ಮಹಾದೇಶ್ ಎಂ. ಗೌಡ
ಸಮರ್ಪಕ ರಸ್ತೆಯಿಲ್ಲ, ಚರಂಡಿಯಿಲ್ಲ, ಬೀದಿ ದೀಪಗಳಿಲ್ಲದೆ ನಿವಾಸಿಗಳ ಪರದಾಟ
ಹನೂರು: ಮನೆಗಳಿಂದ ಬರುವ ಕೊಳಚೆ ನೀರು ಹರಿಯಲು ಚರಂಡಿ ಇಲ್ಲ. ಓಡಾಡಲು ಸರಿಯಾದ ರಸ್ತೆ ಇಲ್ಲ. ಕತ್ತಲಾಗುತ್ತಿದ್ದಂತೆ ಬೀದಿಯಲ್ಲಿ ಬೆಳಗಲು ವಿದ್ಯುತ್ ದೀಪಗಳ ಕೊರತೆ. ಇದು ಹನೂರು ಪಟ್ಟಣದ ೭ನೇ ವಾರ್ಡಿನ ಆಂಜನೇಯ ದೇವಸ್ಥಾನ ಬೀದಿ ಬಡಾವಣೆಯ ನಿವಾಸಿಗಳ ದೈನಂದಿನ ಬದುಕಿನ ಚಿತ್ರಣ.
ಪಟ್ಟಣದ ೭ನೇ ವಾರ್ಡಿನ ಆಂಜನೇಯ ದೇವಸ್ಥಾನ ಬಡಾವಣೆಯಲ್ಲಿ ೧೫೦ಕ್ಕೂ ಹೆಚ್ಚು ಮನೆಗಳಿದ್ದು, ಸುಮಾರು ೫೦೦ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಬಡಾವಣೆ ನಿರ್ಮಾಣವಾಗಿ ಹಲವು ವರ್ಷಗಳು ಕಳೆದರೂ, ಇಲ್ಲಿಯವರೆಗೂ ಸಮರ್ಪಕ ಮೂಲಸೌಲಭ್ಯಗಳು ಸಿಕ್ಕಿಲ್ಲ. ವರ್ಷದಿಂದ ವರ್ಷಕ್ಕೆ ಸಮಸ್ಯೆಗಳು ಬೆಳೆಯುತ್ತಲೇ ಇದ್ದು, ನಿವಾಸಿಗಳು ನಿರಂತರ ತೊಂದರೆ ಅನುಭವಿಸುತ್ತಿದ್ದಾರೆ.
ಬಡಾವಣೆಯ ಕೆಲವು ಭಾಗಗಳಲ್ಲಿ ಚರಂಡಿಗಳನ್ನು ನಿರ್ಮಿಸಲಾಗಿದೆ. ಆದರೆ ಕಳಪೆ ಕಾಮಗಾರಿಯಿಂದಾಗಿ ಕೊಳಚೆ ನೀರು ಮುಂದೆ ಹರಿಯದೆ ಅಲ್ಲಿಯೇ ನಿಲ್ಲುತ್ತಿದೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿ, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ನಿವಾಸಿಗಳನ್ನು ಕಾಡುತ್ತಿದೆ.
ಈ ಹಿಂದೆ ಶಾಸಕರು ವಾರ್ಡ್ ವೀಕ್ಷಣೆ ವೇಳೆ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಮಳೆಗಾಲದಲ್ಲಿ ಮಳೆ ನೀರಿನೊಂದಿಗೆ ಕೊಳಚೆ ನೀರು ಸೇರಿ ಮನೆಗಳ ಒಳಗೆ ನುಗ್ಗುತ್ತಿದೆ.
ಬಡಾವಣೆಯಲ್ಲಿ ಸಮರ್ಪಕ ಸಿಸಿ ರಸ್ತೆ ಹಾಗೂ ಡಾಂಬರು ರಸ್ತೆ ನಿರ್ಮಾಣವಾಗಿಲ್ಲ. ಮಳೆಗಾಲದಲ್ಲಿ ಕಪ್ಪು ಮಣ್ಣು ಕೆಸರಾಗಿ ಮಾರ್ಪಟ್ಟು, ಪಾದಚಾರಿಗಳು ಓಡಾಡುವುದೇ ದುಸ್ತರವಾಗುತ್ತದೆ. ವಯೋವೃದ್ಧರು, ಮಕ್ಕಳು ಮತ್ತು ಮಹಿಳೆಯರು ಪ್ರತಿದಿನ ಜಾರಿ ಬೀಳುವ ಭಯದಲ್ಲೇ ಸಂಚರಿಸಬೇಕಿದೆ.
ಹಾವು, ಚೇಳುಗಳ ಭೀತಿ: ಬಡಾವಣೆಯು ಜಮೀನುಗಳಿಗೆ ಹೊಂದಿಕೊಂಡಂತೆ ಇರುವುದರಿಂದ, ಬೆಳಗಿನ ಜಾವ ಹಾಗೂ ರಾತ್ರಿ ವೇಳೆ ಕಾಡುಹಂದಿಗಳು, ಹಾವುಗಳು ಬಡಾವಣೆಯೊಳಗೆ ಸಂಚರಿಸುತ್ತಿವೆ. ಬೀದಿಯಲ್ಲಿ ಸಮರ್ಪಕ ಬೆಳಕಿಲ್ಲದ ಕಾರಣ, ರಾತ್ರಿ ವೇಳೆ ಹೊರಗೆ ಬರಲೂ ಜನರು ಭಯಪಡುವಂತಾಗಿದೆ. ಇರುವ ವಿದ್ಯುತ್ ಕಂಬಗಳೂ ಮುರಿದು ಬೀಳುವ ಹಂತದ ಲ್ಲಿದ್ದು ವಿದ್ಯುತ್ ವೈರ್‌ಗಳು ಜೋತು ಬಿದ್ದಿವೆ.
ಒಟ್ಟಾರೆ, ಹಲವು ವರ್ಷಗಳಿಂದ ಮೂಲಸೌಲಭ್ಯಗಳಿಂದ ವಂಚಿತವಾಗಿರುವ ಈ ಬಡಾವಣೆಯತ್ತ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನಹರಿಸಿ, ತಕ್ಷಣ ಸ್ಪಂದಿಸಬೇಕು ಎಂಬುದು ಇಲ್ಲಿನ ನಿವಾಸಿಗಳ ಮನವಿಯಾಗಿದೆ.
” ೭ನೇ ವಾರ್ಡಿನ ಆಂಜನೇಯ ಗುಡಿ ದೇವಸ್ಥಾನ ಬೀದಿಯಲ್ಲಿ ಸಮಸ್ಯೆಗಳು ಇರುವುದು ಗಮನಕ್ಕೆ ಬಂದಿದೆ. ಈಗಾಗಲೇ ಶಾಸಕರು ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಸೂಚನೆ ನೀಡಿದ್ದಾರೆ. ಅನುದಾನ ಕ್ರೋಡೀಕರಿಸಿ ಚರಂಡಿ ಹಾಗೂ ರಸ್ತೆ ಅಭಿವೃದ್ಧಿಗೆ ಕ್ರಮವಹಿಸಲಾಗುವುದು.”
-ರೇಖಾ, ಮುಖ್ಯಾಧಿಕಾರಿ, ಹನೂರು ಪಪಂ
” ೭ನೇ ವಾರ್ಡಿನ ಆಂಜನೇಯ ದೇವಸ್ಥಾನ ಬೀದಿಯಲ್ಲಿ ಸಮರ್ಪಕ ರಸ್ತೆ, ಚರಂಡಿ, ವಿದ್ಯುತ್ ದೀಪ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಿ ಕೊಡುವಂತೆ ಹಲವಾರು ವರ್ಷಗಳಿಂದ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ, ಶಾಸಕರಿಗೆ ಗಮನಕ್ಕೆ ತಂದಿದ್ದೇವೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.”
-ಈಶ, ಬಡಾವಣೆಯ ನಿವಾಸಿ
ಶುಭಾ ಸಂಜಯ್ ಅರಸ್ ಸಂಸ್ಥಾಪಕಿ ಮತ್ತು ವ್ಯವಸ್ಥಾಪಕಿ, ಮೈಸೂರು ಸಾಹಿತ್ಯ ಸಂಭ್ರಮ, ಮೈಸೂರು ಬುಕ್ ಕ್ಲಬ್ಸ್ ಚಾರಿಟೇಬಲ್ ಟ್ರಸ್ಟ್ ನವರಾತ್ರಿಯ…
ದಿಟದ ಪಥ ಹಿತವಲ್ಲವೇ! ವಿಶಾಲ ಆಗಸಕೆ ಉಗುಳಿದಂತೆ ರವಿಗೆ ರಾಡಿಯ ಎರಚಿದಂತೆ ಆನೆ ಕಂಡು ಶ್ವಾನ ಬೊಗಳಿದಂತಾಗಿದೆ ವಿಶ್ವಗುರು ಬಸವಣ್ಣನ…
ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು, ವಿಶೇಷವಾಗಿ ಹಿರಿಯ ನಾಗರಿಕರು ಆನ್‌ಲೈನ್ ವಂಚನೆಗೆ ಒಳಗಾಗಿ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕಳೆದುಕೊಳ್ಳುತ್ತಿರುವ…
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ತನ್ನದೇ ಆದ ವಿಶಿಷ್ಟ ಪರಂಪರೆ ಹೊಂದಿದೆ. ಅಂದಿನ ಮಹಾರಾಜರು ಜನಸಾಮಾನ್ಯರಿಗಾಗಿ ದಸರಾ ಆರಂಭ ಮಾಡಿದರು…
ದೆಹಲಿ ಕಣ್ಣೋಟ ಶಿವಾಜಿ ಗಣೇಶನ್ ಅವರ ವಾರದ ಅಂಕಣ ಬಿಎಸ್‌ಪಿ ನಾಯಕಿ ಮಾಯಾವತಿ ಏಕಾಂಗಿಯಾಗಿ ಚುನಾವಣೆ ಎದುರಿಸಲು ನಡೆಸಿದ್ದಾರೆ ಸಿದ್ಧತೆ…
ನಂದಿನಿ ಹೆದ್ದುರ್ಗ ೨೦೧೪ರಿಂದ ಹಾಸನದ ಪ್ರಾದೇಶಿಕ ಪತ್ರಿಕೆಗಳಿಗೆ ಅಂಕಣ ಬರೆಯುವುದರೊಂದಿಗೆ ಪದ್ಯವನ್ನೂ ಬರೆಯುತ್ತಿದ್ದೆ. ೨೦೧೬ರ ಅಕ್ಟೋಬರ್ ತಿಂಗಳಿನಲ್ಲಿ ಸಕಲೇಶಪುರದಲ್ಲಿ ನಡೆದ…