Andolana originals

ಅರಣ್ಯದಲ್ಲಿ ಮಾನವನ ಹಸ್ತಕ್ಷೇಪ; ನಗರಕ್ಕೂ ಚಿರತೆ ದಾಂಗುಡಿ

ಎಚ್.ಎಸ್.ದಿನೇಶ್‌ಕುಮಾರ್

ಮೈಸೂರು ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಆತಂಕ

ಒಂದು ವರ್ಷದಲ್ಲಿ ೨೫ ಚಿರತೆಗಳ ಸೆರೆ ಅರಣ್ಯ ಇಲಾಖೆಯಿಂದ ಜನ ಜಾಗೃತಿ

ಮೈಸೂರು: ನಗರದಲ್ಲಿ ಎರಡು ದಿನಗಳಿಂದ ಚಿರತೆಯದ್ದೇ ಚರ್ಚೆ. ಇಷ್ಟು ದಿನ ಗ್ರಾಮಿಣ ಪ್ರದೇಶದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಚಿರತೆ ಇದೀಗ ನಗರ ಪ್ರದೇಶಕ್ಕೂ ಲಗ್ಗೆ ಇಟ್ಟಿದೆ. ಅದೂ ಕೂಡ ನೂರಾರು ಮನೆಗಳಿರುವ ಬಡಾವಣೆಯಲ್ಲಿ.

ಮ್ಯಸೂರು ಜಿಲ್ಲೆಯಲ್ಲಿ ಚಿರತೆಗಳ ಕಾಟ ದಿನೇ ದಿನೇ ಹೆಚ್ಚಾಗುತ್ತಿದೆ. ಚಿರತೆ ಸಂತತಿ ಗಣನೀಯವಾಗಿ ಹೆಚ್ಚಳವಾಗಿರುವುದು ಮತ್ತು ಅರಣ್ಯ ಪ್ರದೇಶಗಳಲ್ಲಿ ಮಾನವನ ಹಸ್ತಕ್ಷೇಪ ಹೆಚ್ಚುತ್ತಿರುವುದು ಚಿರತೆ-ಮಾನವ ಸಂಘರ್ಷಕ್ಕೆ ಕಾರಣ ಎಂಬುದು ಸಹಜವಾಗಿ ಕೇಳಿ ಬರುವ ಮಾತುಗಳು.

ಅರಣ್ಯ ಇಲಾಖೆ ಹೇಳುವ ಪ್ರಕಾರ ಹೆಚ್ಚು ಚಿರತೆಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನವನ್ನು ಪಡೆದಿದೆ. ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಗಳ ಕುರುಚಲು ಕಾಡುಗಳಲ್ಲಿ ನೂರಾರು ಸಂಖ್ಯೆಯಲ್ಲಿ ಚಿರತೆಗಳಿವೆ.

ಕುರುಚಲು ಕಾಡು, ಗುಡ್ಡಗಾಡು ಪ್ರದೇಶ, ಪಾಳುಬಿದ್ದ ಜಮೀನುಗಳಲ್ಲಿ ಪೊದೆಗಳನ್ನು ಅರಸಿ ವಾಸಿಸುವ ಚಿರತೆಗಳಿಗೆ ಅಗತ್ಯ ಪ್ರಮಾಣದ ಆವಾಸಸ್ಥಾನ ಸಿಗುತ್ತಿಲ್ಲ ಎಂಬುದನ್ನು ಅರಣ್ಯ ಇಲಾಖೆ ಅಽಕಾರಿಗಳೇ ಒಪ್ಪಿಕೊಳ್ಳುತ್ತಾರೆ. ಅರಣ್ಯದಲ್ಲಿ ಮಾನವ ಹಸ್ತಕ್ಷೇಪ ಹೆಚ್ಚುತ್ತಿದೆ. ರೆಸಾರ್ಟ್, ಟ್ರೆಕ್ಕಿಂಗ್, ಜಲಸಾಹಸ ಕ್ರೀಡೆಗಳ ಹೆಸರಿನಲ್ಲಿ ದಟ್ಟ ಕಾಡೊಳಗೂ ಜನರು ಲಗ್ಗೆ ಇಡುತ್ತಿದ್ದಾರೆ. ಇದರಿಂದ ಏಕಾಂತಕ್ಕೆ ಭಂಗ ಬಂದು ವನ್ಯಮೃಗಗಳು ನಾಡಿನತ್ತ ನುಗ್ಗುತ್ತಿವೆ. ಇದಕ್ಕೆ ಚಿರತೆ ಕೂಡ ಹೊರತಲ್ಲ. ಕಾಡಂಚಿನಲ್ಲಿ ಸಮೃದ್ಧವಾಗಿ ದೊರೆವ ನಾಯಿಗಳು, ಕುರಿ, ಕೋಳಿಗಳಿಂದ ಆಕರ್ಷಿತವಾಗುವ ಚಿರತೆಗಳು, ಏನೂ ಸಿಗದಿದ್ದಾಗ ಆಹಾರ ಅರಸಿ ಮನುಷ್ಯರ ಮೇಲೆ ದಾಳಿ ನಡೆಸುತ್ತಿವೆ. ಚಿರತೆಗಳು ಹೊಸ ವಾತಾವರಣಕ್ಕೆ ಬೇಗ ಹೊಂದಿಕೊಳ್ಳಬಲ್ಲವು. ಹೀಗಾಗಿ ಅವುಗಳಿಗೆ ಗಡಿ ಎಂಬುದು ಇಲ್ಲ.

ಇನ್ನು ಮೈಸೂರು ನಗರದ ವಿಚಾರಕ್ಕೆ ಬಂದಲ್ಲಿ ಕೆಲ ವರ್ಷಗಳಿಂದ ಅಲ್ಲಲ್ಲಿ ಚಿರತೆಗಳು ಕಾಣಿಸಿಕೊಳ್ಳುವುದು, ಅರಣ್ಯ ಇಲಾಖೆ ಅವುಗಳನ್ನು ಹಿಡಿದು ಕಾಡಿಗೆ ಬಿಡುವ ಕಣ್ಣಾಮುಚ್ಚಾಲೆ ಆಟ ನಡೆಯುತ್ತಲೇ ಇದೆ. ನೋಟು ಮುದ್ರಣಾಲಯ, ಹೂಟಗಳ್ಳಿ, ಕೂರ್ಗಳ್ಳಿ ಹೀಗೆ ಹಲವೆಡೆ ಚಿರತೆಗಳು ಪ್ರತ್ಯಕ್ಷವಾಗುವ ಮೂಲಕ ಜನರನ್ನು ಆತಂಕಕ್ಕೆ ದೂಡಿವೆ.

ಸಮಾಧಾನದ ಸಂಗತಿ ಎಂದರೆ ಚಿರತೆ ದಾಳಿಯಿಂದ ನಗರ ಪ್ರದೇಶದಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ. ಇನ್ನು ನಗರದ ಚಾಮುಂಡಿಬೆಟ್ಟದಲ್ಲಿ ಮಾತ್ರ ಹತ್ತಾರು ಚಿರತೆಗಳು ಇವೆಯಾದರೂ, ಇದುವರೆವಿಗೂ ಯಾರಿಗೂ ಅಪಾಯ ಎದುರಾಗಿಲ್ಲ.

ಬೋನು ಇಡಲಾಗುತ್ತಿದೆ: ಚಿರತೆ ಹಾವಳಿ ಹೆಚ್ಚಿದ ಸಂದರ್ಭಗಳಲ್ಲಿ ಅರಣ್ಯ ಇಲಾಖೆ ಬೋನುಗಳನ್ನು ಇಟ್ಟು ಹಿಡಿಯುವ ಕೆಲಸಕ್ಕೆ ಮುಂದಾಗುತ್ತದೆ. ಈ ರೀತಿ ಹಿಡಿದ ಚಿರತೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಾಡಿಗೆ ಬಿಡುವ ಕೆಲಸ ಮಾಡುತ್ತಾರೆ.

೨೫ ಚಿರತೆ ಸೆರೆ: ಕಳೆದ ಒಂದು ವರ್ಷದ ಅವಧಿಯಲ್ಲಿ ಮೈಸೂರು ನಗರ ಹಾಗೂ ತಾಲ್ಲೂಕಿನ ವಿವಿಧೆಡೆ ಚಿರತೆಗಳು ಕಾಣಿಸಿಕೊಂಡಿವೆ. ಸಾರ್ವಜನಿ ಕರು ನೀಡಿದ ಮಾಹಿತಿ ಮೇರೆಗೆ ಒಂದು ವರ್ಷದ ಅವಧಿಯಲ್ಲಿ ೨೫ ಚಿರತೆಗಳನ್ನು ಸೆರೆ ಹಿಡಿಯಲಾಗಿದೆ. ನಂತರ ಅವುಗಳನ್ನು ಪ್ರಾಣಿ ಪಾಲನಾ ಸಂಸ್ಥೆಯಲ್ಲಿ ಇಟ್ಟು ನಂತರ ಕಾಡಿಗೆ ಬಿಡಲಾಗಿದೆ.

ಜನರಲ್ಲಿ ಜಾಗೃತಿ: ಕಾಡಂಚಿನ ಗ್ರಾಮಗಳು ಹಾಗೂ ಚಿರತೆ ಅಥವಾ ಹುಲಿ ಕಾಣಿಸಿಕೊಂಡ ಪ್ರದೇಶಗಳಲ್ಲಿ ಜನರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಅರಣ್ಯ ಇಲಾಖೆ ಸಿಬ್ಭಂದಿ ಮಾಡುತ್ತಿದ್ದಾರೆ. ಚಿರತೆ ಅಥವಾ ಹುಲಿ ಹೆಜ್ಜೆಯನ್ನು ಗುರುತಿಸುವುದು, ಚಿರತೆ ಎದುರಾದಾಗ ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು, ಚಿರತೆ ಕಾಣಿಸಿಕೊಂಡಲ್ಲಿ ಯಾರಿಗೆ ಮಾಹಿತಿ ನೀಡಬೇಕು ಎಂಬ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ.

” ಸಾಮಾನ್ಯವಾಗಿ ಚಿರತೆಯು ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ. ಅದಕ್ಕೆ ತೊಂದರೆ ಉಂಟಾದಾಗ ಮಾತ್ರ ತನ್ನ ರಕ್ಷಣೆಗಾಗಿ ದಾಳಿ ಮಾಡುತ್ತದೆ. ಚಿರತೆ ಕಂಡುಬಂದಲ್ಲಿ ಜನರು ಭಯಪಡಬೇಕಾಗಿಲ್ಲ. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಚಿರತೆ ಓಡಾಡಿದೆ ಎಂದು ಗೊತ್ತಾದ ಕೂಡಲೇ ಸ್ವಯಂ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು.”

-ಪರಮೇಶ್ವರ್ ಡಿಸಿಎಫ್, ಮೈಸೂರು

” ನೋಟು ಮುದ್ರಣ ಘಟಕದ ಬಳಿ ವಾಸಿಸುವ ಜನರನ್ನು ಚಿರತೆ ಬಗ್ಗೆ ಶನಿವಾರ ಮಾತನಾಡಿಸಿದ ವೇಳೆ ಅವರಲ್ಲಿ ಆತಂಕ ಕಾಣುತ್ತಿತ್ತು. ಕೆಲ ತಿಂಗಳ ಹಿಂದೆ ಇಲ್ಲಿ ಚಿರತೆ ಅಡ್ಡಾಡಿದ್ದುದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಅರಣ್ಯ ಇಲಾಖೆಯವರು ಬೋನನ್ನು ಇಟ್ಟರಾದರೂ ಚಿರತೆ ಸೆರೆಯಾಗಿರಲಿಲ್ಲ. ನಂತರ ಅದರ ಸುಳಿವು ಇರಲಿಲ್ಲ. ಈಗ ನಮಗೆ ಭಯವಿಲ್ಲ. ಆದರೆ, ರಾತ್ರಿ ವೇಳೆ ಸಂಚರಿಸು ವಾಗ ಕೆಲವೊಮ್ಮೆ ಆತಂಕವಾಗುತ್ತದೆ ಎಂದರು. ಇದೇ ಮಾತುಗಳನ್ನು ಬೆಮೆಲ್ ಕಾರ್ಖಾನೆಯ ಬಳಿಯ ನಿವಾಸಿಗಳೂ ಹೇಳುತ್ತಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಎರಡುಬಾರಿ ಚಿರತೆ ದರ್ಶನವಾಗಿತ್ತು. ಇದೀಗ ಅಂತಹ ವಾತಾವರಣವಿಲ್ಲ. ಆದರೂ ರಾತ್ರಿ ವೇಳೆ ಹಾಗೂ ನಿರ್ಜನ ಪ್ರದಶಗಳಲ್ಲಿ ಓಡಾಡುವಾಗ ಯೋಚಿಸುವಂತಾಗುತ್ತದೆ ಎನ್ನುತ್ತಾರೆ. ಇನ್ನು ಕೂರ್ಗಳ್ಳಿ ಹಾಗೂ ಹೂಟಗಳ್ಳಿಯ ಜನರ ಮಾತು ಕೂಡ ಇದೇ ಆಗಿದೆ”

” ಇಲವಾಲ ಸುತ್ತಮುತ್ತ ಆಗಾಗ್ಗೆ ಚಿರತೆ ಕಾಣಿಸಿಕೊಳ್ಳುತ್ತಿರುತ್ತದೆ. ಈ ವಿಷಯವಾಗಿ ಅರಣ್ಯಇಲಾಖೆ ಗಮನಕ್ಕೆ ತರಲಾಗಿದ್ದು, ಬೋನ್ ಇಡುವ ವ್ಯವಸ್ಥೆ ಮಾಡಿದ್ದಾರೆ. ಜತೆಗೆ ಮುನ್ನೆಚ್ಚರಿಕೆಯಾಗಿ ಇರುವಂತೆ ಸೂಚಿಸಿದ್ದು, ನಮಗೆ ಭಯವಿಲ್ಲ.”

-ಶಿವನಂಜಪ್ಪ, ಹೆಬ್ಬಾಳ್(ಇನ್ಪೋಸಿಸ್‌ )

” ನಮ್ಮ ಬಡಾವಣೆ ಸುತ್ತಮುತ್ತ ಚಿರತೆ ಹಾವಳಿ ಇರುತ್ತಿತ್ತು. ಆದರೆ, ಇತ್ತೀಚೆಗೆ ಭಯ ಇಲ್ಲ. ಯಾಕೆಂದರೆ ಅರಣ್ಯಇಲಾಖೆಯ ಚಿರತೆ ಪಡೆ ವಾಹನದಲ್ಲಿ ಸಿಬ್ಬಂದಿ ನಮ್ಮ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿದ್ದು, ನಾವು ಎಚ್ಚರಿಕೆಯಿಂದ ಇದ್ದೇವೆ.”

-ಸ್ವಾಮಿ, ಇಲವಾಲ ಹೊರವಲಯ

” ನೈಸರ್ಗಿಕ ಆವಾಸ ಸ್ಥಾನಗಳ ನಾಶ ಮತ್ತು ಆಹಾರದ ಹುಡುಕಾಟದಲ್ಲಿ ಕಾಡು ಪ್ರಾಣಿಗಳು ಜನನಿಬಿಡ ಪ್ರದೇಶಗಳನ್ನು ಪ್ರವೇಶಿಸುತ್ತಿವೆ. ಇವುಗಳನ್ನು ತಡೆಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿರುವುದರಿಂದ ಚಿರತೆ ಹಾವಳಿ ಹೆಚ್ಚಾಗಿದೆ.”

-ಬಾಬು, ಹೂಟಗಳ್ಳಿ ಹೊರವಲಯ 

” ನಮ್ಮ ಏರಿಯಾದಲ್ಲಿ ಇಂಡಸ್ಟ್ರಿಗಳು ಇರುವುದರಿಂದ ಕಾಡಿನಿಂದ ನಾಡಿಗೆ ಬರುವ ಚಿರತೆಗಳು ಅಲ್ಲಲ್ಲಿ ಅವಿತುಕೊಂಡು ದಾರಿಹೋಕರ ಮೇಲೆ ದಾಳಿ ಮಾಡಿವೆ. ಈ ವಿಚಾರ ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದು, ಸರಿಯಾಗಿ ಸ್ಪಂದಿಸುತ್ತಿಲ್ಲ.”

-ಶಿವರಾಜು, ಹೂಟಗಳ್ಳಿ ಹೊರವಲಯ

” ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಕಂಡುಬಂದ ಪ್ರದೇಶಗಳಲ್ಲಿ ಬೋನುಗಳನ್ನು ಇಡುವುದು, ನಿಗಾ ವಹಿಸುವುದು ಮತ್ತು ಸೆರೆಹಿಡಿದುಮೃಗಾಲಯಕ್ಕೆ ಅಥವಾ ಕಾಡಿಗೆ ಬಿಡುವ ಕಾರ್ಯವನ್ನು ಮಾಡುತ್ತಿದ್ದಾರೆ.”

-ಗಂಗಾಧರ್, ಬೆಮೆಲ್ ಲೇಔಟ್

 

 

ಆಂದೋಲನ ಡೆಸ್ಕ್

Recent Posts

SIR ನೋಟಿಸ್: ವಿಚಾರಣೆಗೆ ತೆರಳುವಾಗ ಈ ದಾಖಲೆಗಳು ನಿಮ್ಮ ಬಳಿ ಇರಲಿ

ಬೆಂಗಳೂರು: SIR ನೋಟಿಸ್‌ಗಳ ವಿಚಾರಣೆ ಅಧಿಕೃತವಾಗಿ ಆರಂಭವಾಗಿದೆ. ವಿಚಾರಣೆಗೆ ಹಾಜರಾಗುವ ವೇಳೆ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಕೊಂಡೊಯ್ಯುವುದು ಮುಖ್ಯವಾಗಿದೆ. ನಿಮ್ಮ…

1 hour ago

ದಸರಾ ಚಿತ್ರೋತ್ಸವ ರದ್ದಾಗದಿರಲಿ

ಮೊದಲ ವಿಶ್ವಕನ್ನಡ ಸಮ್ಮೇಳನದ ಸಿದ್ಧತೆಯ ಸಂದರ್ಭ. ಬರಗಾಲದ ವೇಳೆ ದುಬಾರಿ ವೆಚ್ಚದ ಇಂತಹ ಸಮ್ಮೇಳನ ಅಗತ್ಯ ಇಲ್ಲ ಎಂದು ಇದರ…

6 hours ago

ಚಲನೆ ಕೇವಲ ವ್ಯಾಯಾಮವಲ್ಲ ಆರೋಗ್ಯದ ಶಕ್ತಿ

ಇಂದು ನಮ್ಮ ದೇಶದ ಆರೋಗ್ಯ ಕ್ಷೇತ್ರದಲ್ಲಿ ಒಂದು ‘ನಿಶ್ಯಬ್ದ ಕ್ರಾಂತಿ’ ಸಂಭವಿಸುತ್ತಿದೆ. ಒಂದು ಕಾಲದಲ್ಲಿ ಪ್ಲೇಗ್, ಕಾಲರಾದಂತಹ ಸಾಂಕ್ರಾಮಿಕ ರೋಗಗಳು…

6 hours ago

ಒಂದು ಸೈನ್ಯದ ಆತ್ಮಾಹುತಿ ತಡೆದಿದ್ದರು ಅರಸು

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಮಾಜಿ ಮುಖ್ಯಮಂತ್ರಿ ದೇವರಾಜ ಅರಸರನ್ನು ಇತಿಹಾಸ ಪದೇ ಪದೇ ಸ್ಮರಿಸುತ್ತದೆ. ಅಂದ ಹಾಗೆ ಮುಖ್ಯಮಂತ್ರಿಗಳಾದವರು…

6 hours ago

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

17 hours ago