Andolana originals

ಹಿಂದಿನ ಉಸ್ತುವಾರಿಗಿದ್ದ ಖಾತೆಗಳು ಪುಟ್ಟರಂಗಶೆಟ್ಟರಿಗೆ!

ರಾಜೇಶ್ ಬೆಂಡರವಾಡಿ

ಪಶುಸಂಗೋಪನೆ, ರೇಷ್ಮೆ ಖಾತೆ ಹಂಚಿಕೆ; ಉಭಯ ಕ್ಷೇತ್ರಗಳಲ್ಲಿ ಅನುಭವ ಇರುವ ಹಿನ್ನೆಲೆ 

ಚಾಮರಾಜನಗರ: ರಾಜ್ಯದಲ್ಲಿ ಎರಡನೇ ಹಂತದಲ್ಲಿ ಸಚಿವರಾಗಿದ್ದವರಿಗೆ ಬುಧವಾರ ಖಾತೆ ಹಂಚಿಕೆ ಮಾಡಲಾಗಿದ್ದು, ಚಾಮರಾಜನಗರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಪಶುಸಂಗೋಪನೆ ಮತ್ತು ರೇಷ್ಮೆ ಖಾತೆಯ ಹೊಣೆ ವಹಿಸಲಾಗಿದೆ.

ಕಾಂಗ್ರೆಸ್ -ಜಾ.ದಳ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ನಿಭಾಯಿಸಿದ್ದ ಪುಟ್ಟರಂಗಶೆಟ್ಟಿ ಅವರಿಗೆ ಪಶುಸಂಗೋಪನೆ ಮತ್ತು ರೇಷ್ಮೆ ಹೊಸ ಖಾತೆಯಾಗಿವೆ. ಆದರೆ, ಸ್ವತಃ ಪಶುಪಾಲನೆ ಹಾಗೂ ರೇಷ್ಮೆ ಕೃಷಿ ಕುರಿತು ದೊಡ್ಡ ಅನುಭವವನ್ನು ಅವರು ಹೊಂದಿದ್ದಾರೆ. ಚಾ.ನಗರ ಜಿಲ್ಲೆಯ ನಿಕಟಪೂರ್ವ ಉಸ್ತುವಾರಿ ಸಚಿವರಾಗಿದ್ದ ಪಕ್ಕದ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಕೆ.ವೆಂಕಟೇಶ್ ಅವರು ನಿರ್ವಹಿಸುತ್ತಿದ್ದ ಪಶುಸಂಗೋಪನೆ ಮತ್ತು ರೇಷ್ಮೆ ಖಾತೆಯನ್ನೇ ಪುಟ್ಟರಂಗಶೆಟ್ಟಿ ಅವರ ಹೆಗಲಿಗೆ ವರ್ಗಾಯಿಸಲಾಗಿದೆ.

ಎಸ್.ಎಂ.ಕೃಷ್ಣ ಅವರು ೧೯೯೯ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ದಿವಂಗತ ಎಂ.ಮಹದೇವು ಅವರು ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಹೊತ್ತಿದ್ದರು. ಆವಾಗ ಅವರೂ ಪಶುಸಂಗೋಪನೆ, ರೇಷ್ಮೆ ಹಾಗೂ ಸಕ್ಕರೆ ಸಚಿವರಾಗಿದ್ದರು. ರೇಷ್ಮೆ ಕೃಷಿ ಮತ್ತು ಹೈನುಗಾರಿಕೆ ಬಗ್ಗೆ ಗೊತ್ತಿರುವ ಪುಟ್ಟರಂಗಶೆಟ್ಟಿ ಅವರಿಗೆ ಉಭಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ರೈತಾಪಿ ವರ್ಗದ ಪರವಾಗಿ ಒಳ್ಳೆಯ ಕೆಲಸ ಮಾಡಿ ತೋರಿಸಲು ಇದೊಂದು ಸದವಕಾಶ ಎಂದೇ ಹೇಳಬಹುದು.

ರಾಜ್ಯದಲ್ಲಿ ಹೈನುಗಾರಿಕೆಯನ್ನೇ ನಂಬಿ ಬದುಕು ಸಾಗಿಸುತ್ತಿರುವ ದೊಡ್ಡ ವರ್ಗವಿದೆ. ಹಾಗೆಯೇ, ರೇಷ್ಮೆ ಕೃಷಿಯನ್ನೂ ಹೆಚ್ಚಿನ ಕಡೆ ಮಾಡಲಾಗುತ್ತಿದೆ. ಚಾಮರಾಜನಗರ ಜಿಲ್ಲೆ ಎರಡೂವರೆ ದಶಕಗಳ ಹಿಂದೆ ರೇಷ್ಮೆ ಬೆಳೆಯಲ್ಲಿ ಬಹಳ ಮುಂಚೂಣಿಯಲ್ಲಿತ್ತು. ರೇಷ್ಮೆ ನಾಡು ಎಂದೇ ಪ್ರಖ್ಯಾತಿ ಗಳಿಸಿತ್ತು. ನಂತರದಲ್ಲಿ ವಿವಿಧ ಕಾರಣಗಳಿಂದ ಬೆಳೆ ಇಳಿಮುಖ ಕಂಡಿತ್ತು. ಈ ನಡುವೆ ಕ್ರಮೇಣ ಜಿಲ್ಲೆಯಲ್ಲಿ ಮತ್ತೆ ಬೆಳೆ ಮುನ್ನೆಲೆಗೆ ಸಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಚಾಮರಾಜನಗರ, ಸಂತೇಮರಹಳ್ಳಿ, ಕೊಳ್ಳೇಗಾಲದ ಮುಡಿಗುಂಡ ರೇಷ್ಮೆ ಮಾರುಕಟ್ಟೆಗಳಿಗೆ ಹೊಸ ಸ್ಪರ್ಶವನ್ನು ಸಚಿವರು ನೀಡಬೇಕಿದೆ. ರೇಷ್ಮೆ ಬೆಳೆಗಾರರಿಗೆ ವಿವಿಧ ಸವಲತ್ತುಗಳನ್ನು ನೀಡಲಾಗುತ್ತಿದ್ದು ಇನ್ನಷ್ಟು ಸೌಲಭ್ಯ ಮತ್ತು ಅನುಕೂಲವನ್ನು ಕಲ್ಪಿಸುವ ಪ್ರಯತ್ನವನ್ನು ಸಚಿವರು ಮಾಡುತ್ತಾರೆ ಎಂಬ ಆಶಾಭಾವನೆ ಸ್ಥಳೀಯರದ್ದಾಗಿದೆ. ಇನ್ನು, ಪಶುಸಂಗೋಪನೆಗೆ ಬಂದರೆ ಚಾಮರಾಜನಗರ ಜಿಲ್ಲೆಯಲ್ಲಿ ಒಂದು, ಎರಡು ಹಸುಗಳನ್ನು ಸಾಕಿ ಡೇರಿಗೆ ಹಾಲು ಹಾಕಿ, ಅದರಿಂದ ಬರುವ ಹಣದಿಂದಲೇ ಜೀವನ ನಡೆಸುವಂಥವರು ಬಹು ಸಂಖ್ಯೆಯಲ್ಲಿದ್ದಾರೆ. ರಾಜ್ಯವ್ಯಾಪಿ ಇಂಥವರು ದೊಡ್ಡ ಪ್ರಮಾಣದಲ್ಲಿ ಇದ್ದಾರೆ.

ಹೀಗೆ ಜೀವನಕ್ಕೆ ಅವಲಂಬನೆ ಆಗಿರುವ ಹಸು, ಕರು ಅಥವಾ ರೈತರ ಕೃಷಿಗೆ ಬೆನ್ನೆಲುಬಾಗಿರುವ ಎತ್ತುಗಳು ಅನಾರೋಗ್ಯಕ್ಕೆ ಒಳಗಾದರೆ ಅವುಗಳಿಗೆ ಔಷಧಿ ನೀಡಲು, ಇತರೇ ಉಪಚಾರ ಮಾಡಲು ಬೇಕಿರುವ ಪಶು ವೈದ್ಯರ ಕೊರತೆ ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯಲ್ಲಿದೆ. ಇತರ ಜಿಲ್ಲೆಯಲ್ಲಿಯೂ ಇದೇ ಪರಿಸ್ಥಿತಿ ಇರಬಹುದು.

ಚಾಮರಾಜನಗರ ತಾಲ್ಲೂಕಿನ ಹರವೆ, ಹನೂರು ತಾಲ್ಲೂಕಿನ ಲೊಕ್ಕನಹಳ್ಳಿ, ಗುಂಡ್ಲುಪೇಟೆ ತಾಲ್ಲೂಕಿನ ಕಬ್ಬಹಳ್ಳಿ, ತೆರಕಣಾಂಬಿ ಇಲ್ಲೆಲ್ಲಾ ಪಶು ಆಸ್ಪತ್ರೆಯ ದೊಡ್ಡ ಕಟ್ಟಡಗಳಿವೆ. ಆದರೆ ವೈದ್ಯರೇ ಇಲ್ಲ. ಹನೂರು ತಾಲ್ಲೂಕಿನಲ್ಲಿ ೧೨ ಆಸ್ಪತ್ರೆಗಳಿದ್ದು ಎಲ್ಲೂ ಖಾಯಂ ವೈದ್ಯರಿಲ್ಲ. ಒಬ್ಬೊಬ್ಬ ಪಶು ವೈದ್ಯರು ಕನಿಷ್ಠ ಮೂರರಿಂದ ನಾಲ್ಕು ಆಸ್ಪತ್ರೆಗಳಲ್ಲಿ ಹೆಚ್ಚುವರಿಯಾಗಿ ಕೆಲಸ ಮಾಡುತ್ತಿದ್ದಾರೆ. ಯಳಂದೂರು ಮತ್ತು ಹನೂರು ತಾಲ್ಲೂಕುಗಳಲ್ಲಿ ಖಾಯಂ ಪಶು ಸಂಗೋಪನೆ ಸಹಾಯಕ ನಿರ್ದೇಶಕರೇ ಇಲ್ಲ. ಒಟ್ಟಾರೆ ಇಲಾಖೆಯಲ್ಲಿ ಶೇ.೭೦ರಿಂದ ೭೫ರಷ್ಟು ಸಿಬ್ಬಂದಿ ಕೊರತೆ ಇದೆ. ರೈತಾಪಿಗಳ ಬದುಕಿನ ಮೂಲವಾಗಿರುವ ಇಲಾಖೆಯಲ್ಲಿ ಈ ಮಟ್ಟದಲ್ಲಿ ಹುದ್ದೆಗಳು ಖಾಲಿ ಇರುವುದರಿಂದ ಒಂದು ಕೆಲಸ ಮಾಡಿದರೆ ಇನ್ನೊಂದನ್ನು ವ್ಯವಸ್ಥಿತವಾಗಿ ಮಾಡಲಾಗದ ಸ್ಥಿತಿಯಲ್ಲಿ ಇಲಾಖೆ ನರಳುತ್ತಿದೆ. ಖಾಲಿ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲಾದರೂ ಭರ್ತಿ ಮಾಡಬೇಕು ಎಂಬುದು ಇಲಾಖೆಯ ಹಿರಿಯ ಅಧಿಕಾರಿಗಳ ಒತ್ತಾಯವಾಗಿದೆ. ಸಚಿವರು ಈ ಬಗ್ಗೆ ತುರ್ತು ಗಮನಹರಿಸಬೇಕಿದೆ.

ಗೋ ಶಾಲೆ ನಿರ್ಧಾರ ಶೆಟ್ಟರಿಗೇ …:  ಆ.೩ರಂದು ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ನಂತರ ಜಿಲ್ಲೆ ವ್ಯಾಪ್ತಿಯಲ್ಲಿ ಬರ ಪರಿಸ್ಥಿತಿಯನ್ನು ಪುಟ್ಟರಂಗಶೆಟ್ಟಿ ವೀಕ್ಷಣೆ ಮಾಡಿದರು. ಆ ಸಂದರ್ಭದಲ್ಲಿ ಅವರು ಹೋದ ಕಡೆಯಲ್ಲೆಲ್ಲಾ ಗೋ ಶಾಲೆ ತೆರೆಯಬೇಕು ಎಂಬ ಒತ್ತಾಯ ಜನರಿಂದ ಕೇಳಿ ಬಂದಿತ್ತು. ಇದೀಗ ಪಶುಸಂಗೋಪನೆ ಖಾತೆಯನ್ನು ಅವರೇ ಹೊತ್ತಿರುವುದರಿಂದ ಗೋಶಾಲೆ ತೆರೆಯುವ ವಿಚಾರದಲ್ಲಿ ನಿಯಮಾನುಸಾರ ನಿರ್ಧಾರವನ್ನು ತೆಗೆದುಕೊಳ್ಳುವ ಅವಕಾಶ ದೊರಕಿದೆ. ಹಾಲು ಉತ್ಪಾದಕರಿಗೆ ನೀಡಲಾಗುವ ಪ್ರೋತ್ಸಾಹ ಧನ ಕೆಲ ತಿಂಗಳಿಂದ ಬಂದಿಲ್ಲ. ಆಕಸ್ಮಿಕವಾಗಿ ಮರಣ ಹೊಂದಿದ ಆಕಳು, ಕುರಿ, ಮೇಕೆಗಳ ಪರಿಹಾರ ಧನವೂ ಬಹಳ ದಿನಗಳಿಂದ ಬಾರದೇ ಪರಿಹಾರಕ್ಕಾಗಿ ಸಾಕಾಣಿಕೆದಾರರು ಚಾತಕ ಪಕ್ಷಿಯಂತೆ ಕಾದಿದ್ದಾರೆ. ಬರ ಪರಿಸ್ಥಿತಿಯ ಈ ಸಂದರ್ಭದಲ್ಲಿ ಬೇಗ ಪರಿಹಾರ ಕೊಡಿಸಲು, ಗೋಶಾಲೆ ಮತ್ತು ಮೇವು ಬ್ಯಾಂಕ್‌ಗಳನ್ನು ತೆರೆಯಲು ಸ್ವತಃ ಪಶು ಸಂಗೋಪನೆ ಖಾತೆ ಹೊಂದಿರುವ ಪುಟ್ಟರಂಗಶೆಟ್ಟಿ ಅವರು ಮುಂದಾಗ ಬೇಕಿದೆ. ಈ ಸಮಸ್ಯೆಗಳು ರಾಜ್ಯದ ಎಲ್ಲೇ ಇದ್ದರೂ ಆದ್ಯತೆ ಮೇಲೆ ಕ್ರಮ ವಹಿಸಬೇಕಿದೆ. ಸಚಿವರು ಏನು ಮಾಡುತ್ತಾರೆ ಕಾದು ನೋಡಬೇಕಿದೆ.

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ‘ಪ್ರತಾಪ’ಕ್ಕೆ ಸವಾಲು ಈ ನೀಲಿ

‘ಪ್ರತಾಪ’ಕ್ಕೆ ಸವಾಲು ಈ ನೀಲಿ ಇದು ನಮ್ಮ ಸೂರು ಆಕಾಶದ ನೀಲಿ ಇದು ನನ್ನವ್ವ ಸುತ್ತಿಕೊಂಡ ಸೀರೆಯ ನೀಲಿ ನನಗೆ…

3 hours ago

ಓದುಗರ ಪತ್ರ: ಟೆಲಿಕಾಂ ಕಂಪೆನಿಗಳ ಹಗಲು ದರೋಡೆ ನಿಯಂತ್ರಿಸಿ

ಪ್ರಸ್ತುತ ಆಂಡ್ರಾಯ್ಡ ಮೊಬೈಲ್‌ನಿಂದಲೇ ದಿನನಿತ್ಯದ ಕೆಲಸಗಳು ಆರಂಭವಾಗಿ ಅವುಗಳಿಂದಲೇ ದಿನ ಮುಕ್ತಾಯ ಅನ್ನುವಷ್ಟರ ಮಟ್ಟಿಗೆ ಅನಿವಾರ್ಯತೆ ನಿರ್ಮಾಣವಾಗಿದೆ. ಮೊಬೈಲ್ ಇಲ್ಲದೆ…

3 hours ago

ಓದುಗರ ಪತ್ರ: ಸರ್ಕಾರಿ ಕಚೇರಿಗಳ ಅನಗತ್ಯ ಬಾಡಿಗೆ ವೆಚ್ಚಗಳನ್ನು ತಪ್ಪಿಸಿ

ಹೆಚ್. ಡಿ. ಕೋಟೆ ತಾಲ್ಲೂಕು ಕೇಂದ್ರ ಸ್ಥಳದಲ್ಲಿ ಕೆಲವು ಸರ್ಕಾರಿ ಇಲಾಖೆಗಳು ಹಾಗೂ ಹಾಸ್ಟೆಲ್‌ಗಳು ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಣೆ ಮಾಡುತ್ತಿವೆ.…

3 hours ago

ರಂಗದ ಮೇಲೆ ಜಿನುಗಿದ ಜೀವಸೆಲೆ

ಜಿ.ಪಿ.ಬಸವರಾಜು ಯಾಂತ್ರಿಕ ಬದುಕಿನ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ತೋರಿಸುವ ನಾಟಕ ‘ಅಮೃತಬಳ್ಳಿ ಕಷಾಯ’ ಮಾಯಾ ನಗರಿಯಂತೆ ಕಾಣುವ ಮುಂಬೈ ನಗರ…

3 hours ago

ಸಮವಸ್ತ್ರದ ಆತ್ಮಸಾಕ್ಷಿ ಮತ್ತು ಮೂರು ಪ್ರಜ್ಞೆಗಳು

ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು ಕರ್ನಾಟಕ ಪೊಲೀಸ್‌ ಅಕಾಡೆಮಿ ಮೈಸೂರು  ಸದಾ ಜಾಗೃತವಾಗಿರುವ ಸಮಯಪಾಲನೆಯ ವಿವೇಚನೆ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು…

3 hours ago

ದಸರಾ ಕಾರ್ಯಕ್ರಮಕ್ಕೆ ಸವಾಲಾದ ಬಸ್ ಸೇವೆ

ಕೆ.ಬಿ.ರಮೇಶನಾಯಕ ಉತ್ತನಹಳ್ಳಿ ಗ್ರಾಮದ ಬಳಿ ಯುವ ದಸರಾ, ಸಾತಗಳ್ಳಿ ವಿಟಿಯು ಸಮೀಪ ಕಂಬಳ ಕ್ರೀಡೆ ಆಯೋಜನೆ; ವೀಕ್ಷಕರ ಬೇಡಿಕೆಗೆ ತಕ್ಕಂತೆ…

3 hours ago