ಅಂಕಣಗಳು

ಕೊಳೆಗೇರಿ ಮಕ್ಕಳ ಬದುಕು ರೂಪಿಸುವ ‘ಖೇಲ್ ಘರ್’ ಎಂಬ ಆಟದ ಮನೆ

ಪಂಜುಗಂಗೊಳ್ಳಿ ಅವರ ವಾರದ ಅಂಕಣ 

೧೯೯೬ರಲ್ಲಿ ‘ಪಾಲಕ್ ನೀತಿ ಪರಿವಾರ್’ ಎಂಬ ಸರ್ಕಾರೇತರ ಸಂಸ್ಥೆಯಡಿ ‘ಈ ಮನೆ’ ಆರಂಭ

ಪುಣೆಯ ಲಕ್ಷ್ಮೀನಗರದ ಕೊತ್ರುಡ್‌ನ ಶುಭದಾ ಜೋಶಿ ವೃತ್ತಿಯಲ್ಲಿ ಒಬ್ಬ ಆರ್ಕಿಟೆಕ್ಟ್. ಕಳೆದ ಒಂದು ದಶಕಕ್ಕಿಂತಲೂ ಹೆಚ್ಚು ಕಾಲದಿಂದ ಯಶಸ್ವಿಯಾಗಿ ತಮ್ಮ ಕಾಯಕವನ್ನು ಮಾಡಿಕೊಂಡು ಬಂದಿದ್ದ ಅವರಿಗೆ ಬರಬರುತ್ತ ತಾನು ಮಾಡುತ್ತಿರುವುದೆಲ್ಲ ತನಗಾಗಿ ಮತ್ತು ತನ್ನ ಕುಟುಂಬಕ್ಕಾಗಿಯೇ ವಿನಾ ಸಮಾಜಕ್ಕೆ ತನ್ನ ಯಾವ ಕೊಡುಗೆಯೂ ಇಲ್ಲವಲ್ಲ ಅಂತ ಅನ್ನಿಸತೊಡಗಿತು. ಆ ನಿಟ್ಟಿನಲ್ಲಿ ತಾನು ಏನು ಮಾಡಬಹುದು ಎಂಬುದರ ಬಗ್ಗೆ ಎಷ್ಟೇ ಆಲೋಚಿಸಿದರೂ ಸ್ಪಷ್ಟತೆ ಮೂಡಲಿಲ್ಲ.

ಆ ಸಮಯದಲ್ಲಿ ಅವರ ಕಿರಿಯ ಮಗ ಅಕ್ಷಾ ನಂದನ್ ಹತ್ತಿರದ ಒಂದು ಮರಾಠಿ ಮಾಧ್ಯಮದ ಶಾಲೆಯಲ್ಲಿ ಕಲಿಯುತ್ತಿದ್ದನು. ಅವರ ನೆರೆಹೊರೆಯ ಹೆಚ್ಚಿನ ಮನೆಗಳ ಮಕ್ಕಳೆಲ್ಲ ಇಂಗ್ಲಿಷ್ ಮಾಧ್ಯದ ಶಾಲೆಗಳಲ್ಲಿ ಕಲಿಯುತ್ತಿದ್ದದರಿಂದ ಅವನಿಗೆ ಮನೆಯ ಅಕ್ಕಪಕ್ಕದಲ್ಲಿ ಸಹಪಾಠಿಗಳು ಇರಲಿಲ್ಲ. ನಂದನ್ ಹೋಗುತ್ತಿದ್ದ ಶಾಲೆಗೆ ಹತ್ತಿರದ ಕೊಳೆಗೇರಿಗಳ ಮಕ್ಕಳು ಕಲಿಯಲು ಬರುತ್ತಿದ್ದರು. ಅವರಲ್ಲಿ ಕೆಲವರು ಅವನ ಸ್ನೇತರಾಗಿದ್ದು, ಅವರನ್ನು ನಂದನ್ ತನ್ನ ಮನೆಗೆ ಕರೆತರುತ್ತಿದ್ದನು. ಹೀಗೆ ತನ್ನ ಮಗನೊಂದಿಗೆ ಮನೆಗೆ ಬರುವ ಮಕ್ಕಳನ್ನು ಶುಭದಾ ಜೋಶಿ ಬಹಳ ಪ್ರೀತಿಯಿಂದ ಕಂಡು, ಅವರಿಗೆ ಪುಸ್ತಕಗಳನ್ನು ಓದಿ ಹೇಳುವುದು, ಕತೆ ಹೇಳುವುದು ಮಾಡತೊಡಗಿದರು.

ಪ್ರಾರಂಭದಲ್ಲಿ ನಾಲ್ಕೈದು ಮಕ್ಕಳು ಬರುತ್ತಿದ್ದುದು, ಅವರು ತಮ್ಮ ಓರಗೆಯ ಇತರ ಮಕ್ಕಳನ್ನು ಜೊತೆಯಲ್ಲಿ ಕರೆ ತರಲು ಶುರು ಮಾಡಿ ಶುಭದಾರ ಮನೆಗೆ ಬರುವ ಕೊಳೆಗೇರಿ ಮಕ್ಕಳ ಸಂಖ್ಯೆ ಹೆಚ್ಚಿತು. ಆ ಮಕ್ಕಳನ್ನೂ ಅವರು ಪ್ರೀತಿಯಿಂದ ಬರಮಾಡಿಕೊಂಡು, ಕಾಳಜಿಯಿಂದ ನೋಡಿಕೊಳ್ಳತೊಡಗಿದರು.

ಆ ಕಾಳಜಿಯ ಕಾರಣವಾಗಿ ಶುಭದಾ ಜೋಶಿ ಆ ಮಕ್ಕಳನ್ನು ತೀರಾ ಹತ್ತಿರದಿಂದ ನೋಡಲು ಸಾಧ್ಯವಾಯಿತು. ಆ ಮಕ್ಕಳು ಶಾಲೆಗೆ ಹೋಗುತ್ತಿದ್ದರೂ ಅವರಿಗೆ ಸಾಮಾನ್ಯ ಮಟ್ಟದ ಓದು, ಬರಹ ಹಾಗೂ ಗಣಿತ ಕೂಡಾ ಸಾಧ್ಯವಾಗುತ್ತಿರಲಿಲ್ಲವೆಂಬುದು ಅವರ ಗಮನಕ್ಕೆ ಬಂದಿತು. ಆ ಮಕ್ಕಳು ಬಳಸುವ ಬೈಯ್ಗುಳದ ಭಾಷೆ, ಜಗಳ, ಆಗಾಗ್ಗೆ ಅನಾರೋಗ್ಯಪೀಡಿತರಾಗುವುದು ಮೊದಲಾದುವೆಲ್ಲ ಆ ಮಕ್ಕಳ ಅಶಿಸ್ತಿನ ಬದಲು ಒತ್ತಡ ಹಾಗೂ ನಿರ್ಲಕ್ಷ್ಯದ ವಾತಾವರಣದಲ್ಲಿ ಆ ಮಕ್ಕಳು ಬದುಕುತ್ತಿರುವುದೇ ಕಾರಣವೆಂಬುದನ್ನು ಅವರು ತಿಳಿದುಕೊಂಡರು.

ಶುಭದಾ ಜೋಶಿ ಆ ಮಕ್ಕಳ ಹೆತ್ತವರೊಂದಿಗೆ ಮಾತಾಡಲು ಶುರು ಮಾಡಿದಾಗ ಚಿತ್ರಣ ಹೆಚ್ಚು ಸ್ಪಷ್ಟವಾಗತೊಡಗಿತು. ಹೆಚ್ಚಿನ ಕುಟುಂಬಗಳು ತೀರಾ ಇಕ್ಕಟ್ಟಾದ ಮನೆಗಳಲ್ಲಿ ವಾಸಿಸುತ್ತಿದ್ದರು. ಆ ಮನೆಗಳಿಗೆ ಸರಿಯಾದ ಗಾಳಿ- ಬೆಳಕಿನ ವ್ಯವಸ್ಥೆಯೂ ಇಲ್ಲ. ಕುಟುಂಬ ಸದಸ್ಯರಲ್ಲಿ ಕುಡಿತದ ಚಟ ಸಾಮಾನ್ಯವಾಗಿತ್ತು. ಎಲ್ಲದಕ್ಕೂ ಕೊರತೆ. ಕೇವಲ ಹಣದ ಕೊರತೆ ಮಾತ್ರವಲ್ಲ, ಮುಖ್ಯವಾಗಿ ಮಕ್ಕಳ ಕಾಳಜಿ, ಸುರಕ್ಷತೆ ಹಾಗೂ ಗೌರವದ ಕೊರತೆ. ಅಂತಹ ಮನೆಗಳಲ್ಲಿ ಓದುವ ವಾತಾವರಣ ಹೇಗೆ ತಾನೇ ಇರಲು ಸಾಧ್ಯ? ಆಗ ಶುಭದಾ ಜೋಶಿಯವರಿಗೆ ಮಕ್ಕಳು ಶಾಲಾ ಕಲಿಕೆಯಲ್ಲಿ ಹಿಂದೆ ಬೀಳಲು ಕಾರಣಗಳೇನೆಂಬುದನ್ನು ಸ್ಪಷ್ಟವಾಯಿತು. ೧೯೯೬ರಲ್ಲಿ ಶುಭದಾ ಜೋಶಿ ‘ಪಾಲಕ್ ನೀತಿ ಪರಿವಾರ್’ ಎಂಬ ಒಂದು ಸರ್ಕಾರೇತರ ಸಂಸ್ಥೆಯಡಿ ‘ಖೇಲ್ ಘರ್’ ಎಂಬ ‘ಆಟದ ಮನೆ’ಯನ್ನು ಹುಟ್ಟು ಹಾಕಿದರು. ೨೦೦೦ ದಲ್ಲಿ ಶುಭದಾ ಜೋಶಿಯವರ ಪತಿ ಮನೆಯ ಹತ್ತಿರದಲ್ಲಿ ಒಂದು ಕಟ್ಟಡವನ್ನು ಖರೀದಿಸಿದ್ದು, ‘ಖೇಲ್ ಘರ್’ ಅಲ್ಲಿ ತನ್ನ ಚಟುವಟಿಕೆಗಳನ್ನು ಪ್ರಾರಂಭಿಸಿತು.

ಖೇಲ್ ಘರ್ ಅಕ್ಷರಶಃ ಒಂದು ಆಟದ ಮನೆ. ಇಲ್ಲಿ ಮಕ್ಕಳು ಶಾಲಾ ಪಾಠ ಮತ್ತು ಬದುಕಿನ ಪಾಠಗಳನ್ನು ಆಟವಾಡುವಷ್ಟು ಖುಷಿಯಲ್ಲಿ ಕಲಿಯುತ್ತಾರೆ. ಇಲ್ಲಿ ಮಕ್ಕಳು ಏನೇ ತಪ್ಪುಗಳನ್ನು ಮಾಡಿದರೂ ಶಿಕ್ಷಿಸಲಾಗುವುದಿಲ್ಲ. ಬದಲಿಗೆ, ಇಲ್ಲಿ ಮಕ್ಕಳಿಗೆ ತಪ್ಪುಗಳನ್ನು ಮಾಡಲು ಸ್ವಾತಂತ್ರ್ಯ ನೀಡುವ ಮೂಲಕವೇ ಅವರಿಗೆ ಸರಿ-ತಪ್ಪುಗಳನ್ನು ಕಲಿಸಲಾಗುತ್ತದೆ. ಇಲ್ಲಿ ಮಕ್ಕಳನ್ನು ಉತ್ತಮ ಅಥವಾ ದುರ್ಬಲ ಎಂದು ವಿಂಗಡಿಸಲಾಗುವುದಿಲ್ಲ. ಅವರಿಗೆ ಇಲ್ಲಿ ಕೇಳಲು, ನೋಡಲು, ಗಮನಿಸಲು, ವಿಶ್ಲೇಷಿಸಲು, ಪ್ರಶ್ನಿಸಲು ಹಾಗೂ ತಮ್ಮ ಮನಸ್ಸಿನಲ್ಲಿರುವುದನ್ನು ಮಾತಿನ ಮೂಲಕ ಅಭಿವ್ಯಕ್ತಿಪಡಿಸಲು ಉತ್ತೇಜಿಸಲಾಗುತ್ತದೆ. ಹಿಂದೆ ತಮ್ಮ ಮನೆಗಳಲ್ಲಾಗಲೀ, ಶಾಲಾ ತರಗತಿಗಳಲ್ಲಾಗಲೀ ಯಾವತ್ತೂ ಇಂತಹದನ್ನು ಮಾಡಲು ಅವಕಾಶ ಪಡೆಯದಿದ್ದ ಈ ಮಕ್ಕಳು ಖೇಲ್ ಘರ್‌ನಲ್ಲಿ ಹೂವು ಅರಳುವಂತೆ ಅರಳಿದರು.

ಹನ್ನೆರಡು ವರ್ಷದ ರೋಶಿಣಿ ಬಾಯಿ ತೆರೆದು ಮಾತಾಡಲು ಹೆದರುತ್ತಿದ್ದಳು. ತಪ್ಪಾದರೆ ಎಲ್ಲಿ ಹೊಡೆಯುತ್ತಾರೋ ಎಂದು ಭಯ ಪಡುತ್ತಿದ್ದಳು. ಖೇಲ್ ಘರ್‌ಗೆ ಬಂದ ಮೇಲೆ ಅವಳು ಯಾವ ಹೆದರಿಕೆಯೂ ಇಲ್ಲದೆ ಆತ್ಮವಿಶ್ವಾಸದಿಂದ ಮಾತಾಡಲು ಕಲಿತಳು. ಯಾವ ಹಿಂಜರಿಕೆಯೂ ಇಲ್ಲದೆ ತಪ್ಪುಗಳನ್ನು ಮಾಡಿ, ಅದರಿಂದ ಸರಿ ದಾರಿಯನ್ನು ಕಲಿತಳು. ತನಗೆಅರ್ಥವಾಗದ್ದನ್ನು ನಿರ್ಭಿಡೆಯಿಂದ ಕೇಳಿ ತಿಳಿದುಕೊಳ್ಳಲು ಕಲಿತಳು. ಅಷ್ಟೇ ಅಲ್ಲ, ಇಂಗ್ಲಿಷ್ ಪದ್ಯವನ್ನೂ ಹಾಡಲು ಕಲಿತಳು. ರೋಶಿಣಿಯಂತಹ ನೂರಾರು ಮಕ್ಕಳಿಗೆ ಖೇಲ್ ಘರ್ ಎಂಬುದು ಶಾಲೆ ಬಿಟ್ಟ ನಂತರ ಬಂದು ಸೇರುವ ಒಂದು ಕೇಂದ್ರ ಮಾತ್ರವಲ್ಲ. ಅದು ಅವರಿಗೆ ಅವರ ಬಾಲ್ಯವನ್ನು ರಕ್ಷಿಸುವ, ಅವರ ಕುತೂಹಲವನ್ನು ಕೆರಳಿಸುವ ಹಾಗೂ ಅವರಲ್ಲಿ ಆತ್ಮಶ್ವಾಸವನ್ನು ಬೆಳೆಸುವ ಪೋಷಣಾ ಕೇಂದ್ರವಾಯಿತು.

ಖೇಲ್ ಘರ್‌ನಲ್ಲಿ ಪ್ರತೀ ವರ್ಷ ಒಂದರಿಂದ ಹತ್ತನೇ ತರಗತಿವರೆಗಿನ ಸುಮಾರು ೨೦೦ ಮಕ್ಕಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಹನ್ನೆರಡು ಜನ ಶಿಕ್ಷಕರಿದ್ದಾರೆ. ಅವರಿಗೆ ಸಹಾಯ ಮಾಡಲು ನಾಲ್ಕೈದು ಜನರ ಸ್ವಯಂಸೇವಕರ ಒಂದು ತಂಡವಿದೆ. ಇಲ್ಲಿ ಕಲಿಸುವ ಶಿಕ್ಷಕರು ಮೋಜಿನ ರೂಪದಲ್ಲಿ ಕಲಿಸುವುದರಲ್ಲಿ ತರಬೇತಿ ಪಡೆದಿರುತ್ತಾರೆ. ಖೇಲ್ ಘರ್‌ನಲ್ಲಿ ಮಕ್ಕಳಿಗೆ ಏನಾದರೂ ಹೊಸ ನಿಯಮಗಳನ್ನು ರೂಪಿಸಬೇಕೆಂದಿದ್ದರೆ ಮೊದಲು ಅದನ್ನು ಆ ಮಕ್ಕಳೊಂದಿಗೆ ಚರ್ಚಿಸಲಾಗುತ್ತದೆ. ಯಾವುದೇ ಮಗು ಏನಾದರೂ ತಪ್ಪು ಮಾಡಿದರೆ ಮೊದಲು ಎಲ್ಲ ಮಕ್ಕಳನ್ನೂ ಒಂದೆಡೆ ಸೇರಿಸಿ ಆ ತಪ್ಪಿನ ಬಗ್ಗೆ ಚರ್ಚೆ ನಡೆಸಿ, ಮಗುಗೆ ತಾನು ಮಾಡಿದುದು ಏಕೆ ಮತ್ತು ಹೇಗೆ ತಪ್ಪು ಎಂದು ಮನದಟ್ಟು ಮಾಡಿಕೊಡಲಾಗುತ್ತದೆ. ಅದರೊಂದಿಗೆ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು, ಇತರರೊಂದಿಗೆ ಸಂವಹನ ನಡೆಸುವುದು, ತಮ್ಮ ಭಾವನೆಗಳನ್ನು ನಿಯಂತ್ರಿಸುವುದು, ದೈಹಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು, ಹೆಣ್ಣು ಮಕ್ಕಳಿಗೆ ಕೆಟ್ಟ ಸ್ಪರ್ಶ ಹಾಗೂ ಒಳ್ಳೆಯ ಸ್ಪರ್ಶದ ನಡುವಿನ ವ್ಯತ್ಯಾಸವನ್ನು ಗುರುತಿಸುವುದು, ಸನ್ನಿವೇಶಕ್ಕನುಗುಣವಾಗಿ ತಮ್ಮನ್ನು ತಯಾರುಗೊಳಿಸುವುದು ಮೊದಲಾಗಿ ಬದುಕಿನ ಕಲೆಯನ್ನು ಕಲಿಸಿಕೊಡಲಾಗುತ್ತದೆ. ಆಗಾಗ್ಗೆ ಮಕ್ಕಳ ಹೆತ್ತವರನ್ನೂ ಒಟ್ಟುಗೂಡಿಸಿ ಅವರಿಗೂ ತರಬೇತಿ ನೀಡಲಾಗುತ್ತದೆ.

ಇದೆಲ್ಲದರ -ಲವಾಗಿ, ಹಿಂದೆ ಅರ್ಧಕ್ಕೆ ಶಾಲೆ ಬಿಡುತ್ತಿದ್ದ ಕೊಳೆಗೇರಿ ಮಕ್ಕಳಲ್ಲಿ ಹೆಚ್ಚಿನವರು ಇಂದು ಜವಾಬ್ದಾರಿಯುತ ವಿದ್ಯಾರ್ಥಿಗಳಾಗಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಹಿಂದೆ ೧೮ ವರ್ಷ ಪ್ರಾಯವಾದ ತಕ್ಷಣ ಶಾಲಾ ಕಲಿಕೆ ಬಿಡುತ್ತಿದ್ದ ಹೆಣ್ಣು ಮಕ್ಕಳಲ್ಲಿ ಅನೇಕರು ಇಂದು ಹೆತ್ತವರು ಸಣ್ಣ ಪ್ರಾಯದಲ್ಲಿ ತಮ್ಮನ್ನು ಮದುವೆ ಮಾಡಿಕೊಡುವುದನ್ನು ವಿರೋಽಸಿ, ಕಲಿಕೆ ಮುಂದುವರಿಸಿ, ಉದ್ಯೋಗ ಪಡೆದು ಕುಟುಂಬ ನಡೆಸಲು ತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ. ಹೀಗೆ ಖೇಲ್ ಘರ್ ಎಂಬ ಈ ಆಟದ ಮನೆ ಈ ಮಕ್ಕಳಿಗೆ ಬದುಕನ್ನು ಕಲಿಸುವ ನಿಜವಾದ ಮನೆಯಾಗಿದೆ.

” ಖೇಲ್ ಘರ್‌ನಲ್ಲಿ ಮಕ್ಕಳಿಗೆ ಏನಾದರೂ ಹೊಸ ನಿಯಮಗಳನ್ನು ರೂಪಿಸಬೇಕೆಂದಿದ್ದರೆ ಮೊದಲು ಅದನ್ನು ಆ ಮಕ್ಕಳೊಂದಿಗೆ ಚರ್ಚಿಸಲಾಗುತ್ತದೆ.ಯಾವುದೇ ಮಗು ಏನಾದರೂ ತಪ್ಪು ಮಾಡಿದರೆ ಮೊದಲು ಎಲ್ಲ ಮಕ್ಕಳನ್ನು ಒಂದೆಡೆ ಸೇರಿಸಿ ಆ ತಪ್ಪಿನ ಬಗ್ಗೆ ಚರ್ಚೆ ನಡೆಸಿ, ಮಗುಗೆ ತಾನು ಮಾಡಿದುದು ಏಕೆ ಮತ್ತು ಹೇಗೆ ತಪ್ಪು ಎಂದು ಮನದಟ್ಟು ಮಾಡಿಕೊಡಲಾಗುತ್ತದೆ”

 

 

ಆಂದೋಲನ ಡೆಸ್ಕ್

Recent Posts

ಮಡಿಕೇರಿ ಅರಮನೆಗೆ ಕೇಂದ್ರದಿಂದ ಸಂರಕ್ಷಿತ ಸ್ಮಾರಕ ಸ್ಥಾನಮಾನ

ಪುನೀತ್ ಮಡಿಕೇರಿ ಡಿಜಿಟಲ್ ಮ್ಯೂಸಿಯಂ ಕನಸು ಸಾಕಾರಕ್ಕೆ ಕೇಂದ್ರ ಸರ್ಕಾರದ ನೆರವು ಕೊಡಗಿನ ಹೆಮ್ಮೆಯ ಸಂಕೇತವಾದ ಮಡಿಕೇರಿ ಅರಮನೆಗೆ ಕೇಂದ್ರ ಸರ್ಕಾರದಿಂದ…

1 hour ago

ಹೆಸರಿಗಷ್ಟೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯ!

ಮಹೇಂದ್ರ ಹಸಗೂಲಿ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಎಂದು ಸಿಎಂ ಘೋಷಣೆ ಮಾಡಿದರೂ ಹಣ ಪಡೆದು ಪಾಸ್ ವಿತರಣೆಗೆ ಆಕ್ರೋಶ  ಗುಂಡ್ಲುಪೇಟೆ:…

2 hours ago

ಎಲೆ ತೋಟ; ಸ್ಥಳೀಯರಿಗೆ ಅನೈರ್ಮಲ್ಯದ ಸಂಕಟ

ಚಿರಂಜೀವಿ ಸಿ.ಹುಲ್ಲಹಳ್ಳಿ ಮೈಸೂರಿನ ಅಗ್ರಹಾರದ ರಾಮಾನುಜ ರಸ್ತೆಯ ೧೩ನೇ ಕ್ರಾಸ್ ನಿವಾಸಿಗಳ ಪರದಾಟ ಮೈಸೂರು: ಮನೆಯ ಬಾಗಿಲು ತೆರೆದರೆ ಮೂಗಿಗ…

2 hours ago

ಪ್ರತ್ಯೇಕ ಪ್ರಕರಣ: ಮನೆ, ದೇವಸ್ಥಾನದಲ್ಲಿ ಕಳವು

ಹನಗೋಡು: ಹಾಡಹಗಲೇ ಮನೆ ಬೀಗ ಒಡೆದು ಚಿನ್ನಾಭರಣ ಮತ್ತು ನಗದು ಕಳವು ಮಾಡಿರುವ ಘಟನೆ ನಡೆದಿದೆ. ಹನಗೋಡು ಹೋಬಳಿಯ ಕಡೇಮನುಗನಹಳ್ಳಿ…

15 hours ago

ಜಿಲ್ಲಾಧಿಕಾರಿ ಆದೇಶ ಮೀರಿ ಶಾಲೆ ಸಮಯದಲ್ಲಿ ಸಂಚಾರ: 6 ಟಿಪ್ಪರ್ ವಶ

ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಟಿಪ್ಪರ್‌ಗಳ ಹಾವಳಿ ಹೆಚ್ಚಾಗಿ ಶಾಲಾ ಮಕ್ಕಳ ವಾಹಕ ಅಪಘಾತಕ್ಕೀಡಾಗಿ ಹಲವು ಮಕ್ಕಳಿಗೆ ಗಾಯಗಳಾಗಿದ್ದ ಪ್ರಕರಣದ ಬಳಿಕ ತಾಲ್ಲೂಕಿನಾದ್ಯಂತ…

15 hours ago