Andolana originals

ಎಲೆ ತೋಟ; ಸ್ಥಳೀಯರಿಗೆ ಅನೈರ್ಮಲ್ಯದ ಸಂಕಟ

ಚಿರಂಜೀವಿ ಸಿ.ಹುಲ್ಲಹಳ್ಳಿ

ಮೈಸೂರಿನ ಅಗ್ರಹಾರದ ರಾಮಾನುಜ ರಸ್ತೆಯ ೧೩ನೇ ಕ್ರಾಸ್ ನಿವಾಸಿಗಳ ಪರದಾಟ

ಮೈಸೂರು: ಮನೆಯ ಬಾಗಿಲು ತೆರೆದರೆ ಮೂಗಿಗ ರಪ್ಪನೆ ರಾಚುವ ದುರ್ವಾಸನೆ… ಕತ್ತಲಾಗುತ್ತಿದ್ದಂತೆ ಮೈಮೇಲೆ ಮುಗಿಬೀಳುವ ಸೊಳ್ಳೆಗಳ ಹಿಂಡು… ಮಳೆ ಬಂದರೆ ಮನೆಗಳ ಅಂಗಳಕ್ಕೆ ನುಗ್ಗುವ ಕೊಳಚೆ ನೀರು… ಇದು ಮೈಸೂರಿನ ಹೆಗ್ಗುರುತುಗಳಲ್ಲೊಂದಾದ ವೀಳ್ಯದೆಲೆ ತೋಟದ ಸಮೀಪದ ಬಡಾವಣೆಯೊಂದರ ನಿವಾಸಿಗಳ ದುರ್ಗತಿ.

ಇದು ನಗರದ ಅಗ್ರಹಾರ ಬಡಾವಣೆ ರಾಮಾನುಜ ರಸ್ತೆಯ ೧೩ನೇ ಅಡ್ಡರಸ್ತೆಯ ಕೊನೆಯಲ್ಲಿ ಇರುವ ಎಲೆತೋಟದ ಪಕ್ಕದ ನಿವಾಸಿಗಳ ಬದುಕಿನ ಪಾಡು. ಗಿಡಗಂಟಿಗಳು ಬೆಳೆದು ರಾಜಕಾಲುವೆ ಸಂಪೂರ್ಣವಾಗಿ ಮುಚ್ಚಿಹೋಗಿರುವ ಪರಿಣಾಮ ಚರಂಡಿ ಹಾದುಹೋಗಿರುವ ಮಾರ್ಗ ಈಗ ಸೊಳ್ಳೆ, ಹಾವುಗಳು, ಹಂದಿಗಳ ತಾಣವಾಗಿ ಮಾರ್ಪಟ್ಟಿದೆ.

ಹತ್ತಾರು ವರ್ಷಗಳಿಂದ ನಿರ್ವಹಣೆ ಕಾಣದ ಈ ಜಾಗದಲ್ಲಿ ಹೂಳು ತುಂಬಿಕೊಂಡಿದ್ದು, ಒಳಚರಂಡಿಯ ನೀರು ಸರಾಗವಾಗಿ ಹರಿಯದೆ ನಿಂತು ದುರ್ವಾಸನೆ ಬೀರುತ್ತಿದೆ. ಪರಿಣಾಮವಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

೫೦ಕ್ಕೂ ಹೆಚ್ಚು ಕುಟುಂಬಗಳು ವಾಸಿಸುವ ಈ ಪ್ರದೇಶದಲ್ಲಿ ಕಳೆದ ೧೦-೧೫ ವರ್ಷಗಳಿಂದಲೂ ಜನರು ಈ ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರಗಳು ಬದಲಾಗಿವೆ, ಜನಪ್ರತಿನಿಧಿಗಳು ಬದಲಾಗಿದ್ದಾರೆ, ಅಧಿಕಾರಿಗಳೂ ಬದಲಾಗಿದ್ದಾರೆ. ಆದರೆ ಇಲ್ಲಿನ ಪರಿಸ್ಥಿತಿ ಮಾತ್ರ ಸುಧಾರಿಸಿಲ್ಲ. ಪಾಲಿಕೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ ಎನ್ನುವುದು ನಿವಾಸಿಗಳ ಅಸಮಾಧಾನ.

ನಾವು ಕೂಡ ತೆರಿಗೆ ಕಟ್ಟುತ್ತೇವೆ. ನಗರ ಪಾಲಿಕೆಯ ಎಲ್ಲ ನಿಯಮಗಳನ್ನೂ ಪಾಲಿಸುತ್ತೇವೆ. ಆದರೆ, ನಮಗೆ ಮೂಲ ಸೌಕರ್ಯ ಕಲ್ಪಿಸುವವರು ಯಾರೂ ಇಲ್ಲ. ಚುನಾವಣೆ ಸಮಯದಲ್ಲಿ ಮತ ಕೇಳಲು ಬರುವ ಜನಪ್ರತಿನಿಧಿಗಳು ಸೇತುವೆಯವರೆಗೆ ಮಾತ್ರ ಬರುತ್ತಾರೆ. ಮುಂದೆ ಒಂದು ಹೆಜ್ಜೆಯೂ ಇಡುವುದಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಾರೆ.

ಎಸ್.ಎ.ರಾಮದಾಸ್ ಶಾಸಕರಾಗಿದ್ದ ಸಂದರ್ಭದಲ್ಲಿ ಸಮಸ್ಯೆ ಕುರಿತು ಮನವಿ ಸಲ್ಲಿಸಲಾಗಿತ್ತು. ಆದರೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಿಲ್ಲ . ನಗರಪಾಲಿಕೆ ಸದಸ್ಯರಾಗಿದ್ದ ಬಿ.ವಿ.ಮಂಜುನಾಥ್  ಅವರು ಕೂಡ ಸಮಸ್ಯೆ ಆಲಿಸಿದರು. ಆದರೆ, ಸಮಸ್ಯೆ ಪರಿಹಾರವಾಗಲಿಲ್ಲ. ಪ್ರಸ್ತುತ ಶಾಸಕ ಟಿ.ಎಸ್.ಶ್ರೀವತ್ಸ ಅವರ ಗಮನಕ್ಕೆ ತಂದರೆ ‘ಅನುದಾನದ ಕೊರತೆ‘ ಎಂಬ ಸಿದ್ಧ ಉತ್ತರ ಮಾತ್ರ ಸಿಗುತ್ತಿದೆ ಎಂದು ಸ್ಥಳೀಯರು ದೂರುತ್ತಾರೆ.

ನಗರಪಾಲಿಕೆ ಆಯುಕ್ತರು, ಆರೋಗ್ಯಾಧಿಕಾರಿಗಳು ಸೇರಿದಂತೆ ಸಂಬಂಽಸಿದ ಅಽಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ‘ಅನುದಾನ ಇಲ್ಲ‘ ಎಂಬ ಉತ್ತರವೇ ಕೇಳಿಬರುತ್ತಿದೆ. ಆದರೆ ಸಮಸ್ಯೆಯ ಗಂಭೀರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮಳೆಗಾಲದಲ್ಲಿ ಚರಂಡಿ ತುಂಬಿ ಹರಿದು ಕೊಳಚೆ ನೀರು ಮನೆಗಳ ಮುಂಭಾಗದವರೆಗೆ ಬರುತ್ತದೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚುವುದರ ಜೊತೆಗೆ ಸಾಂಕ್ರಾಮಿಕ ರೋಗಗಳು ಹರಡುವ ಆತಂಕವೂ ಇದೆ. ಮಕ್ಕಳು ಮತ್ತು ವೃದ್ಧರು ಹೆಚ್ಚು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ಸಂಗೀತ ಅಲವತ್ತುಕೊಂಡರು.

” ನಾವು ಈ ಪ್ರದೇಶದಲ್ಲಿ ಯಾಕಾದರೂ ಮನೆ ಕಟ್ಟಿದ್ದೇವೋ ಎಂದು ಪಶ್ಚಾತ್ತಾಪದಲ್ಲಿ ಬದುಕುವಂತೆ ಆಗಿದೆ. ರಾಜಕಾಲುವೆ ತುಂಬಿ ಕೊಳಚೆ ನೀರು ಮನೆಯ ಒಳಗೆ ಬರುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ನಿವಾಸಿಗಳೇ ಚರಂಡಿಗೆ ಮಣ್ಣಿನ ತಡೆಗೋಡೆ ಕಟ್ಟಿಕೊಂಡಿದ್ದೇವೆ. ಆದರೆ, ಮಳೆ ಬಂದರೆ ಇದು ಉಳಿಯುವುದಿಲ್ಲ. ದುರ್ನಾತ ಸಹಿಸಲಾಗುತ್ತಿಲ್ಲ. ನಮ್ಮ ಸಮಸ್ಯೆಗೆ ಪರಿಹಾರ ಕೊಡಿ.”

ಶಶಿಕಲಾ, ಸ್ಥಳೀಯರು

” ಚರಂಡಿಯ ಹೂಳು ತೆಗೆಸಿದರೂ ದುವಾರ್ಸನೆಯಿಂದ ನಮಗೆ ಸ್ವಲ್ಪವಾದರೂ ಪರಿಹಾರ ಸಿಗುತ್ತದೆ. ಮಕ್ಕಳನ್ನು ಹೊರಗಡೆ ಬಿಡಲು ನಮಗೆ ಭಯವಾಗುತ್ತದೆ. ಇಲ್ಲಿನ ವಾತಾವರಣ ಅವರನ್ನು ಅನಾರೋಗ್ಯ ಪೀಡಿತರನ್ನಾಗಿಸುತ್ತಿದೆ.”

ಸಂಗೀತ, ಸ್ಥಳೀಯ ನಿವಾಸಿ

” ಕಂದಾಯ, ನೀರಿನ ಕರ, ವಿದ್ಯುತ್ ಶುಲ್ಕ ಇತರೆ ಎಲ್ಲ ಸರ್ಕಾರಿ ತೆರಿಗೆಗಳನ್ನೂ ಕಟ್ಟಿಸಿ ಕೊಳ್ಳುವ ನಗರಪಾಲಿಕೆ ನಮಗೆ ಅಗತ್ಯ ಮೂಲ ಸೌಕರ್ಯವನ್ನು ಕೊಡುತ್ತಿಲ್ಲ. ನಾವು ಯಾಕೆ ತೆರಿಗೆ ಪಾವತಿಸಬೇಕು? ಮಳೆಗಾಲ ಆರಂಭವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಸಮಸ್ಯೆ ಬಗೆಹರಿಸಿ ನಮ್ಮ ಆರೋಗ್ಯಯುತ ಜೀವನಕ್ಕೆ ಸಹಾಯ ಮಾಡಬೇಕು.”

ಉಮಾ, ಸ್ಥಳೀಯ ನಿವಾಸಿ

” ಈ ಮೊದಲು ಚರಂಡಿ ‘ಎಲ್’ ಆಕಾರದಲ್ಲಿ ಇತ್ತು. ಇಲ್ಲಿ ಮನೆಗಳು ನಿರ್ಮಾಣವಾದ ನಂತರ ಚರಂಡಿ ಈ ಸ್ಥಿತಿಗೆ ಬಂದಿದೆ. ಚರಂಡಿ ತುಂಬಾ ಜೊಂಡು ಬೆಳೆದುಕೊಂಡಿದೆ. ಹೂಳೆತ್ತಿಸಿ ತಡೆಗೋಡೆ ನಿರ್ಮಿಸಿದರೆ ಅರ್ಧ ಸಮಸ್ಯೆ ಬಗೆಹರಿಯಲಿದೆ. ನಿವಾಸಿಗಳ ನರಕಯಾತನೆಯನ್ನು ಕಂಡು ಸಂಬಂಧಪಟ್ಟವರ ಮನಸ್ಸು ಕರಗಬೇಕು.”

ಅಕ್ಷಯ್ ಕುಮಾರ್, ಸ್ಥಳೀಯರು

 

 

ಆಂದೋಲನ ಡೆಸ್ಕ್

Recent Posts

ಕೊಳೆಗೇರಿ ಮಕ್ಕಳ ಬದುಕು ರೂಪಿಸುವ ‘ಖೇಲ್ ಘರ್’ ಎಂಬ ಆಟದ ಮನೆ

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ೧೯೯೬ರಲ್ಲಿ ‘ಪಾಲಕ್ ನೀತಿ ಪರಿವಾರ್’ ಎಂಬ ಸರ್ಕಾರೇತರ ಸಂಸ್ಥೆಯಡಿ ‘ಈ ಮನೆ’ ಆರಂಭ ಪುಣೆಯ…

1 hour ago

ಮಡಿಕೇರಿ ಅರಮನೆಗೆ ಕೇಂದ್ರದಿಂದ ಸಂರಕ್ಷಿತ ಸ್ಮಾರಕ ಸ್ಥಾನಮಾನ

ಪುನೀತ್ ಮಡಿಕೇರಿ ಡಿಜಿಟಲ್ ಮ್ಯೂಸಿಯಂ ಕನಸು ಸಾಕಾರಕ್ಕೆ ಕೇಂದ್ರ ಸರ್ಕಾರದ ನೆರವು ಕೊಡಗಿನ ಹೆಮ್ಮೆಯ ಸಂಕೇತವಾದ ಮಡಿಕೇರಿ ಅರಮನೆಗೆ ಕೇಂದ್ರ ಸರ್ಕಾರದಿಂದ…

1 hour ago

ಹೆಸರಿಗಷ್ಟೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯ!

ಮಹೇಂದ್ರ ಹಸಗೂಲಿ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಎಂದು ಸಿಎಂ ಘೋಷಣೆ ಮಾಡಿದರೂ ಹಣ ಪಡೆದು ಪಾಸ್ ವಿತರಣೆಗೆ ಆಕ್ರೋಶ  ಗುಂಡ್ಲುಪೇಟೆ:…

2 hours ago

ಪ್ರತ್ಯೇಕ ಪ್ರಕರಣ: ಮನೆ, ದೇವಸ್ಥಾನದಲ್ಲಿ ಕಳವು

ಹನಗೋಡು: ಹಾಡಹಗಲೇ ಮನೆ ಬೀಗ ಒಡೆದು ಚಿನ್ನಾಭರಣ ಮತ್ತು ನಗದು ಕಳವು ಮಾಡಿರುವ ಘಟನೆ ನಡೆದಿದೆ. ಹನಗೋಡು ಹೋಬಳಿಯ ಕಡೇಮನುಗನಹಳ್ಳಿ…

15 hours ago

ಜಿಲ್ಲಾಧಿಕಾರಿ ಆದೇಶ ಮೀರಿ ಶಾಲೆ ಸಮಯದಲ್ಲಿ ಸಂಚಾರ: 6 ಟಿಪ್ಪರ್ ವಶ

ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಟಿಪ್ಪರ್‌ಗಳ ಹಾವಳಿ ಹೆಚ್ಚಾಗಿ ಶಾಲಾ ಮಕ್ಕಳ ವಾಹಕ ಅಪಘಾತಕ್ಕೀಡಾಗಿ ಹಲವು ಮಕ್ಕಳಿಗೆ ಗಾಯಗಳಾಗಿದ್ದ ಪ್ರಕರಣದ ಬಳಿಕ ತಾಲ್ಲೂಕಿನಾದ್ಯಂತ…

15 hours ago