Andolana originals

ಹಾಲಿನ ದರಾಘಾತಕ್ಕೆ ಜನಜೀವನ ತತ್ತರ

ಚಿರಂಜೀವಿ ಸಿ.ಹುಲ್ಲಹಳ್ಳಿ

ನಿತ್ಯ ಬಳಕೆಯ ವಸ್ತುಗಳ ಬೆಲೆಯೇರಿಕೆ ನಡುವೆ ಹಾಲಿನ ದರ ಹೆಚ್ಚಳಕ್ಕೆ ಜನಾಕ್ರೋಶ

ಮೈಸೂರು: ಅಕ್ಕಿ, ಸಕ್ಕರೆ ಸೇರಿದಂತೆ ನಿತ್ಯ ಬಳಕೆಯ ಅಗತ್ಯವಸ್ತುಗಳ ಬೆಲೆಗಳು ದಿನೇ ದಿನೇ ಏರಿಕೆಯಾಗುತ್ತಿದ್ದು, ಜನರ ಜೀವನ ಸಂಕಷ್ಟಕ್ಕೆ ಸಿಲುಕುವಂತಾಗಿರುವಾಗಲೇ ಸರ್ಕಾರ ಪ್ರತಿ ಲೀಟರ್ ಹಾಲಿನ ದರವನ್ನು ನವೆಂಬರ್ ೧ರಿಂದ ೮ ರೂ. ಹೆಚ್ಚಳ ಮಾಡಿರುವುದರಿಂದ ನಾಳೆಯಿಂದ ಜನ ಸಾಮಾನ್ಯರು ದುಬಾರಿ ದುನಿಯಾಕ್ಕೆ ಒಗ್ಗಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಹಾಲಿನ ದರ ಹೆಚ್ಚಳ ಕೇವಲ ಹಾಲು ಖರೀದಿಸುವ ಗ್ರಾಹಕರಿಗಷ್ಟೇ ಅಲ್ಲದೆ, ಹೋಟೆಲ್, ಟೀ-ಕಾಫಿ ಶಾಪ್ ಸೇರಿದಂತೆ ಹಾಲನ್ನು ಅವಲಂಬಿಸಿರುವ ಸಣ್ಣ ವ್ಯಾಪಾರಿಗಳಿಗೂ ಹೊಸ ಸವಾಲು ತಂದೊಡ್ಡಿದೆ.

ಹಾಲಿನ ದರ ಏರಿಕೆಯಿಂದ ಬಡ- ಮಧ್ಯಮ ವರ್ಗದ ಕುಟುಂಬಗಳ ನಿತ್ಯದ ಖರ್ಚಿನ ಮೇಲಷ್ಟೇ ಅಲ್ಲದೆ, ತಿಂಗಳ ಬಜೆಟ್ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ. ಈಗಾಗಲೇ ಅಕ್ಕಿ, ಬೇಳೆ, ಸಕ್ಕರೆ, ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಬಡ-ಮಧ್ಯಮ ವರ್ಗದ ಜನರಿಗೆ ಮತ್ತೊಂದು ಹೊರೆ ಎದುರಾಗುತ್ತಿದೆ.

ಹಾಲಿನ ದರ ಹೆಚ್ಚಳವಾದರೆ ಗ್ರಾಹಕರು ಖರೀದಿಸುವ ಪ್ರಮಾಣ ಕಡಿಮೆಯಾಗಬಹುದೇ ಎಂಬ ಆತಂಕ ಮಾರಾಟಗಾರರಲ್ಲಿದೆ. ಕೆಲವರು ಎಂದಿನಂತೆ ಖರೀದಿಸಿದರೆ, ಇನ್ನೂ ಕೆಲವರು ವೆಚ್ಚ ಕಡಿಮೆ ಮಾಡಲು ೧ ಅಥವಾ ೨ ಲೀಟರ್‌ಗೆ ಸೀಮಿತವಾಗಬಹುದು. ಹೀಗಾಗಿ ದರ ಏರಿಕೆಯ ಲಾಭಕ್ಕಿಂತ ವ್ಯಾಪಾರದ ಪ್ರಮಾಣದ ಮೇಲೆ ಉಂಟಾಗುವ ಪರಿಣಾಮದ ಬಗ್ಗೆಯೂ ಸಣ್ಣ ಮಾರಾಟಗಾರರು ಚಿಂತಿತರಾಗಿದ್ದಾರೆ.

ಇದರ ಪರಿಣಾಮ ಹೋಟೆಲ್ ಉದ್ಯಮದ ಮೇಲೂ ಬೀಳಲಿದೆ. ಹಾಲಿನ ದರ ಹೆಚ್ಚಳವಾದರೆ ಟೀ, ಕಾಫಿ ದರ ಹೆಚ್ಚಿಸುವುದು ಅನಿವಾರ್ಯವಾಗಬಹುದು. ವ್ಯಾಪಾರಿಗಳು ದರ ಹೆಚ್ಚಿಸಿದರೆ ಗ್ರಾಹಕರಿಗೆ ಹೊರೆ. ಹೆಚ್ಚಿಸದಿದ್ದರೆ ವ್ಯಾಪಾರಿಗಳಿಗೆ ನಷ್ಟ ಎಂಬ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಲಿದೆ. ಹಾಲಿನ ದರ ಏರಿಕೆಯಿಂದ ಹೈನುಗಾರರಿಗೆ ಹೆಚ್ಚಿನ ಲಾಭ ಸಿಗಲಿದೆ ಎಂಬ ನಿರೀಕ್ಷೆಯೂ ಪ್ರಶ್ನಾರ್ಹವಾಗಿದೆ. ಪಶು ಆಹಾರಗಳಾದ ಹಿಂಡಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ಬೆಲೆಯೂ ಹೆಚ್ಚಾಗಿದೆ. ರೈತರಿಗೆ ನೀಡುವ ಹೆಚ್ಚುವರಿ ಹಣಕ್ಕಿಂತ ಜಾನುವಾರುಗಳ ನಿರ್ವಹಣಾ ವೆಚ್ಚವೇ ಹೆಚ್ಚಾಗುತ್ತಿದ್ದರೆ ದರ ಏರಿಕೆಯ ನಿಜವಾದ ಪ್ರಯೋಜನ ಯಾರಿಗೆ ಎಂಬ ಪ್ರಶ್ನೆ ಕೂಡ ಎದುರಾಗಿದೆ.

” ಈಗಾಗಲೇ ಹೋಟೆಲ್ ತಿಂಡಿ-ತಿನಿಸುಗಳ ಬೆಲೆ ಏರಿಕೆಯಿಂದ ವ್ಯಾಪಾರ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಹಾಲಿನ ದರ ಏರಿಕೆಯಿಂದ ಹೋಟೆಲ್ ನಡೆಸುವುದೇ ಕಷ್ಟವಾಗಲಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ೮ ರೂಪಾಯಿ ದರ ಏರಿಕೆ ಕೈಬಿಟ್ಟು ಒಂದು ರೂಪಾಯಿ ಹೆಚ್ಚಳ ಮಾಡುವಂತೆ ಪತ್ರದ ಮೂಲಕ ಮನವಿ ಮಾಡಿದ್ದೇವೆ. ಹೋಟೆಲ್ ಮಾಲೀಕರ ಸಭೆ ಕರೆದು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ.”

ಸಿ. ನಾರಾಯಣ ಗೌಡ, ಅಧ್ಯಕ್ಷ, ಹೋಟೆಲ್ ಮಾಲೀಕರ ಸಂಘ

” ಈಗಾಗಲೇ ನಿತ್ಯ ಬಳಕೆಯ ವಸ್ತುಗಳ ಬೆಲೆ ಹೆಚ್ಚಾಗಿದೆ. ಆದರೆ, ಕೂಲಿ ಮಾತ್ರ ಹೆಚ್ಚಾಗಿಲ್ಲ. ಇಂತಹ ಸಂದರ್ಭದಲ್ಲಿ ಹಾಲಿನ ದರವನ್ನು ಒಂದೇ ಬಾರಿಗೆ ೮ ರೂ. ಹೆಚ್ಚಿಸಿದರೆ ಜೀವನ ನಡೆಸುವುದು ಹೇಗೆ?”

ಅನಿಲ್, ಗ್ರಾಹಕ 

” ಹಾಲಿನ ದರ ಏರಿಸಿ ರೈತರಿಗೆ ಕೊಡುತ್ತೇವೆ ಎನ್ನುವುದು ಸರ್ಕಾರದ ಕಣ್ಣೊರೆಸುವ ತಂತ್ರ. ರೈತರಿಗೆ ಲೀಟರ್‌ಗೆ ೭ ರೂ. ಹೆಚ್ಚುವರಿ ನೀಡುವುದಾಗಿ ಹೇಳಲಾಗುತ್ತಿದ್ದರೂ ಆ ಹಣ ನೇರವಾಗಿ ರೈತರ ಕೈ ಸೇರುತ್ತದೆಯೇ ಎಂಬ ಪ್ರಶ್ನೆ ಇದೆ.”

ಬರಡನಪುರ ನಾಗರಾಜು, ಹೈನುಗಾರರು

” ಈಗಾಗಲೇ ಟೀ ಅಂಗಡಿಗಳಲ್ಲಿ ದರ ಏರಿಕೆಯಾಗಿದೆ. ಹಾಲಿನ ದರ ಏರಿಕೆಯಾದರೆ ನಾವೂ ದರ ಹೆಚ್ಚಿಸಲೇಬೇಕಾದ ಅನಿವಾರ್ಯತೆ ಎದುರಾಗಲಿದೆ, ಇದರಿಂದ ನಮ್ಮ ವ್ಯಾಪಾರಕ್ಕೂ ತೊಂದರೆಯಾಗಬಹುದು.”

ಮಂಜುನಾಥ್

” ದರ ಹೆಚ್ಚಳವಾದ ತಕ್ಷಣ ವ್ಯಾಪಾರ ಕುಸಿಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಗ್ರಾಹಕರು ಖರೀದಿಸುವ ಪ್ರಮಾಣ ಕಡಿಮೆ ಮಾಡುವ ಸಾಧ್ಯತೆ ಇದೆ. ವ್ಯಾಪಾರ ಹೇಗೆಂಬುದನ್ನು ನೋಡಬೇಕು.”

ಸಂಜಯ್, ನಂದಿನಿ ಹಾಲಿನ ಕೇಂದ್ರ

” ಈಗ ೧೨ ರೂ.ಗೆ ಟೀ, ಕಾಫಿ ಮಾರುತ್ತಿದ್ದೇವೆ. ಹಾಲಿನ ದರ ಹೆಚ್ಚಳದಿಂದ ಬೂಸ್ಟ್, ಹಾರ್ಲಿಕ್ಸ್‌ನಂತಹ ಪೇಯಗಳ ದರವೂ ಹೆಚ್ಚಳವಾಗಬಹುದು.”

ಪಾಲಾಕ್ಷ, ಟೀ ಅಂಗಡಿ ಮಾಲೀಕ

” ಹಾಲಿನ ದರ ಏರಿಕೆಯಿಂದ ನಮ್ಮಂತಹ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗಲಿದೆ. ಸರ್ಕಾರ ಸಾಮಾನ್ಯ ಜನರ ಹಿತ ಕಾಪಾಡುವ ಬದಲು, ಅವರ ಮೇಲೆ ಆರ್ಥಿಕ ಹೊರೆ ಹೇರುತ್ತಿದೆ. ಹಿಂದಿನಂತೆ ಹಾಲು ರಹಿತ ಕಾಫಿ/ ಟೀ ಕುಡಿಯುವ ಪರಿಸ್ಥಿತಿ ಬರಲಿದೆ.”

ಮಹದೇವಮ್ಮ

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಇಂತಹವರನ್ನು ಸರ್ಕಾರ ಗೌರವಿಸಬೇಕು

ಮೈಸೂರು ನಗರದ, ಪ್ರತಿಷ್ಠಿತ ಔಷಧಿ ಸಂಸ್ಥೆಯಾದ ರಘುಲಾಲ್ ಅಂಡ್ ಕಂಪೆನಿಯ ಮಾಲೀಕರಾದ ರಾಘವನ್ ಅವರು ಮೈಸೂರು ನಗರವನ್ನು ಹಸಿರೀಕರಣ ಮಾಡಲು…

1 hour ago

ಓದುಗರ ಪತ್ರ: ಸುಧಾರಿತ ಸೈಬರ್ ಭದ್ರತೆ ಅಳವಡಿಸಿ

ಬೆಂಗಳೂರಿನಲ್ಲಿ ನೋಂದಣಿಯಾಗದೆ ನಡೆದಿರುವ ರೂ. ೫೦೦೦ ಕೋಟಿ ಕ್ರಿಪ್ಟ್ರೋ ಅಕ್ರಮ ವಹಿವಾಟು ದೇಶದ ಆರ್ಥಿಕ ಭದ್ರತೆಗೆ ಬಡಿದಿರುವ ಎಚ್ಚರಿಕೆ ಘಂಟೆಯಾಗಿದೆ.…

1 hour ago

ಓದುಗರ ಪತ್ರ: ಮನದ ಭಾಷೆಯಾಗಲಿ ಕನ್ನಡ

ಕನ್ನಡ ರಾಜ್ಯೋತ್ಸವ ಬಂದೇ ಬಿಟ್ಟಿತು.ಕನ್ನಡಕ್ಕೆ ಎಂತಹ ದುಸ್ಥಿತಿ ಬಂದಿದೆಯೆಂದು ನೆನಸಿಕೊಂಡರೆ ಕನ್ನಡ ನಿಜವಾಗಿಯೂ ಬದುಕಿ ಬಾಳುವ ಭಾಷೆಯಾಗಿ ಉಳಿಯುತ್ತದೆಯೇ ಎಂದು…

1 hour ago

‘ಡಾಕ್ಟರ್ ಸಾಹೇಬ್’ ರೂಪುಗೊಂಡ ರೀತಿ

“ಲೋಹಿಯಾರನ್ನು ನೋಡಿರುವ ‘ದಕ್ಷಿಣದ ಕಣ್ಣು’ ವಿಶಿಷ್ಟವಾದುದು" ‘ಡಾಕ್ಟರ್ ಸಾಹೇಬ್: ರಾಮಮನೋಹರ ಲೋಹಿಯಾ ಜೀವನಯಾನ’ ಎಂಬ ಲೋಹಿಯಾರ ಸಮಗ್ರ ಜೀವನ ಚರಿತ್ರೆ…

1 hour ago

ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಳ

ಭಾರತಿ ಸಜ್ಜನ್ ಏಳು ತಿಂಗಳಲ್ಲಿ ೪೨೧ಪ್ರಕರಣಗಳು ದಾಖಲು; ನೆರವಿಗೆ ‘ಸಖಿ’ ಕೇಂದ್ರ ಮೈಸೂರು: ಸಾಂಸ್ಕೃತಿಕ ನಗರಿ, ಸುಶಿಕ್ಷಿತರ ಜಿಲ್ಲೆ ಎಂಬೆಲ್ಲಾ…

2 hours ago

ಮೈಸೂರು-ಮಾನಂದವಾಡಿ ಹೆದ್ದಾರಿ ಅಪಘಾತಕ್ಕೆ ರಹದಾರಿ

ಪ್ರಶಾಂತ್ ಎಸ್. ಮೈಸೂರು: ಮೈಸೂರು-ಮಾನಂದವಾಡಿ ಮುಖ್ಯ ರಸ್ತೆಯಲ್ಲಿ ಇರುವ ಡಿ.ಸಾಲುಂಡಿ, ಧನಗಳ್ಳಿ, ಕೆರೆಹುಂಡಿ ಗ್ರಾಮಗಳಿಗೆ ತೆರಳುವವರು ತಿರುವು ತೆಗೆದುಕೊಳ್ಳುವಾಗ ಅಪಘಾತ…

2 hours ago