ಹಾಡು ಪಾಡು

ಭಾನುವಾರದ ಹಾಡುಪಾಡು | ಆಡುಮಾತಿಗೆ ಹತ್ತಿರವಿರುವ ಕಾವ್ಯಾನುವಾದ

ಹಾಡುಪಾಡು ರಾಮು ಅನುವಾದಿಸಿ ದೇವನೂರ ಮಹಾದೇವ ಸಂಪಾದಿಸಿದ ‘ಮಹಾಭಾರತದಿಂದ ಒಂದಿಷ್ಟು ಮೇರುಕೃತಿ’ ಬರುವ ಭಾನುವಾರ ಮೈಸೂರಿನಲ್ಲಿ ಬಿಡುಗಡೆಯಾಗಲಿದೆ. ಈ ಪುಸ್ತಕಕ್ಕೆ ವಿಮರ್ಶಕ ಚೆನ್ನಿ ಅವರು ಬರೆದ ಮುನ್ನುಡಿಯ ಕೆಲವು ಸಾಲುಗಳು ಇಲ್ಲಿವೆ.

• ಡಾ.ರಾಜೇಂದ್ರ ಚೆನ್ನಿ

ಈ ‘ಕಾಲ’ ದ ಓದುಗನಾದ ನನಗೆ ‘ಕಾಲ’ವೆನ್ನುವುದು ಭೀಕರ ದುಃಸ್ವಪ್ನವಾಗಿದೆ. ಏಕೆಂದರೆ ನನ್ನೆದುರಿಗೆ ‘ಕಾಲ’ವು ಪೂರ್ವ ನಿರ್ಧಾರಿತವೆನ್ನುವ ಹಾಗೆ ಅಪರಿಹಾರ್ಯವೆನ್ನುವಂತೆ ಮನುಷ್ಯ ಜಗತ್ತನ್ನು ಇನ್ನೊಂದು ಸ್ಮಶಾನ ಕುರುಕ್ಷೇತ್ರದತ್ತ ಕರೆದೊಯ್ಯುತ್ತಿದೆ. ಆಧುನಿಕ ಕಾಲದ ದಾಯಾದಿಗಳಂತಿರುವ ರಾಷ್ಟ್ರಗಳು ಪರಸ್ಪರ ಕಗ್ಗೋಲೆಗೆ ಸಿದ್ಧವಾಗಿವೆ. ತಿಳಿದವರಿಗೆ ಇದರ ಕೊನೆ ಎಲ್ಲಿ, ಹೇಗೆ ಎನ್ನುವುದು ಗೊತ್ತಿದೆ. ಇದು ಆಗಬಾರದು ಎನ್ನುವುದಾದರೆ ಪಾಲಿಸಬೇಕಾದ ‘ಧರ್ಮ’ವೇನೆಂದೂ ಗೊತ್ತಿದೆ. ಆದರೆ ಕಾಲವು ನಿಲ್ಲುವುದಿಲ್ಲ ಎನ್ನುವ ಅರಿವೂ ಇದೆ. ಹೆಚ್ಚೆಂದರೆ ಆಗುತ್ತಿರುವುದರ ಬಗ್ಗೆ ಬರೆಯ ಬಹುದಷ್ಟೆ ಮಹಾಭಾರತವೆಂದರೆ ಮೂಲವೇ ಇಲ್ಲದ ಅನುವಾದಗಳ ಸರಣಿ ಎಂದುಕೊಂಡಿದ್ದೇನೆ. ಸುದೀರ್ಘವಾದ ತಪಸ್ಸಿನಂಥ ವಿದ್ವತ್ತಿನ ಶ್ರಮವಹಿಸಿ ಮಹಾಭಾರತದ ಅಧಿಕೃತವಾದ ಕಟ್ಟಿಕೊಡಲು ಶ್ರಮಿಸಿದ ಸುಂಕರ್ ಅವರು ಕಂಡುಕೊಂಡಂತೆ ಮಹಾಭಾರತದಲ್ಲಿ ಮೂಲ ಯಾವುದು, ಪಕ್ಷಿಪ್ತ ಯಾವುದು ಎಂದು ಹೇಳುವುದು ಅಸಾಧ್ಯ. ಹಾಗೆಯೇ ಯಾವುದು ಅಧಿಕೃತ ಅನುವಾದ ಎಂದು ಕೇಳಲೂಬಾರದು. ರಾಮ ಅನುವಾದವನ್ನು ಓದಿದಾಗ ಅದು ಅಧಿಕೃತ ಅನ್ನಿಸಿದ್ದಕ್ಕೆ ಕಾರಣವೆಂದರೆ ಅದು ಅಲಂಕಾರ ಆಡಂಬರ ಇಲ್ಲದ ಆಡುಮಾತಿಗೆ ಹತ್ತಿರವಾದ ಭಾಷೆಯಲ್ಲಿ (ಮಾತಿನಲ್ಲಿ) ಇದೆಯೆನ್ನುವುದು. ಅನಾದಿ ಕಾಲದ ಸ್ಥಿತಿಯೊಂದನ್ನು ಒಂದು ನಾಗರಿಕತೆ ಮೌಖಿಕ ಕಥನವಾಗಿಸಿದಾಗ ಅದು ಮಾತನಾಡಿದ್ದು ಕಾವ್ಯವಾದರೆ ಹೇಗಿರಬಹುದೋ ಹಾಗೆಯೆ ಇದೆ.

ಹೀಗಾಗಿ ಈ ಅನುವಾದದಿಂದಾಗಿ ದ್ವಾಪರದ ಪೂರ್ವಿಕರೆಲ್ಲಾ ಅನಾಮತ್ತಾಗಿ ನಮ್ಮ ನೆರೆಹೊರೆಯವರಂತೆ ಮಾತನಾಡತೊಡಗುತ್ತಾರೆ. ಅಪ್ಪಟ ಮನುಷ್ಯರಂತೆ, ಮಹಾನ್ ಸಾಹಿತ್ಯಕ ನಾಟಕವೊಂದರಲ್ಲಿ ಪಾತ್ರವಹಿಸಿದ ನಟ, ನಟಿಯರು ಹೊರಬಂದು ತಮ್ಮ ಮಾತಲ್ಲೆ ತಮ್ಮ ಪಾತ್ರದ ಮಾತುಗಳನ್ನು ಹೇಳಿದಂತೆ ಈ ಅನುವಾದದ ಅನುಭವವಾಗುತ್ತದೆ. ಅವರ ಸಹಜ ಹಾವಭಾವಗಳು ದನಿಯ ಕಾಕುಗಳು, ಏರಿಳಿತಗಳು ಕೇಳತೊಡಗುತ್ತವೆ. ಶಕುಂತಲೆಯಿಂದ ಗಾಂಧಾರಿಯವರೆಗಿನ ಎಲ್ಲಾ ದನಿಗಳು ಹೀಗೇ ಇವೆ. ಹಾಗೆಯೇ ನಿರೂಪಣೆಯ ದನಿ ಮತ್ತು ಲಯಗಳಿವೆ. ಇದು ನಾನು ಕಂಡಂತೆ ಮಹಾಭಾರತದ ನಿಜವಾದ ಸತ್ಯವೂ ಹೌದು. ಅಲ್ಲಿಯ ಪಾತ್ರಗಳಿಗಾರಿಗೂ ಧೀರ ನಾಯಕನಂತೆ, ದೈವಪುರುಷನಂತೆ ಆಡುವ ಮಾತನಾಡುವ ತೆವಲು ಇಲ್ಲವೇ ಇಲ್ಲ. ಅವರೆಲ್ಲ ಕೇವಲ ಮನುಷ್ಯ ಜೀವಿಗಳು. ಹೀಗೆ ಅನುವಾದಿಸಿ ರಾಮೂ ಸಂಗ್ರಹ ಮಹಾಭಾರತವೊಂದನ್ನು ನಮ್ಮ ನೆರೆಹೊರೆಯಲ್ಲಿ ತಂದು ನಿಲ್ಲಿಸಿದ್ದಾರೆ. ಆದರೆ ಹಾಗೆ ಮಾಡುವುದರಲ್ಲಿ ಮಹಾಭಾರತವು ಹೇಳುವ ಅಪ್ರಿಯ ಸತ್ಯಗಳನ್ನು ಎಲ್ಲಿಯೂ ಅಳ್ಳಕಗೊಳಿಸಿಲ್ಲ. ಬಹು ಕೃತ್ರಿಮವಾದ ಉದಾತ್ತ’ ಶೈಲಿಯ ಒಂಚೂರು ನೆರಳೂ ಇಲ್ಲಿಲ್ಲ. ಸರಳ ಆಪ್ತತೆಯಿಂದಾಗಿ ಮಹಾಭಾರತವು ಎಲ್ಲಿಯೋ ನಡೆದದ್ದಲ್ಲ, ಈಗ ಇಲ್ಲಿಯೇ ನಡೆಯುತ್ತಿದೆ ಎನ್ನುವ ಅನುಭವವನ್ನು ರಾಮ ಅವರ ನಮಗೆ ವಾಸ್ತವಗೊಳಿಸಿದೆ.

ಒಂದು ಕಡೆಗೆ ಮಹಾಭಾರತದ ಶ್ರೇಷ್ಠ ಅನುವಾದಕಾರ ವಾನ್ ಬುಟೇನಿನ್ ಹೇಳಿದ ಹಾಗೆ ಇಡೀ ಮಹಾಭಾರತವೇ ನ್ಯಾಯಯುತವಾಗಿ ತಮಗೆ ಸಿಗಬೇಕಾದ್ದನ್ನು ಕಳೆದುಕೊಂಡವರ ಕತೆಯೇ ಆಗಿದೆ. ರಾಮ ಅನುವಾದದಲ್ಲಿ ಮೊದಲ ಭಾಗದಲ್ಲಿ ಭರತವಂಶದ ಮೂಲ ಪುರುಷನಾದ ಶಕುಂತಲೆಯ ಮಗನಾದ ಭರತನ ಹುಟ್ಟು ಹಾಗೂ ದುಷ್ಯಂತನು ಶಕುಂತಲೆಯನ್ನು ಅವಮಾನಿಸುವ ಸಂಗತಿಯಿದೆ. ಮುಂದೆ ಭರತನಿಗೆ ದುಷ್ಯಂತನ ಮಗನಾಗಿ ದೊರೆಯಬೇಕಾಗಿದ್ದ ಪಟ್ಟವು ದೊರೆತರೂ ಕೊನೆಗೂ ನೆನಪಿನಲ್ಲಿ ಉಳಿಯುವುದು ಶಕುಂತಲೆಯ ಅವಮಾನದ ಗಾಢವಾದ ದುಃಖವೇ. ಇದು ಮಹಾಭಾರತದ ಮುನ್ನುಡಿಯೂ ಹೌದು, ಪಲ್ಲವಿಯೂ ಹೌದು.

ಈ ಕಥಾನಕವು ಏನನ್ನು ಹೇಳುತ್ತದೆ? ಮಹಾಭಾರತವು ಕುರುವಂಶದ ಕತೆಯಾಗಿದೆಯಾದರೂ ನ್ಯಾಯಯುತವಾಗಿ ಅಸಲಿ ವಾರಸುದಾರರಿಗೆ ಪಟ್ಟವಿಲ್ಲ, ಅಧಿಕಾರವಿಲ್ಲ. ಕರ್ಣನಿಗೆ ಕುಲವೂ ಇಲ್ಲ, ಅವನು ಸೂತಪುತ್ರನಾಗಿಯೇ ಬದುಕುತ್ತಾನೆ, ಸಾಯುತ್ತಾನೆ. ಇದು ವಿಧಿಯ ಆಟವೇ, ಕಾಲದ ವ್ಯೂಹವೇ ಅಥವಾ ಮನುಷ್ಯ ಅಸ್ತಿತ್ವದ ಶಾಶ್ವತ ಸ್ಥಿತಿಯೇ? ಹಾಗೆ ನೋಡಿದರೆ ಕುರುಕ್ಷೇತ್ರದ ಮಹಾಯುದ್ದವು ನಿರರ್ಥಕವಾದುದು. ಸಲ್ಲಬೇಕಾದದ್ದು ಸಲ್ಲುವುದೇ ಇಲ್ಲ. ಹಾಗಿದ್ದರೆ ಮನುಷ್ಯ ಸ್ವಭಾವ ಹಾಗೂ ನಡವಳಿಕೆ ಮತ್ತು ಒಟ್ಟು ಬದುಕಿನಲ್ಲಿಯ ಈರ್ಷೆ, ಹಗೆ, ದ್ವೇಷ, ಅಧಿಕಾರದ ಹಪಾಹಪಿ ಇವೆಲ್ಲವು ಅಸಂಗತವೇ ಅಲ್ಲವೆ? ಅಂತ್ಯವೆನ್ನುವುದು ಪೂರ್ವ ನಿರ್ಧಾರಿತವೇ ಆಗಿದೆ. ಅದು ಗೊತ್ತಿಲ್ಲದ ಮನುಷ್ಯ ಜೀವಿಗಳು ತಮ್ಮ ಕ್ರಿಯೆಗಳಿಗೆ ತಾವು ಬಯಸಿದ ಪರಿಣಾಮ ದೊರೆಯುತ್ತದೆ ಎಂದುಕೊಂಡು ಕ್ರಿಯೆಗಳ ಸರಣಿಯಲ್ಲಿ ತೊಡಗಿಕೊಳ್ಳುತ್ತಾರೆ. ಈ ಕಾಣ್ಣೆಯು ಮೂಲದಲ್ಲಿಯೇ ಇದ್ದರೂ ಮಹಾಭಾರತದಲ್ಲಿ ಮನುಷ್ಯರ ಕ್ರಿಯೆಗಳು ಅದೆಷ್ಟು ಅನಿವಾರ್ಯವೆನಿಸುತ್ತವೆ, ಮೂರ್ತವಾಗಿವೆ, ನಿಬಿಡವಾಗಿವೆ ಎಂದರೆ ಅಂತ್ಯ ಗೊತ್ತಿರುವ ನಾವು ಮೈಮರೆತು ಓದುತ್ತೇವೆ, ಕೇಳುತ್ತೇವೆ. ಅಂದ ಹಾಗೆ ನಾವು ಬಲ್ಲ ಜಗತ್ತಿನ ಮಹಾಕಾವ್ಯಗಳು ದುರಂತ ಕಾವ್ಯಗಳೇ ಆಗಿವೆ. ಇದನ್ನು ಮಹಾಕಾವ್ಯ ದರ್ಶನ (ಜಛಿ ತುಲುಠಿಟಿ) ಎಂದೇ ಕರೆಯಲಾಗುತ್ತದೆ. ಅದೇಕೆ ಇಂಥ ಗಾಢವಾದ ವಿಷಾದವೇ ಇಂಥ ದರ್ಶನವಾಗುತ್ತದೆ? ಮಹಾಕಾವ್ಯಗಳು ಎಲ್ಲಾ ಭ್ರಮೆಗಳನ್ನು ಕಳಚಿದ ದರ್ಶನವನ್ನೇ ಕೊಡುತ್ತವೆ. ಇಂಥ ವಿರಾಟ್ ದರ್ಶನದ ಅಡಿಯಲ್ಲಿ ಮನುಷ್ಯ ಪ್ರಜ್ಞೆ ಅನುಭವಿಸಬಹುದಾದ ನೂರಾರು ಅನುಭವಗಳು ತಮ್ಮಲ್ಲಿಯೇ ಅಮೂಲ್ಯವಾಗಿವೆ. ಸ್ವವಿನಾಶದ ಕಡೆಗೆ ತಪ್ಪದೇ ಸಾಗುತ್ತಿರುವ ಬದುಕಿನಲ್ಲಿ ಪ್ರೀತಿ, ಕರುಣೆ, ಅನುಭೂತಿ ಅವೆಲ್ಲವುಗಳ ಸಾಧ್ಯತೆಗಳೂ ಇವೆ. ವಿಶೇಷವೆಂದರೆ ಇವುಗಳು ಸ್ತ್ರೀ ಪಾತ್ರಗಳಿಗೆ ಸಂಬಂಧಿಸಿದವು. ಮಹಾಭಾರತವು ಜಗತ್ತಿನ ಅತಿ ಶ್ರೇಷ್ಠವಾದ ಯುದ್ಧ ವಿರೋಧಿ ಕಾವ್ಯವಾಗಿದೆ. ಹಾಗೆ ನೋಡಿದರೆ ಇದು ಕ್ಷಾತ್ರಯುಗದ ಪ್ರಾತಿನಿಧಿಕ ಕಾವ್ಯವೆಂದು ಕರೆಸಿಕೊಂಡಿದ್ದರೂ ನಿಜವಾಗಿ ಅದು ಕ್ಷಾತ್ರಯುಗ ಮತ್ತು ಕ್ಷಾತ್ರಮೌಲ್ಯಗಳ ಅಂತಿಮ ಕ್ಷಯದ’ ಕಾವ್ಯವೇ ಆಗಿದೆ. ಭೀಷ್ಮ ದ್ರೋಣ ಇವರೆಲ್ಲ ಯುಗದ ಅವಸಾನದ ಅಂಚಿನಲ್ಲಿ ನಿಂತವರು.

ನನಗೆ ನೆನಪಿರುವಂತೆ ಮಹಾಭಾರತದ ಕತೆ ಓದಿದವರಿಗೆ, ಕೇಳಿದವರಿಗೆ ಕುರುಕ್ಷೇತ್ರದ ವಿಜಯದ ನಂತರ ಪಾಂಡವರು ಏನು ಮಾಡಿದರು ಎನ್ನುವುದು ಹೆಚ್ಚಾಗಿ ನೆನಪಿರುವುದೇ ಇಲ್ಲ. ಅವರು ಎಷ್ಟು ವರ್ಷ ಆಳಿದರು ಅನ್ನುವುದು ಅಪ್ರಸ್ತುತವೇ ಅನ್ನಿಸುತ್ತದೆ. ನೇರವಾಗಿ ರಾಮ ಅನುವಾದದಲ್ಲಿ ಆಗುವಂತೆ ಪಾಂಡವರ ಕೊನೆಯ ಮಹಾಪ್ರಸ್ಥಾನಕ್ಕೆ ನಾವು ಹೋಗುತ್ತೇವೆ ಅಲ್ಲವೆ? ಸ್ವರ್ಗದ ಹಾದಿಯಲ್ಲಿ ಒಬ್ಬೊಬ್ಬರೇ ಕಳಚಿಕೊಂಡು ಉಳಿದದ್ದು ಧರ್ಮರಾಯ ಮತ್ತು ಆ ಒಂದು ನಾಯಿ ಮಾತ್ರ. ಈ ದೃಶ್ಯವೊಂದನ್ನು ಕಲ್ಪಿಸಿಕೊಂಡ ಕವಿ ವ್ಯಾಸನೇ ಆಗಿದ್ದರೆ ಇದೊಂದರಿಂದಲೇ ಅವನು ಶ್ರೇಷ್ಠರಲ್ಲಿಯೇ ಶ್ರೇಷ್ಠ ಕವಿ, ಅಥವಾ ಇದನ್ನು ಕಲ್ಪಿಸಿಕೊಳ್ಳುವ ಸತ್ವವನ್ನು ಆ ಕವಿಗೆ ಕೊಟ್ಟ ಸಂಸ್ಕೃತಿಯಲ್ಲಿ ಬದುಕುತ್ತಿರುವ ನಮಗೆ ಇಂದು ಕಾಣುವ ಕಣ್ಣಿಲ್ಲದಾಗಿದೆ!

ಎಲ್ಲ ಕಾಲದಲ್ಲಿಯೂ ಮಹಾಭಾರತ ಓದಿದವರಿಗೆ ನನಗನ್ನಿಸುವಂತೆ ಅನ್ನಿಸಿರಲೇಬೇಕು. ಇದು ನಮ್ಮ ಕಾಲದ ಕತೆಯೇ. ನಾವೂ ಅವಸಾನದ ಅಂಚಿನಲ್ಲಿಯೇ ಇದ್ದೇವೆ. ಯುಗಾಂತ್ಯವೋ ಮನುಷ್ಯಕುಲದ ಅಂತ್ಯವೋ ಗೊತ್ತಿಲ್ಲ, ಹಿಟ್ಲರ್‌ನ ನಾಝಿಗಳು 60 ಲಕ್ಷ ಯಹೂದಿಗಳನ್ನು ಕೊಂದರು. ಈಗ ಇಸ್ರೇಲ್‌ನ ಯಹೂದಿಗಳು 17,000 ಪ್ಯಾಲೆಸ್ತೀನಿ ಕಂದಮ್ಮಗಳನ್ನು ಕೊಂದರು. ಮೂರನೇ ಮಹಾಯುದ್ಧಕ್ಕೆ ಭರದಿಂದ ತಯಾರಿ ಸಾಗಿದೆ. ಧೃತರಾಷ್ಟ್ರನ ಮಗ ಮಾಡಿದ್ದರಿಂದ ಬಂಬು ಹೂ ಬಿಟ್ಟಿತು. ಅಥವಾ ಈಗ ಹೂ ಬಿಟ್ಟಿತು ಅಥವಾ ಈಗ ಹೂ ಬಿಡುತ್ತಿದೆಯೆ?
ಇನ್ನೂ ತುಂಬಾ ಹೇಳುವುದಿದೆ.

rajendrachenni@gmail.com

ಆಂದೋಲನ ಡೆಸ್ಕ್

Recent Posts

ಶಿವಾಜಿ ಗಣೇಶನ್ ಅವರ ವಾರದ ಅಂಕಣ : ಬಂಗಾಳ, ತಮಿಳುನಾಡಿನ ರಾಜಕಾರಣದಲ್ಲಿ ಬಿರುಗಾಳಿ

ವಿಧಾನಸಭೆ ಚುನಾವಣೆಯ ನಂತರ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನ ರಾಜಕೀಯದಲ್ಲಿ ಬಿರುಗಾಳಿ ಎದ್ದಿದೆ. ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಭಾರತೀಯ…

7 mins ago

ಭಾನುವಾರದ ಹಾಡುಪಾಡು | ವಿಯಟ್ಟಾಮಿನಲ್ಲೂ ಹುಡುಗಿಯರೇ ಸ್ಟ್ರಾಂಗೂ ಗುರೂ

ಬಲಿಷ್ಟ ಮಹಿಳೆ, ಸಮೃದ್ದ ಕುಟುಂಬ, ಬಲಿಷ್ಠ ರಾಷ್ಟ್ರ ಎಂಬ ಮಾತು ವಿಯಾಟ್ಟಾಮಿನಲ್ಲಿ ಅಕ್ಷರಶಃ ಸತ್ಯ. ಇತಿಹಾಸದಿಂದ ಇಂದಿನವರೆಗೂ ಅಲ್ಲಿನ ಮಹಿಳೆಯರು…

41 mins ago

ಭಾನುವಾರದ ಹಾಡುಪಾಡು | “ಇಲ್ಲ ಕಣ್‌ ಪುಟ್ರಂಗಾ, ಡಿಕೆ ಏನಾರೂ ಮಾಡದ್ರೂ ಮಾಡಬೋದು ಅನಿಸ್ತಾದೆ”

• ಕುಸುಮ ಆಯರಹಳ್ಳಿ ವೀಕೆಂಡಿನಲ್ಲಿ ಊರಿಗೆ ಬಂದು ಅವನನ್ನು ಮಾತಾಡಿಸಿಕೊಂಡು ಹೋಗುವ ಪ್ರೊಫೆಸರ್ ಧರ್ಮರಾಜ್‌ಗೆ ಊರಲ್ಲಿ ಜನವೇ ಕಾಣದಿದ್ದುದು ಅಚ್ಚರಿಯಾಯ್ತು.…

1 hour ago

ಎಲ್‌ಪಿಜಿ ಸಿಲಿಂಡರ್‌ ದರ ಮತ್ತೆ ಏರಿಕೆ ; ಪರಿಷ್ಕೃತ ದರ ಇಂದಿನಿಂದಲೇ ಜಾರಿ

ಹೊಸದಿಲ್ಲಿ :  ಮಧ್ಯಪ್ರಾಚ್ಯ ಬಿಕ್ಕಟ್ಟು ಆರಂಭವಾದ ಬಳಿಕ ಕಳೆದ 3 ತಿಂಗಳ ಅವಧಿಯಲ್ಲಿ 2 ನೇ ಬಾರಿಗೆ ಗೃಹಬಳಕೆ ಎಲ್…

1 hour ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜೂನ್‌ 7 ಭಾನುವಾರ

4 hours ago

ರಾಜೀನಾಮೆ ಹಿಂಪಡೆದ ರಾಮಲಿಂಗಾರೆಡ್ಡಿ: ಸರ್ಕಾರಕ್ಕೆ ಎದುರಾಗಿದ್ದ ಕಂಟಕ ತಾತ್ಕಾಲಿಕ ನಿವಾರಣೆ

ಬೆಂಗಳೂರು: ಸೂಕ್ತ ಖಾತೆ ಸಿಗದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರಕ್ಕೆ ಮುಜುಗರ ಸೃಷ್ಟಿಸಿದ್ದ ಸಚಿವ ರಾಮಲಿಂಗ ರೆಡ್ಡಿ…

17 hours ago