ಅಂಕಣಗಳು

ಶಿವಾಜಿ ಗಣೇಶನ್ ಅವರ ವಾರದ ಅಂಕಣ : ಬಂಗಾಳ, ತಮಿಳುನಾಡಿನ ರಾಜಕಾರಣದಲ್ಲಿ ಬಿರುಗಾಳಿ

ವಿಧಾನಸಭೆ ಚುನಾವಣೆಯ ನಂತರ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನ ರಾಜಕೀಯದಲ್ಲಿ ಬಿರುಗಾಳಿ ಎದ್ದಿದೆ. ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದಿದ್ದು ಅದೀಗ ತನ್ನ ಹಿಂದುತ್ವದ ಕಾರ್ಯಕ್ರಮಗಳನ್ನು ಜಾರಿಗೆ ತರುವ ಸಿದ್ಧತೆಯಲ್ಲಿರುವಾಗಲೇ, ಅಧಿಕಾರ ಕಳೆದುಕೊಂಡ ತೃಣಮೂಲ ಕಾಂಗ್ರೆಸ್ ಸಂಘಟಿತವಾಗಿ ಒಂದು ಪ್ರಬಲ ವಿರೋಧ ಪಕ್ಷವಾಗುವ ಬದಲಿಗೆ ಒಡಕನ್ನು ಎದುರಿಸುತ್ತಿದೆ. ಇತ್ತ ಬಿಜೆಪಿ ಸಹವಾಸ ಮಾಡಿ ತಮಿಳುನಾಡಿನ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಇಳಿದ ಎಐಎಡಿಎಂಕೆ ತನ್ನ ಸದಸ್ಯರ ಪಕ್ಷಾಂತರದಿಂದ ಅಸ್ತಿತ್ವ ಉಳಿಸಿಕೊಳ್ಳುವುದೇ ಕಷ್ಟವಾಗಿರುವ ರಾಜಕೀಯ ಬೆಳವಣಿಗೆ ನಡೆದಿದೆ.

ಅಧಿಕಾರಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಜಿಗಿದವರೇ ಈಗ ಅಧಿಕಾರ ರಾಜಕಾರಣದ ಸುದ್ದಿಯಲ್ಲಿರುವುದು ಇಂದಿನ ರಾಜಕೀಯ ವಿದ್ಯಮಾನ, ಪಶ್ಚಿಮ ಬಂಗಾಳದಲ್ಲಿ ಈಗಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಒಂದು ಕಾಲಕ್ಕೆ ತೃಣಮೂಲ ಕಾಂಗ್ರೆಸ್ಸಿನ ಮುಖಂಡ, ಹತ್ತು ವರ್ಷಗಳ ಹಿಂದೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರ ಆಪ್ತ. ಕಳೆದೆರಡು ಬಾರಿಯ ಚುನಾವಣೆಯಲ್ಲೂ ಮಮತಾ ಬ್ಯಾನರ್ಜಿ ಅವರ ವಿರುದ್ಧವೇ ಸ್ಪರ್ಧಿಸಿ ಅವರನ್ನು ಸೋಲಿಸಿ ಮಮತಾ ವಿರುದ್ಧ ಒಬ್ಬ ಪ್ರಬಲ ನಾಯಕನಾಗಿ ಬೆಳೆದು ತನ್ನ ನಾಯಕಿಯ ರಾಜಕೀಯ ಭವಿಷ್ಯವನ್ನೇ ಈಗ ಮಂಕು ಮಾಡಿರುವ ಪ್ರಚಂಡ ರಾಜಕಾರಣಿ. ಇದೇ ವ್ಯಕ್ತಿತ್ವದ ಮತ್ತೊಬ್ಬ ನಾಯಕ ಮಮತಾ ವಿರುದ್ಧ ಬಂಡೆದ್ದು ಬಂಗಾಳದ ರಾಜಕಾರಣವೇ ದಿಕ್ಕುತಪ್ಪುವಂತೆ ಮಾಡಿರುವ ರಿತಬ್ರತ ಬ್ಯಾನರ್ಜಿ ಈಗ ರಾಜ್ಯದ ರಾಜಕಾರಣ ಕವಲು ದಾರಿಗೆ ಕಾರಣವಾಗಿದ್ದಾರೆ.

ಕಳೆದ ತಿಂಗಳು ನಡೆದ 294 ಸದಸ್ಯ ಬಲದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 208, ತೃಣಮೂಲ ಕಾಂಗ್ರೆಸ್ 81 ಸ್ಥಾನಗಳನ್ನು ಗಳಿಸಿದವು. ಚುನಾವಣೆಯಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ವಿರುದ್ಧ ಒಬ್ಬಂಟಿಯಾಗಿ ಹೋರಾಡಿದ,ಬೀದಿ ಹೋರಾಟಕ್ಕೆ ಹೆಸರಾದ ಮಮತಾ ಬ್ಯಾನರ್ಜಿ ಅಧಿಕಾರ ಕಳೆದುಕೊಂಡದ್ದು ಮಾತ್ರವಲ್ಲ ಸ್ವತಃ ತಾವೇ ಸೋಲು ಅನುಭವಿಸಬೇಕಾಗಿ ಬಂದದ್ದು ಅವರ ರಾಜಕೀಯ ಜೀವನದಲ್ಲೊಂದು ಚೇತರಿಸಿಕೊಳ್ಳಲಾಗದ ಬೆಳವಣಿಗೆ ಒಂದು ಕಾಲಕ್ಕೆ ಸಿಪಿಐ ಎಂ ನಾಯಕ ಮತ್ತು 25 ವರ್ಷ ಬಂಗಾಳದಲ್ಲಿ ನಿರಂತರವಾಗಿ ಅಧಿಕಾರ ನಡೆಸಿದ ಜ್ಯೋತಿ ಬಸು ಅವರ ಆಪ್ತ ಹುಡುಗನಾಗಿದ್ದ ರಿತಬ್ರತ ಬ್ಯಾನರ್ಜಿ ಕಮ್ಯೂನಿಸ್ಟ್ ಪಕ್ಷವನ್ನು ತೊರೆದು 2013ರಲ್ಲಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಸೇರಿದ್ದರು. ಈಗ ಅವರೇ ಮಮತಾ ಅವರಿಗೆ ತಲೆನೋವಾಗಿದ್ದಾರೆ.

ಟಿಎಂಸಿಯ 81 ಶಾಸಕರ ಪೈಕಿ 58 ಮಂದಿ ಮೂಲ ಪಕ್ಷದಿಂದ ಸಿಡಿದೆದ್ದು ತಮ್ಮದೇ ನಿಜವಾದ ತೃಣ ಮೂಲ ಕಾಂಗ್ರೆಸ್ ಎಂದು ವಿರೋಧ ಪಕ್ಷದ ಮಾನ್ಯತೆಗಾಗಿ ಎದುರು ನೋಡುತ್ತಿದ್ದಾರೆ. ಮಮತಾ ಕ್ಯಾಂಪಿನಿಂದ ಕೆಲವು ಶಾಸಕರು ನಿತ್ಯವೂ ರಿತಬ್ರತ ಬ್ಯಾನರ್ಜಿಯ ಬಣದತ್ತ ಹೆಜ್ಜೆ ಹಾಕುತ್ತಿದ್ದು, ಮೂಲ ಟಿಎಂಸಿಯ ಅಸ್ತಿತ್ವವನ್ನೇ ಅಳಿಸಿಹಾಕುವ ರಾಜಕಾರಣ ನಡೆದಿದೆ. ಐದು ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ ಶಿವಸೇನೆ ಎರಡು ಹೋಳಾಗಿ ಏಕ್ ನಾಥ್ ಶಿಂಧೆ ಮತ್ತು ಉದ್ಧವ್ ಠಾಕ್ರೆ ಬಣಗಳಾದಂತಾಗಿದೆ ಈಗಿನ ಟಿಎಂಸಿಯ ಸ್ಥಿತಿ, ಮಮತಾ ಬ್ಯಾನರ್ಜಿಯವರ ಸೋದರ ಸಂಬಂಧಿ ಅಭಿಷೇಕ್ ಬ್ಯಾನರ್ಜಿಯ ವಿರುದ್ಧ ನಡೆದಿರುವ ಬಂಡಾಯವಿದು. ವಿಧಾನಸಭೆಯಲ್ಲಿ ಟಿಎಂಸಿಯ ನಾಯಕನಾಗಿ ನೇಮಕಗೊಂಡಿದ್ದ ಅಭಿಷೇಕ್ ಬ್ಯಾನರ್ಜಿಯ ನಾಯಕತ್ವವನ್ನು ಒಪ್ಪದ ಟಿಎಂಸಿಯ ಬಹುತೇಕ ಸದಸ್ಯರು ಈಗ ಕವಲು ದಾರಿಯಲ್ಲಿದ್ದಾರೆ. ಅದರೂ ಹಲವು ಶಾಸಕರು ಮಮತಾ ಬ್ಯಾನರ್ಜಿಯವರೇ ಈಗಲೂ ತಮ್ಮ ನಾಯಕರು ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.

ರಾಜ್ಯದಲ್ಲಾಗಿರುವ ಈ ಒಡಕಿನಿಂದ ಈಗ ಸಂಸತ್ತಿನ ಉಭಯ ಸದನ ಗಳಲ್ಲಿಯೂ ತೃಣಮೂಲ ಕಾಂಗ್ರೆಸ್ ಸದಸ್ಯರು ಅಡ್ಡದಾರಿ ಹಿಡಿಯುವ ಸೂಚನೆಗಳು ಕಾಣುತ್ತಿವೆ. ಕೆಲವು ಸದಸ್ಯರು ಆಳುವ ಬಿಜೆಪಿಗೆ ಪಕ್ಷಾಂತರವಾಗುವ ಬಗೆಗೆ ಒಲವು ತೋರಿರುವುದರಿಂದ ಸಂಸತ್ತಿನಲ್ಲೂ ಟಿಎಂಸಿಯ ದನಿ ಅಡಗಿಸಲು ಬಿಜೆಪಿಯು ತನ್ನ ಷಡ್ಯಂತರವನ್ನು ರೂಪಿಸುವಲ್ಲಿ ಸಕ್ರಿಯವಾಗಿರುವುದಾಗಿ ಹೇಳಲಾಗುತ್ತಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ವಿರುದ್ಧ ರಾಜಕೀಯ ಹೋರಾಟ ನಡೆಸುತ್ತಿರುವ ಮಮತಾ ಬ್ಯಾನರ್ಜಿ ಪದೇ ಪದೇ ಗುಡುಗು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ವಿರುದ್ಧ ಸಂಘಟಿತ ಹೋರಾಟಕ್ಕಾಗಿ ಇಂಡಿಯಾ ಮೈತ್ರಿಕೂಟ ಸ್ಥಾಪನೆಯಾಗಲು ಪ್ರಮುಖ ಪಾತ್ರವಹಿಸಿದ್ದ ಮಮತಾ, ಬಂಗಾಳದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಈ ಮೈತ್ರಿಕೂಟವನ್ನು ದೂರವಿಟ್ಟು ಏಕಾಂಗಿಯಾಗಿ ಹೋರಾಟ ಮಾಡಿ ಈಗ ಸುಸ್ತಾಗಿದ್ದಾರೆ. ತಮ್ಮ ಅಸಹಾಯಕ ಸ್ಥಿತಿಯ ಹಿನ್ನೆಲೆಯಲ್ಲಿ ಮತ್ತೆ ಪ್ರತಿಪಕ್ಷಗಳ ಮೈತ್ರಿಕೂಟ ಕ್ರಿಯಾಶೀಲವಾಗಬೇಕೆಂದು ಬಿಜೆಪಿಗೆ ಮೈತ್ರಿಕೂಟ ಕ್ರಿಯಾಶೀಲವಾಗಬೇಕೆಂದು ಆಗ್ರಹಪಡಿಸುತ್ತಿರುವುದನ್ನು ಗಮನಿಸಿದರೆ ಅವರಗೀಗ ಪರಪಕ್ಷಗಳ ಬೆಂಬಲ ಅನಿವಾರ್ಯವಾಗಿರುವಂತೆ ಕಾಣುತ್ತಿದೆ.

ಬಿಜೆಪಿಯನ್ನು ರಾಜಕೀಯವಾಗಿ ಎದುರಿಸಲು ಇಂಡಿಯಾ ಮೈತ್ರಿಕೂಟ ಮತ್ತೆ ಮರುಜೀವ ಪಡೆದು ಪರ್ಯಾಯ ಶಕ್ತಿ ಬೆಳೆಯಬೇಕೆಂದು ಬಯಸುತ್ತಿರುವ ಕಾಂಗ್ರೆಸ್, ಜೂನ್ 8ರಂದು ಈ ಮೈತ್ರಿಕೂಟದ ಸಭೆಗಾಗಿ ದಿನಾಂಕ ಗೊತ್ತುಪಡಿಸಿದೆ. ಆದರೆ ಡಿಎಂಕೆ ಜೊತೆಗಿದ್ದು, ತಮಿಳುನಾಡು ವಿಧಾನಸಭೆ ಚುನಾವಣೆಯ ನಂತರ 108 ಸ್ಥಾನಗಳನ್ನು ಪಡೆದು ಅಧಿಕಾರದ ಹೊಸ್ತಿಲವರೆಗೆ ಬಂದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಗೆ ತನ್ನ ಐದು ಸದಸ್ಯರ ಬೆಂಬಲ ನೀಡಿದ ಕಾಂಗ್ರೆಸ್ ನಡೆಯ ವಿರುದ್ಧ ಡಿಎಂಕೆ ರೊಚ್ಚಿಗೆದ್ದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ವಿಷಯದಲ್ಲಿ ತಮ್ಮ ಜೊತೆ ಸೌಜನ್ಯಕ್ಕಾದರೂ ಮಾತನಾಡದೆ ತಮ್ಮ ಬೆಂಬಲದಿಂದ ಗೆದ್ದ ಐದು ಮಂದಿ ಸದಸ್ಯರ ಬಲವನ್ನು ಟಿವಿಕೆಗೆ ಧಾರೆ ಎರೆದ ನಡೆಯ ವಿರುದ್ಧ ಡಿಎಂಕೆಯ ನಾಯಕ ಎಂ.ಕೆ. ಸ್ಟಾಲಿನ್ ಸಿಡಿದೆದ್ದಿದ್ದಾರೆ. ಹಾಗಾಗಿ ತಮ್ಮ ಜೊತೆಗಿನ ಮೈತ್ರಿಗೆ ಚೂರಿಹಾಕಿದ ಕಾಂಗ್ರೆಸ್ಸನ್ನು ಮತ್ತೆ ನಂಬುವುದಿಲ್ಲ ಎಂದಿರುವ ಸ್ಟಾಲಿನ್ ಜೂ.8ರಂದು ನಡೆಯುವ ಇಂಡಿಯಾಮೈತ್ರಿಕೂಟದ ಸಭೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ. ಹೀಗಾಗಿ ಇಂಡಿಯಾ ಮೈತ್ರಿಕೂಟ ಒಡಕಲು ಬಿಂಬವಾಗಿ ಕಾಣುತ್ತಿದೆ.

ಇತ್ತ ತಮಿಳುನಾಡಿನ ರಾಜಕಾರಣವೂ ಕವಲು ದಾರಿ ಹಿಡಿದಿದೆ. ಜಯಲಲಿತಾ ಅವರ ಸಾವಿನ ನಂತರ ಅನಾಥವಾಗಿ ಬಿಜೆಪಿಯ ಸ್ನೇಹ ಬೆಳೆಸಿ ರಾಜ್ಯ ರಾಜಕಾರಣದಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿರುವ ಎಐಎಡಿಎಂಕೆಯ ಸದಸ್ಯರಲ್ಲಿ ಅನೇಕರು ವಿರೋಧಿ ಡಿಎಂಕೆ ಪಕ್ಷಕ್ಕೆ ಸೇರುತ್ತಿದ್ದರೆ, ಮತ್ತಷ್ಟು ಮಂದಿ ಅಧಿಕಾರಕ್ಕೆ ಬಂದಿರುವ ಟಿವಿಕೆ ಪಕ್ಷದ ಕಚೇರಿಗೆ ನಿತ್ಯವೂ ಎಡತಾಕುತ್ತಿದ್ದಾರೆ. ಹೀಗಾಗಿ ಎಡಪಾಡಿ ಪಳನಿಸ್ವಾಮಿ ಎಐಎಡಿಎಂಕೆಯನ್ನು ಉಳಿಸಿಕೊಳ್ಳುವುದಕ್ಕೆ ಇನ್ನಿಲ್ಲದ ಹರಸಾಹಸ ಮಾಡುತ್ತಿದ್ದಾರೆ.

ಈ ಮಧ್ಯೆ ಕರ್ನಾಟಕ ಐಪಿಎಸ್ ಕೇಡರ್ ಅಧಿಕಾರಿಯಾಗಿದ್ದ ಕುಪ್ಪುಸ್ವಾಮಿ ಅಣ್ಣಾಮಲೈ ತಮ್ಮ ಅಧಿಕಾರ ಸ್ಥಾನಕ್ಕೆ ರಾಜೀನಾಮೆ ನೀಡಿ ತಮಿಳುನಾಡಿನ ರಾಜಕಾರಣದಲ್ಲಿ ಮ್ಯಾಜಿಕ್ ಮಾಡುವ ಆಸೆ ಇಟ್ಟುಕೊಂಡು ಬಿಜೆಪಿ ಸೇರಿದ್ದ ಕನಸು ನನಸಾಗದೆ ಹತಾಶೆಗೊಂಡಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ ಎಂಬುದು ಕಳೆದ ತಿಂಗಳು ನಡೆದ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಸಾಬೀತಾಯಿತು. ಪಕ್ಷತಮ್ಮನ್ನು ಕಡೆಗಣಿಸುತ್ತಿರುವ ಮತ್ತು ಬಿಜೆಪಿಯನ್ನು ತಮಿಳು ಜನರು ಒಪ್ಪುವುದಿಲ್ಲ ಎನ್ನುವ ಸತ್ಯವನ್ನು ಮನಗಂಡ ಅಣ್ಣಾ ಮಲೈ ಬಿಜೆಪಿಗೆ ರಾಜೀನಾಮೆ ನೀಡಿ ರಾಜ್ಯದಲ್ಲಿ ಹೊಸದೊಂದು ರಾಜಕೀಯ ಚಳವಳಿಯನ್ನು ಹುಟ್ಟುಹಾಕುವ ಅರ್ಥಾತ್ ಹೊಸದೊಂದು ಪಕ್ಷ ಕಟ್ಟುವ ಹೆಜ್ಜೆಯನ್ನಿಟ್ಟಿದ್ದಾರೆ. ಆದರೆ ಇದು ಅವರ ರಾಜಕೀಯ ಭವಿಷ್ಯಕ್ಕೆ ಹೊಸ ದಾರಿ ತೋರುತ್ತದೆ ಎಂಬುದನ್ನು ನಿರೀಕ್ಷಿಸುವುದು ಕಷ್ಟ.

ಇತ್ತ ಕರ್ನಾಟಕದಲ್ಲಿ ಅಧಿಕಾರ ಹಸ್ತಾಂತರದಿಂದ ತಮ್ಮ ಬಹುದಿನಗಳ ಕನಸನ್ನು ನನಸು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಖಾತೆ ಹಂಚಿಕೆಯಲ್ಲಾಗಿರುವ ಅಸಮಾಧಾನದ ಸ್ಫೋಟವನ್ನು ಆರಂಭದಲ್ಲೇ ಎದುರಿಸಬೇಕಾಯಿತು. ಕಾಂಗ್ರೆಸ್ಸಿಗೆ ಸಂಕಷ್ಟ ಬಂದಾಗ ಮತ್ತು ಹಲವು ರಾಜ್ಯಗಳಲ್ಲಿ ಬಿಕ್ಕಟ್ಟು ಕಾಣಿಸಿಕೊಂಡಾಗಲೆಲ್ಲ ಟ್ರಬಲ್ ಶೂಟರ್ ಎಂದೇ ಖ್ಯಾತಿಯಾಗಿರುವ ಶಿವಕುಮಾರ್ ಅವರಿಗೆ ರಾಜ್ಯದಲ್ಲಿ ತಲೆದೋರಿರುವ ಸಮಸ್ಯೆಯನ್ನು ಎದುರಿಸಲು ಕಷ್ಟವೇನಲ್ಲ ಎನ್ನುವುದನ್ನು ಈಗಾಗಲೇ ರಾಮಲಿಂಗಾ ರೆಡ್ಡಿ ಮತ್ತು ಕೆ.ಎಚ್‌.ಮುನಿಯಪ್ಪ ಅವರನ್ನು ತಣ್ಣಗಾಗಿಸುವಲ್ಲಿ ಯಶಸ್ವಿಯಾಗುವ ಮೂಲಕ ಸಾಬೀತುಪಡಿಸಿದ್ದಾರೆ. ಆದರೆ ಸಂಪುಟ ಸೇರುವ ಆಕಾಂಕ್ಷಿಗಳ ಪ್ರಭಾವಿ ಮತ್ತು ಹಿರಿಯ ಹಾಗೂ ಕಿರಿಯ ಶಾಸಕರ ದಂಡೇ ತಮ್ಮ ಒಳ್ಳೆಯ ದಿನಗಳಿಗಾಗಿ ಎದುರು ನೋಡುತ್ತಿದೆ. ಯುವ ಕಾಂಗ್ರೆಸ್ಸಿನಿಂದ ಬಂದಿರುವ ಶಿವಕುಮಾರ್ ಮುಖ್ಯಮಂತ್ರಿಯಾಗಿದ್ದರೆ, ಗುಂಡೂರಾವ್ ಆಡಳಿತ ಕಾಲದಿಂದ ರಾಜ್ಯ ಮತ್ತು ದೆಹಲಿ ರಾಜಕಾರಣದಲ್ಲಿ ಪಳಗಿರುವ ಬಿ.ಕೆ. ಹರಿಪ್ರಸಾದ್ ಕೆಪಿಸಿಸಿ ಸಾರಥ್ಯವನ್ನು ವಹಿಸಿ ಕೊಂಡಿರು ವುದರಿಂದ ಕಾಂಗ್ರೆಸ್ಸಿನಲ್ಲಿ ಉತ್ಸಾಹದ ಬುಗ್ಗೆ ಎದ್ದಿರುವಂತೆ ಕಾಣುತ್ತಿರುವುದು ರಾಜ್ಯದ ರಾಜಕಾರಣದಲ್ಲಿ ಬಿಜೆಪಿ ಮತ್ತು ಜಾ.ದಳ ತಮ್ಮ ರಾಜಕೀಯ ತಂತ್ರಗಾರಿಕೆಯನ್ನು ಪುನರ್ ವಿಮರ್ಶೆ ಮಾಡಿಕೊಳ್ಳುವಂತೆ ಮಾಡಿದೆ.

ಬಲಿಷ್ಠ ಒಕ್ಕಲಿಗ ಜಾತಿಗೆ ಸೇರಿದ ಶಿವಕುಮಾರ್ ರಾಜ್ಯದ ಆಡಳಿತದ ಸೂತ್ರ ಹಿಡಿದಿರುವುದರಿಂದ ಹಳೆಯ ಮೈಸೂರು ಭಾಗದಲ್ಲಿರುವ ಜಾ.ದಳಕ್ಕೆ ಭದ್ರ ಬುನಾದಿಯಂತಿರುವ ಒಕ್ಕಲಿಗರು ಈಗ ಎತ್ತ ಒಲಿಯುವರು ಎಂಬುದನ್ನು ಕಾದುನೋಡಬೇಕಿದೆ. ಇನ್ನು ಹಿಂದುಳಿದ ವರ್ಗದ ಮತ್ತು ಪಕ್ಷ ನಿಷ್ಠೆಯಲ್ಲಿ ಸರಿಸಾಟಿ ಇಲ್ಲದಂತೆ ಬೆಳೆದಿರುವ ಹರಿಪ್ರಸಾದ್ ಪಕ್ಷವನ್ನು ಮತ್ತಷ್ಟು ಚುರುಕುಗೊಳಿಸುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಈ ಹಿನ್ನೆಲೆಯಲ್ಲಿ ಬಿಜೆಪಿಯ ರಾಜಕೀಯ ಕಾರ್ಯತಂತ್ರವೂ ಬದಲಾಗುವ ಸಾಧ್ಯತೆಗಳಿರುವುದಾಗಿ ಹೇಳಲಾಗುತ್ತಿದೆ.

ಆಂದೋಲನ ಡೆಸ್ಕ್

Recent Posts

ಕಾಂಕ್ರೋಚ್‌ಗಳ ಮೇಲೆ ಲಾಠಿಚಾರ್ಜ್:‌ ವಿಡಿಯೋ ನೋಡಲು ಟೈಮ್‌ ಇಲ್ಲ ಎಂದ ಸುಪ್ರೀಂಕೋರ್ಟ್‌

ನವದೆಹಲಿ: ನೀಟ್‌ ಅಕ್ರಮಕ್ಕೆ ಸಂಬಂಧಿಸಿದಂತೆ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಒತ್ತಾಯಿಸಿ ಸಿಜೆಪಿ ನಡೆಸಿದ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ…

11 hours ago

ಓದುಗರ ಪತ್ರ: ರೈಲಿನಲ್ಲಿ ತಿನಿಸು ಮಾರುವವರು ವೈಯಕ್ತಿಕ ಸ್ವಚ್ಛತೆಗೂ ಗಮನ ನೀಡಲಿ

ರೈಲ್ವೆ ಇಲಾಖೆಯಿಂದ ಅನುಮತಿ ಪಡೆದ ಮಾರಾಟಗಾರರು ಪ್ರತಿನಿತ್ಯ ರೈಲುಗಳಲ್ಲಿ ಕಾಫಿ, ಟೀ, ಇಡ್ಲಿ, ರೈಸ್ ಬಾತ್ ಮೊದಲಾದ ಆಹಾರ ಪದಾರ್ಥಗಳು,…

20 hours ago

ಓದುಗರ ಪತ್ರ: ‘ಗೃಹಜ್ಯೋತಿ’ ಗೊಂದಲ ನಿವಾರಿಸಿ

ಕರ್ನಾಟಕ ವಿದ್ಯುತ್ ಮಂಡಳಿಯು ರಾಜದ್ಯಂತ ಗೃಹ ಜ್ಯೋತಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಮನೆ ಬಾಗಿಲಿಗೆ ಬಂದು ಸಮೀಕ್ಷೆ ಕಾರ್ಯ ಮಾಡುತ್ತಿದೆ.…

20 hours ago

ಓದುಗರ ಪತ್ರ: ಬರಪೀಡಿತ ಜಿಲ್ಲೆಗಳೆಂದು ಘೋಷಿಸಿ

ಕರ್ನಾಟಕದಲ್ಲಿ ಶೇ.೬೦ ಕ್ಕಿಂತ ಹೆಚ್ಚು ಮಳೆ ಕೊರತೆಯಾಗಿದ್ದು, ಮೈಸೂರು, ವಿಜಯಪುರ, ಧಾರವಾಡ, ಗದಗ, ಬೆಳಗಾವಿ, ಕೊಪ್ಪಳ, ಕಲಬುರಗಿ,ಬೀದರ್, ಹಾಸನ, ದಾವಣಗೆರೆ,…

20 hours ago

ಓದುಗರ ಪತ್ರ: ಸಂಸತ್ ಚಲೋ ತಡೆಗೆ ನಡೆದಿತ್ತೆ ಹುನ್ನಾರ?

ನೀಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಹೊಸದಿಲ್ಲಿಯಲ್ಲಿ ಕಾಕ್ರೋಚ್ ಜನತಾ ಪಕ್ಷ…

20 hours ago

ಇ-20 ಇಂಧನಕ್ಕೆ ಭಾರತ ಪ್ರಯೋಗಾಲಯವಾಯಿತೆ?!

ಶುಭಾ ಖಟಾವಕರ ಮ್ಹೆತ್ರಸ್ ಸುಪ್ರೀಂ ಕೋರ್ಟ್‌ನಲ್ಲಿ ಸ್ವತಃ ಅಟಾರ್ನಿ ಜನರಲ್ ಹೇಳಿಕೆ! ೨೦೨೩ರ ನಂತರ ತಯಾರಾದ ವಾಹನಗಳಿಗೆ ಮಾತ್ರ ಇ-೨೦…

20 hours ago