Andolana originals

ಕೊಡಗಿನಲ್ಲಿಯೂ ಹೆಚ್ಚಿದ ಬಿಸಿಲಿನ ತಾಪಮಾನ

ಫ್ರೆಬ್ರವರಿಯಲ್ಲಿಯೆ 32 ಡಿಗ್ರಿ ಸೆಲ್ಸಿಯಸ್‌ ದಾಖಲು ; ಅಗತ್ಯ ಮುನ್ನೆಚ್ಚರಿಕೆಗೆ ತಜ್ಞರ ಸಲಹೆ 

ನವೀನ್ ಡಿಸೋಜ

ಮಡಿಕೇರಿ: ಬೇಸಿಗೆ ಆರಂಭಕ್ಕೂ ಮೊದಲೇ ಮಂಜಿನ ನಗರಿ ಮಡಿಕೇರಿಯಲ್ಲಿ ತಾಪಮಾನ ಏರಿಕೆ ಕಂಡಬರುತ್ತಿದೆ. ಫೆಬ್ರವರಿ ತಿಂಗಳ ೩ನೇ ವಾರದಲ್ಲಿಯೇ ಜಿಲ್ಲೆಯಲ್ಲಿ ೩೨ ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿನ ತಾಪಮಾನ ದಾಖಲಾಗುತ್ತಿದ್ದು, ಮುಂದಿನ ದಿನಗಳ ಬಗ್ಗೆ ಆತಂಕ ಮೂಡಿಸಿದೆ.

ಮಡಿಕೇರಿ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ಸಾಮಾನ್ಯವಾಗಿ ಫೆಬ್ರವರಿ ಅಂತ್ಯದವರೆಗೆ ತಂಪಾದ ವಾತಾವರಣವಿದ್ದು, ಮಾರ್ಚ್ ಬಳಿಕ ಬಿಸಿಲು ಹೆಚ್ಚಾಗುತ್ತಾ ಹೋಗುತ್ತಿತ್ತು. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚಿನ ಧಗೆ ಕಂಡುಬರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಫೆಬ್ರವರಿ ತಿಂಗಳಿನಿಂದಲೇ ಸುಡುವ ಬಿಸಿಲು ಕಾಣಿಸಿಕೊಳ್ಳುತ್ತಿದ್ದು, ಈ ಬಾರಿ ತಾಪಮಾನ ಈಗಾಗಲೇ ಗರಿಷ್ಠ ೩೨-೩೩ ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ.

ಕಳೆದ ಮುಂಗಾರು ಉತ್ತಮವಾಗಿತ್ತು ಮತ್ತು ದೀರ್ಘ ಕಾಲದ ಮಳೆಯಾಗಿತ್ತು. ಮುಂಗಾರಿನ ಬಳಿಕವೂ ಕೆಲವು ಚಂಡಮಾರುತ, ವಾಯು ಭಾರ ಕುಸಿತಗಳ ಪರಿಣಾಮ ಡಿಸೆಂಬರ್ ತಿಂಗಳವರೆಗೂ ಆಗೊಮ್ಮೆ ಈಗೊಮ್ಮೆ ಮಳೆಯಾಗುತ್ತಲೇ ಇತ್ತು. ಆದರೆ ಡಿಸೆಂಬರ್ ತಿಂಗಳಿನಲ್ಲಿ ಸೆಂಗಾಲ್ ಚಂಡಮಾರುತದ ಬಳಿಕ ಜಿಲ್ಲೆಯಲ್ಲಿ ಮಳೆ ಸುರಿಯಲಿಲ್ಲ. ಹೀಗಾಗಿ ಭೂಮಿಯಲ್ಲಿ ತೇವಾಂಶ ಕಡಿಮೆಯಾಗುತ್ತಿದ್ದು, ಹೆಚ್ಚಿನ ಶಾಖ ಕಂಡುಬರುತ್ತಿದೆ. ಜತೆಗೆ ಹವಾಮಾನ ವೈಪರೀತ್ಯದ ಪರಿಣಾಮದಿಂದಲೂ ಹೆಚ್ಚಿನ ಬಿಸಿಲು ಕಾಣಿಸಿಕೊಳ್ಳುತ್ತಿದ್ದು, ತಾಪಮಾನ ಏರಿಕೆಗೆ ಕಾರಣವಾಗುತ್ತಿದೆ ಎಂಬುದು ಹವಾಮಾನ ಇಲಾಖೆಯ ವಿಜ್ಞಾನಿಗಳ ಅಭಿಪ್ರಾಯವಾಗಿದೆ.

ಈ ಬಾರಿ ಪೂರ್ವ ಮುಂಗಾರು ಬೇಗನೆ ಆರಂಭವಾಗುವ ಸಾಧ್ಯತೆಯಿದ್ದು, ಮಾರ್ಚ್ ತಿಂಗಳಲ್ಲಿ ಒಂದೆರಡು ಮಳೆಯಾದರೆ ತಾಪಮಾನ ಕಡಿಮೆಯಾಗಲು ಸಹಕಾರಿಯಾಗಲಿದೆ. ಸೂಕ್ತ ಸಮಯಕ್ಕೆ ಮಳೆಯಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಭೂಮಿಯಲ್ಲಿನ ತೇವಾಂಶ ಮತ್ತಷ್ಟು ಕಡಿಮೆಯಾಗುವ ಪರಿಣಾಮ ಹೆಚ್ಚಿನ ತಾಪಮಾನ ಕಂಡುಬರಬಹುದು ಎಂದು ಅಂದಾಜಿಸಲಾಗುತ್ತಿದೆ. ಮಡಿಕೇರಿಯ ಮಟ್ಟಿಗೆ ೩೩ ಡಿಗ್ರಿಗಿಂತಲೂ ಹೆಚ್ಚಿನ ತಾಪಮಾನ ಅಪಾಯಕಾರಿಯಾಗಿದ್ದು, ಜನರು ತಮ್ಮ ಮತ್ತು ಬೆಳೆಗಳ ರಕ್ಷಣೆಗೆ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

೨೦೨೪ರ ಏಪ್ರಿಲ್ ೪ರಂದು ಮಡಿಕೇರಿಯಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾಗಿತ್ತು. ಅಂದು ದಾಖಲಾದ ೩೫. ೨ ಡಿಗ್ರಿ ಸೆಲ್ಸಿಯಸ್ ತಾಪಮಾನ ಮಡಿಕೇರಿಯಲ್ಲಿ ದಾಖಲಾದ ಅತಿ ಹೆಚ್ಚಿನ ತಾಪಮಾನ ಎನಿಸಿಕೊಂಡಿದೆ. ಫೆಬ್ರವರಿ ತಿಂಗಳಲ್ಲಿ ಈ ಬಾರಿ ೩೩. ೪ ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಈ ಹಿಂದೆ ೧೯೮೧ ಮತ್ತು ೨೦೧೦ರಲ್ಲಿ ಫೆಬ್ರವರಿ ತಿಂಗಳಲ್ಲಿ ೩೫ ಡಿಗ್ರಿ ತಾಪಮಾನ ದಾಖಲಾಗಿತ್ತು.

ತಾಪಮಾನ ಹೆಚ್ಚಿರುವ ಸಂದರ್ಭ ಮಕ್ಕಳಲ್ಲಿ ವಾಂತಿ, ಅತಿಸಾರದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಿರಿಯರಿಗೂ ತಾಪಮಾನ ಹೆಚ್ಚಳದಿಂದ ತೊಂದರೆಯಾಗುವ ಸಾಧ್ಯತೆಯಿದೆ. ಹೀಗಾಗಿ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ ಎಂಬುದು ತಜ್ಞರ ಸಲಹೆಯಾಗಿದೆ.

ಬಿಸಿಲಿಗೆ ಹೀಗೆ ಮಾಡಿ
ಹೆಚ್ಚು ನೀರು ಕುಡಿಯುವುದು, ಒಆರ್‌ಎಸ್, ನಿಂಬೆ ಪಾನೀಯ, ಫ್ರೆಶ್ ಜ್ಯೂಸ್ ಕುಡಿಯುವುದು ಪ್ರಯಾಣದ ವೇಳೆ ನೀರು ಜತೆಗಿರಲಿ. ಹೆಚ್ಚು ಹಣ್ಣಿನ ಸೇವನೆ, ಹೆಚ್ಚಾಗಿ ಮನೆ ಒಳಗೆಯೇ(ಗಾಳಿ ಸಂಚಾರ ಹೆಚ್ಚಿರುವ ಕಡೆ) ಇರುವುದು, ತಿಳಿ ಬಣ್ಣದ, ಹತ್ತಿ ಬಟ್ಟೆಧರಿಸುವುದು, ಬಿಸಿಲಿನಿಂದ ತಲೆ ಭಾಗವನ್ನು ರಕ್ಷಿಸಿ (ಕೊಡೆ, ಟೋಪಿ ಬಳಸಿ) ಕಾಲಿಗೆ ಪಾದರಕ್ಷೆಗಳನ್ನು ಬಳಸಿ.

ಅತಿಯಾದ ಶಾಖದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು
ತಲೆ ಸುತ್ತುವುದು, ಪ್ರಜ್ಞೆ ತಪ್ಪುವುದು, ವಾಕರಿಕೆ ಅಥವಾ ವಾಂತಿಯಾಗುವುದು, ತಲೆ ನೋವು, ಅತಿಯಾದ ಬಾಯಾರಿಕೆ, ಏರುಗತಿಯ ಉಸಿರಾಟ ಮತ್ತು ಹೃದಯ ಬಡಿತ

ಈ ಬಾರಿ ಫೆಬ್ರವರಿ ತಿಂಗಳಿನಲ್ಲಿಯೇ ಹೆಚ್ಚಿನ ಬಿಸಿಲು ಕಾಣಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಒಂದೆರಡು ಬಾರಿ ಮಳೆಯಾಗದ ಹೊರತು ತಾಪಮಾನ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಕೊಡಗಿನಲ್ಲಿ ಕಾಫಿ, ಅಡಕೆ, ಬಾಳೆಯಂತಹ ಬೆಳೆಗಳಿಗೆ ತುಂತುರು ನೀರಾವರಿ ಮತ್ತು ಬುಡವನ್ನು ತೇವವಾಗಿರುವಂತೆ ನೋಡಿಕೊಳ್ಳಲು ಕ್ರಮಗಳನ್ನು ಕೈಗೊಳ್ಳುವುದು ಉತ್ತಮ. -ಡಾ. ಸುಮಂತ್ ಕುಮಾರ್ ಜಿ. ವಿ. , ತಾಂತ್ರಿಕ ಅಧಿಕಾರಿ, ಹವಾಮಾನ ವಿಭಾಗ, ನಾಗನಹಳ್ಳಿ.

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ‘ಪ್ರತಾಪ’ಕ್ಕೆ ಸವಾಲು ಈ ನೀಲಿ

‘ಪ್ರತಾಪ’ಕ್ಕೆ ಸವಾಲು ಈ ನೀಲಿ ಇದು ನಮ್ಮ ಸೂರು ಆಕಾಶದ ನೀಲಿ ಇದು ನನ್ನವ್ವ ಸುತ್ತಿಕೊಂಡ ಸೀರೆಯ ನೀಲಿ ನನಗೆ…

36 mins ago

ಓದುಗರ ಪತ್ರ: ಟೆಲಿಕಾಂ ಕಂಪೆನಿಗಳ ಹಗಲು ದರೋಡೆ ನಿಯಂತ್ರಿಸಿ

ಪ್ರಸ್ತುತ ಆಂಡ್ರಾಯ್ಡ ಮೊಬೈಲ್‌ನಿಂದಲೇ ದಿನನಿತ್ಯದ ಕೆಲಸಗಳು ಆರಂಭವಾಗಿ ಅವುಗಳಿಂದಲೇ ದಿನ ಮುಕ್ತಾಯ ಅನ್ನುವಷ್ಟರ ಮಟ್ಟಿಗೆ ಅನಿವಾರ್ಯತೆ ನಿರ್ಮಾಣವಾಗಿದೆ. ಮೊಬೈಲ್ ಇಲ್ಲದೆ…

38 mins ago

ಓದುಗರ ಪತ್ರ: ಸರ್ಕಾರಿ ಕಚೇರಿಗಳ ಅನಗತ್ಯ ಬಾಡಿಗೆ ವೆಚ್ಚಗಳನ್ನು ತಪ್ಪಿಸಿ

ಹೆಚ್. ಡಿ. ಕೋಟೆ ತಾಲ್ಲೂಕು ಕೇಂದ್ರ ಸ್ಥಳದಲ್ಲಿ ಕೆಲವು ಸರ್ಕಾರಿ ಇಲಾಖೆಗಳು ಹಾಗೂ ಹಾಸ್ಟೆಲ್‌ಗಳು ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಣೆ ಮಾಡುತ್ತಿವೆ.…

40 mins ago

ರಂಗದ ಮೇಲೆ ಜಿನುಗಿದ ಜೀವಸೆಲೆ

ಜಿ.ಪಿ.ಬಸವರಾಜು ಯಾಂತ್ರಿಕ ಬದುಕಿನ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ತೋರಿಸುವ ನಾಟಕ ‘ಅಮೃತಬಳ್ಳಿ ಕಷಾಯ’ ಮಾಯಾ ನಗರಿಯಂತೆ ಕಾಣುವ ಮುಂಬೈ ನಗರ…

43 mins ago

ಸಮವಸ್ತ್ರದ ಆತ್ಮಸಾಕ್ಷಿ ಮತ್ತು ಮೂರು ಪ್ರಜ್ಞೆಗಳು

ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು ಕರ್ನಾಟಕ ಪೊಲೀಸ್‌ ಅಕಾಡೆಮಿ ಮೈಸೂರು  ಸದಾ ಜಾಗೃತವಾಗಿರುವ ಸಮಯಪಾಲನೆಯ ವಿವೇಚನೆ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು…

48 mins ago

ದಸರಾ ಕಾರ್ಯಕ್ರಮಕ್ಕೆ ಸವಾಲಾದ ಬಸ್ ಸೇವೆ

ಕೆ.ಬಿ.ರಮೇಶನಾಯಕ ಉತ್ತನಹಳ್ಳಿ ಗ್ರಾಮದ ಬಳಿ ಯುವ ದಸರಾ, ಸಾತಗಳ್ಳಿ ವಿಟಿಯು ಸಮೀಪ ಕಂಬಳ ಕ್ರೀಡೆ ಆಯೋಜನೆ; ವೀಕ್ಷಕರ ಬೇಡಿಕೆಗೆ ತಕ್ಕಂತೆ…

56 mins ago