ್ಲೂಕುಗಳಲ್ಲಿ ಸಂಕಷ್ಟದಲ್ಲೂ ಧೈರ್ಯ ತೋರಿದ ರೈತರಿಗೆ ಉತ್ತಮ ಬೆಲೆಯ ನಿರೀಕ್ಷೆ ಕೆ.ಆರ್.ನಗರ: ಜಿಲ್ಲೆಯಲ್ಲಿ ಮಳೆಯಕೊರತೆಯಿಂದಾಗಿ ಈ…