ಹಾಡು ಪಾಡು

ಭಾನುವಾರದ ಹಾಡುಪಾಡು | “ಇಲ್ಲ ಕಣ್‌ ಪುಟ್ರಂಗಾ, ಡಿಕೆ ಏನಾರೂ ಮಾಡದ್ರೂ ಮಾಡಬೋದು ಅನಿಸ್ತಾದೆ”

• ಕುಸುಮ ಆಯರಹಳ್ಳಿ

ವೀಕೆಂಡಿನಲ್ಲಿ ಊರಿಗೆ ಬಂದು ಅವನನ್ನು ಮಾತಾಡಿಸಿಕೊಂಡು ಹೋಗುವ ಪ್ರೊಫೆಸರ್ ಧರ್ಮರಾಜ್‌ಗೆ ಊರಲ್ಲಿ ಜನವೇ ಕಾಣದಿದ್ದುದು ಅಚ್ಚರಿಯಾಯ್ತು. ಅಲ್ಲೀ ಇಲ್ಲೀ ದನಾಕರಾ ಮೇಯಿಸೋ ನಾಕಾರು ಜನಗಳ ಹೊರತಾಗಿ ಊರೆಂಬೋ ಊರೆಲ್ಲ ಯಾರೋ ಸೈಲೆಂಟ್ ಬಟನ್ನು ಒತ್ತಿದಂಗೆ ಮಗುವಾಗಿತ್ತು. ಊರಿಗೂರೇ ಎಲ್ಲೋಯ್ತಪ್ಪ ಅಂತ ಯೋಚಿಸ್ತಾ ಬಂದ ಧರ್ಮರಾಜುಗೆ ಪುಟ್ರಂಗಣ್ಣ ಕಂಡ. ಐವತ್ತರ ಆಸುಪಾಸಿನ ಪುಟ್ರಂಗ ಊರ ಮುಂದಲ ಕಟ್ಟೆ ಮೇಲೆ ಕೂತು ಒಂದು ಕಾಲನ್ನು ಕಟ್ಟೆಯಿಂದ ಕೆಳಗೆ ಇಳಿಬಿಟ್ಟು, ಮತ್ತೊಂದನ್ನು ಮಡಚಿ, ಒಂದು ಕೈಯನ್ನು ನೆಲಕ್ಕೂ ಮತ್ತೊಂದನ್ನೂ ಬೀಡಿಗೂ ಕೊಟ್ಟು ಕೂತಿದ್ದ. ತಾನೇ ಊದಿಬಿಟ್ಟ ಬೀಡಿ ಹೊಗೆಯೇಳುವ ಡಿಸೈನನ್ನು ಓರ್ವ ವಿಜ್ಞಾನಿಯೋ ಎಂಬಂತೆ ಗಮನಿಸುತ್ತಾ ಇದ್ದ. ಧರ್ಮರಾಜು ಕೂಗಿದಾಗಲೇ ಅವನು ಲೌಕಿಕಕ್ಕೆ ಬಂದದ್ದು. ಇದೇನು ಪುಟ್ರಂಗೂ, ಊರಲ್ಲಿ ಯಾರೂ ಕಾಣಲ್ಲ. ಎಲ್ಲಿಗೋದ್ರು ಎಲ್ಲ?” ಕೇಳಿದರು. ಪುಟಂಗಣ್ಣಾ “ಓಹೋ ಬನ್ನಿ ಸಾ” ಅನ್ನುತ್ತಾ ಕೊನೆಯ ಬಾರಿ ಹೊಗೆ ಎಳಕೊಂಡು ಬೀಡಿ ಎಸೆದು, “ಎಲ್ಲ ಓದಲ್ಲ” ಅಂದ ಒಗಟಾಗಿ, ಧರ್ಮರಾಜುಗೆ ಕ್ಷಣ ಗಾಬರಿಯೇ ಆಯ್ತು. “ಎಲ್ಲೋ ದಪ್ಪ?” ಕೇಳಿದರು. ಪುಟ್ರಂಗೂ ಹಲ್ಲಿಗೆ ಬೇವಿನ ಕಡ್ಡಿ ಚುಚ್ಚಾ ಯಾರೋ ಸ್ವಾಮ್ಗಳು ಆಶೀರ್ವಾದ ಮಾಡಿ ಡಿಕೆ ಸಿವಕುಮಾರೂ ಸಿಎಮ್ಮಾದಂತಲ್ಲ? ಎಂಗೂ ಎಂಗಸರಗ್ ಬಸ್ ಫ್ರೀ ಇತ್ತಲ್ಲಾ, ಎಲ್ಲಾ ಅವರವರ ಗಂಡದೀರ್ನೂ ಕರ್ಕಂಡು, ಡಿಕೆಶಿ ಯಾವ್ಯಾವ್ ದೇವಸ್ಥಾನ, ಮಠ, ಜ್ಯೋತಿಷಿ ಗಳ ತಾವಕ್ಕೋಗಿದ್ಯೋ ಅಲ್ಲೆಲ್ಲಾ ಓಗೇ ಬಂದ್ಬುಡಂವೂ? ಒಳ್ಳೇದಾದಗ್ ನಮಗೂ ಆಗೇಬುಡ್ಡಿ ಅಂತ ಓದು. ಇನ್ನು ಡಿಕೆಶಿ ನಂಬಿದ್ ದೇವರು, ಮಠ, ಜ್ಯೋಷಿಗಳಿಗೆಲ್ಲ ಫುಲ್ ಡಿಮಾಂಡೋ ಡಿಮಾಂಡು ಬುಡಿ” ಅಂದ.

ಅಷ್ಟರಲ್ಲಿ ಹಸಾ ಬುಟ್ಕಂಡೋಯಿದ್ ಸಿದ್ದಪ್ಪಣ್ಣ, “ಇವರೆಲ್ಲಾ ಓದೇಟೇ ಅವರು ಕರದು ಮಾತಾಡಿಸಬೇಕಲ್ಲಪ್ಪ, ಬಡೂರು ಓಗಾಂತ ಜಾಗವೂ ಇರ್ತವ, ಆಗದೇ ಇರವೂ ಇರ್ತವ” ಅನ್ನುತ್ತಾ ಹಸವಾ ಕಟ್ಟಾಕುಟ್ಟು ಯಾವಾಗ್ ಬಂದೆ ಧರ್ಮಣ್ಣ?” ಅನ್ನುತ್ತಾ ಬಂದ. “ನಂಬಿಕೆಗಳು ತಪ್ಪಲ್ಲ, ಆದ್ರೆ ಅಷ್ಟೆಲ್ಲ ಮನೆಲಿ, ವೈಯಕ್ತಿಕ ಮಟ್ಟದಲ್ಲಿ ಇಡ್ಕೊಂಡ್ರೆ ಚೆಂದ. ಇದೇ ರೂಢಿಯಾಗ್ತಾ ಹೋದ್ರೆ ಸಂವಿಧಾನದ ಆಶಯಗಳ ಕತೆ ಏನಪ್ಪ?” ಧರ್ಮರಾಜು ಮಾತಿಗೆ ಡಿಕೆ ಫ್ಯಾನ್ ಸಿದ್ದಪಣ್ಣ ನಗಾಡಿದ್ರು. “ನಮ್ ಡಿಕೆ ಒಂದ್ಕಲ್ಲಲ್ಲಿ ಬೇಜಾನ್ ಹಕ್ಕಿಗಳ ಒಡದಾಕವೆ. ಸಂವಿಧಾನ ಮುಖ್ಯ ಕಣ್ರಿ ಅಂತಿದ್ದ ಕಾಂಗ್ರೆಸ್ ಪಕ್ಷದೋರು ತಮ್ಮ ಪಕ್ಷದವರೇ ಇಂಗ್ ಮಾಡ್ಡಾಗ ಮಾತಿಲ್ದಂಗಾದ್ರು. ಸಂಸ್ಕೃತಿ ರಕ್ಷಕರು ಅಂತ ಏಳ್ಳತಾ ಇದ್ ಪಕ್ಷಕ್ಕೆ ಉಸರೇ ಇಲ್ದಂಗಾಯ್ತು, ಲಿಂಗಾಯತರ ಮಠದ ಅಜ್ಜಯ್ಯನೋರನ್ನೇ ನಂಬಂಡು ಅವರ ಎಸರಲ್ಲಿ ಪ್ಮಾಣಾನೂ ಮಾಡದ್ದೇಲೆ ಲಿಂಗಾಯತ್ರಗೂ “ಡಿಕೆಶಿ ಯಾರಂವ? ಇಂದ ನಮ್ಮವ’ ಅನ್ನಂಗಾಯ್ತು. ಇನ್ನು ಅವರ ಗೌಡ್ರ ಜಾತಿ ಬೆಂಬಲ ಅವರಿಗಿದ್ದೇ ಇರ್ತದೆ. ಸಿದ್ರಾಮಯ್ಯನ ಸೀಟಾ ಇವನು ಕಿತಂಡ ಅಂತ ಸಿಟ್ ಬರಬೋದಾಗಿದೆ ಮನಸುಗಳಿಗೆ ಬುಡಪ್ಪ ಎಂಗೋ ಕಾಲಿಗ್ ಬಿದ್ದಲ್ಲ” ಅಂತ ಸಮಾಧಾನ ಆಗುವಂಗ್ ಮಾಡಿ ಸಾಲದೂಂತ ದೊಡ್ಡ ಗೌಡ್ರು, ಯಡ್ಯೂರಪ್ಪೋರು ಎಲ್ಲಗೂ ಒಂಚೂರೂ ಆಂಕಾರ ಇಲ್ದಂಗೆ ಒಕ್ಕಡೆಯಿಂದ ಕಾಲಗ್ ಬಿದ್ದು, ಇಡೀ ಕರ್ನಾಟಕದ ರಾಜಕೀಯಾನೇ ಒಂದಿನದ ಮಟ್ಟಿ ನಮ್ಮ ಸಂಸಾರ ಆನಂದ ಸಾಗರ, ಪ್ರೀತಿ ಎಂಬ ದೈವವೇ ನಮಗಾಧಾರ’ ಅಂತ ಹಾಡು ವಂಗ್ ಮಾಡುಟ್ಟ, ಯಾವಾಗೂ ಇಂಗೇ ಇದ್ರ ಏನ್ ಚೆಂದವಪ್ಪಾ ಅನಿಸುತ್ತು”

ಸಿದ್ಧಪ್ಪಣ್ಣ ಡಿಕೆ ಹೊಗಳದ್ ಕೇಳಿ ಪುಟ್ರಂಗಂಗ್ ಸಿಟ್ಟೇರ್ತು. ” ಓ ಬುಡಪ್ಪ ಕಂಡಿದೀವಿ. ನಿಮ್ ಡಿಕೆ ಹಿಂದೆ ರೌಡಿ ಕೊತ್ವಾಲನ ಪಟ್ಟ ಸಿಸ್ಯನಂತೆ. ಸುಮ್ಮೆ ಬಂತಾ ಸಾವಾರ್ ಕೋಟಿ? ತಪಸ್ ಮಾಡಿ ಸಂಪಾದನೆ ಮಾಡದ? ಇವತ್ತು ಕೈ ಮುಕ್ಕಂಡ್ ಬಂದ್ಬುಟ್ರ ನಂಬಬುಡಬೇಕಾ ನಾವು? ಇವೆಲ್ಲ ಬರೀ ನಾಟಕ. ರಾಜಕಾರಣದಲ್ಲಿ ತಲೆಬಾಗದೂ ಒಂದು ತಂತ್ರ ತಿಳ. ಇದೆಲ್ಲ ನಿನ್ನಂತೋರು ನಂಬಬೇಕು ಅಷ್ಟೇ” ಅಂದ. ಡಿಕೆ ಫ್ಯಾನ್ ಸಿದ್ದಪ್ಪಣ್ಣನ ಕಳ್ಳು ಯಾಕೋ ಕರಕ್
ಅಂತು. “ಏನೇನೋ ಆಗಿದ್ದೋರು ಏನೇನೋ ಆಗಲ್ವ? ಮನಷಾ ಬದಲಾಗಲೇಬಾರದ? ಏನ್ ಮೇಷ್ಟೇ?” ಅಂತ ಧರ್ಮಣ್ಣನ ಕಡೆ ನೋಡಿದ.

ಪ್ರೊಫೆಸರ್ ಧರ್ಮರಾಜು ಗಡ್ಡ ನೀವಿಕೊಂಡು ; “ಹಿಂದೆ ಆ ತರ ಇದು ನಿಜ, ರೌಡಿ ಇಮೇಜು ಬದಲಾಗಬೇಕು ನಾಳೆ ಸಿಎಂ ಆಗಬೇಕು ಅಂದ್ರೆ ಒಳ್ಳೆ ಇಮೇಜೂ ಮುಖ್ಯ ಅಂತ ಯಾರಾದರೂ ಹೇಳ್ಕೊಟ್ರೋ, ಅವರೇ ತೀರ್ಮಾನ ಮಾಡ್ಕೊಂಡೋ, ಈಚೀಚೆಗೆ ಸಾರ್ವಜನಿಕ ನಡೆ ನುಡಿಗಳಲ್ಲಿ ಬಹಳ ತಾಳ್ಮೆ ಕಲ್ಲುಬಿಟ್ಟಿದಾರೆ. ನಡೆ ನುಡಿ ಎಲ್ಲದರಲ್ಲೂ ಎಚ್ಚರ. ಅದು ಲೆಕ್ಕಾಚಾರದ ನಡೆಯೋ, ಅದೂ ರಾಜಕಾರಣದ ತಂತ್ರವೋ, ನಿಜವಾಗಿಯೂ ಒಳಗಿಂದಲೇ ಮನಷಾ ಬದಲಾದ್ರೂ ಗೊತ್ತಿಲ್ಲ. ನೇರ ನಿಷ್ಠುರ ಒರಟು ಮಾತಿನ ಆ ಮನಷ ನಿಜವೋ ಈ ಭಕ್ತಿ, ಶ್ರದ್ದೆ ವಿದೇಯತೆ ವಿನಯ್‌ ಕಾಣಿರೋ ಈ ಮನಷ ನಿಜವೋ ಎಂಗೇಳದು? ಅವರ ಹೊಸ ಮುಖ ನಿಜ ಆದ್ರೆ ಸಂತೋಷ, ಅಕಸ್ಮಾತ್ ಅದು ತೋರಿಕೆ ಆದ್ರೆ ಅದು ಬಾಳ ಅಪಾಯ, ನಾನಿರದೇ ಹಿಂಗೆ ಅಂತ ನೇರವಾಗಿರದು ಒಳ್ಳೆತನ ನಟಿಸೋದಕ್ಕಿಂತ ವಾಸಿ ಅನಿಸ್ತದೆ. ಡಿಕೆ ಏಷ್ಯದಲ್ಲಿ ಹಳೇ ಮುಖ – ಹೊಸ ಮುಖ ಯಾವುದು ನಿಜವೋ ಕಾಲವೇ ಹೇಳಬೇಕು. ಅಷ್ಟೆ” ಅಂದ್ರು. ಆದರೆ ಸಿದ್ದಪ್ಪಣ್ಣ ಗಂಭೀರವಾಗಿ ಆಡಿದ; ರಾಜಕಾರಣಿಗಳೇ ಆಗ್ಲಿ ಯಾರೇ ಆಗ್ಲಿ, ಮನಷನ ಎದೆ ಬಗದು ಯಾರೂ ನೋಡಕಾಗಲ್ಲ. ನಮಗೇನ್ ಮೇಲ್ ಕಾಣದೋ ಅದರಂತೆ ತೀರ್ಮಾನ ಮಾಡ್ತೀವಿ ಅಷ್ಟೆ ಈಗಾ ಡಿಕೆ ಆಡ್ತಿರದು ನಾಟಕವೇ ಅನ್ನಳಿ. ನಾಟಕದ ಪಾತ್ರ ಗೆಲ್ಲೋ ಖುಷಿಗಾದ್ರೂ ಒಳ್ಳೆ ಕೆಲ್ಸ ಮಾಡ್ಲಿ ಬುಡಿ, ನನ್ನೇನಾದ್ರೂ ಡಿಕೆ ಕರೆದು ಏನ್ ಸಿದ್ದಪ್ಪಣ್ಣ ಈಗೆಂಗ್ ಮಾಡಂವು ಯೋಳಿ ಅಂದ್ರ, ನಾಯೋಳದಿಷ್ಟೆ; ಕೂಸೂ ಡಿಕೆ, ನಿನ್ ಜೀವನದಲ್ಲಿ ಹಣ, ಕಾಸು ಎಲ್ಲಾ ತರದ ಐಭೋಗಾನೂ ನೋಡಾಯ್ತು, ಅನುಭವಿ ಆಯ್ತು, ಈ ಅಧಿಕಾರ ಅನ್ನದು ನಿನ್ನೆ ಅವರ ತಾವಿತ್ತು. ಇವತ್ ನಿನ್ನಾವದ, ನಾಳೆ ಇನ್ಯಾರ್ದೋ ಆಯ್ತದ. ನಿನ್ ಕಾಸು, ಕುರ್ಚಿ ಎರಡೂ ಒಂಟೋಯ್ತವೆ ಕಂದಾ, ನೀನೂ ಒಂಟೋಯ್ದಿದ್ದೆ ಇವತ್ತಲ್ಲ ನಾಳೆ ನೀ ಮಾಡಾಂತ ಒಳ್ಳೆ ಕೆಲ್ಸಗಳು ಉಳ್ಳತವೆ. ಜನ ಬೇಕಾದಷ್ಟು ಕಷ್ಟಪಡತಾನೆ. ಅವರಗೆಲ್ಲ ಒಳ್ಳೇದ್ ಮಾಡುಟ, ನೀನು ಜನಗಳ ರುದಯ ದಲ್ಲಿ ಉಳ್ಳಳಾಂತ ಮನಷ ಆಗ ಬೋದು ನೋಡಪ್ಪ” ಅಂತ ಯೋಳ್ತಿನಿ.

ಪುಟ್ರಂಗಾ ಜೋರಾಗ್ ನಗಾಡ್ತಾ “ಓಹೋ ಇನ್ಯಾರೂ ಸಿಕ್ಕಿಲ್ಲಾಂತ ಬತ್ತನ ತಕ್ಕೋ ಡಿಕೆ ನಿಂತಾವಕ. ಅವೆಲ್ಲ ಕನಸು ಬುಟ್ಟಾಕು. ಆದ್ರ ನೀ ಯೋಳದ್ ಚೆನಾಗಿತ್ತು. ಆದ್ರೆ ಅದೂ ಕನಸು, ಪ್ರಜಾಪ್ರಭುತ್ವದ ಹೆಸರಲ್ಲಿ ಪಾಳೇಗಾರಿಕೆ ನಡೀತಾ ಅದೆ ದೇಸದಲ್ಲಿ. ಎಲ್ಲ ಅವರವರ ಮಕ್ಕಳಿಗೆ, ಮೊಮ್ಮಕ್ಕಳಿಗೇ ಟಿಕೀಟು. ನಾವು ಮಾನಗೆಟ್ಟ ಜನ ಓಟೂ ಆಸ್ತೀವಿ. ಜಾತಿ, ಹಣ ಇಲ್ಲೆ ಏನೂ ಮಾಡಕಾಗಿರೋ ಈ ಯವಸ್ತೇಲಿ ಯಾವನ್ ಬಂದ್ರೂ ಏನೂ ಆಗಲ್ಲ. ಎಲ್ಲದೂ ಹುಲಿಸವಾರಿ ಅಷ್ಟೆ ಈಗಲೇ ತಪತಪಾಂತ ಕೊಡ್ತಾದ್ರೆ ರಾಜೀನಾಮೆಯ. ನಮಗೂ ಚಪಲ. ಪ್ರತೀಸಲ ರಾಜ್ಯದಲ್ಲಿ, ದೇಶದಲ್ಲಿ ಹೊಸಬರು ಅಧಿಕಾರಕ್ ಬಂದಾಗ್ಲ ಏನೋ ಆಯ್ತದೆ ಅಂತ ಕಣ್ಣೂ ಬಾಯಿ ಬುಟ್ಟಿ ನೋಡ್ತೀವಿ ಅಷ್ಟೇ” ಅಂದ. ಸಿದ್ದಪ್ಪಣ್ಣಂಗೆ ತಿರಗಾ ಬೇಜಾರಾಗೋಯ್ತು. “ಇಲ್ಲ ಕಣ್ ಪುಟಂಗಾ ಡಿಕೆ ಏನಾರೂ ಮಾಡದ್ರೂ ಮಾಡಬೋದು ಅನಿಸ್ತಾದೆ” ಅಂದ. ಪುಟ್ರಂಗಾ ಮಾಡ್ತನೆ ಬುಡಪ್ಪ, ಇಷ್ಟೆ ಜಿನಗಂಟಾ ಮಾಡಿಲ್ಲ? ಮುಂದಕ್ಕಿನ್ನೂ ಚೆನ್ನಾಗೇ ಮಾಡ್ತನೆ ಕಣಾ” ಅಂತ ಎರಡರ್ಥದ ಮಾತಾಡಿದ.

ಪ್ರೊಫೆಸರ್ ಧರ್ಮಣ್ಣ ಆ ಕಡೆ ಕಾಲೇಜಲ್ಲಿ ದಿನೇ ದಿನೇ ಶಿಕ್ಷಣದ ಮಟ್ಟ ಕುಸೀತಾ ಇರೋದ್ ನೋಡಿ, ಈ ಕಡೆ ನೇರ ನಿಷ್ಠುರ ಒರಟು ಮಾತಿನ ಆ ಮನಷ ನಿಜವೋ ಈ ಭಕ್ತಿ, ಶ್ರದ್ಧೆ ವಿದೇಯತೆ ವಿನಯ ಕಾಣ್ಣಿರೋ ಈ ಮನಷ ನಿಜವೋ ಎಂಗೇಳದು? ಅವರ ಹೊಸ ಮುಖ ನಿಜ ಆದ್ರೆ ಸಂತೋಷ ಅಕಸ್ಮಾತ್ ಅದು ತೋರಿಕೆ ಆದ್ರೆ ಅದು ಬಾಳ ಅಪಾಯ! ದಿನೇ ದಿನೇ ಜನ ಊರ್ ಬಿಟ್ಟು ಸಿಟಿ ಸೇರ್ತಿರೋದ್‌ ನೋಡಿ ನನಗೆ ಆತಂಕ ಆಗತ್ತೆ’ ಅಂದ್ರು. ದೇವರ ಆಶೀರ್ವಾದದಿಂದ ಮುಖ್ಯಮಂತ್ರಿ ಆದೋರು ದೇವರು ಮೆಚ್ಚಾಂತ ಕೆಲ್ಸ ಮಾಡಲೇಬೇಕಲ್ಲ? ಇಲ್ಲಿದೆ ಆ ದೇವರು ಮೆಚ್ಚಿನಾ? ಅಂತ ಯೋಚನೆ ಬಂತು ಸಿದ್ದಪ್ಪಣ್ಣಂಗೆ ಹೇಳಣಾ ಅನ್ನೋಷ್ಟರಲ್ಲಿ, ಡಿಕೆಶಿ ಹೋಗಿ ಬಂದ ದೇವ ಸ್ಥಾನ, ಮಠ, ಜ್ಯೋತಿಷಿ ಉಡಿಕಂಡೋಗಿದ್ದೋರೆಲ್ಲ ಬಸ್ಸಲ್ ಬಂದಿಳಿದ್ರು!

kusumaayarahalli@gmail.com

ಆಂದೋಲನ ಡೆಸ್ಕ್

Recent Posts

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

2 hours ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

3 hours ago

ದೆಹಲಿಯಲ್ಲಿ 6 ಅಂತಸ್ತಿನ ಕಟ್ಟಡ ಕುಸಿತ ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…

4 hours ago

ಅಶ್ಲೀಲ ಕಮೆಂಟ್‌ ಪ್ರಕರಣ : ರಮ್ಯಾ ಕಾಲಿಗೆ ಬಿದ್ದ ದರ್ಶನ್ ಫ್ಯಾನ್ಸ್ ; ಆದರೂ ಇಲ್ಲ ಕ್ಷಮೆ ಎಂದ ನಟಿ

ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…

7 hours ago

ಬೆಳಗಿನ ಜಾವ ಸಿದ್ದಾಪುರ ಪಟ್ಟಣಕ್ಕೆ ಕಾಡಾನೆಗಳ ಎಂಟ್ರಿ: ಆತಂಕದಲ್ಲಿ ಜನತೆ

ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…

8 hours ago

ಸೋಮವಾರಪೇಟೆಯಲ್ಲಿ ಎಟಿಎಂ ದರೋಡೆಗೆ ಖದೀಮರ ಯತ್ನ

ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…

8 hours ago