Andolana originals

ದಲಿತ ಚಿಂತಕ ಧೀಮಂತ ನಾಯಕ ಡಾ.ಎಚ್.ಸಿ.ಮಹದೇವಪ್ಪ ಅವರ ಹೋರಾಟದ ಕತೆ……

‘ಆಂದೋಲನ’ ವಿಶೇಷ ಸಂದರ್ಶನದಲ್ಲಿ ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ.ಮಹದೇವಪ್ಪ ಅವರ ಮನದಾಳದ ಮಾತು ಇಲ್ಲಿದೆ

ನಿರೂಪಣೆ.. ಆರ್‌.ಟಿ.ವಿಠ್ಠಲಮೂರ್ತಿ

ನಾನು ಮೂಲತಃ ಹಳ್ಳಿಯಿಂದ ಬಂದವನು. ನನ್ನೂರು ನಂಜನಗೂಡು ತಾಲ್ಲೂಕಿನ ಹದಿನಾರು ಎಂಬ ಹಳ್ಳಿ. ತಾಲ್ಲೂಕಿನ ನಾಲ್ಕೈದು ದೊಡ್ಡ ಹಳ್ಳಿಗಳಲ್ಲಿ ಇದೂ ಒಂದು. ಚಾರಿತ್ರಿಕವಾಗಿ ಅದಕ್ಕೆ ಯದುನಾಡು ಅಂತ ಹೆಸರಿತ್ತು. ಆಗ ಸುತ್ತಲ ಮೂವತ್ಮೂರು ಹಳ್ಳಿಗಳಿಗೆ ಅದು ಕೇಂದ್ರ ಸ್ಥಾನವಾಗಿತ್ತು. ಮೈಸೂರು ಒಡೆಯರ ವಂಶಸ್ಥರು ಇಲ್ಲಿದ್ದರಂತೆ.

ನನ್ನೂರಿನ ಚರಿತ್ರೆಯ ಬಗ್ಗೆ ನನಗೆ ಅಷ್ಟು ಗೊತ್ತಿರಲಿಲ್ಲ. ಆದರೆ ಕಿತ್ತೂರಿನಲ್ಲಿ ಓದುತ್ತಿದ್ದ ನನ್ನ ಮಗಳನ್ನು ಒಮ್ಮೆ ನೋಡಲು ಹೋದಾಗ: ಅಪ್ಪಾ, ಮೈಸೂರು ಚರಿತ್ರೆಯಲ್ಲಿ ನಮ್ಮೂರಿನ ಹೆಸರು ಇದೆ ನೋಡಿ ಎಂದಿದ್ದಳು. ಇದರ ಬಗ್ಗೆ ಇತಿಹಾಸಕಾರರಾದ ಪಿ. ವಿ. ನಂಜರಾಜ ಅರಸ್ ಅವರೂ ಬರೆದಿದ್ದಾರೆ. ಇಂತಹ ಹದಿನಾರು ಗ್ರಾಮದಲ್ಲಿದ್ದವರು ನನ್ನ ತಾತ ಬೋಸಾ (ಬೋಸಯ್ಯ)ಅವರು ಅಜಾನು ಬಾಹು. ದೊಡ್ಡ ಮೈಕಟ್ಟಿನವರು. ಇವರ ಮಕ್ಕಳ ಪೈಕಿ ದೊಡ್ಡವರು ದೊಡ್ಡ ಬೋಸಾ, ಚಿಕ್ಕವರು ಅಂದರೆ ನನ್ನ ತಂದೆ ಚಿಕ್ಕ ಬೋಸಾ. ಹೀಗಾಗಿ ಮುಂದೆ ನನ್ನ ಹಿರಿಯರ ಹೆಸರಿರಲಿ ಎಂಬ ಕಾರಣಕ್ಕಾಗಿ ನನ್ನ ಮಗನಿಗೆ ಬೋಸ್ ಅಂತ ಹೆಸರಿಟ್ಟೆ. ಅರಿವಿಲ್ಲದವರು: ಓ, ಏನು ಇವರು ಸುಭಾಶ್ಚಂದ್ರ ಬೋಸ್ ಮಕ್ಕಳು ಎಂಬಂತೆ ಮಾತನಾಡುತ್ತಾರೆ. ಆದರೆ ನನ್ನ ಮಗನ ಹೆಸರಿನ ಹಿನ್ನೆಲೆ ಇದು.

ನನ್ನ ತಂದೆ ಚಿಕ್ಕ ಬೋಸಾ ಬಹಳ ನೇರ ನಡೆ-ನುಡಿಯ, ನಿಷ್ಠುರ ಸ್ವಭಾವದ ವ್ಯಕ್ತಿ. ತಪ್ಪು ಯಾರೇ ಮಾಡಿರಲಿ,ಕುಟುಂಬದವರೇ ಮಾಡಿದ್ದರೂ ಮುಖಕ್ಕೆ ಹೊಡೆದಂತೆ ಹೇಳಿಬಿಡುತ್ತಿದ್ದರು. ಇನ್ನು ನನ್ನ ತಾಯಿ ಮಾದಮ್ಮ ಬಹಳ ಯೋಗ್ಯ ಮತ್ತು ಪ್ರಾಮಾಣಿಕ ಮಹಿಳೆ. ತನ್ನಲ್ಲಿದ್ದುದನ್ನು ಹಂಚಿಕೊಡುವ ದೊಡ್ಡ ಗುಣ ಅವರಲ್ಲಿತ್ತು. ನನ್ನ ಮೇಲೆ ಅವರ ಪ್ರಭಾವ ಅಪಾರವಾದದ್ದು.

ಇನ್ನು ಊರಿನಲ್ಲಿ ನಾವು ಶ್ರೀಮಂತರಲ್ಲದಿದ್ದರೂ ನಮಗೆ ಪಿತ್ರಾರ್ಜಿತವಾಗಿ ಬಂದ ಹೊಲ-ಗದ್ದೆಗಳು ನಮ್ಮ ಜೀವನವನ್ನು ಸ್ವತಂತ್ರವಾಗಿ, ಸ್ವಾವಲಂಬಿಗಳಾಗಿ ಜೀವಿಸಲು ಸಾಕಾಗುವಷ್ಟಿತ್ತು. ನೋಡುತ್ತಾ ಹೋದರೆ ನಮ್ಮೂರಿನಲ್ಲಿ ದಲಿತರು, ಕುರುಬರು, ನಾಯಕರು ಜಾಸ್ತಿ. ಆದರೆ ಲಿಂಗಾಯತರು ಬಹುಸಂಖ್ಯಾತರು.

ಅನುಭವಿಸಿದ ಅಪಮಾನ ಸಣ್ಣದಲ್ಲ
ಸಹಜವಾಗಿ ಎಲ್ಲ ಕಡೆ ಇರುವಂತೆ ನಮ್ಮೂರಿನಲ್ಲೂ ಜಾತಿಯತೆ, ಅಸ್ಪೃಶ್ಯತೆ, ಜಾತಿ ಶ್ರೇಷ್ಠತೆಯ ಕರಾಳ ಛಾಯೆಗಳೆಲ್ಲ ದಟ್ಟವಾಗಿಯೇ ಇದ್ದವು. ಹೀಗಾಗಿ ಸಮ ಸಮಾಜದ ಬದುಕನ್ನು ನಾವು ಯಾವತ್ತೂ ಅನುಭವಿಸಲಿಲ್ಲ. ನನ್ನೂರಿನಲ್ಲಿ ನಾನು ಪ್ರೈಮರಿ ಸ್ಕೂಲಿನಿಂದ ಎಸ್. ಎಸ್. ಎಲ್. ಸಿ. ತನಕ ಓದಿದೆನಾದರೂ ಜಾತಿಯತೆಯ ಬಿಸಿಯನ್ನು ಉದ್ದಕ್ಕೂ ಅನುಭವಿಸಿದೆ. ಶಾಲೆಯಲ್ಲಿ ನಾನು ಮಾನಿಟರ್ ಆಗಿರುತ್ತಿದ್ದೆ, ಕ್ಯಾಪ್ಟನ್ ಆಗಿರುತ್ತಿದ್ದೆ, ಎಲ್ಲ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲೇ ಇರುತ್ತಿದ್ದೆ. ಆದರೆ ನಾಟಕಗಳಲ್ಲಿ ಪಾತ್ರ ವಹಿಸಲು ನಮಗೆ ಅವಕಾಶವಿರುತ್ತಿರಲಿಲ್ಲ. ಕುಡಿಯುವ ನೀರನ್ನು ಪ್ರತ್ಯೇಕವಾಗಿ ಇಡಲಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ನನಗೆ ತುಂಬ ನೋವು ಕೊಟ್ಟ ಘಟನೆಯೊಂದಿದೆ. ಆಗೆಲ್ಲ ನಾವು ರಜೆಯ ದಿನಗಳು ಬಂತೆಂದರೆ ದನ ಮೇಯಿಸಲು ಹೋಗುತ್ತಿದ್ದೆವು. ಇಂತಹ ಸಂದರ್ಭದಲ್ಲಿ ಒಮ್ಮೆ ನಮ್ಮ ಹೊಲದ ಪಕ್ಕ ಇರುವ ಒಣಕೆರೆಯಲ್ಲಿ ಹುಡುಗರೆಲ್ಲ ಸೇರಿ ಕಬಡ್ಡಿ ಆಡತೊಡಗಿದೆವು. ಕಬಡ್ಡಿ ಆಡುವಾಗ ಕಾಲು ಎತ್ತಿ ಹೊಡೆಯಬೇಕಲ್ಲ? ಹೀಗೆ ನಾನು ಕಾಲೆತ್ತಿ ಹೊಡೆಯುವುದನ್ನು ನೋಡಿ ಮುಲಗೋಡು ಕೆಂಪಣ್ಣ ಎಂಬಾತ ಎಷ್ಟು ಕೋಪಗೊಂಡನೆಂದರೆ: ಇವನು ಅಸ್ಪೃಶ್ಯ ಇಂತವನು ಕಾಲೆತ್ತಿ ಹೊಡೆಯುತ್ತಿದ್ದಾನೆ ಅಂತ ನನ್ನನ್ನು ಅಟ್ಟಾಡಿಸಿಬಿಟ್ಟ. ಆಗ ನನಗೆ ಎಷ್ಟು ನೋವಾಯಿತು ಎಂದರೆ: ಏನಪ್ಪಾ ಈ ಸಮಾಜ? ಯಾಕೆ ಇಂತಹ ತಾರತಮ್ಯ? ಅಂತ ತುಂಬ ಯೋಚಿಸಿದೆ. ನನ್ನ ಜೀವನದ ಮೇಲೆ ಬಹಳ ಪ್ರಭಾವ ಬೀರಿದ ಘಟನೆಗಳಲ್ಲಿ ಇದು ಒಂದು.

ಇಷ್ಟಾದರೂ ನಾನು ನನ್ನ ಜನರ ಪರವಾಗಿ ಆಸ್ಪತ್ರೆಗಳಿಗೆ, ಸರ್ಕಾರಿ ಕಚೇರಿಗಳಿಗೆ, ಸರ್ಕಾರಿ ಯೋಜನೆಗಳನ್ನು ಕೊಡಿಸುವುದಕ್ಕೆ ಅಂತ ಹೋಗುತ್ತಿದ್ದೆ. ಆಗಿನ್ನೂ ನಾನು ಏಳು, ಎಂಟನೇ ತರಗತಿಯ ಹುಡುಗ. ಶ್ರೀಮಂತರಾದರೆ ಸರ್ಕಾರಿ ಕಚೇರಿಗಳಲ್ಲಿ ಸುಲಭವಾಗಿ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಆದರೆ ಬಡವರಿಗೆ, ದಲಿತರಿಗೆ ಇದು ಕಷ್ಟ. ಹೀಗಾಗಿ ನಾನು ಸರ್ಕಾರಿ ಕಚೇರಿಗಳಿಗೆ, ಪೋಲೀಸ್ ಸ್ಟೇಷನ್ನುಗಳಿಗೆ ಹೋಗಿ ಅವರ ಪರವಾಗಿ ನಿಲ್ಲುತ್ತಿದ್ದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಜಾತಿಯ ಕಾರಣಕ್ಕಾಗಿ ಯಾವೆಲ್ಲ ಅಪಮಾನಗಳಾದವೋ? ಅಂತಹದೇ ಅಪಮಾನಗಳನ್ನು ನಾನೂ ಅನುಭವಿಸಿದ್ದೇನೆ. ನೋವು ತಿಂದು ಗಟ್ಟಿಯಾಗಿದ್ದೇನೆ.

ಸರಿ, ಹೀಗೆ ಹದಿನಾರು ಗ್ರಾಮದಲ್ಲಿ ಎಸ್. ಎಸ್. ಎಲ್. ಸಿ. ತನಕ ಓದಿದೆನಲ್ಲ? ಇದಾದ ನಂತರ ಮುಂದೇನು ಮಾಡುವುದು? ಎಂಬ ಪ್ರಶ್ನೆ ಶುರುವಾಯಿತು. ಆಗೆಲ್ಲ ನನಗೆ ಗುರು, ಮಾರ್ಗದರ್ಶಕರು ಅಂತ ಯಾರೂ ಇರಲಿಲ್ಲ. ನನಗೆ ನಾನೇ ಗುರು, ಮಾರ್ಗದರ್ಶಿ. ಹೀಗಿದ್ದಾಗಲೇ ಹುಣಸೂರಿನಲ್ಲಿದ್ದ ನನ್ನ ಅಕ್ಕ-ಭಾವನ ಮನೆಗೆ ಹೋಗಿ ಪಿಯುಸಿಗೆ ಸೇರುವುದು ಎಂದಾಯಿತು. ಆಗ ನನ್ನ ಭಾವ ಕೇಂದ್ರ ಸರ್ಕಾರದ ಉದ್ಯೋಗಿ. ಹುಣಸೂರಿನ ಹೊಗೆಸೊಪ್ಪು ಸಂಶೋಧನಾ ಕೇಂದ್ರದಲ್ಲಿ ಕೆಲಸಕ್ಕಿದ್ದರು. ಹೀಗೆ ಪಿಯುಸಿ ಓದಲು ಅಂತ ಹುಣಸೂರಿಗೆ ಹೋದವನು ಪಿಯುಸಿ ವ್ಯಾಸಂಗದ ನಂತರ ಬ್ಯಾಂಕ್ ಕೆಲಸಕ್ಕೆ ಅರ್ಜಿ ಹಾಕಿದೆ, ಸಿಗಲಿಲ್ಲ. ಈ ಮಧ್ಯೆ ನನ್ನ ಭಾವನ ಗೆಳೆಯರು ಇವನು ಮೆಡಿಕಲ್ ಓದಲಿ ಅಂತ ಸಲಹೆ ನೀಡಿದರು. ಆಗೆಲ್ಲ ನಲವತ್ತೈದು, ಐವತ್ತು ಪರ್ಸೆಂಟ್ ಮಾರ್ಕ್ಸುಗಳಿದ್ದರೆ ಮೆಡಿಕಲ್ ಸೀಟು ಸಿಗೋದು. ಹೀಗಾಗಿ ದಾವಣಗೆರೆ ಮೆಡಿಕಲ್ ಕಾಲೇಜಿಗೆ ಅರ್ಜಿ ಹಾಕಿದೆ.

ಹೋರಾಟದ ಆರಂಭಿಕ ಹೆಜ್ಜೆಗಳು
ಆದರೆ ಅದು ಏನಾಗುತ್ತದೋ ಗೊತ್ತಿಲ್ಲವಲ್ಲ? ಹೀಗಾಗಿ ಬಿ. ಎಸ್. ಸಿ. ಓದಲು ಅಂತ ಮೈಸೂರಿನ ಯುವರಾಜ ಕಾಲೇಜಿಗೆ ಸೇರಿದೆ. ಮೂರು ತಿಂಗಳಷ್ಟೇ. ಆನಂತರ ಎಂ. ಡಿ. ಟಿ. ಡಿ. ಬಿ. ಕಾಲೇಜಿಗೆ ಸೇರಿದೆ. ಆದರೆ ಅಷ್ಟರಲ್ಲೇ ದಾವಣಗೆರೆ ಮೆಡಿಕಲ್ ಕಾಲೇಜಿನಲ್ಲಿ ಸೀಟು ಸಿಕ್ಕಿತಲ್ಲ? ಹೀಗಾಗಿ ಮೆಡಿಕಲ್ ಓದಲು ದಾವಣಗೆರೆಗೆ ಹೋದೆ. ಅಲ್ಲಿಗೆ ಹೋದರೆ ಈಗ ನಮ್ಮ ವೇಮುಲ ಕೇಸು ಇದೆಯಲ್ಲ? ಹಾಗೆ. ತಲೆ ಎತ್ತಿ ಮಾತನಾಡುವಂತಿಲ್ಲ. ಸ್ಕಾಲರ್ ಶಿಪ್ ಕೇಳುವಂತಿಲ್ಲ. ಇದೆಲ್ಲದರ ಜತೆಗೆ ಹಲ ವಿದ್ಯಾರ್ಥಿಗಳಿಗೆ ಇವರು ಅಸ್ಪಶ್ಯರು, ನಮ್ಮ ದುಡ್ಡಿನಲ್ಲಿ ಊಟ ಮಾಡುತ್ತಿದ್ದಾರೆ ಎಂಬ ಭಾವನೆ. ಹೀಗಾಗಿ ಕಾಲೇಜಿನಲ್ಲಿ ದಲಿತ ವಿದ್ಯಾರ್ಥಿಗಳಿಗೆ ಧ್ವನಿಯೇ ಇರಲಿಲ್ಲ. ಆದರೆ ನಾನು ಹೋದ ನಂತರ ಪರಿಸ್ಥಿತಿ ಬದಲಾಯಿತು. ಹೋರಾಟದ ಮುಂಚೂಣಿಯಲ್ಲಿ ನಾನು ನಿಂತ ಮೇಲೆ ಉಳಿದ ದಲಿತ ವಿದ್ಯಾರ್ಥಿಗಳು ನನ್ನ ಜತೆ ಸೇರಿಕೊಂಡರು.

ನಾನು ಅಷ್ಟಕ್ಕೇ ಸುಮ್ಮನಾಗಲಿಲ್ಲ. ಬದಲಿಗೆ ವಿದ್ಯಾರ್ಥಿ ಯೂನಿಯನ್ ಚುನಾವಣೆಯಲ್ಲಿ ಭಾಗವಹಿಸಿದೆ. ಆಗ ಚಿಕ್ಕಣ್ಣ ಎಂಬ ವಿದ್ಯಾರ್ಥಿ ಇದ್ದರು. ಅವರ ತಂದೆ ದೇವರಾಜ ಅರಸರ ಸಂಪುಟದಲ್ಲಿ ಸಚಿವರಾಗಿದ್ದವರು. ಅಂತಹ ಚಿಕ್ಕಣ್ಣ ವಿದ್ಯಾರ್ಥಿ ಯೂನಿಯನ್ ಚುನಾವಣೆಯಲ್ಲಿ ಕಾರ್ಯದರ್ಶಿಯಾದರೆ, ನಾನು ಕ್ರೀಡಾ ಕಾರ್ಯದರ್ಶಿಯಾಗಿ ಆಯ್ಕೆಯಾದೆ. ಹೀಗಿದ್ದಾಗಲೇ ಬದುಕಿನಲ್ಲಿ ಕೆಲ ಆಕಸ್ಮಿಕಗಳು ಬಂದೆರಗಿದವು. ನಾನು ಮೊದಲ ವರ್ಷದ ಎಂ. ಬಿ. ಬಿ. ಎಸ್. ಓದುತ್ತಿದ್ದ ಸಂದರ್ಭದಲ್ಲಿ ನನ್ನ ತಾಯಿ ಮಾದಮ್ಮ ಅನಾರೋಗ್ಯಕ್ಕೆ ಒಳಗಾದರು. ಹೀಗಾಗಿ ಅವರಿಗೆ ಹೆದರಿಕೆ ಶುರುವಾಯಿತು. ನಾನು ನನ್ನ ಮಗ ಮಹದೇವನ ಮದುವೆ ನೋಡದೆ ಸತ್ತು ಹೋಗುತ್ತೇನಾ ಅಂತ ಕಳವಳ ಶುರುವಾಯಿತು. ಹೀಗಾಗಿ ನನಗೆ ತರಾತುರಿಯಲ್ಲಿ ಮದುವೆ ನಿಶ್ಚಯ ಮಾಡಿದರು. ಆಗಿನ್ನೂ ನನಗೆ ಮದುವೆ ಆಗಬೇಕು ಎಂಬ ಕಲ್ಪನೆಯೇ ಇರಲಿಲ್ಲ. ಆದರೆ ನನ್ನ ತಾಯಿಯ ಧಾವಂತಕ್ಕೆ ಸಿಲುಕಿ ಮದುವೆಯಾಗಬೇಕಾಯಿತು.

ಕ್ರಾಂತಿರಂಗ ಸೇರಿದ ಕತೆ
ಕ್ರಾಂತಿರಂಗ ಸೇರಿದ ಕತೆ ಹೀಗೆ ಮದುವೆ ಆದ ನಂತರ ನಾನು ನನ್ನ ಹೆಂಡತಿಯ ಊರು ಹೆಜ್ಜಿಗೆಗೆ ಹೋಗತೊಡಗಿದೆ. ಹೆಜ್ಜಿಗೆ ಎಂಬುದು ನಂಜನಗೂಡು ದೇವಸ್ಥಾನದ ಬಳಿ ಇರುವ ಊರು. ನದಿಯ ಒಂದು ದಡದಲ್ಲಿ ಇರುವ ಊರು ಅದು. ಹೀಗೆ ಅಲ್ಲಿಗೆ ಹೋಗಲು ಶುರುವಾದ ಕಾಲದಲ್ಲೇ ನನ್ನೂರಿನ ಪಕ್ಕ ಇರುವ ಹದಿನಾರು ಮೋಳೆ ಎಂಬ ಗ್ರಾಮದ ಜನರ ಸಮಸ್ಯೆಗಳು ಹೆಚ್ಚಾಗತೊಗಿದವು. ಹದಿನಾರು ಮೋಳೆ ನಮ್ಮೂರಿನ ಗ್ರಾಮ ಪಂಚಾಯ್ತಿಗೆ ಅಂಟಿಕೊಂಡ ಊರು. ಅಲ್ಲಿ ಜನರ ಮೇಲಾಗುತ್ತಿದ್ದ ಶೋಷಣೆ ಯಾವ ಪರಿ ಇತ್ತೆಂದರೆ ಅದನ್ನು ನೋಡಲಾಗದೆ ನಾನು ಹದಿನಾರು ಮೋಳೆಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಜಾರಿಯಾಗಲು ಕಾರಣನಾದೆ. ನ್ಯಾಯಬೆಲೆ ಅಂಗಡಿ, ಸರ್ಕಾರಿ ಕಚೇರಿಗಳು ಬರಲು ಕಾರಣನಾದೆ. ಬಡ್ಡಿ ದಂಧೆ ಮಾಡುವವರ ಹೊಡೆತದಿಂದ ಜನರನ್ನು ಬಚಾವು ಮಾಡಲು ಬ್ಯಾಂಕು ಬರುವಂತೆ ಮಾಡಿದೆ.

ಹೀಗೆ ಹೋರಾಟ ಮಾಡುತ್ತಾ, ಮಾಡುತ್ತಾ ದೇವರಾಜ ಅರಸರ ಕ್ರಾಂತಿರಂಗ ಪಕ್ಷಕ್ಕೆ ಸೇರಿದೆ. ದೇವರಾಜ ಅರಸರು ಎಂದರೆ ನಮಗೆ ದೊಡ್ಡ ಪ್ರೇರಣೆ. ಬಡತನದ ಬಗ್ಗೆ, ಸಾಮಾಜಿಕ ನ್ಯಾಯದ ಬಗ್ಗೆ ಮತ್ತು ಅರಸರ ಆಡಳಿತದ ಬಗ್ಗೆ ನನಗೆ ಎಷ್ಟು ಅಭಿಮಾನವಿತ್ತೆಂದರೆ ನಾನು ಕ್ರಾಂತಿರಂಗ ಪಕ್ಷ ಸೇರಲು ಅದು ಸಾಕಾಗಿತ್ತು. ಮೂಲತಃ ನಾವೆಲ್ಲ ಕಾಂಗ್ರೆಸ್ ಪಕ್ಷದವರು. ದಲಿತರೆಲ್ಲ ಹಾಗೆಯೇ ತಾನೇ? ಹೀಗಿದ್ದಾಗಲೇ ಅರಸರು ಬೀರಿದ್ದ ಪ್ರಭಾವದ ಹಿನ್ನೆಲೆಯಲ್ಲಿ ನಾನು ಕ್ರಾಂತಿರಂಗ ಸೇರಿದೆ. ಮತ್ತು ನಂಜನಗೂಡು ತಾಲ್ಲೂಕಿನಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾದೆ.

ಹೀಗೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲೇ ನಾನು ಬಿ. ರಾಚಯ್ಯ ಮತ್ತು ನಜೀರ್ ಸಾಬ್ ಅವರನ್ನು ನೋಡಿದ್ದು. ಈ ಪೈಕಿ ಬಿ. ರಾಚಯ್ಯನವರಂತೂ ದಲಿತರ ಸಾಂಸ್ಕೃತಿಕ ನಾಯಕರಾಗಿದ್ದರು. ಅವರ ಹೋರಾಟ, ಬದ್ಧತೆಗಳೆಲ್ಲ ನನಗೆ ಆದರ್ಶಪ್ರಾಯವಾಗಿದ್ದವು. ಬಿ. ಬಸವಲಿಂಗಪ್ಪ, ಕೆ. ಹೆಚ್. ರಂಗನಾಥ್ ಅವರನ್ನು ಕಂಡರೂ ನನಗೆ ತುಂಬ ಗೌರವ, ಅಭಿಮಾನ. ಹೀಗೆ ಕ್ರಾಂತಿರಂಗಕ್ಕೆ ಸೇರಿಕೊಂಡ ನಂತರ ನನಗೆ ಬಿ. ರಾಚಯ್ಯನವರ ಜತೆ ನಿರಂತರವಾಗಿ ಒಡನಾಡುವ ಅವಕಾಶ ಲಭಿಸಿತು ಮತ್ತು ಸಾಮಾಜಿಕ ನ್ಯಾಯದ ಬಗ್ಗೆ, ಹೋರಾಟಗಳ ಬಗ್ಗೆ ನಾನು ಮಾತನಾಡುವುದನ್ನು ರಾಚಯ್ಯನವರೂ ಬಹುವಾಗಿ ಮೆಚ್ಚಿಕೊಳ್ಳುತ್ತಿದ್ದರು. ಹುಡುಗ ಬುದ್ಧಿವಂತ ಅಂತ ತಾರೀಪು ಮಾಡುತ್ತಿದ್ದರು. ಇನ್ನು ನಜೀರ್ ಸಾಬ್ ಅವರಂತೂ ಡಾಕ್ಟ್ರೇ, ಡಾಕ್ಟ್ರೇ ಅಂತ ಅಪ್ಪಿಕೊಳ್ಳುತ್ತಿದ್ದರು. ಹೀಗೆ ಅವರ ಜತೆ ಸೇರಿ ನಾನು ನಿರಂತರವಾಗಿ ಹೋರಾಟಗಳನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದೆ.

ಸಿದ್ರಾಮಯ್ಯ ಸಿಕ್ಕ ಘಳಿಗೆ
ಇವತ್ತು ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯನವರು ನನಗೆ ಮೊದಲು ಪರಿಚಯವಾಗಿದ್ದೇ ಈ ಸಂದರ್ಭದಲ್ಲಿ. ಅವರು ಮೈಸೂರು ತಾಲ್ಲೂಕಿನವರು. ನಮ್ಮೂರಿನಿಂದ ಏಳು, ಎಂಟು ಕಿಲೋ ಮೀಟರು ದೂರ ಅಷ್ಟೇ. ಆದರೂ ಅವರೆಲ್ಲ ಯಾಕೆ ನಮ್ಮಲ್ಲಿಗೆ ಬರುತ್ತಿದ್ದರು ಎಂದರೆ ರಾಂಪುರ ನಾಲೆ ಇದೆಯಲ್ಲ? ಅದರಿಂದ ಪೂರೈಕೆಯಾಗುವ ನೀರಿಗೆ ಸಿದ್ದರಾಮಯ್ಯನವರ ಊರು ಟೈಲ್ಯಾಂಡ್ (ತುದಿ ಭೂಮಿ)ಹೀಗಾಗಿ ನಾಲೆಯ ನೀರು ಎಲ್ಲ ಕಾಲಕ್ಕೂ ಅಲ್ಲಿಗೆ ತಲುಪುತ್ತಿರಲಿಲ್ಲ. ಹೀಗಾಗಿ ನೀರು ಬಿಡುಗಡೆ ಮಾಡಿಸಲು ಸಂಬಂಧಪಟ್ಟ ಕಚೇರಿಗೆ ಗಲಾಟೆ ಮಾಡಲು ಅವರು ಬರಬೇಕಿತ್ತು.

ಅಲ್ಲಿಯ ತನಕ ನನಗೆ ಸಿದ್ದರಾಮಯ್ಯನವರು ಮತ್ತು ಸಿದ್ದರಾಮಯ್ಯನವರಿಗೆ ನಾನು ಯಾರೆಂದೇ ಗೊತ್ತಿರಲಿಲ್ಲ. ನನ್ನನ್ನು ನೋಡಿ ಅವರಿಗೂ ಅಚ್ಚರಿ. ಈ ಹುಡುಗ ಯಾರು? ಇನ್‌ಶರ್ಟ್ ಮಾಡಿಕೊಂಡು, ಸಿಗರೇಟು ಸೇದಿಕೊಂಡು ರಾಚಯ್ಯನವರ ಜತೆ ಇರುತ್ತಾನಲ್ಲ? ಅಂತ. ಇದಾದ ಕೆಲವೇ ಕಾಲದಲ್ಲಿ ೧೯೮೩ರ ವಿಧಾನಸಭೆ ಚುನಾವಣೆ ಎದುರಾಯಿತು. ಆಗ ಬಿ. ರಾಚಯ್ಯನವರಿಗೆ ತಿ. ನರಸೀಪುರ ಕ್ಷೇತ್ರದಲ್ಲಿ ಪಕ್ಷದ ಟಿಕೆಟ್‌ಅನ್ನು ನನಗೆ ಕೊಡಿಸುವ ಬಯಕೆ. ಆದರೆ ನಾನು ಚಿಕ್ಕವನು, ಹೀಗಾಗಿ ಆ ಚುನಾವಣೆಯಲ್ಲಿ ನನಗೆ ಟಿಕೆಟ್ ಸಿಗಲಿಲ್ಲ ಮತ್ತು ನಾನಾದರೂ ಟಿಕೆಟ್‌ಅನ್ನು ಬಯಸಿರಲಿಲ್ಲ.

ಆದರೆ ೧೯೮೪ರಲ್ಲಿ ಪ್ರಧಾನಮಂತ್ರಿ ಇಂದಿರಾ ಗಾಂಽಯವರ ಹತ್ಯೆ ನಡೆಯಿತಲ್ಲ? ಇದಾದ ನಂತರ ಸಂಸತ್ ಚುನಾವಣೆ ಎದುರಾಯಿತು. ಆಗಲೂ ನನಗೆ ಚುನಾವಣೆಯ ಟಿಕೆಟ್ ಕೊಡಿಸುವ ಹಂಬಲ ರಾಚಯ್ಯನವರಿಗಿತ್ತು. ಆದರೆ ಅವತ್ತು ಅದು ಸಾಧ್ಯವಾಗಲಿಲ್ಲ. ಆದರೆ ಹೆಗಡೆಯವರು ಸಂಸತ್ ಚುನಾವಣೆಯಲ್ಲಿನ ಸೋಲನ್ನು ನೈತಿಕವಾಗಿ ಸ್ವೀಕರಿಸಿ ವಿಧಾನಸಭೆಯನ್ನು ವಿಸರ್ಜಿಸಿ ಮಧ್ಯಂತರ ಚುನಾವಣೆಗೆ ಹೋಗಲು ನಿರ್ಧರಿಸಿದಾಗ ರಾಚಯ್ಯನವರು ನನಗೆ ತಿ. ನರಸೀಪುರ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡಿಸಲು ಮುಂದಾದರು. ಅಷ್ಟೊತ್ತಿಗಾಗಲೇ ಕ್ರಾಂತಿರಂಗ ಜನತಾ ಪಕ್ಷದಲ್ಲಿ ವಿಲೀನವಾಗಿತ್ತು. ಅಂದ ಹಾಗೆ ತಿ. ನರಸೀಪುರ ಕ್ಷೇತ್ರದಲ್ಲಿ ಹಿಂದೆ ಗೆದ್ದಿದ್ದ ವಾಸು ಅವರು ಸಂಸತ್ ಚುನಾವಣೆಯಲ್ಲಿ ಪಕ್ಷಕ್ಕಾಗಿ ದುಡಿಯಲಿಲ್ಲ ಎಂಬ ಆರೋಪಗಳಿದ್ದವು. ಹೀಗಾಗಿ ರಾಚಯ್ಯನವರು ನನಗೆ ಪಕ್ಷದ ಟಿಕೆಟ್ ಕೊಡಿಸಿಬಿಟ್ಟರು.

ಅವತ್ತು ಟಿಕೆಟ್ ಏನೋ ಸಿಕ್ಕಿತು. ಆದರೆ ನನ್ನ ಬಳಿ ದುಡ್ಡಿಲ್ಲ. ದಮಡಿ ಕಾಸೂ ಇಲ್ಲ. ಇಷ್ಟಾದರೂ ಚುನಾವಣೆಗೆ ಸ್ಪರ್ಧಿಸಿದಾಗ ಕ್ಷೇತ್ರದ ಜನ ದೊಡ್ಡ ಮಟ್ಟದಲ್ಲಿ ಕೈ ಹಿಡಿದರು. ಹೇಳಿದರೆ ನಿಮಗೆ ಅಚ್ಚರಿಯಾಗುತ್ತದೆ. ಏಕೆಂದರೆ ಅವತ್ತು ಚುನಾವಣೆ ನಡೆಯುವ ಬೂತ್‌ಗಳಲ್ಲಿ ಸ್ವಪಕ್ಷದ ಕಾರ್ಯಕರ್ತರಿಗೆ ಹಣ ನೀಡಲು ಹೋದರೆ ಬೇಸರ ಮಾಡಿಕೊಳ್ಳುತ್ತಿದ್ದರು. ನಮ್ಮ ಮರ್ಯಾದೆ ಕಳೆದಿರಿ ಎನ್ನುತ್ತಿದ್ದರು. ಇದೇ ರೀತಿ ಕೆಂಪಿ ಸಿದ್ದನಹುಂಡಿ ಅಂತ ಒಂದು ಹಳ್ಳಿ ಇದೆ. ಆ ಹಳ್ಳಿಯ ಜನ ಒಂದು ಟವೆಲ್ಲಿನಲ್ಲಿ ಎಲೆ, ಅಡಕೆ ಇಟ್ಟು, ಅದರ ತುಂಬ ನೋಟುಗಳನ್ನು ಹಾಕಿ ನನಗೆ ಚುನಾವಣೆಯ ವೆಚ್ಚಕ್ಕೆ ಅಂತ ಕೊಟ್ಟಿದ್ದರು. ಮುಂದೆ ಆ ದುಡ್ಡನ್ನು ನಾನು ಕ್ಷೇತ್ರಕ್ಕಾಗಿಯೇ ವೆಚ್ಚ ಮಾಡಿದೆ ಅನ್ನಿ. ಆದರೆ ಜನರ ಪ್ರೀತಿ ಹೇಗಿರುತ್ತಿತ್ತು? ಎಂಬ ಕಾರಣಕ್ಕಾಗಿ ನಿಮಗೆ ಇದನ್ನು ಹೇಳಿದೆ.

ಭೂ ಹೋರಾಟದ ಕತೆ
ಸರಿ, ಹೀಗೆ ೧೯೮೫ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ವಿಧಾನಸಭೆಗೆ ಬಂದೆ. ನಾಡಿನ ದಲಿತ ಹೋರಾಟಗಾರರು, ನಾಯಕರು ನನಗೆ ಹತ್ತಿರವಾಗಿದ್ದು ಇಲ್ಲಿಂದ. ದೇವನೂರ ಮಹಾದೇವ ಅವರಿರಬಹುದು, ಸಿದ್ದಲಿಂಗಯ್ಯ, ಚಂದ್ರ ಪ್ರಸಾದ್ ತ್ಯಾಗಿ, ಮುನಿಸ್ವಾಮಿ, ಎಂ. ಡಿ. ಗಂಗಯ್ಯ, ತುಮಕೂರಿನ ರಂಗನಾಥ್, ಮಾವಳ್ಳಿ ಶಂಕರ್, ಡಿ. ಜಿ. ಸಾಗರ್, ಸಮತಾ ಸೈನಿಕ ದಳದಲ್ಲಿದ್ದ ವೆಂಕಟಸ್ವಾಮಿ, ಲಕ್ಷ್ಮೀನಾರಾಯಣ ನಾಗವಾರ, ಇಂದೂಧರ ಹೊನ್ನಾಪೂರ, ಚಿತ್ರದುರ್ಗದ ಜಯಣ್ಣ ಹೀಗೆ ಎಲ್ಲರೂ ಅತಿರಥ-ಮಹಾರಥರು. ಯಾವಾಗ ಇವರೆಲ್ಲರ ಸಂಪರ್ಕ ಶುರುವಾಯಿತೋ? ಇದಾದ ನಂತರ ನಮ್ಮ ಹೋರಾಟಕ್ಕೆ ಹೊಸ ಕಾವು ಬಂತು. ನಿಜ ಹೇಳಬೇಕೆಂದರೆ ಇವರ‍್ಯಾರೂ ರಾಜಕಾರಣಿಗಳ ಬಳಿ ಹೋದವರಲ್ಲ ಮತ್ತು ಕನಿಷ್ಠ ಪಕ್ಷ ಶಾಸಕರ ಭವನದ ಕಡೆ ಸುಳಿದವರೂ ಅಲ್ಲ. ಆದರೆ ಯಾವಾಗ ನಮ್ಮ ಸಂಪರ್ಕ ಶುರುವಾಯಿತೋ? ಇದಾದ ನಂತರ ತುಂಬ ಸಲ ಶಾಸಕರ ಭವನದ ನಮ್ಮ ಕೊಠಡಿಯಲ್ಲೇ ಹಲವು ಹೋರಾಟಗಳ ರೂಪುರೇಷೆಗಳು ಸಿದ್ಧವಾಗುತ್ತಿದ್ದವು. ಮಂಗ್ಳೂರ ವಿಜಯ ಅವರೆಲ್ಲ ಹೋರಾಟದ ಸ್ಕ್ರಿಪ್ಟುಗಳನ್ನು ಬರೆಯುತ್ತಿದ್ದರು.

ನಿಮಗೆ ಹೇಳುತ್ತೇನೆ. ನನ್ನ ಬದುಕಿನಲ್ಲಿ ಹೋರಾಟ, ನೈತಿಕತೆ, ಜವಾಬ್ದಾರಿ, ಕರ್ತವ್ಯಗಳನ್ನು ನಾನು ದೊಡ್ಡ ಮಟ್ಟದಲ್ಲಿ ಅಳವಡಿಸಿಕೊಳ್ಳಲು ದಲಿತ ಸಂಘಟನೆಗಳೇ ಮೂಲ ಕಾರಣ.

ಈ ಮಧ್ಯೆ ಒಂದು ಬೆಳವಣಿಗೆ ನಡೆಯಿತು. ಆ ಸಂದರ್ಭದಲ್ಲಿ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಸೇರಿ ಐದು ಜಿಲ್ಲೆಗಳಲ್ಲಿ ಕಾಫಿ ಬೆಳೆಗಾರರು ಒತ್ತುವರಿ ಮಾಡಿಕೊಂಡಿದ್ದ ಭೂಮಿಯನ್ನು ಅವರಿಗೇ ಕೊಡಲು ಸರ್ಕಾರ ಒಂದು ಕಾಯ್ದೆಯನ್ನು ರೂಪಿಸಲು ಹೊರಟಿತು.

ಮತ್ತು ಕರ್ನಾಟಕದ ದಲಿತ ಸಂಘಟನೆಗಳು ಇದರ ವಿರುದ್ಧ ಹೋರಾಟ ರೂಪಿಸಲು ಸಜ್ಜಾದವು. ಅಂದ ಹಾಗೆ ಹೀಗೆ ಭೂಮಿಯನ್ನು ಒತ್ತುವರಿ ಮಾಡಿಕೊಂಡವರು ಯಾರು? ಶ್ರೀಮಂತರು. ತಮ್ಮನ್ನು ತಾವು ಪ್ರಾಮಾಣಿಕರು ಅಂತ ಬಣ್ಣಿಸಿಕೊಳ್ಳುತ್ತಿದ್ದವರು.

ಹೀಗಾಗಿ ನಾನು ವಿಷಯವನ್ನು ಪಕ್ಷದ ಶಾಸಕಾಂಗ ಸಭೆಯಲ್ಲಿ ಪ್ರಸ್ತಾಪಿಸಲು ನಿರ್ಧರಿಸಿದೆ. ಆದರೆ ಅದಕ್ಕೂ ಮುನ್ನ ಚಿಕ್ಕಮಗಳೂರಿನಲ್ಲಿದ್ದ ಎ. ಸಿ. ನಟರಾಜ್ ಅವರನ್ನು ಕರೆಸಿ ಭೂ ಸುಧಾರಣೆ ಕಾಯ್ದೆಯ ಬಗ್ಗೆ ಪುಸ್ತಕ ತರಿಸಿಕೊಂಡು ವಿವರವಾಗಿ ಅಧ್ಯಯನ ಮಾಡಿದೆ, ಅಂಬೇಡ್ಕರ್ ಅವರ ಪ್ರಕಾರ ಭೂಮಿ ಎಂಬುದು ಸಮಾಜದ ಸಮಾನತೆಯ ಪ್ರತೀಕ. ಹೀಗೆ ಅದನ್ನು ವಿವರವಾಗಿ ಅಧ್ಯಯನ ಮಾಡಿದ ನಂತರ ಪಕ್ಷದ ಶಾಸಕಾಂಗ ಸಭೆಯಲ್ಲಿ ಮುಕ್ಕಾಲು ಗಂಟೆ ಮಾತನಾಡಿದೆ: ‘ಇವತ್ತು ಕಾಫಿ ಬೆಳೆಗಾರರು ಭೂಮಿ ಒತ್ತುವರಿ ಮಾಡಿಕೊಂಡಿದ್ದೇ ಕಾನೂನು ಬಾಹಿರ. ಹೀಗಾಗಿ ಸರ್ಕಾರ ಮೊದಲು ಅವರನ್ನು ಶಿಕ್ಷಿಸಬೇಕು. ಒತ್ತುವರಿಯನ್ನು ತೆರವುಗೊಳಿಸಬೇಕು. ಆದರೆ ಅದನ್ನು ಬಿಟ್ಟು ಒತ್ತುವರಿ ಮಾಡಿಕೊಂಡ ಭೂಮಿಯನ್ನು ಅವರಿಗೇ ಬಿಟ್ಟುಕೊಡುವುದು ಸರಿಯಲ್ಲ. ಹೀಗಾಗಿ ಮೊದಲು ಅವರು ಒತ್ತುವರಿ ಮಾಡಿಕೊಂಡ ಭೂಮಿಯನ್ನು ಸರ್ಕಾರ ವಶಪಡಿಸಿಕೊಳ್ಳಲಿ. ಮತ್ತು ವಶಪಡಿಸಿಕೊಂಡ ಭೂಮಿಯನ್ನು ದಯನೀಯ ಸ್ಥಿತಿಯಲ್ಲಿ ಬದುಕುತ್ತಿರುವ ದಲಿತರಿಗೆ ನೀಡಲಿ, ಒಂದು ವೇಳೆ ದಲಿತರಿಗೆ ನೀಡಲಾಗದಿದ್ದರೆ ಅರಣ್ಯ ಭೂಮಿಯನ್ನಾಗಿಯೇ ಇಟ್ಟುಕೊಂಡು ದಲಿತರಿಗಾಗಿ ಯೋಜನೆಗಳನ್ನು ರೂಪಿಸುವ ಕೆಲಸವಾಗಲಿ. ಮತ್ತು ಅಲ್ಲಿ ಬರುವ ಉತ್ಪನ್ನಗಳಲ್ಲಿ ದಲಿತರಿಗೆ ಪಾಲು ಸಿಗಲಿ ಅಂತ ಹೇಳಿದೆ. ಒಂದು ಹಂತದಲ್ಲಿ ನಾನು: ದಲಿತರಿಗೆ ನ್ಯಾಯ ಒದಗಿಸಲಾಗದೆ ದಲಿತ ವಿರೋಧಿ ಧೋರಣೆ ಅನುಸರಿಸುವುದಾದರೆ ಈ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು ಅಂತ ನೇರವಾಗಿ ಹೇಳಿದೆ. ಅವತ್ತು ನಾನಾಡಿದ ಮಾತಿಗೆ ಶಾಸಕಾಂಗ ಸಭೆಯಲ್ಲಿದ್ದ ಒಬ್ಬರೂ ಪ್ರತಿಯಾಡಲಿಲ್ಲ.

ನಿಜ ಹೇಳುತ್ತೇನೆ. ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಾದರೂ ಬಹಳ ದೊಡ್ಡ ಮನುಷ್ಯ. ಹೀಗಾಗಿ ಮರುದಿನ ತಮ್ಮ ಹುಟ್ಟುಹಬ್ಬವಿದ್ದರೂ ಎಂ. ಪಿ. ಎಂ. ಗೆಸ್ಟ್ ಹೌಸಿಗೆ ಬರುವಂತೆ ಅವತ್ತು ನನಗೆ ಸೂಚಿಸಿ ಹೋದರು. ಅವರ ಸೂಚನೆಯ ಪ್ರಕಾರ ಮರುದಿನ ಎಂ. ಪಿ. ಎಂ. ಗೆಸ್ಟ್ ಹೌಸಿಗೆ ಹೋದ ನಾನು ದಲಿತರು ಎದುರಿಸುತ್ತಿರುವ ದಯನೀಯ ಪರಿಸ್ಥಿತಿಯನ್ನು ಒಂದು ಗಂಟೆ ಕಾಲ ಎಳೆ ಎಳೆಯಾಗಿ ಬಿಡಿಸಿಟ್ಟೆ. ದೊಡ್ಡವರ ಗದ್ದೆಯಲ್ಲಿ ಕಳೆ ಕೀಳಲು ಹೋಗುವ ದಲಿತ ಹೆಣ್ಣು ಮಗಳು ತನ್ನ ಮಾನ ಮುಚ್ಚಿಕೊಂಡು ಹೇಗೆ ಕೆಲಸ ಮಾಡುವ ಪರಿಸ್ಥಿತಿ ಇದೆ ಎಂದು ವಿವರಿಸಿದೆ. ನನ್ನ ಮಾತು ಅವತ್ತು ಫಲ ನೀಡಿತು. ಒಂದು ಕಡೆ ನನ್ನ ಹೋರಾಟ ಹೀಗೆ ಸಾಗಿದರೆ ಮತ್ತೊಂದು ಕಡೆ ದಲಿತ ಸಂಘಟನೆಗಳು ಬೀದಿಗಳಿದು ಹೋರಾಟ ನಡೆಸಿದ್ದವು. ಪರಿಣಮವಾಗಿ, ಒತ್ತುವರಿ ಭೂಮಿಯನ್ನು ಕಾಫಿ ಬೆಳೆಗಾರರಿಗೇ ನೀಡುವ ಕಾಯ್ದೆ ಜಾರಿಯಾಗಲಿಲ್ಲ. ಮುಂದೆ ವಿಷಯ ಸುಪ್ರೀಂ ಕೋರ್ಟಿಗೆ ಹೋಯಿತು. ಅವತ್ತು ನಾನು ನಡೆಸಿದ ಹೋರಾಟ ಹೇಗಿತ್ತೆಂದರೆ ಇತಿಹಾಸಕಾರರೊಬ್ಬರು: ಇದು ‘ಚರಿತ್ರೆಯಲ್ಲಿ ಉಳಿಯುವ ಘಟನೆ’ ಎಂದು ಬಣ್ಣಿಸಿದರು.

ಒಂದು ವಿಷಾದದ ಕಥನ
ಹೀಗೆ ದಲಿತ ಸಂಘಟನೆಗಳ ಪ್ರಮುಖರ ಜತೆ ಸೇರಿ ನಾನು ನಡೆಸುತ್ತಿದ್ದ ಹೋರಾಟ ದಿನ ಕಳೆದಂತೆ ಎಷ್ಟು ವ್ಯಾಪಕವಾಗುತ್ತಾ ಹೋಯಿತೆಂದರೆ ನಾನು ಹಲವು ಬಾರಿ ರಾಜ್ಯವನ್ನು ಸುತ್ತಿದೆ. ರಾಜ್ಯ ರಾಜಕಾರಣದಲ್ಲಿ ಈ ಸಂದರ್ಭದಲ್ಲೇ ನಡೆದ ಒಂದು ಬೆಳವಣಿಗೆ ಇವತ್ತಿಗೂ ನನ್ನಲ್ಲಿ ವಿಷಾದದ ಮಡುವಾಗಿ ಉಳಿದಿದೆ.

ಯಾಕೆಂದರೆ ೧೯೮೮ ರ ಸುಮಾರಿಗೆ ಟೆಲಿಫೋನ್ ಕದ್ದಾಲಿಕೆಯ ಆರೋಪದ ಮೇಲೆ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ರಾಜೀನಾಮೆ ನೀಡಿದರಲ್ಲ? ಇದಾದ ನಂತರ ಮುಂದಿನ ಮುಖ್ಯಮಂತ್ರಿ ಯಾರು? ಎಂಬ ಪ್ರಶ್ನೆ ಶುರುವಾಯಿತು. ಒಂದು ಕಡೆ ದೇವೇಗೌಡರು ಮತ್ತೊಂದು ಕಡೆ ಎಸ್. ಆರ್. ಬೊಮ್ಮಾಯಿಯರು ಈ ಹುದ್ದೆಯ ಸ್ಪರ್ಧೆಯಲ್ಲಿದ್ದರೆ ಬಿ. ರಾಚಯ್ಯನವರು ಮತ್ತೊಂದು ಕಡೆಯಿಂದ ಪ್ರಯತ್ನಕ್ಕಿಳಿದರು. ಈ ಸಂದರ್ಭದಲ್ಲಿ ಪಕ್ಷದಲ್ಲಿದ್ದ ದಲಿತ ಶಾಸಕರ ಸಂಖ್ಯೆ ಇಪ್ಪತ್ತೇಳು. ಇವರೆಲ್ಲ ರಾಚಯ್ಯನವರ ಬೆನ್ನ ಹಿಂದೆ ನಿಂತಿದ್ದರೆ ಆಟ ಬೇರೆಯಾಗುತ್ತಿತ್ತು. ಆದರೆ ನಾಯಕನ ಆಯ್ಕೆಗಾಗಿ ಶಾಸಕಾಂಗ ಸಭೆ ನಡೆದ ದಿನ ನಾನು ಮೇಲೆದ್ದು ನಿಂತು ಬಿ. ರಾಚಯ್ಯನವರ ಹಿನ್ನೆಲೆ, ಅವರ ಪ್ರಾಮಾಣಿಕತೆ, ಶೋಷಿತರ ಬದುಕುಗಳನ್ನು ಹಸನುಗೊಳಿಸುವ ವಿಷಯದಲ್ಲಿ ಅವರಿಗಿರುವ ಬದ್ಧತೆಯ ಬಗ್ಗೆ ವಿವರಿಸಿ, ಶಾಸಕಾಂಗ ನಾಯಕನ ಹುದ್ದೆಗೆ ಅವರ ಹೆಸರನ್ನು ಪ್ರಸ್ತಾಪಿಸಿದೆ. ಆದರೆ ಉಳಿದ ದಲಿತ ಶಾಸಕರಲ್ಲಿ ಒಬ್ಬರೂ ರಾಚಯ್ಯನವರ ಜತೆ ನಿಲ್ಲಲಿಲ್ಲ. ಹಿಂದುಳಿದ ಮತ್ತು ಅಲ್ಪಸಂಖ್ಯಾತರೂ ನಿಲ್ಲಲಿಲ್ಲ. ಹೀಗಾಗಿ ರಾಚಯ್ಯನವರು ಹಿಂದೆ ಸರಿದು, ಬೊಮ್ಮಾಯಿ ಮತ್ತು ದೇವೇಗೌಡರ ಮಧ್ಯೆ ಕದನ ನಡೆಯಿತು. ದಲಿತ ಶಾಸಕರು, ಶೋಷಿತ ಸಮುದಾಯಗಳ ಶಾಸಕರು ಪ್ರಯತ್ನಿಸಿದ್ದರೆ ಅವತ್ತೇ ಕರ್ನಾಟಕ ದಲಿತ ಮುಖ್ಯಮಂತ್ರಿಯನ್ನು ನೋಡುತ್ತಿತ್ತು. ಆದರೆ ಅದು ಸಾಧ್ಯವಾಗಲಿಲ್ಲ ಎಂಬ ನೋವು ಇವತ್ತಿಗೂ ನನ್ನನ್ನು ಕಾಡುತ್ತಿದೆ.

ಸಿದ್ದರಾಮಯ್ಯ ಜತೆ ನಿಂತಿದ್ದೇಕೆ?
ಮುಂದೆ ಬಿ. ರಾಚುಯ್ಯನವರು ತೀರಿಕೊಂಡರಲ್ಲ? ಇದಾದ ನಂತರ ೧೯೮೯ರಲ್ಲಿ ಒಂದು ದಿನ ವಿಧಾನಸೌಧದ ಕೆಂಗಲ್ ಹನುಮಂತಯ್ಯವರ ಪ್ರತಿಮೆಯ ಮುಂದೆ ನಾನು, ಸಿದ್ದರಾಮಯ್ಯ, ಕೆ. ಆರ್. ಪೇಟೆ ಕೃಷ್ಣ, ಮೀಸೆ ರಾಮೇಗೌಡರೆಲ್ಲ ನಿಂತಿದ್ದೆವು. ಈ ಸಂದರ್ಭದಲ್ಲಿ ನಾನು ಸಿದ್ದರಾಮಯ್ಯನವರ ಜತೆ ಮಾತನಾಡುತ್ತಾ: ನಾನು ಇದುವರೆಗೆ ಬಿ. ರಾಚಯ್ಯನವರ ಫಾಲೋವರ್ ಆಗಿದ್ದೆ. ಆದರೆ ಇನ್ನು ಮುಂದೆ ನಿಮ್ಮ ಸ್ನೇಹಕ್ಕಾಗಿ ನಿಮ್ಮ ನಾಯಕತ್ವದ ಜತೆ ನಿಲ್ಲುತ್ತೇನೆ ಅಂತ ಹೇಳಿದೆ. ಬರೀ ಹೇಳಿದ್ದಷ್ಟೇ ಅಲ್ಲ, ಇವತ್ತಿನ ತನಕವೂ ನಿಂತಿದ್ದೇನೆ. ಮುಂದೆ ಸಿದ್ದರಾಮಯ್ಯ ಅವರಿಂದ ನನ್ನನ್ನು ಬೇರ್ಪಡಿಸಲು ಹಲವು ಪ್ರಯತ್ನಗಳು ನಡೆದಿವೆ. ಮಹದೇವಪ್ಪ ದೂರವಾದರೆ ಸಿದ್ಧರಾಮಯ್ಯ ಅವರ ಶಕ್ತಿ ಕುಸಿಯುತ್ತದೆ ಎಂಬ ಲೆಕ್ಕಾಚಾರದಲ್ಲಿ ನಡೆದ ಪ್ರಯತ್ನಗಳು ಅವು. ಆದರೆ ಅಂತಹ ಯಾವ ಪ್ರಯತ್ನಕ್ಕೂ ನಾನು ಬಗ್ಗಿಲ್ಲ. ಅಂದ ಹಾಗೆ ಅವತ್ತು ನಿಮ್ಮ ಜತೆ ನಿಲ್ಲುವುದಾಗಿ ಸಿದ್ಧರಾಮಯ್ಯನವರಿಗೆ ಹೇಳಿದೆನಲ್ಲ? ಇದಾದ ನಂತರ ನಾವು ರಾಜ್ಯಾದ್ಯಂತ ವ್ಯಾಪಕ ಹೋರಾಟಗಳನ್ನು ಸಂಘಟಿಸಿದೆವು. ಇಂತಹ ಹೋರಾಟಗಳನ್ನು ಮಾಡುತ್ತಲೇ ೧೯೯೪ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದೆವು. ಹೀಗೆ ಚುನಾವಣೆಯಲ್ಲಿ ಗೆದ್ದರೂ ನಾನು ಜನತಾದಳ ಸರ್ಕಾರದಲ್ಲಿ ಮಂತ್ರಿಯಾಗಲು ಪ್ರಯತ್ನ ಮಾಡಿರಲಿಲ್ಲ. ಯಾಕೆಂದರೆ ಅವತ್ತು ದಲಿತರಲ್ಲಿ ಸೀನಿಯರ್ ಅಂತ ಬಿ. ಸೋಮಶೇಖರ್ ಅವರಿದ್ದರು. ಆದರೆ ಅವತ್ತು ದೇವೇಗೌಡರಿಗೆ ಸೋಮಶೇಖರ್ ಅವರನ್ನು ಮಂತ್ರಿ ಮಾಡುವ ಇಚ್ಛೆ ಇರಲಿಲ್ಲ. ಹೀಗಾಗಿ ಅವತ್ತು ಅವರು, ಸಿದ್ದರಾಮಯ್ಯನವರು ಸೇರಿ ನನ್ನನ್ನು ಮಂತ್ರಿ ಮಾಡಿದರು. ಅವತ್ತು ಆರೋಗ್ಯ ಮಂತ್ರಿಯಾಗಿ ನಾನು ಮಾಡಿದ ಕೆಲಸದ ಬಗ್ಗೆ ನನಗೆ ತೃಪ್ತಿ ಇದೆ. ಯಾಕೆಂದರೆ ಇಲಾಖೆಯಲ್ಲಿ ನಾನು ಜಾರಿಗೊಳಿಸಿದ ಕಾರ್ಯಕ್ರಮಗಳನ್ನು ಪ್ರಶಂಸಿಸಿದ್ದ ವಿಶ್ವ ಬ್ಯಾಂಕ್ ತನ್ನ ವರದಿಯಲ್ಲಿ ದೇಶದ ರಾಜ್ಯಗಳಿಗೆ ಇವರು ಮಾದರಿ ಎಂದು ಬಣ್ಣಿಸಿತ್ತು.

ಅಹಿಂದ ಮೇಲೆದ್ದ ಕತೆ
ಮುಂದೆ ೧೯೯೯ರ ವಿಧಾನಸಭೆ ಚುನಾವಣೆ ನಡೆಯಿತಲ್ಲ? ಈ ಚುನಾವಣೆಯಲ್ಲಿ ಸಿದ್ದರಾಮಯ್ಯ, ನಾನು ಸೇರಿದಂತೆ ಜಾ. ದಳದ ಬಹುತೇಕರು ಸೋತಿದ್ದೆವು. ಆದರೆ ಈ ಸೋಲಿನಿಂದ ಸಿದ್ದರಾಮಯ್ಯ ಮಾನಸಿಕವಾಗಿ ಎಷ್ಟು ಜರ್ಜರಿತರಾಗಿದ್ದರೆಂದರೆ ಆ ಸಂದರ್ಭದಲ್ಲಿ ದೇವೇಗೌಡರ ಬಳಿ ಹೋದಾಗ ಗದ್ಗದಿತರಾಗಿದ್ದರು. ನಾನು ಇಷ್ಟು ಪ್ರಾಮಾಣಿಕವಾಗಿ ಜನ ಸೇವೆ ಮಾಡಿದರೂ ಜನ ನನ್ನನ್ನು ಸೋಲಿಸಿದರಲ್ಲ? ಎಂಬುದು ಸಿದ್ದರಾಮಯ್ಯನವರ ನೋವಾಗಿತ್ತು. ಹೀಗೆ ಪ್ರಾಮಾಣಿಕ ಸೇವೆ ಮಾಡಿಯೂ ನಾವು ಸೋಲುವುದಾದರೆ ಇನ್ನು ನಾನೇಕೆ ರಾಜಕೀಯ ಮಾಡಬೇಕು? ನಮ್ಮ ತಂದೆ ಆಸ್ತಿಯನ್ನೇನೂ ಮಾಡಿಟ್ಟಿಲ್ಲ. ಹೀಗಾಗಿ ನಾನು ಕೋರ್ಟಿಗೆ ಹೋಗಿ ಪ್ರಾಕ್ಟೀಸು ಮಾಡುತ್ತೇನೆ ಎಂದು ಖಚಿತ ದಾಟಿಯಲ್ಲಿಯೇ ಹೇಳಿದರು.

ಅವತ್ತು ಸಿದ್ದರಾಮಯ್ಯನವರು ಆಡಿದ ಮಾತಿನಿಂದ ದೇವೇಗೌಡರು ವಿಚಲಿತರಾಗಿ,‘ನಾನಿದ್ದೇನೆ ಸಿದ್ರಾಮಯ್ಯ ನಾನಿದ್ದೇನೆ ಎಂದು ಹೇಳಿದರಾದರೂ ಅದನ್ನು ಕೇಳುವ ಮನಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರಿರಲಿಲ್ಲ. ಹೀಗಾಗಿ ಆ ಕ್ಷಣದಲ್ಲಿ ದೇವೇಗೌಡರು: ‘ಡಾಕ್ಟ್ರೇ, ನೀವಾದರೂ ಸಿದ್ದರಾಮಯ್ಯನವರಿಗೆ ಹೇಳಿ. ಅವರು ನಿಮ್ಮ ಮಾತು ಕೇಳುತ್ತಾರೆ’ ಎಂದರು. ಹೀಗಾಗಿ ನಾನು ತಕ್ಷಣವೇ: ‘ಸಾರ್, ನಾವು ಗೆದ್ದಾಗ ಎದೆ ಉಬ್ಬಿಸಿಕೊಂಡು ತಿರುಗುತ್ತೇವೆ. ಸೋತಾಗ ಏಕೆ ಕುಗ್ಗಬೇಕು? ನೋ, ನೋ ನಡೀರಿ ಸಾರ್, ನಾವು ಹೋರಾಟ ಶುರು ಮಾಡೋಣ’ ಎಂದು ಬಿಟ್ಟೆ. ಆ ಸಂದರ್ಭದಲ್ಲಿ ದೇವೇಗೌಡರು ನನಗೊಂದು ಮಾತು ಹೇಳಿದ್ದರು.

‘ಮಹದೇವು ನೀನು ಎದ್ದು ನಿಂತ್ರೆ ದಳ ಎದ್ದು ನಿಲ್ಲುತ್ತದೆ. ಕೂತ್ರೆ ದಳ ಬೀಳುತ್ತದೆ’ ಅಂತ. ಸರಿ, ಮುಂದೆ ಶುರುವಾಯಿತು ಹೋರಾಟಗಳ ಪರಂಪರೆ. ಆಗ ಬೆಂಗಳೂರಿನ ಕ್ರೆಸೆಂಟ್ ರಸ್ತೆಯ ಆಚೆ ಭಾಗದಲ್ಲಿದೆಯಲ್ಲ? ಅದೇ ಗುರುರಾಜ ಕಲ್ಯಾಣ ಮಂದಿರ? ಅಲ್ಲಿ ಎಲ್ಲ ನಾಯಕರು ಸೇರಿ ಒಂದು ಸಭೆ ಮಾಡಿದೆವು. ಅದರ ಪ್ರಕಾರ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಘಟನೆಯನ್ನು ಬಲಿಷ್ಠಗೊಳಿಸಿ ಸಭೆಗಳನ್ನು ನಡೆಸುವುದು ಎಂಬ ತೀರ್ಮಾನವಾಯಿತು. ಯಾವಾಗ ಈ ತೀರ್ಮಾನವಾಯಿತೋ? ಆಗ ನಾನು ನೇರವಾಗಿ ಹುಬ್ಬಳ್ಳಿಗೆ ಹೋಗಿ, ಹತ್ತು-ಹದಿನೈದು ದಿನ ಅಲ್ಲೇ ಉಳಿದುಕೊಂಡು ಸಂಘಟನೆಯ ಕಾರ್ಯಕ್ಕೆ ಏಕಾಂಗಿಯಾಗಿ ಕೈ ಹಾಕಿದೆ. ದುಡ್ಡಿಲ್ಲ, ಕಾಸಿಲ್ಲ. ಆಗ ಅಲ್ಲಿ ರೈತ ನಾಯಕ ಬಾಬಾಗೌಡ ಪಾಟೀಲರು ನಮ್ಮ ಜತೆಗಿದ್ದರು. ಹೀಗೆ ಅವರು ಮತ್ತಿತರರ ಜತೆ ಸೇರಿ, ಇಬ್ಬರು-ಮೂವರು ಅಧಿಕಾರಿಗಳು ನೀಡಿದ ನೆರವನ್ನು ಪಡೆದು ನೆಹರೂ ಗ್ಲಾಸ್ ಹೌಸ್‌ನಲ್ಲಿ ದೊಡ್ಡ ಸಭೆ ಮಾಡಿದೆವು.

ಅದೆಷ್ಟು ಅದ್ಧೂರಿಯಾಗಿತ್ತೆಂದರೆ ಆ ಸಭೆಯ ಯಶಸ್ಸಿನಿಂದ ದೇವೇಗೌಡರು ಸೇರಿದಂತೆ ಎಲ್ಲ ನಾಯಕರು ಖುಷಿಯಾಗಿ ಹೋಗಿದ್ದರು. ಅವತ್ತು ಅಲ್ಲಿದ್ದ ಹೆಚ್. ಡಿ. ಕುಮಾರಸ್ವಾಮಿಯವರು: ‘ಅಣ್ಣ,ಮುಂದೆ ಸಂಘಟನೆಯನ್ನು ಬಲಿಷ್ಠಗೊಳಿಸಲು ನಿಮ್ಮ ನೆರವು ಬೇಕು’ ಎಂದು ನೇರವಾಗಿ ಹೇಳಿದ್ದರು. ಅಂದ ಹಾಗೆ ಅಂತಹದೊಂದು ಸಭೆಯನ್ನು ಸಂಘಟಿಸಲು ನಾನೊಬ್ಬನೇ ಅವಿರತವಾಗಿ ದುಡಿದಿದ್ದೆ. ಆ ಸಂದರ್ಭದಲ್ಲಿ ನನಗೆ ಬರುತ್ತಿದ್ದ ಮಾಹಿತಿಗಳನ್ನು ನೋಡಿದ ದೇವೇಗೌಡರು: ‘ನಮ್ಮ ಸರ್ಕಾರ ಬಂದರೆ ಈ ಮಹದೇವನಿಗೆ ಇಂಟಲಿಜೆನ್ಸ್ ಖಾತೆ ಕೊಟ್ಟು ಮುಖ್ಯಮಂತ್ರಿಗೆ ಸಮಾನವಾದ ಹುದ್ದೆ ಕೊಡಬೇಕು’ ಎಂದಿದ್ದರು.

ಯಾವಾಗ ಈ ಸಭೆ ಯಶಸ್ವಿಯಾಯಿತೋ? ಇದಾದ ನಂತರ ಚಾಮರಾಜನಗರದಲ್ಲಿ ಅಂತಹದೇ ಮತ್ತೊಂದು ಸಭೆ ಆಯೋಜಿಸಿದೆವು. ಅಲ್ಲಿ ರೈತ ಸಂಘದ ಮಲ್ಲೇಶ್ ಅವರು ನಮ್ಮ ಜತೆಗಿದ್ದರು. ಆ ಸಭೆ ಕೂಡ ಅದ್ಭುತ ಯಶಸ್ಸು ಪಡೆಯಿತು. ಹೀಗೆ ಆ ಸಂದರ್ಭದಲ್ಲಿ ನಾವು ಪಕ್ಷದ ನಾಯಕರು ರಾಜ್ಯಾದ್ಯಂತ ಹೋರಾಟ ಮಾಡಿದೆವು. ಅದರ ಪ್ರತಿಫಲವಾಗಿ ೨೦೦೪ರಲ್ಲಿ ಮತ್ತೆ ನಾವು ದೊಡ್ಡ ಸಂಖ್ಯೆಯಲ್ಲಿ ಗೆದ್ದೆವು. ಕಾಂಗ್ರೆಸ್ ಜತೆ ಸೇರಿ ಸರ್ಕಾರ ನಡೆಸಿದೆವು. ಮುಂದೆ ಜಾ.ದಳನಿಂದ ಹೊರಬಿದ್ದ ಮೇಲೆ ಅಹಿಂದ ಚಳವಳಿ ಮೇಲೆದ್ದು ನಿಂತಿತು. ಹಾಗೆ ನೋಡಿದರೆ ಅಹಿಂದ ಚಳವಳಿಯ ಮೂಲ ಐಡಿಯಾಲಜಿ ದಲಿತ ಸಂಘಟನೆಗಳದ್ದು. ಐಡಿಯಾಲಜಿ ಎಂದರೆ ಅವುಗಳದು ತಾನೇ?

ನಿಜ ಹೇಳುತ್ತೇನೆ. ದಲಿತ ಸಂಘಟನೆಗಳು ಸಿದ್ಧರಾಮಯ್ಯ ಮತ್ತು ನನ್ನ ನಾಯಕತ್ವಕ್ಕೆ ಎಷ್ಟು ಸದೃಢ ಬೆಂಬಲ ನೀಡಿದವು ಎಂದರೆ ಕಳೆದ ನಲವತ್ತು ವರ್ಷಗಳಿಂದ ಅವು ನಮ್ಮ ಜತೆ ನಿಂತಿವೆ. ಇದಕ್ಕೆ ಪ್ರತಿಯಾಗಿ ನಾವು ಅವರಿಗೆ ಏನೂ ಕೊಟ್ಟಿಲ್ಲ ಎಂಬುದೇ ನನ್ನ ನೋವು. ಮುಂದೆ ಈ ಹೋರಾಟದ ಫಲವಾಗಿ ಸಿದ್ದರಾಮಯ್ಯನವರು ಮತ್ತು ನಾವೆಲ್ಲ ಕಾಂಗ್ರೆಸ್ ದಡ ಸೇರಿಕೊಂಡೆವು. ೨೦೧೩ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದರೆ ನಾನು ಲೋಕೋಪಯೋಗಿ ಸಚಿವನಾದೆ. ಲೋಕೋಪಯೋಗಿ ಸಚಿವನಾಗಿ ನಾನು ರಾಜ್ಯಾದ್ಯಂತ ಅತ್ಯುತ್ತಮ ಗುಣಮಟ್ಟದ ನಲವತ್ತು ಸಾವಿರ ಕಿಲೋಮೀಟರುಗಳಷ್ಟು ಉದ್ದದ ರಸ್ತೆಗಳನ್ನು ಅಭಿವೃದ್ಧಿಪಡಿಸಿದೆ. ಇದು ಕೂಡ ಇತಿಹಾಸದಲ್ಲಿ ಉಳಿಯುವಂತಹ ಕೆಲಸ. ಹಾಗೆ ನೋಡಿದರೆ ನಾವು ಅಧಿಕಾರದಲ್ಲಿದ್ದಾಗ ಜಾರಿಯಾದ ಹಲವು ಯೋಜನೆಗಳು ನನ್ನ ಕನಸಿನ ಕೂಸುಗಳು. ಅದು ಬಡ್ತಿ ಮೀಸಲಾತಿ ಇರಬಹುದು, ಗುತ್ತಿಗೆಯಲ್ಲಿ ಮೀಸಲಾತಿ ಕೊಡುವುದೇ ಆಗಿರಬಹುದು, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮಂತ್ರಿಯಾಗಿ ಕ್ರಾಂತಿಕಾರಿ ಮಸೂದೆಗಳನ್ನು ಜಾರಿಗೊಳಿಸಿದ್ದೇ ಇರಬಹುದು. ಈಗ ಸಿಕ್ಕ ಅವಕಾಶದಲ್ಲೇ ಸಮಾಜ ಕಲ್ಯಾಣ ಸಚಿವನಾಗಿ ಹಲವು ಮಹತ್ವದ ಕೆಲಸಗಳನ್ನು ಮಾಡಿದ್ದಿರಬಹುದು.

ಈ ಕತೆಗೆ ಅಂಬೇಡ್ಕರ್ ಸ್ಫೂರ್ತಿ
ಅಂದ ಹಾಗೆ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಯೊಬ್ಬರು ಒಂದು ಮಾತು ಹೇಳುತ್ತಾರೆ. ಭಾರತದ ಪ್ರತಿಯೊಬ್ಬ ಪ್ರಜೆ ಸಂವಿಧಾನ ತಮಗೆ ನೀಡಿದ ಹಕ್ಕುಗಳನ್ನು ಅನುಭವಿಸುತ್ತಾನೆ. ಹೀಗೆ ಅನುಭವಿಸುವಾಗ ಅವರಿಗೆ ಅಂಬೇಡ್ಕರ್ ಅವರು ನೆನಪಿಗೆ ಬರಬೇಕು ಎನ್ನುತ್ತಾರೆ. ಈ ಹಕ್ಕು ಕೇವಲ ದಲಿತರಿಗೆ ಮಾತ್ರ ಸಿಕ್ಕಿದ್ದಲ್ಲ, ಈ ದೇಶದ ನೂರಾ ನಲವತ್ತು ಕೋಟಿ ಜನರಿಗೆ ಸಿಕ್ಕಿದೆ. ಅದಕ್ಕೆ ಅಂಬೇಡ್ಕರ್ ಕಾರಣ.

ಆದರೆ ಇಂತಹ ಸತ್ಯ ಕಣ್ಣೆದುರು ಇದ್ದರೂ ಈ ದೇಶದಲ್ಲಿ ರಾಮ, ಅವನ ಧರ್ಮ, ವಾಲ್ಮೀಕಿ, ಮಹಾಭಾರತಗಳ ವಿಜೃಂಭಣೆಯಾಗತೊಡಗಿತು. ರಾಮ, ರಾಮಾಯಣ. ಮಹಾಭಾರತಗಳೆಲ್ಲ ಕವಿ ಕಲ್ಪನೆಯ ಸೃಷ್ಟಿ. ಆದರೆ ಸಂವಿಧಾನವೇ ನೈಜವಾದದ್ದು, ಸತ್ಯವಾದದ್ದು. ಬದುಕನ್ನು ಎತ್ತಿಹಿಡಿಯುವಂತದ್ದು. ಆದರೆ ಈ ದೇಶದ ನಾಯಕರಾದವರು ಇದನ್ನು ಬಿಟ್ಟು ರಾಮಮಂದಿರವನ್ನು ಉದ್ಘಾಟಿಸಲು ಹೊರಟರು. ಜನಮತೀಯವಾದ, ಮನುವಾದ, ಕೋಮುವಾದದ ಕಡೆ ಹೊರಳತೊಡಗಿದರು. ಇದು ನನಗೆ ತುಂಬ ನೋವುಂಟು ಮಾಡಿತು. ಹೀಗಾಗಿ ಒಬ್ಬನೇ ಕುಳಿತು ಯೋಚಿಸಿದೆ. ಬೇರೆ ಯಾರ ಜತೆಗೂ ಚರ್ಚಿಸದೆ ಇವತ್ತಿನ ಈ ಸಂದರ್ಭವನ್ನು ಎದುರಿಸಲು ಅಂಬೇಡ್ಕರ್ ಮತ್ತು ಸಂವಿಧಾನಕ್ಕೆ ಮಾತ್ರ ಸಾಧ್ಯ ಅನ್ನಿಸಿತು. ಹೀಗಾಗಿ ಅಂಬೇಡ್ಕರ್ ಮತ್ತು ಸಂವಿಧಾನದ ಮಹತ್ವ ಎಲ್ಲರ ಅರಿವಿನಲ್ಲಿರಬೇಕು ಎಂದು ತೀರ್ಮಾನಿಸಿದೆ. ಆಗ ನನಗೆ ನೆನಪಿಗೆ ಬಂದಿದ್ದು ಸುಭಾಷಿತ. ಸುಭಾಷಿತದಂತೆ ನಮ್ಮ ಶಾಲಾ-ಕಾಲೇಜುಗಳಲ್ಲಿ ಪ್ರತಿ ದಿನ ಸಂವಿಧಾನದ ಪೀಠಿಕೆಯನ್ನು ಓದುವ ಸ್ಥಿತಿ ಸೃಷ್ಟಿಯಾದರೆ ಸಂವಿಧಾನದ ಮಹತ್ವ ತಾನೇ ತಾನಾಗಿ ಅಸ್ತಿತ್ವದಲ್ಲಿರುತ್ತದಲ್ಲವೇ ಅನ್ನಿಸಿತು. ಹೀಗಾಗಿ ಸಂವಿಧಾನ ಜಾಗೃತಿ ಜಾಥಾಗಳನ್ನು ನಡೆಸಿದೆ. ಅದು ಕೇವಲ ಭಾರತದಲ್ಲಿ ಮಾತ್ರವಲ್ಲ, ಜಗತ್ತಿನ ನಾನಾ ಭಾಗಗಳಲ್ಲಿ, ಇಪ್ಪತ್ತೈದು ಸಾವಿರ ಕಿಲೋಮೀಟರುಗಳಷ್ಟು ದೂರ ಅನುರಣಿಸಿ ಒಂದು ದಾಖಲೆಯಾಯಿತು. ಒಂದು ಕಾಲದಲ್ಲಿ ಯಾರು ಸಂವಿಧಾನವನ್ನು ಬದಲಿಸುವ ಮಾತನಾಡುತ್ತಿದ್ದರೋ? ಇವತ್ತು ಅವರೇ ಸಂವಿಧಾನದ ಪೀಠಿಕೆಯನ್ನು ಓದುವಂತಾಗಿದೆ. ಹಲವು ಪ್ರಾಜ್ಞರ ದೃಷ್ಟಿಯಲ್ಲಿ ಇದು ದೇಶದ ಎರಡನೇ ಸ್ವಾತಂತ್ರ್ಯ ಸಂಗ್ರಾಮ. ಈ ಸಂಗ್ರಾಮವನ್ನು ನಡೆಸಲು ನನಗೆ ಅಂಬೇಡ್ಕರ್ ಅವರೇ ಸ್ಫೂರ್ತಿ.

ಇವತ್ತು ನಾವು ಅಂಬೇಡ್ಕರ್ ಅವರನ್ನು ಯಾಕೆ ಸ್ಮರಿಸಬೇಕೆಂದರೆ ಅವರು ನಮಗೆ ಸ್ವಾಭಿಮಾನದ ಬಾಳು ಕೊಟ್ಟಿದ್ದಾರೆ. ಅಸಮಾನತೆಯನ್ನು ತೊಡೆದು ಹಾಕುವ ಸೂತ್ರ ಹೇಳಿದ್ದಾರೆ. ನೆಲ್ಸನ್ ಮಂಡೇಲಾ ಅವರು ಭಾರತಕ್ಕೆ ಬಂದಾಗ ಹೇಳಿದ್ದೇನು ಗೊತ್ತಾ? ಭಾರತದಿಂದ ನಾನು ವಾಪಸ್ ಹೋಗುವಾಗ ಸಂವಿಧಾನವನ್ನು ಬಿಟ್ಟು ಬೇರೆ ಏನನ್ನು ತೆಗೆದುಕೊಂಡು ಹೋಗಲು ಸಾಧ್ಯ? ಎಂದಿದ್ದರು. ಕೊಲಂಬೋ ವಿಶ್ವವಿದ್ಯಾನಿಲಯ ಈ ಜಗತ್ತಿನ ನೂರು ಅತ್ಯುಚ್ಚ ವ್ಯಕ್ತಿಗಳನ್ನು ಗುರುತಿಸುವಾಗ ಅಂಬೇಡ್ಕರ್ ಅವರಿಗೆ ಮೊದಲನೇ ಸ್ಥಾನ ಕೊಟ್ಟಿತ್ತು. ಇವತ್ತು ಹೇಳುತ್ತೇನೆ. ಈ ನೆಲದ ದಲಿತರನ್ನು ಒಡೆಯುವ ಯಾವುದೇ ಯತ್ನವೂ ಅಂಬೇಡ್ಕರ್ ವಿರೋಧಿ ಧೋರಣೆ. ಇವತ್ತು ಮನಃ ಪೂರ್ವಕವಾಗಿ ಹೇಳುತ್ತೇನೆ. ನನ್ನ ಹೋರಾಟದ ಬದುಕಿಗೆ ಅಂಬೇಡ್ಕರ್ ಮಹಾಸ್ಫೂರ್ತಿ. ಹೀಗಾಗಿ ನಾನು ಅಂಬೇಡ್ಕರ್ ಅವರ ಸಮಗ್ರ ಬರಹಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿಸಿದ್ದೇನೆ. ಅಂಬೇಡ್ಕರ್ ಅವರನ್ನು ದೊಡ್ಡ ಮಟ್ಟದಲ್ಲಿ ಗೌರವಿಸುತ್ತಿದ್ದ ಲೋಹಿಯಾ ಅವರ ಸಮಗ್ರ ಬರಹಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿಸಿದ್ದೇನೆ. ಯಾಕೆಂದರೆ ಈ ನೆಲ ಸದಾ ಕಾಲ ಸ್ಮರಿಸಬೇಕಾದ ಶಕ್ತಿ ಅವರು. ಹೀಗಾಗಿ ಅವರನ್ನು ಮತ್ತೆ ನೆನಪಿಸಿಕೊಳ್ಳುತ್ತಾ ಈ ನನ್ನ ಕತೆಯನ್ನು ಸದ್ಯಕ್ಕೆ ನಿಲ್ಲಿಸುತ್ತೇನೆ. ಸದ್ಯಕ್ಕೆ ಕತೆ ನಿಲ್ಲಬಹುದು. ಆದರೆ ಹೋರಾಟದ ನನ್ನ ಕತೆ ಬದುಕಿನುದ್ದ ಸಾಗುತ್ತದೆ.

-ಡಾ. ಹೆಚ್. ಸಿ. ಮಹಾದೇವಪ್ಪ

 

ಆಂದೋಲನ ಡೆಸ್ಕ್

Recent Posts

ಪ್ರಸ್ತುತ ದಲಿತ ರಾಜಕಾರಣದಲ್ಲಿ ಮಹದೇವಪ್ಪ ಎಂಬ ವಿದ್ಯಮಾನ

ರಮೇಶ್‌ ಎಚ್.ಕೆ. ಶಿವಮೊಗ್ಗ ಕರ್ನಾಟಕದಲ್ಲಿ ದಲಿತ ವರ್ಗಗಳ ರಾಜಕಾರಣ ಎಂದಾಕ್ಷಣ ಕೆ. ಹೆಚ್. ರಂಗನಾಥ್, ಬಿ. ರಾಚಯ್ಯ, ಎನ್. ರಾಚಯ್ಯ,…

19 seconds ago

ಬೆಂ-ಮೈ ಹೆದ್ದಾರಿಯಲ್ಲಿ ಕಾರು-ಬಸ್ ಡಿಕ್ಕಿ ; ತಪ್ಪಿದ ಭಾರೀ ಅನಾಹುತ, ಪ್ರಯಾಣಿಕರು ಪಾರು

ಮಂಡ್ಯ : ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಕಾರು ಮತ್ತು ಬಸ್ ನಡುವೆ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್…

22 mins ago

ಅಮೆರಿಕ ವಶವಾದ ಇರಾನ್‌ ಹಡಗು ; ಸಶಸ್ತ್ರ ಕಡಲ್ಗಳ್ಳತನ ಎಂದ ಇರಾನ್‌

ವಾಷಿಂಗ್ಟನ್ : ಇರಾನ್ ಧ್ವಜವಿರುವ ಸರಕು ಹಡಗನ್ನು (ಟೂಸ್ಕಾ) ಒಮಾನ್ ಕೊಲ್ಲಿಯಲ್ಲಿ (ಹಾರ್ಮುಜ್ ಜಲಸಂಧಿ ಸಮೀಪ) ನಮ್ಮ ಭದ್ರತಾ ಪಡೆಗಳು…

39 mins ago

ಬಿಸಿ ಗಾಳಿ ; ಸಮವಸ್ತ್ರ ಕಡ್ಡಾಯಗೊಳಿಸದಂತೆ ಜಿಲ್ಲಾಧಿಕಾರಿ ಆದೇಶ

ಚಾಮರಾಜನಗರ : ತೀವ್ರ ಬಿಸಿ ಗಾಳಿ (ಹೀಟ್ ವೇವ್) ಇರುವುದರಿಂದ ಜಿಲ್ಲೆಯ ಎಲ್ಲಾ ಖಾಸಗಿ ಅನುದಾನಿತ, ಅನುದಾನರಹಿತ ಹಾಗೂ ಸರ್ಕಾರಿ…

4 hours ago

ಪಿರಿಯಾಪಟ್ಟಣ : ಈಜಲು ನೀರಿಗಿಳಿದಿ ಯುವಕರಿಬ್ಬರು ಸಾವು

ಪಿರಿಯಾಪಟ್ಟಣ : ಕಾವೇರಿ ನದಿಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ಸಾವಿಗೀಡಾಗಿರುವ ಘಟನೆ ದೊಡ್ಡ ಹರವೆ ಬಳಿ ನಡೆದಿದೆ. ಪಿರಿಯಾಪಟ್ಟಣದಲ್ಲಿ…

5 hours ago

ನಮ್ಮ ಹಕ್ಕು ಕಸಿಯಲು ಅಮೆರಿಕ ಯಾರು? ; ಟ್ರಂಪ್‌ ವಿರುದ್ಧ ಇರಾನ್‌ ವಾಗ್ದಾಳಿ

ಟೆಹ್ರಾನ್ : ಇರಾನ್‌ನ ಪರಮಾಣು ಯೋಜನೆಯ ಸುತ್ತಲಿನ ಅಂತಾರಾಷ್ಟ್ರೀಯ ಬಿಕ್ಕಟ್ಟು ಮತ್ತೆ ತಾರಕಕ್ಕೇರಿದೆ. ಒಂದು ರಾಷ್ಟ್ರದ ಕಾನೂನುಬದ್ಧ ಹಕ್ಕುಗಳನ್ನು ಕಸಿದುಕೊಳ್ಳಲು…

5 hours ago