ಭೇರ್ಯ ಮಹೇಶ್
ಅವಳಿ ತಾಲ್ಲೂಕುಗಳಲ್ಲಿ ಸಂಕಷ್ಟದಲ್ಲೂ ಧೈರ್ಯ ತೋರಿದ ರೈತರಿಗೆ ಉತ್ತಮ ಬೆಲೆಯ ನಿರೀಕ್ಷೆ
ಕೆ.ಆರ್.ನಗರ: ಜಿಲ್ಲೆಯಲ್ಲಿ ಮಳೆಯಕೊರತೆಯಿಂದಾಗಿ ಈ ಬಾರಿ ನೀರಾವರಿ ಭೂಮಿಯಲ್ಲಿ ಭತ್ತದ ಬೆಳೆ ಬೆಳೆಯದಂತೆ ಸರ್ಕಾರ ಎಚ್ಚರಿಕೆ ನೀಡಿತ್ತು. ಆದರೆ ಭತ್ತದ ನಾಡು ಎಂದೇ ಪ್ರಸಿದ್ಧಿ ಪಡೆದಿರುವ ಕೆ.ಆರ್. ನಗರ ಮತ್ತು ಸಾಲಿಗ್ರಾಮ ಅವಳಿ ತಾಲ್ಲೂಕುಗಳಲ್ಲಿ ಬರದ ನಡುವೆಯೂ ರೈತರು ಧೈರ್ಯ ಮಾಡಿ ಭತ್ತದ ಬೆಳೆಯನ್ನು ಬೆಳೆದಿದ್ದಾರೆ.
ಭತ್ತದ ನಾಡು ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳಲ್ಲಿ ರೈತರ ಜೀವನದಿ ಕಾವೇರಿ ಮೈದುಂಬಿ ಹರಿದರೆ ಮಾತ್ರ ಶೇ.೯೦ರಷ್ಟು ಕೃಷಿ ಚಟುವಟಿಕೆಗಳು ನಡೆಯುತ್ತವೆ. ಈ ಬಾರಿ ಬಿಸಿಲಿನ ಹೊಡೆತಕ್ಕೆ ಸಂಪೂರ್ಣವಾಗಿ ಕೆರೆಕಟ್ಟೆಗಳು ಬತ್ತಿಹೋಗಿದ್ದವು.
ಜತೆಗೆ ಈ ಬಾರಿ ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗೆ ಹಿನ್ನಡೆ ಆಗಿತ್ತು. ಜುಲೈ ತಿಂಗಳಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಬಿದ್ದಿದ್ದರಿಂದ ಕಾವೇರಿ ನದಿ ಮೈದುಂಬಿ ಹರಿದು, ಹಾರಂಗಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ರೈತರು ನಿಟ್ಟುಸಿರು ಬಿಟ್ಟರು.
ಅವಳಿ ತಾಲ್ಲೂಕುಗಳಲ್ಲಿ ಅಂದಾಜು ೨೫ ಸಾವಿರ ಹೆಕ್ಟೇರ್ (೫೦ ಸಾವಿರ ಎಕರೆ) ನೀರಾವರಿ ಅಚ್ಚುಕಟ್ಟು ಪ್ರದೇಶ ಇದ್ದು ನಾಲೆಗಳ ನೀರು ನಂಬಿ ರೈತರು ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ.
ಆದರೆ ಈ ಬಾರಿ ಮಳೆ ಕೊರತೆಯಿಂದ ಭತ್ತ ನಾಟಿ ಮಾಡಬೇಡಿ ಎಂದು ಸರ್ಕಾರವೇ ಹೇಳಿದಾಗ ರೈತರಿಗೆ ಆಕಾಶವೇ ಕಳಚಿ ಬಿದ್ದಂತೆ ಆಗಿತ್ತು. ಜುಲೈ ಕೊನೆಯ ವಾರದಲ್ಲಿ ನಾಲೆಗಳಿಗೆ ಕಟ್ಟು ನೀರು ಹರಿಸಲಾಯಿತಾದರೂ ರೈತರು ಮಳೆಯನ್ನು ನಂಬಿಕೊಂಡು ಭತ್ತ ನಾಟಿ ಮಾಡಿದರು. ಹಗಲು ರಾತ್ರಿ ಎನ್ನದೇ ರೈತರು ನೀರು ಹಾಯಿಸಿಕೊಂಡು ಉತ್ತಮ ಭತ್ತ ಬೆಳೆದಿದ್ದಾರೆ.
ಭತ್ತ ಕಟಾವಿಗೆ ಸಿದ್ಧವಾಗಿದ್ದು ಕೆಲವು ಕಡೆಗಳಲ್ಲಿ ಈಗಾಗಲೇ ಕಟಾವು ಮಾಡಿ ಭತ್ತದ ಮಾರಾಟ ಜೋರಾಗಿದೆ. ಹಾಲಿ ಕಟಾವು ಮಾಡಿರುವ ಭತ್ತಕ್ಕೆ ಕ್ವಿಂಟಾಲ್‌ಗೆ ೩ ಸಾವಿರ ರೂ.ವರೆಗೆ ದರ ಇದೆ. ನಾವು ಕಟಾವು ಮಾಡಿದಾಗ ಇದೇ ದರ ಇರಲಿ ಎನ್ನುತ್ತಾರೆ ಕೆಲವು ರೈತರು.
ರೈತ ಜಿ.ಎಂ.ಹೇಮಂತ್ ಪತ್ರಿಕೆ ಜೊತೆ ಮಾತನಾಡಿ ಮುಂಗಾರು ಮಳೆ ನಿಗದಿತ ಸಮಯಕ್ಕೆ ಆಗಿಲ್ಲ. ಕಾವೇರಿ ನದಿಯಲ್ಲಿ ನೀರಿನ ಅಭಾವ. ಸರ್ಕಾರ ಭತ್ತದ ಬೆಳೆಗೆ ನೀರಿಲ್ಲ ಎಂದು ಸಂದೇಶ ನೀಡಿತ್ತು ಇದರಿಂದಾಗಿ ಭತ್ತ ಬೆಳೆಯುವುದೇ ಬೇಡ ಎಂದು ಬಿಟ್ಟಿದ್ದೆವು. ಆದರೂ ದೇವರ ಮೇಲೆ ಭಾರ ಹಾಕಿ, ಭತ್ತನಾಟಿಯನ್ನು ಮಾಡಿದೆವು. ಕಳೆದ ಬಾರಿಗಿಂತ ಹೆಚ್ಚಿನ ಫಸಲು ಬರುವ ನಿರೀಕ್ಷೆ ಇದೆ. ಬೀಜ, ಗೊಬ್ಬರ ದರ ಸ್ವಲ್ಪ ಏರಿಕೆ ಆದರೂ ಇಳುವರಿ ಚೆನ್ನಾಗಿ ಬಂದರೆ ಅದು ಅಲ್ಲಿಗೆ ಸರಿ ಆಗುತ್ತದೆ. ನಮಗೆ ೧ ಎಕರೆಗೆ ೩೦-೩೫ ಸಾವಿರ ರೂ. ಖರ್ಚು ಬರಬಹುದು. ನಮ್ಮ ಶ್ರಮಕ್ಕೆ ತಕ್ಕಂತೆ ಸರ್ಕಾರ ದರ ನೀಡಲಿ ಎಂದರು
” ಭತ್ತದ ನಾಡಿನಲ್ಲಿ ಬರ ಇದ್ದರೂ ಕಷ್ಟ ಪಟ್ಟು ಭತ್ತದ ಬೆಳೆ ಬೆಳೆದಿದ್ದಾರೆ. ನೀರಾವರಿ ಅಧಿಕಾರಿಗಳು ಮತ್ತು ಸರ್ಕಾರ ಭತ್ತದ ಬೆಳೆಗೆ ನೀರು ಕೊಡಲ್ಲ ಎಂದು ಹೇಳಿದ್ದರೂ ಧೈರ್ಯ ಮಾಡಿ ಭತ್ತ ಬೆಳೆದಿದ್ದಾರೆ. ಹಾಗಾಗಿ ಈ ಕೂಡಲೇ ಸರ್ಕಾರ ಖರೀದಿ ಕೇಂದ್ರ ತೆರೆಯಬೇಕು. ದಲ್ಲಾಳಿಗಳ ಹಾವಳಿ ತಪ್ಪಿಸಬೇಕು. ಭತ್ತಕ್ಕೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕ್ವಿಂಟಾಲ್‌ಗೆ ೪ ಸಾವಿರ ರೂ. ಬೆಂಬಲ ಬೆಲೆ ನಿಗದಿ ಮಾಡಬೇಕು. ಇಲ್ಲವಾದರೆ ರಾಜ್ಯ ಸರ್ಕಾರ ಕ್ವಿಂಟಾಲ್ ಭತ್ತಕ್ಕೆ ೫೦೦ ರೂ.ಪ್ರೋತ್ಸಾಹಧನ ನೀಡಬೇಕು.”
-ಜೆ.ಎಂ.ಕುಮಾರ್, ಗೌರವಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಪರ್ವ ಸಂಘ
” ಬರಗಾಲದಿಂದಾಗಿ ರಾಜ್ಯದಲ್ಲಿ ಅಕ್ಕಿಯ ಬೆಲೆ ಗಗನಕ್ಕೇರಿದೆ. ನಮ್ಮ ಬಳಿ ಮಾತ್ರ ದಲ್ಲಾಳಿಗಳು ಕ್ವಿಂಟಾಲ್‌ಗೆ ೩ ಸಾವಿರದಿಂದ ಮೂರೂವರೆ ಸಾವಿರ ರೂ.ವರೆಗೆ ಭತ್ತ ಖರೀದಿ ಮಾಡುತ್ತಿದ್ದಾರೆ. ಇಲ್ಲಿ ಮಧ್ಯವರ್ತಿಗಳಿಗೆ ಹೆಚ್ಚಿನ ದರ ಸಿಗುತ್ತದೆ. ಆದ್ದರಿಂದ ಸರ್ಕಾರ ನಿಗದಿತ ಬೆಂಬಲ ಬೆಲೆ ಘೋಷಣೆ ಮಾಡಲಿ.”
-ಅರ್ಜುನಹಳ್ಳಿ ರಾಮ್‌ಪ್ರಸಾದ್, ಅಧ್ಯಕ್ಷ, ತಾಲ್ಲೂಕು ಯುವ ರೈತ ವೇದಿಕೆ
ಕೇಶವ್ ಎಂ. ಮೀನುಗಾರಿಕೆಯನ್ನೇ ನಂಬಿರುವ ಕುಟುಂಬಗಳು ಕಂಗಾಲು ಮೈಸೂರು: ಜಿಲ್ಲೆಯ ತಾಲ್ಲೂಕುವಾರು ೫೦೦ಕ್ಕೂ ಹೆಚ್ಚು ಮಳೆಯಾಶ್ರಿತ ಕೆರೆಗಳು ಹಾಗೂ ನೀರಾವರಿ…
ನವದೆಹಲಿ: ಪವಿತ್ರ ಇರುಮುಡಿ ಕೆಟ್ಟನ್ನು ವಿಮಾನದ ಕ್ಯಾಬಿನ್‌ನಲ್ಲಿ ಕೈಚೀಲವಾಗಿ ಕೊಂಡೊಯ್ಯುವ ಅನುಮತಿಯನ್ನು ಸತತ ಮೂರನೇ ವರ್ಷವೂ ಮುಂದುವರಿಸಲಾಗಿದೆ ಎಂದು ನಾಗರಿಕ ವಿಮಾನಯಾನ…
ನವದೆಹಲಿ: ಚಿನ್ನದ ಬೆಲೆ ಕುಸಿತದ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಅಗತ್ಯವಿಲ್ಲದಿದ್ದರೆ ಒಂದು ವರ್ಷ ಚಿನ್ನ ಖರೀದಿಸಬೇಡಿ ಎಂದು…
ಮೈಸೂರು: ರವಿ ಹಂಜ್ ಅವರ ‘ಬಸವ ಮಂಟಪ’ ಪುಸ್ತಕದ ವಿವಾದಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ…
ಗುಜರಾತ್: ಇಲ್ಲಿನ ಕಚ್ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಏಳು ಮಂದಿ…