ಚಂದ್ರಶೇಖರ್ ಮೂರ್ತಿ ಕೆ.ಎಸ್.
ಪೋಷಕರೇ ಎಚ್ಚರ, ನಿರ್ಲಕ್ಷ್ಯ ಮಾಡಬೇಡಿ; ಮುನ್ನೆಚ್ಚರಿಕೆಯೇ ಉತ್ತಮ ರಕ್ಷಣೆ
ಮೈಸೂರು: ಬದಲಾದ ಕಾಲಮಾನದಲ್ಲಿ ಮನುಷ್ಯನ ಆರೋಗ್ಯದ ಮೇಲೆ ಕಾಣದ ವೈರಸ್‌ಗಳ ದಾಳಿ ಹೆಚ್ಚಾಗುತ್ತಿವೆ. ಕೊರೋನಾದಂತಹ ಮಾರಕ ವೈರಸ್ಮನುಕುಲವನ್ನೇ ನಡುಗಿಸಿದ್ದು ಸುಳ್ಳಲ್ಲ. ಅದರಂತೆ ಇತ್ತೀಚೆಗೆ ಮತ್ತೊಂದು ವೈರಸ್ ಚಿಕ್ಕ ಮಕ್ಕಳ ಆರೋಗ್ಯದಲ್ಲಿ ಚೆಲ್ಲಾಟವಾಡುವುದಕ್ಕೆ ಕೈ, ಕಾಲು, ಬಾಯಿ ರೋಗ ಕಾಣಿಸಿಕೊಂಡಿದೆ.
ಕಳೆದ ಮೂರ‍್ನಾಲ್ಕು ತಿಂಗಳಿಂದ ಚಿಕ್ಕ ಮಕ್ಕಳಲ್ಲಿ ಕೈ-ಕಾಲು-ಬಾಯಿ ರೋಗ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ಇದು ವೈರಾಣುಗಳಿಂದ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ಸಾಮಾನ್ಯವಾಗಿ ಐದು ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ರೋಗ ಗಂಭೀರ ಸ್ವರೂಪದ್ದಲ್ಲವಾದರೂ ಪೋಷಕರು ನಿರ್ಲಕ್ಷ್ಯಮಾಡದೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.
ಹೇಗೆ ಹರಡುತ್ತದೆ?:
ಕೈ-ಕಾಲು-ಬಾಯಿ ರೋಗ ಸಾಂಕ್ರಾಮಿಕವಾಗಿರುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಸುಲಭವಾಗಿ ಹರಡಬಹುದು. ಸೋಂಕಿತ ಮಗು ಕೆಮ್ಮುವಾಗ, ಸೀನುವಾಗ ಹೊರಬರುವ ಹನಿಗಳ ಮೂಲಕ, ಸೋಂಕಿತ ಮಗುವಿನೊಂದಿಗೆ ನಿಕಟ ಸಂಪರ್ಕ ಅಥವಾ ಸ್ಪರ್ಶದಿಂದಲೂ ರೋಗ ಹರಡುವ ಸಾಧ್ಯತೆ ಇದೆ. ಚಿಕ್ಕ ಮಕ್ಕಳಿಗೆ ಸ್ವಚ್ಛತೆ ಹಾಗೂ ಮುಂಜಾಗ್ರತೆಯ ಅರಿವು ಕಡಿಮೆ ಇರುವುದರಿಂದ ಪೋಷಕರು ಹೆಚ್ಚಿನ ಕಾಳಜಿ ವಹಿಸಬೇಕು.
ಪ್ರಮುಖ ಲಕ್ಷಣಗಳೇನು?: ಎರಡು ದಿನ ಅಥವಾ ಅದಕ್ಕಿಂತ ಹೆಚ್ಚು ಕಾಲ ಜ್ವರ ಕಾಣಿಸಿಕೊಳ್ಳುವುದು, ಶೀತ, ಚರ್ಮದಲ್ಲಿ ತುರಿಕೆ, ಕೈ-ಕಾಲುಗಳ ಹಸ್ತ,ಪಾದಗಳಲ್ಲಿ ಹಾಗೂ ಬಾಯಿ ಸುತ್ತ ನೀರು ತುಂಬಿದ ಗುಳ್ಳೆಗಳು ಕಾಣಿಸಿಕೊಳ್ಳುವುದು ಪ್ರಮುಖ ಲಕ್ಷಣಗಳಾಗಿವೆ. ಆದರೆ ಪ್ರತಿ ಮಗುವಿನಲ್ಲೂ ಒಂದೇ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಹೇಳಲಾಗದು. ಚಿಕನ್ ಫಾಕ್ಸ್‌ನಲ್ಲಿಯೂ ಗುಳ್ಳೆಗಳು ಕಾಣಿಸಿಕೊಳ್ಳುವುದರಿಂದ ಕೆಲವೊಮ್ಮೆ ಗೊಂದಲ ಉಂಟಾಗಬಹುದು. ಆದರೆ ಚಿಕನ್ ಫಾಕ್ಸ್‌ನಲ್ಲಿ ಸಾಮಾನ್ಯವಾಗಿ ದೇಹದ ವಿವಿಧ ಭಾಗಗಳಲ್ಲಿ ಹೆಚ್ಚು ವ್ಯಾಪಕವಾಗಿ ಗುಳ್ಳೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ಲಕ್ಷಣ ಕಂಡುಬಂದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.
ಐದು ವರ್ಷದೊಳಗಿನ ಮಕ್ಕಳಿಗೇ ಏಕೆ ಹೆಚ್ಚು?: ಚಿಕ್ಕ ಮಕ್ಕಳಲ್ಲಿ ರೋಗನಿರೋಧಕ ವ್ಯವಸ್ಥೆ ಇನ್ನೂ ಬೆಳವಣಿಗೆಯ ಹಂತದಲ್ಲಿರುವುದರಿಂದ ಸೋಂಕು ಬೇಗ ಹರಡುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ಈ ರೋಗ ಸುಮಾರು ೫ರಿಂದ ೭ ದಿನಗಳವರೆಗೆ ಮಕ್ಕಳನ್ನು ಬಾಧಿಸಬಹುದು.
ಪೋಷಕರು ಏನು ಮಾಡಬೇಕು?: ಮಗುವಿಗೆ ಜ್ವರದ ಜೊತೆಗೆ ಕೈ, ಕಾಲು ಅಥವಾ ಬಾಯಿಯಲ್ಲಿ ಗುಳ್ಳೆಗಳು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಸೋಂಕು ಇತರ ಮಕ್ಕಳಿಗೆ ಹರಡದಂತೆ ರೋಗಲಕ್ಷಣಗಳಿರುವ ಸಂದರ್ಭದಲ್ಲಿ ಮಗುವನ್ನು ಬೇಬಿ ಸೆಂಟರ್, ಡೇ ಕೇರ್ ಅಥವಾ ಕಿಡ್ಸ್ ಸೆಂಟರ್‌ಗಳಿಗೆ ಕಳುಹಿಸದಿರುವುದು ಸೂಕ್ತ. ಬಾಯಿಯಲ್ಲಿ ಗುಳ್ಳೆಗಳಿರುವುದರಿಂದ ಆಹಾರ ಸೇವಿಸಲು ತೊಂದರೆಯಾಗಬಹುದು. ವೈದ್ಯರ ಸಲಹೆಯಂತೆ ತಣ್ಣನೆಯ ಹಾಗೂ ಸುಲಭವಾಗಿ ಸೇವಿಸಬಹುದಾದ ಆಹಾರ ಮತ್ತು ಸಾಕಷ್ಟು ದ್ರವ ಪದಾರ್ಥಗಳನ್ನು ನೀಡುವುದರಿಂದ ದೇಹದಲ್ಲಿ ನೀರಿನ ಅಂಶ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.
ಚಿಕಿತ್ಸೆ ಹೇಗೆ?:
ಕೈ-ಕಾಲು-ಬಾಯಿ ರೋಗಕ್ಕೆ ನಿರ್ದಿಷ್ಟ ವೈರಸ್ ವಿರೋಧಿ ಚಿಕಿತ್ಸೆ ಸಾಮಾನ್ಯವಾಗಿ ಇರುವುದಿಲ್ಲ. ಬಹುತೇಕ ಪ್ರಕರಣಗಳಲ್ಲಿ ಲಕ್ಷಣಗಳಿಗೆ ಅನುಗುಣವಾಗಿ ಆರೈಕೆ ನೀಡಲಾಗುತ್ತದೆ. ವೈಯಕ್ತಿಕ ಸ್ವಚ್ಛತೆ, ಕೈಗಳನ್ನು ಆಗಾಗ್ಗೆ ತೊಳೆಯುವುದು, ಸೋಂಕಿತ ಮಗುವಿನ ವಸ್ತುಗಳನ್ನು ಸ್ವಚ್ಛವಾಗಿಡುವುದು ಮತ್ತು ಜನಸಂದಣಿ ಇರುವ ಸ್ಥಳಗಳಿಂದ ಮಗುವನ್ನು ದೂರವಿಡುವುದು ಮುಖ್ಯ. ಭಯಪಡುವ ಅಗತ್ಯವಿಲ್ಲ; ಆದರೆ ನಿರ್ಲಕ್ಷ್ಯವೂ ಬೇಡ. ಮಕ್ಕಳಲ್ಲಿ ಲಕ್ಷಣಗಳು ಕಂಡುಬಂದರೆ ಸ್ವಯಂ ಔಷಧಿ ನೀಡದೆ ವೈದ್ಯರ ಸಲಹೆ ಪಡೆಯುವುದು ಪೋಷಕರ ಜವಾಬ್ದಾರಿ.
” ಕೈ ಕಾಲು ಬಾಯಿ ಜ್ವರ ಇದು ಸಾಂಕ್ರಾಮಿಕ ರೋಗವಾಗಿದೆ. ಈ ರೋಗ ವೈರಾಣುಗಳಿಂದ ಹರಡುವಂತಹದ್ದು. ಚಿಕ್ಕ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಸಾಮರ್ಥ್ಯ ಕಡಿಮೆ ಇರುವುದರಿಂದ ಈ ಕೈ ಕಾಲು ಬಾಯಿ ರೋಗ ಐದು ವರ್ಷದ ಕೆಳಗಿರುವ ಮಕ್ಕಳಿಗೆ ಬೇಗ ಹರಡುತ್ತದೆ. ದೊಡ್ಡವರಿಗೆ ಈ ರೋಗ ಹರಡುವುದಿಲ್ಲ. ಆದಷ್ಟು ಪೋಷಕರು ಮಕ್ಕಳಲ್ಲಿ ಜ್ವರ ಎರಡು ದಿನಕ್ಕಿಂತ ಹೆಚ್ಚಾಗಿ ಕಾಣಿಸಿಕೊಂಡು, ಕೈ ಕಾಲು ಬಾಯಿಗಳಲ್ಲಿ ಸಣ್ಣ ಸಣ್ಣ ಗುಳ್ಳೆಗಳು ಕಾಣಿಸಿಕೊಂಡ ತಕ್ಷಣ ಬೇಬಿ ಕೇರ್ ಸೆಂಟರ್ ಅಂತಹ ಜನಸಂದಣಿ ಪ್ರದೇಶದಿಂದ ಅಂತರ ಕಾಯ್ದುಕೊಳ್ಳಬೇಕು. ಈ ಕೈ ಕಾಲು ಬಾಯಿ ರೋಗ ಗಂಭೀರ ಸ್ವರೂಪವಾದುದ್ದಲ್ಲ, ಇದೊಂದು ಸಾಮಾನ್ಯ ರೋಗ ಲಕ್ಷಣ. ಮಕ್ಕಳಲ್ಲಿ ಹಸ್ತ, ಪಾದಗಳಲ್ಲಿ ನೀರುಗುಳ್ಳೆ ರೀತಿ ಗುಳ್ಳೆ ಕಾಣಿಸಿಕೊಂಡಾಗ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಸಲಹೆ ಪಡೆದರೆ ಸಾಕು ಭಯ ಪಡುವ ಅಗತ್ಯವಿಲ್ಲ.”
ಡಾ.ರಾಜೇಂದ್ರ ಕುಮಾರ್, ಮಕ್ಕಳ ತಜ್ಞರು, ಮೈಸೂರು
ಮಾಸ್ಕೋ: ರಷ್ಯಾದಲ್ಲಿ ಸಂಶೋಧಕಿಯೊಬ್ಬರು ತೀವ್ರ ನ್ಯುಮೋನಿಯಾದಿಂದ ಮೃತಪಟ್ಟಿರುವುದು ವರದಿಯಾಗಿದೆ. ಅಕ್ಟೋಬರ್ 2ರಂದು ತೀವ್ರ ನ್ಯುಮೋನಿಯಾದಿಂದ ಸಂಶೋಧಕಿ ಮೃತಪಟ್ಟಿದ್ದಾರೆ. ಈ ಸಾವಿಗೂ…
ಬೆಂಗಳೂರು: ದ್ವಿಚಕ್ರ ವಾಹನ ಸವಾರರಿಗೆ ಸಾರಿಗೆ ಇಲಾಖೆ ಮಹತ್ವದ ಸೂಚನೆ ನೀಡಿದೆ. ಇನ್ಮುಂದೆ ಸುರಕ್ಷಿತವಲ್ಲದ ಹಾಫ್ ಹೆಲ್ಮೆಟ್‌ಗಳನ್ನು ಬಳಸುವಂತಿಲ್ಲ. ಬಿಐಎಸ್ ಅಥವಾ…
ಚಾಮರಾಜನಗರ: ತಾಲ್ಲೂಕಿನ ಬೂದಂಬಳ್ಳಿ ಗ್ರಾಮದಲ್ಲಿ ಗಾಳಿ ಮಳೆಗೆ ಹೆಂಚಿನ ಮನೆ ಜಖಂಗೊಂಡಿದ್ದು, ಸ್ಥಳಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ…
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆ ಭರದಿಂದ ಸಾಗುತ್ತಿದೆ. ದಸರಾ ಗಜಪಡೆಗೆ ಕುಶಾಲತೋಪು ಸಿಡಿಸುವ ತಾಲೀಮು ನಡೆಸಲಾಯಿತು. ನಗರ…
‘ನಂದಿನಿ’ ಹೆಸರಿಗೆ ಕಳಂಕ ತರಬೇಡಿ ಮಂಡ್ಯ ಜಿ ಹಾಲು ಒಕ್ಕೂಟದಲ್ಲಿ ( ಮನ್ ಮುಲ್) ನಡೆದಿರುವ ಹಾಲಿನ ಪುಡಿ ಕಲಬೆರಕೆ…
ನೀಲಿಯೆಂದರೇನು?! ನೀಲಿಯೆಂದರೇನು ಬರಿಯ ಬಣ್ಣವೇನು ? ಮೈತ್ರಿ ಕಣಾ ಕರುಣೆ ಕಣಾ| ಸೂರ್ತಿ ಕಣಾ ಕೀರ್ತಿ ಕಣಾ| ಬುದ್ಧ ಬಸವ…