ಹಾಡು ಪಾಡು

ಬರೆಯುವ ರೈತ ಮಹಿಳೆಯ ಸಂಭ್ರಮದ ಕ್ಷಣಗಳು

ನಂದಿನಿ ಹೆದ್ದುರ್ಗ

೨೦೧೪ರಿಂದ ಹಾಸನದ ಪ್ರಾದೇಶಿಕ ಪತ್ರಿಕೆಗಳಿಗೆ ಅಂಕಣ ಬರೆಯುವುದರೊಂದಿಗೆ ಪದ್ಯವನ್ನೂ ಬರೆಯುತ್ತಿದ್ದೆ. ೨೦೧೬ರ ಅಕ್ಟೋಬರ್ ತಿಂಗಳಿನಲ್ಲಿ ಸಕಲೇಶಪುರದಲ್ಲಿ ನಡೆದ ಮೂರನೇ ತಾಲ್ಲೂಕು ಸಾಹಿತ್ಯಸಮ್ಮೇಳನದಲ್ಲಿ ಈ ಪದ್ಯಗಳನ್ನು ಒಟ್ಟಾಗಿಸಿ ಪುಸ್ತಕ ಬಿಡುಗಡೆ ಮಾಡಬೇಕೆನ್ನುವುದು ನನ್ನ ಮತ್ತು ಸ್ನೇಹಿತರ ಇಚ್ಛೆಯಾಗಿತ್ತು. ಆ ಸಮ್ಮೇಳನದ ಸಂಜೆ ನಡೆದ ಕವಿಗೋಷ್ಠಿಯಲ್ಲಿ ಪುಸ್ತಕ ಬಿಡುಗಡೆಯ ಕಾರ್ಯಕ್ರಮವೂ ಇತ್ತು. ನನ್ನ ಮೊದಲ ಕೃತಿ ‘ಅಸ್ಮಿತೆ’ಯನ್ನು ಬಿ.ಆರ್.ಲಕ್ಷ್ಮಣರಾಯರು ಬಿಡುಗಡೆ ಮಾಡಿ ನನ್ನ ಕುರಿತು ಎರಡು ಪ್ರಶಂಸೆಯ ಮಾತಾಡಿದ್ದರು. ಗುರುಗಳನ್ನು ನಾನು ಮೊದಲು ಭೇಟಿಯಾಗಿದ್ದು ಈ ಸಾಹಿತ್ಯ ಸಮಾವೇಶದಲ್ಲಿ. ಇದು ನನ್ನ ಬದುಕಿನ ಗುರುತರ ತಿರುವು. ಆನಂತರ ಅವರ ಮಾರ್ಗದರ್ಶನದಲ್ಲಿ ಕವಿತೆಗಳು ಕೈ ಹಿಡಿದವು. ೨೦೧೯ರಲ್ಲಿ ಧಾರವಾಡ ಸಾಹಿತ್ಯ ಸಮ್ಮೇಳನ. ಅಲ್ಲಿಯ ಕವಿಗೋಷ್ಠಿಯ ಅಧ್ಯಕ್ಷರು ಪ್ರತಿಭಾ ನಂದಕುಮಾರ್. ‘ನಾವು ಹುಡುಗಿಯರೇ ಹೀಗೆ’ ಕವಿತೆಯನ್ನು ಓದಿ ಅವರ ಭೆಟ್ಟಿಯ ಸಲುವಾದ ಎದೆ ಬಡಿತವನ್ನು ಅದಾಗಲೇ ಏರಿಸಿಕೊಂಡಿದ್ದೆ. ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದು ಮಾತಾಡಿಸಿದ್ದು ಕೂಡ ಸಾಹಿತ್ಯ ಸಮ್ಮೇಳನದಲ್ಲೇ.

ಆನಂತರ ಭಾಗವಹಿಸಿದ್ದು ಹಾವೇರಿ ಸಾಹಿತ್ಯ ಸಮ್ಮೇಳನ. ಅಲ್ಲಿ ನಾನು ಓದಿದ ಕವಿತೆ ಆಸಕ್ತರನ್ನು ಬಹುವಾಗಿ ಸೆಳೆದಿತ್ತು. ವೇದಿಕೆಯಿಂದ ಇಳಿದ ಮೇಲೆ ಹೊಗಳಿಕೆಯ ಸುರಿಮಳೆಯಿಂದಾಗಿ ಸೆಲೆಬ್ರಿಟಿ ಫೀಲ್ ಕೊಟ್ಟ ಹಾವೇರಿಯ ಕಾವ್ಯಪ್ರಿಯರು ಆ ನಡೆಯಮೂಲಕ ನನ್ನೊಳಗಿನ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದರು. ಅಗಾಧ ಜನ ಸೇರಿದ್ದ ಹಾವೇರಿಯ ಸಮ್ಮೇಳನ ಸೆಲೆಬ್ರಿಟಿ ಫೀಲ್ ಕೊಡುವ ಜೊತೆ ಜೊತೆಗೆ ಕಳೆದುಹೋಗುವ, ಅನಾಥವಾಗುವ ಅನುಭವವನ್ನೂ ಕೊಟ್ಟಿದ್ದನ್ನು ಎಂದಿಗೂ ಮರೆಯಲಾಗದು. ಹಂಪಿ ಉತ್ಸವಕ್ಕೆ ಕರೆ ಬಂದಾಗ ಹಂಪಿಯನ್ನು ಮೊದಲ ಬಾರಿಗೆ ನೋಡುವ ಕುತೂಹಲ ತುಂಬಿಕೊಂಡಿದ್ದೆ.

ದಕ್ಷಿಣ ರಾಜ್ಯಗಳ ಬಹುಭಾಷಾ ಕವಿ ಸಮ್ಮೇಳನಕ್ಕಾಗಿ ಹೈದ್ರಾಬಾದ್‌ಗೆ ಹೋಗಿ ಬಂದ ನಂತರ ಅಕ್ಷರಗಳು ಕೈಹಿಡಿದು ಕರೆದೊಯ್ದ ಕುರಿತು ಬೆರಗಾಗಿದ್ದೆ. ಪ್ರತಿಭೆಗೆ ಅವಕಾಶಗಳನ್ನು ಸೃಷ್ಟಿಸಿ ಅವರನ್ನು ಮುಖ್ಯವಾಹಿನಿಯಲ್ಲಿ ಸೇರಿಸುವ ಕೆಲಸವನ್ನು ಸಾಹಿತ್ಯ ಸಮ್ಮೇಳನಗಳು ನಿರಂತರವಾಗಿ ಮತ್ತು ಯಶಸ್ವಿಯಾಗಿ ಮಾಡುತ್ತಿವೆ. ಇಲ್ಲಿ ಭಾಗವಹಿಸಿ ಪಡೆಯುವ ಅನುಭವ ನನ್ನ ಪಾಲಿಗಂತೂ ಚಿರಸ್ಮರಣೀಯ. ಕೃಷಿ ಬದುಕಿನ ಕಾರಣ ಹಳ್ಳಿಯಲ್ಲಿದ್ದುಕೊಂಡು ನಗರ ಕೇಂದ್ರಿತ ಸಾಹಿತ್ಯ ವಲಯದಿಂದ ದೂರವೆ ಉಳಿಯುವ ನನ್ನಂತಹ ಗ್ರಾಮೀಣ ಬರಹಗಾರರಿಗೆ ಸಮ್ಮೇಳನಗಳು ಅನುಭವಗಳನ್ನ ದಂಡಿಯಾಗಿ ಕೊಟ್ಟಿದೆ.

ಅಪರೂಪಕ್ಕೆ ಸಿಗುವ ಸಹ ಬರಹಗಾರರನ್ನು ಭೆಟ್ಟಿಯಾಗುವುದು ಮತ್ತು ಅವರ ವ್ಯಕ್ತಿತ್ವ ಗಮನಿಸುವುದು ಮೊದಲಿಂದಲೂ ನನಗಿಷ್ಟ. ಫೇಸ್ ಬುಕ್ ಕಾರಣದಿಂದಾಗಿ ಬರೆಯುವ ಬಹುತೇಕರು ಒಬ್ಬರಿಗೊಬ್ಬರು ವರ್ಚುಯಲಿ ಪರಿಚಿತರು. ಇಂತಹವರು ಮುಖತಃ ಭೇಟಿಯಾದಾಗ ಹೇಗೆ ವರ್ತಿಸ್ತಾರೆ ಎನ್ನುವುದು ಒಂದು ಸೋಜಿಗ. ಕೆಲವರು ಎಷ್ಟೊ ವರ್ಷಗಳ ಸ್ನೇಹಿತರಂತೆ ಮೊದಲ ಭೆಟ್ಟಿಯಲ್ಲೆ ಮುಕ್ತವಾಗಿ ತೆರೆದುಕೊಳ್ಳುತ್ತಾರೆ. ಇನ್ನು ಕೆಲವರು ಸಾಹಿತ್ಯದ ಕುರಿತು ಅಳೆದು ತೂಗಿ ಒಂದೆರಡು ಮಾತಾಡಿ ತಮ್ಮ ಮೇಲರಿಮೆ ಕಾಪಾಡಿಕೊಳ್ಳಲು ಹೆಣಗುತ್ತಾರೆ. ಇನ್ನು ಕೆಲವರು ತಮ್ಮ ಕೋಡು ಕೊಂಬುಗಳು ಮುಕ್ಕಾಗದಂತೆ ಒಂದೆರಡು ಮಾತಾಡಿ ತಮ್ಮ ವರ್ಗ ವರ್ಣಗಳ ಗುಂಪಿಗೆ ಜಾರಿಕೊಳ್ಳುತ್ತಾರೆ.

ಭಾವುಕತೆಯೇ ಬರಹದ ಆತ್ಮವೆಂಬಂತೆ ಬರೆಯುವ ಕೆಲವು ಮಂದಿ ಮುಖತಃ ಭೆಟ್ಟಿಯಾದಾಗ ಕಣ್ಣು ಕೂಡುವುದನ್ನೂ ತಪ್ಪಿಸುತ್ತಾರೆ. ಅಕಸ್ಮಾತ್ ಎದುರಾಗಿಯೇ ಬಿಟ್ಟೆವೆಂದರೆ ಗೊತ್ತೇ ಇಲ್ಲವೆಂಬತೆ ವರ್ತಿಸುತ್ತಾರೆ. ಇದೆಲ್ಲಾ ಸಮ್ಮೆ ಳನಗಳು ನೀಡುವ

ಅನುಭವ. ಇದೆಲ್ಲದರ ಜೊತೆಗೆ ‘ವಿಧಿ ನೀಡಿದ ಉಡುಗೊರೆ’ ಎನಿಸುವಂತಹ ವ್ಯಕ್ತಿಗಳ ಒಡನಾಟವನ್ನು ಇದೇ ಸಮ್ಮೇಳನಗಳು ನೀಡಿವೆ. ನಾನು ಭಾಗವಹಿಸಿದ ಮೊದಲ ಸಾಹಿತ್ಯ ಸಮಾವೇಶದಲ್ಲಿ ವಿಪರೀತ ಉತ್ಸಾಹದಿಂದ ನನ್ನದೇ ವಯಸ್ಸಿನ ಕವಿಯೊಬ್ಬರನ್ನು ಮೇಲೆಬಿದ್ದು ಮಾತಾಡಿಸಿ ಎಲ್ಲಿರುವುದು ನೀವು ಅಂತ ಕೇಳಿದ್ದೆ. ಆಕೆ ತಣ್ಣಗೆ ‘ಕಾಡಿನಲ್ಲಿ’ ಅಂದರು. ಜೊತೆಗಿದ್ದ ಮೂವರು ಕವಿಗಳು ದೊಡ್ಡ ಧ್ವನಿಯಲ್ಲಿ ನಕ್ಕಾಗ ಪೆಚ್ಚಾಗಿ ‘ಹಂಗಲ್ಲ, ಯಾವೂರು ನಿಮ್ಮದು ಅಂತ ಕೇಳಿದ್ದು’ ಅಂದೆ. ‘ಊರಲ್ಲ. ಕಾಡಲ್ಲಿ ನಾನಿರುವುದು’ ಅಂದಿದ್ದರು. ಒಂದು ಸಹಜ ಪ್ರಶ್ನೆಗೆ ಎರಡೆರಡು ಬಾರಿ ಅಸಹಜ ಉತ್ತರ ಬಂದಾಗ ಕೆಡುಕೆನ್ನಿಸಿ ಅಲ್ಲಿಂದ ಎದ್ದು ಬೇರೆ ಕಡೆ ಕುಳಿತಿದ್ದು ಈಗಷ್ಟೇ ಆದ ಘಟನೆಯ ಹಾಗೆ ನೆನಪಲ್ಲುಳಿದಿದೆ. ಹಂಗಾಗಿಯೇ ಪ್ರತಿ ಸರ್ತಿ ಸಮ್ಮೇಳನದ ಗೌಜಿಯಲ್ಲಿ ನಾನು ಕಳೆದುಹೋದಾಗಲೆಲ್ಲ ಇರುವೆಗಳ ದಂಡು ಸಾಲುಗಟ್ಟಿ ಹೊರಟಾಗ ವರ್ತಿಸುವ ವಿವಿಧ ಬಗೆ ನೆನಪಾಗುತ್ತದೆ.

ವರ್ಗ ವರ್ಣ ಸಿದ್ಧಾಂತಗಳ ಕಾರಣಕ್ಕಾಗಿ ಸಾಹಿತ್ಯಸಮ್ಮೇಳನಗಳು ತಮ್ಮ ಅಸ್ಮಿತೆ ಕಳೆದುಕೊಳ್ಳುತ್ತಿವೆ ಎನ್ನುವವರ ಸಂಖ್ಯೆ ಹೆಚ್ಚಾದ ಹೊತ್ತು ಇದು. ಇವತ್ತಿಗೂ ನನಗೆ ಹಾಗೆ ಅನಿಸಿಲ್ಲ. ದೃಷ್ಟಿಯಂತೆ ಸೃಷ್ಟಿ ಎನ್ನುವ ನಂಬಿಕೆ ನನ್ನದು. ಒಂದು ನಿರುಮ್ಮಳ ಮನಸ್ಸಿನೊಂದಿಗೆ ಸಮ್ಮೇಳನಗಳಲ್ಲಿ ಭಾಗವಹಿಸಿದಾಗ ಅದು ಕೊಡುವ ಅನುಭವ ಸದಾಕಾಲವೂ ನೆನಪಲ್ಲುಳಿಯುವಂತಹದ್ದು.

” ಕೃಷಿ ಬದುಕಿನ ಕಾರಣ ಹಳ್ಳಿಯಲ್ಲಿದ್ದುಕೊಂಡು ನಗರ ಕೇಂದ್ರಿತ ಸಾಹಿತ್ಯ ವಲಯದಿಂದ ದೂರವೆ ಉಳಿಯುವ ನನ್ನಂತಹ ಗ್ರಾಮೀಣ ಬರಹಗಾರರಿಗೆ ಇಲ್ಲಿ ಭಾಗವಹಿಸಿ ಪಡೆಯುವ ಅನುಭವಗಳು ಚೇತೋಹಾರಿಯಾಗಿರುತ್ತವೆ”

 

 

ಆಂದೋಲನ ಡೆಸ್ಕ್

Recent Posts

ಲಿಟರರಿ ಸಂತೆಗೆ ನನ್ನ ಮೊದಲ ಸವಾರಿ

ಗುರುಪ್ರಸಾದ್ ಕಂಟಲಗೆರೆ ನಾನೂ ಒಂದು ಸಾಹಿತ್ಯ ಹಬ್ಬಕ್ಕೆ ಹೋಗಿದ್ದೆ. ‘ಸಾಹಿತ್ಯ ಹಬ್ಬ’ ಎನ್ನುವುದು ಇವತ್ತಿಗೆ ಕನೆಕ್ಟ್ ಆಗುತ್ತೆ ಎನ್ನುವುದಾದರೆ ‘ಲಿಟರರಿ…

8 mins ago

ಸತ್ವಕ್ಕಿಂತ ಸದ್ದನ್ನೇ ಸಂಭ್ರಮಿಸುತ್ತಿರುವ ಸಾಹಿತ್ಯ ಔತಣಗಳು

ಪಾತು ಕರ್ನಾಟಕದಾದ್ಯಂತ ಈಗ ಸಾಹಿತ್ಯದ ಹಬ್ಬ. ಈ ಬರಹ ಬರೆದು, ಅಚ್ಚಿಗೆ ಹೋಗಿ, ಮುದ್ರಣವಾಗಿ ನೀವು ಓದುತ್ತಿರುವ ಹೊತ್ತಿಗೆ ಬೆಂಗಳೂರಿನ…

14 mins ago

ಪ್ರಯಾಣಿಕನಿಗೆ ಎದೆನೋವು: ಆಸ್ಪತ್ರೆಗೆ ಕರೆದೊಯ್ದು KSRTC ಬಸ್ ಚಾಲಕನ ಸಮಯಪ್ರಜ್ಞೆಗೆ ಮೆಚ್ಚುಗೆ

ಸೋಮವಾರಪೇಟೆ: ಸೋಮವಾರಪೇಟೆ–ಮೈಸೂರು–ಬೆಂಗಳೂರು ಮಾರ್ಗವಾಗಿ ತೆರಳುತ್ತಿದ್ದ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಮಯಪ್ರಜ್ಞೆ ಮೆರೆದ ಕೆಎಸ್‌ಆರ್‌ಟಿಸಿ…

18 hours ago

ರಾಜಕೀಯ ಕಾರ್ಯದರ್ಶಿ ಹುದ್ದೆ ಬಗ್ಗೆ ತನ್ವೀರ್ ಸೇಠ್ ಅಸಮಾಧಾನ: ಸಿಎಂ ಜೊತೆ ಮಾತುಕತೆ ಬಳಿಕ ಸ್ವೀಕಾರದ ನಿರ್ಧಾರ

ಮೈಸೂರು: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆ ನನಗೆ ಸೂಕ್ತವಲ್ಲ. ಆ ಹುದ್ದೆ ಬೇಡ ಎಂದು ಹಿಂದೆಯೇ ಹೇಳಿದ್ದೆ ಎಂದು ಮೈಸೂರಿನಲ್ಲಿ…

18 hours ago

ಹಾರಂಗಿ ಹಿನ್ನೀರಿನಲ್ಲಿ ಕಣ್ಮರೆಯಾಗಿದ್ದ ವಿನೋದ್‌ ಮೃತದೇಹ ಪತ್ತೆ, ಎರಡು ದಿನಗಳ ಶೋಧ ಅಂತ್ಯ

ಕೊಡಗು: ಜಿಲ್ಲೆಯ ಕುಶಾಲನಗರ ಸಮೀಪದ ಹೇರೂರು ಗ್ರಾಮದ ಹಾರಂಗಿ ಹಿನ್ನೀರಿನಲ್ಲಿ ಕಣ್ಮರೆಯಾಗಿದ್ದ ಯುವಕನ ಮೃತದೇಹ ಎರಡು ದಿನಗಳ ಬಳಿಕ ಪತ್ತೆಯಾಗಿದೆ.…

19 hours ago

ಬಿಳಿಗಿರಿರಂಗನ ಬೆಟ್ಟದ ಗೇಮ್ ರೋಡ್‌ನಲ್ಲಿ ಒಂಟಿ ಸಲಗ, ಒಂದು ಗಂಟೆ ಕಾದ ವಾಹನ ಸವಾರರು

ಯಳಂದೂರು:  ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗುತ್ತಿದ್ದ ಸವಾರರು ಗುರುವಾರ ಸುಮಾರು ಒಂದು ಗಂಟೆ ರಸ್ತೆಯಲ್ಲೇ ಕಾಯಬೇಕಾಯಿತು. ಕಾರಣ, ಗೇಮ್ ರೋಡ್‌ನ ಮಧ್ಯದಲ್ಲೇ…

20 hours ago