Categories: Uncategorized

ಭಾನುವಾರದ ಹಾಡುಪಾಡು | ವಿಯಟ್ಟಾಮಿನಲ್ಲೂ ಹುಡುಗಿಯರೇ ಸ್ಟ್ರಾಂಗೂ ಗುರೂ

ಬಲಿಷ್ಟ ಮಹಿಳೆ, ಸಮೃದ್ದ ಕುಟುಂಬ, ಬಲಿಷ್ಠ ರಾಷ್ಟ್ರ ಎಂಬ ಮಾತು ವಿಯಾಟ್ಟಾಮಿನಲ್ಲಿ ಅಕ್ಷರಶಃ ಸತ್ಯ. ಇತಿಹಾಸದಿಂದ ಇಂದಿನವರೆಗೂ ಅಲ್ಲಿನ ಮಹಿಳೆಯರು ಮನೆಗಷ್ಟೇ ಸೀಮಿತವಾಗಿಲ್ಲ, ದೇಶದ ಅಭಿವೃದ್ಧಿಯಲ್ಲಿ ಅವರದು ಸಿಂಹಪಾಲು.

  • ಡಾ.ಶೋಭಾ ದಿನೇಶ್

ಅಲ್ರೀ ಈ ದೇಶದಲ್ಲಿ ಗಂಡಸರಿಗೆ ರಜೆ ಕೊಟ್ಟಿದ್ದಾರಾ??? ವಿಯಟ್ನಾಮಿನ ನೆಲದಲ್ಲಿ ಇಳಿದ ಒಂದೆರಡು ಗಂಟೆಗೆಲ್ಲಾ ಈ ಮಾತು ನಿಮ್ಮ ಬಾಯಿಂದ ಬಂದೇ ಬರುತ್ತದೆ. ಯಾಕೆಂದ್ರೆ ಫೈಟ್‌ನಿಂದ ಇಳಿದ ಕೂಡಲೇ ನಿಮ್ಮ ಬ್ಯಾಗ್ ಏತ್ತೋದು ಅಕ್ಕ, ಇಮಿಗ್ರೇಷನ್‌ನಲ್ಲಿ ಸ್ಟ್ಯಾಂಪ್ ಹೊಡೆಯೋದು ಹೊರಗೆ ಬಂದು ಟ್ಯಾಕ್ಸಿ ಬುಕ್ ಮಾಡಿದರೆ ನೂರು ಕಿಮೀ ಅಕ್ಕ, ಸ್ಪೀಡ್‌ನಲ್ಲಿ ಬಂದು ನಿಮ್ಮನ್ನು ಹಾರಿಸಿಕೊಂಡು ಹೋಗೋದು ಅಕ್ಕಾ, ಹೋಟೆಲ್ ಚೆಕ್ ಇನ್ ಮಾಡಿಸೋದು ಅಕ್ಕಾ… ಒಟ್ರಾಸಿ ಈ ದೇಶ ಫುಲ್ ಅಕ್ಕಮಯ.

ಹದಿಮೂರು ದಿನಗಳ ವಿಯಟ್ನಾಮ್ ಪ್ರವಾಸಕ್ಕೆ ಗೆಳತಿಯರೊಂದಿಗೆ ಹೋದಾಗ ಹೆಜ್ಜೆ ಹೆಜ್ಜೆಗೂ ಆಶ್ಚರ್ಯಗಳು ಕಾಲಿಗೆ ತೊಡರುತ್ತಿದ್ದವು, ನಾನಂತೂ ಇದ್ದಷ್ಟೂ ದಿನ ಅಲ್ಲಿನ ಹೆಣ್ಣುಮಕ್ಕಳನ್ನು ಬೆರಗುಗಣ್ಣಿನಿಂದ ನೋಡಿದ್ದೇನೆ. ಬಲಿಷ್ಠ ಮಹಿಳೆ, ಸಮೃದ್ದ ಕುಟುಂಬ, ಬಲಿಷ್ಠ ರಾಷ್ಟ್ರ ಎಂಬ ಮಾತು ವಿಯಾಟ್ನಾಮಿನಲ್ಲಿ ಅಕ್ಷರಶಃ ಸತ್ಯ. ಇತಿಹಾಸದಿಂದ ಇಂದಿನ ವರೆಗೂ ಅಲ್ಲಿನ ಮಹಿಳೆಯರು ಮನೆಗಷ್ಟೇ ಸೀಮಿತವಾಗಿಲ್ಲ, ದೇಶದ ಅಭಿವೃದ್ಧಿಯಲ್ಲಿ ಅವರದು ಸಿಂಹಪಾಲು.

ಚಂದದ ಕೋನ್ ಹ್ಯಾಟ್ ಹಾಕಿಕೊಂಡು ಓಡಾಡುವ ತೆಳ್ಳಗಿನ ಮಹಿಳೆಯರನ್ನು ನೋಡಿ ಸಾಫ್ಟ್ ಹೆಣ್ಣು ಮಕ್ಕಳು ಅಂದುಕೊಂಡರೆ ನಾವು ಬೇಸ್ತು ಬಿದ್ದಂತೆ. ಆ ಕೋನ್ ಹ್ಯಾಟ್ ಮಲ್ಟಿ ಟಾಸ್ಟಿಂಗ್ ಸಿಗ್ನಲ್ ಟವರ್, ಅದರ ಕೆಳಗೆ ಇರುವ ಸಿಪಿಯು 5 ಜಿ ಸ್ಪೀಡ್. ಬೆಳಿಗ್ಗೆ ನಾಲ್ಕಕ್ಕೆ ಎದ್ದು ಸುಮ್ಮನೆ ಅಡ್ಡಾಡಿದರೆ ರೋಡು, ಮಾರುಕಟ್ಟೆ, ರೆಸ್ಟೋರೆಂಟ್‌ಗಳಲ್ಲಿ ಮಹಿಳೆಯರ ಕಲರವವನ್ನು ನೋಡಬಹುದು. ಬೆಳಿಗ್ಗೆ 4.30ಕ್ಕೆಲ್ಲಾ ಬಂದು ಸಾಪಾದ ಹೋಟೆಲ್ ಲಾಬಿಯಲ್ಲಿ ಕೂತು ನಮಗಾಗಿ ಕಾಯು ತಿದ್ದ ಟೂರಿಸ್ಟ್ ಗೈಡ್, ನಾವು ರೆಡಿಯಾಗಿ ಬರುವುದು ಕೊಂಚ ತಡವಾದ್ದರಿಂದ ಬಟ್ಟೆಯ ಮೇಲೆ ಏನೋ ಕಸೂತಿ ಹಾಕುತ್ತಿದ್ದಳು.

ಇದೇನು ಹಾಬಿಯ ಎಂದು ಕೇಳಿದರೆ, ಇಲ್ಲ ಇದು ಸೈಡ್ ಬಿಸಿನೆಸ್ ಎಂದು ಕಣ್ಣು ಮಿಟುಕಿಸಿದಳು. ಬೆಳಿಗ್ಗೆಯಿಂದ ಸಂಜೆವರೆಗೂ ನಮ್ಮ ಟ್ರೆಕಿಂಗ್ ಗೈಡ್ ಆಗಿದ್ದ ಅವಳೊಂದಿಗೆ ಕೊಂಚ ಸಲುಗೆ ಬೆಳೆದಿದ್ದರಿಂದ ಕೀಟಲೆಯ ದನಿಯಲ್ಲಿ ಕೇಳಿದೆ ‘Is Your Husband Good?’ ? ಎಂದರೆ ‘ಹಾ Sometimes’ ? ಎಂದು ತುಂಟ ನಗೆ ನಕಳು. ಬದುಕಿನ ಬಗ್ಗೆ ಅಂತಹ ದೂರುಗಳೇನು ಕಾಣಲಿಲ್ಲ ಅವಳ ಮುಖದಲ್ಲಿ.

ಎಲ್ಲ ಕ್ಷೇತ್ರಗಳಲ್ಲೂ ಮಹಿಳಾ ಶಕ್ತಿಯನ್ನು ಕಾಣಬಹುದು. ಕೃಷಿ ಮತ್ತು ಮಾರುಕಟ್ಟೆಯಲ್ಲಿ ಶೇ.50ಕ್ಕಿಂತ ಹೆಚ್ಚು ಮಹಿಳಾ ರೈತರ ಪರಿಶ್ರಮವಿದೆ. ತಾವು ಬೆಳೆದ ತರಕಾರಿ, ಹೂವು, ಹಣ್ಣುಗಳನ್ನು ಸೈಕಲ್ ಬುಟ್ಟಿಯಲ್ಲಿ ತುಂಬಿ ಮಾರಾಟ ಮಾಡುತ್ತಾರೆ. ಪ್ರವಾಸೋದ್ಯಮ ಕ್ಷೇತ್ರದಲ್ಲೂ ಇವರದೇ ಮೇಲುಗೈ. ಹನೋಯಿ, ಹೋ ಚಿ ಮಿನ್ ಸಿಟಿ, ಹಾಲಾಂಗ್ ಬೇ, ಸಾಪಾ ಪ್ರದೇಶಗಳಲ್ಲಿ ವಿದೇಶಿಯರಿಗೆ ಟೂರಿಸ್ಟ್ ಗೈಡ್ ಆಗಿ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುವವರು ಮಹಿಳೆಯರೇ. ಬೆನ್ನಿಗೇ ಮಗುವನ್ನು ಕಟ್ಟಿಕೊಂಡೇ ಕರಕುಶಲ ವಸ್ತುಗಳ ಮಾರಾಟ ಮಾಡುವವರು, ದೋಣಿ ನಡೆಸುವವರು, ಬೀದಿ ಬದಿಯ ಆಹಾರ ಪರಿಚಯಿಸುವವರು ಇವರೇ. ಶೇ.70ರಷ್ಟು ಮಹಿಳೆಯರು ಸಣ್ಣ ಉದ್ಯಮಗಳ ಮಾಲೀಕರು, ವಸ್ತೋದ್ಯಮ, ಸೇವಾವಲಯಗಳಲ್ಲಿ ಇವರೇ ಮುಂಚೂಣಿಯಲ್ಲಿದ್ದಾರೆ. ಇವರು ಮಾರುಕಟ್ಟೆಯ ರಾಣಿಯರು ಎಂದು ಹೆಸರನ್ನು ಗಳಿಸಿಕೊಂಡಿದ್ದಾರೆ.

ಅಂದ ಹಾಗೆ ಈ ಮಾರುಕಟ್ಟೆ ರಾಣಿಯರು ವ್ಯಾಪಾರದ ವ್ಯವಹಾರದಲ್ಲಿ ಪಿಎಚ್.ಡಿ. ಮಾಡಿದ್ದಾರೆನೋ, ಅವರೊಂದಿಗೆ ಚೌಕಾಸಿಗೆ ಇಳಿದರೆ ಸೋಲು ಯಾವಾಗಲೂ ನಮ್ಮದೇ. ಅವರ ಎಮೋಷನಲ್ ಬ್ಲ್ಯಾಕ್ ಮೇಲ್‌ಗೆ ಮಣಿದು ಅವರು ಹೇಳಿದಷ್ಟು ಡಾಂಗ್ ತೆತ್ತು ನಿಮಗಿಷ್ಟವಾದ ವಸ್ತುವಿನ ಜೊತೆ ಅವಳ ನಗು ಫ್ರೀಯಾಗಿ ಸಿಗುತ್ತದೆ.

ಸೌಂದರ್ಯವನ್ನು ಕಾಪಾಡಿಕೊಳ್ಳುವ ವಿಷಯದಲ್ಲಿ ಈ ಅಕ್ಕಂದಿರು ಫುಲ್ ಸೀರಿಯಸ್, ಇಲ್ಲಿ ಬಿಳಿ, ಕಲೆ ಇಲ್ಲದ, ಹೊಳೆಯುವ ಚರ್ಮವೇ ಸೌಂದರ್ಯದ ಅಳತೆಗೋಲು, ಹೇಳಿ ಕೇಳಿ ವಿಯೆಟ್ನಾಮ್ ಟ್ರಾಪಿಕಲ್ ದೇಶ, ಬಿಸಿಲು ಜೋರು, ಈ ಸುಂದರಿಯರು ಮುಖಕ್ಕೆ ಮಾಸ್ಕ್, ಕೈಗವಸು, ಟೋಪಿ, ಜಾಕೆಟ್ ಇಲ್ಲದೆ ಹೊರಗೆ ಅಡಿಯಿಡುವುದಿಲ್ಲ. ಹೋಯಾನ್ನ ಓಲ್ಡ್ ಟೌನಿನಲ್ಲಿ ಸಿಕ್ಕ ಸುಂದರಿಯನ್ನು ಅವಳ ಹೊಳೆಯುವ ಚರ್ಮದ ಸೀಕ್ರೇಟ್ ಬಗ್ಗೆ ಕೇಳಿದಾಗ ಅವಳ ಅಜ್ಜಿ ಕೊಟ್ಟ ನೈಸರ್ಗಿಕ ಟಿಪ್ಸ್ಗಳ ಪಟ್ಟಿ ಕೊಟ್ಟಳು. ಅಕ್ಕಿ ತೊಳೆದ ನೀರು, ಅರಿಸಿನ, ಜೇನು, ಪಪ್ಪಾಯಿ, ಕಮಲದ ಹೂವಿನ ಟೀ, ವಿಂಟರ್ ಮೆಲನ್ ಹಣ್ಣು ಪ್ರಮುಖ ಪ್ರಸಾಧನಗಳು.

ಈ ಮಹಿಳೆಯರ ಇಷ್ಟು ಶಕ್ತಿ, ದಿಟ್ಟತನ, ಹೋರಾಟಗಳಿಗೆ ಕಾರಣ ಅಲ್ಲಿನ ಯುದ್ಧಗಳು, ಫ್ರೆಂಚ್ ಮತ್ತು ಅಮೆರಿಕಗಳ ಜೊತೆಗಿನ ನಿರಂತರ ಯುದ್ಧಗಳಿಂದಾಗಿ ಹಲವು ಸಮಯ ಪುರುಷರು ಮನೆಯಿಂದ ಹೊರಗುಳಿಯಬೇಕಾಯಿತು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಗಂಡಸರನ್ನು ಆ ದೇಶ ಕಳೆದುಕೊಂಡಿತು. ಅಂತಹ ದುರಿತ ಕಾಲದಲ್ಲಿ ಉತ್ಪಾದನೆಯನ್ನು ಮುಂದುವರಿಸುವುದು, ಮನೆ ಸಂಭಾಳಿಸುವುದು, ಅಗತ್ಯ ಬಿದ್ದರೆ ಹೋರಾಡುವುದು ಮಹಿಳೆಯರ ಹೇಗಲಿಗೇರಿದ ಕೆಲಸಗಳು, ಅಂದು ಹೊತ್ತಿಕೊಂಡ ಜವಾಬ್ದಾರಿಗಳನ್ನು ಇಂದೂ ಅಷ್ಟೇ ಆಸ್ಥೆಯಿಂದ ನಿಭಾಯಿಸುತ್ತಿದ್ದಾರೆ.

ನಾವು ಇಲ್ಲಿ ಇನ್ನೂ ಮಹಿಳಾ ಸಬಲೀಕರಣದ ಬೋರ್ಡ್ ಹಾಕುತ್ತಿದ್ದೇವೆ, ಅಲ್ಲಿ ಅದು ದಿನ ನಿತ್ಯದ ಜೀವನ, 70 ವರ್ಷದ ಅಜ್ಜಿ ಇಂಗ್ಲಿಷ್ ಕಲಿತು ಟೂರಿಸ್ಟ್‌ಗಳಿಗೆ ದೇಶದ ಹಿಸ್ಟರಿ ತಿಳಿಸುತ್ತಿದ್ದರೆ, 25ರ ಚೆಲುವೆ ಭತ್ತದ ಎಸ್ಟೇಟ್, ಹೋಂ ಸ್ಟೇ, ಯೂ ಟ್ಯೂಬ್ ಚಾನಲ್‌ನ್ನು ಒಟ್ಟಿಗೆ ನಡೆಸುತ್ತಾಳೆ. ಗಂಡಸರು ಸಹಾಯ ಮಾಡ್ತಾರಾ? ಅಂತ ಕೇಳಿದೆ ‘ಯಾಕೆ ಮಾಡಬೇಕು? ನಾವೇ ಮಾಡ್ಕೊತಿವಿ, ಅವರು ರಾತ್ರಿ ಊಟಕ್ಕೆ ಬಿಯರ್ ಆರ್ಡರ್ ಮಾಡಿದ್ರೆ ಸಾಕು’ ಅಂತ ಕಿಲ್ಲನೆ ನಗು ತಾಳೆ ಹೋ ಚಿ ಮಿನ್ ಸಿಟಿಯಲ್ಲಿ ಸಿಕ್ಕ ಮಸಾಜ್ ಸೆಂಟರಿನ ಹುಡುಗಿ ಹಾಗಂತ ಇಲ್ಲೇನೂ ಮಹಿಳೆಯರಿಗೆ ಸಮಸ್ಯೆಗಳು ಇಲ್ವಾ? ಯಾಕಿಲ್ಲ, ವೇತನ ತಾರತಮ್ಯ, ರಾಜಕೀಯ ಪ್ರಾತಿನಿಧ್ಯ, ಭೂಮಿ ಹಕ್ಕು… ಹೀಗೆ ಹಲವು ವಿಷಯಗಳಲ್ಲಿ ನಮಗೆ ಹಿನ್ನಡೆ ಇದೆ ಎನ್ನುತ್ತಾಳೆ ಹೋಯಾನ್ ಸಿಟಿಯ ಮೆಮೋರಿ ಶೋ ಆರ್ಟಿಸ್ಟ್ ಎಲ್ಲಕ್ಕಿಂತ ಹೆಚ್ಚಾಗಿ ಕೆಲವು ಹೊಟ್ಟೆಕಿಚ್ಚಿನ ಗಂಡಂದಿರು ನಮ್ಮನ್ನು ಬಾಸ್ ಆಗಿ ನೋಡಲು ಸಂಕಟಪಡುತ್ತಾರೆ ಎಂದು ದೇಶಾವರಿ ನಗೆ ಬೀರಿದಳು. ವಿಯೆಟ್ನಾಮಿಗೆ ಹೋಗಿ Strong Indipendent Women ಯಾರು ಅಂತ ಕೇಳಬೇಡಿ, ಬೀದಿಯಲ್ಲಿ ಮ್ಯಾಂಗೋಸ್ಟೀನ್ ಹಣ್ಣು ಮಾರಾಟ ಮಾಡುವ ಅಕ್ಕನಿಂದ ಹಿಡಿದು 7 ಸ್ಟಾರ್ ಹೋಟೆಲಿನ ಮ್ಯಾನೇಜರ್ ಅಕ್ಕನವರೆಗೆ ಎಲ್ಲರೂ ಕೈ ಎತ್ತುತ್ತಾರೆ.

rdprdrshobharani@gmail.com

ಆಂದೋಲನ ಡೆಸ್ಕ್

Recent Posts

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

1 hour ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

3 hours ago

ದೆಹಲಿಯಲ್ಲಿ 6 ಅಂತಸ್ತಿನ ಕಟ್ಟಡ ಕುಸಿತ ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…

4 hours ago

ಅಶ್ಲೀಲ ಕಮೆಂಟ್‌ ಪ್ರಕರಣ : ರಮ್ಯಾ ಕಾಲಿಗೆ ಬಿದ್ದ ದರ್ಶನ್ ಫ್ಯಾನ್ಸ್ ; ಆದರೂ ಇಲ್ಲ ಕ್ಷಮೆ ಎಂದ ನಟಿ

ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…

6 hours ago

ಬೆಳಗಿನ ಜಾವ ಸಿದ್ದಾಪುರ ಪಟ್ಟಣಕ್ಕೆ ಕಾಡಾನೆಗಳ ಎಂಟ್ರಿ: ಆತಂಕದಲ್ಲಿ ಜನತೆ

ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…

7 hours ago

ಸೋಮವಾರಪೇಟೆಯಲ್ಲಿ ಎಟಿಎಂ ದರೋಡೆಗೆ ಖದೀಮರ ಯತ್ನ

ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…

7 hours ago